ಅವಸಾನದ ಅಂಚಿನತ್ತ ನಮ್ಮ ನೆಲಮೂಲ ಸಂಸ್ಕೃತಿ
ನೆಲಮೂಲ ಸಂಸ್ಕೃತಿ ಇಂದು ಅವಸಾನದ ಅಂಚಿಗೆ ಬಂದು ನಿಂತಿದೆ...
ನೆಲಮೂಲ ಸಂಸ್ಕೃತಿ ಇಂದು ಅವಸಾನದ ಅಂಚಿಗೆ ಬಂದು ನಿಂತಿದೆ. ಅದರ ಪರಿಕರಗಳು ಮತ್ತು ಪರಿಮಳ ತನ್ನ ಘಮಲನ್ನು ಕಳೆದುಕೊಳುತ್ತಿವೆ. ಕೃಷಿ ಮತ್ತು ಅದಕ್ಕೆ ಪೂರಕವಾದ ಕಂಬಾರಿಕೆ, ಕುಂಬಾರಿಕೆ, ಬಡಿಗತನ, ಚಮ್ಮಾರಿಕೆಯಂತಹ ಕಾಯಕಗಳು, ನಮ್ಮ ಸಂಪ್ರದಾಯಿಕ ಆಚರಣೆಗಳು ಮತ್ತು ನಂಬಿಕೆಗಳು ಈ ನೆಲಮೂಲ ಸಂಸ್ಕೃತಿಯ ಜೀವಾಳಗಳು. ಕೃಷಿ ಎಂಬುದು ಕೇವಲ ಒಂದು ವೃತ್ತಿಯಲ್ಲ, ಅದು ಈ ನಾಡಿನ ಸಂಸ್ಕೃತಿ ಮತ್ತು ಬದುಕು. ಅದರ ಒಳಗಡೆ ಕಲೆ, ಕಾವ್ಯ, ಹಬ್ಬ, ಹುಣ್ಣಿಮೆ, ಜಾತ್ರೆ, ಉತ್ಸವ, ಉಲ್ಲಾಸ, ವಿಶಾದ ಎಂಬ ಜಾನಪದವಿದೆ. ಜ್ಞಾನ-ವಿಜ್ಞಾನ, ಆರೋಗ್ಯ, ಆಯುರ್ವೇದ ಎಂಬ ಬದುಕಿನ ಸವಾಲು ಮತ್ತು ಸಮಸ್ಯೆಗಳಿಗೆ ಪರಿಹಾರಗಳಿವೆ. ಆ ಎಲ್ಲ ಪಾರಂಪರಿಕ ಗುಣಗಳು ಇಂದು ಆಧುನೀಕರಣದ ಹೊಡೆತಕ್ಕೆ ಸಿಕ್ಕು ನಲುಗುತ್ತಿವೆ. ನಮ್ಮ ಕೃಷಿಗೆ ಒಂದು ಭಾಷೆ ಇದೆ. ಅದು ಸಹ ಇಂದು ಕೃಷವಾಗುತ್ತಿದೆ.
ಅನ್ನ, ಅಕ್ಷರ, ಆರೋಗ್ಯವನ್ನು ಕೊಡುತ್ತೇವೆ ಎಂಬ ಸೋಗನ್ನು ಹಾಕಿಕೊಂಡು ಬಂದ ಕ್ರಿಶ್ಚಿಯನ್ ಮಿಷಿನರಿಗಳು ಆರೋಗ್ಯದ ಹೆಸರಿನಲ್ಲಿ ಅಲೋಪತಿ ಔಷಧಿಯನ್ನು ಪ್ರಸರಣ ಮಾಡುವ ಮೂಲಕ ನಮ್ಮ ದೇಶಿ, ನಾಟಿ ಮತ್ತು ಆಯುರ್ವೇದಿಕ ಚಿಕಿತ್ಸಾ ವಿಧಾನವನ್ನು ನಾಶಮಾಡಿದವು. ಶಿಕ್ಷಣದ ಹೆಸರಿನಲ್ಲಿ ಇಂಗ್ಲಿಷ್ ಶಿಕ್ಷಣ ಪ್ರಸಾರ ಮಾಡುವ ಮೂಲಕ ನಮ್ಮ ಸಾಂಸ್ಕೃತಿಕ ಶಿಕ್ಷಣ ಪದ್ಧತಿಯನ್ನು ಕೇವಲ ಅಪಹಾಸ್ಯ ಮಾಡಲಿಲ್ಲ, ಅದನ್ನು ಕತ್ತಲೆಗೆ ತಳ್ಳುವ ಸಂಚನ್ನು ಮಾಡಲಾಯಿತು. ಹಸಿದವರಿಗೆ ಅನ್ನ ಕೊಡುವ ಮೂಲಕ ಆದಿವಾಸಿಗಳು ಮತ್ತು ತಳ ಸಮುದಾಯದ ಜನರನ್ನು ಮತಾಂತರ ಮಾಡಲಾಯಿತು, ಈಗಲೂ ಸಹ ಮಾಡಲಾಗುತ್ತಿದೆ. ಇದು ಒಳಮುಖವಾಗಿ ಸದ್ದಿಲ್ಲದೆ ನಡೆದರೆ ಮತ್ತೊಂದು ಕಡೆ ಬ್ರಿಟಿಷ್ ಸಾಮ್ರಾಜ್ಯಶಾಹಿ ವ್ಯವಸ್ಥೆಯ ಕ್ರೂರ ಮುಖವಾದ ಈಸ್ಟ್ ಇಂಡಿಯಾ ಕಂಪನಿ ಈ ದೇಶದ ಅನರ್ಘ್ಯ ನೈಸರ್ಗಿಕ ಸಂಪತ್ತನ್ನು ಲೂಟಿಮಾಡಿತು. ತನ್ನ ಕೈಗಾರಿಕೆಗಳ ಸಿದ್ಧ ಉತ್ಪನ್ನಗಳನ್ನು ಮಾರಾಟ ಮಾಡುವ ಮಾರುಕಟ್ಟೆಯನ್ನಾಗಿ ಈ ದೇಶವನ್ನು ಬಳಸಿಕೊಂಡಿತು. ಈ ದೇಶದ ಸಾಂಪ್ರದಾಯಿಕ ಕರಕುಶಲ ಕಲೆಯನ್ನು ನಾಶಮಾಡತೊಡಗಿತು. ಈ ಕಂಪನಿಯನ್ನು ದೇಶದಿಂದ ಓಡಿಸಲು 1857ರಲ್ಲಿ ಪ್ರಥಮ ಸ್ವಾತಂತ್ರ್ಯ ಸಂಗ್ರಾಮವೇ ಜರುಗಬೇಕಾಯಿತು. ಆದರೂ ಮತ್ತೊಂದು ಮುಖವಾಡ ಹಾಕಿಕೊಂಡು ಬಂದ ಅದು, ಯೂನಿಯನ್ ಕಾರ್ಬೈಡ್ ಕಂಪನಿಯ ಮೂಲಕ ಭೂಪಾಲ್‌ನಲ್ಲಿ 1984ರಲ್ಲಿ ಅನಿಲ ದುರಂತ ಮಾಡುವ ಮೂಲಕ ಲಕ್ಷಾಂತರ ಜನರ ಬದುಕನ್ನು ನರಕವನ್ನಾಗಿ ಮಾಡಿತು. ಅದರ ಮತ್ತೊಂದು ಅವತಾರದಂತೆ ಹಿಂದೂಸ್ಥಾನ ಲಿವರ್ ಲಿಮಿಟೆಡ್ ಕಂಪನಿಯು ಈ ದೇಶದ ಮಾರುಕಟ್ಟೆಯನ್ನು ಆಕ್ರಮಿಸಿಕೊಂಡಿದೆ. ಸೋಪ್, ಪೇಸ್ಟ್, ಮಾರ್ಜಕ, ಸೌಂದರ್ಯ ಪ್ರಸಾಧನಗಳು ಎಂಬ ನಾನಾವಿಧದ ಅದರ ಉತ್ಪನ್ನಗಳು ಬೇರೆ ಬೇರೆ ಹೆಸರು ಮತ್ತು ಪ್ಯಾಕ್‌ಗಳ ಮೂಲಕ ನಮ್ಮ ನಿತ್ಯದ ಬದುಕನ್ನು ಆವರಿಸಿಕೊಂಡಿವೆ. ನಮ್ಮ ಶುದ್ಧ ಸ್ವದೇಶಿ ಉತ್ಪನ್ನಗಳನ್ನು ಹತ್ತಿಕ್ಕಲು ಕುತಂತ್ರಗಳು ಎಲ್ಲ ಕಡೆಯಿಂದ ನಡೆಯುತ್ತಿವೆ. ಪೆಪ್ಸಿ, ಕೋಲಾದಂತಹ ಪ್ರಬಲ ವಿದೇಶಿ ಕಂಪನಿಗಳು ವಿಶ್ವ ಬ್ಯಾಂಕ್ ಮೂಲಕ ನಮ್ಮ ಸರ್ಕಾರಗಳನ್ನೇ ಬೆದರಿಸುತ್ತಿವೆ. ಇನ್ನು ದೇಶಿ ಸ್ವಾಸ್ಥ್ಯ ಉತ್ಪನಗಳನ್ನು ನುಂಗಿಹಾಕುವದು ಅವುಗಳಿಗೇನು ದೊಡ್ಡ ಸಮಸ್ಯೆಯಲ್ಲ.
ಸಾಂಪ್ರದಾಯಿಕ ಉಳುಮೆ, ಸಾವಯವ ಕೃಷಿ ಕೇವಲ ಹಳವಂಡಗಳಾಗುತ್ತಿವೆ. ಎತ್ತು, ನೇಗಿಲು ಎಂಬುದು ಪಳಯುಳಿಕೆಗಳಾಗುತ್ತಿವೆ. ಟ್ರ್ಯಾಕ್ಟರ್, ಜೆ.ಸಿ.ಬಿ.ಗಳು ಉಳುಮೆ ಮಾಡುತ್ತಿವೆ. ರೆಂಟೆ, ಕುಂಟೆ, ಬಿತ್ತುವುದು, ಉತ್ತುವುದು, ಕಳೆತೆಗೆಯುವುದು, ಕಟಾವ್ ಮಾಡುವದು ಎಲ್ಲವೂ ಯಂತ್ರಗಳಿಂದಲೇ ನಡೆಯುತ್ತಿದೆ. ಹಗ್ಗ, ವಲ್ಯೆ, ಪಡಮ, ಮಿಂದೂಟಿ, ಜತಿಗಿ, ಬಾಯ್ಕಲ್ಲಿ, ಕೋಡಣ್ಸು, ಜೂಲಾ, ನಾಲು ಮಾಯವಾಗಿ ಪ್ಲಾಸ್ಟಿಕ್ ಪರಿಕರಗಳು ಬಂದಿವೆ. ಶೆಲಿಕಿ, ಸಿಂದಿ ಬುಟ್ಟಿ, ಹಲಕು, ಹೆಂಡ್ಗೊಡತಿ, ಚಕ್ಕಡಿ, ಮೂಖಾ, ನೊಗ, ಉದ್ಗಿ, ಕಾಳ್ಗ, ಅಚ್ಚು, ಗಾಲಿ, ಹೀಂಟಾ, ದಿಂಡು, ಮೇಳಿ, ಈಸೂ, ಸೆಡ್ಡಿ, ತಾಳ ಎಲ್ಲವೂ ಮಾಯವಾಗುತ್ತಿವೆ. ಕಬ್ಬಿಣ, ಫೈಬರ್, ಪ್ಲಾಸ್ಟಿಕ್ ವಸ್ತುಗಳು ಎಲ್ಲೆಡೆ ರಾರಾಜಿಸುತ್ತಿವೆ. ಹಂತಿ, ಸುಗ್ಗಿ, ಕಣಹಬ್ಬ, ಕಾಳುಕಣಜ, ಬಿದಿರ ಬುಟ್ಟಿ, ಸಾಣಿಗೆ, ಮೊರ, ಕಡಗೋಲು ಕೇವಲ ಗತಕಾಲದ ಆಚರಣೆಗಳಂತೆ ಕಾಣುತ್ತಿವೆ. ಹೊಲದಿಂದ ಉತ್ಪನ್ನಗಳು ನೇರವಾಗಿ ಮಾರುಕಟ್ಟೆಗೆ ಹೋಗುತ್ತಿವೆ. ಪಟ್ಟಣದಿಂದ ಪ್ಲಾಸ್ಟಿಕ್ ಪ್ಯಾಕ್‌ಗಳಲ್ಲಿ ಬರುವ ಆಹಾರ ಉತ್ಪನ್ನಗಳು ನಮ್ಮ ಅಡುಗೆ ಮನೆಗೆ ಸೇರುತ್ತಿವೆ. ಬೀಸುಕಲ್ಲು, ಒಳಕಲ್ಲು, ಒಣಕೆ, ರುಬ್ಬುಗುಂಡು ಮಾಯವಾಗಿ ಮಿಕ್ಸರ್ ಗ್ರೈಂಡರ್‌ಗಳು ಬಂದು ಕುಳಿತಿವೆ.
ದನಕರುಗಳು ಮಾಯವಾಗುತ್ತಿವೆ. ಅವುಗಳಿಂದ ಸಿಗುತ್ತಿದ್ದ ಸೆಗಣಿ, ಗಂಜಲ ಇಲ್ಲದೆ ಭೂತಾಯಿ ಬರಡಾಗಿದ್ದಾಳೆ. ರೂಗನಿರೋಧಕ ಗುಣಹೊಂದಿದ್ದ ನಮ್ಮ ಕೊಟ್ಟಿಗೆ ಗೊಬ್ಬರ, ಗೋಮೂತ್ರಗಳ ಸ್ಪರ್ಷವಿಲ್ಲದೆ ನಮ್ಮ ಬೆಳೆಗಳು ಹಲವಾರು ರೋಗಗಳಿಂದ ಪೀಡಿತವಾಗುತ್ತಿವೆ. ಹೈನು ಉತ್ಪಾದನೆಗೆ ಪ್ರಸಿದ್ಧವಾಗಿದ್ದ ಹಾಗೂ ಹಾಲಿನಲ್ಲಿ ಔಷಧಿ ಗುಣಹೊಂದಿದ್ದ ನಮ್ಮ ಮಲೆನಾಡ 'ಗಿಡ್ಡ'ದಂತಹ ದೇಶಿ ತಳಿಯ ರಾಸುಗಳು ಅವಸಾನವಾಗುತ್ತಿವೆ. ಬಕೆಟ್‌ಗಟ್ಟಲೆ ಹಾಲುಕೊಡುತ್ತವೆ ಎಂಬ ಕಾರಣಕ್ಕೆ ಜರ್ಸಿ, ಡೆನ್ಮಾರ್ಕ್ ತಳಿಯ ದನಗಳನ್ನು ಆಮದು ಮಾಡಿಕೊಂಡಿದ್ದೇವೆ. ಆದರೆ ಬೆಳ್ಳಗಿರುವುದೆಲ್ಲ ಹಾಲಲ್ಲ.
ಮೈಹಿಕೊ, ಮಾನ್‌ಸಾಂಟೋದಂತಹ ಕಂಪನಿಗಳ ಷಂಡ ಬೀಜಗಳು ನಮ್ಮ ದೇಶೀ ತಳಿಯ ಬೀಜಗಳನ್ನು ಸರ್ವನಾಶಮಾಡುತ್ತಿವೆ. ಜಿ.ಎಮ್. ಸೀಡ್‌ಗಳು, ಬಿ.ಟಿ. ಸೀಡ್‌ಗಳು ಹೆಚ್ಚು ಇಳುವರಿ ಕೊಡುತ್ತವೆ ಎಂದು ನಂಬಿ ವಿದೇಶಿ ಕಂಪನಿಗಳ ಖೋಟಾ ಬೀಜಗಳನ್ನು ನಮ್ಮ ಹೊಲಗಳಲ್ಲಿ ಬಿತ್ತುತ್ತಿದ್ದೇವೆ. ಅಂತಹ ಬೀಜಗಳಿಗೆ ಪ್ರಜನನ ಶಕ್ತಿ ಇರುವುದಿಲ್ಲ. ಮುಂದಿನ ವರ್ಷ ಬಿತ್ತುವುದಕ್ಕಾಗಿ ಮತ್ತೆ ನೀವು ಸೀಡ್ ಕಂಪನಿಗಳ ಮುಂದೆ ಹೋಗಿ ನಿಲ್ಲಬೇಕು. ಇವುಗಳು ರೋಗ ನಿರೋಧಕ ಬೀಜಗಳು ಎಂದು ಹುಸಿ ಪ್ರಚಾರ ಮಾಡಲಾಗುತ್ತಿದೆ. ಆದರೆ ಮೊಳಕೆಯೊಡೆಯುತ್ತಿದ್ದಂತೆ ಅವುಗಳಿಗೆ ರೋಗಗಳು ಮುತ್ತಿಕೊಳ್ಳುತ್ತವೆ. ಅದನ್ನು ನಿವಾರಿಸಲು ಬಹುರಾಷ್ಟ್ರೀಯ ಕಂಪನಿಗಳ ರಸಗೊಬ್ಬರ ಮತ್ತು ಕ್ರಿಮಿನಾಶಕಗಳ ಮೇಲೆ ಅವಲಂಬಿತವಾಗಬೇಕಾಗಿದೆ. ನಮ್ಮ ಕೃಷಿ ವಿದೇಶಿ ಕಂಪನಿಗಳ ವಿಷವರ್ತುಲದಲ್ಲಿ ಸಿಕ್ಕಿಹಾಕಿಕೊಂಡಿದೆ. ಕೃಷಿ ಉತ್ಪನ್ನಗಳ ಮಾರುಕಟ್ಟೆಯೂ ಸಹ ಬಂಡವಾಳಶಾಹಿ ಹಿಡಿತದಲ್ಲಿ ಬಂಧಿಯಾಗಿದೆ.
ಜಗತ್ತಿಗೆ ಧಾರ್ಮಿಕ ದರ್ಶನ ನೀಡಿದ ಹಿಂದು ಧರ್ಮ ನಮ್ಮವರಿಂದಲೇ ಅಪಹಾಸ್ಯಕ್ಕೆ ಅವಮಾನಕ್ಕೆ ಈಡಾಗುತ್ತಿದೆ. ವೆಂಡಿ ಡೋನಿಗರ್‌ರಂತಹ ವಿದೇಶಿ ವಿದ್ವಾಂಸರು ಹಿಂದೂ ಧರ್ಮವನ್ನು ಅಪಾರ್ಥಗೊಳಿಸಿ ಅವಮಾನಿಸುತ್ತಿದ್ದಾರೆ. ನಮ್ಮ ಪರಂಪರೆಯ ಪವಿತ್ರ ಕೇಂದ್ರಗಳು ಎಂದು ಭಾವಿಸಲಾಗುತ್ತಿರುವ ದೇವಸ್ಥಾನಗಳಲ್ಲಿಯೂ ಸಹ ಇಂದು ಬಾರಿಸುವ ಮಂಗಳವಾದ್ಯಗಳು ವಿದ್ಯುತ್ ಚಾಲಿತ ಯಂತ್ರಗಳಾಗಿಬಿಟ್ಟಿವೆ. ಮಂತ್ರೋಚ್ಚಾರಣೆಗೂ ಕ್ಯಾಸೆಟ್, ಲೌಡ್‌ಸ್ಪೀಕರ್ ಬಂದಿವೆ! ಡೊಳ್ಳು ಕುಣಿತ, ಕರಡಿ ಮಜಲು, ಗೀಗಿ ಪದ, ಪುರಾಣ-ಕೀರ್ತನೆ, ಭಜನೆ, ಸೋಬಾನೆ ಪದಗಳು, ಕುಟ್ಟುವ, ಬೀಸುವ ಪದಗಳು, ಹಂತಿಪದಗಳು, ಸಣ್ಣಾಟ, ದೊಡ್ಡಾಟ, ದಪ್ಪಿನಾಟ ಎಲ್ಲವೂ ಮಾಯವಾಗಿವೆ. ಜಾನಪದ ಜಾತ್ರೆ ಮತ್ತು ಉತ್ಸವಗಳಲ್ಲಿ ಮಾತ್ರ ಅವು ಪ್ರದರ್ಶನ ಕಲೆಗಳಾಗಿ ಉಳಿಯುತ್ತಿವೆ. ಪಾಪ್, ರಾಕ್ ಸಂಗೀತ, ಅರೆ ಬೆತ್ತಲೆ ಕುಣಿತ, ಅಸಹ್ಯ ಅಸಂಬದ್ಧ ಸಿನಿಮಾ ಹಾಡುಗಳು, ನಕಲಿ ಜಾನಪದ ಗೀತೆಗಳು ಸಣ್ಣ ಮಕ್ಕಳ ಬಾಯಲ್ಲೂ ಹರಿದಾಡುತ್ತಿವೆ. ಅದೇ ನಿಜವೆಂದು ಯುವ ಪೀಳಿಗೆಯನ್ನು ನಂಬಿಸಲಾಗುತ್ತಿದೆ. ವಿಲಾಸಿ ಸರಕುಗಳ ಪ್ರಚಾರ ಮಾಡುವ ಟಿವಿ ವಾಹಿನಿಗಳು ನಮ್ಮ ಎಲ್ಲ ಸೃಜನಶೀಲ ಕಲೆಗಳನ್ನು ನುಂಗಿಹಾಕುತ್ತಿವೆ. ಪ್ರತಿ ಮನೆಯಲ್ಲಿ ಸಂಧ್ಯಾವಂದನೆಯಲ್ಲಿ ಜರುಗುತ್ತಿದ್ದ ಭಜನೆ, ಪೂಜೆಯ ಘಂಟಾನಿನಾದದ ಜಾಗದಲ್ಲಿ ಟಿವಿ ವಾಹಿನಿಗಳು ಪ್ರಸಾರ ಮಾಡುತ್ತಿರುವ ಮೂಢನಂಬಿಕೆಗಳು ಆಲಾಪ ಮಾಡುತ್ತಿವೆ. ಸೆಕ್ಸ್, ಕ್ರೈಮ್ ಸುದ್ದಿಗಳು ವಿಜ್ರಂಭಿಸುತ್ತಿವೆ. ನಮ್ಮ ಕಲೆ, ಸಂಸ್ಕೃತಿ, ಸಂಪ್ರದಾಯ, ಪರಂಪರೆಯನ್ನು ಅವಸಾನ ಮಾಡಲು ಎಲ್ಲರೂ ಟೊಂಕ ಕಟ್ಟಿನಿಂತಿದ್ದಾರೆ. ನಾವು ಎಚ್ಚೆತ್ತುಕೊಳ್ಳದಿದ್ದರೆ ನಮಗೆ ಉಳಿಗಾಲವಿಲ್ಲ.
- ಮಲ್ಲಿಕಾರ್ಜುನ ಗುಮ್ಮಗೋಳ
gumgolmn@gmail.com