ಓಲೈಕೆ ರಾಜಕಾರಣಕ್ಕೆ ಪಾಠ ಕಲಿಸಿದ ಚುನಾವಣೆ
ಈಗ ಸುಮಾರು ಹದಿನೈದು ವರ್ಷದ ಹಿಂದೆ ನಾನು ಬೇಸಿಗೆಯ ರಜೆಯಲ್ಲಿ...
ಈಗ ಸುಮಾರು ಹದಿನೈದು ವರ್ಷದ ಹಿಂದೆ ನಾನು ಬೇಸಿಗೆಯ ರಜೆಯಲ್ಲಿ ಅಜ್ಜನಮನೆಗೆ ಹೋದಾಗ ಅದ್ಯಾವುದೋ ಒಂದು ಚುನಾವಣೆಯ ಸಮಯ. ಅಜ್ಜಿಯ ಬಳಿ 'ಅಜ್ಜಿ ನಿಮ್ಮ ವೋಟ್ ಯಾರಿಗೆ' ಎಂದು ಸುಮ್ಮನೆ ಕೇಳಿದಾಗ ಅರವತ್ತು ವರ್ಷದ ಅವರು ಯಾವುದೇ ವಿಚಾರ ಮಾಡದೇ "ನನ್ನ ವೋಟು 'ಕೈ' ಗೆ " ಎಂದರು. "ಕೈ ಪಕ್ಷದಿಂದ ಯಾರು ನಿಂತಿದ್ದಾರೆ?" ಎಂದು ಕೇಳಿದೆ. ಅದಕ್ಕೆ ಅವರು "ನನಗೆ ಕೆಲಸ ಇದೆ ಮಗಾ" ಎಂದು ಚುಟುಕಾಗಿ ಉತ್ತರಿಸುವ ಮೂಲಕ ಆಚೆ ನಡೆದರು. ಅದೇ ಪ್ರಶ್ನೆಯನ್ನು ಅಲ್ಲಿಯೇ ಕೃಷಿ ಕೂಲಿಗೆ ಬಂದವನ ಹತ್ತಿರ ಕೇಳಿದಾಗ ಆತ ಹೇಳಿದ್ದು ಅದೇ- "ನಮ್ಮದು ಹಸ್ತ". ಆತನಿಗೂ ಯಾರು ಅಭ್ಯರ್ಥಿ, ಯಾರು ಆಗಿನ ಪ್ರಧಾನಿ ಎಂದು ಗೊತ್ತಿರಲಿಲ್ಲ. ಅಂಥ ಪರಿಸ್ಥಿತಿ ಆಗಿನ ಕಾಲದಲ್ಲಿ ಸರ್ವೇ ಸಾಮಾನ್ಯವಾಗಿತ್ತು. ಜನಸಾಮಾನ್ಯನಿಗೆ ಗೊತ್ತಿದ್ದದ್ದು ಕೈ ಪಕ್ಷ ಮಾತ್ರ. ಆಗ ಟಿವಿಯ ಅಬ್ಬರವಿರಲಿಲ್ಲ , ಇನ್ನು ಹಳ್ಳಿಯ ಮೂಲೆಗೆ ದಿನಪತ್ರಿಕೆಗಳು ಬಂದು ಮುಟ್ಟುತ್ತಿರಲಿಲ್ಲ. ರೇಡಿಯೋದಲ್ಲಿ ಬರುವ ಪ್ರದೇಶ ಸಮಾಚಾರವಂತೂ ಪ್ರೈಮರಿ ಸ್ಕೂಲಿನ ಮಕ್ಕಳ ಅಗಸ್ಟ್ 15ರ ಭಾಷಣದಂತೆ. ಅದ್ಯಾರೋ ಬರೆದುಕೊಟ್ಟದ್ದನ್ನು ಅದ್ಯಾರೋ ಓದಿ ಹೋಗುತ್ತಿದ್ದರು.
ಇವೆಲ್ಲ ಕಾರಣಗಳಿಂದ ಬಹುತೇಕರಿಗೆ ತಮ್ಮ ಕ್ಷೇತ್ರದಲ್ಲಿ ಯಾರ್ಯಾರು ಚುನಾವಣೆಗೆ ನಿಂತಿದ್ದಾರೆ ಎಂಬುದೇ ಗೊತ್ತಿರುತ್ತಿರಲಿಲ್ಲ. ಬಾಗಿಲಿಗೆ ಪ್ರಚಾರಕ್ಕೆ ಬಂದವರಷ್ಟೇ ಗೊತ್ತು. ಯಾರು ಯೋಗ್ಯರು? ಈಗಿನ ಮಂತ್ರಿ ಅದೇನು ಕೆಲಸ ಮಾಡಿದ್ದಾನೆ? ಯಾರಿಗೆ ವೋಟ್ ಹಾಕಿದರೆ ಬದಲಾವಣೆಯನ್ನು ನಿರೀಕ್ಷಿಸಬಹುದು ಎಂಬ ವಿಚಾರವನ್ನೇ ಮಾಡದ ಮತದಾರರೇ ಹೆಚ್ಚಾಗಿದ್ದರು. ಅದಕ್ಕಿಂತ ಹೆಚ್ಚಾಗಿ ತಾವು ಮತ ಹಾಕುವವರು, ಅದನ್ನೆಲ್ಲ ವಿಚಾರ ಮಾಡಿ ಮತ ಚಲಾಯಿಸಬೇಕೆನ್ನುವ ವಿಚಾರದ ಹಲವರಿಗೆ ಅರಿವಿರುತ್ತಿರಲಿಲ್ಲ. ಅವರನ್ನೇ ನಮ್ಮ ರಾಜಕೀಯ ಪಕ್ಷಗಳು 'ಮತ ಬ್ಯಾಂಕ್' ಎಂದು ಕರೆಯಲು ಶುರುವಿಟ್ಟುಕೊಂಡರು. ಅಂಥ ಸಂದರ್ಭದಲ್ಲಿಯೇ ಹಣ ಹೆಂಡ ಕೂಡ ಬಹಳ ಕೆಲಸ ಮಾಡುತ್ತಿತ್ತು. ಜಾತಿ ರಾಜಕಾರಣ ಜನರ ಮತವನ್ನು ಸುಲಭವಾಗಿ ಸೆಳೆಯುತ್ತಿತ್ತು.
ಹಿಂದೆ ಮುಂದೆ ನೋಡದೇ ಕಣ್ಮುಚ್ಚಿ ಪಕ್ಷವೊಂದಕ್ಕೆ ವೋಟು ಒತ್ತಿ ಬರುವ ತಲೆಮಾರಿನ ಜನರೆಲ್ಲಾ ನಮ್ಮಿಂದ ದೂರವಾಗಿದ್ದಾರೆ ಅಥವಾ ಬಹುತೇಕ ಬದಲಾಗಿದ್ದಾರೆ. ಜಾತಿ, ಹಣ ಇವೆರಡೂ ವೋಟ್ ಪಡೆಯುವ ಸುಲಭದ ಮಾರ್ಗವಲ್ಲ ಎಂಬುದು ಬಹುತೇಕ ರಾಜಕೀಯ ಪಕ್ಷಗಳಿಗೆ ಮನವರಿಕೆಯಾದಂತಿದೆ. ಈ ವಿಚಾರವನ್ನು ಈ ಹಿಂದೆ ಕರ್ನಾಟಕದಲ್ಲಿ ನಡೆದ ಎರಡು ವಿಧಾನಸಭಾ ಚುನಾವಣೆ ಮತ್ತು ಮೊನ್ನೆ ಮೊನ್ನೆ ನಡೆದ ಲೋಕಸಭಾ ಚುನಾವಣೆ ದೃಢಪಡಿಸಿವೆ.
ಹಿಂದೆ ಕರ್ನಾಟಕದಲ್ಲಿ ಬಿಜೆಪಿ ಮತ್ತು ಜೆಡಿಎಸ್ ಪಕ್ಷ ಕೂಡಿ ಅಧಿಕಾರಕ್ಕೆ ಬಂದಾಗ ರಾಜ್ಯ ಬಹಳ ನಿರೀಕ್ಷೆ ಇಟ್ಟುಕೊಂಡಿತ್ತು. ಟಿ-ಶರ್ಟ್ ಹಾಕಿಕೊಂಡು ಓಡಾಡಿದ ಕುಮಾರಸ್ವಾಮಿ ಯುವಕರಿಗೆಲ್ಲ ಬದಲಾವಣೆಯ ಡಣಟಛ್ಟಿಟ ಆಗಿ ಕಂಡಿದ್ದು ಸುಳ್ಳಲ್ಲ. ಆದರೆ ಅದೇ ಕುಮಾರಸ್ವಾಮಿ ಎರಡು ವರ್ಷದಲ್ಲಿ ಆಡಿದ ಮಾತಿಗೆ ತಪ್ಪಿದಾಗ ರಾಜ್ಯಕ್ಕೆ ರಾಜ್ಯವೇ ಯಡಿಯೂರಪ್ಪನವರ ಕೈ ಹಿಡಿದು ಮೇಲಕ್ಕೆತ್ತಿತು. ಆಗ ಬಿಜೆಪಿಗೆ ಬಹುಮತ ಕೊಟ್ಟದ್ದು ರಾಜ್ಯದ ಕನಿಕರದ ನಡೆಯಾಗಿರಲಿಲ್ಲ. ಬದಲಿಗೆ ಪ್ರತಿಪಕ್ಷದಲ್ಲಿ ಕೂತು ತನ್ನ ನೇರ ನಡೆ ನುಡಿಗಳಿಂದ ಪ್ರತ್ಯೇಕವಾಗಿ ಗುರುತಿಸಿಕೊಂಡಿದ್ದ ಯಡಿಯೂರಪ್ಪ ಒಂದು ಆಶಾಕಿರಣದಂತೆ ಕಂಡಿದ್ದರು. ಸಮ್ಮಿಶ್ರ ಸರ್ಕಾರದಲ್ಲಿ ಸಾಧಿಸಲಾಗದ್ದೇನೋ ಸಾಧಿಸಬಹುದೆಂಬ ಬಯಕೆಯಿಂದ ಬಹುಮತದಿಂದ ಆರಿಸಿ ತಂದರು. ಯಡಿಯೂರಪ್ಪನವರು ಕರ್ನಾಟಕವನ್ನು ಗುಜರಾತಿನಂತೆ ಒಂದು ಮುಂಚೂಣಿಯ ರಾಜ್ಯವನ್ನಾಗಿಸುತ್ತಾರೆ ಎಂಬ ಆಸೆ ಅಲ್ಲಿ ಕೆಲಸ ಮಾಡಿತ್ತು. ಯಡಿಯೂರಪ್ಪನವರ ಪ್ರಮಾಣ ವಚನಕ್ಕೆ ನರೇಂದ್ರ ಮೋದಿ ಬಂದಾಗ ಇಡೀ ರಾಜ್ಯ ಬಿಜೆಪಿಯನ್ನು ಇನ್ನಷ್ಟು ನಂಬಿ ನೆಚ್ಚಿಕೊಂಡಿತು. ಇನ್ನು ಕರ್ನಾಟಕ ಗುಜರಾತಿನಂತೆ ಅಭ್ಯುದಯವಾಗುತ್ತದೆ ಎಂದು ರಾಜ್ಯಕ್ಕೆ ರಾಜ್ಯವೇ ಸಂಭ್ರಮಿಸಿತು. ಆದರೆ ಅಷ್ಟೇ ಬೇಗ ಭ್ರಮನಿರಸನಗೊಂಡ ರಾಜ್ಯ ಪೂರ್ಣ ಅವಧಿ ಮುಗಿಯುವುದರೊಳಗೆ ಇನ್ನೊಂದು ಚುನಾವಣೆ ಯಾವಾಗ ಬರುತ್ತದೋ ಎಂದು ಕಾಯುವ ಮನಸ್ಥಿತಿಗೆ ತಲುಪಿಬಿಟ್ಟಿತು. ಇದೇ ಕಾರಣದಿಂದ ಹಿಂದಿನ ವರ್ಷ ಕಾಂಗ್ರೆಸ್ಸಿನ ಕೈ ಅನ್ನು ಅನಿವಾರ್ಯವೋ ಅಥವಾ ಇನ್ನೊಂದು ಆಸೆಯಿಂದಲೋ ಮೇಲಕ್ಕೆ ಎತ್ತಿತು.
ಇದರರ್ಥ ಈಗ ಕಾಲ ಬದಲಾಗಿದೆ. ಮೊದಲಾದರೆ ಆದಷ್ಟು ದುಡ್ಡು ಹೊಡೆದು ಐದು ವರ್ಷ ಕಳೆದು ಮತ್ತೆ ಚುನಾವಣೆಯ ಸಮಯದಲ್ಲಿ ಜಾತಿ ಲೆಕ್ಕಾಚಾರ ಹಾಕಿ ಅಭ್ಯರ್ಥಿಗಳನ್ನು ಆಯ್ಕೆ ಮಾಡಿ ಒಂದಿಷ್ಟು ದಲಿತರ, ಹಿಂದುಳಿದವರ ಮತ್ತು ಅಲ್ಪಸಂಖ್ಯಾತರ ಪರ ಮಾತಾಡಿ ಅಧಿಕಾರಕ್ಕೆ ಬರಬಹುದೆಂಬ ಲೆಕ್ಕಾಚಾರ ಔಟ್ಡೇಟೆಡ್ ಆಗಿದೆ. ಅಭಿವೃದ್ಧಿಯೊಂದೇ ಮತವನ್ನು ಪಡೆಯಲು ದಾರಿ ಎಂಬುದು ಈಗಿತ್ತಲಾಗಿ ಎಲ್ಲ ರಾಜಕೀಯ ಪಕ್ಷಗಳಿಗೂ ಮನದಟ್ಟಾಗುತ್ತಿದೆ.
ಅದನ್ನು ಇನ್ನೊಮ್ಮೆ ದೃಢಪಡಿಸಿದ್ದು ಮೊನ್ನೆ ನಡೆದ ಲೋಕಸಭಾ ಚುನಾವಣೆ. ಕಾಂಗ್ರೆಸ್ ಚುನಾವಣೆಯ ಉದ್ದಕ್ಕೂ ನರೇಂದ್ರ ಮೋದಿಯನ್ನು ಮುಸ್ಲಿಂ ವಿರೋಧಿಯೆಂದೇ ಸಾರುತ್ತಾ ಸಾಗಿತು. ರಾಹುಲ್ ಗಾಂಧಿ "ಒಂದೊಮ್ಮೆ ಮೋದಿ ಈ ದೇಶದ ಪ್ರಧಾನಿಯಾದರೆ ಸಹಸ್ರಾರು ಜನರ ಮಾರಣ ಹೋಮ ನಡೆದು ಬಿಡುತ್ತದೆ" ಎಂದು ಹೇಳಿಕೆ ಕೊಟ್ಟರು. ಈ ಮೂಲಕ ಮುಸ್ಲಿಮರಲ್ಲಿ ಹೆದರಿಕೆಯನ್ನು ಹುಟ್ಟು ಹಾಕಿ ಮತ ಪಡೆಯಲು ಪ್ರಯತ್ನಿಸುತ್ತಿದ್ದಾರೆ ಎಂದು ಮುಸ್ಲಿಂ ಪ್ರಾಜ್ಞರೆಲ್ಲ ಅರಿತದ್ದು ರಾಹುಲ್ ಅರಿವಿಗೆ ಬರಲೇ ಇಲ್ಲ! ಏತನ್ಮಧ್ಯೆ, ಸೋನಿಯಾ ಗಾಂಧಿ ಮುಸ್ಲಿಮ್ ಗುರು ಇಮಾಂ ಬುಖಾರಿಯನ್ನು ಚುನಾವಣೆಯ ಸಂದರ್ಭದಲ್ಲಿ ಭೇಟಿಯಾಗುವ ಮೂಲಕ ಆ ಕೋಮಿನ ಜನರಿಗೆ ಸಂದೇಶ ನೀಡಬಹುದೆಂಬ ಲೆಕ್ಕಾಚಾರ ಇಟ್ಟುಕೊಂಡಿದ್ದರು. ಆದರೆ ಅದ್ಯಾವುದೂ ಪ್ರಜ್ಞಾವಂತ ಮತದಾರನ ಎದುರಿಗೆ ಕೆಲಸಕ್ಕೆ ಬರಲಿಲ್ಲ. ಕಾಂಗ್ರೆಸ್ಸಿನ ಇನ್ನೊಬ್ಬ ಮಹಾಶಯರಾದ ಅಜಂ ಖಾನ್ ಒಂದು ಹೆಜ್ಜೆ ಮುಂದೆ ಹೋಗಿ "ಕಾರ್ಗಿಲ್ ಗೆಲುವಿಗೆ ಮುಸ್ಲಿಂ ಯೋಧರು ಕಾರಣ" ಎಂಬ ಹೇಳಿ, ಮುಸ್ಲಿಂ ಓಲೈಕೆಯ ಹೊಸ ಹೇಸಿಗೆಯ ಆಯಾಮವನ್ನೇ ತೆರೆದಿಟ್ಟರು. ಇನ್ನು ಈ ಎಲ್ಲ ಅಸಹ್ಯಕರ ನಡೆಯನ್ನು ಯಾವುದೇ ಕಾಂಗ್ರೆಸ್ಸಿನ ಮುಖಂಡರು ಗಟ್ಟಿಯಾಗಿ ಖಂಡಿಸಲಿಲ್ಲ. ಈ ನಡುವೆ ಈ ಎಲ್ಲ ನಡೆಗಳನ್ನು ಮತದಾರ ಮಾತ್ರ ಬಹಳವೇ ಸೂಕ್ಷ್ಮಮವಾಗಿ ಗ್ರಹಿಸುತ್ತಲೇ ಇದ್ದ. ದೇಶದ ಅಭಿವೃದ್ಧಿಯ ಬಗ್ಗೆ ಮಾತನಾಡದ ಕಾಂಗ್ರೆಸ್ಸಿನ ಈ ಎಲ್ಲ ನಡೆಗಳೂ ಕೇವಲ ಮತ ಪಡೆಯಲು ಮಾತ್ರ ಸೀಮಿತವಾಗಿದೆಯೆಂಬುದನ್ನು ಅರಿಯಲು ಜನ ಸಾಮಾನ್ಯನಿಗೆ ಕಷ್ಟವಾಗಲೇ ಇಲ್ಲ. ಈ ನಡುವೆ ಮೋದಿ ಜನಪ್ರಿಯತೆಯ ಬಗ್ಗೆ ಎಚ್ಚೆತ್ತುಕೊಂಡ ರಾಹುಲ್ ಗಾಂಧಿ ಕೂಡ ದೇಶದ ಅಭಿವೃದ್ಧಿಯ ಬಗ್ಗೆ ಮಾತನಾಡಲು ಶುರುವಿಟ್ಟುಕೊಂಡರು. ಆದರೆ ಹತ್ತು ವರ್ಷ ಲಕ್ಷ ಕೋಟಿಗಳ ಮೊತ್ತದ ಹಗರಣಗಳ ಮುಂದೆ ಅದೆಲ್ಲವೂ ಹುಸಿ ಭರವಸೆಗಳೆಂದೆನಿಸಿದವೇ ಹೊರತು ಜನ ಅದನ್ನು ನಂಬುವ ಸ್ಥಿತಿಯನ್ನು ಮೀರಿ ಮುಂದೆ ನಡೆದುಬಿಟ್ಟಿದ್ದರು. ಆದರೆ ಇತ್ತ ಕಡೆ ನರೇಂದ್ರ ಮೋದಿ ಮಾತ್ರ ಅದ್ಯಾವುದಕ್ಕೂ ತಲೆಕೆಡಿಸಿಕೊಳ್ಳದೇ ಅಭಿವೃದ್ಧಿಯ ಏಕ ಮಂತ್ರವನ್ನು ಪಠಿಸುತ್ತಾ ಮುಂದೆ ಸಾಗಿದರು. ದೇಶದ ಅಭಿವೃದ್ಧಿಯೊಂದೇ ನಮ್ಮ ಗುರಿ ಎಂದು ಮತ ಯಾಚಿಸಿದರು.
ನಮಗೆ ಚುನಾವಣೆ ಬಂದಾಗಲೆಲ್ಲ ಒಂದು ಹಾಡು ನೆನಪಾಗುತ್ತದೆ "ಈ ದೇಶದ ಕಥೆ ಇಷ್ಟೇ ಕಣಮ್ಮೋ, ಇಲ್ಲಿ ಚಿಂತೆ ಮಾಡಿ ಲಾಭ ಇಲ್ಲಮ್ಮೋ". ಅದಕ್ಕೆ ಕಾರಣ ಬಹುತೇಕ ರಾಜಕೀಯ ಪಕ್ಷಗಳು ಜಾತಿಯ ಬಗ್ಗೆ, ಧರ್ಮದ ಬಗ್ಗೆ ಮಾತನಾಡುತ್ತಿದ್ದವೇ ಹೊರತು ಅಭಿವೃದ್ಧಿಯ ಬಗ್ಗೆ ತುಟಿ ಪಿಟಕ್ಕೆನ್ನುತ್ತಿರಲಿಲ್ಲ. ಆದರೆ ಈ ಚುನಾವಣೆಯ ವಿಶೇಷವೆಂದರೆ ಆ ಹಾಡು ಒಮ್ಮೆಯೂ ನೆನಪಿಗೆ ಬಾರದೇ ಇರುವುದು. ಅದಕ್ಕೆ ಕಾರಣ ಜನರಲ್ಲಿ ಹುಟ್ಟಿರುವ ಬದಲಾವಣೆಯ - ಅಭಿವೃದ್ಧಿಯ ಮಹತ್ವಾಕಾಂಕ್ಷೆ ಮತ್ತು ಭರವಸೆ. ಅದಕ್ಕೆ ಕಾರಣ ಒಬ್ಬ ನಾಯಕ - ನರೇಂದ್ರ ಮೋದಿ. ಅವರು ಅಭಿವೃದ್ಧಿಯನ್ನು ಹೊರತುಪಡಿಸಿ ಇನ್ನೇನನ್ನೂ ಮಾತನಾಡುತ್ತಲೇ ಇರಲಿಲ್ಲ. ಅದಕ್ಕಿಂತ ಹೆಚ್ಚಾಗಿ ಅವರು ಮಾತನಾಡಿದ್ದು ಹುಸಿ ಭರವಸೆ ಎಂದು ಅನಿಸುತ್ತಿರಲಿಲ್ಲ. ಅದಕ್ಕೆ ಕಾರಣ ಅವರು ಸಾಧಿಸಿ ತೋರಿಸಿದ ನಮ್ಮೆಲ್ಲರ ಎದುರಿಗೆ ಇರುವ ಗುಜರಾತ್ ರಾಜ್ಯ. ಇತ್ತ ಗುಜರಾತ್ ಮಾದರಿಯನ್ನು ಟಾಫಿ ಮಾಡೆಲ್ ಎಂಬ ರಾಹುಲ್ ಗಾಂಧಿಯವರ ಹಗುರವಾದ ಮಾತುಗಳು ಕಾಂಗ್ರೆಸ್ಸಿಗೆ ಮತವನ್ನು ತಂದುಕೊಡುವುದಿಲ್ಲವೆಂಬ ವಿಚಾರ ಕಾಂಗ್ರೆಸ್ಸಿಗೆ ತಿಳಿದಿತ್ತೋ ಇಲ್ಲವೋ ಗೊತ್ತಿಲ್ಲ. ಆದರೆ ರಾಹುಲ್ ಹೇಳಿಕೆಯಿಂದ ಹಲವರು ಗುಜರಾತಿನ ಅಭಿವೃದ್ಧಿಯನ್ನು ಇಂಟರ್ನೆಟ್ಟಿನಲ್ಲಿ ತಡಕಾಡಿ ದೃಢಪಡಿಸಿಕೊಂಡರು. ಹೀಗೆ ರಾಹುಲ್ ಗಾಂಧಿಯ ಗುಜರಾತ್ ಮಾದರಿಯ ಪ್ರಸ್ತಾಪ ಬಿಜೆಪಿಗೆ ಒಂದಿಷ್ಟು ಮತವನ್ನು ತಂದುಕೊಟ್ಟಿತೇ ಹೊರತು ಕೈ ಗೆ ಯಾವುದೇ ಸಹಾಯವಾಗಲಿಲ್ಲ.
ಜಾತ್ಯತೀತತೆ ಮತ್ತು ಕೋಮುವಾದ ಇವೆರಡು ಪದಗಳು ಚುನಾವಣೆ ಘೋಷಣೆಯಾದಾಗ ಜೀವ ಪಡೆದುಕೊಂಡು ಫಲಿತಾಂಶ ಮತ್ತು ಫಲಿತಾಂಶದ ಚರ್ಚೆಯ ನಂತರ ಕೋಮಾಕ್ಕೆ ಹೋಗುವ ಶಬ್ದಗಳೆನ್ನುವುದನ್ನು ಜನರು ಇಂದು ಚೆನ್ನಾಗಿ ಅರಿತಿದ್ದಾರೆ. ಮತದಾರರು ಯೋಚಿಸದೇ ಮತನೀಡುವ ಕಾಲ ಮುಗಿದಂತಿದೆ. ಇನ್ನು ಮುಂದೆ ಅಭಿವೃದ್ಧಿಯ ಮಂತ್ರವೊಂದೇ ಮತವನ್ನು ಪಡೆಯಲು ಮಾರ್ಗ. ಜಾತಿ ರಾಜಕಾರಣದ ಬಣ್ಣದ ಮಾತುಗಳಲ್ಲ ಎನ್ನುವುದಕ್ಕೆ ಬಿಎಸ್ಪಿಯ ಮಾಯಾವತಿ ಸೇರಿದಂತೆ ಹಲವು ಉದಾಹರಣೆಗಳನ್ನು ಈ ಚುನಾವಣೆ ನಮ್ಮೆದುರಿಗೆ ತಂದು ನಿಲ್ಲಿಸಿದೆ. ಹಾಗಾಗಿಯೇ "ಅಭಿವೃದ್ಧಿಯ ರಾಜಕಾರಣ ಮಾತ್ರ ಉಳಿವಿನ ರಾಜಕಾರಣ" ಎಂಬುದನ್ನು ರಾಜಕೀಯ ಪಕ್ಷಗಳಿಗೆ ಸ್ಪಷ್ಟವಾಗಿ ತೋರಿಸಿಕೊಟ್ಟ ಈ ಚುನಾವಣೆ ಉಳಿದೆಲ್ಲ ಹಳೆಯ ಚುನಾವಣೆಗಿಂತ ವಿಭಿನ್ನ ಮತ್ತು ವಿಶಿಷ್ಟ.
ಇನ್ನಾದರೂ ಕಾಂಗ್ರೆಸ್ ಸೇರಿದಂತೆ ಉಳಿದ ಅಥವಾ ಅಳಿವಿನ ಅಂಚಿನಲ್ಲಿರುವ ರಾಜಕೀಯ ಪಕ್ಷಗಳು ಜಾತಿ ರಾಜಕಾರಣವನ್ನು ಬಿಡಬೇಕು. ಇದು ಅಳಿವು ಉಳಿವಿನ ಪ್ರಶ್ನೆ. ಮೋದಿ ನುಡಿದಂತೆ ನಡೆದರೆ ಲೋಕಸಭೆಯಲ್ಲಿ ಕಾಂಗ್ರೆಸ್ಸಿನ ಪರಿಸ್ಥಿತಿ ಸುಧಾರಿಸಲು ಇನ್ನೊಂದು ಚುನಾವಣೆಯಲ್ಲಿ ಕೂಡ ಸಾಧ್ಯವಾಗದು. ಆದರೆ ಕಾಂಗ್ರೆಸ್ಸಿನ ಕಥೆ ಇಷ್ಟಕ್ಕೆ ಮುಗಿಯಿತೆಂದಲ್ಲ. ಸದ್ಯ ಕಾಂಗ್ರೆಸ್ಸಿನ ಕೈಯಲ್ಲಿ ಕರ್ನಾಟಕವೂ ಸೇರಿದಂತೆ ಹಲವಾರು ರಾಜ್ಯಾಡಳಿತಗಳಿವೆ. ಈ ರಾಜ್ಯಗಳಲ್ಲಿ ಅಭಿವೃದ್ಧಿಯನ್ನು ಸಾಧಿಸಿ ತೋರಿಸಿದರೆ ಮಾತ್ರ ಕಾಂಗ್ರೆಸ್ಸಿನ ಉಳಿವು. ಇದನ್ನು ಬಿಟ್ಟು ಕೇಂದ್ರದಲ್ಲಿ ಆಳುವ ಪಕ್ಷದ ಸಣ್ಣ ಸಣ್ಣ ಹುಳುಕನ್ನು ದೊಡ್ಡದು ಮಾಡುತ್ತ, ಕೇವಲ ಚುನಾವಣೆಯ ಸಮಯದಲ್ಲಿನ ಕೆಸರೆರಚಾಟದಿಂದ ಅಥವಾ ಜಾತಿ, ಕೋಮಿನ ಓಲೈಕೆಯಿಂದ ಅಧಿಕಾರಕ್ಕೆ ಬರಬಹುದೆಂದು ಇನ್ನೂ ನಂಬಿಕೊಂಡರೆ ಅವಸಾನ ಕಟ್ಟಿಟ್ಟ ಬುತ್ತಿ.
- ಶಿಶಿರ್ ಹೆಗಡೆ ಮೂರೂರು
shishirh@gmail.com