ಪಿಯುಸಿಯ ಅರೆವಾರ್ಷಿಕ ಪರೀಕ್ಷೆಗಳು ಮುಗಿದಿವೆ. ಈಗಾಗಲೇ ಕಾಲೇಜು, ಟ್ಯೂಷನ್ ಗಳ ನಡುವೆ ಮುಳುಗಿ ಓದಲಾಗದೇ ದಿಗಿಲು ಪಡುತ್ತಿರುವವರು ಹಾಗೂ ಏನು ಓದಬೇಕೆಂದು ತಿಳಿಯದೇ ಕಡಿಮೆ ಅಂಕಗಳನ್ನು ಪಡೆದು ಈ ಬಾರಿ ಫೇಲಾಗಬಹುದೆಂದು ಆತಂಕ ಪಡುತ್ತಿರುವವರಿಗೆ ಹತ್ತಿರದ ದಾರಿಯೊಂದಿದೆ. ಈ ದಾರಿಯು ನಿಮಗೆ ಅತೀ ಹೆಚ್ಚು ಅಂಕಗಳನ್ನು ಗಳಿಸಲು ರ್ಯಾಂಕ್ ಗಳಿಸಲು ಸಾಧ್ಯವಾಗಿಸದೆ ಇದರಬಹುದು ಆದರೆ ಕಡಿಮೆ ಅಂಕಗಳ ಸುಳಿಯಿಂದ ನಿಮ್ಮನ್ನು ಕಾಪಾಡುವುದಂತೂ ಸತ್ಯ.
ರಾಜ್ಯದ ಪಿಯು ಪಠ್ಯವನ್ನು ಮೇಲ್ದರ್ಜೆಗೆ ಏರಿಸಲಾಯಿತು. ಅಂದರೆ ಕೇಂದ್ರೀಯ ಪಠ್ಯವನ್ನು ಕರ್ನಾಟಕದ ಕಾಲೆಜುಗಳಲ್ಲಿ ಅಳವಡಿಸಲಾಯಿತು. ಕೇಂದ್ರಿಯ ಪಠ್ಯವು ಅತ್ಯಂತ ಕ್ಲಿಷ್ಟಕರವಾದದ್ದು. ಬಹುತೇಕ ಶಿಕ್ಷಕರೇ ಈ ಪಠ್ಯಕ್ಕೆ ಹೊಂದಿಕೊಳ್ಳಲು ಪರದಾಡಬೇಕಾಯಿತು.ಹೀಗಾಗಿ ಪಠ್ಯವನ್ನು ಮೇಲ್ದರ್ಜೆಗೇರಿಸಿದರೂ ಗ್ರಾಮೀಣ ವಿದ್ಯಾರ್ಥಿಗಳ ಒಳಿತಿಗಾಗಿ ಪ್ರಶ್ನೆಪತ್ರಿಕೆ ಮತ್ತು ಮೌಲ್ಯಮಾಪನದ ನೀಲಿನಕ್ಷೆಯನ್ನು ಮೊದಲಿನಂತೆಯೇ ಉಳಿಸಿಕೊಳ್ಳಲಾಯಿತು. ಪ್ರಶ್ನೆ ಪತ್ರಿಕೆಯನ್ನು ರೂಪಿಸುವವರಿಗೆ ನಿರ್ದಿಷ್ಟ ಮಾನದಂಡಗಳಿರುತ್ತವೆ. ಆ ಮಾನದಂಡದ ಪ್ರಕಾರವೇ ಅವರು ಪ್ರಶ್ನೆಪತ್ರಿಕೆಗಳನ್ನು ರೂಪಿಸಬೇಕು. ಪ್ರಸ್ತುತ ಮಾನದಂಡಗಳ ಪ್ರಕಾರ ಪ್ರಶ್ನೆಪತ್ರಿಕೆ ಹೇಗಿರಬೇಕೆಂದರೆ ಸಾಧಾರಣ ಬುದ್ಧಿಮಟ್ಟದ ಎಲ್ಲರೂ ಪಾಸ್ ಆಗುವಂತಿರಬೇಕು. ಕೊಂಚ ಓದಿದವರು ಮೊದಲನೆಯ ದರ್ಜೆಯಲ್ಲಿ ತೇರ್ಗಡೆಯಾಗಬೇಕು ಹಾಗೂ ಅತ್ಯಂತ ಕಠಿಣ ಪರಿಶ್ರಮ ಪಟ್ಟವರು ಮಾತ್ರ ಶೇ.95 ಕ್ಕಿಂತ ಹೆಚ್ಚು ತೆಗೆಯಬೇಕು. ಈ ಸಮಾಜವಾದಿ ಧೋರಣೆಯುಳ್ಳ ಪ್ರಶ್ನೆಪತ್ರಿಕೆಗಳು ವಿದ್ಯಾರ್ಥಿಗಳ ಹಿತಕ್ಕಾಗಿಯೇ ಇರುವುದು.
ಇತ್ತೀಚೆಗೆ ಪಿಯು ಪರೀಕ್ಷಾ ಮಂಡಳಿಯು ಪ್ರಶ್ನೆಪತ್ರಿಕೆಗಳಲ್ಲಿ ಕೇಳುವ ಪ್ರಶ್ನೆಗಳ ನೀಲನಕ್ಷೆಯ ಕೈಪಿಡಿಯನ್ನು ಬಿಡುಗಡೆ ಮಾಡಿದೆ. ಇದು ಬಹುತೇಕ ಕಾಲೇಜುಗಳಲ್ಲಿ ಮತ್ತು ಪುಸ್ತಕ ಮಳಿಗೆಗಳಲ್ಲಿ ರೂ.50/- ರ ದರದಲ್ಲಿ ದೊರೆಯುತ್ತದೆ. ಇದರಲ್ಲಿ ಪಠ್ಯದ ವಿವಿಧ ಅಧ್ಯಾಯಗಳ ಪರೀಕ್ಷಾತ್ಮಕ ತೂಕವನ್ನು ಕೊಡಲಾಗಿದೆ. ಈ ಕೈಪಿಡಿಯಲ್ಲಿ ಯಾವ ಯಾವ ಅಧ್ಯಾಯದಿಂದ ಎಷ್ಟು ಪ್ರಶ್ನೆಗಳು ಬರುತ್ತವೆ ಮತ್ತು ಆ ಅಧ್ಯಾಯದಿಂದ ಎಷ್ಟು ಅಂಕಗಳ ಪ್ರಶ್ನೆಗಳು ಬರಲಿವೆ ಎಂದು ವಿವರಿಸಲಾಗಿರುತ್ತದೆ. ಇದಲ್ಲದೇ ಯಾವ ಅಧ್ಯಾಯಗಳಿಂದ ಯಾವ ರೀತಿಯ ಪ್ರಶ್ನೆಗಳನ್ನು ಕೇಳಬೇಕು. ಎಷ್ಟು ಲೆಕ್ಕಗಳನ್ನು ಕೇಳಬೇಕು ಎಂಬುದನ್ನೂ ವಿವರಿಸಲಾಗಿದೆ. ಒಂದು ಮಾರ್ಕ್ ಪ್ರಶ್ನೆಗಳು ಯಾವುದರಿಂದ ಬರುತ್ತವೆ. ಐದು ಮಾರ್ಕ್ ಪ್ರಶ್ನೆಗಳು ಯಾವುದರಿಂದ ಬರುತ್ತವೆ ಇತ್ಯಾದಿಗಳನ್ನು ಇಲ್ಲಿ ವಿಷದಪಡಿಸಲಾಗಿದೆ. ಹೀಗಾಗಿ ಯಾವ ಅಧ್ಯಾಯಗಳಿಂದ ಹೆಚ್ಚು ಅಂಕಗಳ ಪ್ರಶ್ನೆಗಳು ಬರುವ ಸಾಧ್ಯತೆಗಳಿರುತ್ತವೋ ಅಂತಹ ಅಧ್ಯಾಯಗಳ ಮೇಲೆ ಹೆಚ್ಚು ಗಮನ ಕೇಂದ್ರೀಕರಿಸಿ ಓದಬಹುದು. ಯಾವ ಅಧ್ಯಾಯಗಳಿಂದ ಲೆಕ್ಕಗಳು ಬರುತ್ತವೋ ಆ ಅಧ್ಯಾಯದ ಲೆಕ್ಕಗಳನ್ನೆಲ್ಲ ಹೆಚ್ಚು ಒತ್ತು ಕೊಟ್ಟು ಅಭ್ಯಾಸ ಮಾಡಬಹುದು. ಈ ಕೈಪಿಡಿಯಲ್ಲಿ ಮಾದರಿ ಪ್ರಶ್ನೆಪತ್ತಿಕೆಗಳೂ ಇರುತ್ತವೆ. ಇವಲ್ಲದೇ ಹಿರಿಯ ವಿದ್ಯಾರ್ಥಿಗಳಿಂದ ಹಳೆಯ ಪ್ರಶ್ನೆಪತ್ರಿಕೆಗಳನ್ನು ಸಂಗ್ರಹಿಸಿ ಅವುಗಳಲ್ಲಿ ಯಾವ ಅಧ್ಯಾಯಗಳಿಗೆ ಹೆಚ್ಚು ಒತ್ತು ಕೊಡಲಾಗಿದೆ ಎಂದು ಗಮನಿಸಿ ಅಂತಹ ಅಧ್ಯಾಯಗಳ ಕಡೆ ಹೆಚ್ಚು ಸಮಯ ವ್ಯಯಿಸಬಹುದು.
ಈ ಎಲ್ಲ ಕೆಲಸಗಳನ್ನು ಈಗಲೇ ಒಂದು ದಿನ ಕೂತು ಮಾಡಿ ಮುಗಿಸಬೇಕು. ಯಾವ ಯಾವ ಭಾಗದಲ್ಲಿ ಗಮನ ಕೇಂದ್ರಿಕರಿಸಿ ಓದಬೇಕೆಂಬ ಟಿಪ್ಪಣಿಗಳನ್ನು ಈಗಲೇ ತಯಾರು ಮಾಡಿಕೊಂಡು, ಸಿದ್ಧತೆ ಮಾಡಿಕೊಂಡು ಓದಲಾರಂಭಿಸಬೇಕು. ನಿಮ್ಮ ಈ ಓದು ನಿಮ್ಮ ಕಾಲೇಜಿನ ಪೂರ್ವಭಾವಿ ಸಿದ್ಧತೆಯ ಪರೀಕ್ಷೆಗಳು ಶುರುವಾಗುವ ಮೊದಲೇ ಮುಗಿದುಬಿಡಬೇಕು. ಮುಖ್ಯ ಓದು ಮುಗಿದ ಮೇಲೆ ಉಳಿದ ಓದುಗಳ ಮೇಲೆ ಗಮನ ಕೇಂದ್ರೀಕರಿಸಿ ಓದಿ ಹೆಚ್ಚು ಅಂಕ ಗಳಿಸಬಹುದು.
ಕೈಪಿಡಿಯು ಎಲ್ಲ ವಿಷಯಗಳ ಬಗ್ಗೆಯೂ ಲಭ್ಯವಿದೆ. ಇದು ವಿದ್ಯಾರ್ಥಿಗಳಿಗೆ ಮಾರ್ಗದರ್ಶಿ ಮಾತ್ರವೇ ಹೊರತು ಬೋಧಕವಲ್ಲ. ಹಾಗೆಯೇ ನೆನಪಿಡಿ ಕೈಪಿಡಿಯ ಸಹಾಯ ಸಂಕಷ್ಟದಿಂದ ಪಾರು ಮಾಡಲು ಮಾತ್ರವೇ ಹೊರತು ಇದರಿಂದ ಹೆಚ್ಚಿನ ಅಂಕಗಳು ಸಂಪಾದನೆಯಾಗುವುದಿಲ್ಲ. ಇದು ಸಿ ಇ ಟಿ ,ಐಐಟಿ ಪ್ರವೇಶ ಪರೀಕ್ಷೆಗಳಂತಹ ಪರೀಕ್ಷೆಗಳಿಗೆ ಸಹಾಯ ಮಾಡುವುದಿಲ್ಲ. ಹೆಚ್ಚಿನ ಅಂಕ ಗಳಿಸಲು ಉತ್ತಮ ಕಾಲೇಜಿನಲ್ಲಿ ಸೀಟು ಗಿಟ್ಟಿಸಲು ಆಳವಾದ ಓದು ಮತ್ತು ಕಠಿಣ ಪರಿಶ್ರಮ ಬೇಕೇಬೇಕು.
Follow KannadaPrabha channel on WhatsApp
Download the KannadaPrabha News app to follow the latest news updates
Subscribe and Receive exclusive content and updates on your favorite topics
Subscribe to KannadaPrabha YouTube Channel and watch Videos