ಅನಂತಮೂರ್ತಿಗಳೇ ನಿಜವಾದ ಫ್ಯಾಸಿಸ್ಟ್ ಯಾರು?
'ನರೇಂದ್ರ ಮೋದಿ ಪ್ರಧಾನಿಯಾದರೆ ತಾವು ಭಾರತದಲ್ಲಿ ಇರಲು ಇಚ್ಛೆ ಪಡುವುದಿಲ್ಲ' ಎಂಬ ಅನಂತಮೂರ್ತಿಯವರ ಹೇಳಿಕೆ ಈಗ ಸಾಮಾಜಿಕ ಮಾಧ್ಯಮದಲ್ಲಿ ಜೋರು ಚರ್ಚೆಯಾಗುತ್ತಿದೆ. ಒಂದು ಕ್ಷಣಕ್ಕೆ ಅವರ ರಾಜಕೀಯ ನಿಲುವುಗಳನ್ನು ಬದಿಗಿಡೋಣ. ಅವರು ಮತ್ತವರ ತಂಡಕ್ಕೆ, ನಾಡಿನ ಬೌದ್ಧಿಕ ವಲಯದ ವಿಷಯವೊಂದರ ಮೂಲಕ ಒಂದಿಷ್ಟು ಪ್ರಶ್ನೆಗಳನ್ನು ಕೇಳಿ ಅವರಿಂದ ಉತ್ತರ ಬಯಸೋಣ. ನಾಡಿನ ಸಾಕ್ಷಿ ಪ್ರಜ್ಞೆ ಎಂದು ತಮ್ಮ ಶಿಷ್ಯ ವೃಂದದಿಂದ ಕರೆಸಿಕೊಳ್ಳುವ ನಮ್ಮ ಅನಂತಮೂರ್ತಿಗಳು, ಇತ್ತೀಚಿನ ದಿನಗಳಲ್ಲಿ ಈ ನಾಡಿನ ತಲ್ಲಣಗಳೆಲ್ಲವಕ್ಕೂ ನಿಜವಾಗಿಯೂ ಸ್ಪಂದಿಸಿದ್ದಾರೆಯೇ?
ಕಳೆದ ವರ್ಷ ನಾಡಿನ ಬೌದ್ಧಿಕ ವಲಯದಲ್ಲಿ ವ್ಯಾಪಕ ಚರ್ಚೆ ಹುಟ್ಟು ಹಾಕಿದ್ದ, ಸಿಎಸ್ಎಲ್ಸಿ ತಂಡದ "ವಚನ ಸಾಹಿತ್ಯ ಮತ್ತು ಜಾತಿ ವ್ಯವಸ್ಥೆ' ಕುರಿತ ಚರ್ಚೆಯಲ್ಲಿ ಅವರು ಕಾಣಿಸಲಿಲ್ಲ ಮತ್ತು ಆ ಚರ್ಚೆಯ ನಂತರ ಸಿದ್ದರಾಮಯ್ಯ ನೇತೃತ್ವದ ಸರ್ಕಾರದ ಮೂಗಿನಡಿಯಲ್ಲಿ ನಡೆದ ಆಘಾತಕಾರಿ ಫ್ಯಾಸಿಸ್ಟ್ಬೆಳವಣಿಗೆಗಳಿಗೂ ಸ್ಪಂದಿಸಲಿಲ್ಲ. ಏನಿದು ಸಿಎಸ್ಎಲ್ಸಿ? ಪ್ರೊ.ಎಸ್. ಎನ್ ಬಾಲಗಂಗಾಧರ ಅವರ ನೇತೃತ್ವದಲ್ಲಿ 4-5 ವರ್ಷಗಳ ಹಿಂದೆ ಶಿವಮೊಗ್ಗದ ಕುವೆಂಪು ವಿವಿಯಲ್ಲಿ ಬೆಲ್ಜಿಯಂನ ಗೆಂಟ್ ವಿ.ವಿ.ಯ ಸಹಭಾಗಿತ್ವದೊಂದಿಗೆ ಶುರುವಾದ ಸ್ಥಳೀಯ ಸಂಸ್ಕೃತಿಗಳ ಅಧ್ಯಯನ ಕೇಂದ್ರ(CSLC)ಭಾರತೀಯ ಸಮಾಜ, ಸ್ಥಳೀಯ ಸಂಸ್ಕೃತಿಗಳ ಬಗ್ಗೆ ಅಧ್ಯಯನ ನಡೆಸುತ್ತಿದೆ. ಭಾರತೀಯ ಸಮಾಜ ವಿಜ್ಞಾನದ ತಳಹದಿಯು ವಸಹಾತುಶಾಹಿಯ ಪ್ರಭಾವದಿಂದ ಸೃಷ್ಟಿಯಾಗಿದೆ. ಭಾರತ ಕುರಿತು ಯುರೋಪಿಯನ್ ಸಮಾಜ ವಿಜ್ಞಾನಿಗಳು ತಳೆದ ಧೋರಣೆಯು ಅವರ ಸಮಾಜವನ್ನು ಭಾರತೀಯ ಸಮಾಜಕ್ಕೆ ಸಮೀಕರಿಸಿ ಮಾಡಿದ್ದಾಗಿದೆಯೆಂದೂ ಹೇಳುತ್ತಲೇ, ಭಾರತೀಯ ಸಮಾಜವನ್ನು ಹೊಸ ದೃಷ್ಟಿಯಿಂದ ಅಧ್ಯಯನ ನಡೆಸಬೇಕೆಂದು ಈ ತಂಡ ಹೇಳುತ್ತದೆ. ಭಾರತದ ಸಾಮಾಜಿಕ ಸಂರಚನೆಯನ್ನು ವೈಜ್ಞಾನಿಕವಾಗಿ ಅಧ್ಯಯನ ಮಾಡಿಕೊಂಡು ಅದರ ಫಲಿತಾಂಶದ ಮೇಲೆಯೇ ಇಲ್ಲಿನ ಸಾಮಾಜಿಕ ಸಮಸ್ಯೆಗಳಿಗೆ ಪರಿಹಾರಗಳನ್ನು ಹುಡುಕಬೇಕಿದೆ ಅನ್ನುವ ವಾದವನ್ನು ಮುಂದಿಡುತ್ತಿದೆ. ಶಾಲಾ ದಿನಗಳಿಂದಲೇ ಭಾರತದಲ್ಲಿರುವ ಜಾತಿ ಪದ್ಧತಿಯೇ ನಮ್ಮೆಲ್ಲ ಅನಿಷ್ಟಗಳಿಗೆ ಕಾರಣ ಅಂತ ಓದಿಕೊಂಡು ಬಂದವರ ಮುಂದೆ ನಿಂತು 'ಭಾರತದಲ್ಲಿ ಜಾತಿ ವ್ಯವಸ್ಥೆಯೇ ಇಲ್ಲ' ಅಂದರೆ ಸಾಮಾನ್ಯರು ನಗುವುದು ಸಹಜವೇ. ಬಹಳಷ್ಟು ಜನ ಇವರ ವಾದಗಳನ್ನು ವಿರೋಧಿಸಿದರು. ಅವರ ಸಂಶೋಧನೆ ಶುರುವಾಗುವ ಮೊದಲೇ ಶಿವಮೊಗ್ಗದ ಬುದ್ಧಿಜೀವಿಯೊಬ್ಬರು ಈ ಸಂಶೋಧನೆಯನ್ನೇ ನಿಲ್ಲಿಸಿ ಅಂದಿದ್ದರು. ಆರಂಭದ ಈ ವಿರೋಧದ ನಡುವೆಯೂ ಸಿಎಸ್ಎಲ್ಸಿಯವರು ಯಾವುದೇ ಫೆಲೋಷಿಪ್ ಕೂಡ ಇಲ್ಲದೇ ಸಮಾಜ ವಿಜ್ಞಾನದ ಸಂಶೋಧನೆಯನ್ನೇ ಒಂದು passion ಆಗಿ ತೆಗೆದುಕೊಂಡು ಸ್ಥಾಪಿತ ಸಿದ್ಧಾಂತಗಳ ಮೇಲೆ ತಮ್ಮ ಪ್ರಶ್ನೆಗಳನ್ನಿಡುತ್ತಲೇ ಬಂದರು. ಈ ಪ್ರಶ್ನೆಗಳಿಗೆ ಬುದ್ಧಿಜೀವಿ ವಲಯದ ಬಳಿ ಅಂಥ ಉತ್ತರವೇನು ಸಿಗಲಿಲ್ಲ. 'ವಚನ ಸಾಹಿತ್ಯ ಮತ್ತು ಜಾತಿ ವ್ಯವಸ್ಥೆ' ಕುರಿತ ಚರ್ಚೆ ಕಳೆದ ವರ್ಷ ರಾಜ್ಯದ ಬುದ್ಧಿಜೀವಿ, ಚಿಂತಕರ ವಲಯದಲ್ಲಿ ಒಂದು ಮಟ್ಟಿನ ಕೋಲಾಹಲ ಮೂಡಿಸಿದ್ದು, ಸಿಎಸ್ಎಲ್ಸಿಯ ಬಾಲು ಮತ್ತು ಡಂಕಿನ್ ಝಳಕಿಯವರ ಪ್ರಬಂಧದಿಂದ.
ಈ ಪ್ರಬಂಧದಲ್ಲಿ ಬಾಲು ಮತ್ತು ಡಂಕಿನ್ "ವಚನಗಳು ಜಾತಿ ವಿರೋಧಿ ಚಳವಳಿಯಾಗಿದ್ದವು ಅನ್ನುವ ಪ್ರಚಲಿತ ವಾದಕ್ಕೆ ಯಾವುದೇ ತರ್ಕ ಮತ್ತು ನಿಜಾಂಶಗಳ ಆಧಾರವಿಲ್ಲ" ಎನ್ನುವುದನ್ನು ಸಂಶೋಧನೆಯ ಮೂಲಕ ಹೇಳಲು ಹೊರಡುತ್ತಾರೆ. ವಚನಗಳು ಜಾತಿಯ ವಿರುದ್ಧದ ಚಳವಳಿಯನ್ನು ಪ್ರತಿನಿಧಿಸುತ್ತವೆ ಎಂಬ ಪ್ರಚಲಿತ ಜನಪ್ರಿಯ ನಂಬಿಕೆಯು ನಿಜವೇ ಆಗಿದ್ದರೆ, ಬಹುತೇಕ ವಚನಗಳು ಜಾತಿಯ ಕುರಿತು ಮಾತನಾಡಲೇಬೇಕಿತ್ತು. ಏಕೆಂದರೆ ಜಾತಿ ವಿರುದ್ಧದ ಚಳವಳಿಯ ಭಾಗವಾಗಿದ್ದುಕೊಂಡೂ ವಚನಗಳು ಜಾತಿಯ ವಿರುದ್ಧ ಮಾತನಾಡದೇ ಉಳಿದಿರಬಹುದಾದ ಪರಿಸ್ಥಿತಿ ಸಾಧ್ಯವಿಲ್ಲದ ಮಾತು. 'ಒಂದುವೇಳೆ ನಾವು ವಚನಗಳು ಜಾತಿಯ ವಿರುದ್ಧ ಮಾತನಾಡುವುದಿಲ್ಲ ಅಥವಾ ಜಾತಿಯ ವಿಚಾರ ವಚನಗಳಿಗೆ ಮಹತ್ವದ ವಿಚಾರವೇ ಅಲ್ಲವೆಂದು ತೋರಿಸಿದರೆ, ವಚನಗಳು ಜಾತಿವಿರೋಧಿ ಸಾಹಿತ್ಯವೆಂಬ ಪ್ರಚಲಿತ ವಾದವನ್ನು ತಳ್ಳಿ ಹಾಕಿದಂತಾಗುತ್ತದೆ' ಅನ್ನುವ ಊಹಾ ಸಿದ್ಧಾಂತದ ಮೂಲಕ ಶುರು ಮಾಡಿ, "ಕರ್ನಾಟಕ ಸರ್ಕಾರ ಇದುವರೆಗೆ ಪ್ರಕಟಿಸಿರುವ ಒಟ್ಟು ವಚನಗಳು: 21,788. ಇವುಗಳಲ್ಲಿ ಬ್ರಾಹ್ಮಣರ ಕುರಿತು ಮಾತನಾಡುವಂತೆ ತೋರುವ ವಚನಗಳ ಸಂಖ್ಯೆ: 195. ಜಾತಿ, ಕುಲ ಮತ್ತು ಅವುಗಳಿಗೆ ಸಂಬಂಧಿಸಿದ ಇತರ ವಿಚಾರಗಳ ಕುರಿತು ಮಾತನಾಡುವ ವಚನಗಳ ಸಂಖ್ಯೆ: 458." ಎನ್ನುವ ಅಂಶಗಳನ್ನಿಡುತ್ತ ತಮ್ಮ ತರ್ಕ, ವಾದಗಳ ಮೂಲಕ ಪ್ರಚಲಿತ ವಚನಗಳ ಕುರಿತ ನಂಬಿಕೆಯ ಬುಡವನ್ನು ಅಲುಗಾಡಿಸುತ್ತ "ವಚನಗಳನ್ನು ಆಧ್ಯಾತ್ಮಿಕ ಚಳವಳಿಯ 'ಹಿನ್ನೆಲೆ'ಯಲ್ಲಿ ಅರ್ಥೈಸಿಕೊಳ್ಳಬೇಕು" ಅನ್ನುತ್ತಾರವರು.
ಸಹಜವಾಗಿಯೇ ಈ ವಾದವೂ ಟೀಕೆಗೊಳಗಾಯಿತು. ಆದರೆ ಈ ಚರ್ಚೆ ನಡೆದ ರೀತಿಯನ್ನು ಗಮನಿಸಿದಾಗ, ನಮ್ಮ ಪ್ರಗತಿಪರರೊಳಗಿನ "ಫ್ಯಾಸಿಸ್ಟ್" ಬೇಡ ಬೇಡವೆಂದರೂ ಮತ್ತೆ ಮತ್ತೆ ಕಾಣಿಸಿಕೊಳ್ಳುತ್ತಲೇ ಇದ್ದ. ಮಾತೆತ್ತಿದರೆ ಅಭಿವ್ಯಕ್ತಿ ಸ್ವಾತಂತ್ರ್ಯ, ಅಸ್ಪೃಷ್ಯತೆ ಅಂತೆಲ್ಲ ಮಾತನಾಡುವ ಇವರು ಮೊದಲಿಗೆ ಸಿಎಸ್ಎಲ್ಸಿಯವರ ಸಂಶೋಧನೆಯೆಡೆಗೆ ತೋರಿದ್ದು 'ವೈಚಾರಿಕ ಅಸ್ಪೃಷ್ಯತೆ'ಯನ್ನೇ. ಯಾವಾಗ ಚರ್ಚೆ ರಾಜ್ಯಮಟ್ಟದ ಪತ್ರಿಕೆಯಲ್ಲಿ ಶುರುವಾಯಿತೋ ಆಗಲೇ ವೈಚಾರಿಕತೆಯ ಬಗ್ಗೆ ಮಾತನಾಡುವವರ ಹುಳುಕುಗಳು ರೇಜಿಗೆಯೆನಿಸುವಷ್ಟು ಹೊರಬಂದಿದ್ದು. ಕೇವಲ ಸಿಎಸ್ಎಲ್ಸಿ ವಿರೋಧಿ ಲೇಖನಗಳಿಗೆ ಸ್ಥಾನ ಕೊಟ್ಟು ಅದಕ್ಕೆ ಚರ್ಚೆ ಅನ್ನುವ ಹೆಸರಿಟ್ಟು 'ವೈಚಾರಿಕ ಬಹಿಷ್ಕಾರ' ಹಾಕಿದರು.
ಪಾಪ. ಇವರೆಲ್ಲ ಲಾಬಿ ಮಾಡಿ ರಾಜ್ಯ ಮಟ್ಟದ ಪತ್ರಿಕೆಗಳಲ್ಲಿ 'ಸಿಎಸ್ ಎಲ್ಸಿಯ ಸಂಶೋಧನೆಯ ವಾದಕ್ಕೆ' ಸ್ಥಾನ ಕೊಡದಿದ್ದರೆ ವಿಷಯ ಹೊರಗೆ ಬರುವುದಿಲ್ಲ ಅಂದುಕೊಂಡರು. ಆದರೆ ಮಾಹಿತಿ ತಂತ್ರಜ್ಞಾನದ ಈ ಯುಗದಲ್ಲಿ ಮಾಹಿತಿ ವಿನಿಮಯಕ್ಕೆ ಯಾವ ದೊಣೆ ನಾಯಕನ ಅಪ್ಪಣೆಯೂ ಬೇಕಿಲ್ಲ ಅನ್ನುವುದು ಅವರಿಗೆ ಗೊತ್ತಾಗಿದ್ದು 'ನಿಲುಮೆ' ಬಳಗ ವಚನದ ಕುರಿತು ಮುಕ್ತ ವೇದಿಕೆಯೊದಗಿಸಿದಾಗಲೇ. ಅಷ್ಟೊತ್ತಿಗೆ ಫೇಸ್ಬುಕ್ಕಿನಲ್ಲೂ ಪರ-ವಿರೋಧ ಚರ್ಚೆ ಶುರುವಾಗಿತ್ತು. ಚರ್ಚೆಗಿಳಿದ ಕಲಬುರ್ಗಿಯಂಥ ನಾಡಿನ ಹಿರಿಯ ಸಂಶೋಧಕರು 'ಈ ವಿಕೃತ ಸಂಶೋಧನೆಯನ್ನು ನಿಲ್ಲಿಸಿ" ಅಂತ ಕರೆಕೊಟ್ಟಿದ್ದರು. ಬೌದ್ಧಿಕ ಚರ್ಚೆಯೊಂದಕ್ಕೆ ಉತ್ತರಿಸಲಾಗದ, ವಿವಿಯ ಕಡೆ ತಿಂಗಳುಗಟ್ಟಲೆ ಮುಖಮಾಡದ ಪ್ರಾಧ್ಯಾಪಕರು, ಸರ್ಕಾರಿ ಸಾಹಿತಿಗಳೆಲ್ಲ ಸೇರಿಕೊಂಡು ಸರ್ಕಾರಿ ಮಟ್ಟದಲ್ಲಿ ಒತ್ತಡ ತಂದು "ಅವರೇನು ಸಂಶೋಧನೆ ಮಾಡುತ್ತಿದ್ದಾರೆ?" ಅನ್ನುವ ವರದಿ ತರಿಸಿಕೊಳ್ಳಿ ಎಂದು ಸರ್ಕಾರದ ಕಿವಿಯೂದಿ ಅದಕ್ಕಾಗಿಯೇ ಒಂದು ಸಮಿತಿಯನ್ನು ನೇಮಕ ಮಾಡಿಸಿದರಲ್ಲ, ಇಂಥವರನ್ನು ಏನೆಂದು ಕರೆಯುತ್ತೀರಿ ಮೂರ್ತಿಗಳೇ? ಆ ಸಮಿತಿ ನೀಡಿರುವ ವರದಿಯಂತೆ, ಸಿಎಸ್ಎಲ್ಸಿಯ ಸಂಶೋಧನೆ ಮುಂದುವರೆಯುವ ಅಗತ್ಯವಿಲ್ಲವಾದ್ದರಿಂದ ಎಮ್ಓಯು ಅನ್ನು ಮುಂದುವರೆಸಬಾರದಂತೆ.
ಬೌದ್ಧಿಕ ಚರ್ಚೆಯನ್ನು ಎದುರಿಸಲಾಗದೇ ವಿದ್ಯಾರ್ಥಿಗಳ ಸಂಶೋಧನೆಗೆ ಕಲ್ಲು ಹಾಕಿಸಿದವರು ಫ್ಯಾಸಿಸ್ಟರಲ್ಲವೇ? ಇಂಥ ಸಾಹಿತಿಗಳ ಮಾತಿಗೆ ಕಿವಿಗೊಟ್ಟು ಮುನ್ನಡೆದ ಈ ಸರ್ಕಾರವನ್ನು ಫ್ಯಾಸಿಸ್ಟ್ ಎಂದು ಕರೆಯಬಲ್ಲಿರಾ? ನಮ್ಮ ವಿ.ವಿ.ಗಳ ಮೂಲ ಧ್ಯೇಯವೇ ಶಿಕ್ಷಣ ಹಾಗೂ ಸಂಶೋಧನೆಯನ್ನು ಬೆಳೆಸುವುದು. ಅಂಥ ವಿ.ವಿ.ಗಳ ಸಿಂಡಿಕೇಟ್ ಸದಸ್ಯರು ಸಂಶೋಧಕರಿಗೆ ಕಡಿವಾಣ ಹಾಕಬೇಕು ಅನ್ನುತ್ತಾರೆ. ಇದಕ್ಕೇನನ್ನುತ್ತೀರಿ? ಒಂದು ಕಡೆ ಸಮಾಜ ವಿಜ್ಞಾನ ಸಂಶೋಧನೆಯೆಡೆಗೆ ಸರ್ಕಾರ ಅತೀವ ನಿರ್ಲಕ್ಷ್ಯ ವಹಿಸುತ್ತಿದೆ. ಆದರೆ ತನ್ನ ಅಸ್ತಿತ್ವವನ್ನು ಎಂದೂ ಪ್ರಶ್ನಿಸದ ವಿಚಾರಗಳನ್ನೇ 'ಚಿಂತನೆ ಸಂಶೋಧನ' ಎಂದು ಕರೆದು ಕೋಟಿ ಕೋಟಿ ಹಣ ವ್ಯಯಿಸುತ್ತದೆ. ಇನ್ನೊಂದೆಡೆ ನಮ್ಮ ಪ್ರಗತಿಪರರು ಸಿಎಸ್ಎಲ್ಸಿಯವರ ವಾದಕ್ಕೆ ಪ್ರತಿವಾದ ಮಂಡಿಸಲಾಗದೇ ಸಂಶೋಧನೆಯನ್ನೇ ನಿಲ್ಲಿಸುವ, ಬಹಿಷ್ಕರಿಸುವ ಅನೈತಿಕ ಮಾರ್ಗಕ್ಕಿಳಿದಾಗ, ಸರ್ಕಾರ ಅದಕ್ಕೆ ಕೈ ಜೋಡಿಸಿ ಫ್ಯಾಸಿಸ್ಟ್ ನಡವಳಿಕೆಯನ್ನು ತೋರಿಸಿದ್ದಾರೆ ಅಲ್ಲವೇ ಮೂರ್ತಿಗಳೇ? ಯಾವುದೇ ಸ್ಥಾಪಿತ ನಂಬಿಕೆಗಳನ್ನು ಪ್ರಶ್ನೆ ಮಾಡಿದಾಗ ಅದಕ್ಕೆ ವಿರೋಧವೇಳುವುದು ಸಹಜವೇ. ಎಲ್ಲರೂ ಒಪ್ಪುವಂತೆ ಬರೆಯಲು ಸಂಶೋಧನಾ ವರದಿಯೇನು ಯಾವುದೋ ರಾಜಕೀಯ ಪಕ್ಷದ ಪ್ರಣಾಳಿಕೆಯೋ ಅಥವಾ ಸರ್ಕಾರಿ ಪ್ರಭಾವದಿಂದ ಹೊರಬರುವ ಯಾವುದೋ ಸಮಿತಿಯ ವರದಿಯೋ ಅಲ್ಲ. ಸಾಮಾಜಿಕ ಸಂಶೋಧನೆಯ ಕುರಿತ ಈ ವಾದಕ್ಕೆ ವೈಚಾರಿಕ ನೆಲೆಯಲ್ಲಿ ಪ್ರತಿವಾದ ಮಂಡಿಸಬೇಕೇ ಹೊರತು, ಸಂಶೋಧನೆಯನ್ನೇ ನಿಲ್ಲಿಸುವ ಫ್ಯಾಸಿಸ್ಟ್ ಧೋರಣೆಯಿಂದಲ್ಲ. ಒಂದು ವಿಚಾರವನ್ನು ಒಪ್ಪುವುದು ಬಿಡುವುದು ಬೇರೆ. ಆದರೆ ಆ ವಿಚಾರಗಳಿಗೆ ವೇದಿಕೆಯೊದಗಿಸುವುದು ಆರೋಗ್ಯಕರ ಸಮಾಜದ ಲಕ್ಷಣ. ಅಂಥ ಸಮಾಜದ ನಿರ್ಮಾಣವೇ ನಮ್ಮ ಪ್ರಗತಿಪರರ ಅನಿಸಿಕೆಯೂ ಹೌದು ಅಂದುಕೊಳ್ಳುತ್ತೇನೆ. ಹೌದು ಅನ್ನುವುದಾದರೆ, ಇನ್ನಾದರೂ ಸಿಎಸ್ಎಲ್ಸಿ ವಾದವನ್ನು ನಿಲ್ಲಿಸಲು ಅನೈತಿಕ ಮಾರ್ಗವನ್ನು ಹಿಡಿಯುವುದು ಬಿಟ್ಟು ಸಾಮಾಜಿಕ ಸಂಶೋಧನೆ ಮತ್ತು ವೈಚಾರಿಕ ಭಾಷೆಯಲ್ಲಿ ಮಾತನಾಡುವುದು ಒಳಿತು ಅಲ್ಲವೇ?
ಈ ಸಂಪೂರ್ಣ ಘಟನಾವಳಿಗಳ ಬಗ್ಗೆ ನಾಡಿನ ಸಾಕ್ಷಿ ಪ್ರಜ್ಞೆಯೆಂದು ಕರೆಸಿಕೊಳ್ಳುವ ನೀವು ಈ ಹಿಂದೆಯಂತೂ ಪ್ರತಿಕ್ರಿಯಿಸಿಲ್ಲ. ಈಗ ಹೇಳಿ ಮೂರ್ತಿಗಳೇ, ಯಾರ ಸರ್ಕಾರ ಮತ್ತು ಯಾರು ಫ್ಯಾಸಿಸ್ಟ್ಗಳು? ಈಗಲೂ ನಿಮ್ಮ ಇತರ ಸೆಕ್ಯುಲರ್ ಮಿತ್ರರೊಡನೆ ಸೇರಿಕೊಂಡು ಪತ್ರಿಕಾಗೋಷ್ಠಿ ಕರೆದು ಸಂಶೋಧನಾ ಕೇಂದ್ರವನ್ನೇ ಮುಚ್ಚಿಸಲು ಹೊರಟ ಸಿ.ಎಂ ಸಿದ್ದರಾಮಯ್ಯನವರ ಸರ್ಕಾರದ ಕಿವಿಹಿಂಡುವ ಕೆಲಸವನ್ನು ನೀವು ಮಾಡಬಲ್ಲಿರಾ ಮೂರ್ತಿಗಳೇ?
- ರಾಕೇಶ್ ಶೆಟ್ಟ್
ours.raki@gmail.com