ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಅಂಕಣಗಳು

ಅಂದು ಭಾರವಾಗಿದ್ದ ಹೃದಯ ಇಂದು ತುಂಬಿ ಬಂದಿದೆ!

ಮಾರ್ಚ್ 14ರಂದು ಬೆಳಗ್ಗೆ ಬಿಜೆಪಿ...

Mainashree
Updated On : 26 May 2014, 11:39 am

ಮಾರ್ಚ್ 14ರಂದು ಬೆಳಗ್ಗೆ ಬಿಜೆಪಿ ಸೇರಲು ಬೆಂಗಳೂರಿನ ಮಲ್ಲೇಶ್ವರದಲ್ಲಿರುವ ಪಕ್ಷದ ಕಚೇರಿಯತ್ತ ಕಾರು ಸಾಗುತ್ತಿದ್ದರೆ ಹೃದಯ ಭಾರವಾಗುತ್ತಿತ್ತು. ನಾನು ಯಾವುದನ್ನು ಅತಿಯಾಗಿ ಪ್ರೀತಿಸಿದೆನೋ, ಮೋಹಿಸಿದೆನೋ, ಹೃದಯದಲ್ಲಿಟ್ಟು ಆರಾಧಿಸಿದೆನೋ, ಗೀಳು ಹತ್ತಿ ಬೆನ್ನಟ್ಟಿದೆನೋ, ಜೀವವನ್ನು ಅಪಾಯಕ್ಕೆ ತಳ್ಳಿ ಬರೆದೆನೋ  ಅಂತಹ ಪತ್ರಿಕೋದ್ಯಮವನ್ನು ಬಿಡುವ ಗಳಿಗೆ ಬಂದಾಗ ನನ್ನ ಕರುಳನ್ನು ನನ್ನ ಕೈಯ್ಯಾರೆ ಹಿಂಡಿಕೊಂಡಂತಾಗುತ್ತಿತ್ತು. ಪಕ್ಷದ ಕಚೇರಿ ಬಂದರೂ ರಾಜೀನಾಮೆ ನೀಡುವ ಇ-ಮೇಲ್ ಟೈಪ್ ಮಾಡಲು ಬೆರಳು ಒಪ್ಪುತ್ತಿರಲಿಲ್ಲ. ಆವತ್ತು ಪರಿಸ್ಥಿತಿಯ ಬಂಧಿಯಾಗಿ ಪಕ್ಷದ ಕಚೇರಿ ಮುಂದೆ ನಿಂತು ಇ-ಮೇಲ್ ಬರೆದು ನನ್ನ ಸಂಪಾದಕರಾದ ವಿಶ್ವೇಶ್ವರ ಭಟ್ಟರಿಗೆ ಕಳುಹಿಸಿದೆ. ಸದಾ ಕೋಪಿಸಿಕೊಳ್ಳುವ ನನ್ನ ಕಣ್ಣುಗಳು ಅಂದು ಒದ್ದೆಯಾಗಿದ್ದವು. ಹತ್ತೂವರೆಯಷ್ಟರಲ್ಲಿ ಪಕ್ಷ ಸೇರಿದ್ದಾಯಿತು. ಕೂಡಲೇ ಮೈಸೂರಿಗೆ ತೆರಳು ಅಂತ ಸಂತೋಷ್‌ಜಿ ಸೂಚಿಸಿದರು. ಅದು ಶುಕ್ರವಾರ. ತಾಯಿ ಚಾಮುಂಡೇಶ್ವರಿಗೆ ಪೂಜೆ ಸಲ್ಲಿಸಲು ಸೂಕ್ತ ದಿನ ಎಂಬ ಸಲಹೆಯೂ ಬಂತು. ಆದರೆ ಅರ್ಧ ದಾರಿಯಲ್ಲಿರುವಾಗ ನನಗೆ ಟಿಕೆಟ್ ಕೊಟ್ಟಿದ್ದನ್ನು ವಿರೋಧಿಸಿ ಮೈಸೂರಿನಲ್ಲಿ ಪ್ರತಿಭಟನೆ ಆರಂಭವಾಗಿದೆ, ಅಲ್ಲಿಗೆ ಹೋಗುವುದು ಅಪಾಯ ಎಂಬ ಕರೆಗಳೂ ಬಂದವು. ಆದರೂ ಒಂದಷ್ಟು ಜನರು ಧೈರ್ಯ ತುಂಬಿದರು. ಅವರ ಜತೆಗೂಡಿ ಚಾಮುಂಡಿ ಬೆಟ್ಟಕ್ಕೆ ತೆರಳಿ ಪೂಜೆ ಸಲ್ಲಿಸಿದೆ. ಭಾನುವಾರ ಬೈಕ್ ರ್ಯಾಲಿ ಇಟ್ಟುಕೊಂಡಿದ್ದೇವೆ, ಪ್ರತಾಪ್‌ಜೀ ನೀವು ಬಂದರೆ ಒಳ್ಳೆಯದು ಎಂದು ನಮೋ ಬ್ರಿಗೇಡ್ ಹುಡುಗರು ಹೇಳಿದರು.
ನನಗೆ ಮೈಸೂರು ದರ್ಶನ ಮಾಡಿಸಿದವರೇ ಅವರು!
ಒಂದೆರಡು ದಿನ ಕಳೆದಂತೆ ಮುನಿಸಿಕೊಂಡವರಲ್ಲಿ ಕೆಲವರು ದಾರಿಗೆ ಬಂದರು. ಏಕಾಏಕಿ ಎಂಪಿ ಟಿಕೆಟ್ ತಂದಿರುವ ಇವನ ಬಳಿ ದುಡ್ಡೂ ಇರಬೇಕು, ಇಲ್ಲವೇ ಯಾರೋ ಹಿಂದಿದ್ದಾರೆ ಎಂದು ಬಹಳಷ್ಟು ಜನರು ಭಾವಿಸಿದ್ದರು. ಅಂತಹವರಲ್ಲಿ ಕೆಲವರು 'ಇಷ್ಟಿಷ್ಟು ಕೋಟಿ ಬೇಕಾಗುತ್ತೆ. ಪಕ್ಷದಿಂದ ಏನೂ ಬರುವ ಸೂಚನೆ ಇಲ್ಲ. ನಿಮ್ಮ ಬಳಿ ಎಷ್ಟಿದೆ' ಎಂದು ಕೇಳಿದರು. ಇಪ್ಪತ್ತೆರಡು ಸಾವಿರ ಬ್ಯಾಂಕ್ ಖಾತೆಯಲ್ಲಿಟ್ಟುಕೊಂಡು ಹೋಗಿದ್ದವನ ಬಳಿ ಕೋಟಿಯ ಮಾತಾಡಿದರೆ ಏನಾಗಬೇಕು ಹೇಳಿ?! ನನ್ನನ್ನು ಪ್ರತೀ ಹಂತದಲ್ಲೂ ಕಾದುಕೊಂಡ ಆರೆಸ್ಸೆಸ್ಸಿನ ಮುಕುಂದರ ಬಳಿ ತೋಡಿಕೊಂಡೆ.  'ಮುಂದೆ ಇನ್ನೂ ಕಷ್ಟದ ಪರಿಸ್ಥಿತಿ ಬರಲಿದೆ. ಅದಕ್ಕೆಲ್ಲ ತಲೆ ಕೆಡಿಸಿಕೊಳ್ಳಬೇಡ. ಸುಮ್ಮನೇ ಪ್ರಚಾರ ಕಾರ್ಯಕ್ಕಿಳಿ. ಯಾರಾದರೂ ಕೇಳಿದರೆ ನನ್ನ ಹಾಗೂ ಸಂತೋಷ್‌ಜೀ ಕೇಳಿ ಅನ್ನು'  ಎಂದರು. ಅವರ ತಲೆಗೆ ಕಟ್ಟಿ ನಾನೂ ಪ್ರಚಾರಕ್ಕಿಳಿದೆ. ಯಾರು ಏನೇ ಅನ್ನಲಿ, ಬೈಯ್ಯಲಿ ಮೈಸೂರು, ಹುಣಸೂರು, ಪಿರಿಯಾಪಟ್ಟಣ, ಕೊಡಗಿನ ಜನ ಮಾತ್ರ ನನ್ನನ್ನು ಕೂಡಲೇ ಒಪ್ಪಿಕೊಂಡರು. ಪ್ರೋತ್ಸಾಹಕ್ಕೆ ನಿಂತರು. ಮೈಸೂರಿನಲ್ಲಿ ಯುವಜನತೆ ದೊಡ್ಡ ಪ್ರಮಾಣದಲ್ಲಿ ಸ್ವ ಇಚ್ಛೆಯಿಂದ ನನ್ನ ಪರ ಪ್ರಚಾರಕ್ಕಿಳಿದರೆ ಕೊಡವರು ವೋಟು ಕೊಡುವುದರ ಜತೆ ಪ್ರತೀ ಬೂತುಗಳ ನಿರ್ವಹಣೆಗೆ ನೋಟನ್ನೂ ಕೊಟ್ಟು ಪ್ರೋತ್ಸಾಹಿಸಿದರು. ಈ ಮಧ್ಯೆ ಏಪ್ರಿಲ್ 8 ರಂದು ಪ್ರಚಾರ ಭಾಷಣಕ್ಕೆಂದು ಬಂದ ಮೋದೀಜಿ ನನ್ನನ್ನು ಬಿಗಿದಪ್ಪಿ ಆಶೀರ್ವದಿಸಿದ ಮರುಕ್ಷಣವೇ ನನ್ನ ಗ್ರಹಗತಿ ಬದಲಾಯಿತು. ಪಕ್ಷದ ಯಂತ್ರ ತಕ್ಕಮಟ್ಟಿಗೆ ಕಾರ್ಯಾರಂಭ ಮಾಡತೊಡಗಿತು. ಈ ನಡುವೆ ಸಂತೋಷ್‌ಜೀ ಎರಡುಸಲ ಮೈಸೂರಿಗೆ ಬಂದು ಕಿವಿ ಹಿಂಡಿ ಹೋದರು. ಸಂಘದ ಹಿರಿಯರಾದ ಮಂಗೇಶ್‌ಜೀ ಬಂದು ಹೊದರು. ಜಗದೀಶ ಕಾರಂತರು ಕೊಡಗನ್ನು ಸಂಬಾಳಿಸಿದರು. ವಾದಿರಾಜರು ಮೈಸೂರಿಗೆ ಬಂದಿಳಿದರು. ನನ್ನ ಭಾರ ಇಳಿಯಿತು. ಒಂದು ಕಡೆ ನಾನು, ಮತ್ತೊಂದು ಕಡೆ ನನ್ನ ಪತ್ನಿಯೂ ಪ್ರಚಾರಕ್ಕಿಳಿದರು.
ಇಲ್ಲಿ ನಿಮಗೆ ಒಂದು ಘಟನೆ ಹೇಳಲೇಬೇಕು. ಒಂದು ದಿನ ರಾತ್ರಿ ಹುಣಸೂರು ಬಳಿಯ ಗ್ರಾಮಮೊಂದಕ್ಕೆ ಪ್ರಚಾರ ಸಭೆಗೆಂದು ಬಂದಿಳಿದೆ. ಎಂದಿನಂತೆ ಒಂದಿಷ್ಟು ಯುವಕರು ಮುತ್ತಿಗೆ ಹಾಕಿದರು. ಅವರ ನಡುವೆ ಮೈ, ಬಟ್ಟೆ ಅಸಾಧ್ಯವಾಗಿ ಕೊಳಕಾಗಿರುವ ವ್ಯಕ್ತಿಯೊಬ್ಬ ನುಸುಳಿ ನನ್ನ ಗಟ್ಟಿಯಾಗಿ ಹಸ್ತ ಹಿಡಿದು, 'ಹೋಗು.. ಹೋಗು... ನೀನೇ ಗೆಲ್ಲೋದು ಅಂದ' ಎಂದ. ಅವನಿಂದ ಕೈ ಬಿಡಿಸಿಕೊಂಡಾಗ ಹಸ್ತದಲ್ಲಿ ಏನೋ ಇದ್ದಂತಿದೆಯಲ್ಲಾ ಎಂದು ನೋಡಿಕೊಂಡಾಗ 50 ರುಪಾಯಿ ನೋಟಿತ್ತು! ನಿಜ ಹೇಳಬೇಕೆಂದರೆ ಆವತ್ತು ಆ 50 ರೂ. 50 ಕೋಟಿ ಸಿಕ್ಕಿದ್ದರೆ ಆಗುತ್ತಿದ್ದ ಸಂತೋಷಕ್ಕಿಂತ ಹೆಚ್ಚಿನ ಖುಷಿ ಕೊಟ್ಟಿತು. ನನ್ನ ಆತ್ಮ ವಿಶ್ವಾಸವನ್ನು ಇಮ್ಮಡಿಗೊಳಿಸಿತು. ನಮ್ಮ ಜನರ ಮೈ ಕೊಳಕಾಗಿರಬಹುದು, ಉಟ್ಟ ಬಟ್ಟೆ ಕೊಳಕಾಗಿರಬಹುದು. ಆದರೆ ಮನಸ್ಸು ಕೊಳಕಾಗಿಲ್ಲ ಕಣ್ರೀ.
ಇಂತಹ ಮನಸ್ಸುಗಳು, ಕಾಣದ ಕೈಗಳು, ಅಂದರೆ ಮೋದಿ ಪ್ರಧಾನಿಯಾಗಲೇಬೇಕೆಂದು ಸ್ವ ಇಚ್ಛೆಯಿಂದ ಪ್ರಚಾರ ಮಾಡಿದ ಜನಸಾಮಾನ್ಯರು ಹಾಗೂ ಪಕ್ಷದ ಶ್ರಮದಿಂದಾಗಿ ಅಸಾಧ್ಯವಾಗಿದ್ದ ಜಯ ಮೈಸೂರಿನಲ್ಲಿ ನನಗೊಲಿಯಿತು. ಬೆಂಗಳೂರಿನಲ್ಲಿ ಒಬ್ಬ ಕಾರ್ಪೋರೇಟರ್ ಖರ್ಚು ಮಾಡುವ ಹಣಕ್ಕಿಂತ ಕಡಿಮೆ ಖರ್ಚಿನಲ್ಲಿ ಲೋಕಸಭೆ ಚುನಾವಣೆಯನ್ನು ಜಯಿಸಿದೆ. ಅಷ್ಟು ಮಾತ್ರವಲ್ಲ, ಸ್ವತಂತ್ರ ಭಾರತ ಇತಿಹಾಸದಲ್ಲೇ ಮೊದಲ ಬಾರಿಗೆ ಕಾಂಗ್ರೆಸ್ಸೇತರ ಪಕ್ಷಮೊಂದು ಸ್ವಂತ ಬಲದಿಂದ ಅಧಿಕಾರ ಹಿಡಿಯವಂತೆ ಮಾಡಿತು ಮೋದಿ ಅಲೆ. ನಮ್ಮ ದೇಶಕ್ಕೆ ಸ್ವಾತಂತ್ರ್ಯ ಘೋಷಣೆಯಾದ ದಿನ ಮೇ-16 ಹಾಗೂ ಸ್ವಾತಂತ್ರ್ಯ ದಕ್ಕಿದ ದಿನ ಮೇ 26 ಎಂದರೆ ಖಂಡಿತ ಅತಿಶಯೋಕ್ತಿಯಾಗದು. ಇತ್ತೀಚಿನ ವರ್ಷಗಳಲ್ಲಿ ಒಬ್ಬ ವ್ಯಕ್ತಿ ಒಂದಿಡೀ ಪಕ್ಷವನ್ನು ಹೆಗಲ ಮೇಲೆ ಹೊತ್ತು ತಂದು ಅಧಿಕಾರದ ಗದ್ದುಗೆ ಮೇಲೆ ಕೂರಿಸಿದ ಉದಾಹರಣೆ ಕೂಡ ಪ್ರಪಂಚದಲ್ಲಿ ಮತ್ತೊಂದಿಲ್ಲ. ್ಜ್ಟಜ'ಡ ಝಛ್ಟಡಜಟಿ ್ಟಟಿಜ ಅಂತಾರಲ್ಲ, ಯಹೂದಿಗಳನ್ನು ರಕ್ಷಿಸಲು ಆ ದೇವರು ಮೋಸೆಸ್‌ನನ್ನು ಕಳುಹಿಸಿದ್ದ, ಭಾರತವನ್ನು ರಕ್ಷಿಸಲು ನರೇಂದ್ರ ಮೋದಿಯವರನ್ನು ಕಳುಹಿಸಿದ್ದಾನೆ. ಆತ ನಿಜಕ್ಕೂ ವರಪುತ್ರ.
ಮೊನ್ನೆ ಮೇ. 20 ರಂದು 65 ವರ್ಷಗಳ ಹಿಂದೆ ಯಾವ ಜಾಗದಲ್ಲಿ ಕುಳಿತು ನಮ್ಮ ಹಿರಿಯರು ಸಂವಿಧಾನವನ್ನು ರಚಿಸಿದ್ದರೋ ಅಂತಹ ಸಂಸತ್ತಿನ ಸೆಂಟ್ರಲ್ ಹಾಲ್‌ನಲ್ಲಿ ಕುಳಿತು ಮೋದಿಯವರ ಭಾಷಣ ಆಲಿಸುತ್ತಿದ್ದರೆ ಜೀವನ ಸಾರ್ಥಕ ಎನಿಸುತ್ತಿತ್ತು. ಅದರಲ್ಲೂ ನಂರೇದ್ರ ಮೋದಿಯವರು ಸಂಸತ್ ಭವನ ಮೆಟ್ಟಿಲೇರುವ ಮೊದಲು ಶಿರಭಾಗಿ ನಮಸ್ಕರಿಸುವ ಮೂಲಕ ಸಂಸತ್ತಿನ ಘನತೆಯನ್ನು ಮತ್ತೆ ಎತ್ತಿ ಹಿಡಿಯುವ ಸಂಕೇತ ನೀಡಿದ್ದಂತೂ ಅದ್ಭುತ. ಸಾಮಾನ್ಯವಾಗಿ ನಮ್ಮ ರಾಜಕಾರಣಿಗಳು ಅತ್ತರೆ ಜನ ನಗುತ್ತಾರೆ. ಆದರೆ 'ಒಬ್ಬ ಮಗ ತಾಯಿಯ ಸೇವೆಯನ್ನು ಮಾಡಬಹುದೇ ಹೊರತು ಕೃಪೆ ತೋರುವುದಕ್ಕಾಗುವುದಿಲ್ಲ' ಎನ್ನುತ್ತಾ ಅಂದು ಮೋದಿಯವರು ಗದ್ಗದಿತರಾದಾಗ ಇಡೀ ದೇಶವಾಸಿಗಳ ಕಣ್ಣು ಜಿನುಗಿದ್ದವು. ಅಂತಹ ಕ್ಷಣಕ್ಕೆ ಸಾಕ್ಷೀಭೂತನಾಗುವ ಅವಕಾಶ ಮಾಡಿಕೊಟ್ಟ ನನ್ನ ಮೈಸೂರು-ಕೊಡಗಿನ ಜನರ ಋಣವನ್ನು ಉಸಿರಿರುವವರೆಗೂ ಮರೆಯುವುದಿಲ್ಲ. ಅಂದು ಕೆಲಸಕ್ಕೆ ರಾಜೀನಾಮೆ ಕೊಡುವಾಗ ಹೃದಯ ಭಾರವಾಗಿತ್ತು. ಇಂದು ಹೃದಯ ತುಂಬಿ ಬಂದಿದೆ. ಜತೆಗೆ ನಮಗೆ ಮುಖ್ಯ ವಿರೋಧಪಕ್ಷವಿಲ್ಲದಿದ್ದರೇನಂತೆ, ಜನರ ನಿರೀಕ್ಷೆಗಳ ಭಾರ ಬೆಟ್ಟದಷ್ಟಿದೆ ಅದಕ್ಕಿಂತ ದೊಡ್ಡ ಎಚ್ಚರಿಕೆ ಗಂಟೆ ಇಲ್ಲ ಅಲ್ಲವೇ?

- ಪ್ರತಾಪ್ ಸಿಂಹ
ನೂತನ ಸಂಸದ
mepratap@gmail.com

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement