ಗುಲಬರ್ಗದ ಶರಣಬಸವೇಶ್ವರ ಕೆರೆಗೆ ಮರುಜೀವ ಬಂದಾಗ
ಗುಲ್ಬರ್ಗ ನಗರದಲ್ಲಿ ಪ್ಲಾಸ್ಟಿಕ್ ಚೀಲಗಳ ವೈಜ್ಞಾನಿಕ ವಿಲೇವಾರಿ ಯೋಜನೆ ಮತ್ತು...
ಗುಲ್ಬರ್ಗ ನಗರದಲ್ಲಿ ಪ್ಲಾಸ್ಟಿಕ್ ಚೀಲಗಳ ವೈಜ್ಞಾನಿಕ ವಿಲೇವಾರಿ ಯೋಜನೆ ಮತ್ತು ನೇಕಾರರಿಗಾಗಿ ಒಂದು ವಿನೂತನ ಯೋಜನೆ ಬಗ್ಗೆ ಹೋದವಾರ ನಿಮಗೆ ಮಾಹಿತಿ ನೀಡಿದ್ದೆ. ಜನಜಾಗೃತಿ ಜೊತೆಗೆ ಕೆಲವು ಕಠಿಣ ಕ್ರಮಗಳನ್ನು ಸಹ ಆಡಳಿತದ ವತಿಯಿಂದ ತೆಗೆದುಕೊಳ್ಳಬೇಕಾಗುತ್ತದೆ. ಉದಾಹರಣೆಗೆ ನಲವತ್ತು ಮೈಕ್ರೋನ್ಗಿಂತ ಕಡಿಮೆ ಪ್ಲಾಸ್ಟಿಕ್ ಚೀಲಗಳನ್ನು ಉತ್ಪಾದನೆ ಮಾಡುವ ಉದ್ಯಮಗಳನ್ನು ನಿಷೇಧಿಸಲಾಗಿದೆ. ಆದರೂ ಎಲ್ಲಾ ಅಂಗಡಿಗಳಲ್ಲಿ ಈ ಚೀಲಗಳು ಲಭ್ಯವಿರುವುದು ಸರ್ವೇಸಾಮಾನ್ಯ. ಹೀಗಾಗಿ ಒಂದು ಕಡೆ ಕೈಗಾರಿಕೆ ಮತ್ತು ಮಹಾನಗರ ಪಾಲಿಕೆ ಇಲಾಖಾ ಅಧಿಕಾರಿಗಳು ಕ್ರಿಯಾಶೀಲರಾಗುವಂತೆ ಕ್ರಮ ಜರುಗಿಸಲಾಯಿತು. ಇನ್ನೊಂದು ಕಡೆ ಇತರೆ ವ್ಯಾಪಾರಿಗಳ ಸಂಘಗಳ ಪದಾಧಿಕಾರಿಗಳೊಂದಿಗೆ ಮಾತನಾಡಿ ಪ್ಲಾಸ್ಟಿಕ್ ಚೀಲಗಳ ಬದಲು ಬೇರೆ ಪರಿಸರ ಸ್ನೇಹಿ ಚೀಲಗಳನ್ನು ಗ್ರಾಹಕರಿಗೆ ಒದಗಿಸಲು ಕೋರಲಾಯಿತು. ಮಾತ್ರವಲ್ಲ ಮಾರುಕಟ್ಟೆ ಪ್ರದೇಶದಲ್ಲಿ ಬೆಳಿಗ್ಗೆ ಹನ್ನೊಂದು ಗಂಟೆಗೆ ಹೋದರೂ ಕಸದ ರಾಶಿ ಅಂಗಡಿಗಳ ಎದುರು ಕಾಣಿಸುವುದು ಬಹಳ ಅಸಹ್ಯವಾಗಿತ್ತು. ಮಾರಾಟಗಾರರು ಹನ್ನೊಂದು ಗಂಟೆಗೆ ಬಂದು ಅಂಗಡಿಯನ್ನು ತೆರೆದು ಆಗ ಕಸವನ್ನು ಹೊರಗೆ ಹಾಕುತ್ತಾರೆ, ಆದರೆ ಪೌರ ಕಾರ್ಮಿಕರು ಬೆಳಿಗ್ಗೆ ಆರು ಗಂಟೆಯಿಂದ ಏಳೂವರೆ ಗಂಟೆಯವರೆಗೆ ಬೀದಿ ಗುಡಿಸಿ ಹೋಗುತ್ತಾರೆ ಎನ್ನುವುದು ತಿಳಿಯಿತು. ರಸ್ತೆಯ ಮೇಲೆ ಅಥವಾ ರಸ್ತೆ ಬದಿಗಳಲ್ಲಿ ಯಾವುದೇ ಕಸದ ಬುಟ್ಟಿಗಳು ಇರಲಿಲ್ಲ.
ಈ ವಿಷಯವನ್ನು ಮಹಾನಗರ ಪಾಲಿಕೆಯ ಜೊತೆಗೆ ಚರ್ಚಿಸಿದಾಗ, ವ್ಯಾಪಾರಿಗಳ ಅನುಕೂಲತೆಯಂತೆ ಪೌರ ಕಾರ್ಮಿಕರ ಸಮಯ ಬದಲಾವಣೆ ಮಾಡಲು ಒಪ್ಪಿಕೊಂಡರು. ಅದೇ ರೀತಿ ವ್ಯಾಪಾರಿಗಳ ಸಂಘದವರು ಕಸವನ್ನು ಹಾಕಲು ಸ್ವಂತ ಬುಟ್ಟಿಗಳನ್ನು ಕೆಲವು ಕಡೆ ಒದಗಿಸಲು ನಿರ್ಣಯಿಸಿದರು. ಅಲ್ಲಿಯವರೆಗೆ ಮನೆಗಳಿಂದ ಕಸ ಸಂಗ್ರಹಣೆ ಮಾಡುವ ರೀತಿಯಲ್ಲಿ ಅಂಗಡಿಯಿಂದ ಕಸ ಸಂಗ್ರಹಣೆ ಮಾಡಲು ಮೊಬೈಲ್ ಕೈಗಾಡಿಗಳನ್ನು ಮಹಾನಗರ ಪಾಲಿಕೆಯಿಂದ ವ್ಯವಸ್ಥೆ ಮಾಡಲಾಯಿತು. ಜನ ಸಾಮಾನ್ಯರು ತಮ್ಮ ಪರಿಸರವನ್ನು ಸ್ವಚ್ಛವಾಗಿ ಉಳಿಸಿಕೊಳ್ಳಲು ಸರ್ಕಾರಿ ಸಂಸ್ಥೆಗಳಿಗೆ ಸಹಯೋಗ ನೀಡಿದಲ್ಲಿ ಅತಿ ಸುಗಮವಾಗಿ ಕಸ ವಿಲೇವಾರಿ ಮಾಡಬಹುದಾಗಿದೆ. ಇದರಲ್ಲಿ ಜನಪ್ರತಿನಿಧಿಗಳ ಹಾಗೂ ಸಂಘ-ಸಂಸ್ಥೆಗಳ ಪಾತ್ರ ಬಹಳ ಮುಖ್ಯವಾಗಿರುತ್ತದೆ.
ನಗರದ ಇನ್ನೊಂದು ಕಲುಷಿತ ಭಾಗ ಅಂದರೆ ಅದರ ಹೃದಯ ಭಾಗದಲ್ಲಿರುವಂತಹ ಒಂದು ಐತಿಹಾಸಿಕ ಕೆರೆ, ಶರಣಬಸವೇಶ್ವರ ಕೆರೆ ಅಥವಾ ಅಯ್ಯಪ್ಪನ ಕೆರೆ. ಶರಣ ಬಸವೇಶ್ವರ ದೇವಸ್ಥಾನದ ಬದಿಯಲ್ಲಿರುವ ಈ ಕೆರೆ ದೇವಸ್ಥಾನದಷ್ಟೇ ಪ್ರಸಿದ್ಧವಾದುದು. ಶರಣ ಬಸವೇಶ್ವರರ ಸಮಾಧಿ ಇರುವ ಸ್ಥಳವೇ ಪ್ರಸಿದ್ಧ ಶರಣಬಸವೇಶ್ವರ ದೇವಸ್ಥಾನ.
ಹದಿನೆಂಟನೆಯ ಶತಮಾನದಲ್ಲಿ ಗುಲ್ಬರ್ಗಾ ಜಿಲ್ಲೆಯಲ್ಲಿ ಭಯಂಕರ ಬರಗಾಲವುಂಟಾಗಿ, ಜನರು ಬಹಳ ಕಷ್ಟಗಳನ್ನು ಅನುಭವಿಸಬೇಕಾದ ಸಂದರ್ಭ ಎದುರಾಗಿತ್ತು. ಆಗ ಜನರ ಕಷ್ಟಗಳನ್ನು ಕಂಡು ಮರುಗಿ, ರೈತರನ್ನೊಡಗೂಡಿಕೊಂಡು, ಶರಣ ಬಸವೇಶ್ವರರು ಈ ಕೆರೆಯ ನಿರ್ಮಾಣ ಮಾಡಿ ಜನರ ಬೇಗೆಗೆ ತಂಪನ್ನೆರೆದಿದ್ದರು. ಇಂಥ ಐತಿಹಾಸಿಕ ಶರಣಬಸವೇಶ್ವರ ಕೆರೆಯಲ್ಲಿ ಬಹಳ ವರ್ಷದಿಂದ ನೀರು ಸಂಗ್ರಹಣೆ ಆಗದೇ ಎಲ್ಲಾ ರೀತಿಯ ಕಸ ಸೇರಿ ರಾಶಿಯಾಗಿ ದುರ್ನಾತ ಬೀರುತ್ತಿತ್ತು. ಇಂಥದ್ದೇ ಪರಿಸ್ಥಿತಿಯನ್ನು ನಾನು ಬೆಳಗಾವಿಯಲ್ಲಿ ಕಂಡಿದ್ದೆ. ನಗರೀಕರಣದಿಂದಾಗಿ ಕೆರೆಗಳು ಮಾಯವಾಗಿ ಕೆರೆಯ ಸುತ್ತಮುತ್ತಲೂ ಕಾಂಕ್ರೀಟ್ ಕಟ್ಟಡಗಳು ತೆಲೆಎತ್ತುತ್ತಿರುವುದು ಈ ದಿನಗಳಲ್ಲಿ ಸರ್ವೇಸಾಮಾನ್ಯ. ಇದಕ್ಕೆ ಅಪವಾದ ಎಂಬಂತೆ ಗುಲಬರ್ಗಾದ ಇತಿಹಾಸ ಹಾಗೂ ಸೌಹಾರ್ದತೆ ಸಾರುವ ಬಹಮನಿ ಕೋಟೆ ಹಾಗೂ ಶ್ರೀ ಶರಣಬಸವೇಶ್ವರ ದೇವಸ್ಥಾನದಿಂದ ಸುತ್ತುವರೆದ ಐವತ್ತೈದು ಎಕರೆ ವಿಶಾಲ ಪ್ರದೇಶದಲ್ಲಿ ಹರಡಿಕೊಂಡಿರುವ ಶರಣಬಸವೇಶ್ವರ ಕೆರೆಯನ್ನು ಈ ಹಿಂದೆ ವಿವಿಧ ಕೆಲಸಗಳಿಗಾಗಿ ಉಪಯೋಗಿಸಿ ಹಾಳುಗೆಡವಲಾಗಿತ್ತು. ಇದರಿಂದಾಗಿ ಕೆರೆಗೆ ನೀರಿನ ಹರಿವಿನ ಕೊರತೆಯಿಂದ ಕೆರೆಯ ಸುತ್ತಲೂ ಅಂತರ್ಜಲ ಮಟ್ಟ ಕಡಿಮೆಯಾಗಿತ್ತು, ದನಗಳ ಮೈತೊಳೆಯುವುದು, ಬಟ್ಟೆ ಒಗೆಯುವುದು, ಮಕ್ಕಳು ಈಜಾಡುವುದು, ಗಣಪತಿ ವಿಸರ್ಜನೆಯಿಂದ ರಾಸಾಯನಿಕ ಪದಾರ್ಥಗಳು ಸೇರಿಕೊಂಡು ಕೆರೆಯ ಸುತ್ತಲೂ ದುರ್ವಾಸನೆ, ಕೆರೆಯ ಸುತ್ತಿನ ಪ್ರದೇಶದಲ್ಲಿ ಸೊಳ್ಳೆಗಳ, ಕ್ರಿಮಿಕೀಟಗಳ ಕಾಟಗಳಿಂದ ಕೆರೆ ನಿರುಪಯುಕ್ತವಾಗಿತ್ತು. ಆಗ ಈ ಕೆರೆಯ ಪುನಃಶ್ಚೇತನದಿಂದ ಆಗುವ ಪ್ರಯೋಜನಗಳ ಬಗ್ಗೆ ಗಂಭೀರವಾಗಿ ಚರ್ಚಿಸಿದಾಗ ಕೆಳ ಕಂಡ ಅಂಶಗಳು ಗಮನಕ್ಕೆ ಬಂದವು.
ಅಂತರ್ಜಲ ಸಂರಕ್ಷಣೆ ಮತ್ತು ಅಂತರ್ಜಲ ಮಟ್ಟ ಏರಿಕೆಯಾಗುತ್ತದೆ. ಶರಣಬಸವೇಶ್ವರ ಕೆರೆಗೆ ಮಳೆ ನೀರಿನ ಸಂಗ್ರಹಣೆ ಜೊತೆಗೆ ಗುಲ್ಬರ್ಗಾ ನಗರದ ನೀರು ಶುದ್ಧೀಕರಣ ಘಟಕದಿಂದ ಹೊರಬಿಡಲಾಗುತ್ತಿರುವ ನೀರನ್ನು ಬಳಸಿಕೊಂಡು, ಕೆರೆಯ ನೀರಿನ ಮಟ್ಟವನ್ನು ಕಾಪಾಡಿಕೊಂಡು ಬರಬಹುದು. ಈ ವ್ಯವಸ್ಥೆಯಿಂದಾಗಿ ಕೆರೆಯ ಸುತ್ತ ಐದು ಕಿ.ಮಿ. ವ್ಯಾಪ್ತಿಯಲ್ಲಿ ಅಂತರ್ಜಲದ ಮಟ್ಟ ಹೆಚ್ಚಾಗುತ್ತದೆ. ಶುಷ್ಕ ಗುಲಬರ್ಗಾದಲ್ಲೊಂದು ಹಸಿರು ಓಯಸಿಸ್ ಹುಟ್ಟಿಕೊಳ್ಳುತ್ತದೆ. ಅಂತರ್ಜಲ ಮಟ್ಟದ ಸಂರಕ್ಷಣೆಯ ಜೊತೆಗೆ ಶುದ್ಧವಾದ ಆಮ್ಲಜನಕ ಉತ್ಪಾದನೆಗಾಗಿ ಹಚ್ಚ ಹಸಿರು ಸಸಿಗಳನ್ನು, ಗಿಡಗಳನ್ನು ನೆಟ್ಟು, ಪ್ರಕೃತಿಯ ಸೌಂದರ್ಯವನ್ನು ಹೆಚ್ಚಿಸುವ ನಿಟ್ಟಿನಲ್ಲಿ ಬಗೆ ಬಗೆಯ ಹೂಗಳನ್ನು ಕೂಡ ಬೆಳೆಸಿ ಆಕರ್ಷಣೆಯನ್ನುಂಟುಮಾಡಬಹುದು.
ಇನ್ನು ಗುಲ್ಬರ್ಗ ನಗರದಲ್ಲಿರುವ ಹಲವು ಪ್ರಮುಖ ಪ್ರವಾಸಿ ತಾಣಗಳಲ್ಲಿ ಶರಣಬಸವೇಶ್ವರ ಕೆರೆ ಹಾಗೂ ಉದ್ಯಾನವನವು ಕೂಡ ಒಂದಾಗಿರುವುದರಿಂದ ಆಗ ಅದು ಪ್ರವಾಸಿಗರ ಆಕರ್ಷಣೆಯ ಕೇಂದ್ರವಾಗುತ್ತದೆ. ಮಕ್ಕಳ ಆಟಕ್ಕಾಗಿ ಜೋಕಾಲಿಗಳು, ಜಾರುಬಂಡಿ, ವಿದ್ಯುತ್ ಚಾಲಿತ ಆಟಿಕೆಗಳು ಸ್ಥಾಪಿಸಿ ಮಕ್ಕಳನ್ನು ಕೆರೆಯ ಉದ್ಯಾನವನಕ್ಕೆ ಸೆಳೆಯಬಹುದು. ಪಕ್ಷಿ ಧಾಮ ಹಾಗೂ ಪರಿಸರ ಸ್ನೇಹಿ ವಾತಾವರಣ ಉದ್ಭವವಾಗುತ್ತದೆ. ಕೆರೆಯಿಂದ ಹೊರತೆಗೆದ ಹೂಳನ್ನು ಉಪಯೋಗಿಸಿ ಕೆರೆಯ ನಡುವೆ ಸುಮಾರು ಮುಕ್ಕಾಲು ಎಕರೆ ಪ್ರದೇಶದಲ್ಲಿ ಪಕ್ಷಿ ಸಂಕುಲಗಳ ಆಶ್ರಯಕ್ಕೆ ಸಹಕಾರಿಯಾಗುವಂತೆ ನಡುಗಡ್ಡೆ ನಿರ್ಮಿಸಿ, ಅಲ್ಲಿ ಮಾನವ ಪ್ರವೇಶವನ್ನು ನಿಷೇಧಿಸಬಹುದು. ಕನಿಷ್ಠ ನೂರು ಜನರಿಗೆ ನೇರ ಮತ್ತು ಪರೋಕ್ಷವಾಗಿ ಉದ್ಯೋಗ ಸೃಷ್ಟಿ.
ಈ ಕೆರೆ ಅಭಿವೃದ್ಧಿಯಿಂದಾಗಿ ಕೂಲಿ ಕಾರ್ಮಿಕರಿಗೆ ಹಾಗೂ ನಿರುದ್ಯೋಗಿಗಳಿಗೆ ಕೆಲಸ ನೀಡಬಹುದಾಗಿದೆ. ಅಲ್ಲದೆ ಕೆರೆಯ ಸುತ್ತಮುತ್ತ ಸಿಹಿ ತಿನಿಸು, ಚಾಟ್ಸ್, ಮಕ್ಕಳ ಆಟಿಕೆ ಮುಂತಾದ ಮಾರಾಟಗಾರರ ಸಣ್ಣ ಕುಟುಂಬಗಳಿಗೆ ನೆರವಾಗಬಹುದು. ಆರೋಗ್ಯವೆ ಭಾಗ್ಯ. ಆರೋಗ್ಯಕ್ಕಿಂತ ಹೆಚ್ಚಿನ ಆಸ್ತಿ ಇನ್ನಾವುದೂ ಈ ಜಗತ್ತಿನಲ್ಲಿಲ್ಲ. ಅರೋಗ್ಯಕರವಾಗಿ ನಮ್ಮ ದೇಹವನ್ನು ಸದೃಢಪಡಿಸಿಕೊಳ್ಳಲು ಶುದ್ಧ ವಾತಾವರಣ ಮತ್ತು ಆಮ್ಲಜನಕದ ಅವಶ್ಯಕತೆ ಇರುತ್ತದೆ.
ಜೀವವೈವಿಧ್ಯ ಮತ್ತು ಪರಿಸರ ಸಂರಕ್ಷಣೆಯ ದೃಷ್ಟಿಯಿಂದ ಕೇಂದ್ರ ಸರ್ಕಾರ ಮತ್ತು ಅರಣ್ಯ ಮಂತ್ರಾಲಯದ ಆದೇಶಾನುಸಾರ 02-05-2005 ರಿಂದ ಶರಣಬಸವೇಶ್ವರ ಕೆರೆಯ ಅಭಿವೃದ್ಧಿ ಕಾಮಗಾರಿಯನ್ನು ಪ್ರಾರಂಭಗೊಳಿಸಲಾಯಿತು. ಕೇಂದ್ರ ಸರ್ಕಾರದ ಶೇಕಡಾ ಎಪ್ಪತ್ತು ಹಾಗೂ ರಾಜ್ಯ ಸರ್ಕಾರದ ಶೇಕಡಾ ಮೂವತ್ತರ ಪಾಲುಗಾರಿಕೆಯಲ್ಲಿ ಅಭಿವೃದ್ಧಿಯಾಗಲಿದ್ದ ಶರಣಬಸವೇಶ್ವರ ಕೆರೆಯ ಒಟ್ಟು ಅಂದಾಜು ವೆಚ್ಚ ರು. 536.35 ಲಕ್ಷ ಆಗಿದ್ದು ಇದರಲ್ಲಿ ಕೇಂದ್ರದಿಂದ ರು. 325 ಲಕ್ಷ ಹಾಗೂ ರಾಜ್ಯದಿಂದ ರೂ. 96.55 ಲಕ್ಷ ಅನುದಾನ ಸ್ವೀಕೃತವಾಗಿರುತ್ತದೆ. ಆದರೂ ಕೆರೆಯ ಸಂಪೂರ್ಣ ಅಭಿವೃದ್ಧಿ ಆಗದೇ ಅದರಲ್ಲಿ ಸ್ವಚ್ಛ ನೀರು ಸಂಗ್ರಹಣೆ ಕಠಿಣ ಸವಾಲಾಗಿತ್ತು.
14-06-2008 ರಂದು ಕರ್ನಾಟಕ ಸರ್ಕಾರದ ಮುಖ್ಯಮಂತ್ರಿಗಳಿಂದ ಕೆರೆಯನ್ನು ಉದ್ಘಾಟಿಸಿ ಕೆರೆಯ ನವೀಕರಣಕ್ಕೆ ಚಾಲನೆ ನೀಡಲಾಯಿತು. ಕರ್ನಾಟಕ ಸರ್ಕಾರದ ಆದೇಶದಂತೆ ಗುಲ್ಬರ್ಗಾ ಕಂದಾಯ ವಿಭಾಗದ ಪ್ರಾದೇಶಿಕ ಆಯುಕ್ತರಾಗಿದ್ದ ಡಾ. ರಜನೀಶ್ ಗೋಯಲ್ ಮೇ 2009 ರಲ್ಲಿ ಕೆರೆಯ ನವೀಕರಣ ಕಾಮಗಾರಿಗಳ ಮೇಲುಸ್ತುವಾರಿ ವಹಿಸಿಕೊಂಡು ವಿವಿಧ ಅಭಿವೃದ್ಧಿ ಕಾರ್ಯಗಳನ್ನು ಕೈಗೊಂಡರು.
ಮುಂದಿನ ವಾರ ಆ ಕೆರೆ ಯಾವ ರೀತಿ ಮರುಜನ್ಮ ಪಡೆಯಿತು ಎಂಬುದರ ಬಗ್ಗೆ ತಿಳಿಸುತ್ತೇನೆ.
- ಶಾಲಿನಿ ರಜನೀಶ್, ಐಎಎಸ್
anisikeprabha@gmail.com