ಅನಕೃ ಎಂಬ ಕರುನಾಡಿನ ಸಾಂಸ್ಕೃತಿಕ ಸೇನಾನಿ
ಕನ್ನಡ ಸಾಹಿತ್ಯ ಕ್ಷೇತ್ರದಲ್ಲಿ ಹೆಸರಾದ ಅನೇಕ ಸಾಹಿತಿಗಳು ನಾನಾ ವಿಭಾಗಗಳಲ್ಲಿ ತಮ್ಮ...
ಕನ್ನಡ ಸಾಹಿತ್ಯ ಕ್ಷೇತ್ರದಲ್ಲಿ ಹೆಸರಾದ ಅನೇಕ ಸಾಹಿತಿಗಳು ನಾನಾ ವಿಭಾಗಗಳಲ್ಲಿ ತಮ್ಮ ಸೃಜನಶೀಲತೆಯನ್ನು ದುಡಿಸಿಕೊಂಡವರು. ಒಂದು ನಿರ್ದಿಷ್ಟ ಪ್ರಕಾರಕ್ಕೆ ಮಾತ್ರ ಇವರು ಸೀಮಿತರಾದವರಲ್ಲ. ಡಿ.ವಿ.ಜಿ., ಶಿವರಾಮ ಕಾರಂತರಂಥ ಸಾಹಿತಿಗಳೆಲ್ಲ ಹೀಗೆ ತಮ್ಮ ಸವ್ಯ ಸಾಚಿತನವನ್ನು ಸಾಧಿಸಿದವರು. ಕನ್ನಡದ ಅಂಥ ಮತ್ತೊಂದು ಹೆಸರೇ ಅ.ನ. ಕೃಷ್ಣರಾಯರು. ಅನಕೃ ಎಂಬ ಮೂರಕ್ಷರದ ಸಾಧನೆ ಬಹುಮುಖಿಯಾದದ್ದು. ನಾಟಕಕಾರ, ಸಣ್ಣ ಕಥೆಗಾರ, ಪತ್ರಿಕೋದ್ಯಮಿ, ಚಿತ್ರಸಾಹಿತಿ, ಕಾದಂಬರಿಕಾರ, ಕಲೆ-ನೃತ್ಯಗಳ ಶೋಧಕ, ಸಂಗೀತಾಸಕ್ತ ಹೀಗೆ ಒಂದೇ ವ್ಯಕ್ತಿತ್ವದಲ್ಲಿ ರೂಪುಗೊಂಡ ಸಮೃದ್ಧ ಶಕ್ತಿಯಾಗಿದ್ದವರು ಅನಕೃ. ಕನ್ನಡಿಗರ ಆತ್ಮಗೌರವದ ಬೆಂಗಾವಲಾಗಿ ಬದುಕಿದ ಈ ಪ್ರಾತಃಸ್ಮರಣೀಯನ ಜನ್ಮದಿನ ಮೇ 9. ಆ ನೆನಪಿನಲ್ಲಿ ಅನಕೃ ಸಾರ್ಥಕ ಸಾಹಿತ್ಯ ಸೇವೆಯ ಮೆಲುಕು ಹಾಕಬಹುದಲ್ಲವೇ?
1908 ಮೇ 9ರಂದು ಕೋಲಾರದಲ್ಲಿ ಜನಿಸಿದ ಅನಕೃ, ತಂದೆ ನರಸಿಂಗರಾಯರ ಜಾತ್ಯತೀತ ಮನೋಧರ್ಮ ಮತ್ತು ತಾಯಿ ಅನ್ನಪೂರ್ಣಮ್ಮನವರ ಸುಸಂಸ್ಕೃತ ದೃಷ್ಟಿಕೋನಗಳಿಂದ ಪ್ರಭಾವಿತರಾದವರು. ತಮಗೆ ಸರಿ ತೋಚಿದ್ದನ್ನು ತಕ್ಷಣವೇ ಜಾರಿಗೆ ತರುತ್ತಿದ್ದ ಆ ಕ್ರಿಯಾಶೀಲ ವ್ಯಕ್ತಿ ಒಮ್ಮೆ ಬಂಗಾಲಕ್ಕೆ ಹೋಗಿದ್ದಾಗ ಚಿತ್ತರಂಜನ್ದಾಸ್ ಅವರನ್ನು ಭೇಟಿ ಅವರ ಹೆಂಡತಿಯ ಹೆಸರನ್ನು ಇಷ್ಟಪಟ್ಟು, ಅದೇ ಹೆಸರನ್ನೇ ತಮ್ಮ ಪತ್ನಿ ವಿಶಾಲಾಕ್ಷಿಗೂ ಇಟ್ಟರು. ಹಾಗಾಗಿ ವಿಶಾಲಾಕ್ಷಿ ವಸಂತಾದೇವಿಯಾದರು. ಶೈಕ್ಷಣಿಕವಾಗಿ ಅನಕೃ ಕಲಿತದ್ದು ಕಡಿಮೆಯಾದರೂ ಬದುಕೆಂಬ ಅನುಭವದ ಶಾಲೆಯಲ್ಲಿ ಅವರು ಸಾಧಿಸಿಕೊಂಡ, ಸ್ಥಾಪಿಸಿದ ಹೆಗ್ಗುರುತುಗಳು ಸದಾಕಾಲವೂ ಚಿರಸ್ಥಾಯಿ.
ಕಾದಂಬರಿ ಸಾರ್ವಭೌಮರೆಂದೇ ಖ್ಯಾತರಾದರೂ ಅನಕೃ ಸಾಹಿತ್ಯ ರಚನೆ ನಾಟಕದಿಂದಲೇ ಮೊದಲಾಯಿತು. ತಂದೆಯ ಆಪ್ತ, ನಟ ವರದಾಚಾರ್ ಅವರ "ಸಾಮಾಜಿಕ ನಾಟಕಗಳ ಕೊರತೆಯಿದೆ" ಎಂಬ ಮಾತನ್ನೇ ಛಲದಿಂದ ಸ್ವೀಕರಿಸಿ 16ರ ಹರೆಯದಲ್ಲೇ ಅನಕೃ ಒಂದೇ ರಾತ್ರಿಯಲ್ಲಿ 'ಮದುವೆಯೋ ಮನೆಹಾಳೋ' ಎಂಬ ನಾಟಕ ರಚಿಸಿ ವರದಾಚಾರ್ರಿಂದಲೇ ಭೇಷ್ ಎನ್ನಿಸಿಕೊಂಡರು. ಇನ್ನು ಅವರ 'ಧರ್ಮಸಂಕಟ', 'ಬಣ್ಣದ ಬೀಸಣಿಗೆ' ಎಲ್ಲವೂ ಸಾಮಾಜಿಕ ನಾಟಕಗಳೇ ಆಗಿವೆ. ಸ್ವರ್ಣಮೂರ್ತಿ ಮತ್ತು ಹಿರಣ್ಯಕಶಿಪು ಎಂಬ ಪೌರಾಣಿಕ ನಾಟಕದ ಸಾಮಾಜಿಕ ಹಿನ್ನೆಲೆಯಲ್ಲಿ ಅನಕೃ ಎಲ್ಲ ಪಾತ್ರಗಳನ್ನು ದೈವಿಕ-ರಾಕ್ಷಸ ಕಲ್ಪನೆಯಲ್ಲಿ ನೋಡದೆ ಮಾನವರೂಪದಲ್ಲಿ ಚಿತ್ರಿಸಿರುವುದು ವಿಶೇಷವಾಗಿದೆ. "ಜಗಜ್ಯೋತಿ ಬಸವೇಶ್ವರ ನಾಟಕ" ಬಸವಣ್ಣನನ್ನು ವಿಶ್ವಧರ್ಮಿಯಾಗಿ ನೋಡುವ ಪ್ರಬುದ್ಧ ನಾಟಕ. "ರಜಪೂತ ಲಕ್ಷ್ಮಿ ಅಥವಾ ಯೋಷಿ" ಎಂಬ ಮೊಘಲ್ ಸಾಮ್ರಾಜ್ಯದ ಕಥಾಹಂದರದ ನಾಟಕವು ಅನಕೃ ಅವರ ಧರ್ಮ ಸಂವೇದನೆಯ ಬಗೆಗಿನ ಚಿಂತನೆಗಳನ್ನು ನಮ್ಮ ಕಣ್ಮುಂದೆ ರಾಚಿಸುವ ನಾಟಕವಾಗಿದೆ.
ಸಾಮಾಜಿಕವಾದ ಆಲೋಚನೆಯ ತಳಹದಿಯಲ್ಲಿ ಆಹಾರ ಸಮಸ್ಯೆ, ಅಸಮಾನತೆಯನ್ನು ಅನಕೃ 'ಅನ್ನದ ಕೂಗು' ಕಥೆಯಲ್ಲಿ ತೆರೆದಿಟ್ಟರೆ, "ಸಾವಿತ್ರಿಯ ಸೌಭಾಗ್ಯ" ಪುಟ್ಟ ವಿಧವೆಯ ದಾರುಣ ಅವಸ್ಥೆಗಳನ್ನು ಹಿಡಿದಿಡುತ್ತಾ ಸಾಗುತ್ತದೆ. "ಹಳದಿ ಬಾಗಿಲು" ಕಥೆಯಲ್ಲಿ ದರ್ಪಿಷ್ಠ ಮತ್ತು ಹುಸಿಸೋಗಿನ ಠಕ್ಕರ ಅನಾವರಣವಿದೆ. "ಮಧುರಸ್ವಪ್ನ", "ಆ ನನ್ನ ತಂಗಿ", "ಪ್ರತಿರೂಪ" "ಬೂಬಮ್ಮ" ಜಾತಿ ಮೋಹದ ಸಮಾಜದ ಬಗ್ಗೆ ಬೊಟ್ಟು ಮಾಡುತ್ತದೆ. "ಪೈಗಸ್ತಿ" ಎಂಬ ಕಥೆಯಲ್ಲಿ ಅನಕೃ ಔದಾರ್ಯದ ಮೌಲ್ಯವನ್ನು ನಿರೂಪಿಸಿದ್ದರೆ, ಒಂದು ಸಂಜೆ ಎಂಬ ಕಥೆ ರಾಜಕೀಯದ ಒಡೆದು ಆಳುವ ನೀತಿಯ ಬಗ್ಗೆ ವಿಡಂಬಿಸುತ್ತದೆ. ಜಯ ಮಹಾಕಾಳಿ ಮಾಟ ಮಂತ್ರದ ವೈಭವೀಕರಣದಲ್ಲಿ ನೆಲೆಗೊಂಡಿರುವ ಕಥೆಯಾಗಿ ಜನಪ್ರಿಯ ಸೂತ್ರಗಳಿಂದ ಕೂಡಿದೆ.
ಇಷ್ಟೇ ಅಲ್ಲದೆ, 20ರ ಹರೆಯದಲ್ಲೇ, ಅಂದರೆ 1928ರಲ್ಲಿ 'ಕಥಾಂಜಲಿ' ಎಂಬ ಮಾಸಪತ್ರಿಕೆಯನ್ನು ಹೊರತಂದ ಅಸೀಮ ಸಾಹಸಿ ಅನಕೃ. ಅದಲ್ಲದೇ 1936ರಲ್ಲಿ 'ವಿಶ್ವವಾಣಿ' ಎಂಬ ಅಂತಾರಾಷ್ಟ್ರೀಯ ಪತ್ರಿಕೆ ತಂದ ಅವರ ಸ್ಥೈರ್ಯವನ್ನು ವಿಶ್ವೇಶ್ವರಯ್ಯನವರೂ ಶ್ಲಾಘಿಸಿದ್ದರು. ಕಲೆ ಸಂಗೀತದ ಬಗ್ಗೆ ಸ್ಪಷ್ಟ್ಯಾತ್ಮಕ ನಿಲುವುಗಳನ್ನು ಪ್ರತಿಪಾದಿಸುತ್ತಿದ್ದ ಅನಕೃ ಸಂಗೀತದ ರಾಗ ಶ್ರುತಿಶುದ್ಧತೆಯ ಬಗ್ಗೆ ಎಷ್ಟು ಸಂಭ್ರಮಿಸುತ್ತಿದ್ದರೋ, ಅಷ್ಟೇ ಮುಖ್ಯವಾಗಿ ಸಂಗೀತದ ನಿರಂತರ ಅಭಿವೃದ್ಧಿಗೆ ಶ್ರಮಿಸುವ ಅಗತ್ಯವನ್ನೂ ಒತ್ತಿ ಹೇಳುತ್ತಿದ್ದರು. ಎಂ.ಎಸ್. ಸುಬ್ಬಲಕ್ಷ್ಮಿಯವರ ಪ್ರತಿಭೆಗೆ ತಲೆಬಾಗುತ್ತಲೇ ಆಕೆ ಕನ್ನಡದ ಕೀರ್ತನೆ-ವಚನಗಳನ್ನು ಹಾಡಬೇಕೆಂದು ಆಗ್ರಹಿಸಿದ ಅಪ್ಪಟ ಕನ್ನಡನುಡಿ ಚಿಂತಕ ಅನಕೃ. ರಂ.ರಾ. ದಿವಾಕರ ಅವರ ಹಿಂದಿ ಪ್ರೀತಿ ಕನ್ನಡಕ್ಕೆ ಹೊಡೆತ ನೀಡುತ್ತದೆಂದು ಸಾಹಿತ್ಯಪರಿಷತ್ತಿನ ಕನ್ನಡನುಡಿ ಪತ್ರಿಕಾ ಸಂಪಾದಕತ್ವವನ್ನೇ ತ್ಯಜಿಸಿದ ಅವರು 'ಇಲ್ಲಸ್ಟ್ರೇಟೆಡ್ ವೀಕ್ಲಿ', 'ಕ್ರಾನಿಕಲ್' ಇಂಗ್ಲಿಷ್ ಪತ್ರಿಕೆಗಳಿಗೆ ಲೇಖನ ಬರೆಯುತ್ತಿದ್ದವರು. ಇಂಗ್ಲಿಷ್ ಲೇಖನಗಳಿಗೆ ಹೆಚ್ಚಿನ ಸಂಭಾವನೆ ಸಿಗುತ್ತಿದ್ದರೂ ಕನ್ನಡ-ಕನ್ನಡಿಗ ಕರ್ನಾಟಕ... ಈ ನೆಲೆಗಟ್ಟಿನ ಅನಕೃ ಕನ್ನಡ ಸೇವೆಗೇ ತಮ್ಮನ್ನು ಸಮರ್ಪಿಸಿಕೊಂಡವರು. ಮ. ರಾಮಮೂರ್ತಿಯವರೊಂದಿಗೆ ಕನ್ನಡ ಬಾವುಟ ರೂಪಿಸಿದ ಅವರನ್ನು ಕನ್ನಡತ್ವದ ನೈಜ ಸಾಂಸ್ಕೃತಿಕ ಸೇನಾನಿ ಎಂದರೆ ತಪ್ಪಿಲ್ಲ.
ಅನಕೃ ಅವರನ್ನು ಬಹಳ ಎತ್ತರದ ಸ್ಥಾನದಲ್ಲಿಟ್ಟು ನೋಡಲು ಅವರ ಕಾದಂಬರಿ ಕ್ಷೇತ್ರದ ಸಿದ್ಧಿಯೂ ಕಾರಣ. ಜೀವನಯಾತ್ರೆ ಅನಕೃ ಅವರು ಬರೆದ ಪ್ರಪ್ರಥಮ ಕಾದಂಬರಿ. ಇದಲ್ಲದೇ, ಸಂಜೆಗತ್ತಲು, ಶನಿಸಂತಾನ, ನಗ್ನ ಸತ್ಯದಂಥ ಕಾದಂಬರಿಗಳಲ್ಲಿ ವೇಶ್ಯಾವಾಟಿಕೆಯ ಹಲವು ಮುಖಗಳನ್ನು ಸಮಾಜದ ಮುಂದೆ ಇಟ್ಟರು. ಆದರೆ ಅನಕೃ ಅವರ ಈ ಕಾದಂಬರಿಗಳಲ್ಲಿ ಅಶ್ಲೀಲತೆ ಹೆಚ್ಚು ಎಂಬ ಆಪಾದನೆಗಳು ಕೇಳಿ ಬಂದಾಗ ದಿಟ್ಟತನದಿಂದಲೇ ಅದನ್ನು ಸ್ವೀಕರಿಸಿ ಒಂದೇ ದಿನದಲ್ಲಿ 'ಸಾಹಿತ್ಯ ಮತ್ತು ಕಾಮಪ್ರಚೋದನೆ' ಎಂಬ ಕೃತಿಯಲ್ಲಿ ಶೀಲ-ಅಶ್ಲೀಲಗಳ್ನು ವಿಶ್ಲೇಷಿಸಿದ ಧೀಮಂತ. 'ಧರ್ಮಪತ್ನಿ' ಕಾದಂಬರಿಯಲ್ಲಿ ಹೆಣ್ಣಿನ ಒಳ ತುಮುಲಗಳು ಹದವಾಗಿ ಬೆರೆತುಕೊಂಡಿದ್ದರೆ 'ನಟಸಾರ್ವಭೌಮ', 'ಉದಯರಾಗ', 'ಸಂಧ್ಯಾರಾಗ' ಕಲಾ ಪ್ರಪಂಚದ ನಿಟ್ಟಿನಲ್ಲಿ ಸಾಗುವ ಪ್ರಮುಖ ಕಾದಂಬರಿಗಳು. ಯಲಹಂಕ ಭೂಪಾಲ ಹೆಸರೇ ಹೇಳುವಂತೆ ಕಿತ್ತೂರು ಚೆನ್ನಮ್ಮ, ಪುಣ್ಯಪ್ರಭಾವ, ತಪೋಬಲ, ಪ್ರೌಢಪ್ರತಾಪಿ, ಅನಕೃ ಅವರ ಇನ್ನಿತರ ಯಶಸ್ವೀ ಚಾರಿತ್ರಿಕ ಕಾದಂಬರಿಗಳು.
ಅನಕೃ ಬಗ್ಗೆ ಬರೆಯಬೇಕಾದಾಗ ತಪ್ಪದೆ ನೆನಪಿಸಿಕೊಳ್ಳಬೇಕಾದ ಹೆಸರೇ ತ.ರಾ.ಸು ಅವರದ್ದು. ಅನಕೃ ಅವರ ಮೂಸೆಯಲ್ಲಿಯೇ ಪಳಗಿದ ತ.ರಾ.ಸು. ಮೊದಲು ಆಕರ್ಷಿತರಾಗಿದ್ದೇ ಅನಕೃ ಅವರ ಭಾಷಣಗಳಿಂದ. "ನನ್ನ ಸಾಹಿತ್ಯ ಶಕ್ತಿಯ ಬೆನ್ನೆಲುಬು ಅನಕೃ" ಎಂದು ತ.ರಾ.ಸು. ಒಂದೆಡೆ ದಾಖಲಿಸಿದ್ದಾರೆ. ಕನ್ನಡ ಸಾರಸ್ವತ ಲೋಕದ ಈ ಸುಬ್ಬಣ್ಣ (ತ.ರಾ.ಸು.) ಮತ್ತು ಕಿಟ್ಟಣ್ಣ (ಅನಕೃ) ರ ನಡುವೆ ಸಣ್ಣ ವೈಚಾರಿಕ ಭಿನ್ನಾಭಿಪ್ರಾಯ ಎದುರಾಗಿದ್ದೂ ಉಂಟು. ಆಗ ಇವರನ್ನು ಆ ಇರಿಸು ಮುರಿಸಿನಿಂದ ದೂರವಾಗಿಸಿ ಒಂದು ಮಾಡಿದ್ದು ಕನ್ನಡದ ಹಿರಿಯ ನಟ ಟಿ.ಎನ್. ಬಾಲಕೃಷ್ಣ. 40ರ ದಶಕದಲ್ಲಿ ತೆರೆಗೆ ಬಂದ ಜೀವನ ನಾಟಕ ಚಲನಚಿತ್ರಕ್ಕೆ ಸಾಹಿತ್ಯ ಒದಗಿಸಿದ್ದ ಅನಕೃ ನೇರವಾಗಿ ಚಿತ್ರರಂಗಕ್ಕೇ ತೊಡಗಿಸಿಕೊಳ್ಳಲು ಅಷ್ಟಾಗಿ ಮುಂದಡಿ ಇಡಲಿಲ್ಲ.
"ಕಲೆ ಎಲ್ಲರನ್ನೂ ಕೈ ಬೀಸಿ ಕರೆಯುತ್ತದೆ ಆದರೆ ಕೆಲವರನ್ನು ಮಾತ್ರ ಆರಿಸಿ ಪೋಷಿಸಿ ಬೆಳೆಸುತ್ತದೆ" ಎಂದಿದ್ದ ಅನಕೃ, ರಾಜ್ಕುಮಾರ್ ಅವರು ಚಿತ್ರಗಳ ಆಯ್ಕೆಯಲ್ಲಿ ಹೆಚ್ಚಿನ ಆಸಕ್ತಿ ವಹಿಸಿ ಗಾಢ ಸಾಮಾಜಿಕ ಆಶಯದ ಚಿತ್ರಗಳಲ್ಲಿ ತೊಡಗಿಸಿಕೊಳ್ಳಲಿ" ಎಂದು ಹೇಳಿದ್ದರು. ಇದು ನಮ್ಮ ಆತ್ಮಾವಲೋಕನಕ್ಕೆ ದಾರಿ ಮಾಡಿಕೊಟ್ಟಿತು ಎಂದು ಪಾರ್ವತಮ್ಮ ರಾಜ್ಕುಮಾರ್ ಮೆಲುಕು ಹಾಕಿದ್ದಾರೆ.
ಇಂತಹ ಶ್ರೇಷ್ಠ ಬರಹಗಾರ ನುಡಿ ಚಿಂತಕ ಅನಕೃ 1971ರಲ್ಲಿ ಕಣ್ಮರೆಯಾದಾಗ ಹಿರಿಯರಾಗಿದ್ದ ಮಾಸ್ತಿಯವರು ಅನಕೃ ಅವರ ಶವಯಾತ್ರೆಯಲ್ಲಿ "ಕನ್ನಡ ಹೋರಾಟಗಾರನ ಹೆಣಕ್ಕೆ ಬಿಸಿಲು ತಾಗದಿರಲಿ" ಎಂದು ಛತ್ರಿ ಹಿಡಿದಿದ್ದರು. ಇದು ಅನಕೃ ಅವರ ಅಗಾಧ ಶಕ್ತಿ. ಅವರು ಹೊತ್ತಿಸಿದ ನಾಡು ನುಡಿಯ ಕಿಡಿ ಕನ್ನಡ ಇರುವವರೆಗೂ ಚಿರಂಜೀವವಾಗಿ ಉಳಿದಿರುತ್ತದೆ. ಅವರ ಸಾರ್ಥಕ ಹೋರಾಟಕ್ಕೆ ಸಾಷ್ಟಾಂಗ ನಮಸ್ಕಾರಗಳು.
-ಡಿ.ಎಸ್. ಶ್ರೀನಿವಾಸ ಪ್ರಸಾದ್
ಕನ್ನಡ ಉಪನ್ಯಾಸಕರು
ಭಗವಾನ್ ಮಹಾವೀರ ಜೈನ್ ಕಾಲೇಜು
ಕೆ.ಜಿ.ಎಫ್
dspsbmjc@gmail.com