ಈಗಾಗಲೇ ಎಲ್ಲಾ ಕಾಲೇಜುಗಳಲ್ಲಿ ಶಿಕ್ಷಕರು ಅರ್ಧವಾರ್ಷಿಕ ಪರೀಕ್ಷೆಯ ಸಿಲೆಬಸ್ ಮುಗಿಸುವ ತುತಾತುರಿಯಲ್ಲಿ ಹಾಗೂ ವಿದ್ಯಾರ್ಥಿಗಳು ಪರೀಕ್ಷೆಯ ತಯಾರಿಯಲ್ಲಿ ಮಗ್ನರಾಗಿರುತ್ತಾರೆ. ನಾನೂ ಸಹ ಮುಗಿಸಬೇಕಾದ ಭೌತಶಾಸ್ತ್ರದ ಲೆಕ್ಕಗಳು ಒಂದಷ್ಟು ಉಳಿದಿತ್ತು. ತರಗತಿಗೆ ಹೋಗುವಾಗ ಇವತ್ತು ಇಂತಿಷ್ಟು ಮುಗಿಸಲೇಬೆಕು ಅಂತ ಹೋದವಳಿಗೆ 'ಶಾಕ್' ಕಾದಿತ್ತು. ಮಕ್ಕಳು ಕೇಳಿದ ಪ್ರಶ್ನೆಗಳು ಮತ್ತು ಅವರಲ್ಲಿ ವಿಷಯಗಳ ಬಗ್ಗೆ ಇದ್ದ ತಪ್ಪು ಗ್ರಹಿಕೆಗಳು ನನ್ನ ಮನಸ್ಸಿನಲ್ಲಿ ಅನೇಕ ಪ್ರಶ್ನೆಗಳು ಏಳುವಂತೆ ಮಾಡಿದವು. ನಾನು ಅಂದು ತೆಗೆದುಕೊಂಡ ಲೆಕ್ಕ ಬಹಳ ಸರಳವಾಗಿತ್ತು. ಲೆಕ್ಕದಲ್ಲಿ ಮಳೆಯು ನೇರವಾಗಿ ಭೂಮಿಯ ಮೇಲೆ ಬೀಳುತ್ತಿದ್ದು, ಗಾಳಿಯು ಉತ್ತರದಿಂದ ದಕ್ಷಿಣದ ಕಡೆ ಬೀಸುತ್ತಿದ್ದರೆ ಮಳೆಯ ಹನಿಗಳು ಯಾವ ದಿಕ್ಕಿನಲ್ಲಿ ಮತ್ತು ಎಷ್ಟು ವೇಗವಾಗಿ ಬೀಳುತ್ತವೆ ಎಂದು ಕಂಡು ಹಿಡಿಯಬೇಕಿತ್ತು.
ಈಗಾಗಲೇ ಈ ಸೂತ್ರದ ಹಲವು ಲೆಕ್ಕಗಳನ್ನು ಬಿಡಿಸಿದ್ದರಿಂದ ಮಕ್ಕಳಿಗೆ ಈ ಲೆಕ್ಕ ಬಿಡಿಸುವುದು ಕಷ್ಟವೇನೂ ಆಗಿರಲಿಲ್ಲ. ಆದರೆ ಸಮಸ್ಯೆ ಆದದ್ದು ಅಲ್ಲಲ್ಲ. ನಾನು ಅವರಿಗೆ ಲೆಕ್ಕ ಬಿಡಿಸಲು ಕೆಲ ಸಮಯ ಕೊಟ್ಟು ನಂತರ ಕ್ಲಾಸ್ ರೂಮ್ ನ ಕಪ್ಪು ಹಲಗೆಯ ಮೇಲೆ ಲೆಕ್ಕ ಬಿಡಿಸಲು ಮುಂದಾದಾಗ! ಆ ಹೊತ್ತಿಗಾಗಲೇ ಚುರುಕು ಬುದ್ಧಿಯ ಹುಡುಗರು ಸರಿ ಉತ್ತರ ನೀಡಿಯಾಗಿತ್ತು. ನಾನು ಲೆಕ್ಕದಲ್ಲಿರುವ ದಿಕ್ಕುಗಳನ್ನು ಕಪ್ಪು ಹಲಗೆಯ ಮೇಲೆ ಬರೆಯಲು ಮುಂದಾದೆ. ನೇರವಾಗಿ ಬೀಳುವ ಮಳೆ ಹನಿಗಳನ್ನು ಬಿಂಬಿಸಲು ಉದ್ದನೆಯ ಗೆರೆ ಎಳೆದೆ ಹಾಗೂ ದಕ್ಷಿಣದಿಂದ ಉತ್ತರಕ್ಕೆ ದಿಕ್ಕು ತೋರಿಸಲು ಅಡ್ಡ ಗೆರೆ ಎಳದೆ. ಆಗ ಅನೇಕ ಹುಡುಗರು ಗೊಂದಲಗೊಂಡರು. ವಿಚಾರಿಸಿದರೆ ಅವರ ತಕರಾರು ಹೀಗಿತ್ತು- ಉತ್ತರ ಎಂದರೆ ಯಾವಾಗಲೂ ಮೇಲಿರುತ್ತದೆ. ದಕ್ಷಿಣ ಎಂದರೆ ಕೆಳಗಿರುತ್ತದೆ. ನೀವು ಉತ್ತರ ದಕ್ಷಿಣವನ್ನು ತೋರಿಸಲು ಅದು ಹೇಗೆ ಅಡ್ಡ ಗೆರೆ ಎಳೆದಿರಿ ಎಂದು ಕೇಳಿದರು. ಈಗ ತಬ್ಬಿಬ್ಬಾಗುವ ಸರದಿ ನನ್ನದಾಗಿತ್ತು. ಆ ಮಕ್ಕಳಿಗೆ ದಿಕ್ಕುಗಳ ಅರಿವಿದೆ ಎಂದು ಭಾವಿಸಿ ಲೆಕ್ಕಗಳನ್ನು ಸಲೀಸಾಗಿ ಬಿಡಿಸಬಹುದು ಎಂದು ತಪ್ಪಾಗಿ ಕಲ್ಪಿಸಿಕೊಂಡಿದ್ದೆ.
ಕೊಂಚ ಸುಧಾರಿಸಿಕೊಂಡು, ಅವರಿಗೆ ದಿಕ್ಕುಗಳ ಪರಿಚಯ ಮಾಡಿಸಲು ಮುಂದಾದೆ. ನೀವು ನೋಡುವ ಕಪ್ಪು ಹಲಗೆ ಮತ್ತು ಪುಸ್ತಕ ಎರಡು ಆಯಾಮದ್ದು (2 dimension). ನಾನು ಬರೆಯವ ಚಿತ್ರ ಒಂದು ಅಡ್ಡ ಮತ್ತು ಇನ್ನೊಂದು ಉದ್ದ ಗೆರೆಯನ್ನು ಹೊಂದಿರುತ್ತದೆ. ಅದೇ ನಿಮ್ಮ ಪುಸ್ತಕಗಳಲ್ಲಿ ಬರೆಯುವ ಚಿತ್ರದ ಎರಡೂ ಗೆರೆಗಳು ಅಡ್ಡವಾಗಿರುತ್ತವೆ ಎಂದೆ. ಅವರ ಮುಖಗಳು ವಿವರ್ಣವಾದವು. ಅವರ ಪ್ರಶ್ನಾರ್ಥಕ ಚರ್ಯೆಯನ್ನು ಕಂಡು ಯಾವಾಗಲೂ ದಕ್ಷಿಣ ಎಂದರೆ ಕೆಳಗೆ ಮತ್ತು ಉತ್ತರ ಎಂದರೆ ಮೇಲೆ ಎಂಬುದು ತಪ್ಪು ಕಲ್ಪನೆ ಎಂದೆ. ನಾನು ಕಡೆಯ ಬೆಂಚಿನ ಒಬ್ಬ ಹುಡುಗನನ್ನು ಕರೆದು ನನ್ನ ಕುರ್ಚಿಯನ್ನು ಕೊಟ್ಟು ಉತ್ತರಕ್ಕೆ ಹಾಕಿಕೊಂಡು ಕೂರಲು ಹೇಳಿದೆ. ಅವನು ಅಕ್ಷರಷಃ ದಿಙ್ಮೂಢನಾದ! ಆಗ ನಾನು "ನಿಮ್ಮ ಪ್ರಕಾರ ಉತ್ತರ ಮೇಲಿದೆ ಎಂದರೆ ಕುರ್ಚಿಯನ್ನು ಆಕಾಶಕ್ಕೆ ಮುಖ ಮಾಡಿ ಕೂರಲು ಸಾಧ್ಯವೇ?" ಎಂದು ಕೇಳಿದೆ. ಎಲ್ಲರೂ ಇಲ್ಲ ಎಂದರು. ನಂತರ ದಿಕ್ಕುಗಳನ್ನು ಗಣಿಸುವ ಬಗೆಯನ್ನು ಹೇಳಿಕೊಟ್ಟೆ. "ಸೂರ್ಯನಿಗೆ ಮುಖ ಮಾಡು ನಿಂತು ಎರಡೂ ಕೈಗಳನ್ನು ಭುಜಗಳ ಸಮಾನವಾಗಿ ನಿಮ್ಮ ಎಡ ಮತ್ತು ಬಲಗಳಿಗೆ ಚಾಚಿದರೆ ಅದು ಉತ್ತರ ಮತ್ತು ದಕ್ಷಿಣವಾಗಿರುತ್ತದೆ ಅದೇ ಬೆನ್ನ ಹಿಂದೆ ಮತ್ತು ಮುಂದೆ ಚಾಚಿದರೆ ಉತ್ತರ ಮತ್ತು ದಕ್ಷಿಣವಾಗಿರುತ್ತದೆ." ಎಂದೆ. ಈಗ ಮಕ್ಕಳ ಮುಖದಲ್ಲಿ ಅರ್ಥವಾದ ತೃಪ್ತಭಾವವಿತ್ತು! ಕೊನೆಗ ಸರಿಯಾಗಿ ಲಕ್ಕ ಬಿಡಿಸದರು. ಈ ಪಾಠದ ನಡುವಿನ ಅನಿರೀಕ್ಷಿತ ತಿರುವಿನಿಂದ ನಾನಂದುಕೊಂಡಷ್ಟು ಲೆಕ್ಕಗಳನ್ನು ಬಿಡಿಸಲು ಸಾಧ್ಯವಾಗದಿದ್ದರೂ ಬಾಲ್ಯದಿಂದ ಸಾಕಿಕೊಂಡು ಬಂದಿದ್ದ ಮೂಢನಂಬಿಕೆಯೊಂದನ್ನು ತೊಡೆದುಹಾಕಿದ ಸಮಾಧಾನ ನನಗಿತ್ತು,
ಮಕ್ಕಳ ಈ ತಪ್ಪು ತಿಳುವಳಿಕೆಗೆ ಕಾರಣ ಪೋಷಕರೋ ಶಿಕ್ಷಕರೋ ಅಥವಾ ಸ್ವತಃ ಮಕ್ಕಳೋ ? ಪ್ರಾಥಮಿಕ ಶಾಲೆಗಳಲ್ಲಿ ಈ ರೀತಿಯ ಚಿಕ್ಕ ಚಿಕ್ಕ ವಿಷಯಗಳನ್ನು ಮಕ್ಕಳಿಗೆ ಮನದಟ್ಟು ಮಾಡಿಸುವುದು ಶಿಕ್ಷಕರ ಜವಾಬ್ದಾರಿ. ನಾವು ಶಿಕ್ಷಕರು ಈ ರೀತಿಯ ವಿಷಯಗಳನ್ನು ಹಗುರವಾಗಿ ಪರಿಗಣಿಸುತ್ತೇವೆ. ತರಗತಿಯಲ್ಲಿ ಎಲ್ಲ ಚಿಕ್ಕ ಚಿಕ್ಕ ವಿಷಯಗಳಿಗೆ ಗಮನ ಕೊಡುವುದೂ ಸಹ ಕಷ್ಟವೇ ಸರಿ! ಇಂತಹವುಗಳನ್ನು ಮಕ್ಕಳು ತಮ್ಮ ಸುತ್ತಮುತ್ತಲಿನ ಪರಿಸರವನ್ನು ಗಮನಿಸಿ ಕಲಿಯಬೇಕು,ಇನ್ನೊಬ್ಬರನ್ನು ಕೇಳಿ ತಿಳಿಯಬೇಕು. ಇದನ್ನೇ "ಕಾಮನ್ ಸೆನ್ಸ್" ಎನ್ನುವುದು. ಏಕೆಂದರೆ ನಾವು ವಿದ್ಯಾರ್ಥಿಗಳಾಗಿದ್ದಾಗ ನಮಗೆ ಇದನ್ನು ಯಾರೂ ಹೇಳಿಕೊಡಲಿಲ್ಲ. ಅದು ಸ್ವಾಭಾವಿಕವಾಗಿಯೇ ಬಂದದ್ದು! ಉದಾಹರಣೆಗೆ ನಮ್ಮ ತಂದೆ ನೌಕರಿಯಿಂದ ಮನೆಗೆ ಬಂದಾಗ ಸ್ವಲ್ಪ ಸಮಯ ನಮ್ಮೊಡನೆ ಆಟವಾಡಿ ಓದಿಸಲು ಕೂರುತ್ತಿದ್ದರು. ಶಾಲೆಯಲ್ಲಿ ಶಿಕ್ಷಕರು ಹೇಳಿಕೊಟ್ಟದ್ದರ ಬಗ್ಗೆ ನಮ್ಮೊಡನೆ ಚರ್ಚೆ ಮಾಡುತ್ತಿದ್ದರು. ಶಿಕ್ಷಕರು ಗುಂಪಿನಲ್ಲಿ ಹೆಳಿಕೊಡಲಾಗದ ಅನೇಕ ಸೂಕ್ಷ್ಮ ವಿಷಯಗಳನ್ನು ಹೇಳಿಕೊಡುತ್ತಿದ್ದರಲ್ಲದೇ ನಮ್ಮ ತಪ್ಪು ತಿಳುವಳಿಕೆಗಳನ್ನೂ ತಿದ್ದುತ್ತಿದ್ದರು. ಈಗೆಷ್ಟು ಜನ ಪೋಷಕರು ಈ ಕ್ರಮ ಕೈಗೊಳ್ಳಲು ಸಿದ್ಧರಿರುತ್ತಾರೆ? ಮನೆಯಲ್ಲಿ ಮಕ್ಕಳೊಡನೆ ಚರ್ಚಿಸುವುದು ದೂರದ ಮಾತು ಮಕ್ಕಳ ಬಾಯಿಗೆ ಒಂದಷ್ಟು ತಿಂಡಿ ತುರುಕಿ ಮನೆಪಾಠಕ್ಕೆ ಕಳುಹಿಸುತ್ತಾರೆ. ಮನೆಪಾಠಗಳಲ್ಲಾದರೂ ಎಷ್ಟು ಮಕ್ಕಳಿಗೆ ವಿಶೇಷವಾಗಿ ಗಮನ ಕೇಂದ್ರೀಕರಿಸಿ ಹೇಳಿಕೊಡಲು ಸಾಧ್ಯವಾಗುತ್ತದೆ? ಅದೂ ಸಹ ಶಾಲೆಯಂತೆ ಕುರಿದೊಡ್ಡಿಯೇ ಸರಿ! ಹಾಗಾಗಿ ಪೋಷಕರೇ ಮಕ್ಕಳನ್ನೂ, ಶಾಲೆಯನ್ನೂ ಮತ್ತು ವ್ಯವಸ್ಥೆಯನ್ನೂ ಬಯ್ಯುವ ಬದಲು ನಿಮ್ಮನ್ನು ನೀವು ತಿದ್ದಿಕೊಳ್ಳಿ!
Follow KannadaPrabha channel on WhatsApp
Download the KannadaPrabha News app to follow the latest news updates
Subscribe and Receive exclusive content and updates on your favorite topics
Subscribe to KannadaPrabha YouTube Channel and watch Videos