ಡಿಜಿಟಲ್ ಇಂಡಿಯಾದ ಇತ್ತೀಚಿನ ಅನೇಕ ಹೊಸ ಯೋಜನೆಗಳು ಪ್ರಕಟವಾಗುತ್ತಿವೆ. ಭಾರತಕ್ಕೆ ಹೋಲಿಸಿದರೆ ಕರ್ನಾಟಕ ಡಿಜಿಟಲ್ ಆಗುವ ಪ್ರಕ್ರಿಯೆಯಲ್ಲಿ ಸುಮಾರು ಇಪ್ಪತ್ತು ವರ್ಷ ಮುಂದಿದೆ. ಡಿಜಿಟಲ್ ಇಂಡಿಯಾದ ಅಧಿಕಾರಿಗಳು ದೆಹಲಿಯಿಂದ ಕರ್ನಾಟಕಕ್ಕೆ ಬಂದು ಅನೇಕ ಕಡೆ ಆಗಲೆ ಅಧ್ಯಯನ ಮಾಡಿಕೊಂಡು ಹೋಗಿದ್ದಾರೆ. ನಂ ವನ್ ಎಂದು ಹೇಳಿಕೊಳ್ಳುತ್ತಿದ್ದ ಗುಜರಾತಿನಲ್ಲಿಯೂ ಸಹ ಕರ್ನಾಟಕದಷ್ಟು ಡಿಜಿಟಲೀಕರಣವಾಗಿಲ್ಲ.
ಹಾಗೆ ಹೋಲಿಸಿದರೆ ಬೇರೆ ರಾಜ್ಯಗಳಿಗಿಂತ ಕರ್ನಾಟಕದಲ್ಲಿ ಕೇಂದ್ರ ಸರಕಾರವು ಕೊಟ್ಟ ಸಹಕಾರವೂ ಅಷ್ಟಕ್ಕಷ್ಟೇ! ದೂರವಾಣಿ ಸಂಪರ್ಕದಿಂದ ಹಿಡಿದು ವಿದ್ಯುತ್ ವರೆಗೆ ಎಲ್ಲದರಲ್ಲೂ ಕರ್ನಾಟಕ ಎದುರಿಸಿದ್ದು ಮಲತಾಯಿ ಧೋರಣೆಯನ್ನು.ಆದರೂ ಸಹ ಎಲ್ಲ ರಾಜ್ಯಗಳನ್ನು ಹಿಂದಿಕ್ಕಿ ಡಿಜಿಟಲ್ ಲೋಕದಲ್ಲಿ ಕರ್ನಾಟಕವು ಈ ಸಾಧನೆ ಮಾಡಿದೆ.
ಕೋರ್ಟ್ ಗಳಿಂದ ಹಿಡಿದು ಸರಕಾರದ ವರೆಗೆ ಬಹುತೇಕ ಸೌಲಭ್ಯಗಳು ನಾಗರಿಕರೊಗೆ ಲಭ್ಯವಿವೆ. ಇದು ಮೊದಲು ಶುರುವಾಗಿದ್ದು ಭೂಮಿ ಎಂಬ ಗ್ರಾಮಪಂಚಾಯತಿಯನ್ನು ಡಿಜಿಟೈಸ್ ಮಾಡುವ ಯೋಜನೆಯಿಂದ. ರೈತರಿಗೆ ಕೇಂದ್ರೀಕೃತ ಕಛೇರಿಯಲ್ಲಿ ಡಪಹಣಿ ನೀಡು ಮಹತ್ವಾಕಾಂಕ್ಷಿ ಯೋಜನೆ ಸುಮಾರು ಹತ್ತು ವರ್ಷಗಳ ಹಿಂದೆ ಪೂರ್ಣಗೊಂಡಿತು. ಈಗ ಪಹಣಿ ರೈತರಿಗೆ ಆನ್ ಲೈನ್ ನಲ್ಲಿ ಲಭ್ಯ. ರೈತರಿಂದ ಪಹಣಿಗಾಗಿ ಹಣ ಕೇಳುತ್ತಿದ್ದ ಗ್ರಾಮಲೆಕ್ಕಿಗರ ಭ್ರಷ್ಟಾಚಾರಕ್ಕೆ ಇದೊಂದು ಅಂತ್ಯ ಹಾಡಿತು. ತಂತ್ರಜ್ಞಾನದ ಬಳಕೆಯ ಮೂಲಕ ವ್ಯವಸ್ಥೆಯನ್ನು ಸುಧಾರಿಸಬಹುದಾದ ಅತ್ಯುತ್ತಮ ದಾರಿಗೆ ಇದೊಂದು ಸಾಧ್ಯತೆಯನ್ನು ತೋರಿಸಿತು.
ತದನಂತರ ಕೋರ್ಟ್, ಪೋಲೀಸ್ ವ್ಯವಸ್ಥೆ, ಸಕಾಲದ ಮೂಲಕ ಎಲ್ಲ ಸ್ಥಳೀಯ ಆಡಳಿತ ಸಂಸ್ಥೆಗಳು, ಸಾರಿಗೆ ವ್ಯವಸ್ಥೆ ಎಲ್ಲವೂ ಈ ಡಿಜಿಟಲೀಕರಣದ ವ್ಯಾಪ್ತಿಗೆ ಬಂದವು. ಬಹುತೇಕ ಎಲ್ಲ ರಾಜ್ಯಗಳಲ್ಲಿ ಇಂದಿಗೂ ಹಾಳೆಗಳ ಮೇಲೆಯೇ ಎಲ್ಲ ವ್ಯವಹಾರಗಳು ನಡೆಯುತ್ತವೆ. ಪೋಲೀಸ್ ವ್ಯವಸ್ಥೆಯಲ್ಲಿ ಎಫ್ ಐ ಆರ್ ದಾಖಲಿಸುವುದು, ನಿಯಮ ಉಲ್ಲಂಘನೆ ಮಾಡಿದ ವಾಹನಗಳ ದಾಖಲೆಗಳು ಎಲ್ಲವೂ ಕಂಪ್ಯೂಟರಿಕೃತ. ಅಪರಾಧ ನಡೆದ ವಿಚಾರಗಳ ಬಗ್ಗೆ ಪೋಲೀಸರಿಗೆ ಮೊಬೈಲ್ ನಲ್ಲೇ ಸಾಕ್ಷ ರವಾನಿಸುವ, ಕಂಪ್ಲೇಂಟ್ ದಾಖಲಿಸುವ ಸೌಲಭ್ಯ ಇಲ್ಲಿ ಮಾತ್ರ ಇದೆ. ಹೈಕೋರ್ಟ್ ಅಲ್ಲದೇ ಜಿಲ್ಲಾ ನ್ಯಾಯಾಲಯಗಳು ಸ್ಥಳೀಯ ನ್ಯಾಯಾಲಯಗಳಲ್ಲಿ ಕೇಸ್ ನ ಸ್ಥಿತಿಗತಿಗಳನ್ನು ಅರಿಯುವುದು ಆನ್ ಲೈನ್ ನಲ್ಲಿ ಸಾಧ್ಯ.
ಮನೆ, ವಾಹನಗಳ ನೊಂದಣಿ, ಖಾತೆಗಳೆಲ್ಲ ಡಿಜಿಟೈಸ್ ಆಗಿ ಭ್ರಷ್ಟಾಚಾರವನ್ನು ಸಾಕಷ್ಟು ಕಡಿಮೆ ಮಾಡಿವೆ. ಇತ್ತೀಚೆಗೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯು ಸಂಪೂರ್ಣ ಕಾಗದ ರಹಿತ ಭಾರತದ ಮೊದಲ ಸರಕಾರಿ ಕಛೇರಿ ಎಂದು ಘೋಷಿಸಲ್ಪಟ್ಟಿದೆ.ಕರ್ನಾಟಕ ಸರಕಾರವು ತನ್ನ ಸುಮಾರು ನೂರಾ ಒಂದು ಸೇವೆಗಳನ್ನು ಮೊಬೈಲ್ ಆಪ್ ಮುಖಾಂತರ ಜನರಿಗೆ ತಲುಪಿಸುತ್ತಿದೆ. ತೆರಿಗೆ, ಪೋಲೀಸ್, ಆರೋಗ್ಯ, ಪುರಸಭೆ, ಬ್ಯಾಂಕಿಂಗ್, ನೋಂದಣಿಗಳು ಇತ್ಯಾದಿ ಅವಶ್ಯಕ ಸೌಲಭ್ಯಗಳು ಇದರಲ್ಲಿ ಇವೆ.ಇತ್ತೀಚೆಗೆ ರೈತರಿಗೆ ದಲ್ಲಾಳಿಗಳಿಂದ ಮೋಸದಂತೆ, ರೈತರು ತಮ್ಮ ಬೆಳೆಗಳ ಬೆಲೆಯನ್ನು ತಾವೇ ನಿಯಂತ್ರಿಸುವಂತೆ ಎ ಪಿ ಎಂ ಸಿ ಯನ್ನು ಡಿಜಿಟಲೈಸ್ ಮಾಡಲಾಯಿತು. ಒಂದೇ ವಾರದಲ್ಲಿ ಈ ಪ್ರಕ್ರಿಯೆಯಿಂದ ಸರಕಾರಕ್ಕೆ ಹತ್ತಾರು ಕೋಟಿ ಲಾಭವಾಯಿತು. ಇದು ನಡುವೆ ನಡೆಯುತ್ತಿದ್ದ ಸೋರಿಕೆಯನ್ನು ಯಶಸ್ವಿಯಾಗಿ ತಡೆಯಿತು. ಈಗ ಈ ಪ್ರಕ್ರಿಯೆಯನ್ನು ಇತರ ಎಲ್ಲ ಎ ಪಿ ಎಂ ಸಿ ಗಳಿಗೆ ವಿಸ್ತರಿಸುವ ಕೆಲಸ ನಡೆಯುತ್ತಿದೆ. ಹಾಗೆಯೇ ಸರಕಾರದ ವತಿಯಿಂದ ಸೈಟ್ ಅಲಾಟ್ ಮಾಡುವಾಗ ದತ್ತಾಂಶಗಳನ್ನು ಕಾಪಿಸಲು ಮತ್ತು ಮೋಸವಾಗದಂತೆ ತಡೆಗಟ್ಟಲು ಸಾಫ್ಟ್ ವೇರ್ ಅನ್ನು ರೂಪಿಸಲಾಗುತ್ತಿದೆ. ಹಾಗೆಯೇ ರಸ್ತೆಯ ಸುರಕ್ಷತೆಗಾಗಿ ಅದರ ಇತಿಹಾಸವನ್ನು ದಾಖಲಿಸಿ ಸಂರಕ್ಷಿಸಲು, ನಗರದ ಎಲ್ಲ ಮರಗಳ ಸಂರಕ್ಷಣೆಗಾಗಿ ಅವುಗಳ ದತ್ತಾಂಶವನ್ನು ಸಂಗ್ರಹಿಸಿಡಲು ಸಾಫ್ಟ್ ವೇರ್ ಗಳನ್ನು ರೂಪಿಸಲಾಗುತ್ತಿದೆ.
ಡಿಜಿಟಲ್ ಇಂಡಿಯಾದ ಪ್ರಮುಖ ಮಾದರಿಯಾಗಿ ಕರ್ನಾಟಕ ರೂಪುಗೊಂಡಿದೆ. ಈ ಮಾದರಿಯನ್ನು ರೂಪಿಸಿದ ಶ್ರೇಯಸ್ಸು ಕರ್ನಾಟಕಕ್ಕೇ ದಕ್ಕಲಿ. ನಮ್ಮನ್ನು ಅನುಕರಿಸಿ ಬೇರಾರೋ ಹೆಸರು ತೆಗೆದುಕೊಂಡು ಹೋಗುವ ಹಾಗಾಗದಿರಲಿ.
Follow KannadaPrabha channel on WhatsApp
Download the KannadaPrabha News app to follow the latest news updates
Subscribe and Receive exclusive content and updates on your favorite topics
Subscribe to KannadaPrabha YouTube Channel and watch Videos