ಮುಂದಿನ ಸರ್ಕಾರದ ಅವಕಾಶ ಮತ್ತು ಸವಾಲುಗಳೇನು?
ವಿಶ್ವದಲ್ಲೇ ಅತಿ ದೊಡ್ಡ ಪ್ರಜಾಸತ್ತೆಯುಳ್ಳ ದೇಶದ ಜನತೆ ಮುಂದಿನ ಸರ್ಕಾರದತ್ತ ಆಸೆಗಳೊಂದಿಗೆ ನೋಡುತ್ತಿದೆ....
ವಿಶ್ವದಲ್ಲೇ ಅತಿ ದೊಡ್ಡ ಪ್ರಜಾಸತ್ತೆಯುಳ್ಳ ದೇಶದ ಜನತೆ ಮುಂದಿನ ಸರ್ಕಾರದತ್ತ ಆಸೆಗಳೊಂದಿಗೆ ನೋಡುತ್ತಿದೆ. ಜನ ಬದಲಾವಣೆ ಬಯಸಿದ್ದಾರೆಂಬ ಸಂಗತಿ ನಿರ್ವಿವಾದ. ಬದಲಾವಣೆ, ಸುಧಾರಣೆಯಾಗದಿದ್ದರೆ ಭಾರತದ ಪ್ರಬುದ್ಧ ಮತದಾರರು ಮುಂದಿನ ಚುನಾವಣೆಗಳಲ್ಲಿ ರಾಜಕೀಯ ನಾಯಕರಿಗೆ ಪಾಠ ಕಲಿಸಲಿದ್ದಾರೆಂಬ ಸತ್ಯವನ್ನು ಕಡೆಗಣಿಸಲು ಸಾಧ್ಯವಿಲ್ಲ. 1977ರಿಂದ ನಡೆದ ಬಹುತೇಕ ಚುನಾವಣೆಗಳ ಫಲಿತಾಂಶಗಳು ಪ್ರಜಾಪ್ರಭುತ್ವಕ್ಕೆ ಪ್ರಜಾಫ್ರಭುತ್ವವೇ ರಕ್ಷಣೆಯೆಂಬುದನ್ನು ತೋರಿಸಿಕೊಟ್ಟಿವೆ.
ದೇಶದ ಪ್ರಜಾಪ್ರಭುತ್ವದ ವ್ಯವಸ್ಥೆಗಾಗಿ ನಿರಾಶೆಗಳ ಹಾರ ಹಾಕಿದ ಸರ್ಕಾರ ಹೋಗಿ ಅದೇ ವ್ಯವಸ್ಥೆಯ ರಥೋತ್ಸವ ಮಾಡಬೇಕಾದ ಸರ್ಕಾರ ಉದಯಿಸಬೇಕೆಂಬ ಬಯಕೆ ಹಲವು ಮತದಾರರದ್ದು. ಪರಿಸ್ಥಿತಿ ಬದಲಾದಂತೆ ಅವಕಾಶಗಳು ಮತ್ತು ಸವಾಲುಗಳು ಕೂಡ ಬದಲಾಗುತ್ತವೆ. ಒಂದು ಸಂದರ್ಭದಲ್ಲಿ ಅವಕಾಶಗಳಂತೆ ಗೋಚರಿಸಿದ ಸನ್ನಿವೇಶಗಳು ಪರಿಸ್ಥಿತಿ ಬದಲಾದಾಗ ಸವಾಲುಗಳಾಗಿ ಮಾರ್ಪಾಡು ಹೊಂದುತ್ತವೆ; ಅಂತೆಯೇ ಸವಾಲುಗಳು ಬದಲಾದ ಪರಿಸ್ಥಿತಿಯಲ್ಲಿ ಅವಕಾಶಗಳಾಗಿ ರೂಪಾಂತರಗೊಳ್ಳುತ್ತವೆ. ಇದು ಪ್ರಜಾಪ್ರಭುತ್ವದ ಪ್ರಮುಖ ಸ್ವರೂಪ.
ಸಂಸದೀಯ ಪ್ರಜಾಪ್ರಭುತ್ವ ಹೇಗಿರಬೇಕೆಂಬ ಪ್ರಶ್ನೆ ಎದುರಾದಾಗ ಸುಮಾರು 44 ವರ್ಷಗಳ ಹಿಂದೆ ನಡೆದ ಘಟನೆಯೊಂದು ಈ ಲೇಖಕನಿಗೆ ನೆನಪಾಗುತ್ತದೆ. ದಿಲ್ಲಿಯಲ್ಲಿರುವ ಸಂವಿಧಾನ ಮತ್ತು ಸಂಸತ್ತಿನ ಅಧ್ಯಯನ ಸಂಸ್ಥೆ, ಭಾರತೀಯ ವೈಎಂಸಿಯ ರಾಷ್ಟ್ರೀಯ ಮಂಡಳಿ ಮತ್ತು ವಿಶ್ವಯುವಕ ಕೇಂದ್ರಗಳ ಸಂಯುಕ್ತ ಆಶ್ರಯದಲ್ಲಿ 1970ರ ಜ 1ರಿಂದ 7ರ ತನಕ ಅಖಿಲ ಭಾರತ ವಿ.ವಿ.ಗಳ ವಿದ್ಯಾರ್ಥಿಗಳ ದ್ವಿತೀಯ ಮಾದರಿ ಸಂಸತ್ತು ದಿಲ್ಲಿಯಲ್ಲಿ ನಡೆದಿತ್ತು. ವಿದ್ಯಾರ್ಥಿಗಳಿಗೆ ಸಂಸತ್ತಿನ ಕಾರ್ಯಕಲಾಪಗಳನ್ನು ನಡೆಸಲು ಬೇಕಾದ ತರಬೇತು ನೀಡುವ ಉದ್ದೇಶವಿದ್ದ ಈ ಮಾದರಿ ಸಂಸತ್ತಿನಲ್ಲಿ ಉದಾರವಾದಿಗಳು (ಲಿಬರಲ್ಸ್) ಮತ್ತು ಕ್ರಾಂತಿಕಾರಿಗಳು (ರ್ಯಾಡಿಕಲ್ಸ್) ಎಂಬ ಎರಡು ದೊಡ್ಡ ಪಕ್ಷಗಳಿದ್ದವು. (ಈ ವಿದ್ಯಾರ್ಥಿ ಸಂಸತ್ತಿನಲ್ಲಿ ಲಿಬರಲ್ ಪಾರ್ಟಿಯ ಸದಸ್ಯನಾಗಿ ಮತ್ತು ಕರ್ನಾಟಕ ವಿ.ವಿ.ಯ ಪ್ರತಿನಿಧಿಯಾಗಿ ಈ ಲೇಖಕ ಭಾಗವಹಿಸಿದ್ದ).
ಜ.1 ಅಪರಾಹ್ನ 3 ಗಂಟೆಗೆ ದೇಶದ ಸಂಸತ್ತಿನಲ್ಲಿ ತಮ್ಮ ಚಾಕಚಕ್ಯತೆ ಮೆರೆದು ಹೆಸರು ಮಾಡಿದ್ದ ಮೊರಾರ್ಜಿ ದೇಸಾಯಿ ವಿದ್ಯಾರ್ಥಿ ಸಂಸತ್ತನ್ನು ಉದ್ಘಾಟಿಸಲು ಆಗಮಿಸಿದರು. ಸಮಾಜವಾದದ ಬೊಬ್ಬೆಯ ಕಾಲ ಅದಾಗಿತ್ತು. ರ್ಯಾಡಿಕಲ್ ಪಾರ್ಟಿಯ ಕೆಲವು ತರುಣ ಸದಸ್ಯರು ಮೊರಾರ್ಜಿ ವೇದಿಕೆಗೆ ಬರುತ್ತಿದ್ದಂತೆ 'ಮೊರಾರ್ಜಿಗೆ ಧಿಕ್ಕಾರ! ಮೊರಾರ್ಜಿ ಮರಳಿರಿ!' ಎಂದು ಅಸಭ್ಯ ರೀತಿಯಲ್ಲಿ ಗುಲ್ಲೆಬ್ಬಿಸಿದರು. ಎದ್ದೆದ್ದು ಕೈ ಮೇಲೆ ಮಾಡಿ ಚಾಮರ ಬೀಸುತ್ತಿದ್ದರು. ಮಾಧ್ಯಮಗಳು ಕ್ಯಾಮರಾ ಚಾಲಕರು ಫೋಟೋ ತೆಗೆಯುವುದನ್ನು ನಿಲ್ಲಿಸಿದ ಕೂಡಲೇ ಅಸಭ್ಯ ಬೊಬ್ಬೆಯೂ ನಿಂತು ಹೋಯಿತು. ಸುಲಭದಲ್ಲಿ ಪ್ರಜಾಪ್ರಭುತ್ವಕ್ಕೆ ಬೇಕಾಗಿದ್ದ ಶಿಸ್ತಿನ ನಿರ್ಮಾಣ! ಸಭೆಯಲ್ಲಿ ಶಾಂತ ವಾತಾವರಣ ಸೃಷ್ಟಿ.
ಸ್ವಲ್ಪವೂ ವಿಚಲಿತರಾಗದ ಮೊರಾರ್ಜಿ ಭಾಷಣ ಮಾಡಿದ್ದು ಹೇಗೆ: "ಪ್ರಿಯ ವಿದ್ಯಾರ್ಥಿ ಸಂಸತ್ತಿನ ಸದಸ್ಯರೇ! ನೀವು ಒಂದು ಮಾದರಿ ಸಂಸತ್ತನ್ನು ನಿರ್ಮಿಸುತ್ತಿರೆಂದು ಭಾವಿಸಿದ್ದೆ. ದುರ್ದೈವದಿಂದ ನೀವು ನೈಜ ಸಂಸತ್ತಿನ ಮಾದರಿಯನ್ನೇ ಅನುಸರಿಸುತ್ತಿದ್ದೀರಿ". ಆಗ ಕಾಂಗ್ರೆಸ್ ಪಕ್ಷ ಇಬ್ಭಾಗವಾಗಿ ಭುಗಿಲೆದ್ದ ರಾಜಕೀಯದ ಸೋಂಕನ್ನು ತಮ್ಮ ಭಾಷಣದಲ್ಲಿ ತಾಕಿಸಲಿಲ್ಲ. ಮಾದರಿ ಪದ್ಧತಿಗಳಲ್ಲೇ ಅತ್ಯುತ್ತಮವಾದ ಪ್ರಜಾಪ್ರಭುತ್ವವವನ್ನು ಹೊಂದಿದ ನಮ್ಮ ದೇಶದಲ್ಲಿ ಸಾಮಾನ್ಯ ಪ್ರಜೆಗಳ ಸ್ವಾತಂತ್ರ್ಯ ಹರಣಕ್ಕಾಗಿ ನಡೆಯುತ್ತಿರುವ ಪ್ರಯತ್ನಗಳನ್ನು ಮೊರಾರ್ಜಿ ತಿಳಿಸಿದ್ದು ಮಾದರಿಯಾಯಿತು.
ಸಂಸತ್ತಿನಲ್ಲಿ ದೇಶದ ಎಲ್ಲ ಸಮಸ್ಯೆಗಳು ಚರ್ಚೆಯಾಗಬೇಕೆಂದು ಮೊರಾರ್ಜಿ ಒತ್ತಿ ಹೇಳಿದರು. ಅಧ್ಯಯನಶೀಲರಾಗದೇ ಸಂಸತ್ತಿನ ಅಧಿವೇಶನಗಳಲ್ಲಿ ದೈಹಿಕವಾಗಿ ಮಾತ್ರ ಹಾಜರಾಗುವ ಜನಪ್ರತಿನಿಧಿಗಳು ಪ್ರಜಾಪ್ರಭುತ್ವವನ್ನು ರಕ್ಷಿಸಲು ಸಾಧ್ಯವಿಲ್ಲ. ಅಂಥವರನ್ನು ಪ್ರಜಾಪ್ರಭುತ್ವ ಕೂಡ ರಕ್ಷಿಸಲಾರದು ಎಂದು ಅವರು ಸ್ಪಷ್ಟ ಉದಾಹರಣೆಗಳೊಂದಿಗೆ ವಿವರಿಸಿದರು. 16ನೇ ಲೋಕಸಭಾ ಚುನಾವಣೆಯ ಫಲಿತಾಂಶ ಪ್ರಕಟವಾದ ನಂತರವಾದರೂ ಸಂಸದೀಯ ಪ್ರಜಾಪ್ರಭುತ್ವ ಭಿನ್ನವಾಗಿರಬಹುದೇ?
ಈಗ ಸಂಸತ್ತಿನಲ್ಲಿ ನಡೆಯುತ್ತಿರುವ ಚರ್ಚೆಗಳು ತೀರಾ ನೀರಸವಾಗಿವೆ. ಕೇಂದ್ರ ಬಜೆಟ್ಟಿನ ಮೇಲೆ ತೀರ ಔಪಚಾರಿಕ ಚರ್ಚೆ ನಡೆಯುತ್ತದೆ. ಇಂಥ ಚರ್ಚೆ ನಡೆಯುತ್ತಿರುವಾಗಲೂ ಎಷ್ಟೋ ಸಂಸದರು ಸುಖ ನಿದ್ರೆಗೆ ಶರಣಾಗುತ್ತಾರೆ. ಇವರು ಸಂಸತ್ತಿನಲ್ಲೂ ನಿದ್ರಿಸುತ್ತಿದ್ದಾರೆಯೇ ಎಂದು ಪ್ರಶ್ನಿಸಬೇಕಾದ ಪ್ರಸಂಗ! ಪದೇ ಪದೆ ಈ ಪ್ರಶ್ನೆ ಕೇಳುವಂತಾದಾಗ ಸಂಸದೀಯ ಪ್ರಜಾಪ್ರಭುತ್ವ ನಿದ್ರಿಸುವಂತಾಗುವುದು ಸಹಜ. ಕೋಟ್ಯಂತರ ಮತದಾರರ ಜೀವನದ ಮೇಲೆ ಪರಿಣಾಮ ಬೀರಬಲ್ಲ ಕೋಟಿ ಕೋಟಿ ರು.ಗಳ ವೆಚ್ಚವುಳ್ಳ ಯೋಜನೆಗಳ ಬಗೆಗೆ ತಿಳಿದುಕೊಳ್ಳುವ ಗೋಜಿಗೆ ಅನೇಕ ಸಂಸದರು ಹೋಗುವುದಿಲ್ಲವಲ್ಲ! ಇವರೆಂಥ ಸಂಸದರು? ಮುಂದಿನ ಸರಕಾರದ ಚುಕ್ಕಾಣಿ ಹಿಡಿಯುವವರು ಬದಲಾವಣೆ ಬಯಸಿದ ಮತದಾರರ ನಿರೀಕ್ಷೆಗಳನ್ನು ಈಡೇರಿಸಬಲ್ಲ ಸಂಸದೀಯ ಸರ್ಕಾರದ ಉದಯಕ್ಕಾಗಿ ಹೆಣಗಬೇಕಾಗಿದೆ. ಇಂಥ ಸರ್ಕಾರ ನಿರ್ಮಾಣದ ಅವಕಾಶವನ್ನು ಅವರು ಸರಿಯಾಗಿ ಬಳಸಿಕೊಳ್ಳಬೇಕು. ಅವಕಾಶ, ಬಳಸಿಕೊಳ್ಳುವಾಗ ಎದುರಾಗುವ ಸವಾಲುಗಳನ್ನು ಧೈರ್ಯದಿಂದ ಎದುರಿಸಬೇಕು.
ಜನಪ್ರತಿನಿಧಿಗಳಿಗೆ ಆರ್ಥಿಕ ನೀತಿಯ ಶಿಕ್ಷಣ ನೀಡುವ ಆವಶ್ಯಕತೆಗಳೇನು ಎನ್ನುವುದನ್ನು ಮೂಲತಃ ಕರ್ನಾಟಕದವರಾದ ಅರ್ಥಶಾಸ್ತ್ರಜ್ಞ ಬಿ.ಆರ್. ಶಣೈ (1905-1978) ಹೇಳಿದ್ದರು. ಸಮಸ್ಯೆಗಳ ಪರಿಚಯವಿಲ್ಲದ ಜನಪ್ರತಿನಿಧಿಗಳಿಂದ ಸಮಸ್ಯೆಗಳ ಪರಿಹಾರ ಸಾಧ್ಯವಿಲ್ಲವೆಂಬುದನ್ನು ಅವರು ತಿಳಿಸಿದ್ದರು. ಅವರು ದೆಹಲಿಯಲ್ಲಿ ಪ್ರಾರಂಭಿಸಿದ ಅರ್ಥಶಾಸ್ತ್ರ ಅಧ್ಯಯನ ಕೇಂದ್ರವನ್ನು ಬೆಳೆಸಲು ಬಹಳ ಕಾಲ ಬದುಕಿ ಉಳಿಯಬಲ್ಲ ಬಡತನ ನಿವಾರಣೆ, ನಿರುದ್ಯೋಗ ಸಮಸ್ಯೆಗೆ ಪರಿಹಾರ ಮತ್ತು ಆರ್ಥಿಕ ಅಸಮಾನತೆಯಂಥ ಗಂಭೀರ ಸವಾಲುಗಳ ಕುರಿತು ಜನಪ್ರತಿನಿಧಿಗಳಿಗೆ ಕಾಲಕಾಲಕ್ಕೆ ಅರಿವು ಮೂಡಿಸುವ ಯೋಜನೆ ಇರಬೇಕೆಂಬ ಅವರ ನಿಲುವು ಈಗಲೂ ಪ್ರಸ್ತುತವಾಗಿದೆ. ಪ್ರಜಾಸತ್ತೆ ಎಂದರೆ ಕೇವಲ ಚುನಾವಣೆ ನಡೆಸುವುದಲ್ಲ. ಆಡಳಿತ ಸುಧಾರಣೆ ಎಂದರೆ ಕೇವಲ ಪ್ರಚಾರವಲ್ಲ. ಅಧಿಕಾರಗಳ ವಿಕೇಂದ್ರಿಕರಣ ಎಂದರೆ ಕೇವಲ ಸಂವಿಧಾನದ ತಿದ್ದುಪಡಿಗಳಲ್ಲ. ಈ ಸರಳ ಪರಿಣಾಮವನ್ನು ಪರಿಶೀಲಿಸಿ ನಂತರ ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳುವ ಸವಾಲನ್ನು ಮುಂದಿನ ಸರ್ಕಾರ ಎದುರಿಸಬೇಕು. ಮುಂದಿನ ದಿನಗಳಲ್ಲಿ ಒಳ್ಳೆಯ ಅವಕಾಶಗಳ ಸೃಷ್ಟಿಗೆ ದಾರಿ ಮಾಡಿಕೊಡಬೇಕು.
ಹೆಚ್ಚು ಕಡಿಮೆ 15 ಕೋಟಿ ಯುವಕರು ಪ್ರಥಮ ಬಾರಿಗೆ ಮತದಾನ ಮಾಡಿದ 16ನೆಯ ಲೋಕಸಭೆಯ
ಫಲಿತಾಂಶ ಹೊರಬರಲಿದೆ. ಅವರಲ್ಲಿ ಅಸಂಖ್ಯಾತ ಜನರು ಉದ್ಯೋಗಾಂಕ್ಷಿಗಳು ಎಂಬುದನ್ನು ಮುಂದಿನ ಸರ್ಕಾರ ಮರೆಯುವಂತಿಲ್ಲ. ಉದ್ಯೋಗ ಸೃಷ್ಟಿಗೆ ಬೇಕಾದ ದೃಷ್ಟಿ ಮುಂದಿನ ಸರ್ಕಾರಕ್ಕಾದರೂ ಇದ್ದರೆ ನಿರುದ್ಯೋಗ ಸಮಸ್ಯೆಗೆ ಪರಿಹಾರ ದೊರಕಬಹುದು. ರಾಷ್ಟ್ರೀಯ ಸ್ಯಾಂಪಲ್ ಸಮೀಕ್ಷೆ (ಎನ್.ಎಸ್.ಎಸ್.) ಪ್ರಕಟಿಸಿದ ವರದಿಗಳನ್ನು ನೋಡಿದರೆ ಈಗಲೂ ನಿರುದ್ಯೋಗದ ಸಮಸ್ಯೆ ಗಂಭೀರವಾಗಿರುವುದನ್ನು ತಿಳಿಯಬಹುದು. 2001 ಮತ್ತು 2011ರ ಜನಗಣತಿಗಳ ವರದಿಗಳನ್ನು ತುಲನಾತ್ಮಕವಾಗಿ ನೋಡಿದಾಗ ಮಹಾತ್ಮಾ ಗಾಂಧಿ ರಾಷ್ಟ್ರೀಯ ಗ್ರಾಮೀಣ ಖಾತ್ರಿ ಯೋಜನೆಯಿಂದಾದ ಪರಿಣಾಮ ನಗಣ್ಯವೆಂಬುದು ಸ್ಪಷ್ಟವಾಗುತ್ತದೆ. ಈ ಯೋಜನೆ ದೊಡ್ಡ ಸಾಗರದಲ್ಲಿ ಬಿದ್ದ ಒಂದು ಹನಿಗೆ ಸಮಾನ!
ಜನಪ್ರಿಯ ಕಾರ್ಯಕ್ರಮಗಳಿಗೆ ಸಾರ್ವಜನಿಕ ಹಣ ಬಳಸುವ ಬದಲು ಉತ್ಪಾದಕ ಉದ್ಯೋಗ ಸೃಷ್ಟಿ ಮಾಡಲು ರಾಷ್ಟ್ರೀಯ ಹೆದ್ದಾರಿ ನಿರ್ಮಾಣದ ಯೋಜನೆ ರೂಪಿಸಿ ವಾಜಪೇಯಿ ಸರ್ಕಾರ ದಾರಿದೀಪ ನೀಡಿದೆ. ಉದ್ಯೋಗ ಸೃಷ್ಟಿಯ ನೆಪದಲ್ಲಿ ಒಂದಿಷ್ಟು ಸಾರ್ವಜನಿಕ ಹಣ ಅಪವ್ಯಯ ಮಾಡದೇ ಉತ್ಪಾದಕತೆಯುಳ್ಳ ಉದ್ಯೋಗಾವಕಾಶಗಳನ್ನು ಸೃಷ್ಟಿಸಿ ಯುವಕರಿಗೆ ನೆರವಾಗುವ ಕಾರ್ಯಕ್ರಮಗಳನ್ನು ಮುಂದಿನ ಸರ್ಕಾರ ಹೆಣೆಯಬೇಕಾಗಿದೆ.
ಅನೇಕ ರಂಗಗಳಲ್ಲಿ ಭಾರತಕ್ಕೆ ಪೈಪೋಟಿ ನೀಡುತ್ತಿದ್ದ ಚೀನಾದಲ್ಲಿ ಈಗ ಉತ್ಪಾದನೆಯ ವೆಚ್ಚಗಳು ಹೆಚ್ಚುತ್ತಿವೆ. ಭಾರತ ಬಿಟ್ಟು ಚೀನಾದಲ್ಲಿ ಹಣ ಹೂಡಿಕೆ ಮಾಡಿದ್ದ ಕಂಪನಿಗಳು ಸ್ವದೇಶಕ್ಕೆ ಮರಳಲು ಉತ್ಸುಕವಾಗಿವೆ. ಭಾರತದ ತಯಾರಿಕಾ ರಂಗ (ಮ್ಯಾನ್ಯುಫ್ಯಾಕ್ಚರಿಂಗ್ ವಲಯ) ಸುಧಾರಿಸಲು ಬೇಕಾದ ವಾತಾವರಣ ಹುಟ್ಟಿಕೊಂಡಿದೆ. ಈ ಅವಕಾಶವನ್ನು ಬೇಗನೆ ಬಳಸಿಕೊಂಡು ತಯಾರಿಕಾ ರಂಗವನ್ನು ವೃದ್ಧಿಗೊಳಿಸಲು ಮುಂದಿನ ಸರ್ಕಾರ ಕಾರ್ಯೋನ್ಮುಖವಾಗಬೇಕು.
ದೇಶದಲ್ಲಿ ಆರ್ಥಿಕ ಸುಧಾರಣೆಗಳು ನಿಜಕ್ಕೂ ಸ್ಥಗಿತಗೊಂಡಿವೆ. ಕೆಲ ಸುಧಾರಣಾ ಕ್ರಮಗಳು ವೇಗ ಕಳೆದುಕೊಂಡಿವೆ ಎಂದು ಕೇಂದ್ರದ ಮಾಜಿ ವಿತ್ತಸಚಿವ ಪ್ರಣಬ್ ಮುಖರ್ಜಿ ವಾಷಿಂಗ್ಟನ್ ಮೂಲದ ಚಿಂತನ ಚಿಲುಮೆಯನ್ನುದ್ದೇಶಿಸಿ ಮಾತನಾಡುತ್ತಾ ಒಪ್ಪಿಕೊಂಡಿದ್ದರು. ದಿಕ್ಕು ತಪ್ಪಿದ ಸುಧಾರಣೆಗಳಿಗೆ ಸರಿಯಾದ ದಿಕ್ಕು ತೋರಿರುವ ಕೆಲಸ ಮುಂದಿನ ಸರ್ಕಾರದಿಂದಾಗಬೇಕು.
ಕೃಷಿ, ಉದ್ದಿಮೆ ಮತ್ತು ಬ್ಯಾಂಕಿಂಗ್ -ಹೀಗೆ ಪ್ರಮುಖ ವಲಯಗಳಲ್ಲಿ ಉತ್ಪಾದಕತೆ ಕುಗ್ಗಿ ಹೋಗಿದ್ದು ದೊಡ್ಡ ಸಮಸ್ಯೆ. ದೇಶದ ಅಭಿವೃದ್ಧಿಗೆ ಪೂರಕವಾಗಬಲ್ಲ ಮತ್ತು ಶ್ರೀಸಾಮಾನ್ಯನ ಸಮಸ್ಯೆಗಳಿಗೆ ಸ್ಪಂದಿಸಬಲ್ಲ ಆಡಳಿತ ನೀಡಬಲ್ಲ ಸರ್ಕಾರಕ್ಕಾಗಿ ಜನ ಕಾಯುತ್ತಿದ್ದಾರೆ.
2012ರಲ್ಲಿ ಬಿಬೆಕ್ ದೆಬ್ರಾಯ್ ಬರೆದ "ಗುಜರಾತ್: ಬೆಳವಣಿಗೆ ಮತ್ತು ಅಭಿವೃದ್ಧಿಗಾಗಿ ಆಡಳಿತ" ಎಂಬ ಪುಸ್ತಕ ಪ್ರಕಟವಾಯಿತು. ಪ್ರಗತಿಪರ ದೃಷ್ಟಿಯುಳ್ಳ ಆಡಳಿತ ವ್ಯವಸ್ಥೆ ಇದ್ದರೆ ಮಾತ್ರ ಧನಾತ್ಮಕ ಬದಲಾವಣೆ (ಅಂದರೆ ಸುಧಾರಣೆ) ಸಾಧ್ಯವೆನ್ನುವುದನ್ನು ಗುಜರಾತ್ ತೋರಿಸಿದೆ ಎಂದು ಎಲ್ಲೂ ಮೋದಿ ಹೆಸರು ಹೇಳದೆ ದೆಬ್ರಾಯ್ ವಾದಿಸಿದ್ದಾರೆ. ಗುಜರಾತ್ನಲ್ಲಿ ಆಗಿದ್ದು ದೇಶದಲ್ಲಾಗಬೇಕೆಂದು ಬಯಸುವಾಗ ಮುಂದಿನ ಸರ್ಕಾರದ ಮುಂದಿರುವ ಅವಕಾಶಗಳು ಮತ್ತು ಸವಾಲುಗಳು ನೆನಪಾಗುವುದು ಸ್ವಾಭಾವಿಕ.
-ಪ್ರೊ. ಜಿ.ವಿ. ಜೋಶಿ, ನಿಟ್ಟೆ
anisikeprabha@gmail.com