ಅಂಕಣಗಳು

ದೇಶದ ಏಳಿಗೆಗೆ ಗುರು ಶಿಷ್ಯ ಪರಂಪರೆಯು ಅತ್ಯಂತ ಅವಶ್ಯಕ

Rashmi Kasaragodu

"ಗುರುವಿನೋಳ್ನುಡಿಯಂತೆ ಶ್ರೇಯಸ್ಸು ಬಾಳ್ಗೆ" ಎಂದು ಕುವೆಂಪು ಹೇಳಿದ್ದಾರೆ. ಗುರು ಶಿಷ್ಯ ಪರಂಪರೆ ಭಾರತದಲ್ಲಷ್ಟೇ ಅಲ್ಲ ವಿಶ್ವದಾದ್ಯಂತ ಜಗತ್ತಿಗೆ ಶ್ರೇಷ್ಠ ಕೊಡುಗೆಗಳನ್ನು ನೀಡಿದೆ. ವಿಜ್ಞಾನ, ಕ್ರೀಡೆ, ಸಾಹಿತ್ಯ, ಸಿನಿಮಾ,ಸಾಮಾಜಿಕ ಚಳುವಳಿ, ಕಲೆಯಂತಹ ಅನೇಕ ರಂಗಗಳು ಇವತ್ತು ಏಳಿಗೆ ಸಾಧಿಸಿರುವುದರಲ್ಲಿ ಈ ಗುರುಶಿಷ್ಯ ಪರಂರೆಯ ಕೊಡುಗೆ ಸಾಕಷ್ಟು ಇದೆ. ಇಂತಹ ಒಂದು ಪರಂಪರೆಯ ಬೆಂಬಲವಿಲ್ಲದೇ ಹೊಗಿದ್ದರೆ ಈ ಕ್ಷೇತ್ರಗಳು ಈಗಿನ ಸಾಧನೆಯ ಮೆಟ್ಟಿಲನ್ನು ಏರುವುದನ್ನು ಊಹಿಸಲೂ ಸಾಧ್ಯವಿರಲಿಲ್ಲ.

 ಮೇಘನಾದ ಸಹಾ - ಕಲಾಂ, ನೀಲ್ಸ್ ಬೋರ್- ಹೈಸೆನ್ ಬರ್ಗ್, ಚಿತ್ತರಂಜನ್ ದಾಸ್- ಸುಭಾಷ್ ಚಂದ್ರ ಭೋಸ್, ಲಂಕೇಶ್ ಮತ್ತು ಶಿಷ್ಯವರ್ಗ, ವೆಂಕಣ್ಣಯ್ಯ- ಕುವೆಂಪು - ಶಿವರುದ್ರಪ್ಪ, ಅರಿಸ್ಟಾಟಲ್ - ಅಲೆಕ್ಸಾಂಡರ್, ಗೋಪಿಚಂದ್ - ಸೈನಾ ನೆಹ್ವಾಲ್ ಹೀಗೆ ಸಾಲು ಉದಾಹರಣೆಗಳು ಕಾಣಸಿಗುತ್ತವೆ. ಗುರುವು ಸಲ್ಲಿಸಿದ ಕೊಡುಗೆಯನ್ನು ಶಿಷ್ಯಂದಿರು ವಿಶ್ವದಾದ್ಯಂತ ಪಸರಿಸಿದ ಮತ್ತು ಹೆಚ್ಚಿನ ಕೊಡುಗೆಯನ್ನು ನೀಡಿದ ಸಾಕಷ್ಟು ಘಟನೆಗಳು ನಮ್ಮ ಮುಂದಿವೆ.
 
 ಇಂತಹದೊಂದು ಪರಂಪರೆ ಅದರಲ್ಲೂ ಭಾರತದಲ್ಲಿ ಇತ್ತೀಚೆಗೆ ಕಾಣೆಯಾಗುತ್ತಿದೆ. ವಿದ್ಯಾರ್ಥಿಗಳು ವೇಗವಾಗಿ ವಿಶ್ವಕ್ಕೆ ತೆರೆದುಕೊಳ್ಳುತ್ತಿರುವ ಸಂದರ್ಭದಲ್ಲಿ ತಮಗೆ ಕಲಿಸುತ್ತಿರುವ ಗುರುಗಳಲ್ಲಿ ಗೌರವ ಕಡಿಮೆಯಾಗುತ್ತಿದೆ. ವಯೋಸಹಜವಾದ ತುಂಟಾಟಗಳು ಒಳ್ಳೆಯದದಾದರೂ ಇವು ವಿದ್ಯಾರ್ಥಿಗಳ ಭವಿಷ್ಯಕ್ಕೆ ಮಾರಕವಾಗುವ ಸಾಧ್ಯತೆಗಳಿವೆ. ಮೊದಲೊಮ್ಮೆ ಗುರುವೂ ಸಹ ತನ್ನ ಏಳಿಗೆಯನ್ನು ಸಾಧಿಸಲು ತನಗೆ ತಕ್ಕ ಶಿಷ್ಯನನ್ನು ಹುಡುಕುತ್ತಿದ್ದ. ಶಿಷ್ಯಂದಿರ ಸಾಧನೆಗಳಲ್ಲಿ ತನ್ನ ಸಾರ್ಥಕತೆ ಕಂಡುಕೊಳ್ಳುತ್ತಿದ್ದ. ಬದಲಾದ ಈ ವ್ಯವಸ್ಥೆಯಲ್ಲಿ "ಶಿಕ್ಷಕ" ಎಂಬುದು ನಿತ್ಯ ಜೀವನಕ್ಕೆ ದುಡಿಯುವ ಹುದ್ದೆಯಾಗಿ ಮಾರ್ಪಟ್ಟು ತನ್ನ ಪವಿತ್ರತೆಯನ್ನೂ,ಗೌರವವನ್ನೂ ಕಳೆದುಕೊಳ್ಳುತ್ತಿದೆ.   ಶಿಕ್ಷಣ ಎಂಬುದು ಅಂಕಗಳಿಗಾಗಿ ಮಾತ್ರ ಸರ್ವತೋಮುಖ ಬೆಳವಣಿಗೆಗಲ್ಲ ಎಂಬ ವ್ಯವಸ್ಥೆ ಬಂದ ಮೇಲೆ ಇಂತಹದೊಂದು  
ಸಮಸ್ಯೆ ತಲೆದೋರುತ್ತಿದೆ.

 ವಿದ್ಯಾರ್ಥಿಗಳು ಶಿಕ್ಷಕರನ್ನು ತಮ್ಮ ಶಿಕ್ಷಣದ ಏಣಿಯನ್ನಾಗಿ ಮಾತ್ರ ಮಾಡಿಕೊಳ್ಳುತ್ತಿದ್ದಾರೆ. ಪೋಷಕರಿಗೂ ಸಹ ಶಿಕ್ಷಕ ಮತ್ತು ವಿದ್ಯಾರ್ಥಿಯ ಸೌಹಾರ್ಧಯುತ ಸಂಬಂಧದ ಅವಶ್ಯಕತೆಯ ಅರಿವಿಲ್ಲ. ಇದರಿಂದ ನಷ್ಟವಾಗುತ್ತಿರುವುದು ಶಿಕ್ಷಕರಿಗಲ್ಲ ಬದಲಾಗಿ ಇಡೀ ದೇಶದ ಬೆಳವಣಿಗೆಗೆ! ವಿಶ್ವದಾದ್ಯಂತ ಎಲ್ಲ ದೇಶಗಳು ವಿವಿಧ ಕ್ಷೇತ್ರಗಳ ಸಾಧನೆಯಲ್ಲಿ ದಾಪುಗಾಲು ಹಾಕುತ್ತಿರುವಾಗ ನಮ್ಮ ದೇಶವು ಇನ್ನೂ ಹಿಂದುಳಿದಿದೆ. ಗುರುವು ತೋರಿದ ದಾರಿಯಲ್ಲಿ ನಡೆಯುವ ಸಾಧಕರಿಲ್ಲದೇ ಕ್ಷೇತ್ರಗಳು ಸೊರಗುತ್ತಿವೆ.
 ಶಿಕ್ಷಕರಿಗೆ ತಾವು ಕೆಲಸ ಮಾಡುತ್ತಿರುವ ಕ್ಷೇತ್ರದ ಮಹತ್ವ ಗೊತ್ತಿಲ್ಲದೇ ಇರುವುದೂ ಇದರ ಇನ್ನೊಂದು ಮುಖ .ಸಂಬಳಕ್ಕಾಗಿ ತಮ್ಮ ಪಠ್ಯಕ್ರಮವನ್ನು ಮುಗಿಸಿಬಿಟ್ಟರೆ ಸಾಕು ಎಂಬ ಸ್ಥಿತಿಗೆ ಶಿಕ್ಷಕರು ತಲುಪಿದ್ದಾರೆ. ವಿದ್ಯಾರ್ಥಿಗಳಲ್ಲಿ ಹೆಚ್ಚಿನ ಸಾಧನೆಗೆ ಪ್ರೇರೇಪಣೆ ನೀಡುವ ಶಕ್ತಿಯೂ ಶಿಕ್ಷಕರಲ್ಲಿ ಇಲ್ಲವಾಗಿದೆ. ಅಲ್ಲದೇ ಇತ್ತೀಚೆಗೆ ಕೆಲ ಶಿಕ್ಷಕರು ಅತ್ಯಾಚಾರಿಗಳಾಗಿರುವುದು, ವಿಕೃತವಾಗಿ ಶಿಕ್ಷಿಸಿ ಆನಂದಿಸುವ ಪ್ರಕರಣಗಳೂ ಬೆಳಕಿಗೆ ಬಂದು ಶಿಕ್ಷಕ ಸಮುದಾಯವು ತಲೆ ತಗ್ಗಿಸುವಂತಾಗಿದೆ.
 ಮಾಜಿ ರಾಷ್ಟ್ರಪತಿ ಡಾ.ಸರ್ವಪಲ್ಲಿ ರಾಧಾಕೃಷ್ಣನ್ ರಂತಹ ಶ್ರೇಷ್ಠ ಶಿಕ್ಷಕರ ಜನ್ಮದಿನಾಚರಣೆಯ ಸಂದರ್ಭದಲ್ಲಿ ಈ ಗುರುಶಿಷ್ಯಪರಂಪರೆಯ ಮಹತ್ವವನ್ನು ಎಲ್ಲರೂ ಅರಿತು ಆಚರಿಸುವ ಅವಶ್ಯಕತೆ  ಇದೆ. ಇದು ವಿದ್ಯಾರ್ಥಿಗಳ ಭವಿಷ್ಯದ ಉನ್ನತಿಗಾಗಿ ಅತ್ಯಂತ ಅವಶ್ಯಕ ಹೆಜ್ಜೆಯಾಗಿದೆ.
 

SCROLL FOR NEXT