ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಅಂಕಣಗಳು

ಉಡುಗೊರೆ ಸಾಮ್ರಾಜ್ಯದಲ್ಲಿ ಅಭಿವೃದ್ಧಿಗೆಲ್ಲಿಯ ಭಾಗ್ಯ?

ಕರ್ನಾಟಕದ ಮುಖ್ಯಮಂತ್ರಿಯಾಗಿ ಸಿದ್ದರಾಮಯ್ಯನವರು ಒಂದು ವರ್ಷ ಪೂರೈಸಿದ್ದಾರೆ. ತಮ್ಮ ವೃತ್ತಿ ಬದುಕಿನ ....

Rashmi Kasaragodu
Updated On : 14 May 2014, 12:01 pm

ಕರ್ನಾಟಕದ ಮುಖ್ಯಮಂತ್ರಿಯಾಗಿ ಸಿದ್ದರಾಮಯ್ಯನವರು ಒಂದು ವರ್ಷ ಪೂರೈಸಿದ್ದಾರೆ. ತಮ್ಮ ವೃತ್ತಿ ಬದುಕಿನ ಬಹುಭಾಗವನ್ನು ಕಾಂಗ್ರೆಸ್ ವಿರುದ್ಧದ ಟೀಕೆಗೆ ಮೀಸಲಿಟ್ಟಿದ್ದ ಸಿದ್ದರಾಮಯ್ಯನವರು ಅದೇ ಪಕ್ಷದಲ್ಲಿ ಮುಖ್ಯಮಂತ್ರಿಯಾಗುವುದಕ್ಕೆ ಅದೃಷ್ಟ ಸಾಕಷ್ಟು ಜೊತೆ ಕೊಟ್ಟಿತು. ಗೌಡರ ಪುತ್ರ ವ್ಯಾಮೋಹ, ಬಿಜೆಪಿಯ ಒಳಜಗಳ ಮತ್ತು ಬಿರುಕುಗಳು ಅವರನ್ನು ಈ ಗಾದಿಯಲ್ಲಿ ಕೂರಿಸಿದವು.
ಮಾಹಿತಿ ತಂತ್ರಜ್ಞಾನದ ರಾಜಧಾನಿ ಎಂದೇ ಗುರುತಿಸಲಾಗುವ ಕರ್ನಾಟಕವು ತುಲನಾತ್ಮಕವಾಗಿ ಭಾರತದ ಅಭಿವೃದ್ಧಿ ಹೊಂದಿರುವ ರಾಜ್ಯಗಳ ಸಾಲಿನಲ್ಲೇ ನಿಲ್ಲುತ್ತದೆ. ಇಂಥ ರಾಜ್ಯಕ್ಕೆ ಸಿದ್ದರಾಮಯ್ಯ ಮುಖ್ಯಮಂತ್ರಿಯಾದ ಸಂದರ್ಭದಲ್ಲಿ ಅವರ ವರ್ಚಸ್ಸು ಅತ್ಯಂತ ಸಕಾರಾತ್ಮಕವಾಗಿಯೇ ಬಿಂಬಿತವಾಗಿತ್ತು. ಕಠಿಣ ಪರಿಶ್ರಮಿ, ಭ್ರಷ್ಟರಲ್ಲ ಹಾಗೂ ಯಾವುದೇ ಗಾಡ್ ಫಾದರ್ಗಳ ಸಹಾಯವಿಲ್ಲದೇ ರಾಜಕೀಯದಲ್ಲಿ ಮೇಲೇರಿದವರು ಎಂಬ ಗುಣಗಳು ಅವರ ಪರವಿದ್ದವು. ಹೀಗಿರುವಾಗ, ಒಂದು ವರ್ಷ ಪೂರೈಸಿದ ಸಂದರ್ಭದಲ್ಲಿ ಪತ್ರಿಕೆಗಳ ಮುಖಪುಟ ಜಾಹೀರಾತುಗಳ ಹೊರತಾಗಿ ಅವರ ಆಡಳಿತದಲ್ಲಿ ಕಂಡಿದ್ದೇನು ಎಂಬುದರ ವಿಶ್ಲೇಷಣೆ ಅಗತ್ಯ.  
ಅಕ್ರಮ ಗಣಿಗಾರಿಕೆ: ಸಿದ್ದರಾಮಯ್ಯನವರು ಅಕ್ರಮ ಗಣಿಗಾರಿಕೆ ವಿರುದ್ಧ ವಿರೋಧ ಪಕ್ಷದಲ್ಲಿದ್ದಾಗ ಭಾರಿ ಧ್ವನಿ ಮೊಳಗಿಸಿದವರು. ಬೆಂಗಳೂರಿನಿಂದ ಬಳ್ಳಾರಿವರೆಗಿನ ಪಾದಯಾತ್ರೆಯ ಪರ್ವವೂ ಅಕ್ರಮ ಗಣಿಗಾರಿಕೆ ವಿಷಯವನ್ನೇ ಪ್ರಮುಖವಾಗಿ ಇರಿಸಿಕೊಂಡಿತ್ತು. ಇದರಲ್ಲಿ ತೊಡಗಿಸಿಕೊಂಡವರನ್ನೆಲ್ಲ ಜೈಲಿಗೆ ಅಟ್ಟಬೇಕು ಎಂದು ಪ್ರಬಲವಾಗಿ ಪ್ರತಿಪಾದಿಸಿಕೊಂಡು ಬಂದವರು ಸಿದ್ದರಾಮಯ್ಯ. ಆದರೆ ಅಧಿಕಾರ ಸಿಕ್ಕಿ ವರ್ಷದೊಳಗೆ ಆಗಿದ್ದೇನು? ಡಿ. ಕೆ. ಶಿವಕುಮಾರ್ ಅವರ ಮೇಲಿನ ಪ್ರಕರಣ ಸುಪ್ರೀಂಕೋರ್ಟ್ನಲ್ಲಿ ಮುಂದುವರಿದಿದೆ. ಅವರೀಗ ಸಿದ್ದರಾಮಯ್ಯ ಸಂಪುಟದಲ್ಲಿ ಇಂಧನ ಸಚಿವರಾಗಿದ್ದಾರೆ. ಅಕ್ರಮ ಗಣಿಗಾರಿಕೆಯಲ್ಲಿ ಆರೋಪಿತರಾಗಿದ್ದ ಸಂತೋಷ್ ಲಾಡ್ ಅವರನ್ನು ಸಂಪುಟದಿಂದ ಕೈಬಿಡುವುದಕ್ಕೆ ಕಾರಣ ಬಿಜೆಪಿ ಮತ್ತಿತರ ಗುಂಪುಗಳು ವ್ಯಾಪಕವಾಗಿ ಪ್ರತಿಭಟಿಸಿದ್ದರಿಂದಲೇ. ಲೋಕಾಯುಕ್ತರ ಯಾವ ಅರ್ಥಪೂರ್ಣ ಶಿಫಾರಸುಗಳೂ ಜಾರಿಗೆ ಬಂದಿಲ್ಲ. ಇವರು ಈ ಮೊದಲು ಅಬ್ಬರಿಸಿದಂತೆ ಬಿಜೆಪಿ, ಕಾಂಗ್ರೆಸ್, ಜೆಡಿಎಸ್ ಯಾವುದೇ ಪಕ್ಷಗಳ ಪ್ರಮುಖರೂ ಅಕ್ರಮ ಗಣಿಗಾರಿಕೆ ಸಂಬಂಧ ಜೈಲಿಗೆ ಹೋಗಿಲ್ಲ. ಅಷ್ಟೇಕೆ, ಹಜ್ ಹಗರಣದಲ್ಲಿ ಹೆಸರು ಕೇಳಿಬಂದ ರಾಜಕಾರಣಿಗಳೂ ಇವರ ಸಂಪುಟದಲ್ಲಿ ಇದ್ದಾರೆ.
ಅರ್ಥವ್ಯವಸ್ಥೆ: ಹಣಕಾಸು ಸಚಿವರಾಗಿ ತಾವು ಅರ್ಥ ನಿರ್ವಹಣೆ ಬಗ್ಗೆ ಅಪಾರ ಅನುಭವ ಹೊಂದಿರುವುದಾಗಿ ಆಗಾಗ ಹೇಳಿಕೊಳ್ಳುತ್ತಿದ್ದ ಸಿದ್ದರಾಮಯ್ಯನವರು ಮುಖ್ಯಮಂತ್ರಿಯಾದ ನಂತರ ಏನು ಸಾಧಿಸಿದರು?
-    ಕೆ.ಜಿ.ಗೆ 1 ರುಪಾಯಿ ದರದಲ್ಲಿ ಅಕ್ಕಿ ನೀಡುವ ಯೋಜನೆ ಸರ್ಕಾರದ ಬೊಕ್ಕಸದ ಮೇಲೆ ವಾರ್ಷಿಕ 4500 ಕೋಟಿ ರುಪಾಯಿಗಳ ಭಾರ ಹಾಕಿದೆಯಲ್ಲದೇ ಅನುಷ್ಠಾನದಲ್ಲಿ ವ್ಯಾಪಕ ಭ್ರಷ್ಟಾಚಾರ ಹಾಗೂ ಅಸಮರ್ಪಕ ನಿರ್ವಹಣೆಗಳು ಬೆಳಕಿಗೆ ಬಂದಿವೆ.
-    ಮತಬ್ಯಾಂಕ್ ಉದ್ದೇಶದಿಂದ ಜಾತಿಯ ಆಧಾರದಲ್ಲಿ ಸಾಲಮನ್ನಾ ಮಾಡಿದ್ದರಿಂದ ಸರ್ಕಾರಕ್ಕೆ ಬಿದ್ದ ಹೊರೆ 1368 ಕೋಟಿ ರುಪಾಯಿಗಳು. 2 ಲಕ್ಷದವರೆಗೆ ಬಡ್ಡಿ ರಹಿತ ಸಾಲವೂ ಬೊಕ್ಕಸವನ್ನು ಬರಿದಾಗಿಸಿದೆ ಅಷ್ಟೆ.
-    ಕಚೇರಿ ಮತ್ತು ಕಾರ್ಯಾಲಯಗಳನ್ನು ನವೀಕರಿಸುವುದಕ್ಕೆ ಒಂದಿಷ್ಟು ಸಚಿವರು ಮುಲಾಜಿಲ್ಲದೇ ತೆರಿಗೆದಾರರ ಹಣವನ್ನು ಪೋಲು ಮಾಡಿದರು.
-   ಮದ್ಯದ ಲಾಬಿ ಬಹಳ ಕೆಲಸ ಮಾಡುತ್ತಿರುವ ಬಗ್ಗೆ ಚರ್ಚೆಯಾಯಿತು. ಜೆಡಿಎಸ್ ಇದನ್ನು ಪ್ರಮುಖವಾಗಿ ಪ್ರಸ್ತಾವಿಸಿತು. ಮರಳು ಸಾಗಣೆ ಸಂಬಂಧ ಲಾರಿ ಮಾಲಿಕರು ನಡೆಸಿದ ಮುಷ್ಕರವನ್ನು ನಿರ್ವಹಿಸಿದ ರೀತಿ ಕಳಪೆಯಾಗಿತ್ತಾದ್ದರಿಂದ ನಿರ್ಮಾಣ ಕಾಮಗಾರಿಗಳಿಗೆ ಇದು ಅಡ್ಡಿಯಾಯಿತು.
ಇವೆಲ್ಲವನ್ನೂ ಗಮನಿಸುತ್ತಿದ್ದರೆ ಜನ ಓಲೈಕೆಯ ಉಡುಗೊರೆ ಯೋಜನೆಗಳನ್ನು ಬಿಟ್ಟರೆ, ಆದಾಯ ನಿರ್ಮಿಸಿಕೊಡುವ ಯಾವ ಯೋಜನೆಗಳನ್ನೂ ರೂಪಿಸಿಲ್ಲ. ಹೀಗೆಯೇ ಮುಂದುವರಿದರೆ ಸರ್ಕಾರದ ಖಜಾನೆ ಬರಿದಾಗುತ್ತದೆ ಅಷ್ಟೆ.
ಕಾನೂನು ಮತ್ತು ಸುವ್ಯವಸ್ಥೆ: ಈ ಒಂದು ವರ್ಷದಲ್ಲಿ ಈ ವಿಭಾಗದಲ್ಲೂ ಹಲವು ಅನಪೇಕ್ಷಿತ ಘಟನೆಗಳಾಗಿವೆ. ಅಲ್ಪಸಂಖ್ಯಾತರಲ್ಲಿ ವಿಶ್ವಾಸ ಹುಟ್ಟಿಸುವ ದೃಷ್ಟಿಯಿಂದಲೇ ತಾವು ಆ ಸಮುದಾಯಕ್ಕೆ (ಕ್ರೈಸ್ತ) ಸೇರಿದವರನ್ನು ಗೃಹ ಸಚಿವರನ್ನಾಗಿ ಮಾಡಿದ್ದು ಎಂಬ ಸಿದ್ದರಾಮಯ್ಯನವರ ಮಾತು ಕೋಮುವಾದಿ ಧೋರಣೆಯನ್ನೇ ಹೊಂದಿದೆ.
-    ದಕ್ಷಿಣ ಕನ್ನಡದ ದೇರಲಕಟ್ಟೆಯಲ್ಲಿ ಭೀಬತ್ಸ ಅತ್ಯಾಚಾರವೊಂದು ವರದಿಯಾಯಿತು. ಯುವತಿಯೊಬ್ಬಳನ್ನು ಲೈಂಗಿಕ ಕ್ರಿಯೆಯಲ್ಲಿ ಭಾಗವಹಿಸುವಂತೆ ಬಲವಂತ ಮಾಡಿ ಎಂಟು ಮಂದಿಯ ಗುಂಪು ಅದನ್ನು ಚಿತ್ರಿಸಿಕೊಂಡಿತು. ಆ ಕೃತ್ಯ ಎಸಗಿದವರ ಧರ್ಮ ಮುನ್ನೆಲೆಗೆ ಬಂದು ಆಕ್ರೋಶವನ್ನು ಹತ್ತಿಕ್ಕಲಾಯಿತು. ಕೇರಳ ವಿದ್ಯಾರ್ಥಿನಿ ಮೇಲೆ ಮಣಿಪಾಲದಲ್ಲಿ ಆದ ಗ್ಯಾಂಗ್ರೇಪ್ ಸಹ ಸ್ಥಳೀಯರಲ್ಲಿ ಆತಂಕವನ್ನೇ ಮಡುಗಟ್ಟಿಸಿದೆ.
-    ಉಲ್ಲಾಳದ ಮೀನುಗಾರರ ಕುಟುಂಬದವರನ್ನು ಅನ್ಯ ಕೋಮಿನವರು ಛೇಡಿಸಿದ ವಿದ್ಯಮಾನ ತೆರೆದುಕೊಂಡಿತು. ಅದು ಯಾವ ಹಂತಕ್ಕೆ ತಲುಪಿತೆಂದರೆ ಪೇಜಾವರ ಸ್ವಾಮೀಜಿಗಳ ನೇತೃತ್ವದಲ್ಲಿ ಹಿಂದೂ ಸಮಾಜದ ಸ್ವಾಮೀಜಿಗಳೆಲ್ಲ ಒಂದಾಗಿ ಆ ಹಳ್ಳಿಯ ಬಲವರ್ಧನೆಗೆ ಹಣಕಾಸು ಸಂಗ್ರಹಿಸಿ ನೈತಿಕ ಸ್ಥೈರ್ಯ ಹೇಳಬೇಕಾಯಿತು. ಸಿದ್ದರಾಮಯ್ಯನವರು ಈ ವಿಷಯದಲ್ಲಿ ಏನನ್ನೂ ಹೇಳಲಿಲ್ಲ. ಕರಾವಳಿ ಪ್ರದೇಶದಲ್ಲಿ 'ಸೆಕ್ಯುಲರ್' ಗುಂಪಿನವರ ನೈತಿಕ ಪೊಲೀಸ್ಗಿರಿ ಅತಿಯಾಗಿದೆ.
-    ಬಿಜೆಪಿ ಸರ್ಕಾರದ ಗೋಹತ್ಯೆ ನಿಷೇಧದ ಕಾನೂನನ್ನು ಬದಿಗೆ ಸರಿಸಿದ ಮೇಲೆ ಶಸ್ತ್ರಧಾರಿ ಗುಂಪುಗಳಿಂದ ದನಗಳ ಕಳ್ಳತನ, ಅಕ್ರಮ ವಧೆ ಅತಿಯಾಗಿವೆ. ತಮ್ಮ ಗೋವುಗಳನ್ನು ಕಾಪಾಡಿಕೊಳ್ಳುವುದಕ್ಕೆ, ಕಳ್ಳತನವನ್ನು ಎದುರಿಸುವುದಕ್ಕೆ ಸರ್ಕಾರದಿಂದ ಯಾವ ಸಹಾಯವೂ ಸಿಗುತ್ತಿಲ್ಲ.
-    ಬೆಂಗಳೂರಿನಲ್ಲಿ ಅಪರಾಧ ಪ್ರಕರಣಗಳು ಅಂಕುಶದಲ್ಲಿಲ್ಲ. ಎಟಿಎಮ್ನಲ್ಲಿ ಮಹಿಳೆಯ ಮೇಲಾದ ಪ್ರಾಣಾಂತಕ ಹಲ್ಲೆ ನಡೆಸಿದ ವ್ಯಕ್ತಿ ಸಿಸಿಟಿವಿ ಕ್ಯಾಮರಾದಲ್ಲಿ ಸೆರೆಯಾಗಿದ್ದರೂ ಆತನನ್ನು ಈವರೆಗೆ ಹಿಡಿಯಲಾಗಲಿಲ್ಲ.
-    ಸರ್ಕಾರದ ಭಾಗವಾಗಿರುವವರ ಅಹಂಕಾರಗಳು ಬೆಚ್ಚಿಬೀಳಿಸುವಂತಿವೆ. ಕಾಂಗ್ರೆಸ್ ಸರ್ಕಾರದಲ್ಲಿ ಸಚಿವರಾಗಿರುವ ಅಭಯಚಂದ್ರ ಜೈನ್ ಒಮ್ಮೆ ಒಳ್ಳೆ ರಸ್ತೆಗಳು ಬೇಕೆಂದು ಕೇಳಿದ ಆಟೊ ಚಾಲಕನ ಮೇಲೆ ಹಲ್ಲೆ ಮಾಡಿದರು. ಇನ್ನೊಮ್ಮೆ ಪತ್ರಕರ್ತನಿಗೆ ಪ್ರಾಣ ಬೆದರಿಕೆ ಹಾಕಿದರು. ಧಾರವಾಡದ ಕಿಮ್ಸ್ನ ಆರೋಗ್ಯ ಅಧಿಕಾರಿ ಮೇಲೆ ಕಾಂಗ್ರೆಸ್ ಶಾಸಕ ವಿನಯ ಕುಲಕರ್ಣಿ ಏರಿಹೋದ, ಬಯ್ದಾಡಿ ತೋಳೇರಿಸಿದ ವಿದ್ಯಮಾನವು ಟಿವಿ ವಾಹಿನಿಗಳ ಎದುರೇ ಜಾಹೀರಾಯಿತು.
-    ಗುಲ್ಬರ್ಗದಲ್ಲಿ ಗ್ಯಾಂಗ್ಸ್ಟರ್ ಜತೆಗಿನ ಪೊಲೀಸ್ ಕಾರ್ಯಾಚರಣೆಯಲ್ಲಿ ಸಬ್ ಇನ್ಸ್ಪೆಕ್ಟರ್ ಮಲ್ಲಿಕಾರ್ಜುನ ಬಂಡೆ ಮೃತರಾದದ್ದು ಉತ್ತರ ಕರ್ನಾಟಕದಲ್ಲಿ ಸರ್ಕಾರದ ವಿರುದ್ಧ ಪ್ರತಿಭಟನೆಯ ಅಲೆಯನ್ನೇ ಹುಟ್ಟುಹಾಕಿತು. ಬಂಡೆ ಸಾವಿಗೆ ಐಜಿಪಿ ವಾಜಿರ್ ಅಹ್ಮದ್ ಕಾರಣರಾಗಿದ್ದು, ಅವರನ್ನು ಸರ್ಕಾರ ರಕ್ಷಿಸುತ್ತಿದೆ ಎಂಬ ಅಭಿಪ್ರಾಯ ಜನರಲ್ಲಿ ಮನೆಮಾಡಿದೆ. ಪೊಲೀಸ್ ಇಲಾಖೆಯಲ್ಲಿ ಕೋಮು ತಹತಹಗಳನ್ನು ಹುಟ್ಟಿಸಿದ ವಿದ್ಯಮಾನವಿದು.
ಕಾನೂನು ಸುವ್ಯವಸ್ಥೆಯ ನಿರ್ವಹಣೆ ಹಾಗೂ ಕೋಮು ಸೌಹಾರ್ದದ ವಿಷಯದಲ್ಲಿ ಇವೆಲ್ಲ ಕಳಂಕಗಳಲ್ಲದೇ ಇನ್ನೇನು?
ಇನ್ನು ಯೋಜನೆ ಮತ್ತು ನೀತಿ ನಿರೂಪಣೆಗಳ ವಿಷಯದಲ್ಲೂ ಸಿದ್ದರಾಮಯ್ಯನವರು ಅರವಿಂದ ಕೇಜ್ರಿವಾಲರಿಗೆ ಸ್ಪರ್ಧೆ ನೀಡುವ ಮಟ್ಟಿಗೆ ಯೂಟರ್ನ್ ಹೊಡೆದಿದ್ದಾರೆ. ತಮ್ಮನ್ನು ಸುತ್ತುವರಿದ ಬುದ್ಧಿಜೀವಿ ಸಾಹಿತಿಗಳ ಮಾತು ಕೇಳಿಕೊಂಡು 'ಮೂಢನಂಬಿಕೆ' ನಿಷೇಧಿಸುವದಕ್ಕೆ ಹೊರಟರು. ಈ 'ಸೆಕ್ಯುಲರ್' ಯೋಜನೆ ಬಾಲಿಶ ಅಂಶಗಳನ್ನೇ ಒಳಗೊಂಡಿತ್ತಾದ್ದರಿಂದ ಪ್ರತಿಭಟನೆಯ ಬಿಸಿಗೆ ತಣ್ಣಗಾದರು. ಕೆಲವು ಜಾತಿಗಳ ಮಕ್ಕಳಿಗೆ ಮಾತ್ರವೇ ಪ್ರವಾಸ ಯೋಜನೆ ರೂಪಿಸಿದ್ದು ಇನ್ನೊಂದು ಮೂರ್ಖತನದ ಹೆಜ್ಜೆ. ಅಲ್ಲೂ ಯೂಟರ್ನ್ ಅನಿವಾರ್ಯವಾಯಿತು. ಪಿಯು ಮಕ್ಕಳಿಗೆ ಲ್ಯಾಪ್ಟಾಪ್ ನೀಡುವ ಕಾರ್ಯಕ್ರಮವನ್ನು ರಾಜ್ಯಪಾಲರ ಭಾಷಣದಲ್ಲಿ ಪ್ರಸ್ತಾಪಿಸಲಾಯಿತು. ನಂತರ ಅದರಿಂದ ಸದ್ದಿಲ್ಲದೇ ಹಿಂದೆ ಸರಿಯಲಾಯಿತು. ಬೇಸಿಗೆ ರಜೆಯಲ್ಲೂ ಶಾಲೆಗಳಲ್ಲಿ ಬಿಸಿ ಊಟ ಕೊಡುವ ಕಾರ್ಯಕ್ರಮ ವಿಫಲವಾಗಿದ್ದು, ಇದೇನು ಕೇವಲ ಪ್ರಚಾರಕ್ಕೆ ಮಾಡಲಾಯಿತೇ ಎಂಬ ಅನುಮಾನ ಹುಟ್ಟುತ್ತದೆ. ಕಾವೇರಿ ವಿಷಯದಲ್ಲಿ ರಾಜಿಯಿಲ್ಲ ಎಂಬ ಮಾತೂ ವೀರಾವೇಶಕ್ಕೆ ಸೀಮಿತ. ಮೇಕೆದಾಟು ಜಲವಿದ್ಯುತ್ ಯೋಜನೆ ಕೈಬಿಡಬೇಕಾಗಿ ಬಂದಿದ್ದು ತಮಿಳುನಾಡು ಸರ್ಕಾರದ ಒತ್ತಡದಿಂದಲೇ ಎಂಬ ಪ್ರಶ್ನೆಗೆ ಉತ್ತರ ಸಿಗಬೇಕು. ಗಾರ್ಡನ್ ಸಿಟಿ ಗಾರ್ಬೇಜ್ ಸಿಟಿಯಾಗಿದೆ ಎಂದು ಪ್ರತಿಪಕ್ಷದಲ್ಲಿದ್ದಾಗ ಅಬ್ಬರಿಸಿದ ಸಿದ್ದರಾಮಯ್ಯ, ಬೆಂಗಳೂರಿನ ಕಸ ವಿಲೇವಾರಿ ಸುಗಮಗೊಳಿಸುವ ಯಾವ ಕ್ರಾಂತಿಯನ್ನೂ ಈ ಒಂದು ವರ್ಷದ ಅವಧಿಯಲ್ಲಿ ಮಾಡಿಲ್ಲ.
ಎಲ್ಲಿದೆ ಅಭಿವೃದ್ಧಿ?: ಮೆಟ್ರೊ ರೈಲಿನ ನಿರ್ಮಾಣ ಕಾಮಗಾರಿ ಶೇ. 8ರ ವೇಗದಲ್ಲಿ ಕುಂಟುತ್ತಿದೆ. ಈಗ ಕಾರ್ಯಾಚರಣೆಯಲ್ಲಿರುವ ಎರಡನೇ ಹಂತವು ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬರುವುದಕ್ಕೂ ಮುಂಚೆ ಪರೀಕ್ಷಾ ಹಂತದಲ್ಲಿ ಇತ್ತು. ಅದನ್ನು ಕಾರ್ಯಾಚರಣೆ ಸ್ಥಿತಿಗೆ ತರುವುದಕ್ಕೂ 10 ತಿಂಗಳು ಬೇಕಾಯಿತು. ಪ್ರಮುಖ ಮೇಲ್ಸೇತುವೆ, ಅಂಡರ್ಪಾಸ್, ನದಿ ಜೋಡಣೆ, ಆಣೆಕಟ್ಟು, ಬಂದರು, ಹೆದ್ದಾರಿ ಈ ಯಾವುದಾದರೂ ಕ್ಷೇತ್ರದಲ್ಲಿ ಭರವಸೆ ಹುಟ್ಟಿಸುವ ಒಂದೇ ಒಂದು ಯೋಜನೆಯ ಹೆಸರು ಕೇಳಿದ್ದೀರಾ? ರಾಜ್ಯದಲ್ಲಿ ಸ್ಥಳೀಯವಾಗಿಯಾಗಲೀ, ವಿದೇಶದಿಂದಾಗಲೀ ಬಂಡವಾಳ ತರುವ ಯಾವ ಯೋಜನೆಗಳು ನಮ್ಮ ಆಸಕ್ತಿ ಕೆರಳಿಸಿವೆ? ಐಟಿಯಲ್ಲಿ ಸರ್ಕಾರದ ಹೊರತಾಗಿಯೂ ಬರುತ್ತಿರುವ ಹೂಡಿಕೆಗಳಷ್ಟೇ ಕಣ್ಣಿಗೆ ಕಾಣುತ್ತಿವೆ. ಹೈದರಾಬಾದ್ ಕರ್ನಾಟಕ ಪ್ರಾಂತ್ಯವಂತೂ ಸಿದ್ದರಾಮಯ್ಯ ಸರ್ಕಾರದಲ್ಲಿ ಏನಾದರೂ ಅಭಿವೃದ್ಧಿ ಕಾಣಬಹುದು ಅಂತ ಬಯಸಿದ್ದೇ ಬಂತು.  ಲೋಡ್ ಶೆಡ್ಡಿಂಗ್ ಇಲ್ಲ ಎಂದು ಬಾಯಲ್ಲಿ ಹೇಳುತ್ತಿದ್ದಾರಷ್ಟೆ. ಬೆಂಗಳೂರಿನಂಥ ನಗರದಲ್ಲೇ ವಿದ್ಯುತ್ ವ್ಯತ್ಯಯ ಜೋರಾಗಿದೆ. ಗ್ರಾಮೀಣ ಭಾಗಗಳಲ್ಲಿ ಪರಿಸ್ಥಿತಿ ಹದಗೆಟ್ಟಿದೆ. ವಿದ್ಯುತ್ ಉತ್ಪಾದನೆಗೆ ಬೇಕಿರುವ ಯಾವ ಹೊಸ ಮಾರ್ಗಗಳನ್ನೂ ಈ ಸರ್ಕಾರ ಯೋಚಿಸಿಲ್ಲ.
ರೈತಪರ ಎಂದು ಹೇಳಿಕೊಳ್ಳುವ ಸಿದ್ದರಾಮಯ್ಯನವರು ಕಬ್ಬು ಬೆಳೆಗಾರರ ಬಿಕ್ಕಟ್ಟು ಬಗೆಹರಿಸಿದರೇ? ಸುವರ್ಣ ಸೌಧದ ಎದುರು ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡ ರೈತ ವಿಠಲ ಅರಭಾವಿ, ಕುಡಿದು ಹಾಗೆ ಮಾಡಿದರೆಂದು ಅವಮಾನವಾಗುವಂತಹ ಹೇಳಿಕೆ ನೀಡಿ ವಿವಾದಕ್ಕೆ ಕಾರಣರಾದರು.
ಬೆಲೆ ಏರಿಕೆ: ಜನರು ಶೇ. 10-20ರ ಬೆಲೆ ಏರಿಕೆಗಳನ್ನು ಒಪ್ಪಿಕೊಂಡಾರು. ರಸ್ತೆಯೊಂದರ ಟೋಲ್ ಅನ್ನು ಮೂರುವರೆ ಪಟ್ಟು ಏಕಾಏಕಿ ಹೆಚ್ಚಿಸಿದ ವಿದ್ಯಮಾನ ಇಲ್ಲಿ ಮಾತ್ರ. ಕೇಂದ್ರದ ಯುಪಿಎ ಮತ್ತು ರಾಜ್ಯದ ಕಾಂಗ್ರೆಸ್ ಸರ್ಕಾರಗಳು ಜಂಟಿ ಕಾರ್ಯಾಚರಣೆಯಲ್ಲಿ ಎಳೆದ ಬರೆ ಇದು. ಸಿದ್ದರಾಮಯ್ಯನವರು ಇದನ್ನು ಪರಿಹರಿಸುವುದಿರಲಿ, ಪ್ರಾರಂಭದಲ್ಲಿ ಸಮರ್ಥನೆಯನ್ನೇ ಮಾಡಿದ್ದರು.
-    ಬಿಎಮ್ಟಿಸಿಯ ನಾನಾ ಸೇವಾ ಮಾದರಿಗಳನ್ನು ಆಧರಿಸಿ 3-4 ದರ ಏರಿಕೆಗಳಾದವು. ಉನ್ನತ ಶ್ರೇಣಿಯ ಬಸ್ಸುಗಳಲ್ಲಿ ಸುಮಾರು ಶೇ.50ರಷ್ಟು ದರ ಏರಿಕೆ. ಬೆಂಗಳೂರಿನ ಯಾವುದಾದರೂ ಕಂಪನಿ ತನ್ನ ಉದ್ಯೋಗಿಗೆ ಶೇ. 50ರ ಹೈಕ್ ನೀಡಿರುವುದನ್ನು ಕೇಳಿದ್ದೀರಾ?
  -ಕೆಎಸ್ಆರ್ಟಿಸಿಯಲ್ಲೂ ಸರಣಿ ಏರಿಕೆಗಳಾಗಿವೆ. ಭಾರತದ ದೊಡ್ಡ ರಾಜ್ಯಗಳಲ್ಲಿ ಒಂದಾಗಿರುವ ಕರ್ನಾಚಕದಲ್ಲಿ ಬಡವರ ಪ್ರಯಾಣಕ್ಕೆ ಇದು ಎಷ್ಟೆಲ್ಲ ಹೊರೆ ಎಂಬುದನ್ನು ಯೋಚಿಸಬೇಕು. ಬಿಜೆಪಿ ಆಡಳಿತದಲ್ಲಿ ಲಾಭದಲ್ಲಿದ್ದ ಬಿಎಮ್ಟಿಸಿ ಮತ್ತು ಕೆಎಸ್ಆರ್ಟಿಸಿಗಳು ಕಾಂಗ್ರೆಸ್ ಅಧಿಕಾರ ವಹಿಸಿಕೊಂಡ ಕೆಲ ತಿಂಗಳಲ್ಲೇ ನಷ್ಟಕ್ಕೆ ಸಿಲುಕುತ್ತವೆ ಅಂದರೆ ಏನರ್ಥ?
   - ನೀರು ದರ, ವಿದ್ಯುತ್, ರಿಕ್ಷಾ ದರ, ಹಾಲು- ಮೊಸರು ಎಲ್ಲವೂ ಈ ಅವಧಿಯಲ್ಲಿ ದುಬಾರಿಯಾಗಿವೆ.
ಮೂವತ್ತು ರುಪಾಯಿಗೆ 30 ಕೆಜಿ ಅಕ್ಕಿ ತೆಗೆದುಕೊಂಡವನಿಗೆ ಅದನ್ನು ಮನೆಗೆ ಹೊತ್ತೊಯ್ಯುವುದಕ್ಕೆ ಅದಕ್ಕಿಂತಲೂ ಹೆಚ್ಚು ವೆಚ್ಚವಾಗಿರುತ್ತದೆ. ಬಡವರಿಗೆ ನೀಡಿದ ಉಡುಗೊರೆಗಳನ್ನೆಲ್ಲ ಮರೆಸುವ ಹಾಗೆ ವ್ಯಾಪಕ ಬೆಲೆ ಏರಿಕೆಯಾಗಿದೆ. ಇದನ್ನು ತಡೆಯುವ ಯತ್ನಗಳ್ಯಾವುವೂ ಕಾಣಿಸಿಲ್ಲ.
ಕೊನೆಗೂ ಸಿದ್ದರಾಮಯ್ಯನವರ ಒಂದು ವರ್ಷ ರಾಜ್ಯಭಾರದಲ್ಲಿ ಕೋಮು-ಜಾತಿ ಪರಿಗಣನೆಯ ಯೋಜನೆಗಳು, ಬಿಟ್ಟಿ ಕೊಡುಗೆಗಳು ಕಾಣುತ್ತವೆಯೇ ಹೊರತು ಅಭಿವೃದ್ಧಿಯ ಗುರುತಿಲ್ಲ.



 -ಕಿರಣ್ಕುಮಾರ ಎಸ್.
ಬ್ಲಾಗಿಗ
kirankumars@hotmail.com

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement