ಯುವ ಶಕ್ತಿಯ ಸದ್ಬಳಕೆಯಿಲ್ಲದೆ ವಿಕಾಸ ಹೇಗೆ ಸಾಧ್ಯ?
ಭಾರತ ಇಂದು ಹಲವು ವಿಷಯಗಳಲ್ಲಿ ಮುಂದಿದೆ. ಕಲೆಯಲ್ಲಿ, ಸಾಹಿತ್ಯದ...
ಭಾರತ ಇಂದು ಹಲವು ವಿಷಯಗಳಲ್ಲಿ ಮುಂದಿದೆ. ಕಲೆಯಲ್ಲಿ, ಸಾಹಿತ್ಯದಲ್ಲಿ, ರಾಜಕೀಯದಲ್ಲಿ, ವಿಜ್ಞಾನದಲ್ಲಿ, ವಾಣಿಜ್ಯದಲ್ಲಿ... ಹಾಗೆಯೇ ಮಾನವ ಸಂಪನ್ಮೂಲದ ಬೆಳವಣಿಗೆಯಲ್ಲಿಯೂ ಮುಂದಿದೆ. ಇಷ್ಟೊಂದು ವಿಚಾರಗಳಲ್ಲಿ ಮುಂದಿದ್ದರೂ ತಳಮಟ್ಟದಿಂದಲೇ ಹಲವಾರು ಸಮಸ್ಯೆಗಳನ್ನು ಅದು ಎದುರಿಸುತ್ತಿದೆ. ಮೂಲಭೂತ ಸೌಕರ್ಯದಿಂದ ಹಿಡಿದು ರಾಷ್ಟ್ರಮಟ್ಟದವರೆಗೆ ಸಮಸ್ಯೆಗಳಿಗೆ ಕೊನೆ ಮೊದಲಿಲ್ಲ. ಆಹಾರದ ಸಮಸ್ಯೆ, ಆರೋಗ್ಯದ ಸಮಸ್ಯೆ, ಭ್ರಷ್ಟಾಚಾರ, ನಿರುದ್ಯೋಗ ಒಂದೇ ಎರಡೇ!?
1947ರಲ್ಲಿ ಸ್ವಾತಂತ್ರ್ಯ ಪಡೆದು ಇಂದಿನವರೆಗೂ ಅಭಿವೃದ್ಧಿಶೀಲ ದೇಶಗಳ ಪಟ್ಟಿಯಲ್ಲಿಯೇ ಉಳಿದಿದೆಯೇ ಹೊರತು ಅಭಿವೃದ್ಧಿಹೊಂದಿದ ರಾಷ್ಟ್ರವಾಗಿಲ್ಲ. ವಿಶ್ವಯುದ್ಧದ ಹೊಡೆತದಿಂದ, ಸುನಾಮಿಯಂತಹ ಪ್ರಕೃತಿ ವಿಕೋಪದಿಂದ ಸರ್ವನಾಶದ ಅಂಚಿಗೆ ತಲುಪಿದರೂ ಫೀನಿಕ್ಸ್ ಪಕ್ಷಿಯಂತೆ ಒಂದೆರಡು ವರ್ಷಗಳಲ್ಲಿ ಎದ್ದು ನಿಲ್ಲುವ ಜಪಾನ್ನಂತೆ ಇಷ್ಟೊಂದು ಸಂಪನ್ಮೂಲಗಳಿದ್ದರೂ ನಮಗೇಕೆ ಆಗುತ್ತಿಲ್ಲ? ಯಾಕೆಂದರೆ ಅಭಿವೃದ್ಧಿಯ ಮಾತುಗಳೆಲ್ಲ ರಾಜಕೀಯ ವ್ಯವಸ್ಥೆಗೆ ಸೀಮಿತವಾಗಿದೆ. ಅರ್ಥವ್ಯವಸ್ಥೆಯು ಕುಸಿತದಲ್ಲಿಯೇ ಇರುತ್ತದೆ. ಇಂತಹ ವಿಚಾರಗಳಿಗೆ ಬಂದಾಗ ಭಾರತೀಯರು ಭಾರಿ ಸಂಪ್ರದಾಯವಾದಿಗಳಾಗಿಬಿಡುತ್ತಾರೆ. ಸಂಪನ್ಮೂಲಗಳ ಸರಿಯಾದ ಸದ್ಬಳಕೆಯಾಗುತ್ತಿಲ್ಲ.
ನಮ್ಮಲ್ಲಿರುವ ಮಾನವ ಸಂಪನ್ಮೂಲವೊಂದನ್ನೇ ಸರಿಯಾಗಿ ಬಳಸಿದರೆ ಸಾಕು, ಖಂಡಿತವಾಗಿಯೂ ಭಾರತ ಶೀಘ್ರವಾಗಿ ಅಭಿವೃದ್ಧಿ ಹೊಂದಿದ ರಾಷ್ಟ್ರಗಳ ಪಟ್ಟಿಯಲ್ಲಿ ಮೊದಲನೆಯದಾಗಬಹುದು. ಆದರೆ ನಮ್ಮ ಸಂಪ್ರದಾಯವಾದಿ ಉದ್ಯೋಗದಾತರು ಉದ್ಯೋಗ ನೀಡುವಲ್ಲಿ ಅನುಸರಿಸುವ ಹಳೆಯ ಮಾದರಿಯನ್ನು ಮೊದಲು ಕೈ ಬಿಡಬೇಕು.
ಇಂದು ವಿಶ್ವವಿದ್ಯಾನಿಲಯಗಳು ವರ್ಷವೊಂದಕ್ಕೆ ಸಾವಿರಾರು ಪದವೀಧರರನ್ನು ಸಮಾಜಕ್ಕೆ ಬಿಡುಗಡೆ ಮಾಡುತ್ತವೆ. ಅವರಲ್ಲಿ ಕ್ಯಾಂಪಸ್ ಸೆಲೆಕ್ಷನ್ ಆದವರು ಭವಿಷ್ಯದ ಹೊಂಗನಸನ್ನು ಕಟ್ಟಿಕೊಂಡು, ತಮಗೆ ಮುಂದೆ ಇನ್ನೊಂದು ಅವಕಾಶಕ್ಕೆ ಜಂಪ್ ಮಾಡಲು ಮೊದಲ ಮೆಟ್ಟಿಲಾಯಿತು ಎಂಬ ಸಂತಸದಿಂದಿರುತ್ತಾರೆಯೇ ಹೊರತು, ಉಳಿದವರು ಕೆಲಸ ಮಾಡುವ ಸಾಮರ್ಥ್ಯವಿದ್ದರೂ ಅದಕ್ಕೆ ತಕ್ಕುದಾದ ಕೆಲಸವಿಲ್ಲದೇ ಯಾವುದೋ ಒಂದು ಸಿಕ್ಕಿದ ಕೆಲಸವೆಂದು ದುಡಿಯುತ್ತಾ ಮಾನವ ಶಕ್ತಿ ವ್ಯತ್ಯಯವಾಗುತ್ತದೆ. ಇದಕ್ಕೆ ಮೊದಲ ಕಾರಣ ಉದ್ಯೋಗಕ್ಕಾಗಿ ಪ್ರಕಟಣೆಗಳಲ್ಲಿ ನಾವು ಗಮನಿಸುವ ಎಕ್ಸ್ಪೀರಿಯೆನ್ಸ್ ಎನ್ನುವ clause. ಅಂತಹ ಸಂದರ್ಭಗಳಲ್ಲಿ ಒಳ್ಳೆಯ ಉದ್ಯೋಗವೆಂಬ ಹಣೆಪಟ್ಟಿಯಿದ್ದರೆ ಈಗಾಗಲೇ ಜಂಪ್ಗೆ ತಯಾರಾದವರು ಅಲ್ಲಿಗೆ ಸ್ಕಿಪ್ ಆಗುತ್ತಾರೆ. ಆದರೆ ಮತ್ತೆ ಅವರ ಹಿಂದಿನ ಕೆಲಸದ ಖಾಲಿ ಜಾಗ ತುಂಬಲು ಅವರು ಕ್ಯಾಂಪಸ್ನಿಂದ ಬಂದ ಅನನುಭವಿಗಳೇ ಆಗಿದ್ದರೂ, ಅವರು ಬಿಟ್ಟುಹೋದ ಸ್ಥಾನಕ್ಕೆ ಉದ್ಯೋಗದಾತರು ಅನುಭವಸ್ಥರನ್ನು ಬಯಸುತ್ತಾರೆ. ಹಾಗಿದ್ದರೆ ಈ ಪದವಿ, ಸಾಮರ್ಥ್ಯವಿದ್ದೂ ಕೆಲಸ ದೊರೆಯದೆ ಇದ್ದ ವ್ಯಕ್ತಿಗೆ ಉದ್ಯೋಗ ಎಲ್ಲಿಂದ? ನಂತರ ಕಾಲ ಕ್ರಮೇಣ ಈ ಮಾನಸಿಕ ಜಂಜಡ ಆ ವ್ಯಕ್ತಿಯನ್ನು ಅರ್ಹತೆಯಿಂದಲೇ ದೂರ ಮಾಡುತ್ತದೆ. ತನ್ನ ಶಿಕ್ಷಣ ಸಾಲದ ಹೊರೆಯನ್ನು ತಪ್ಪಿಸಲು ಏನೋ ಒಂದು ಉದ್ಯೋಗವನ್ನು ಹೊರೆದ ವ್ಯಕ್ತಿಗೆ ಮತ್ತೆ ತನ್ನ ಪದವಿಯನ್ನು ಬಯಸಿದ ಉದ್ಯೋಗಾವಕಾಶವಿರುವಲ್ಲಿ ಸದ್ರಿ ವಿಷಯದ ಬಗ್ಗೆ ಅನುಭವವಿಲ್ಲ ಎನ್ನುವ ಖಾಯಂ ಅನರ್ಹತಾ ಪಟ್ಟಿಯನ್ನು ಉದ್ಯೋಗದಾತರು ಬಿಡುಗಡೆ ಮಾಡುತ್ತಾರೆ. ಉದ್ಯೋಗದಾತರು ಆತನಿಗೆ ಉದ್ಯೋಗ ನೀಡದೇ ಆತ ಅನುಭವವನ್ನು ಪಡೆಯುವುದಾದರೂ ಹೇಗೆ?
ನಿಜವಾಗಿ ನೋಡಿದರೆ ಕೆಲವೊಬ್ಬರನ್ನು ಬಿಟ್ಟರೆ, ಹೆಚ್ಚಿನ ಅನುಭವಸ್ಥರು ಕೆಲಸ ಕದಿಯುವಲ್ಲಿ, ಸಮಯವನ್ನು ಕೊಲ್ಲುವಲ್ಲಿ ಅನುಭವಸ್ಥರಾಗಿರುತ್ತಾರೆಯೇ ಹೊರತು ತಮ್ಮ creative mind ಅನ್ನು ಸ್ತಬ್ಧಗೊಳಿಸಿರುತ್ತಾರೆ. ಕೆಲಸ ಮಾಡುವ ಉತ್ಸಾಹವನ್ನು ಅವರ ನಿಗದಿತ ಸಂಬಳ ನಿಗ್ರಹಿಸಿರುತ್ತದೆ. ಹೇಗಿದ್ದರೂ ತಿಂಗಳ ಕೊನೆಗೆ ಸಂಬಳ ಖಾತೆಗೆ ಬೀಳುತ್ತದೆ ಅಥವಾ ಎಕ್ಸ್ಪೀರಿಯನ್ಸ್ ಆಧಾರದಲ್ಲಿ ಇನ್ನೊಂದು ಕೆಲಸ ಕಾದಿರುತ್ತದೆ ಎಂಬ ಸತ್ಯ ಅವರನ್ನು ಸೋಮಾರಿಗಳನ್ನಾಗಿಸುವ ಅವಕಾಶವೇ ಹೆಚ್ಚು. ಇದಕ್ಕಾಗಿಯೇ ಕೆಲವೊಂದು ಉದ್ಯೋಗದಾತರು ಟಾರ್ಗೆಟ್ ವ್ಯವಸ್ಥೆಯನ್ನು ಮಾಡಿರುವುದು. ಇದೂ ಕೂಡ ಉದ್ಯೋಗ ಹಾಗೂ ಉದ್ಯೋಗಿಯ ಮೇಲೆ ಒತ್ತಡವನ್ನು ಹೇರುತ್ತದೆಯೇ ಹೊರತು ಆರೋಗ್ಯವಂತ ಉದ್ಯೋಗ ವ್ಯವಸ್ಥೆಯಲ್ಲ.
ಇನ್ನು ಕೆಲವೊಂದು ಸಂಸ್ಥೆಗಳು ಪದವಿಯೆಂಬ ಮಾನದಂಡವಿದ್ದರೂ ಉದ್ಯೋಗಾರ್ಥಿಗಳಿಗೆ ಅರ್ಹತಾ ಪರೀಕ್ಷೆಗಳನ್ನು ಏರ್ಪಡಿಸುತ್ತದೆ. ಆ ಆಯ್ಕೆ ಮಾದರಿ ಪ್ರಶ್ನೆಗಳಿಗೂ, ಮುಂದೆ ಅವರು ನೀಡುವ ಉದ್ಯೋಗಕ್ಕೂ ಯಾವುದೆ ಸಂಬಂಧ ಇರುವುದಿಲ್ಲ. ಆ ಕೆಲಸಕ್ಕೆ ಅಂತಹ ಐಕ್ಯೂ ಅಗತ್ಯವಿಲ್ಲ. ಆವಾಗ ಕೆಲಸ ಮಾಡಬಲ್ಲವ ಮೊದಲ ಸುತ್ತಿನಲ್ಲಿಯೇ ಹಿಂದೆ ಸರಿಯುತ್ತಾನೆ. ಅದೃಷ್ಟವಿರುವವ ಕೆಲಸದ ಸಾಮರ್ಥ್ಯ ಇಲ್ಲದಿದ್ದರೂ ಗೊತ್ತಿಲ್ಲದೆಯೂ ಗುರುತಿಸಿದ ಉತ್ತರ ಸರಿಯಾಗಿ ಆಯ್ಕೆ ಹಂತಕ್ಕೆ ತಲುಪುತ್ತಾನೆ. ಇಷ್ಟೆಲ್ಲ ಮಾಡಬೇಕಾದರೆ ಒಬ್ಬ ನಿರುದ್ಯೋಗಿ ತನ್ನಲ್ಲಿಲ್ಲದ ಹಣವನ್ನು ಎಲ್ಲಿಂದಲೋ ಜಮೆಮಾಡಿ ಇಂತಹ ಹಲವು ಪರೀಕ್ಷೆಗಳಿಗೆ ಶುಲ್ಕವನ್ನು ಕಟ್ಟಿ ಜಿಗುಪ್ಸೆಯ ಮಟ್ಟ ತಲುಪಿರುತ್ತಾನೆ. ಮತ್ತೆ ಅದೇ ಸಂಸ್ಥೆ ಸ್ವಲ್ಪ ಸಮಯದಲ್ಲಿಯೇ ಪುನಃ ಪರೀಕ್ಷೆಯನ್ನು ಕರೆದಿರುತ್ತದೆ. ಇದು ಮಾನವ ಸಂಪನ್ಮೂಲದ ದುರ್ಬಳಕೆ ಅಲ್ಲವೇ?
ಇನ್ನು ಇನ್ಫ್ಲೂಯನ್ಸ್, ಲಂಚಾವತಾರಗಳಿಂದಾಗಿ ಸೋರಿಹೋಗುವ ಉದ್ಯೋಗಗಳೆಷ್ಟೋ? ನಮ್ಮ ಯುವ ಜನಾಂಗದ ಬೌದ್ಧಿಕ ಸಾಮರ್ಥ್ಯ ಐಟಿ-ಬಿಟಿ ಆಕರ್ಷಣೆಯಲ್ಲಿ ವಿದೇಶಿ ಕಂಪೆನಿಗಳ ಪಾಲಾಗಬೇಕೆ? ನಮ್ಮ ಯುವ ಶಕ್ತಿ ಬರಿಯ ಹೊಟ್ಟೆ ಹೊರೆಯುವುದಕ್ಕಾಗಿ ಸೋರಿಹೋಗಬೇಕೆ? ಪ್ರತಿಯೊಬ್ಬ ಯುವ ನಾಗರಿಕನಿಗೆ ಮೋದಿ ಸರಕಾರದಲ್ಲಿ ತನ್ನ ಶಕ್ತಿ ದೇಶಕ್ಕಾಗಿ ಬಳಕೆಯಾಗಿ ತಾನೂ ಕೂಡ ಗೌರವದ ಜೀವನ ಮಾಡುವ ಕನಸಿದೆ.
ಹಾಗೆಯೇ ಯುವ ಜನರೂ ಸೋಮಾರಿಗಳಾಗದೆ, ಪದವಿಗೆ ತಕ್ಕ ಕೆಲಸವಿಲ್ಲವೆಂದು ಕೊರಗದೆ, ತಮ್ಮೆಲ್ಲಾ ಸಾಮರ್ಥ್ಯವನ್ನು ಏಕರೂಪದಲ್ಲಿ ವಿನಿಯೋಗಿಸಿ ಯಶಸ್ವಿಯಾಗಬೇಕಿದೆ. ಕೃಷಿ, ವಾಣಿಜ್ಯ, ವಿಜ್ಞಾನ, ಜ್ಯೋತಿಷ್ಯ, ಶೈಕ್ಷಣಿಕ, ಪೌರೋಹಿತ್ಯ ಯಾವುದೇ ಕ್ಷೇತ್ರವಿರಲಿ ನಿಮ್ಮ ಕೆಲಸ ಪ್ರಾಮಾಣಿಕವಾಗಿರಲಿ. ನಿಮ್ಮ ಕ್ಷೇತ್ರದ ಆಯ್ಕೆಯೂ ನಿಮ್ಮ ಆಸಕ್ತಿಯದ್ದಾಗಿರಲಿ. ದೇವರು ನಿಮ್ಮನ್ನು ಆರೋಗ್ಯಪೂರ್ಣನಾಗಿ ಸೃಷ್ಟಿಸಿದ್ದಾನೆಂದಾದರೆ ಆತನ ಶ್ರಮಕ್ಕೆ ಪ್ರತಿಯಾಗಿ ನೀವುಗಳು ಸೋಮಾರಿಗಳಾಗದೆ, ಮೋಜು ಮಸ್ತಿಯೆಂದು ಸಮಯ ವ್ಯರ್ಥ ಮಾಡದೆ ದೇಶಾಭಿವೃದ್ಧಿಗಾಗಿ ದುಡಿಯಿರಿ. ಆಗ ಮಾತ್ರ ಕಲಾಂರ 2020ರ ಕನಸು ನನಸಾಗುತ್ತದೆ. ಭಾರತಾಂಬೆ ನೆಮ್ಮದಿಯ ನಗುವನ್ನು ಬೀರುತ್ತಾಳೆ.
ಜ್ಯೋತ್ಸ್ನಾ ಮರ್ಕಂಜ
ಉಪನ್ಯಾಸಕಿ
ವಿವೇಕಾನಂದ ಕಾನೂನು ಮಹಾವಿದ್ಯಾಲಯ
ಪುತ್ತೂರು, ದಕ
jyothsnadh@rediffmail.com