ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಅಂಕಣಗಳು

ಮೀನು ಹಿಡಿದುಕೊಡಲ್ಲ ಹಿಡಿಯೋದು ಕಲಿಸ್ತಾರೆ

Mainashree
Updated On : 25 May 2014, 10:26 am

ಶದಲ್ಲಿ ಬದಲಾವಣೆ ಗಾಳಿ ಬೀಸುತ್ತಿದೆ. ನರೇಂದ್ರ ಮೋದಿ ಅರ್ಥಾತ್ ಗುಜರಾತ್ ಮಾದರಿ ಅಭಿವೃದ್ಧಿ ಪರ್ವದ ಕಾಲ ಪಕ್ವಗೊಂಡಿದೆ. ದೇಶದಲ್ಲಿ ಕಷ್ಟ, ಬಡತನ, ಶೋಷಣೆಗಳನ್ನು ಜೀವಂತ ಇಟ್ಟುಕೊಂಡು ರಾಜಕಾರಣ ಮಾಡುವ ಸಾಂಪ್ರದಾಯಿಕ ರಾಜಕಾರಣಕ್ಕೆ ಇತಿಶ್ರೀ ಹಾಕಿ, ಸಮಗ್ರ ಅಭಿವೃದ್ಧಿಯ ಆಧಾರದಲ್ಲಿ ಚುನಾಯಿತರಾಗಿ ಆಡಳಿತ ನಡೆಸುವ ಹೊಸ ಸಂಪ್ರದಾಯಕ್ಕೆ ನಾಂದಿ ಹಾಡುವ ಹೊಸ ಶಕೆ ಆರಂಭಗೊಳ್ಳುತ್ತಿದೆ. ನನ್ನ ಮತ್ತು ನರೇಂದ್ರ ಮೋದಿ ನಿಕಟ ಸಂಪರ್ಕ ಹಾಗೂ ಗುಜರಾತ್‌ನ ಅಭಿವೃದ್ಧಿಯನ್ನು ಕಣ್ಣಾರೆ ಕಂಡಿರುವ ನಾನು, ಮೋದಿಯವರ ದೂರದೃಷ್ಟಿತ್ವಕ್ಕೆ ಬೆರಗಾಗಿದ್ದೇನೆ. ಜಾತಿ, ಧರ್ಮ, ಪಕ್ಷಪಾತ ಧೋರಣೆಯ ಸೀಮಾರೇಖೆಯನ್ನು ದಾಟಿ ನಿಂತಿರುವ ನರೇಂದ್ರ ಮೋದಿ, ಪ್ರತಿಯೊಬ್ಬರಲ್ಲಿ ಆರ್ಥಿಕ ಶಕ್ತಿ ತುಂಬುವ ಪರಿಕಲ್ಪನೆ, ಸಮಗ್ರ ಅಭಿವೃದ್ಧಿಯ ದೃಷ್ಟಿಕೋನ ವಿಭಿನ್ನ ರೀತಿಯದ್ದು. ಗುಜರಾತ್ ದೇಶದ ಅಭಿವೃದ್ಧಿಯ ಮಾದರಿ ಪ್ರಯೋಗ ಶಾಲೆಯನ್ನಾಗಿ ಮಾಡಿ, ಅದರ ಯಶಸ್ವಿನ ರೂವಾರಿಯಾಗಿ ಗುರುತಿಸಿಕೊಂಡಿರುವ ನರೇಂದ್ರ ಮೋದಿ ಈ ಗುಜರಾತ್ ಅರ್ಥಾತ್ ಮೋದಿ ಮಾದರಿಯ ಅಭಿವೃದ್ಧಿಯನ್ನು ದೇಶಾದ್ಯಂತ ವಿಸ್ತರಿಸುವ ಕನಸು ಹೊತ್ತಿದ್ದಾರೆ. ಪ್ರಧಾನಿ ಹುದ್ದೆಯಲ್ಲಿ ಕುಳಿತು ಇಡೀ ರಾಷ್ಟ್ರವನ್ನು ಸಮಗ್ರ ದೃಷ್ಟಿಕೋನದಿಂದ ನೋಡುವ ವಿಶಾಲ ಶಕ್ತಿ ಅವರಿಗಿದೆ.
ನರೇಂದ್ರ ಮೋದಿ ಅವರೇ ಹೇಳುವಂತೆ 'ನಾವು ಮೀನು ಹಿಡಿದು ಕೊಡಬಾರದು. ಮೀನು ಹಿಡಿಯುವುದು ಹೇಗೆಂದು ಕಲಿಸಿಕೊಡಬೇಕು'. ಆಗ ಮಾತ್ರ ನಮ್ಮವರು ಮೀನು ಹಿಡಿದು ಜೀವಿಸಲು ಶಕ್ತರಾಗುತ್ತಾರೆ. ಚುನಾಯಿತ ಪ್ರತಿನಿಧಿಗಳ ಆಡಳಿತ ವ್ಯವಸ್ಥೆಯಲ್ಲಿ ಎರಡು ರೀತಿಯ ಯೋಜನೆಗಳಿರುತ್ತವೆ. ಒಂದು ಅತ್ಯಂತ ಜನಪ್ರಿಯ ಯೋಜನೆಗಳು. ಕಡಿಮೆ ದರದಲ್ಲಿ ಕೆಲವು ವಸ್ತುಗಳನ್ನು ನೀಡಿ ಒಮ್ಮೆಗೆ ಜನರನ್ನು ಖುಷಿ ಪಡಿಸುವುದು. ಇನ್ನೊಂದು ಶಾಶ್ವತ ದೂರದೃಷ್ಟಿತ್ವದ ಯೋಜನೆಗಳು. ಜನಪ್ರಿಯ ಯೋಜನೆಗಳು ಮತಬ್ಯಾಂಕ್ ಆಧಾರವಾಗಿರುತ್ತವೆ. ಆದರೆ ಶಾಶ್ವತ, ಸಮಗ್ರ ದೃಷ್ಟಿಕೋನದ ದೂರದೃಷ್ಟಿತ್ವದ ಯೋಜನೆಗಳು ಜನರ ಸಂಕಷ್ಟಗಳಿಗೆ ಶಾಶ್ವತ ರೀತಿಯಲ್ಲಿ ಸ್ಪಂದಿಸುತ್ತವೆ. ಇದು ದೇಶವನ್ನು ಇನ್ನಷ್ಟು ಸಶಕ್ತಗೊಳಿಸುತ್ತದೆ. ಈ ನಿಟ್ಟಿನಲ್ಲಿ ಕೇಂದ್ರದಲ್ಲಿ ಜನಪ್ರಿಯ ಯೋಜನೆಗಳಿಗಿಂತ ಶಾಶ್ವತ ಯೋಜನೆಗಳಿಗೆ ಒತ್ತು ನೀಡುವ ಇರಾದೆಯನ್ನು ಮೋದಿಜೀ ವ್ಯಕ್ತಪಡಿಸಿದ್ದಾರೆ. ದೇಶದಲ್ಲಿ ತಮಗೆ ಬೇಕಾದಷ್ಟು ವಿದ್ಯುತ್ ಬಳಕೆ ಮಾಡಿ ಉಳಿಸುವ ಏಕೈಕ ರಾಜ್ಯ ಗುಜರಾತ್. ಇದೇ ಮಾದರಿಯಲ್ಲಿ ಇಡೀ ದೇಶದಲ್ಲಿ ವಿದ್ಯುತ್ ಸಮಸ್ಯೆಗೆ ಪರಿಹಾರ ಕಂಡುಕೊಳ್ಳುವ ಯತ್ನ ನಡೆದರೆ ನಮ್ಮ ದೇಶದ ಒಟ್ಟು ಅಭಿವೃದ್ಧಿ ವೇಗದ ಲಯವೇ ಬದಲಾಗಲಿದೆ. ಈ ಮಾದರಿಯ ಚಿಂತನೆಗಳು ಮೋದಿಜೀ ಅವರಲ್ಲಿದೆ. ಅದನ್ನು ಅನುಷ್ಠಾನ ಮಾಡುವ ಚೈತನ್ಯ, ಬುದ್ಧಿವಂತಿಕೆ ಅವರಲ್ಲಿದೆ.
ಭಾರತದಲ್ಲಿ ಅತ್ಯಂತ ಅಪರೂಪದ ಶಕ್ತಿಯಿರುವ ವಿವಿಧ ರಾಜ್ಯಗಳಿವೆ. ಮೋದಿಜೀ ಅವರು ಪ್ರತಿಯೊಂದು ರಾಜ್ಯಗಳ ಪ್ರತ್ಯೇಕ ಶಕ್ತಿ ಏನು ಎಂಬುವುದನ್ನು ಅರಿತು ಅದನ್ನೇ ಆಧರಿಸಿಕೊಂಡು ಅಭಿವೃದ್ಧಿ ಮಾಡುವ ಕಲ್ಪನೆ ಹೊತ್ತಿದ್ದಾರೆ. ಉದಾಹರಣೆಗೆ ಕರ್ನಾಟಕ ಕರಾವಳಿ ತೀರದಲ್ಲಿ ಪ್ರವಾಸೋದ್ಯಮ, ಮೀನುಗಾರಿಕೆ ಇತ್ಯಾದಿಗಳಿಗೆ ಒತ್ತು ನೀಡುವುದು. ಪ್ರವಾಸೋದ್ಯಮಕ್ಕೆ ಏನೇನು ಸೌಲಭ್ಯಗಳು ಬೇಕೋ ಅದರ ವ್ಯವಸ್ಥೆ ಮಾಡಿಕೊಂಡು ಅಭಿವೃದ್ಧಿ ಪಡಿಸಿದಾಗ, ಈ ಪ್ರದೇಶದ ಆರ್ಥಿಕ ಶಕ್ತಿ ವೃದ್ಧಿಯಾಗುತ್ತದೆ. ಹಾಗೆಯೇ ಮೀನುಗಾರಿಕೆ ಸಂಬಂಧಿಸಿದಂತೆ ಅತ್ಯಾಧುನಿಕ ತಂತ್ರಜ್ಞಾನ ಬಳಸಿಕೊಂಡು, ಕಡಿಮೆ ವೆಚ್ಚ, ಕಡಿಮೆ ಸಮಯದಲ್ಲಿ ಹೆಚ್ಚು ಲಾಭಗಳಿಸುವ ತಂತ್ರಗಾರಿಕೆ ಒತ್ತು ನೀಡುವುದು. ಇದರಿಂದ ಮೀನುಗಾರರ ಜೀವನ ಮಟ್ಟ ಸುಧಾರಣೆ ಸಾಧ್ಯ. ಕೃಷಿ ಆಧಾರಿತ ಅಭಿವೃದ್ಧಿ ಬೃಹತ್ ಕನಸು ಅವರಲ್ಲಿ ಗಾಢವಾಗಿ ಬೇರೂರಿದೆ. ಹೀಗೆ ಪ್ರತೀ ರಾಜ್ಯದಲ್ಲಿರುವ ವಿಶೇಷತೆಯನ್ನು ಗುರುತಿಸಿ ಅದಕ್ಕೆ ಅನುಗುಣವಾಗಿ ಅಭಿವೃದ್ಧಿ ಪಡಿಸುವ ಚಿಂತನೆ ನರೇಂದ್ರ ಮೋದಿ ಅವರದ್ದು. ಹೀಗೆ ದೇಶದ ಎಲ್ಲಾ ರಾಜ್ಯಗಳಿಗೆ ಸಮಾನ ಅವಕಾಶಗಳನ್ನು ನೀಡಿ, ಆಯಾ ಪ್ರದೇಶ, ಜನಜೀವನಕ್ಕೆ ಪೂರಕವಾದ ಅಭಿವೃದ್ಧಿ ಚಿಂತನೆ ಅನುಷ್ಠಾನ ಮಾಡುವ ದೊಡ್ಡ ಕನಸು ಮೋದಿ ಅವರಿಗಿದೆ.
ಆಡಳಿತ ವ್ಯವಸ್ಥೆ ಸುಧಾರಣೆ ಮಾಡುವ ದೃಷ್ಠಿಯಿಂದ ಮೊಟ್ಟ ಮೊದಲನೆಯದಾಗಿ ಅಧಿಕಾರಿಗಳ ಮನೋಭಾವನೆ ಬದಲಾಯಿಸುವ ಚಿಂತನೆ ಅವರಿಗಿದೆ. ಜಗತ್ತಿನಲ್ಲಿ ಭಾರತಕ್ಕೆ ಆಗ್ರಮಾನ್ಯ ಗೌರವ ದೊರೆಯುವಂತೆ ಮಾಡಲು, ಈ ದೇಶಕ್ಕಾಗಿ, ಇಲ್ಲಿನ ಬಡ ಜನರಿಗಾಗಿ ಅಧಿಕಾರಿಗಳು ದುಡಿಯಬೇಕು ಎಂಬ ಭಾವನೆ ಮೂಡಿಸುವುದು. ಜತೆಗೆ ಆಡಳಿತ ಆಯಕಟ್ಟಿನ ಜಾಗದಲ್ಲಿ ಅತ್ಯುತ್ತಮ, ಭ್ರಷ್ಟಾಚಾರ ವಿರೋಧಿ ಅಧಿಕಾರಿಗಳನ್ನು ಕೂರಿಸುವುದು. ಭ್ರಷ್ಟಾಚಾರ ನಿಯಂತ್ರಣಕ್ಕೆ ದೈನಂದಿನ ಆಡಳಿತ ವ್ಯವಸ್ಥೆಯಲ್ಲಿ ಅತ್ಯಾಧುನಿಕ ತಂತ್ರಜ್ಞಾನ ಬಳಕೆ ಮಾಡುವುದು ಅವರ ಕಲ್ಪನೆಯಲ್ಲಿದೆ.
ರಾಷ್ಟ್ರೀಯ ಮತ್ತು ಗಡಿಭಾಗಗಳ ಭದ್ರತೆಯ ಬಗ್ಗೆ ಗರಿಷ್ಠ ಗಮನ ನೀಡಲಿರುವ ಮೋದಿಜೀ, ಎಲ್ಲರನ್ನು ಪ್ರೀತಿಯಿಂದ ಗೆಲ್ಲಲು ಸಾಧ್ಯ ಎಂಬುದನ್ನು ಒಪ್ಪುತ್ತಾರೆ. ಈ ಹಿನ್ನೆಲೆಯಿಂದಲೇ ದೇಶದ ನೆರೆಯ ರಾಷ್ಟ್ರಗಳಲ್ಲಿ ಅತ್ಯಂತ ಉತ್ತಮ ಬಾಂಧವ್ಯ, ಪ್ರೀತಿ, ವಿಶ್ವಾಸ ಬೆಳೆಸುವ ಇರಾದೆ ಇದೆ. ಇದು ದೌರ್ಬಲ್ಯವಾಗದ ರೀತಿಯಲ್ಲಿ ಎಚ್ಚರಿಕೆ ವಹಿಸುವ ಸೂಕ್ಷ್ಮ ಗ್ರಹಿಕೆ ನರೇಂದ್ರ ಮೋದಿಯವರಲ್ಲಿ ನಾನು ಕಂಡಿದ್ದೇನೆ. ನರೇಂದ್ರ ಮೋದಿ ಪ್ರಧಾನಿ ಆಗುವ ಮೂಲಕ, ಮಾಜಿ ರಾಷ್ಟ್ರಪತಿ ಅಬ್ದುಲ್ ಕಲಾಂ ಕಂಡ 2020ರಲ್ಲಿ ಅಭಿವೃದ್ದಿ ಹೊಂದಿದ ಭಾರತ ಎಂಬ ಕನಸು ನನಸಾಗುವ ಮೊದಲ ನಡೆ ಆರಂಭವಾಗಿದೆ ಎಂದರೆ ಅತಿಶಯೋಕ್ತಿಯಾಗಲಾರದು.

- ನಳೀನ್‌ಕುಮಾರ್ ಕಟೀಲ್, ಸಂಸದರು, ದ.ಕ. ಜಿಲ್ಲೆ


Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement