ಆಂಗ್ಲ ಮಾಧ್ಯಮ ಸಮಸ್ಯೆಗಳಿಗೆ ಪರಿಹಾರವೋ ಮೂಲವೋ?
ಆಟ ಮಕ್ಕಳ ಲಕ್ಷಣ. ಆದರೆ ಇಂದಿನ ಶಾಲಾ ಮಕ್ಕಳಿಗೆ ಅದರ ಬಯಕೆಯಿಲ್ಲ. ದುಡಿಮೆಗೆ ಸಜ್ಜುಗೊಳ್ಳುವುದೇ ಏಕೈಕ ...
ಆಟ ಮಕ್ಕಳ ಲಕ್ಷಣ. ಆದರೆ ಇಂದಿನ ಶಾಲಾ ಮಕ್ಕಳಿಗೆ ಅದರ ಬಯಕೆಯಿಲ್ಲ. ದುಡಿಮೆಗೆ ಸಜ್ಜುಗೊಳ್ಳುವುದೇ ಏಕೈಕ ಉದ್ದೇಶವೆಂಬಂತೆ ಅವರು ಬದುಕುತ್ತಾರೆ. 'ಇಷ್ಟು ದುಡ್ಡು ಸಾಕು' ಎಂದು ನಿರ್ಧರಿಸಲು ಯಾರಿಗೂ ಸಾಧ್ಯವೇ ಆಗುತ್ತಿಲ್ಲ.
ಪ್ರಸ್ತುತ ಶಿಕ್ಷಣದ ವ್ಯವಸ್ಥೆಯಿಂದಾಗಿ ಹಲವು ಮನೆಗಳಲ್ಲಾಗಲಿ, ಶಾಲೆಗಳಲ್ಲಾಗಲಿ ನೆಮ್ಮದಿ, ಸಂತೋಷವಿಲ್ಲ. ವಿದ್ಯಾರ್ಥಿ, ಪೋಷಕ ಮತ್ತು ಶಿಕ್ಷಕ ಹೀಗೆ ಮೂರೂ ಕಡೆಗಳಲ್ಲಿ ಅತೃಪ್ತಿ ತಾಂಡವವಾಡುತ್ತಿದೆ. ಕೆಲವು ಮೂಲಭೂತ ಸಂಸ್ಕಾರಗಳನ್ನು ಮನೆ ಕಲಿಸಬೇಕೆಂದು ಶಾಲೆ ಅಪೇಕ್ಷಿಸಿದರೆ 'ಕನಿಷ್ಠ ಗೌರವ ಕೊಡುವುದನ್ನೂ ಮಕ್ಕಳಿಗೆ ಶಾಲೆ ಕಲಿಸಲಿಲ್ಲವಲ್ಲ' ಎಂದು ಪೋಷಕರು ದೂರುವುದು ನಡದೇ ಇದೆ. ಶಿಕ್ಷಕರಿಗೆ ತಂತಮ್ಮ ಪಠ್ಯ ಮುಗಿಸುವ ತರಾತುರಿ. ಉಳಿದ ವಿಷಯ ಕಲಿಸಲು ಸಮಯ ಹಾಗು ಸಂಯಮದ ಕೊರತೆ. ಆಡಿದರೆ ಇಂಗ್ಲಿಷ್ನಲ್ಲೇ ಇಲ್ಲಾಂದ್ರೆ ದಂಡ ಎನ್ನುವ ಕಟ್ಟಳೆಗಳು. ಆ ಮುಗ್ಧ ಮನದಲ್ಲಿ ಆಡದೇ ಉಳಿದ ಮಾತುಗಳು ಅವೆಷ್ಟೋ? ಹಾಗಾಗಿ ಮಗು ಐದಾರನೆ ತರಗತಿಗೆ ಬರುವ ಹೊತ್ತಿಗೆ ಕನಿಷ್ಠ ಮುಗ್ಧತೆಯೂ ಮಾಯವಾಗಿ ಹಿರಿಯರ ಬಗ್ಗೆ ಇದ್ದ ಪ್ರೀತಿ, ಗೌರವ, ಆದರ ಮಾಯವಾಗುತ್ತದೆ.
ಪೂರ್ವಪ್ರಾಥಮಿಕ, ಪ್ರಾಥಮಿಕ ಹಂತದಲ್ಲಿ ಮುಂಚೂಣಿಯಲ್ಲಿದ್ದು, ಮಾಧ್ಯಮಿಕ ಹಂತದಲ್ಲೂ ಮೊದಲ ಐದು ರ್ಯಾಂಕ್ಗಳಲ್ಲಿದ್ದ ಮಗು ಇದೇನಾ ಎನ್ನುವಷ್ಟು ಬಳಲಿದ್ದು ಹೇಗೆ? ಇನ್ನು ಹತ್ತನೇ ತರಗತಿ ಅಥವ ಪಿಯುಸಿ ಮುಗಿಸುವ ಹೊತ್ತಿಗೆ ಆತ್ಮಹತ್ಯೆ ಮಾಡಿಕೊಳ್ಳದೆ ಬದುಕುಳಿದರೆ ಸಾಕು ಎನ್ನುವಂತೆ ಪೋಷಕರನ್ನು ಹಣ್ಣುಗಾಯಿ ನೀರುಗಾಯಿ ಆಗಿಸುವ ಈ ವ್ಯವಸ್ಥೆ ಬದಲಾಗುವುದಾದರೂ ಎಂದು? ಖಂಡಿತಾ ಇದು ಸಾರ್ವತ್ರಿಕವಾದ ಚಿತ್ರಣವಲ್ಲದಿದ್ದರೂ, ಶೇಕಡ ಐವತ್ತಕ್ಕೂ ಅಧಿಕ ಎನ್ನುವುದೂ ಅಷ್ಟೇ ಸತ್ಯ.
ಹತ್ತನೇ ತರಗತಿ ಈಗ ತಾನೆ ಮುಗಿಸಿರುವ ಒಂದು ಮಗುವಿನ ಭವಿಷ್ಯವನ್ನೇ ತೆಗೆದುಕೊಳ್ಳಿ. ಬಹುಸಂಖ್ಯಾತ ಪೋಷಕರು, ಅಲ್ಪಸಂಖ್ಯಾತರಾದ ಪ್ರತಿಭಾವಂತ ಮಕ್ಕಳ ಪೋಷಕರ ಮೇಲೆ ಅವಲಂಬಿತರಾಗಿರುತ್ತಾರೆ. ಅವರು ಯಾವ ಪ್ರತಿಷ್ಠಿತ ಕಾಲೇಜಿಗೆ ಹಾಗು ಕಾಂಬಿನೇಷನ್ಗೆ ದಾಖಲಿಸುತ್ತಾರೋ ಇವರೂ ಹಾಗೆ ಮಾಡಬಯಸುತ್ತಾರೆ. ತನ್ನ ಮಗುವಿನ ಆಸಕ್ತಿಯ ವಿಷಯವೇನು, ಯಾವ ವಿಷಯದಲ್ಲಿ ಅದರ ತಾಕತ್ತಿದೆ. ಅದರ ಇಷ್ಟಾನಿಷ್ಟಗಳೇನು, ಈ ಯಾವುದೂ ಇವರ ಚರ್ಚಾ ವಿಷಯ ಆಗುವುದೇ ಇಲ್ಲ.
ತನಗೆ ವಿಜ್ಞಾನ, ವಾಣಿಜ್ಯ ಅಥವ ಕಲೆ ಯಾವುದರಲ್ಲಿ ಆಸಕ್ತಿ ಹಾಗು ತಾಕತ್ತು ಎಂದರಿಯದೆ, ಯಾರದೋ ಒತ್ತಾಯಕ್ಕೆ ಮಣಿದು 'ಕೋರ್ಸ್' ಆಯ್ಕೆ ಮಾಡಿಕೊಂಡು ಬೇಡದ ಬಿಸಿ ತುಪ್ಪವನ್ನು ನುಂಗಲಾರದೆ ಉಗುಳಲಾರದೆ ಒದ್ದಾಡುತ್ತಾರೆ. ಗಣಿತ, ಭೌತಶಾಸ್ತ್ರ ಅಥವ ರಸಾಯನಶಾಸ್ತ್ರ ಏಕೆ ಕಬ್ಬಿಣದ ಕಡಲೆಯಾಯಿತು ಈ ಹುಡುಗರಿಗೆ ಎಂದು ಅನ್ವೇಷಿಸ ಹೊರಟರೆ, ಆ ಶಾಸ್ತ್ರಗಳಲ್ಲಿಯ ಮೂಲಭೂತ ಜ್ಞಾನದ ಅರಿವಿನ ಕೊರತೆ ಎನ್ನುವುದು ಆ ಉಪನ್ಯಾಸಕರ ಅಭಿಪ್ರಾಯ. ಸರಿ ಇನ್ನು ಅದೇಕೆ ಇಲ್ಲ ಎಂದು ಕೇಳಿದರೆ, ಆಂಗ್ಲಭಾಷೆಯ ಮೇಲಿನ ಪ್ರೌಢಿಮೆಯ ಕೊರತೆಯಿಂದಾಗಿ ಗ್ರಹಿಕೆಯಲ್ಲೇ ಸೋರಿಕೆ, ಎನ್ನುವುದು ವಾಸ್ತವ. ಆಂಗ್ಲಭಾಷೆಯ ಉಪನ್ಯಾಸಕರನ್ನು ಕೇಳಿದರೆ ಕನ್ನಡವೇ ಸರಿಯಾಗಿ ಓದಲು ಬರಿಯಲು ಬಾರದು ಎನ್ನುವುದು ಅವರ ಅನಿಸಿಕೆ. ಕನ್ನಡವೂ ಬಾರದ ಇಂಗ್ಲಿಷೂ ತಿಳಿಯದ ಇವರು ಇಲ್ಲಿಯವರೆಗು ಸಾಧಿಸಿದ್ದಾದರು ಏನು?
ಮಾತೃಭಾಷೆಯಲ್ಲಿ ಓದುವುದು ನಮ್ಮ ಹೆಮ್ಮೆಯ ಸಂಗತಿ ಎಂಬ ದೃಢವಾದ ನಂಬಿಕೆ ಇಲ್ಲದ ಜಗತ್ತಿನ 'ಏಕೈಕ ಗಾಂಪ ಜನಾಂಗ' ಎಂದರೆ ಅದು ನಾವೇ.
ಗುರುಕುಲದ ಶಿಕ್ಷಣಕ್ಕೆ ಕೊಡಲಿ ಪೆಟ್ಟು ನೀಡಿದ ಮೆಕಾಲೆ, 1835ರಲ್ಲಿ ದಾಸ್ಯದ ಮಡುವಿನಲ್ಲಿದ್ದ ಭಾರತದಲ್ಲಿ, ಇಂಗ್ಲಿಷನ್ನು ಒಂದು ಭಾಷೆಯಾಗಿ ಪ್ರೌಢಶಾಲೆಯ ಹಂತದಲ್ಲಿ, ಅಳವಡಿಸಿದ. ಓದು, ಬರಹ ಮತ್ತು ಸ್ವಲ್ಪ ಅಂಕಗಣಿತ ಕಲಿಸುವುದು ಅವನ ಉದ್ದೇಶವಾಗಿತ್ತು. ಅಷ್ಟು ಕಲಿತವರನ್ನು ಆನೆ ಮೇಲೆ ಕೂರಿಸಿ ಮೆರವಣಿಗೆ ಮಾಡಿಸುವ ಹುಚ್ಚು ಸಂಪ್ರದಾಯಗಳು ಪ್ರಾರಂಭವಾದವು. ಇಂದು ಸುಪ್ರೀಂ ಕೋರ್ಟ್ ಕಲಿಕಾ ಮಾಧ್ಯಮ ಪೋಷಕರ ಹಕ್ಕು ಎಂದಿದೆ. ಅಲ್ಲಿ ಮೆಕಾಲೆ ಸಂತೃಪ್ತಿಯಿಂದ ತೇಗಿದ್ದಾನೆ.
ಮಗು ಎಂದರೇನು, ಅದು ಹೇಗೆ ಅರ್ಥಮಾಡಿಕೊಳ್ಳುತ್ತದೆ, ಎಂಬ ಅರಿವಿಲ್ಲದ ಖಾಸಗಿ ಶಾಲಾ ವ್ಯವಸ್ಥಾಪಕರು, ಪೋಷಕನ ತಾಳಕ್ಕೆ ಕುಣಿಯುವುದನ್ನೇ ವ್ಯವಹಾರ ಮಾಡಿಕೊಂಡವು. ಶಾಲೆ ವಿದ್ಯಾರ್ಥಿ ಕೇಂದ್ರಿತವಾಗದೆ ಪೋಷಕ ಕೇಂದ್ರಿತವಾಯಿತು. ಪೂರ್ವಪ್ರಾಥಮಿಕ ಹಂತದಲ್ಲಿ 'ಮಮ್ಮಿ ಡ್ಯಾಡಿ' ಎಂದು ಕರೆಸಿಕೊಳುವುದರಲ್ಲೇ ಬ್ರಹ್ಮಾನಂದ ಕಂಡಿದ್ದ ಹಲವು ಪೋಷಕರು ಪಿಯುಸಿ ನಂತರದಲ್ಲಿ ಫಲಿತಾಂಶ ಕಾಣದೆ ತ್ರಿಶಂಕುಗಳಾಗುತ್ತಾ ಬಂದರು. ಎಲ್ಲಿ ತಪ್ಪಾಯಿತು ಎಂದು ಅವಲೋಕಿಸಲರಿಯದ ಈ ಮೂರ್ಖ ಪರಂಪರೆ, ಇಂದೂ ಮಂದುವರೆದಿರುವುದು ಇತಿಹಾಸದಿಂದ ಯಾವತ್ತೂ ಪಾಠಕಲಿಯದ ರಣಹೇಡಿಗಳೂ ಮತ್ತು ಶತಮೂರ್ಖರೂ ನಾವು ಎಂಬುದನ್ನು ಸಾಬೀತುಪಡಿಸುತ್ತಲೇ ಬರುತ್ತಿದ್ದೇವೆ.
ಅನಿಷ್ಟಕ್ಕೆಲ್ಲ ಶನೀಶ್ವರನೇ ಕಾರಣ ಎಂದು ಆಂಗ್ಲ ಮಾಧ್ಯಮವನ್ನೇನು ದೂಷಿಸುತ್ತಿಲ್ಲ. ಆದರೂ, ಮಾತೃಭಾಷೆ ಮಗುವಿನ ಕಲಿಕೆಯಲ್ಲಿ ಪ್ರಮುಖ ಪಾತ್ರವಹಿಸುತ್ತದೆ. ಮಗು ತನ್ನ ತಾಯ ಗರ್ಭದಿಂದಲೂ ತನ್ನ ಮಾತೃಭಾಷೆಯಲ್ಲೇ ಕಲಿಯುತ್ತಾ ಬಂದಿರುತ್ತದೆ. ಅದು ಮಗುವಿನ ಕಲಿಕಾ ಸಾಮರ್ಥ್ಯವನ್ನು ಹೆಚ್ಚಿಸುತ್ತದೆ. ಮಗು ತನ್ನ ಮಾತೃಭಾಷೆಯನ್ನು ಬಳಸುವಂತೆ, ಅಷ್ಟೇ ಪ್ರಖರವಾಗಿ ಯಾವುದೇ ಪರಭಾಷೆಯನ್ನು ಬಳಸಲಾರ. ಹಾಗಾದರೆ, ಮಗು ಎಂದರೇನು, ಅದು ಹೇಗೆ ಕಲಿಯುತ್ತದೆ ಎಷ್ಟೋ ಪೋಷಕ ಹಾಗೂ ಶಿಕ್ಷಕರ ಪ್ರಕಾರ ಮಗು ಒಂದು ಮಾಂಸದ ಬೊಂಬೆ. ಅದಕ್ಕೆ ಏನೂ ಗೊತ್ತಾಗುವುದಿಲ್ಲ. ಹಿರಿಯರೇ ಎಲ್ಲವನ್ನು ಕಲಿಸಬೇಕು. ಆದರೆ, ಶಿಶುಶಿಕ್ಷಣ ತಜ್ಞರ ಪ್ರಕಾರ, ಪ್ರತಿ ಮಗುವಿಗು ಶಕ್ತಿ-ಸಾಮರ್ಥ್ಯ, ಇತಿ-ಮಿತಿ, ಹಾಗು ಗುಣ-ಸ್ವಭಾವಗಳು ಇರುತ್ತವೆ, ಅದನ್ನರಿತು ಮಗುವಿನ ಅವಶ್ಯಕತೆಗಳನ್ನು ಪೂರೈಸುವುದೇ ಶಿಕ್ಷಣ. ತನ್ನ ಭಾಷೆಯಲ್ಲಿ ಕಲಿಯುವ ಮಗುವಿನ ಮನಸ್ಸು ಅರಳುತ್ತದೆ. ಅರಳಿದ ಮನ ಸದಾ ಚಟುವಟಿಕೆಯಿಂದ ಕೂಡಿರುತ್ತದೆ. ಆಗ ಅದು ಕುತೂಹಲದಿಂದ ಎಲ್ಲವನ್ನು ನೋಡುತ್ತ ನಲಿಯುತ್ತ ಕಲಿಯುತ್ತದೆ.
ಪ್ರಾಥಮಿಕ ಹಂತದಲ್ಲೇ ತನ್ನದಲ್ಲದ ಭಾಷೆಯನ್ನು ಕುರುಡು ಪದ್ಧತಿಗಳಲ್ಲಿ ಕಲಿಯುತ್ತದೆ. ಪರಿಸರದಲ್ಲಿ ಇರದ ಪದಸಂಪತ್ತನ್ನು, ಕೇವಲ ನೆನಪಿನ ಶಕ್ತಿಯ ಆಧಾರದ ಮೇಲೆ ಗಿಳಿಯಂತೆ ಉರು ಹೊಡಿಯುತ್ತದೆ, ಅನುಭವಿಸದೆ ಪುನರ್ ರಚಿಸುತ್ತಾ, ಕಷ್ಟಪಟ್ಟು ಪರಭಾಷೆಯನ್ನು ಬೆಳೆಸಿಕೊಳ್ಳುವುದರಲ್ಲೆ ತನ್ನ ಶಕಿಯನ್ನೆಲ್ಲಾ ವಿನಿಯೋಗಿಸುವ ಮಗು ಕ್ರಿಯಾಶೀಲತೆಯನ್ನು ಕಳೆದುಕೊಳ್ಳುತ್ತದೆ. ಇದರಿಂದಾಗುವ ನಷ್ಟ ಎಂದೆಂದೂ ತುಂಬಲಾಗದ ಸೃಜನಶೀಲತೆಯ ಹಾಗು ಸ್ವಂತಿಕೆಯ ಹರಣ.
ಅನುಭವಕ್ಕೆ ನಿಲುಕದ ಪದಗಳನ್ನು ಅರ್ಥಸಹಿತವಾಗಿ ಸಹಜವಾಗಿ ನೆನಪಿಡುವ ಮತ್ತು ಅರಗಿಸಿಕೊಳ್ಳುವ ಬಗೆಯಾದರು ಹೇಗೆ? ನೆನಪಿನ ಶಕ್ತಿ ಚೆನ್ನಾಗಿರುವ ಮಗು, ಮನೆಯಲ್ಲೂ ಆಂಗ್ಲ ಭಾಷೆಯ ಹೇರಳ ಬಳಕೆಯ ಅವಕಾಶವಿದ್ದರೆ, ರೂಢಿಸಿಕೊಂಡು ಕ್ರಮೇಣ ಇಂಗ್ಲಿಷನ್ನು ತನ್ನದಾಗಿಸಿಕೊಳ್ಳುತ್ತದೆ. ಆದ್ದರಿಂದ ಇಂದಿನ ಶಿಕ್ಷಣ ಪದ್ಧತಿ ಕೇವಲ ನೆನಪಿನ ಶಕ್ತಿಯನ್ನು ಪರೀಕ್ಷಿಸುತ್ತದೆಯೇ ಹೊರತು ಮೇಧಾಶಕ್ತಿಯನ್ನಲ್ಲ. ಆದರೆ, ನಮ್ಮಂಥಾ ದೇಶದಲ್ಲಿ ಎಷ್ಟು ಮಕ್ಕಳಿಗೆ ಆಂಗ್ಲ ಭಾಷೆಯಲ್ಲಿ ಮಾತನಾಡುವ ಅವಕಾಶ ಮನೆಯಲ್ಲಾಗಲಿ, ಪರಿಸರದಲ್ಲಾಗಲಿ ದೊರೆಯತ್ತದೆ? ಮನೆಯಲ್ಲಿ ಇಲ್ಲದ, ಪರಿಸರದಲ್ಲೂ ಇಲ್ಲದ ಭಾಷೆಯಲ್ಲಿ ಶಿಕ್ಷಣ ಕೊಟ್ಟರೆ ಸದಾ ಚಟುವಟಿಕೆಯ ಚಿಲುಮೆಯಂತಿರಬೇಕಿದ್ದ ಆ ನತದೃಷ್ಟ ಮಗು ಕುತೂಹಲವನ್ನು ಕಳೆದುಕೊಂಡು ನಲಿಯುತ್ತಾ ಕಲಿಯುವ ಬದಲು ಸಂಕಟಪಡುತ್ತದೆ. ಇದನರಿಯದ ಪೋಷಕರಿಂದ ಬೈಗುಳಗಳ ಕೇಳಿ, ಶಾಲೆಯಲ್ಲು, ಮನೆಯಲ್ಲು ಹೊಡೆಸಿಕೊಂಡು ಬೇಸತ್ತು, ಸಮಸ್ಯೆಯ ಕೂಸಾಗಿ, ಯಾರಿಗೂ ಬೇಡದ 'ಡಲ್ ಸ್ಟೂಡೆಂಟ್' ಎಂಬ ಹಣೆಪಟ್ಟಿಯೊಂದಿಗೆ ಅನುತ್ತೀರ್ಣನಾಗುತ್ತಾನೆ.
ತನ್ನ ಭಾಷೆಯನ್ನು ಸಲೀಸಾಗಿ ಕಲಿತು ಪರಿಣಾಮಕಾರಿಯಾಗಿ ಬಳಸಿ, ಸ್ವಂತಿಕೆ ಬೆಳೆಸಿಕೊಳ್ಳಬೇಕಿದ್ದ ಮಗು ಇಂದು ಕೆಲಸಕ್ಕೆ ಬಾರದ ಮಗುವಾಗಿ, ಅರಳುವ ಸಮಯದಲ್ಲಿ ಜೀವನಕ್ಕೇ ಇತಿಶ್ರೀ ಹಾಡುವ ನಾಯಿಪಾಡು, ಯಾರನ್ನು ಮೆಚ್ಚಿಸುವ ಸಲುವಾಗಿ ಎಂದು ಪೋಷಕರು ಒಮ್ಮೆ ಅವಲೋಕಿಸಬೇಕಿದೆ. 'ಕನ್ನಡ ಮಾಧ್ಯಮ' ಎಂದು ಹೇಳಿಕೊಳ್ಳಲು ಅದೇನೋ ಒಂದು ರೀತಿಯ ಕೀಳರಿಮೆ. ಅಜ್ಞಾನದಿಂದಾಗಿ ಪೂರ್ವಪ್ರಾಥಮಿಕ ಹಂತದಿಂದಲೂ ಇಂಗ್ಲಿಷ್ ಮಾಧ್ಯಮವೇ ಬೇಕೆಂದು ರಚ್ಚೆಹಿಡಿಯುವ ಹುಚ್ಚು ಮನಸ್ಸಿನ ಪೋಷಕರ ದೃಷ್ಟಿದೋಷಸರಿಮಾಡಬಲ್ಲ ಶಿಕ್ಷಣತಜ್ಞರ ದಂಡು, ಸರಿ ದಾರಿಯಲ್ಲಿ ಕೆಲಸ ಮಾಡಬೇಕಾದ ಇಚ್ಛಾಶಕ್ತಿಯ ಅವಶ್ಯಕತೆ, ಇಂದು ಹಿಂದೆಂದಿಗಿಂತಲೂ ಎದ್ದುಕಾಣುತ್ತಿದೆ.
ಪ್ರಾಥಮಿಕ ಶಾಲಾ ಹಂತದಲ್ಲಿ ಮಗು ತನಗೆ ಅನ್ನಿಸಿದ್ದನ್ನೆಲ್ಲಾ ಹೇಳಲಾಗದುದಕ್ಕೆ ಮೂಲಕಾರಣ ಅದರ ಮಾತೃಭಾಷೆಯಲ್ಲಿನ ಪದಸಂಪತ್ತೇ ತೀರ ವಿರಳವಾಗಿರುತ್ತದೆ. ಇನ್ನು ಈ ಹಂತದಲ್ಲಿ ಶಿಕ್ಷಣ ಮಾಧ್ಯಮ ಇಂಗ್ಲಿಷ್ ಆದರೆ, ಆ ಭಾಷೆಯ ವಿರಳ ಪದಸಂಪತ್ತು ಕಲ್ಪನಾ ಸ್ಪಷ್ಟತೆಯ ಮೇಲೂ ಪ್ರಭಾವ ಬೀರಿ, ಮಗುವಿನ ವಿಷಯ ಗ್ರಹಿಕೆ, ನೆನಪು, ಊಹೆ, ಕಲ್ಪನೆ ಈ ಎಲ್ಲಾ ಕಲಿಕೆಯ ಅಂಗಗಳನ್ನೂ ದುರ್ಬಲಗೊಳಿಸುತ್ತದೆ. ಈ ಹಂತದಲ್ಲಿ ಮಕ್ಕಳಿಗೆ ಕತೆ ಹೇಳುವಾಗ ಪಂಚೇಂದ್ರಿಯಗಳಿಗೆ ನಿಲುಕುವ ಪ್ರಾಣಿ ಪಕ್ಷಿಗಳ ಕತೆ ಹೇಳಬೇಕು. ಕತೆ ಹೇಳುವಾಗ ಪ್ರಶ್ನೆ ಕೇಳಲು ಪ್ರಚೋದಿಸುತ್ತಾ, ಉತ್ತರ ಹೇಳಲು ಹೇರಳ ಅವಕಾಶ ಒದಗಿಸಬೇಕು. ಇಲ್ಲಿ ಇಂಗ್ಲಿಷ್ ಮಾಧ್ಯಮವಾದರೆ ವಿರಳ ಇಂಗ್ಲಿಷ್ ಪದ ಸಂಪತ್ತು, ಪ್ರಾಶ್ನಿಕ ಬುದ್ಧಿಯ ವಿಕಾಸಕ್ಕೆ ಹಾಗು ಮಗುವಿನ ಪ್ರತಿಸ್ಪಂದಿಸುವ ಅವಕಾಶಕ್ಕೆ ವಂಚನೆಯಾಗುತ್ತದೆ. ಹಾಗಾಗಿ, ಪ್ರಾಶ್ನಿಕ ಬುದ್ಧಿ ಇಂದು ಕಾಲೇಜಿನ ವಯೋವಾನದಲ್ಲೂ ಒಂದು ಅಪರೂಪದ ವಿದ್ಯಮಾನವೇ ಸರಿ. ಕಾಲೇಜಿನ ಹಂತದಲ್ಲೂ ತನಗೆ ಏನು ಗೊತ್ತಿಲ್ಲವೋ ಅದನ್ನು ಪ್ರಶ್ನೆ ಮಾಡಿ ತಿಳಿದುಕೊಳ್ಳುವ ಕೌಶಲವನ್ನು ಬೆಳೆಸಿಕೊಳ್ಳದೆ, ಅರೆ ಬರೆಯಿಂದ ಅಸ್ಪಷ್ಟವಾಗಿ ಅರ್ಥಮಾಡಿಕೊಳ್ಳುವುದೇ 'ಶಿಕ್ಷಣ'ವಾಗಿದೆ. ಅವಿದ್ಯಾವಂತ ಬಡ ಕುಟುಂಬದಿಂದ ಬಂದ ಆಂಗ್ಲ ಮಾಧ್ಯಮದ ಮಗುವಿಗೂ, ವಿದ್ಯಾವಂತ ಕುಟುಂಬದಿಂದ ಬಂದ ಆಂಗ್ಲ ಮಾಧ್ಯಮದ ಮಗುವಿನ ನಡುವೆ ಇರುವ ಅಂತರ ಅದರ ಪದಸಂಪತ್ತು ಹಾಗೂ ಮುಕ್ತ ಸಂವಹನದಲ್ಲಿ ವ್ಯಕ್ತವಾಗುತ್ತದೆ.
ಕಲಿಕಾ ಮಾಧ್ಯಮ ಕುರಿತ ಸುಪ್ರೀಂ ತೀರ್ಪು ಸಾಕಷ್ಟು ಗೊಂದಲಗಳಿಗೆ ಎಡೆ ಮಾಡಿದೆ. ಭಾಷೆ ಆಡದೆ ಹೋದರೆ ಮೃತವಾಗುತ್ತದೆ. ಬಳಸುವುದರಿಂದ ಭಾಷೆ ಸಲಿಲವಾಗಿ ಹರಿಯುತ್ತದೆ. ಈ ಘನ ಚರ್ಚೆಯಲ್ಲಿ ನಾಲ್ಕು ರೀತಿಯ ಜನ ಪಾಲ್ಗೊಳ್ಳುತ್ತಿದ್ದಾರೆ. ಒಂದು ದೂರದೃಷ್ಟಿ ಉಳ್ಳ ಜನ. ಎರಡನೆಯವರು ಇವರ ವಿರುದ್ಧದವರು. ತಮ್ಮ ಮಕ್ಕಳನ್ನು ಮೊಮ್ಮಕ್ಕಳನ್ನು ಆಂಗ್ಲ ಮಾಧ್ಯಮದಲ್ಲಿ ಓದಿಸಿ ಬೂಟಾಟಿಕೆಯ ಕನ್ನಡ ಕಾಳಜಿ ತೋರಿಸುವ ಅಸಂಖ್ಯ ಅಸಹ್ಯ ಹೊಣೆಗೇಡಿ 'ಬುದ್ದಿಜೀವಿಗಳು'. ಮೂರನೆಯವರು, ಮಗು ಎಂದರೇನು, ಅದು ಹೇಗೆ ಅರ್ಥಮಾಡಿಕೊಳ್ಳುತ್ತದೆ, ಎಂಬ ಅರಿವಿಲ್ಲದ ಖಾಸಗಿ ಶಾಲಾ ವ್ಯವಸ್ಥಾಪಕರು, ಪೋಷಕರ ತಾಳಕ್ಕೆ ಕುಣಿಯುವುದನ್ನೇ ವ್ಯವಹಾರ ಮಾಡಿಕೊಂಡವರು. ನಾಲ್ಕನೆಯವರು, ಪೋಷಕರು. ಪಾಪ ಪ್ರವಾಹದೊಂದಿಗೆ ತೇಲುವ ಅಮಾಯಕರು. ಇವರಿಗೆ ಇವರ ಮಕ್ಕಳೇ ಬಂಡವಾಳ. ಇನ್ನು ಮುಖ್ಯವಾದ್ದು, ಐದನೇಯದ್ದು ವಿದ್ಯಾರ್ಥಿ. ಇನ್ನೂ ಕಲಿಕಾ ಕೇಂದ್ರಿತವಾಗದ ತನ್ನ ಇಷ್ಟಾನಿಷ್ಟವನ್ನು ವ್ಯಕ್ತಪಡಿಸಲಾಗದ ಅಮಾಯಕ.
ನಮ್ಮ ಸಮಸ್ಯೆಗಳನ್ನು ನಾವೇ ಪರಿಹರಿಸಿಕೊಳ್ಳಬಹುದು ಎಂದರಿಯದ ಅಥವಾ ಅರಿತರೂ ತೆಪ್ಪಗಿರುವ ತಿಳಿಗೇಡಿಗಳ ನಾಡು ನಮ್ಮದು ಎನ್ನಬೇಕಾಗುತ್ತದೆ ಅಷ್ಟೆ.
- ಗಣೇಶ ಪ್ರಸಾದ್ ಮೋಕ್ಷಗುಂಡಂ
ಶಾಲೆಯೊಂದರ ಕಾರ್ಯದರ್ಶಿ