ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಅಂಕಣಗಳು

ಪ್ರತಿ ಸುರಂಗದ ಕೊನೆಯಲ್ಲೂ ಭರವಸೆಯ ಬೆಳಕಿದೆ

Vishwanath S
Updated On : 7 May 2014, 12:29 pm

"ಪರೀಕ್ಷೆ ಒಂದು ಹಬ್ಬ, ಬನ್ನಿ ಎಲ್ಲರೂ ಸಂಭ್ರಮಿಸೋಣ" ಇದು ಹತ್ತನೇ ತರಗತಿ ಮತ್ತು ಪಿ.ಯು.ಸಿ ಪರೀಕ್ಷೆಗಳು ನಡೆಯುತ್ತಿದ್ದಾಗ ಬಹುತೇಕ ಶಾಲಾ ಕಾಲೇಜುಗಳ ಮುಂದೆ ವಿದ್ಯಾರ್ಥಿಗಳನ್ನು ಸ್ವಾಗತಿಸುತ್ತಿದ್ದ ಸಾಲು. ಸಂಭ್ರಮದಿಂದಲೇ ಪರೀಕ್ಷೆಗಳು ಮುಗಿದಿವೆ. ಮೌಲ್ಯಮಾಪನವೂ ಕೂಡ ಮುಗಿದು ಇನ್ನೇನು ಫಲಿತಾಂಶ ಹೊರಬೀಳಲಿದೆ ( ಮೇ 8 ರಂದು ಪಿ.ಯು ಮತ್ತು ಮೇ 15 ರಂದು ಹತ್ತನೇ ತರಗತಿ). ಪರೀಕ್ಷೆಗಳನ್ನು ಸಂಭ್ರಮದಿಂದ ಸ್ವಾಗತಿಸಿದಂತೆ ಫಲಿತಾಂಶವನ್ನೂ ಕೂಡ ಅಷ್ಟೇ ಸಂಭ್ರಮದಿಂದ ಸ್ವಾಗತಿಸುತ್ತಾರಾ? ಉಹೂಂ, ಖಂಡಿತಾ ಇಲ್ಲ. ಫೇಲಾಗುವುದಿರಲಿ ಕಡಿಮೆ ಅಂಕ ಬಂದರೂ ಸಾಕು 'ದಿ ಎಂಡ್‌' ಎಂಬಂತೆ ವರ್ತಿಸುತ್ತಾರೆ. ಆತ್ಮಹತ್ಯೆ ಮಾಡಿಕೊಳ್ಳುವ ಮತ್ತು ಮನೆ ಬಿಟ್ಟು ಹೋಗುವವರ ಸಂಖ್ಯೆಯೇನೂ ಕಡಿಮೆ ಇರುವುದಿಲ್ಲ. ಇಂಥ ಸಂದರ್ಭದಲ್ಲಿ ನಾವೆಲ್ಲರೂ ವಿದ್ಯಾರ್ಥಿಗಳಿಗೆ ತಿಳಿ ಹೇಳಲೇಬೇಕಿದೆ. ಫಲಿತಾಂಶ ಕೇವಲ ಮುಂದಿನ ತರಗತಿಗೆ ಹೋಗಲು ಇರುವ ಒಂದು ಮಾನದಂಡವಷ್ಟೇ ಹೊರತು  ಭವಿಷ್ಯವನ್ನು ಬರೆಯುವ ಅಂತಿಮ ಘಟ್ಟವಲ್ಲ. ಬನ್ನಿ ಪಾಸು ನಪಾಸುಗಳನ್ನು ಸಕಾರಾತ್ಮಕವಾಗಿಯೇ ಸ್ವೀಕರಿಸೋಣ ಎಂದು.
ಫಲಿತಾಂಶ ಹೊರಬೀಳುವ ಹಿಂದಿನ ದಿನ ಮತ್ತು ಹೊರಬಿದ್ದ ದಿನದಿಂದ ಮತ್ತೆರಡು ದಿನಗಳ ಕಾಲ ಪ್ರಮುಖ ಪಟ್ಟಣ ನಗರಗಳಲ್ಲಿನ ಕೆರೆ ಬಾವಿಗಳ ಬಳಿ ಪೊಲೀಸರನ್ನು ನಿಯೋಜಿಸಲಾಗುತ್ತದೆ. ಕಾರಣವಿಷ್ಟೆ, ಫಲಿತಾಂಶದ ಮೊದಲ ದಿನ ಫಲಿತಾಂಶಕ್ಕೆ ಹೆದರಿ ಮತ್ತು ನಂತರದ ದಿನಗಳಲ್ಲಿ ಫೇಲಾಗಿದ್ದಕ್ಕಾಗಿಯೋ ಅಥವಾ ಕಡಿಮೆ ಅಂಕ ಬಂದಿದ್ದಕ್ಕಾಗಿಯೋ ಆತ್ಮಹತ್ಯೆಯ ಹಾದಿ ಹಿಡಿಯುವ ಮಕ್ಕಳನ್ನು ತಡೆಯುವುದಕ್ಕಾಗಿ. ಯಾಕಾದರೂ ಇಂತಹ ಪರಿಸ್ಥಿತಿ ನಿರ್ಮಾಣವಾಗುತ್ತಿದೆ? ಯಾಕಾದರೂ ಮಕ್ಕಳು ತಮ್ಮ ಅಮೂಲ್ಯ ಜೀವವನ್ನು ಅನ್ಯಾಯವಾಗಿ ನಿರ್ನಾಮ ಮಾಡಿಕೊಳ್ಳುತ್ತಿದ್ದಾರೆ? ಇಂದಿನ ಮಕ್ಕಳ ಮನಸ್ಥಿತಿಯನ್ನು ಮತ್ತು ಹೆತ್ತವರು ಅವರ ಮೇಲೆ ಹೇರುವ ಒತ್ತಡಗಳನ್ನು ನೆನೆದರೆ ಸಾಕು ದಿಗಿಲಾಗದೇ ಇರುವುದಿಲ್ಲ. ಮಕ್ಕಳು ಗಳಿಸುವ ಅಂಕಗಳಲ್ಲಿ ಹೆತ್ತವರು ತಮ್ಮ ಪ್ರತಿಷ್ಠೆಯನ್ನು ಹುಡುಕಹೊರಟಿದ್ದಾರೆ. ನೆಂಟರಿಷ್ಟರ ಮತ್ತು ಅಕ್ಕಪಕ್ಕದವರ ಬಳಿಯ ತಮ್ಮ ಹೆಚ್ಚುಗಾರಿಕೆಗಾಗಿ ಕರುಳ ಕುಡಿಗಳನ್ನು ಬಲಿಪಶುಗಳನ್ನಾಗಿಸಿ ಅವರ ದುರಂತ ಅಂತ್ಯಕ್ಕೆ ಕಾರಣವಾಗುತ್ತಿರುವುದು ನಮ್ಮ ಸಮಾಜದ ಮಹಾ ದುರಂತವೇ ಸರಿ.
ಮಕ್ಕಳು ಫೇಲಾದರೆ ಅಥವಾ ಕಡಿಮೆ ಅಂಕ ಗಳಿಸಿದರೆ ಮುಂದೆ ಭವಿಷ್ಯವೇ ಇಲ್ಲವೆ? ಈ ಹಿಂದೆ ಫೇಲಾದವರ್ಯಾರೂ ಕೂಡ ಆ ನಂತರ ಉನ್ನತ ಹಂತಕ್ಕೇರಿಲ್ಲವೇ?
ಡಾ. ಎ.ಪಿ.ಜೆ ಅಬ್ದುಲ್ ಕಲಾಂರನ್ನೇ ತೆಗೆದುಕೊಳ್ಳಿ, ಅಂದು ಅವರು ಹಾರುವ ಕನಸನ್ನು ಹೊತ್ತು ಪೈಲಟ್ ಆಗಲೆಂದು ಏರೋನಾಟಿಕಲ್ ಇಂಜಿನಿಯರಿಂಗ್ ಮುಗಿಸಿದ್ದರು. ವಾಯುಪಡೆಯಿಂದ ದೆಹ್ರಾಡೂನಿನಲ್ಲಿ ಸಂದರ್ಶನಕ್ಕೂ ಹಾಜರಾಗಿದ್ದರು. ಬೇಕಿದ್ದುದು ಎಂಟು ಮಂದಿ ಮಾತ್ರ. ಆದರೆ ಹಾಜರಾಗಿದ್ದುದು 25 ಮಂದಿ. ಸಂದರ್ಶನ ಮುಗಿದು ಫಲಿತಾಂಶ ಬಂದಾಗ ಕಲಾಂ ಒಂಬತ್ತನೆಯವರಾಗಿದ್ದರು. ಪೈಲಟ್ ಹುದ್ದೆ ಗಿಟ್ಟಿಸುವಲ್ಲಿ ಫೇಲಾಗಿದ್ದರು. ಅವರ ಹಾರುವ ಕನಸಿನ ರೆಕ್ಕೆ ಮುರಿದು ಬಿದ್ದಿತ್ತು. ಆದರೆ ಆ ನಂತರ ಅವರು ವಿಜ್ಞಾನಿಯಾಗಿ ಅಗ್ನಿಯಂತಹ ನೂರಾರು ಕ್ಷಿಪಣಿಗಳ ಹಾರಾಟಕ್ಕೆ ಕಾರಣರಾಗಿಬಿಟ್ಟರು. ರಾಷ್ಟ್ರಪತಿಯಾಗಿ, ಶಿಕ್ಷಕರಾಗಿ, ಮಾರ್ಗದರ್ಶಕರಾಗಿ ಅವರ ಸೇವೆ ಅನನ್ಯ. ಅವರೇ ಹೇಳುತ್ತಾರೆ "ಅಂದು ನನಗೆ ಒಂದೇ ಒಂದು ರ್ಯಾಂಕ್ ಹೆಚ್ಚಿಗೆ ಬಂದಿದ್ದರೂ ಕೂಡ ನಾನೊಬ್ಬ ಕೇವಲ ಪೈಲಟ್ ಆಗಿ ಇಂದು ನಿವೃತ್ತಿಯಾಗಿರುತ್ತಿದ್ದೆ".
ಹಾಗೆಯೇ ಮತ್ತೊಬ್ಬ ವ್ಯಕ್ತಿ ಥಾಮಸ್ ಆಲ್ವಾ ಎಡಿಸನ್. ತಾನು ವಿದ್ಯುತ್ ಬಲ್ಬು ಕಂಡು ಹಿಡಿಯುವ ಪ್ರಕ್ರಿಯೆಯಲ್ಲಿ ಫೇಲಾದದ್ದು ಸುಮಾರು ಸಾವಿರಕ್ಕೂ ಹೆಚ್ಚು ಬಾರಿ. ಪ್ರತಿ ಬಾರಿ ವಿಫಲವಾದಾಗಲೂ ಆ ವೈಫಲ್ಯದಿಂದ ಒಂದೊಂದು ಪಾಠ ಕಲಿತ. ಕೊನೆಗೆ ತನ್ನ ಗಮ್ಯ ಸ್ಥಾನ ತಲುಪಿದ್ದ. ಒಂದು ವೇಳೆ ಆತ ಮೊದಲ ಬಾರಿ ವಿಫಲನಾದಾಗಲೇ ವಿಮುಖನಾಗಿ ಕೆಟ್ಟ ನಿರ್ಧಾರ ಮಾಡಿಬಿಟ್ಟಿದ್ದಿದ್ದರೆ ಬಹುಶಃ ಈ ಪ್ರಪಂಚ ಇನ್ನೆಷ್ಟು ವರ್ಷಗಳ ಕಾಲ ಅದೇ ಚಿಮಣಿ ಬುಡ್ಡಿಯ ನೆರಳಲ್ಲೇ ಉಳಿಯಬೇಕಾಗಿರುತ್ತಿತ್ತೇನೋ?  ಆತ ಏನು ಹೇಳಿದ ಗೊತ್ತೆ? "ಈ ಜಗತ್ತಿಗೆ ಪ್ರತಿಯೊಬ್ಬರ ಅವಶ್ಯಕತೆಯೂ ಇದೆ, ಇಲ್ಲದಿದ್ದರೆ ಈ ಜಗತ್ತು ಏನನ್ನೋ ಕಳೆದಿಕೊಂಡುಬಿಡುತ್ತದೆ" ಎಂದು. ಎಷ್ಟೊಂದು ಹುರುಳಿದೆಯಲ್ಲವೇ? ಮಕ್ಕಳೇ ಈ ಜಗತ್ತು ನಿಮ್ಮಿಂದ ಏನನ್ನೋ ನಿರೀಕ್ಷಿಸುತ್ತಿದೆ, ನೀವು ಕೆಟ್ಟ ನಿರ್ಧಾರ ಮಾಡಿದ್ದೇ ಆದರೆ ನಿಮ್ಮ ಕೊಡುಗೆಯನ್ನು ಅದು ಕಳೆದುಕೊಂಡುಬಿಡುತ್ತದೆ. ಈ ಜಗತ್ತಿನ ಜಾಡಿನಲ್ಲಿ ನಿಮ್ಮ ಒಂದೂ ಹೆಜ್ಜೆ ಗುರುತುಗಳನ್ನು ಬಿಡಲಾಗುವುದಿಲ್ಲ.
ಈಗ ಹೇಳಿ ಫೇಲಾದವರು ಬದುಕಲು ಮತ್ತು ಆ ನಂತರ ಪಾಸಾಗಲು ಅವಕಾಶವೇ ಇಲ್ಲವಾ? ಪೋಷಕರೇ, ನಿಮ್ಮ ಮಗುವಿನ ಫಲಿತಾಂಶ ಬಂದ ನಂತರ ನಿಮ್ಮ ಮಗು ನಪಾಸಾಗಿದ್ದರೆ ಅಥವಾ ನೀವು ನಿರೀಕ್ಷಿಸಿದ ಅಂಕ ಪಡೆಯದೇ ಇದ್ದಲ್ಲಿ ನೀವು ಮಾಡಬೇಕಾದುದೇನು?
ದಯವಿಟ್ಟು ಯಾವುದೇ ಕಾರಣಕ್ಕೂ ಬಯ್ಯುವುದನ್ನು ಮಾಡಬೇಡಿ, ಏನೂ ಆಗಿಲ್ಲ ನಿನ್ನೊಂದಿಗೆ ನಾವಿರುತ್ತೇವೆ ಎಂಬ ಭರವಸೆಯ ಮಾತುಗಳನ್ನಾಡಿ, ಸೋತು ಗೆದ್ದವರ ಕುರಿತು ಹೇಳುವ ಮೂಲಕ ಸ್ಫೂರ್ತಿ ನೀಡಿ, ಮುಂದಿನ ಪರೀಕ್ಷೆಯಲ್ಲಿ ಪಾಸಾಗುವಿಯಂತೆ ಆ ಬಗ್ಗೆ ಪ್ರಯತ್ನಿಸು ಎಂದು ಪ್ರೋತ್ಸಾಹಿಸಿ, ಓರಗೆಯ ಮಕ್ಕಳೊಂದಿಗೆ ಅಥವಾ ಅವರ ಫಲಿತಾಂಶ ಮತ್ತು ಅಂಕಗಳೊಂದಿಗೆ ಯಾವುದೇ ಕಾರಣಕ್ಕೂ ಹೋಲಿಕೆ ಮಾಡಬೇಡಿ, ಸೋಲೇ ಗೆಲುವಿನ ಸೋಪಾನ ಎಂಬ ಉಕ್ತಿಯನ್ನು ಅರ್ಥ ಮಾಡಿಸಿ. ಅವರೊಳಗಿನ ಶಕ್ತಿ ಸಾಮರ್ಥ್ಯವನ್ನು ಗುರುತಿಸಿ. ಇನ್ನು ಫಲಿತಾಂಶದ ವಿಷಯವನ್ನು ಅವರ ಮುಂದೆ ಪದೇ ಪದೆ ಪ್ರಸ್ತಾಪಿಸಬೇಡಿ. ಗಾಯ ಕೆರೆದಷ್ಟೂ ಹುಣ್ಣಾಗುತ್ತದೆ.
ಸಾಧ್ಯವಾದರೆ ಅಪ್ತ ಸಮಾಲೋಚಕರ ಬಳಿ ಕರೆದೊಯ್ದು ಕೌನ್ಸೆಲಿಂಗ್ ಮಾಡಿಸಿ. ಮಕ್ಕಳು ಉತ್ತಮ ಅಂಕ ಪಡೆದರಷ್ಟೇ ನಮ್ಮ ಗೌರವ ಪ್ರತಿಷ್ಠೆ ಹೆಚ್ಚಾಗುತ್ತದೆ ಎಂಬ ಮನಃ ಸ್ಥಿತಿಯಿಂದ ಹೊರಬನ್ನಿ.
ಅತಿಯಾದ ಮುದ್ದೂ ಮಾಡಬೇಡಿ, ಅತಿಯಾದ ಶಿಸ್ತನ್ನೂ ಹೇರಬೇಡಿ. ಇನ್ನು ವಿದ್ಯಾರ್ಥಿಗಳೂ ಕೂಡ ಕೆಲವು ವಿಷಯವನ್ನು ಮೈಗೂಡಿಸಿಕೊಳ್ಳಬೇಕಿದೆ. ಫಲಿತಾಂಶ ಏನೇ ಇರಲಿ ಅದನ್ನು ಸಕಾರಾತ್ಮಕವಾಗಿ ಸ್ವೀಕರಿಸುತ್ತೇನೆ ಎಂಬ ಧೈರ್ಯ ತಂದುಕೊಳ್ಳಿ. ಫೇಲಾದರೆ ಬದುಕಿ ಪ್ರಯೋಜನವಿಲ್ಲ ಎಂಬ ಮನೋಭಾವನೆಗೆ ಕಿಚ್ಚು ಹಚ್ಚಿಬಿಡಿ. ಈ ಬಾರಿ ಫೇಲಾದರೇನಂತೆ ಹೇಗೂ ಪೂರಕ ಪರೀಕ್ಷೆ ಇದೆಯಲ್ಲ ಆ ಕಡೆಗೆ ಗಮನಕೊಡಿ. ನಿಮಗೆ ಆತ್ಮೀಯರಂತಿರುವ ಗುರುಗಳೊಂದಿಗೆ ಮಾತನಾಡಿ ಸೂಕ್ತ ಸಲಹೆ ಪಡೆಯಿರಿ. ಇವತ್ತಿನ ಸೋಲನ್ನೇ ಸವಾಲಾಗಿ ಸ್ವೀಕರಿಸಿ ಮತ್ತು ಮುಂದಿನ ಪರೀಕ್ಷೆಗೆ ಸಿದ್ಧತೆ ನಡೆಸಿ. ಸೋಲಿನ ಮನಸ್ಥಿತಿಯಿಂದ ಹೊರಬರಲು ಮಹಾನ್ ವ್ಯಕ್ತಿಗಳ ಕಥೆಗಳನ್ನು ಓದಿ.
ಶಾಲಾ ಕಾಲೇಜುಗಳಲ್ಲಿನ ಪರೀಕ್ಷೆಗಳಲ್ಲಿ ಪಾಸಾಗುವುದಕ್ಕಿಂತ ಬದುಕಿನ ಪರೀಕ್ಷೆಯಲ್ಲಿ ಪಾಸಾಗುವುದು ಅತಿ ಮುಖ್ಯ. ಜೀವನದಲ್ಲಿ ಗೆದ್ದಿರುವ ಅಷ್ಟೂ ಜನ ಸೋತು ಗೆದ್ದಿರುವವರೇ ಹೊರತು ಒಮ್ಮೆಗೇ ಯಶಸ್ಸಿನ ಶಿಖರವೇರಿದವರಲ್ಲ.
ಪ್ರತಿ ಸುರಂಗದ ಕೊನೆಯಲ್ಲಿಯೂ ಬೆಳಕಿನ ಕಿಂಡಿ ಇದ್ದೇ ಇರುತ್ತದೆ ಎಂಬ ಹಿರಿಯರ ಮಾತಿನಲ್ಲಿ ನಂಬಿಕೆಯಿಡಿ. ಸಾಯಲು ಬೇಕಿರುವ ಧೈರ್ಯದಲ್ಲಿ ಕೇವಲ ಕಾಲು ಭಾಗದಷ್ಟು ಧೈರ್ಯವಿದ್ದರೆ ಸಾಕು ಅರ್ಥಗರ್ಭಿತ ಬದುಕನ್ನು ಬದುಕಿಬಿಡಬಹುದು ಮತ್ತು ಅಗಾಧವಾದುದನ್ನು ಸಾಧಿಸಿಬಿಡಬಹುದು. ಆಕಾಶದಲ್ಲಿ ಮೂಡುವ ಕಾಮನಬಿಲ್ಲನ್ನು ಗಮನಿಸಿ ಅದು ಸೌಂದರ್ಯವಾಗಿ ಮೂಡಿಬರಬೇಕಾದರೆ ಪ್ರಕೃತಿಯ ಚಮತ್ಕಾರ ನಡೆಯಲೇಬೇಕು. ಅಂದರೆ ಮಳೆ ಮತ್ತು ಬಿಸಿಲು ಏಕ ಕಾಲಕ್ಕೆ ಬಿದ್ದಿರಬೇಕು, ಇವೆರಡರ ಸಮಾಗಮದಿಂದಷ್ಟೇ ಆ ಸೌಂದರ್ಯ ಸವಿಯಲು ಸಾಧ್ಯ. ಬದುಕೂ ಕೂಡ ಹಾಗೇಯೇ ಪಾಸು ನಪಾಸು, ಯಶಸ್ಸು ವೈಫಲ್ಯ. ನೋವು ನಲಿವುಗಳ ಕಲಬೆರೆಕೆ. "You are something in this world; because god doesn't create garbage ಎನ್ನುವ ಮಾತನ್ನು ಅರಿತುಕೊಳ್ಳಿ. ವೈಫಲ್ಯಕ್ಕೆ ಆತ್ಮಶಕ್ತಿಯೆಂಬ ಸಂಜೀವಿನಿ ಇದೆ, ಅದನ್ನು ಕಂಡುಕೊಳ್ಳಿ, ಜಾಗೃತಗೊಳಿಸಿಕೊಳ್ಳಿ.


-ಶ್ರೀನಿವಾಸ ಮೂರ್ತಿ ಎನ್. ಸುಂಡ್ರಹಳ್ಳಿ
suchisree.vas@gmail.com


Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement