ಫಲಿತಾಂಶ ಪೂರ್ವದಲ್ಲಿ ಹೊಮ್ಮಿದ ಚಿಲಿಪಿಲಿ
ಈಗಿನದು ಟ್ವಿಟ್ಟರ್ ಫೇಸ್ಬುಕ್ಗಳ ಜಮಾನಾ
ಚುನಾವಣೆಯ ಫಲಿತಾಂಶದ ಹತ್ತಿರದ ದಿನಗಳು ಯಾವತ್ತೂ ತಮ್ಮಲ್ಲಿ ರೋಚಕತೆಯನ್ನೇ ತುಂಬಿಸಿಕೊಂಡಿರುತ್ತವೆ. ಏನೆಲ್ಲ ಲೆಕ್ಕಾಚಾರಗಳು, ಯಾವೆಲ್ಲ ಸಿದ್ಧಾಂತಗಳು ಹರಿದಾಡುತ್ತವೆ. ಇದೇ ಸರ್ಕಾರ ಬರುತ್ತೆ ಅಂತ ಒಬ್ಬ ಹೇಳಿದರೆ, ಇನ್ನೊಬ್ಬ ನೋಡ್ತಾ ಇರು, ಎಲ್ಲ ಸಮೀಕ್ಷೆಗಳೂ ಉಲ್ಟಾ ಆಗುತ್ತವೆ ಅಂತ ಹೆದರಿಸುತ್ತಾನೆ. ಈ ಹಿಂದೆ ಇಂತ ಹರಟೆಗಳು ಕಟ್ಟೆಗೆ ಮಾತ್ರ ಸೀಮಿತವಾಗಿದ್ದವು. ಈಗಿನದು ಟ್ವಿಟ್ಟರ್ ಫೇಸ್ಬುಕ್ಗಳ ಜಮಾನಾ. ಅನಿಸಿದ್ದೆಲ್ಲವನ್ನೂ ಸಾಮಾಜಿಕ ತಾಣಗಳ ಪರದೆಗೆ ಅಂಟಿಸಿ ಸಲ್ಲಾಪ-ಜಗಳಕ್ಕೆ ತೆರೆದುಕೊಳ್ಳುವ ಹೊಸಬಗೆ. ಮೇ 16ರ ಲೋಕಸಭೆ ಚುನಾವಣೆ ಫಲಿತಾಂಶದ ನಿರೀಕ್ಷೆಯಲ್ಲಿ ಏನೆಲ್ಲ ಮಾತುಕತೆಗಳಾಗುತ್ತಿವೆ ನೋಡೋಣ ಬನ್ನಿ.
ಲಾಲು ಮತ್ತೆ ಬಿಹಾರದಲ್ಲಿ ಪ್ರವರ್ಧಮಾನಕ್ಕೆ ಬರುವ ಸೂಚನೆ ಆತಂಕಕಾರಿ.
-ಅಮಿತ್ ಮನುವಿರಾಜ್
ನಿಮ್ಮ ಬದುಕಿನೊಳಗೆ ಸೂಕ್ತ ವ್ಯಕ್ತಿಗಳನ್ನು ಬಿಟ್ಟುಕೊಳ್ಳುವುದಕ್ಕೆ ನಿರ್ಧರಿಸಿದಾಗ ಒಳ್ಳೆಯ ಸಂಗತಿಗಳು ಘಟಿಸುವುದಕ್ಕೆ ಶುರುವಾಗುತ್ತವೆ. (ಮೋದಿ ಸರ್ಕಾರ್)
-ವಿಕಾಸ್ ಪಂಡಿತ್
ಕಳೆದ ನವೆಂಬರ್ನಲ್ಲಿ ಯುಎಇಗೆ ಹೊರಟುನಿಂತಾಗ, ನಾನಿನ್ನು 'ಮಾಡಿಫೈಡ್' (ಟ್ಟಜ್ಝ-ಜ್ಝಿಜಜ) ಭಾರತದಲ್ಲಿ ಬಂದು ಕಾಲಿರಿಸುತ್ತೇನೆ ಎಂದು ಅಪ್ಪ-ಅಮ್ಮನಿಗೆ ಹೇಳಿದ್ದು ಈಗ ನೆನಪಾಗುತ್ತಿದೆ.
-ಪ್ರತೀಕ್ ಧಾರಿವಾಲ್
ಅಧಿಕಾರವೆಂಬುದು ಎಲ್ಲೆಲ್ಲಿಂದಲೋ ಸ್ನೇಹಿತರನ್ನು ಆಕರ್ಷಿಸುತ್ತದೆ ಎಂಬ ಮಾತು ಸುಳ್ಳಲ್ಲ ನೋಡಿ. ಮೊದಲಿಗೆ ಬಿಜೆಡಿ ಹಾಗೂ ನಂತರ ಎಐಎಡಿಎಂಕೆ, ಎನ್ಡಿಎ ಪರ ರಾಗ ಹಾಡುತ್ತಿವೆಯಲ್ಲ?
-ಕಿರಣ್ದೀಪ್ ಐಬಿಎನ್7
ಮೇ 16ರಂದು ಮಳೆ ಬರಲಿ ಎಂದು ರಾಹುಲ್ ಗಾಂಧಿ ಆಶಿಸುತ್ತಿದ್ದಾರಂತೆ. ಡಕ್ವರ್ಥ್ ಲೂಯಿಸ್ ನಿಯಮದಂತೆ ಗೆದ್ದು ಪ್ರಧಾನಿಯಾಗಬಹುದೇನೋ ಅಂತ!
-ಸರ್ ರವೀಂದ್ರ ಜಡೇಜ
ರಾಹುಲ್ ಮತ್ತು ಮೋದಿ ನಡುವಿನ ವ್ಯತ್ಯಾಸ. ರಾಹುಲ್ ಯುವಕರು ಹಾಗೂ ನಿರಂತರತೆಯನ್ನು ಪ್ರತಿಪಾದಿಸಿದರು. ಮೋದಿ ಹಿರಿ ವಯಸ್ಸಿನವರಾದರೂ ಬದಲಾವಣೆಯನ್ನು ಪ್ರತಿಪಾದಿಸಿದರು.
-ಸಿದ್ಧಾರ್ಥ ಮಜುಮ್ದಾರ್
ಸುಷ್ಮಾ ಸ್ವರಾಜ್ ಸ್ಪೀಕರ್, ಮುರಳಿ ಮನೋಹರ್ ಜೋಶಿ ಎನ್ಡಿಎ ಸಂಚಾಲಕ, ಆಡ್ವಾಣಿ ಭವಿಷ್ಯದ ರಾಷ್ಟ್ರಪತಿ?
-ಸ್ವರೂಪ್
ಟಿವಿ ಚಾನೆಲ್ಗಳು ನಿರ್ಗಮನ ಸಮೀಕ್ಷೆ ನಂತರ ಚರ್ಚೆಗೆ ಎತ್ತಿಕೊಳ್ಳಬಹುದಾದ ವಿಷಯ- ಪ್ರಜಾಪ್ರಭುತ್ವ ನಿಜಕ್ಕೂ ಒಳ್ಳೆಯದೇ?
-ರಿಶಿ ಬಾಗ್ರಿ
ಆಮ್ಆದ್ಮಿ ಏನಿಲ್ಲವೆಂದರೂ ಫೋರ್ಟ್ವೆಂಟಿ (420) ಸ್ಥಾನ ಪಡೆದುಕೊಳ್ಳಲಿದೆ!
-ಡಿಗ್ಗಿಲೀಕ್ಸ್
ನಿರ್ಗಮನ ಸಮೀಕ್ಷೆಗಳನ್ನು ನಂಬಿಕೊಂಡು ಬಿಜೆಪಿ ಸಂಭ್ರಮಿಸಬಾರದು. ಫಲಿತಾಂಶ ಬರುವುದಕ್ಕೆ ಇನ್ನೂ ಸಮಯವಿದೆ ಹಾಗೂ ವಿದ್ಯುನ್ಮಾನ ಮತಯಂತ್ರಗಳನ್ನು ಸಂಭಾಳಿಸುವಲ್ಲಿ ರಾಹುಲ್ ಎಕ್ಸ್ಪರ್ಟ್ ಎಂಬುದು ನಿಮಗೆ ಗೊತ್ತಿದೆ.
-ಜಡ್ಜ್ ಅರ್ನಾಬ್
ಇಂದಿರಾ ಗಾಂಧಿಯವರು ಕಾಂಗ್ರೆಸ್ನ ಎಲ್ಲ ಉನ್ನತ ನೇತಾರರನ್ನು ನೇಪಥ್ಯಕ್ಕೆ ದೂಡಿದರು. ರಾಜ್ಯಗಳಲ್ಲಿನ ನೇತಾರರನ್ನು ದುರ್ಬಲಗೊಳಿಸಿದರು. ಈಗ ಅವೆಲ್ಲವಕ್ಕೆ ಕಾಂಗ್ರೆಸ್ ಬೆಲೆ ತೆರುತ್ತಿದೆ.
-ಸಾಗರಿಕಾ ಘೋಷ್
ಪ್ರಧಾನಿಯಾಗಿ ನರೇಂದ್ರ ಮೋದಿ ಮಾಡಬೇಕಾದ ಕೆಲಸವೆಂದರೆ ದೇಶದಲ್ಲಿ ಕೋಮುಗಲಭೆ ಆಗುತ್ತಿರುವ 25-50 ಜಾಗಗಳನ್ನು ಗುರುತಿಸಿ ಭವಿಷ್ಯದ ದಂಗೆಗಳನ್ನು ತಡೆಯುವುದು.
-ಕಿರಣ್ಕುಮಾರ್ ಎಸ್.
ಈ ಸುದೀರ್ಘ ಚುನಾವಣೆ ಪ್ರಕ್ರಿಯೆಯಲ್ಲಿ ನಿರ್ಲಕ್ಷ್ಯಕ್ಕೆ ಒಳಗಾಗಿರುವ ಅಂಶ ಎಂದರೆ ಇಂಟೆಲಿಜೆನ್ಸ್, ಪೊಲೀಸ್ ಮತ್ತು ಅರೆಸೇನಾ ಪಡೆ ಹಿಂಸಾಚಾರವನ್ನು ತಪ್ಪಿಸುವಲ್ಲಿ ವಹಿಸಿರುವ ಶ್ರಮ.
-ನಿತಿನ್ ಗೋಖಲೆ
ಇನ್ನೇನು ಹೊಸ ಸರ್ಕಾರ ರಚನೆಗೆ ದಿನಗಣನೆ. ಗೆದ್ದವರು ವಿನಮ್ರರಾಗಿ ಹಾಗೂ ಸೋತವರು ಬೇರೆಯವರನ್ನು ಬಯ್ಯದೇ ತಾವೇ ಹೊಣೆಗಾರಿಕೆ ತೆಗೆದುಕೊಳ್ಳುವವರಾಗಿ ಇರುತ್ತಾರೆ ಎಂದು ಆಶಿಸೋಣ.
-ಚೇತನ್ ಭಗತ್
ಕಾಂಗ್ರೆಸ್ ವಕ್ತಾರರೆಲ್ಲ ಕಂಠಪಾಠ ಮಾಡಿಕೊಳ್ಳುತ್ತಿರುವ ಸಾಲು- ಈ ಚುನಾವಣೆಯ ಫಲಿತಾಂಶ ರಾಹುಲ್ ಗಾಂಧಿ ನಾಯಕತ್ವ ವೈಫಲ್ಯವನ್ನು ಬಿಂಬಿಸುವುದಿಲ್ಲ.
-ರಮೇಶ್ ಶ್ರೀವತ್ಸ
ಬಿಜೆಪಿ ವಿರೋಧಿಗಳಲ್ಲಿ ಹೆಚ್ಚಿನವರಿಗೆ ಇರುವುದು ವ್ಯವಹಾರಿಕ ಹಿತಾಸಕ್ತಿಯೇ ಹೊರತು ಅಲ್ಲಿ ಸಿದ್ಧಾಂತದ ಪ್ರಶ್ನೆಯೇನೂ ಉದ್ಭವವಾಗದು.
-ಶಾಶ್ವತಿ ಸರ್ಕಾರ್
ಕಾಂಗ್ರೆಸ್ ನಿರ್ಗಮನ ಸಮೀಕ್ಷೆ ಅಂಕಿಗಳನ್ನು ನಂಬುತ್ತಿಲ್ಲ. ವಾಸ್ತವ ಅವರನ್ನು ಇನ್ನೂ ಜೋರಾಗಿಯೇ ಬಡಿಯಲಿದೆ.
-ಎನ್. ಕೆ. ಸಿಂಗ್.
ಚುನಾವಣಾ ಫಲಿತಾಂಶವನ್ನು ಕಾಂಗ್ರೆಸ್ನ ಕೆಟ್ಟ ಕ್ಷಣ ಅಂತ ಕರೆಯಬೇಕಿಲ್ಲ. ಅವರ ಅತ್ಯಂತ ಕೆಟ್ಟ ಸ್ಥಿತಿ ಎಂದರೆ- ದೆಹಲಿಯಲ್ಲಿ ಯುವತಿ ಮೇಲೆ ಅತ್ಯಾಚಾರವಾದಾಗ, 'ಅದಕ್ಕೆ ನಾವೇನು ಮಾಡಲು ಸಾಧ್ಯ' ಎಂದು ಕೇಳಿದ್ದು.
-ಭಕ್ ಸಾಲಾ
ಒಬ್ಬ ಉತ್ತಮ ನೇತಾರ, 'ನನಗೊಂದು ಕನಸಿದೆ' ಎಂದು ಮಾತು ಪ್ರಾರಂಭಿಸುತ್ತಾನೆ. ಮೂರ್ಖ ನೇತಾರ, 'ನನ್ನ ಅಪ್ಪನಿಗೊಂದು ಕನಸಿತ್ತು' ಅಂತ ಶುರು ಮಾಡುತ್ತಾನೆ.
-ರಿಶಿ
ನಿರ್ಗಮನ ಸಮೀಕ್ಷೆಯಿಂದ ತಿಳಿದ ಅಂಶವೆಂದರೆ ದೆಹಲಿಯಲ್ಲಿ ಕಪಿಲ್ ಸಿಬಲ್ ಅಲೆ ಇದೆ!
-ಮನು ಬಜಾಜ್
2019ರಲ್ಲಿ ಕಾಂಗ್ರೆಸ್ ಇನ್ನೊಮ್ಮೆ ವಾಶ್ಔಟ್ ಆದರೆ ಗಾಂಧಿ ಕುಟುಂಬವನ್ನು ತೊರೆಯುವುದು ಅದಕ್ಕೆ ಅನಿವಾರ್ಯವಾಗಲಿದೆ.
-ಮಂಜುನಾಥ
ನಿತೀಶ್ ಪಾಳೆಯದ ಸಿಬಲ್ ಗುಪ್ತ ಈಗ ಹೇಳುತ್ತಿರುವುದು ಕೇಳಿ- ನಿತೀಶ್ ಪ್ರಧಾನಿ ಹುದ್ದೆಯ ರೇಸ್ನಲ್ಲಿ ಇದ್ದಿರಲಿಲ್ಲವಾದ್ದರಿಂದ ಜೆಡಿಯು ಈ ಬಾರಿಯ ಲೋಕಸಭೆ ಚುನಾವಣೆಯನ್ನು ಗಂಭೀರವಾಗಿ ತೆಗೆದುಕೊಂಡಿರಲಿಲ್ಲವಂತೆ.
-ಪ್ರಸನ್ನ ವಿಶ್ವನಾಥ
'ಮೈ ನಹೀ ಹಮ್' ಅಂತ ಪ್ರಚಾರಾಂದೋಲನದಲ್ಲಿ ಕಾಂಗ್ರೆಸ್ ಘೋಷಿಸಿದ್ದು ಸರಿಯಾಗಿಯೇ ಇದೆ. ಈಗ ಸೋತರೆ 'ಸಾಮೂಹಿಕ ನಾಯಕತ್ವ'ವನ್ನೇ ಹೊಣೆ ಮಾಡಬಹುದಲ್ಲ.
-ಅನ್ರಿಯಲ್ ಟೈಮ್
ನಿರ್ಗಮನ ಸಮೀಕ್ಷೆಗಳು ನಿಜವಾದದ್ದೇ ಹೌದಾದರೆ ಭಾರತವು ಸರ್ವಾಂಗೀಣ ಅಭಿವೃದ್ಧಿ, ಪಾರದರ್ಶಕತೆ ಮತ್ತು ಉತ್ತರದಾಯಿತ್ವ ಹೊಂದಲಿದೆ. ಜೈ ಹೋ!
-ಕಿರಣ್ ಬೇಡಿ