ಮಮತಾರನ್ನು ಮೋದಿ ರೇಗಿಸಿದ್ದೇಕೆ ಗೊತ್ತೆ?
"ಓ ದೀದೀ, ನಿಮ್ಮ ಪೇಂಟಿಂಗ್ ಅನ್ನು ಒಂದೂವರೆ ಕೋಟಿ ರುಪಾಯಿಗೆ ಖರೀದಿಸಿದವರಾರು?
"ಓ ದೀದೀ, ನಿಮ್ಮ ಪೇಂಟಿಂಗ್ ಅನ್ನು ಒಂದೂವರೆ ಕೋಟಿ ರುಪಾಯಿಗೆ ಖರೀದಿಸಿದವರಾರು?
"ಈ ನರೇಂದ್ರ ಮೋದಿ ಬಂಗಾಳದ ಮಹಿಳೆಯರಿಗೆ ಅವಮಾನ ಮಾಡ್ತಿದ್ದಾರೆ. ನಾನು ಮನಸ್ಸು ಮಾಡಿದ್ದರೆ, ಈತನನ್ನು ಬಂಗಾಲದ ನೆಲಕ್ಕೆ ಕಾಲಿಡಲು ಬಿಡುತ್ತಲೇ ಇರಲಿಲ್ಲ"
"ಬಿಜೆಪಿ ಅಧಿಕಾರಕ್ಕೆ ಬಂದರೆ ಬಂಗಾಳಿ ಮಾತನಾಡುವವವರನ್ನು ಹೊರತು ಪಡಿಸಿ ಉಳಿದ ಅಕ್ರಮ ವಲಸಿಗರನ್ನು ಹೊರಗೋಡಿಸುತ್ತೇವೆ"
"ನಾನೇನಾದರೂ ದೆಹಲಿಯಲ್ಲಿ ಅಧಿಕಾರದಲ್ಲಿದ್ದಿದ್ದರೆ ಮೋದಿಯನ್ನು ಜೈಲಿಗೆ ಅಟ್ಟುತ್ತಿದ್ದೆ."
"ಓಹ್ ಫೈನ್, ಯಾವ ಜೈಲಿಗೆ ಹೋಗಬೇಕು ಹೇಳಿ. ನಾನು ಸಿದ್ಧ. ಜೈಲಿಗೆ ಹೋದ ನಂತರ ನಾನು ಮೊದಲು ಮಾಡುವ ಕೆಲಸ ಬಂಗಾಳಿ ಭಾಷೆ ಕಲಿಯುವುದು"
"ನರೇಂದ್ರ ಮೋದಿ ಒಬ್ಬ ದಗಾಕೋರ"
"ಮಮತಾ ಬ್ಯಾನರ್ಜಿ ಬಂಗಾಳದ ಹುಲಿ ಅಲ್ಲ, ಪೇಪರ್ ಟೈಗರ್. ಬಿಹಾರಿಗಳು ಬಂಗಾಳಕ್ಕೆ ಬಂದರೆ ಮಮತಾ ಸಹಿಸುವುದಿಲ್ಲ, ಮಾರವಾಡಿಗಳು ಬಂದರೆ ಅವರ ಮುಖ ಕೆಂಪಾಗುತ್ತದೆ. ಆದರೆ, ಬಾಂಗ್ಲಾದೇಶಿಗಳು ಬಂದರೆ ಮಮತಾರ ಮುಖ ಅರಳಿಬಿಡುತ್ತದೆ"
"ಈ ನರೇಂದ್ರ ಮೋದಿಯಿಂದ ಬಂಗಾಳಿಗಳಿಗೆ ಅವಮಾನವಾಗಿದೆ"
"ದೀದಿ, ನೀವು ಬೈದಷ್ಟೂ ನನಗೆ ಒಳ್ಳೆಯದೇ. ಅದೇ ನನಗೆ ಆಶೀರ್ವಾದ"
ಬಿಜೆಪಿ ಪ್ರಧಾನಿ ಅಭ್ಯರ್ಥಿ ನರೇಂದ್ರ ಮೋದಿ ಮತ್ತು ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ನಡುವೆ ಚುನಾವಣಾ ಪ್ರಚಾರದ ಸಮಯದಲ್ಲಿ ನಡೆದ ವಾಕ್ಸಮರದ ತುಣುಕುಗಳಿವು. ಈ ವಾಕ್ಸಮರ ನಡೆದದ್ದು ತೀರಾ ಇತ್ತೀಚೆಗೆ. ಅದು ಪಶ್ಚಿಮ ಬಂಗಾಳದಲ್ಲಿ ಮತದಾನ ನಡೆಯುವ ಕೆಲ ವಾರಗಳ ಮುಂಚೆ.
ಈಗ್ಗೆ ಮೂರು ತಿಂಗಳ ಹಿಂದಕ್ಕೆ ಹೋಗೋಣ. ಅದು ಉತ್ತರಪ್ರದೇಶದಲ್ಲಿನ ಬಿಜೆಪಿ ರ್ಯಾಲಿ. ನರೇಂದ್ರ ಮೋದಿ ಅಲ್ಲಿನ ಮುಖ್ಯಮಂತ್ರಿ ಅಖಿಲೇಶ್ ಯಾದವ್ಗೆ ಹೇಳಿದ ಕಿವಿಮಾತು ಏನು ಗೊತ್ತಾ?
"ಮಿಸ್ಟರ್ ಅಖಿಲೇಶ್, ಒಂದು ರಾಜ್ಯವನ್ನು ಹೇಗೆ ನಡೆಸಬೇಕು ಎಂಬುದನ್ನು ಪಕ್ಕದ ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರನ್ನು ನೋಡಿ ಕಲಿಯಿರಿ"
ಅರೆ. ಈ ಮೂರು ತಿಂಗಳಲ್ಲಿ ಅದೇನು ಬದಲಾವಣೆ. ನರೇಂದ್ರ ಮೋದಿ ಕಣ್ಣಲ್ಲಿ ಮಮತಾ ಇಷ್ಟು ಬೇಗ ವಿಲನ್ ಆಗಿಬಿಟ್ಟರೆ?! ಇಲ್ಲೇ ಇರೋದು ಬಿಜೆಪಿಯ ರಾಜಕೀಯ ಲೆಕ್ಕಾಚಾರ. ಒಂದು ಕಾಲದ ಕಮ್ಯನಿಸ್ಟರ ಭದ್ರಕೋಟೆ ಪಶ್ಚಿಮ ಬಂಗಾಳದಲ್ಲಿ ಯಾವತ್ತೂ ಬಿಜೆಪಿ ಆದ್ಯತಾ ಪಟ್ಟಿಯಲ್ಲಿರಲಿಲ್ಲ. ಹಾಗಾಗಿ ತನ್ನ ಸ್ವಂತ ಬಲದ ಮೇಲೆ ತಲೆ ಎತ್ತುವ ಆತ್ಮವಿಶ್ವಾಸ ಇಲ್ಲಿ ಬಿಜೆಪಿಗೆ ಎಂದೂ ಇರಲಿಲ್ಲ. ಆದರೆ, ಇದೀಗ ಬಿಜೆಪಿಗೆ ದಿಢೀರನೆ ಇಲ್ಲೊಂದು ಆಶಾಕಿರಣ ಗೋಚರಿಸಿದೆ. ಅದು ಮಮತಾ ಬ್ಯಾನರ್ಜಿ ಅವರ ವೋಟ್ ಬ್ಯಾಂಕ್ ರಾಜಕಾರಣ.
ಇದನ್ನು ಸ್ಥಳೀಯ ಬಿಜೆಪಿ ಘಟಕ ನರೇಂದ್ರ ಮೋದಿಯವರಿಗೆ ಮನವರಿಕೆ ಮಾಡಿಕೊಟ್ಟಿದ್ದು ತೀರಾ ಇತ್ತೀಚೆಗೆ. ಲೋಕಸಭಾ ಚುನಾವಣೆಯ ಕೊನೆ ಹಂತಗಳ ಮತದಾನದ ಸಂದರ್ಭದಲ್ಲಿ. ನರೇಂದ್ರ ಮೋದಿ ಈ ಅವಕಾಶವನ್ನು ಬಿಡುತ್ತಾರೆಯೇ? ಸರಿ ಮಮತಾ ವಿರುದ್ಧ ವಾಗ್ದಾಳಿ ಆರಂಭಿಸಿಯೇ ಬಿಟ್ಟರು. ವಾಗ್ದಾಳಿ ಅನ್ನುವುದಕ್ಕಿಂತ ಅವರು ಮಮತಾರನ್ನು ಕಿಚಾಯಿಸಿದರು ಎಂದರೆ ತಪ್ಪಲ್ಲ. ವೋಟ್ಬ್ಯಾಂಕ್ ರಾಜಕಾರಣದ ಬಗ್ಗೆ ಮಾತನಾಡುವುದಕ್ಕೂ ಮೊದಲು, ಮಮತಾರನ್ನು ರೇಗಿಸಿದ್ದು ನರೇಂದ್ರ ಮೋದಿ ಅವರ ಕಾರ್ಯತಂತ್ರದ ಒಂದು ಭಾಗ. ಈ ತಂತ್ರದ ಅಂಗವೇ ಪಶ್ಚಿಮ ಬಂಗಾಳದಲ್ಲಿ ಇತ್ತೀಚೆಗೆ ಭಾರಿ ಸದ್ದು ಮಾಡಿರುವ ಶಾರದಾ ಚಿಟ್ಫಂಡ್ ಹಗರಣದ ಪ್ರಸ್ತಾಪ. ಬಂಗಾಳದ ಲಕ್ಷಾಂತರ ಠೇವಣಿದಾರರಿಗೆ ಕೋಟ್ಯಂತರ ರುಪಾಯಿ ವಂಚಿಸಿದ ಆರೋಪ ಈ ಸಂಸ್ಥೆಯ ಮೇಲಿದೆ.
ನರೇಂದ್ರ ಮೋದಿ ಶಾರದಾ ಚಿಟ್ ಫಂಡ್ಗೂ ಮಮತಾ ಬ್ಯಾನರ್ಜಿ ಅವರ ಪೇಟಿಂಗ್ಗೂ ಇರುವ ಸಂಬಂಧದ ಬಗ್ಗೆ ಮಾತನಾಡಿಬಿಟ್ಟರು. ಆ ಪೇಂಟಿಂಗ್ ಅನ್ನು ಖರೀದಿಸಿದ್ದು ಬೇರಾರೂ ಅಲ್ಲ, ಕೋಟ್ಯಂತರ ರುಪಾಯಿ ವಂಚನೆ ಆರೋಪದಲ್ಲಿ ಜೈಲಿನಲ್ಲಿರುವ ಶಾರದಾ ಚಿಟ್ ಫಂಡ್ನ ಮುಖ್ಯಸ್ಥ ಸುದೀಪ್ತೋ ಸೇನ್. ತೃಣಮೂಲ ಕಾಂಗ್ರೆಸ್ನ ಬದ್ಧ ವೈರಿ ಕಮುನಿಸ್ಟರು ಕೂಡ ಮಮತಾ ವಿರುದ್ಧ ಇಂಥ ವೈಯಕ್ತಿಕ ಮಟ್ಟದ ಆರೋಪ ಮಾಡಿರಲಿಲ್ಲ. ಇನ್ನು ತನ್ನ ರಾಜ್ಯದಲ್ಲಿ ಲೆಕ್ಕಕ್ಕೇ ಇಲ್ಲದ ಬಿಜೆಪಿ ಇಂಥ ಆರೋಪ ಮಾಡಿದರೆ, ಆಕೆ ಸುಮ್ಮನೆ ಬಿಟ್ಟಾರೆಯೆ? ಮಮತಾ ಬ್ಯಾನರ್ಜಿ ಮೂಲತಃ ಮುಂಗೋಪಿ. ಇದು ಗೊತ್ತಿದ್ದೇ ಮೋದಿ ಮಮತಾರನ್ನು ಕಿಚಾಯಿಸಿದ್ದು. ಇದರಿಂದಾಗಿ, ನೋಡನೋಡುತ್ತಿದ್ದಂತೆಯೇ ಬಿಜೆಪಿ ಚುನಾವಣಾ ಪ್ರಚಾರದಲ್ಲಿ ಪಶ್ಚಿಮ ಬಂಗಾಳದ ಮುಖ್ಯವಾಹಿನಿಗೆ ಬಂದು ನಿಂತಿತ್ತು. ಬಿಜೆಪಿಗೆ ಬೇಕಾಗಿದ್ದು ಅಷ್ಟೆ.
ಬಿಜೆಪಿ ವಾಸ್ತವವಾಗಿ ಪಶ್ಚಿಮ ಬಂಗಾಳದಲ್ಲಿ ಕಣ್ಣಿಟ್ಟಿರುವುದು 2016ರ ವಿಧಾನಸಭಾ ಚುನಾವಣೆ ಮೇಲೆ. ಜತೆಗೆ ಅದಕ್ಕಿಂತಲೂ ಮೊದಲು ನಡೆಯುವ ಸ್ಥಳೀಯ ಸಂಸ್ಥೆಗಳ ಚುನಾವಣೆ ಮೇಲೆ. ಇದಕ್ಕಾಗಿ ಈ ಲೋಕಸಭೆ ಚುನಾವಣೆಯನ್ನು ಒಂದು ಮೆಟ್ಟಿಲಾಗಿ ಬಳಸಿಕೊಳ್ಳಬೇಕೆಂಬುದು ಬಿಜೆಪಿ ಲೆಕ್ಕಾಚಾರ. ಈ ಲೆಕ್ಕಾಚಾರಕ್ಕೆ ಇಂಬುಗೊಡುವಂತೆ ನಗರ ಪ್ರದೇಶಗಳಲ್ಲಿ ಕಂಡುಬಂದಿರುವ ಮೋದಿ ಅಲೆ. ಹೀಗಾಗಿ, ಪಶ್ಚಿಮ ಬಂಗಾಳದಲ್ಲಿ ತನ್ನ ಹೆಜ್ಜೆ ಗುರುತು ಮೂಡಿಸಲು ಬಿಜೆಪಿಗೆ ಇದು ಸಕಾಲ.
ಅಂದ ಹಾಗೆ, ಪಶ್ಚಿಮ ಬಂಗಾಳದಲ್ಲಿ ಬಿಜೆಪಿ ಕಂಡುಕೊಂಡಿರುವ ಆಶಾಕಿರಣವಾದರೂ ಏನು? ಸ್ಥಳೀಯ ಬಿಜೆಪಿ ಘಟಕ ವ್ಯಾಖ್ಯಾನಿಸುವಂತೆ ಅದು ಮಮತಾ ಬ್ಯಾನರ್ಜಿ ಅವರ ಮುಸ್ಲಿಂ ತುಷ್ಟೀಕರಣ ನೀತಿ. ನಿಜ. ಇದನ್ನು ಅಲ್ಲಿನ ಕಮ್ಯುನಿಸ್ಟರೂ ಒಪ್ಪುತ್ತಾರೆ. ಇದರ ಹಿನ್ನೆಲೆ ಕುತೂಹಲಕಾರಿಯಾಗಿದೆ.
ಪಶ್ಚಿಮ ಬಂಗಾಳದಲ್ಲಿ ಮುಸ್ಲಿಂ ಮತದಾರರ ಸಂಖ್ಯೆ ಶೇ.25ಕ್ಕೂ ಹೆಚ್ಚಿದೆ. ಅದರಲ್ಲೂ ಐದಾರು ಗಡಿ ಜಿಲ್ಲೆಗಳಲ್ಲಿ ಮುಸ್ಲಿಮರದ್ದೇ ಪ್ರಾಬಲ್ಯ. ಬಂಗಾಳದ ಮುಸ್ಲಿಮರು ದಶಕಗಳಿಂದ ಕಮ್ಯುನಿಸ್ಟ್ ಪಕ್ಷಕ್ಕೇ ಓಟು ಹಾಕುತ್ತಾ ಬಂದವರು. ಒಂದರ್ಥದಲ್ಲಿ ಅವರು ಸಿಪಿಎಂನ ವೋಟ್ ಬ್ಯಾಂಕ್. ಮಮತಾ ಅಧಿಕಾರಕ್ಕೆ ಬಂದಿದ್ದೇ ತಡ. ಈ ವೋಟ್ ಬ್ಯಾಂಕನ್ನು ತನ್ನ ತೆಕ್ಕೆಗೆ ತೆಗೆದುಕೊಳ್ಳಲು ನಿರ್ಧರಿಸಿದರು. ವೋಟ್ ಬ್ಯಾಂಕ್ ರಾಜಕಾರಣದ ಭರದಲ್ಲಿ ಇಸ್ಲಾಂ ಮೌಲ್ವಿಗಳಿಗೆ ಮಾಸಿಕ 2500 ರುಪಾಯಿ ಭತ್ಯೆ ಘೋಷಿಸಿಬಿಟ್ಟರು. ಮಮತಾರ ಈ ಕ್ರಮ ಸಹಜವಾಗಿ ಹಿಂದು ಹಾಗೂ ಕ್ರೈಸ್ತರ ಕಣ್ಣು ಕೆಂಪಾಗಿಸಿತು. ಅಲ್ಲಲ್ಲಿ ಅಸಮಾಧಾನಗಳು ಸಣ್ಣದಾಗಿ ಭುಗಿಲೇಳತೊಡಗಿದವು. ವಿಷಯ ಕೋರ್ಟ್ ಮೆಟ್ಟಿಲೇರಿತು. ನ್ಯಾಯಾಲಯ ತೃಣಮೂಲ ಕಾಂಗ್ರೆಸ್ ಸರ್ಕಾರದ ಈ ಕ್ರಮವನ್ನು ಅಸಿಂಧುಗೊಳಸಿತು. ಮಮತಾ ಇಷ್ಟಕ್ಕೆ ಸುಮ್ಮನಾಗಲಿಲ್ಲ. ಪಶ್ಚಿಮ ಬಂಗಾಳದ ಮುಸ್ಲಿಮರ ಮಾತೃ ಭಾಷೆ ಬೆಂಗಾಳಿ. ಆದರೂ, ಮಮತಾ ದೀದಿ ಉರ್ದು ಭಾಷೆ ಅಭಿವೃದ್ಧಿಗೆ ವಿಶೇಷ ಪ್ಯಾಕೇಜ್ ಘೋಷಿಸಿದರು. ಇದರ ಪರಿಣಾಮವಾಗಿ ಪಶ್ಚಿಮ ಬಂಗಾಳದ ರಾಜಕೀಯದಲ್ಲಿ ನೇರವಾಗಿ ಧರ್ಮ ನುಸುಳಿತ್ತು.
ಅಲ್ಲಿನ ಕಮ್ಯುನಿಸ್ಟರು ಇದನ್ನು ನೇರವಾಗಿ ಖಂಡಿಸುವ ಸ್ಥಿತಿಯಲ್ಲಿಲ್ಲ. ಅವರಿಗೆ ತಮ್ಮ ಮುಸ್ಲಿಂ ವೋಟ್ಬ್ಯಾಂಕ್ ಕಳೆದುಕೊಳ್ಳುವ ಆತಂಕ. ಪ್ರಮುಖ ಪ್ರತಿ ಪಕ್ಷ ಸಿಪಿಎಂ ಈ ಕುರಿತು ಮೀನಾಮೇಷ ಎಣಿಸುತ್ತಿದ್ದರೆ, ಬಂಗಾಳದ ವಿವಿಧ ಸಾಮಾಜಿಕ ಸ್ಥರಗಳಲ್ಲಿ ಮಮತಾರ ಈ ಮುಸ್ಲಿಂ ತುಷ್ಟೀಕರಣ ನೀತಿ ವಿರುದ್ಧದ ಆಕ್ರೋಶ ನಿಧಾನವಾಗಿ ಹರಡುತ್ತಾ ಹೋಯಿತು. ಬಿಜೆಪಿ ಇಂಥ ಸನ್ನಿವೇಶವನ್ನು ಸುಲಭವಾಗಿ ಬಿಡುತ್ತದೆಯೇ? ಪಶ್ಚಿಮ ಬಂಗಾಳದಲ್ಲಿ ಪಕ್ಷ ಬಲವರ್ಧನೆಗೆ ಬಿಜೆಪಿಗೆ ಒಂದು ಪ್ರಬಲ ಅಸ್ತ್ರ ಸಿಕ್ಕಂತಾಗಿತ್ತು. ಅದು ಅಲ್ಲಿನ ಬೇರಾವ ರಾಜಕೀಯ ಪಕ್ಷಗಳೂ ಕಸಿದುಕೊಳ್ಳಲಾರದ ಅಸ್ತ್ರ. ಸರಿ ನರೇಂದ್ರ ಮೋದಿ ಕಣಕ್ಕೆ ಇಳಿದೇ ಬಿಟ್ಟರು. ಬಹುಸಂಖ್ಯಾತ ಹಿಂದುಗಳನ್ನು ಆಕರ್ಷಿಸುವ ಯೋಜನೆ ಸಿದ್ಧಗೊಂಡಿತ್ತು.
ಅಕ್ರಮ ಬಾಂಗ್ಲಾ ವಲಸಿಗರ ಬಗ್ಗೆ ಮಾತನಾಡುತ್ತಾ, ನರೇಂದ್ರ ಮೋದಿ ಒಂದು ಬಾಂಬ್ ಎಸೆದರು. ಅಕ್ರಮವಾಗಿ ನುಸುಳಿರುವ ಹಿಂದುಗಳನ್ನು ಬಿಟ್ಟು ಉಳಿದವರು ದೇಶ ಬಿಟ್ಟು ತೊಲಗಬೇಕಾಗುತ್ತದೆ ಎನ್ನುವ ಅರ್ಥದಲ್ಲಿ ಒಂದು ಭಾಷಣ ಮಾಡೇಬಿಟ್ಟರು. ತನ್ನ ಮೇಲಿನ ವೈಯಕ್ತಿಕ ಟೀಕೆಯಿಂದ ಮೊದಲೇ ಕೆಂಡಾಮಂಡಲರಾಗಿದ್ದ ಮಮತಾ ಈಗ ಇನ್ನಷ್ಟು ಕ್ರುದ್ಧರಾದರು. ಮೋದಿಯನ್ನು ವಿರೋಧಿಸುವ ಭರದಲ್ಲಿ, ಯಾವ ವಲಸಿಗರೂ ಹೆದರಬೇಕಿಲ್ಲ. ನಿಮ್ಮನ್ನು ಮುಟ್ಟಲು ಯಾರಿಗೂ ಬಿಡುವುದಿಲ್ಲ ಎಂದು ಗಡಿ ಭಾಗದ ಮುಸ್ಲಿಮರಿಗೆ ಅಭಯ ನೀಡಿದರು. ಬಿಜೆಪಿಗೆ ಬೇಕಾಗಿದ್ದೂ ಇದೇ. ಮಮತಾ ಮುಸ್ಲಿಮರ ಪರ ಮಾತಾಡಿದಷ್ಟೂ ಹಿಂದುಗಳ ಮತ ಕ್ರೋಢೀಕರಿಸಲು ಬಿಜೆಪಿಗೆ ರಹದಾರಿ ಸಿಕ್ಕಂತೆಅನ್ನೋದು ಬಿಜೆಪಿ ಲೆಕ್ಕಾಚಾರ.
ಇದರ ನಡುವೆಯೇ 2010ರಲ್ಲಿ 90 ಸಾವಿರದಷ್ಟಿದ್ದ ಪ್ರಾಥಮಿಕ ಸದಸ್ಯರ ಸಂಖ್ಯೆ 2014 ಆರಂಭಕ್ಕೆ ನಾಲ್ಕರಷ್ಟು ಹೆಚ್ಚಾಯಿತು. ಕೊಲ್ಕಾತಾ ಸೇರಿದಂತೆ ಇತರ ಜಿಲ್ಲೆಗಳಾದ ನಾಡಿಯಾ, ಬುರ್ದ್ವಾನ್, ಹೂಗ್ಲಿ, ಸೌತ್ 24 ಪರಗಣ, ಮೇದಿನೀಪುರ್, ಬಾರಾಸಾತ್ನಂತಹ ನಗರ ಜಿಲ್ಲೆಗಳಲ್ಲಿ ಪಕ್ಷದ ಕಚೇರಿಗಳು ತಲೆ ಎತ್ತಿದವು. ಈ ಕಚೇರಿಗಳಲ್ಲಿ ಬಹುತೇಕ ಯುವಕರೇ ಕಾಣಿಸಿಕೊಳ್ಳತೊಡಗಿದರು. ನಗರ ಪ್ರದೇಶ ಅಷ್ಟೆ ಅಲ್ಲ, ಗುಡ್ಡಗಾಡು ಜಿಲ್ಲೆಗಳಾದ ಬಂಕುರಾ, ಪಶ್ಚಿಮ ಮೇದಿನಿಪುರ್, ಪುರುಲಿಯಾ ಮುಂತಾದ ಜಿಲ್ಲೆಗಳಲ್ಲೂ ಬಿಜೆಪಿ ಬಾವುಟ ಮತ್ತು ಮೋದಿ ಚಿತ್ರ ರಾರಾಜಿಸತೊಡಗಿದವು. ಬಿಜೆಪಿಯ ಈ ಬಲವರ್ಧನೆ ಎಡ ಪಕ್ಷಗಳಿಗೆ ಅನುಕೂಲ ಮಾಡಿಕೊಡಲಿದೆ ಎಂಬ ಮಾತೂ ನಿಜವಾಗುವ ಸಾಧ್ಯತೆ ಇಲ್ಲದಿಲ್ಲ. ಈ ಬೆಳವಣಿಗೆಗಳ ನಡುವೆಯೇ, ಈ ಬಾರಿಯ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ ಏಕಾಂಗಿಯಾಗಿ ಒಂದೆರಡು ಸ್ಥಾನಗಳಿಸಿದರೆ ಅಚ್ಚರಿ ಏನಿಲ್ಲ.
ಕಳೆದ ವಿಧಾನಸಭಾ ಚುನಾವಣೆಯಲ್ಲಿ ಏಕಾಂಗಿಯಾಗಿ ಸ್ಫರ್ಧಿಸಿ ಶೇ. ಏಳರಷ್ಟು ಮತ ಪಡೆದಿದ್ದ ಬಿಜೆಪಿ, ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಪ್ರಮುಖ ಪ್ರತಿ ಪಕ್ಷ ಸ್ಥಾನ ಅಲಂಕರಿಸುವಷ್ಟರ ಮಟ್ಟಿಗೆ ದೂರಾಲೋಚನೆ ಮಾಡಿದೆ. ಒಂದೆಡೆ, ಮಮತಾ ಬ್ಯಾನರ್ಜಿ ಅವರ ಮುಸ್ಲಿಂ ತುಷ್ಟೀಕರಣ ನೀತಿ, ಇನ್ನೊಂದೆಡೆ, ಇದನ್ನು ವಿರೋಧಿಸಲಾಗದ ಪ್ರತಿಪಕ್ಷ ಸಿಪಿಎಂನ ದ್ವಂದ್ವ ನೀತಿ. ಈ ಎರಡರ ನಡುವೆ ಪರ್ಯಾಯ ಶಕ್ತಿಯಾಗಿ ಬೆಳೆಯಲು ಇದು ಸುಸಂದರ್ಭ ಎನ್ನುವುದು ಬಿಜೆಪಿ ಲೆಕ್ಕಾಚಾರ. ಮಮತಾರನ್ನು ಮೋದಿ ರೇಗಿಸುತ್ತಿರುವುದಕ್ಕೆ ಈ ಲೆಕ್ಕಾಚಾರವೇ ಕಾರಣ.
- ಕೆ.ವಿ.ಎನ್. ಸ್ವಾಮಿ
ಸುವರ್ಣ ನ್ಯೂಸ್
kvnswamy@suvarnanews.in