ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಅಂಕಣಗಳು

ಕನ್ನಡ ಭಾಷೆ ಉಳಿಯಲು ಹಳ್ಳಿಯ ಶಾಲೆ ಉಳಿಯಬೇಕು

Mainashree
Updated On : 21 May 2014, 9:54 am

ಕನ್ನಡ ಭಾಷೆಯ ಅಳಿವು-ಉಳಿವಿನ ಬಗ್ಗೆ ಎಲ್ಲರೂ ಚಿಂತಿಸುವ ಸಂದರ್ಭ ಕೂಡಿ ಬಂದಿದೆ. "ವಿದ್ಯಾರ್ಥಿಗಳ ಮೇಲೆ ಭಾಷಾ ಮಾಧ್ಯಮ ಹೇರುವ ಹಕ್ಕು ರಾಜ್ಯ ಸರ್ಕಾರಕ್ಕೆ ಇಲ್ಲವೇ ಇಲ್ಲ" ಎಂಬ ಐತಿಹಾಸಿಕ ತೀರ್ಪನ್ನು ಸುಪ್ರೀಂಕೋರ್ಟ್ ನೀಡಿದೆ. ಈ ನೆಲೆಯಲ್ಲಿ ಸಮಸ್ತ ಕನ್ನಡಿಗರು ಯೋಚಿಸಬೇಕಾಗಿದೆ. 'ಕನ್ನಡ ಭಾಷೆಯ ಹಂಗಿಲ್ಲದೇ ನಾವು ಬದುಕಬಲ್ಲೆವು' ಎಂದು ಹೇಳುವ ಒಂದು ವರ್ಗವಿರಬಹುದು. ಅವರಿಗೆ ಈ ತೀರ್ಪು ತೃಪ್ತಿ ತಂದಿರಬಹುದು. ಮತ್ತೆ ಆಂಗ್ಲ ಮಾಧ್ಯಮದತ್ತ ಪೋಷಕರ ಒಲವು ಹೆಚ್ಚಾಗಬಹುದು. ನಗರ ಪ್ರದೇಶಗಳಲ್ಲಿ ಮಾತ್ರ ಆಂಗ್ಲ ವ್ಯಾಮೋಹವಿತ್ತು. ಆದರೆ ಈಗ ಗ್ರಾಮೀಣ ಪ್ರದೇಶದಲ್ಲೂ ಆಂಗ್ಲ ಮಾಧ್ಯಮದ ವ್ಯಾಮೋಹ ಅತಿಯಾಗಿದೆ. ಮೂರು ಮನೆ ದೊಡ್ಡಿಯಲ್ಲಿರುವ ಪೋಷಕರು ತಮ್ಮ ಮಕ್ಕಳನ್ನು ಆಂಗ್ಲ ಮಾಧ್ಯಮ ಶಾಲೆಗಳಿಗೆ ಸೇರಿಸುತ್ತಿದ್ದಾರೆ. ಖಾಸಗಿ ಶಾಲೆಯವರು ಹಳ್ಳಿ-ಹಳ್ಳಿಗಳಿಗೆ ಹೋಗಿ ಪ್ರಚಾರ ಮಾಡಿ ಇಲ್ಲ-ಸಲ್ಲದ ಆಸೆ ಆಮಿಷಗಳನ್ನು ತೋರಿ ಪೋಷಕರ ಮನ ಒಲಿಸುವುದರಲ್ಲಿ ಯಶಸ್ವಿಯಾಗುತ್ತಿದ್ದಾರೆ. ಅಲ್ಲದೇ ಮಕ್ಕಳನ್ನು ಕರೆದುಕೊಂಡು ಹೋಗಿ ಬರಲು ಮನೆಯ ಬಾಗಿಲಿಗೆ ವಾಹನಗಳನ್ನು ಬಿಡುತ್ತಿದ್ದಾರೆ. ಪೋಷಕರು "ಕನ್ನಡದಲ್ಲಿ ಓದಿದರೆ ನಮ್ಮ ಮಕ್ಕಳು ಉದ್ಧಾರವಾಗುವುದಿಲ್ಲ" ಎಂದು ಆಂಗ್ಲ ಮಾಧ್ಯಮಕ್ಕೆ ಸೇರಿಸುತ್ತಿದ್ದಾರೆ. ಇದರಿಂದ ಸಾವಿರಾರು ಶಾಲೆಗಳು ಮುಚ್ಚಿವೆ, ಮುಚ್ಚುತ್ತಿವೆ. ಅಷ್ಟೇ ಪ್ರಮಾಣದಲ್ಲಿ ಖಾಸಗಿ ಶಾಲೆಗಳು ತಲೆಯೆತ್ತುತ್ತಿವೆ. ಇದಕ್ಕೆ ಅನೇಕ ಕಾರಣಗಳಿರಬಹುದು. ಅವುಗಳನ್ನೆಲ್ಲ ಈಗ ಹುಡುಕುತ್ತ ಕುಳಿತರೆ ಬಣವೆಗೆ ಬೆಂಕಿ ಬಿದ್ದಾಗ ಬಾವಿ ತೋಡಿದಂತಾಗುತ್ತದೆ.
ಸರ್ಕಾರಿ ಶಾಲೆಗಳಿಗೆ ಸರ್ಕಾರ ಅನೇಕ ಸೌಲಭ್ಯಗಳನ್ನು ನೀಡುತ್ತಿದೆ. ಕುಡಿಯುವ ನೀರು, ಶೌಚಾಲಯ, ಉಚಿತ ಬಟ್ಟೆ-ಪುಸ್ತಕ, ಮಧ್ಯಾಹ್ನದ ಬಿಸಿಯೂಟ, ಕ್ಷೀರ ಯೋಜನೆ, ಚಿಣ್ಣರ ದರ್ಶನ, ಉಚಿತ ಶಿಕ್ಷಣ ಹೀಗೆ ಹತ್ತು ಹಲವು ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದರೂ ಸರ್ಕಾರಿ ಶಾಲೆಗಳಿಗೆ ಮಕ್ಕಳು ದಾಖಲಾಗುತ್ತಿಲ್ಲ. ಇಷ್ಟೆಲ್ಲ ಅನುಕೂಲತೆಗಳಿದ್ದರೂ ಪೋಷಕರ ಮನಸ್ಸು ಖಾಸಗಿ ಶಾಲೆಯತ್ತ ಹರಿಯುತ್ತಿದೆ. ಸುಮಾರು 20 ಸಾವಿರದಿಂದ 40 ಸಾವಿರದವರೆಗೆ ಶುಲ್ಕ ಕೊಟ್ಟು ತಮ್ಮ ಮಕ್ಕಳನ್ನು ಖಾಸಗಿ ಶಾಲೆಗಳಿಗೆ ಸೇರಿಸುತ್ತಿದ್ದಾರೆ. ಹಾಗಾದರೆ ಸರ್ಕಾರಿ ಶಾಲೆಗಳಲ್ಲಿರುವ ಕೊರತೆ ಏನು? ಇದು ನಿಗೂಢವಾಗಿದೆ. 'ಹಳ್ಳಿಯ ಶಾಲೆ ಉಳಿದರೆ ಕನ್ನಡ ಭಾಷೆ ಉಳಿಯುತ್ತದೆ.' ಈ ನೆಲೆಯನ್ನು ಸರ್ಕಾರ ಮನಗಾಣಬೇಕು.
ಹಳ್ಳಿಯ ರೈತನ ಮಗ ಹಳ್ಳಿಯ ಶಾಲೆಯಲ್ಲಿ ಆಂಗ್ಲ ಭಾಷೆಯನ್ನು ಅಭ್ಯಾಸ ಮಾಡುವ ವಾತಾವರಣ ಸೃಷ್ಟಿಯಾಗಬೇಕು. ಈಗಾಗಲೇ 2003-04ರಿಂದಲೂ ಒಂದನೇ ತರಗತಿಯಿಂದಲೇ ಆಂಗ್ಲಭಾಷೆಯ ಪರಿಚಯ ಮಾಡಿಸುವ ಕೆಲಸ ಆಗಿದೆ. ಆದರೆ ಇದು ಎಷ್ಟರಮಟ್ಟಿಗೆ ಯಶಸ್ವಿಯಾಗಿದೆ? ಮಕ್ಕಳಿಗೆ ಇದರಿಂದ ಅನುಕೂಲವಾಗಿದೆಯೇ? ವರ್ಷ-ವರ್ಷವೂ ಒಂದರಿಂದ ನಾಲ್ಕನೇ ತರಗತಿವರೆಗೆ ಆಂಗ್ಲ ಭಾಷೆಯ ಒಂದು ಪುಸ್ತಕವನ್ನು ಸಹ ಇತರ ಪಠ್ಯ ಪುಸ್ತಕಗಳ ಜೊತೆ ಕೊಡಲಾಗುತ್ತಿದೆ. ಟಿಸಿಎಚ್ ಮಾಡಿರುವ ಶಿಕ್ಷಕರು ಈ ಪಠ್ಯಪುಸ್ತಕವನ್ನು ಓದಿ ಮಕ್ಕಳಿಗೆ ಕಲಿಸಲು ಎಷ್ಟು ಮಂದಿ ಸಮರ್ಥರಾಗಿದ್ದಾರೆ? ಇಲ್ಲಿಯೇ ಯೋಜನೆ ಯಶಸ್ವಿಯಾಗದಿರುವುದು. ಪೋಷಕರ ಮನಸ್ಸಿಗೆ ಬಾರದಿರುವುದು. ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಹತ್ತರಿಂದ ಇಪ್ಪತ್ತು ಮಕ್ಕಳಿರುವ ಕಡೆ ಒಬ್ಬರೇ ಶಿಕ್ಷಕರಿರುತ್ತಾರೆ. ಮೂವತ್ತರಿಂದ ನಲವತ್ತು ಮಕ್ಕಳಿರುವ ಹಿರಿಯ ಪ್ರಾಥಮಿಕ ಶಾಲೆಗಳಲ್ಲಿ ಸಾಮಾನ್ಯವಾಗಿ ಇಬ್ಬರು ಶಿಕ್ಷಕರಿರುತ್ತಾರೆ. ಶಿಕ್ಷಕರ ಕೊರತೆ ಇರುವ ಕಡೆ ಒಬ್ಬರೇ 'ಸಕಲ ಕಲಾವಲ್ಲಭ'ರಾಗಿರುತ್ತಾರೆ. ಇಂತಹ ಸಂದರ್ಭದಲ್ಲಿ ಆ ಶಿಕ್ಷಕರು ತಮ್ಮ ಮೇಲಿರುವ ಬಿಸಿಯೂಟದ ನಿರ್ವಹಣೆ, ಕ್ಷೀರ ಯೋಜನೆ ಆಗಾಗ ಇಲಾಖೆ ಕೇಳುವ ಮಾಹಿತಿ ರವಾನೆ, ಇತ್ಯಾದಿ ಅನೇಕ ಕಾರ್ಯ ಒತ್ತಡದಲ್ಲಿ ಸಮರ್ಪಕ ಎಲ್ಲ ವಿಷಯಗಳ ಪಾಠ ಬೋಧನೆ ಹೇಗೆ ಸಾಧ್ಯ? 'ಮಕ್ಕಳ ಸಂಖ್ಯೆಗೆ ಅನುಗುಣವಾಗಿ ಶಿಕ್ಷಕರಿದ್ದಾರೆ' ಎಂದು ಅಂಕಿ- ಅಂಶ ಹೇಳಿದರೆ ಎಲ್ಲವನ್ನೂ ನಿರ್ವಹಿಸಿಕೊಂಡು ಮಗುವಿನ ಕಲಿಕೆಗೆ ಯಾವ ರೀತಿ ಒತ್ತು ಕೊಡಲು ಸಾಧ್ಯ? ಕೇವಲ ಭೌತಿಕವಾಗಿ ಶಾಲೆ ಅಭಿವೃದ್ಧಿ ಹೊಂದಿದರೆ ಸಾಲದು. ಶೈಕ್ಷಣಿಕವಾಗಿಯೂ ಅಭಿವೃದ್ಧಿಯಾಗಬೇಕಾಗಿದೆ. ಕಿರಿಯ ಹಾಗೂ ಹಿರಿಯ ಪ್ರಾಥಮಿಕ ಶಾಲೆಗಳಲ್ಲಿ ನುರಿತ ಆಂಗ್ಲ ಶಿಕ್ಷಕರೊಬ್ಬರು ಕಡ್ಡಾಯವಾಗಿ ಇರಬೇಕು. ಇವರಿಗೆ ಇಂಗ್ಲಿಷ್ ಕಲಿಸುವುದನ್ನು ಬಿಟ್ಟರೆ ಬೇರೆ ಜವಾಬ್ದಾರಿ ಹೇರಬಾರದು. ಒಂದನೇ ತರಗತಿಯ ಇಂಗ್ಲಿಷ್ ಪುಸ್ತಕ ಸಚಿತ್ರವಾಗಿ ಸರಳ ಪದಗಳನ್ನೊಳಗೊಂಡಿರಬೇಕು. ಖಾಸಗಿ ಶಾಲೆಗಳಲ್ಲೂ ಕೂಡ ಅದೇ ರೀತಿ ಇದೆ. ಆ,ಆಠಠಟಜ, ಇ, ಇ್ಟಣ, ಈ.ಈಛಡಿ...
ಈ ರೀತಿಯ ಪದ ಪರಿಚಯ ಒಂದನೇ ತರಗತಿಯಲ್ಲಾಗಬೇಕು. ಎರಡನೇ ತರಗತಿಯಲ್ಲಿಯೂ ಮಗು ಹೆಚ್ಚು-ಹೆಚ್ಚು ಇಂಗ್ಲಿಷ್ ಪದ ಸಂಪತ್ತನ್ನು ಗಳಿಸುವಂತಾಗಬೇಕು. ಮೂರನೇ ತರಗತಿಯಲ್ಲಿ ಸರಳ ವಾಕ್ಯಗಳನ್ನು ಓದುವುದು ಬರೆಯುವುದು ಆಗಬೇಕು. ನಾಲ್ಕನೇ ತರಗತಿಯಲ್ಲಿ ಸಣ್ಣ -ಸಣ್ಣ ಕಥೆಗಳು, ಕವಿತೆಗಳಿರಬೇಕು. ನಾಲ್ಕನೇ ತರಗತಿ ಮುಗಿಯುವಷ್ಟರಲ್ಲಿ ಮಗು ಸರಳ ಇಂಗ್ಲಿಷ್ ಓದುವುದು, ಬರೆಯುವುದು ಮಾಡಬೇಕು. ಇದು ಸರ್ಕಾರಿ ಶಾಲೆಗಳಲ್ಲಿ ಕಡ್ಡಾಯವಾಗಿ ನಡೆದುದ್ದೇ ಆದರೆ ಕನ್ನಡ ಭಾಷೆ ಉಳಿಯುತ್ತದೆ, ಬೆಳೆಯುತ್ತದೆ.
ಕೇಂದ್ರೀಯ ಹೊಸ ಶಿಕ್ಷಣ ನೀತಿ ಕರ್ನಾಟಕದಲ್ಲೂ ಜಾರಿಗೆ ಬರುತ್ತಿದೆ. ಒಂದರಿಂದ ಐದನೇ ತರಗತಿ, ಆರರಿಂದ ಎಂಟನೇ ತರಗತಿ, ಒಂಭತ್ತರಿಂದ ಹನ್ನೆರಡನೇ ತರಗತಿಗಳಾಗಿ ವಿಂಗಡಿಸಿ ಆಯಾ ಹಂತಗಳಿಗೆ ಅನುಗುಣವಾಗಿ ಶಿಕ್ಷಕರ ನೇಮಕ ಕೂಡ ಆಗುವಂತಿದೆ. ಡಿ.ಎಡ್. (ಟಿಸಿಹೆಚ್) ಮಾಡಿದವರು ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಪದವಿ ಹಾಗೂ ಬಿ.ಎಡ್. ಮಾಡಿದವರು ಹಿರಿಯ ಪ್ರಾಥಮಿಕ ಶಾಲೆಗಳಲ್ಲಿ ಸ್ನಾತಕೋತ್ತರ ಹಾಗೂ ಬಿ.ಎಡ್. ಮಾಡಿದವರು ಪ್ರೌಢಶಾಲೆಗಳಲ್ಲಿ ನೇಮಕ ಮಾಡುವುದು ಸೂಕ್ತವಾದದ್ದು.
ಹತ್ತನೇ ತರಗತಿವರೆಗೆ ಕನ್ನಡ ಮಾಧ್ಯಮದಲ್ಲಿ ಓದಿದ ಮಕ್ಕಳಿಗೆ ಮತ್ತಷ್ಟು ಸಡಿಲಿಸಿದರೆ ಒಳ್ಳೆಯದು. ಒಂದರಿಂದ-ಎಂಟನೇ ತರಗತಿವರೆಗೆ ಕನ್ನಡ ಮಾಧ್ಯಮದಲ್ಲಿ ವ್ಯಾಸಂಗ ಮಾಡಿದವರಿಗೆ ಶೇಕಡಾ ಹದಿನೈದರಷ್ಟು ಕಾಯ್ದಿರಿಸಿದರೆ ಪೋಷಕರಲ್ಲಿ ಕನ್ನಡ ಮಾಧ್ಯಮದತ್ತ ಆಸೆ ಉಂಟಾಗುವುದು. ಆಗ ಕನ್ನಡ ಮಾಧ್ಯಮದತ್ತ ತಮ್ಮ ಮಕ್ಕಳನ್ನು ಸೇರಿಸುತ್ತಾರೆ. ಜೊತೆ-ಜೊತೆಯಲ್ಲಿ ಆಂಗ್ಲ ಭಾಷೆ ಕಲಿಕೆಯಾಗುವುದರಿಂದ ಆಂಗ್ಲ ಮಾಧ್ಯಮದ ವ್ಯಾಮೋಹ ಕಡಿಮೆಯಾಗುತ್ತದೆ. ಇಲ್ಲವಾದರೆ ಇಂತಹ ನೂರೆಂಟು ಯೋಜನೆಗಳು ಬಂದರೂ ಪೋಷಕರ ಮನಸ್ಸು ಸರ್ಕಾರಿ ಶಾಲೆಗಳತ್ತ ಹರಿಯುವುದಿಲ್ಲ. ದಿನ ಉರುಳಿದಂತೆ ತನಗೆ-ತಾನೆ ಸರ್ಕಾರಿ ಶಾಲೆಗಳು ಮುಚ್ಚುತ್ತವೆ. ಕನ್ನಡ ಭಾಷೆ ಸಂಕಷ್ಟಕ್ಕೆ ಸಿಲುಕುತ್ತದೆ. ಆದ್ದರಿಂದ ಶಿಕ್ಷಕರಿಗೆ ಬೇರೆ-ಬೇರೆ ಜವಾಬ್ದಾರಿಗಳು ಕಡಿಮೆಯಾಗಬೇಕು. ಹತ್ತರಿಂದ ನಾಲ್ಕರವರೆಗೆ ತರಗತಿ ಕೋಣೆಯಲ್ಲಿ ಶಿಕ್ಷಕರು ಉಳಿಯಬೇಕು. ಇಂಗ್ಲಿಷ್ ಬೋಧನೆಗೆ ಒಬ್ಬರು ಇರಲೇಬೇಕು. ಹೀಗೆ ನಮ್ಮ ಹಂತದಲ್ಲೇ ಅನೇಕ ಬದಲಾವಣೆಗಳನ್ನು ಮಾಡಿಕೊಂಡರೆ ಸರಕಾರಿ ಶಾಲೆಗಳು ಉಳಿಯುತ್ತವೆ. ಕನ್ನಡ ಭಾಷೆ ಉಳಿಯುತ್ತದೆ. ಈ ನೆಲೆಯಲ್ಲಿ ಎಲ್ಲರ ಮನಸ್ಸೂ ಒಂದಾಗಬೇಕಿದೆ.

= ಸಾ.ಮ. ಶಿವಮಲ್ಲಯ್ಯ
ಸಾಸಲಾಪುರ


Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement