ಅಂಕಣಗಳು

ಕಾವ್ಯ ಪ್ರಾರಂಭಕ್ಕೂ ಮುನ್ನ ಕವಿನಮನ

ರಾಮಾಯಣದ ವಿಕೃತ ಪ್ರಸಾರಕ್ಕೆ ಕಾರಣ ಮೂರು....

ರಾಮಾಯಣಾಧ್ಯಯನಕ್ಕೆ ಮುನ್ನವೇ ನನ್ನ ನಿಲುವುಗಳನ್ನು ಮಂಡಿಸಿಬಿಡುವ . ಓದುಗರೂ ಆ ದಿಟ್ಟಿಯಲ್ಲಿ ನೋಡಲು ಪ್ರಾರ್ಥನೆ. ವಾಲ್ಮೀಕಿ ರಾಮಾಯಣದಲ್ಲಿ ಏನಿದೆಯೋ ಅದನ್ನು ಮಾತ್ರವೇ ಕಾಣಿಸುವ ಅಪೇಕ್ಷೆ ನನ್ನದು. ರಾಮಾಯಣದ ವಿಕೃತ ಪ್ರಸಾರಕ್ಕೆ ಕಾರಣ ಮೂರು.
ಒಂದು : ವಾಲ್ಮೀಕಿಯ ಕಥಾ ಹಂದರವನ್ನು ಆಧರಿಸಿ ಅನೇಕ ಪ್ರತಿಭಾವಂತರು ತಮ್ಮ ಕೃತಿಗಳನ್ನು ರಚಿಸಿದ್ದಾರೆ . ಅವು ಚೆನ್ನಾಗಿವೆ ; ಮೋಹಕವಾಗಿವೆ ; ಪ್ರತಿಭಾನ್ವಿತವಾಗಿಯೂ ಇವೆ ; ಪಾಂಡಿತ್ಯ ಪ್ರಭೆಯೂ ಪ್ರಸರಿಸಿದೆ... ಇತ್ಯಾದಿ. ಇವೆಲ್ಲವೂ ಸರಿ.  ಆದರೆ ಅವು ಯಾವುವೂ ವಾಲ್ಮೀಕಿಯ ಎತ್ತರಕ್ಕೆ ಏರಲೂ ಆಗದು; ವಾಲ್ಮೀಕಿ ಇಲ್ಲದೇ ಇವರಾರಿಗೂ ವಸ್ತುವೂ ಸಿಗದು. ಹೀಗೆಂದ ಮಾತ್ರಕ್ಕೇ ಅವರಾರೂ ತಮ್ಮನ್ನು ನಾನು ಕಡಿಮೆ ಮಾಡುತ್ತಿದ್ದೇನೆ ಎಂದು ಭಾವಿಸುವುದೂ ಇಲ್ಲ . ಇಲ್ಲಿವರೆಗಿನ ಎಲ್ಲ ಸಹೃದಯ ಸಭ್ಯರೂ ತಮ್ಮ ವಿರಚನೆಗಳು ವಾಲ್ಮೀಕಿ ಗಿರಿಯ ಮುಂದಿನ ಗುಡ್ಡವೆಂದೇ ವಿನಯ ಮೆರೆದಿದ್ದಾರೆ . ( ಅವರ ಹಿಂಬಾಲಕರನ್ನು ಒಪ್ಪಿಸುವ ಇರಾದೆ ನನಗಿಲ್ಲ.)
ಇಂತಹವರಲ್ಲಿ ಹಲವಾರು ಬದಲಾವಣೆಗಳಾಗಿವೆ ; ಆಗಬೇಕು . ಹಾಗಿಲ್ಲದೇ ವಾಲ್ಮೀಕಿಯನ್ನೇ ಅತ್ತಿತ್ತ ನೋಡದೇ ನಕಲೆತ್ತಿದರೆ , ಇವರು ಬರೆಯಬೇಕೇಕೆ ? ( ಭಾಷಾಂತರದ ಉಪಯೋಗವಷ್ಟೇ ಅಲ್ಲವಲ್ಲ ಕವಿಕರ್ಮ ? ) ಆದರೆ ಒಂದು ಎಚ್ಚರಿಕೆಯನ್ನು ಇವರು ವಹಿಸಲೇ ಬೇಕು . ಅದೆಂದರೆ ವಾಲ್ಮೀಕಿ ಹೇಳದ್ದನ್ನು ಏಕೆ ಹೇಳಿಲ್ಲ ಎಂದು ಪ್ರಶ್ನಿಸುವುದು , ಮತ್ತು ವಾಲ್ಮೀಕಿ ವಿರುದ್ಧವಾಗಿ ತಮ್ಮನ್ನು ನಿಲ್ಲಿಸುವುದು. ಇವೆರಡೂ ಅಶಿಸ್ತೇ. 
ರಾಮಾಯಣ ಕರ್ತೃಗಳು ವಾಲ್ಮೀಕಿಗಳು. ಅವರು ತಮಗೆ ದಕ್ಕಷ್ಟು, ಸಿಕ್ಕಷ್ಟು, ಕೇಳಿದಷ್ಟು , ಪ್ರತಿಭಾ ಚಕ್ಷುವಿನಿಂದ ದರ್ಶಿಸಿದಷ್ಟನ್ನು ಲಿಖಿಸಿದ್ದಾರೆ. ಅದು ಅವರ ಸ್ವಾತಂತ್ರ್ಯ ( ಇದು ಪ್ರತಿ ಲೇಖಕನಿಗೂ ಅನ್ವಯಿಸುತ್ತದೆ; ಸಮಕಾಲೀನರೂ ಸೇರಿ. ಬರಹಕಾರನನ್ನು ನೀನು ಹೀಗೇಕೆ ಬರೆದೆ, ಹಾಗೇಕೆ ಬರೆಯಲಿಲ್ಲ ಎಂದು ಪ್ರಶ್ನಿಸುವ ಹಕ್ಕು ನಮಗಿಲ್ಲ. ಬರೆದದ್ದನ್ನು ಒಪ್ಪಬಹುದು ಅಥವ ತಿರಸ್ಕರಿಸಬಹುದಷ್ಟೆ. ವಾಲ್ಮೀಕಿಗಳು ಕವಿಯಾಗಿ ಪಾತ್ರ ನಿರ್ವಹಿಸಿದ್ದಾರೆ ಅಥವ ಕೇಳಿದ ಕಥೆಯನ್ನು ಹೇಳಿದ್ದಾರೆ. ಅವರು ನಿರ್ಧರಿಸುತ್ತಾರೆ; ಯಾವ ಪಾತ್ರವನ್ನು ಎಷ್ಟು ವರ್ಣಿಸಬೇಕು; ಎಷ್ಟು ವಿವರಿಸಬೇಕು ಎಂದು. ಯಾವ ಪಾತ್ರಕ್ಕೆ ಮಾನ್ಯತೆ ಕೊಡಬೇಕು , ಯಾವುದು ಕೆಳ ಸ್ತರದಲ್ಲಿರಬೇಕು, ಯಾವ ಪಾತ್ರ ನಿಂದ್ಯ, ಯಾವುದು ದುಷ್ಟ.... ಇತ್ಯಾದಿ .
ಹಾಗಲ್ಲದೇ ಎಲ್ಲರೂ ಒಳ್ಳೆಯವರೇ , ಎಲ್ಲರೂ ಸಭ್ಯರೇ , ಎಲ್ಲರೂ ನಾಯಕರೇ , ಎಲ್ಲರೂ ಶುದ್ಧಾತ್ಮರೇ , ಎಲ್ಲರೂ ಸಮ್ಮಾನ್ಯರೇ ಎಂದುಬಿಟ್ಟರೆ , ಒಂದನೆಯದಾಗಿ ನೂರು ಪಾತ್ರಗಳಿಗೆ ಬಣ್ಣ ಹಚ್ಚಿದರೂ ಬರುವ ಮಾತೊಂದೇ ಆಗಿಬಿಡುತ್ತದೆ ; ಎರಡನೆಯದಾಗಿ ನಮ್ಮ ಬದುಕು , ನಮ್ಮ ಸಮಾಜ ಹಾಗಿಲ್ಲ . ವೈವಿಧ್ಯತೆಯೇ ಜೀವನದ ರಸಪಾಕ . ಅದು ಕಾರಣ ಕಾವ್ಯದಲ್ಲಿ ನಾಯಕ , ಉಪನಾಯಕ, ನಾಯಕಿ, ದಾಸಿ, ಗುರು, ಖಳನಾಯಕ, ದುಷ್ಟಮಂತ್ರಿ , ನೀಚಶಾಸಕ... ಹೀಗೆ ಎಲ್ಲ ವರ್ಣಗಳ ಸಂಯೋಜನೆಯೂ ಅವಶ್ಯ. ಆದ್ದರಿಂದ ದಯವಿಟ್ಟು " ವಾಲ್ಮೀಕಿ ಬಿಟ್ಟ ಪಾತ್ರವನ್ನು ನಾವು ಉದ್ಧರಿಸುತ್ತೇವೆ " ಎಂಬ ಅಹಂಕಾರವೋ , " ಆದಿಕವಿ ಕಾಣದ್ದನ್ನು ನಾವು ಕಂಡೆವು" ಎಂಬ ದುರಹಂಕಾರವೋ, " ವಾಲ್ಮೀಕಿ ಮಾಡಿದ ಅನ್ಯಾಯವನ್ನು ನಾವು ಸರಿಪಡಿಸುತ್ತೇವೆ " ಎಂಬ ಸ್ವಯಂ ನ್ಯಾಯಾಧೀಶತ್ವವೋ ತುಂಬ ತುಂಬ ದುಬಾರಿಯಾಗುತ್ತದೆ. ಅಂತಹ ವಿಪರೀತ ಉದ್ಗಾರಗಳಿಗೆ ಇಲ್ಲಿ ಇಂಬಿಲ್ಲ. 
ಎರಡು: ವಾಲ್ಮೀಕಿ ಕೃತಿಯಲ್ಲಿ ಮತೀಯ ದರ್ಶನ ಮಾಡುವ ಪ್ರಯತ್ನ. ಅದು ಅದ್ವೈತವಿರಲಿ ,ವಿಶಿಷ್ಟಾದ್ವೈತವಿರಲಿ, ದ್ವೈತವಿರಲಿ ; ಅದೇ ರಾಮಾಯಣದಲ್ಲಿ ಇದೆ ಎಂದೋ , ರಾಮಾಯಣದಲ್ಲಿ ರಹಸ್ಯವಾಗಿ ತಮ್ಮ ಮತವನ್ನು ಹುದುಗಿಸಿಟ್ಟಿದ್ದಾರೆಂದೋ , ಗುಟ್ಟಾಗಿ ಮೂಲ ಮಂತ್ರಗಳು ದಾಖಲಾಗಿವೆ ಎಂದೋ , ರಹಸ್ಯ ಸ್ಫೋಟವನ್ನು ತಾವು ಮಾಡಿ ಉಪಕಾರ ಮಾಡಿದ್ದೇವೆ ಎಂದೋ ಬೀಗುವವರು ಕೆಲವರು . ನಂಬುವವರು ಹಲವರು .
ಒಂದು ಸತ್ಯವನ್ನು ಅರ್ಥಮಾಡಿಕೊಳ್ಳುವ . ಭಗವತ್ಪಾದ ಶಂಕರರಿರಲಿ , ಯತಿರಾಜ ರಾಮಾನುಜರಿರಲಿ , ಶ್ರೀಮನ್ ಮಧ್ವಾಚಾರ್ಯರಿರಲಿ , ಈ ಮೂವರೂ ವಾಲ್ಮೀಕಿಗಳ ಪಕ್ಕದಲ್ಲಿ ಆರ್ವಾಚೀನರೇ . ರಾಮಾಯಣ ಹುಟ್ಟಿದ ಎಷ್ಟೋ ಶತಮಾನಗಳ ಮೇಲೆ ಇವರ ಅವತಾರ. (ಅವರಿಗೂ ಹಿಂದೆ ಆಯಾಯಾ ಮತಗಳು ಇತ್ತೆಂಬ ಬಗ್ಗೆ ನಾನೀಗ ಕೆದಕಲು ಹೋಗುತ್ತಿಲ್ಲ, ಅದು ಸಧ್ಯದ ನನ್ನ ಕರ್ತವ್ಯವೂ ಅಲ್ಲ. ನಾನು ಗಮನಿಸುವುದು , ಈ ಆಚಾರ್ಯತ್ರಯಾ ನಂತರವೇ , ಅವರ ಕೃತಿಗಳ ನಂತರವೇ , ಆಯಾ ದರ್ಶನಗಳಿಗೆ ಒಂದು ಬೆಲೆ-ನೆಲೆ-ವ್ಯಾಪ್ತಿ- ತಾತ್ವಿಕತೆ ಬಂದದ್ದು . ಇದನ್ನು ಎಲ್ಲರೂ ಒಪ್ಪಬೇಕಾದದ್ದೆ ) . ಈ ಯತಿಗಳ ಕಾಣ್ಕೆಯನ್ನು ವಾಲ್ಮೀಕಿಯೇ ಹೇಳಿದ್ದಾನೆಂಬುದು ವಿತಂಡಾವಾದವಾಗುತ್ತದೆ . ಬೇಕಿದ್ದರೆ (ರಾಜಿ ಮಾಡಿಕೊಂಡು ) ವಾಲ್ಮೀಕಿಯ ಯಾವುದೋ ಒಂದು ಪ್ರಸಂಗವನ್ನು ತಮ್ಮ ಪ್ರಮೇಯಕ್ಕೆ ಉದಾಹರಣೆಯಾಗಿ ಹೆಕ್ಕಿದರೆ ಮಾತ್ರವೇ ಒಪ್ಪಬಹುದೇನೋ . 
ಮೂರು: ರಾಮಾಯಣದ ಅಪ ಪ್ರಚಾರಕ್ಕೆ ಕಾರಣ ಪುರಾಣ ಲೇಪನ . ಹೆಸರೇ ಆದಿಕಾವ್ಯ . ಈ ಕಾವ್ಯದ ಪಾತ್ರಗಳು ಆ ಕಾಲಕ್ಕೆ ಅತ್ಯಂತ ಹತ್ತಿರ, ಸತ್ಯ. ಪುರಾಣಗಳ ಸೃಷ್ಟಿ ಇತ್ತೀಚಿನವು. ಈ ಪುರಾಣಗಳು, ಒಬ್ಬನೇ ವ್ಯಾಸ ಸೃಷ್ಟಿಸಿದನೆಂದು ಹೇಳಿದರೂ, ಪ್ರತಿ ಪುರಾಣವೂ ಪೂಜ್ಯವೆಂದೂ, ಪವಿತ್ರವೆಂದೂ ಪರಾಕು ಸಲ್ಲಿಸಿದರೂ; ಶಿವಪುರಾಣಗಳಲ್ಲಿ ವಿಷ್ಣು ನಿಲ್ಲುವುದೇ ಶಿವಾಙ್ಞಾಧಾರಕನಾಗಿ. ವಿಷ್ಣುಪುರಾಣಗಳಲ್ಲಿ ಶಿವನಿಗೆ ವಿಷ್ಣುವಿನ ಪಾದಸೇವೆಯೇ ಪವಿತ್ರ. ಹೀಗೆ ಒಬ್ಬ ವ್ಯಾಸರೇ ನಾಯಕನನ್ನು ಸೇವಕನನ್ನಾಗಿಯೂ , ಆಳನ್ನು ಅರಸನನ್ನಾಗಿಯೂ ಕಾಣುವ ವಿರೋಧಾಭಾಸ. ಆ ವರ್ಣನೆಗಳೋ, ಆ ದುರ್ಬಲ ಕಥಾ ಹಂದರವೋ, ಆ ಮಿತಿ ಮೀರಿದ ಪರ ವಿರೋಧ ವಕೀಲೀ ವೇಷಾರ್ಭಟವೋ... ಅದು ಶ್ರೀಮದ್ ರಾಮಾಯಣ ಮಹಾಕಾವ್ಯದ ಮುಂದೆ ಎಷ್ಟೋ ಬಾರಿ ನೀರಸವೂ ಹೌದು , ಕೊರೆತವೂ ಹೌದು. ಅದು ಕಾರಣವೇ ಇವಾವುವೂ ಜನಪ್ರಿಯವೂ ಅಲ್ಲ , ಪಂಡಿತ ಪ್ರಿಯವೂ ಅಲ್ಲ , ರಸಿಕ ಪ್ರಿಯವೂ ಅಲ್ಲ . ಅವು ಕೇವಲ ಪ್ರಶ್ನಿಸಕೂಡದಾದ ಕಣ್ಣಪಟ್ಟಿಯ ಗೌಣೀ ಭಕ್ತರ ಪುರಾಣ ಪಠಣ . ಹೀಗಾಗಿ ರಾಮಾಯಣ , ಗೌರಿಶಂಕರ ಶಿಖರಾರೋಹಣ ಮಾಡಿದ್ದರೆ ಅದರ ತಪ್ಪಲಿನಲ್ಲಿರುವುವು ಇವು . ಆದ್ದರಿಂದ ರಾಮಾಯಣಾಧ್ಯಯನದಲ್ಲಿ ಇವುಗಳಿಗೆ ಪಾತ್ರವೇ ಇಲ್ಲ. ಅಕಸ್ಮಾತ್ ಇದ್ದರೆ ರಾಮಾಯಣದಲ್ಲಿ ಇಲ್ಲದ, ಆದರೆ ವಾಲ್ಮೀಕಿ ಬೊಟ್ಟು ಮಾಡಿದ್ದನ್ನು ಅವರ ಅಪೇಕ್ಷೆಗೆ ವಿರುದ್ಧ ಬಾರದಂತೆ ಪೂರ್ಣ ಮಾಡಲು ಮಾತ್ರ ಉಲ್ಲೇಖಿಸಬಹುದಾದದ್ದು ಅಷ್ಟೆ. 
ಮಹತ್ವ: ಶತ ಶತಮಾನಗಳಿಂದ ರಾಮಾಯಣ ಸುತ್ತಾಡಿದ ಪ್ರದೇಶ, ಲಂಘಿಸಿದ ಸಾಗರಗಳು , ಏರಿದ ರಾಷ್ಟ್ರಗಳು, ಏರಿದ ರಾಷ್ಟ್ರಗಳು , ವಶಪಡಿಸಿಕೊಂಡ ಜನಾಂಗಗಳು ಒಂದೇ ಎರಡೇ ? ಅದರ ಮೇಲೆ ನಡೆಸಿದ ಸಂಶೋಧನೆಗಳು, ಮಹಾ ಪ್ರಬಂಧಗಳು, ರಚಿಸಿದ ಕೀರ್ತನೆಗಳು, ಹಾಡಿದ ಹಾಡುಗಳು , ರಚಿಸಿದ ಕಾವ್ಯಗಳು, ನಟಿಸಿದ ನಾಟ್ಯಗಳು, ಆಡಿದ ನಾಟಕಗಳು, ಪರವಶರಾದ ತಾತ್ವಿಕರು, ತಲೆ ಕೆಡೆಸಿಕೊಂಡ ಇತಿಹಾಸಙ್ಞರು, ಶರಣಾಗತರಾದ ನೀತಿ ನಿರೂಪಕರು, ಪ್ರಭಾವಕ್ಕೊಳಗಾದ ಉತ್ಸದ್ದಿಗಳು , ಮುಳುಗೆದ್ದ ಚಿತ್ರ - ಕಲಾವಿದರು , ಕಾಷ್ಟ , ಶಿಲ, ಲೋಹ ಶಿಲ್ಪಿಗಳು.... ಲಕ್ಷವೇ ಕೋಟಿಯೇ ? ಭಾರತದ ಮಟ್ಟಿಗೆ ಹೇಳಬೇಕೆಂದರೆ ರಾಮನ ಬಗೆಗೆ ಏನೂ ಗೊತ್ತಿಲ್ಲ ಎಂದರೆ ಅವನೊಬ್ಬ ಮಹಾ ಅಙ್ಞಾನಿ ಅಥವ ಉಸಿರಾಡುವ ಶವ. 
ಕವಿ ನಮನ: ಆದಿಕವಿಯ ಪಾದಾಭಿವಂದನೆ ಮಾಡದ ಸನಾಮ ಕವಿಗಳು ಕಡಿಮೆ . ಸಂಸ್ಕೃತ ,ಕನ್ನಡಗಳಿಂದ ಇಬ್ಬಿಬ್ಬರು ಕವಿಗಳ ಕಂಠಶ್ರಿಯನ್ನು ಕೇಳುವ . ಭಾರತೀಯ ಕಾವ್ಯ ಮೀಮಾಂಸೆಯಲ್ಲಿ ಭಾಮಃ , ದಂಡಿ , ವಾಮನ , ಆನಂದ ವರ್ಧನದ ಪಂಕ್ತಿಯಲ್ಲಿ ಬೆಳಗುವ ಹೆಸರೆಂದರೆ ಕ್ಷೇಮೇಂದ್ರ . ಕೃತಿಯೊಂದು ಕಾವ್ಯವಾಗಬೇಕಿದ್ದರೆ ಮೂಲ ಸತ್ವ ತತ್ವಗಳು ಆವುವು ಎಂದು ಎಲ್ಲರು ಚರ್ಚಿಸಿದ್ದರೆ . ಒಬ್ಬೊಬ್ಬರದೂ ಒಂದು ದಿವ್ಯ ದರ್ಶನ . ಯಾರ ಬಗ್ಗೆ ಯಾರಾದರೂ ತಕರಾರು ಎತ್ತಬಹುದು ಆದರೆ ಕ್ಷೇಮೇಂದ್ರ ಮತವನ್ನು ಅಲ್ಲ ಎನ್ನುವವರಾರು ? ಪಾತ್ರ, ಕಥೆ, ವರ್ಣನೆ, ವಿಸ್ತಾರ... ಎಲ್ಲಕ್ಕೂ ಒಂದು ಮಾನದಂಡ ಬೇಕು. ಯಾವುದೂ ಅತಿಯಾಗಬಾರದು. ಹಿತ ಮಿತ್ತವಾಗಿರಬೇಕು. ಅದಕ್ಕಗಿಯೇ ಇರುವ ಗಟ್ಟಿ ಪದ ಔಚಿತ್ಯ. ಎಂದರೆ ಉಚಿತವಾಗಿ; ಸ್ಥಾನ ಮರ್ಯಾದೆ ಮೀರದೆ; ಕೃಶವಾಗದೆ ; ವಿಜ್ರುಂಭಿಸದೆ; ದೃಢವಾಗಿ; ಯೋಗ್ಯವಾಗಿ ಕಾಣಬೇಕು. ಕಾವ್ಯದ ಜೀವಾಳ. ಅದೇ ಉಚಿತತೆ. ಲೌಕಿಕ್ಕಾಗಲೀ ,ಪಾರಾವಿಗಿಕ್ಕಕ್ಕಾಗಲೀ, ಇದನ್ನು ಅಳವಡಿಸಿದರೆ ತಾನೆ ಅದು ಔಚಿತ್ಯಪೂರ್ಣವಾಗುವುದು ? ಆತನ ಕೃತಿಯ ಹೆಸರೆ " ಔಚಿತ್ಯ ವಿಚಾರ ಚರ್ಚ " ಕಂಠಪತ್ರವೆತ್ತಿ ಆರಂಭದಲ್ಲೇ ಅಡ್ಡಬಿದ್ದದ್ದು ವಾಲ್ಮೀಕಿಯ ಕಾಲಿಗೆ. ತನ್ನೆಲ್ಲ ಕಾವ್ಯಾಪೇಕ್ಷೆಯ ಸಾಕಾರವೆಂದರೆ ರಾಮಾಯಣ. 
                      ಜೇಷ್ಠೋ ಜಯತಿ ವಾಲ್ಮೀಕಿಃ ಸರ್ಗಬಂಧೇ ಪ್ರಜಾಪತಿಃ
                ಯಹ ಸರ್ವ ಹೃದಯಾಲೀನಂ ಕಾವ್ಯಂ ರಾಮಾಯಣಂ ವ್ಯಧಾತ
                   ನುಮಹ ಸರ್ವೋಪಜೀವ್ಯಂ ತಂ ಕವೀನಾಂ ಚಕ್ರವರ್ತಿನಂ
              ಯಸ್ ಯೇಂದು ಧವಲೈಃ ಶ್ಲೋಕೈಃ ಭೂಶಿತಾ ಭುವನತ್ರಯಯೀ
ವಿಶ್ವ ಕವಿಗಳಿಗೆಲ್ಲ ಅಣ್ಣ ನೀನು . ಕಾವ್ಯ ಒಂದರಲ್ಲಿ ಸರ್ಗ ವಿಭಾಗ , ಪಾತ್ರ ಪೋಷಣೆ , ವಸ್ತು ನಿರ್ವಹನೆಗಳಿಗೆ ಮಾರ್ಗದರ್ಶಕನಾಗಿ ಹಿರಿ ಜಾಡು ನಿರ್ಮಿಸಿ ಕವಿ ಬ್ರಮ್ಹನಾದೆ . ಸಹೃದಯ ಸಿಂಹಾಸನಾದ್ಯಕ್ಷ ನೀನು . ಅಲ್ಲಲ್ಲ , ಕೇವಲ ಕವಿಘೋಷ್ಟಿಯ ಅಧ್ಯಕ್ಷನೇ ? ಕವಿ ರಾಜರಿಗೆ ರಾಜನಾಗಿ ಕವಿಚಕ್ರವರ್ತಿ ನೀನಾದ್ದರಿಂದ ನಿನಗೆ ನಮ್ಮೆಲ್ಲರ ಸಾಷ್ಟಾಂಗ . ನಿನ್ನೊಂದೊಂದು ಶ್ಲೋಕವೂ ಅಮೃತ ಕಿರಣಗಳಂತ ಮೂರು ಲೋಕಗಳಲ್ಲೂ ಬೆಳಗುತ್ತಿದೆ , ದಾರಿ ತೋರುತ್ತಿದೆ ,ತಂಪು ಮೂಡುತ್ತಿದೆ , ಮುದ ನೀಡುತ್ತಿದೆ , ಸುಧೆ ಸೂಸುತ್ತಿದೆ .
ಉತ್ತರ ರಾಮ ಚರಿತೆಯನ್ನು ಓದದ ರಸಿಕನಾರು ? ಮುಗ್ಧನಾಗಿ ಮರುಗದ ಮನಸ್ಸಾವುದು ? ಭವ ಭೂತಿಯ ಹೆಸರಿಯದ ಸಂಸ್ಕೃತದ ಕಾವ್ಯಾಸಕ್ತನಾರು ? ಆತನಿಗೆ ಶುಭ ದರ್ಶನವೆಂದರೆ ರಾಮಾಯಣ . ಆತನ ಬುದ್ಧಿಯನ್ನಪಹರಿಸಿದ್ದೆಂದರೆ ರಾಮಾಯಣ . ತಾಯಂತೆ ಪ್ರತ್ಯಕ್ಷ ದೈವವೆಂದರೆ ರಾಮಾಯಣ . ಪವಿತ್ರ ಗಂಗೆಯಂತೆ ಶುದ್ಧವೆಂದರೆ ರಾಮಾಯಣ . ಉದ್ಗರಿಸಿಬಿಟ್ಟ ಭವಭೂತಿ ಸ್ತೂತ್ರ ಒಂದನ್ನು . " ಮಾಂಗಲ್ಯಾಚ ಮನೋಹರಾಚ ಜಗತಾಂ ಮಾತೇವ ಗಂಗೇವಚ "
ನಮ್ಮ ಕನ್ನಡ ಕವಿಯ ಪರಾಕು ಪಟ್ಟಿ ಕೇಳುವಿರ ? ಕನ್ನಡ ರಾಮಾಯಣದಲ್ಲಿ ವಾಲ್ಮೀಕಿಗೆ ನಿಷ್ಠನಾಗಿ ವಾಲ್ಮೀಕಿ ಸಾಂರಾಜ್ಯ ಮಂಡಲಾಧಿಪತಿಯಾಗಿ ; ತಾನು ವಾಲ್ಮೀಕಿಯ ಮಗನೆಂದೇ ಕರೆದುಕೊಂಡು ; ಕುಮಾರ ವಾಲ್ಮೀಕಿಯೆಂದೇ ಧನ್ಯನಾದಾತ ನರಹರಿ . ಆತನ ತೊರವೆ ರಾಮಾಯಣ ಸಿಂಹಾಸನದಲ್ಲಿ ಆಸೀನವಾಗುತ್ತಿದ್ದಂತೆಯೇ ಎದ್ದು ನಿಂತು , ನಡು ಬಗ್ಗಿ , ಎದೆ ಉಬ್ಬಿದ ಕೇಸರಿ ಕಂಠದಿಂದ ಬಂತು ವೇದಘೋಷ !
ಜಗಕ್ಕೆ ಆದಿಕವಿಯಾದ ನಿನಗೆ ನಮನ . ಇರಬಹುದು ಜಗತ್ತಿನ ಮೂಲೆ ಮೂಲೆಗಳಲ್ಲಿ ಸನಾಮರು - ವಿಖ್ಯಾತರು . ಆದರೆ ವಿಶ್ವ ಕವಿ ಘೋಷ್ಟಿಗೆ ಬ್ರಮ್ಹ ಮಾನಸ ಸರೋವರದಿಂದ ಆಗಮಿಸಿದ ರಾಜಹಂಸನೆಂದರೆ ನೀನೇ ; ನಿನಗೆ ಸ್ವಾಗತ . ಒಪ್ಪೋಣ , ಒಂದೊಂದು ರಾಷ್ಟ್ರಕ್ಕೂ ಒಬ್ಬೊಬ್ಬ ಆದಿಕವಿಯಿದ್ದಾರೆ . ಅವರಿಗೆ ಖಂಡಿತ ಜಗ ಜಗುಲಿಯಲ್ಲಿ ಸ್ಥಾನವಿದೆ . ಆ ಎಲ್ಲ ಕವಿ ಲೋಕಕ್ಕೆ ನೀನು ಸೂರ್ಯದಂತೆ ಙ್ಞಾನದಾತ ; ಪಥ ಪ್ರದರ್ಶಕ . ಕವಿ ಶರಣಾಗತರಕ್ಷಕ . ಸಂಸ್ಕೃತದ ಕವಿಗಳಿಗೆ ನೀನು ಕಿರೀಟದಂತೆ ಶಿರೋಧಾರ್ಯ . ಓಹ್ ! ನಿನ್ನಲ್ಲಿಗೇ ಬಂದು , ನಿನ್ನನ್ನಾಶೀರ್ವದಿಸಿ ತನ್ನ ಶ್ರೀರಕ್ಷೆಯನ್ನು ತನ್ನ ಶ್ರೀರಕ್ಷೆಯನ್ನು ನಿನಗಿಟ್ಟು ವರ ನೀಡಿದ ಬ್ರಮ್ಹ ಕೃಪಾ ಪೋಷಿತನಾದ ಬ್ರಮ್ಹರ್ಶಿಯಲ್ಲವೇ ನೀನು ? ನಿನಗೆ ನಮಸ್ಕಾರ ! ಮಾತು , ನಡೆ , ನುಡಿ , ಬದುಕು , ನಾಗರಿಕತೆಗಳೊಂದೂ ಗೊತ್ತಿಲ್ಲದೇ ಕತ್ತಲಲ್ಲಿದ್ದ ಜನಾಂಗಕ್ಕೆ ರಾಮಾಯಣ ಚಂದ್ರ ಬಂದಂತೆ ಬಂದ ನಿನಗೆ ಒಂದನೆ . ಪ್ರಚೇತಸ್ ವಂಶದಲ್ಲುದಿಸಿ ಮೌನಿಯಾಗಿ , ಮುನಿಯಾಗಿ , ಮಾತೇ ಮುತ್ತಾಗಿ , ಮುತ್ತಿನ ಮಾಲೆಯ ಮಹಾ ಮಾನವನನ್ನು ; ಮಾನವೋತ್ತಮನನ್ನು ; ಪುರುಶೋತ್ತಮನನ್ನು ಕಟ್ಟಿ ಕೊಟ್ಟ ವಾಲ್ಮೀಕಿ ಬಿರುದಾಂಕಿತ ಮಹರ್ಶಿ ಪ್ರಚೇತಸರಿಗೆ ಪ್ರಣಾಮಗಳು . 
"ಆದಿಕವಿ ಕವಿರಾಜ ಹಂಸ ಅನಾದಿಕವಿಕುಲಮಲಮಿತ್ರ ಮಹಾ ದಿವೌಕಸ ಪ್ರಚುರ ಭಾಶಾ ಕವಿ ಜನೋತ್ತಂಸ ವೇದಗರ್ಭ ವರಪ್ರಸಾದಾಹ್ಲಾದ ಕವಿ ರಘುವರಕಥಾ ವಿಮಲೋದದಿಂದು ಮಹಾ ಮುನಿ ಪ್ರಾಚೇತಸಂ ವಂದೇ"
ಭಾರತದ ಅತ್ಯುಚ್ಚ ಶಾರದಾ ಪ್ರಶಸ್ತಿಗಳು ಎರಡು . ಮೊದಲನೇದು ಙ್ಞಾನಪೀಠ . ಎರಡನೇಯದು ಸರಸ್ವತಿ ಸಮ್ಮಾನ್. ಏನೇ ಒಡಕು ಮಾತುಗಳು, ಏನೇ ಪ್ರಭಾವಗಳು , ಏನೇನೋ ಊಹಾ ಪೋಹಗಳಿದ್ದರೂ ಙ್ಞಾನಪೀಠ ಸುಙ್ಞಾನ ಪೀಠವೇ . ಅದು ಪ್ರಙ್ಞಾನ ಪೀಠವೇ . ಅದನ್ನೇರಿದ ಕುವೆಂಪು , ಮಾಸ್ತಿ , ಬೇಂದ್ರೆ , ಕಾರಂತರು... ಯಾರಿಗೇನು ಕಡಿಮೆ ? ಎಂಟು ಬಾರಿ ಪುಷ್ಪಮಾಲೆ ತೊಡಿಸಿದ್ದಾಳಲ್ಲವೆ ಆ ಭಾರತಿ ಈ ಕನ್ನಡಿತಿಗೆ ? ಇವರಲ್ಲಿ ಅಗ್ರಮಾನ್ಯರು , ಅಗ್ರಪೂಜಾ ಸ್ವೀಕೃತರು ಕುವೆಂಪು . ಬಹುಶಹ ಅವರಿಗೆ ಸಂದಷ್ಟು ಸನ್ಮಾನ , ಜನಪ್ರೀತಿ , ಸರ್ಕಾರದ ಕೆಂಪು ಹಾಸು , ವಿಶ್ವ ವಿದ್ಯಾನಿಲಯದ ಕುಲಪತಿತ್ವ , ಪಂಡಿತಮನ್ನಣೆ ಮತ್ತಾರಿಗೂ ಲಭ್ಯವಿಲ್ಲ . ಅವರು ಬದುಕಿದ್ದು ಹಾಗೆಯೇ . ಅವರ ಇಡೀ ಜೀವನ ಸಾರವನ್ನೇ ಘನಿಭವಿಸಿದ್ದಾರೆ ಈ ಮಾತುಗಳಲ್ಲಿ 
                       " ಮಣಿದರಲಿ ಮುಡಿ ಮತ್ತೆ ಮುಗಿದಿರಲಿ ಕೈ ಮತ್ತೆ
                         ಮಡಿಯಾಗಿರಲಿ ಬಾಳ್ವೆ . ಜೈಸುಗೆ ರಸ ತಪಸ್ಗೆ
                         ದೊರೆ ಕೊಳುಗೆ ಚಿರ ಶಾಂತಿ ಸಿರಿಗನ್ನಡಂ ಗೆಲ್ಗೆ "
ಕಾದಂಬರಿಗಾರ, ನೀಳ್ಗದಾ ಲೇಖಕ, ಖಂಡ ಕಾವ್ಯದ ಕವಿ , ವಿಮರ್ಶಕ ... ಇತ್ಯಾದಿ ಎಲ್ಲ ಪ್ರಾಕಾರಗಳಲ್ಲೂ ಹಾದು ಹೋದ ಈ ಮಹಾನ್ ಚೈತನ್ಯ 9 ವರ್ಷಗಳ ಅಖಂಡ ತಪಸ್ಸು ಮಾಡಿ ಸಿದ್ಧಿಸಿದ್ದು ಶ್ರೀರಾಮಾಯಣ ದರ್ಶನಂ 20 ನೇಯ ಶತಮಾನದ ದಾರ್ಶನಿಕ ಸೃಷ್ಟಿಚಿiದು . ಅದರ ಓದೇ ಒಂದು ಕಾವ್ಯಾನಂದ ; ಒಂದು ಪುಣ್ಯ ಸ್ನಾನ ; ಒಂದು ಸುಕೃತ ಯಙ್ಞ ; ಒಂದು ಧ್ಯಾನ ಸ್ಥಿತಿ ; ಒಂದು ತಪೋ ವಿಹಾರ . ಇಂತಹ ಕಾವ್ಯರ್ಶಿ ಕುವೆಂಪು ಮಹರ್ಶಿ ಮಹರ್ಶಿ ವಾಲ್ಮೀಕಿಗೆ ಮಣಿದ ಮನಿಹವನ್ನು ಕಾಣುವಿರ ? ಹೇ ವಾಲ್ಮೀಕಿ , ನೀನೊಬ್ಬ ವಿಭೂತಿ ಪುರುಷ , ನೀನೊಬ್ಬ ಸಹಸ್ರಾಕ್ಷ . ನೀನು ಕಾಣದ ದೃಶ್ಯವಿಲ್ಲ , ಕೇಳದ ಸದ್ದಿಲ್ಲ . ನಿನ್ನ ಕೃತಿಯೋ ಅದೊಂದು ಭಾವದ ಭಾಗ್ಯ , ಭುವನದ ಭಾಷ್ಯ . ಅದೇ ಒಂದು ವಿಭೂತಿ ಕಾವ್ಯ . ನಿನ್ನ ಸಂಕಲ್ಪವೇನು ? ನಿನ್ನ ಪಡವೇನು ? ನಿನ್ನ ಮಹತ್ವಾಕಾಂಕ್ಷೆಯೇನು ? ನಿನ್ನ ಪ್ರತಿಙ್ಞೆ ಏನು ? ಮುಲ್ಲೋಕಗಳೂ ಮಾಮೂಲಿ ಮಾತ್ಸರ್ಯ , ಈರ್ಶೆ , ದ್ವೇಶ , ಅಸೂಯೆ .... ಇತ್ಯಾದಿ ಶೋಕ ಕಾರಣಗಳಲ್ಲಿ ಮುಳುಗಿ ಉಸಿರು ಕಟ್ಟಿದ್ದಾಗ ಅವರ ಬಿಡುಗಡೆಗೆ ; ಅವರ ಆನಂದಕ್ಕೆ ರಸ ಋಷಿಯಾಗಿ ನೀನಿಟ್ಟ ಉಡುಗರೆಯೇ ತತ್ವ ದರ್ಶನದ ಜೀವನಾನುಭವದ ಧ್ವನಿಪೂರ್ಣ ಅಮರಕಾವ್ಯ ರಾಮಾಯಣ . ನೀನಿತ್ತ ಈ ಸುಧಾಪಾನದಿಂದಾಗಿ ಶೋಕ ಕರೆಗಿ , ದುಃಖ ಸರಿದು , ಚಿಂತೆ ಚದುರಿ , ಸಮಾಧಾನ ಸಮೀಪಿಸಿ , ಸಂತಸ ಸುತ್ತಿ , ಆನಂದಾನುಭೂತಿಯಾಗಿ ಧನ್ಯರಾಗಿದ್ದೇವೆ ನಾವು. ಈ ಬ್ರಮ್ಹಾನಂದ ಕಾರಣರಾದ ಹೃದ್ಯ ಯೋಗಿರಾಜ ವಾಲ್ಮೀಕಿಯೇ ನಿನಗೆ ದಂಡಪ್ರಮಾಣಗಳು.
                        " ಕವಿ ವಿಭೂತಿಗೆ ನಮೋ ಕೃತಿ ವಿಭೂತಿಗೆ ನಮೋ
                          ದರ್ಶನ ಧ್ವನಿ ರಸಾಮೃತ ಪಾನದಾನಂದದಿಂ
                        ಲೋಕ ಶೋಕ ವನಳಿಸಿ ಭುವನತ್ರಯಂಗಳಂ
                         ತಳಿಪ ನಂದದ ದೀಕ್ಷೆಯಂ ಕೊಂಡೆಸೆವಾ
                     ರಸಋಶಿಗೆ ಯೋಗಮತಿ ಸಹೃದಯ ವಿಭೂತಿಗೆ ನಮೋ "
ವಾಲ್ಮೀಕಿಯಾದ ಪ್ರಾಚೇತಸ (?):
ಶ್ರೀಮದ್ ವಾಲ್ಮೀಕಿ ರಾಮಾಯಣದಲ್ಲಿ ರಾಮಾಯಣ ಆರಂಭವಾಗುವುದೇ ವಾಲ್ಮೀಕಿ ಆಶ್ರಮದಿಂದ . ಆ ಆದಿಕಯ ಹಿನ್ನೆಲೆಯನ್ನೇನೂ ಕೊಡದು ಆ ಕಾವ್ಯ . ತಮ್ಮ ಬಗ್ಗೆ ತಾವೇ ಏನನ್ನಾದರೂ ಹೇಗೆ ಹೇಳಿಕೊಂಡಾರು ಮಹರ್ಶಿ ? ಅದೂ ರಾಮಧ್ಯಾನಾಸಕ್ತರಾಗಿ ರಾಮಾಧ್ಯನಾಸಕ್ತರಾಗಿ ರಾಮಾದರ್ಶನದಲ್ಲಿ ಕಣ್ಣಿಟ್ಟವರಾಗಿ . ಅವರ ಹಿಂದಿನ ಹಿರಿಯರಾರೂ ಇರದ್ದರಿಂದಲೂ ; ಅವರ ಸಮಕಾಲೀನರ ಕೃತಿಗಳಾವುವೂ ಸಿಗದ್ದರಿಂದಲೂ  ಅವರ ಇತಿಹಾಸ ನಮಗೇನೇನೂ ಗೊತ್ತಿಲ್ಲ . ಅವರ ಬಗೆಗಿನ ಎಲ್ಲ ಕಥೆಗಳೂ ಆರ್ವಾಚೀನವಾದದ್ದೇ ಅವರ ನಂತರ ಎಷ್ಟೋ ಶತಮಾನಗಳ ನಂತರ ಸೃಷ್ಟಿಯಾದದ್ದೇ . ಹೀಗಾಗಿ ಅವಾವುವೂ ನ್ಯಾಯಾಲಯದಲ್ಲಿ ಚಲಾವಣೆಯಾಗದ ಸರಕು. 
ರಾಮಾಯಣವನ್ನೇ ಆಧರಿಸುವುದಾದರೆ ಅವರೊಬ್ಬ ಮಹರ್ಶಿ , ಕಾವ್ಯರ್ಶಿ , ಬ್ರಮ್ಹರ್ಶಿ . ಅವರ ಹೆಸರೂ ನಮಗೆ ಗೊತ್ತಿಲ್ಲ . ಅದನ್ನು ಪ್ರಾಚೇತಸ ಎಂದರೂ ಅನಂತ . ಸತ್ಯವೋ ? ಹೇಳಲಾರೆ . ಅಕಸ್ಮಾತ್ ಅದೇ ಆಗಿದ್ದರೆ ಅದು ವಾಲ್ಮೀಕಿಯಾದದ್ದು ಹೇಗೆ ? 
ಕಾವ್ಯ ಸೃಷ್ಟಿಯೇನು , ಯಾವುದೇ ಗಹನ ಚಿಂತನೆ ಏಕಾಂತವನ್ನು ಬಯಸುತ್ತದೆ . ಮನಸ್ಸು ಗೂಡಿನೊಳಗೆ ನುಗ್ಗಿ ಬಾಗಿಲನ್ನು ಮುಚ್ಚಿಕೊಳ್ಳುತ್ತದೆ . ವಿಶೇಶವಾಗಿ ಕವಿ - ಕರ್ಮ ನಡೆಯುವುದು ಅನ್ಯರ ಹಾವಲಿ ಇರದ ಬಾಹ್ಯಾಕರ್ಶನೆಗಳನ್ನು ಬಂದ್ ಮಾಡಿದ ಏಕಾಕೀ ಧ್ಯಾನಸ್ಥಿತಿ . ಪ್ರಸವ ಮುಗಿವ ತನಕ ಕೇವಲ ಅಂತರಂಗನೊಡನೆ ಯುದ್ಧ . ತಾನು ತನ್ನೊಂದಿಗೇ ತಿಕ್ಕಡುವ ರಂಗಭೂಮಿ . ಒಟ್ಟಿನಲ್ಲಿ ಹೊರಗಿನ ಏನೂ ಬಾಧಿಸದ ಒಬ್ಬಂಟಿ ಜೀವನ ಅದು . ಅದಕ್ಕೆ ಪ್ರಕೃತಿಯಲ್ಲಿ ಸಿಗಬಹುದಾದ ಸಂಕೇತ ಉತ್ತ . ಸುತ್ತಲೂ ಮುಚ್ಚಿದ ಊರ್ಧ್ವಗಾಮಿಯಾಗಿ ಶಿಖರ ನಿರ್ಮಾಣವಾಗುವ ಉಸಿರಾಡಲು ಮಾತ್ರ ಕಿರು ಕಿಂಡಿ ಬಿಟ್ಟ ಮಣ್ಣಿನ ಮನೆಚಿiದು . ಬಹುಶಹ ತಪಸ್ಸಿಗೆ , ಧ್ಯಾನಕ್ಕೆ , ಯೋಗಕ್ಕೆ ಈ ಹುತ್ತ ಪ್ರತಿನಿಧಿಯಾದಾತು . ರಾಮಾಯಣ ಸೃಷ್ಟಿ ಅದೆಷ್ಟು ತಪಸ್ಸನ್ನು ಅಪೇಕ್ಷಿಸಿರಬೇಕು ; ಅದೆಂತಹ ಕಠಿಣ ದೀಕ್ಷೆಯನ್ನು ಹಿಡಿದಿರಬೇಕು ; ಅದೆಂತಹ ಸಮ್ಯವವನ್ನು ಸಹಿಸಿರಬೇಕು ; ಅದೆಷ್ಟು ಕಠಿಣ ಮೌನವನ್ನು ವಹಿಸಿರಬೇಕು . ಅವೆಷ್ಟು ವರ್ಷಗಳು ರಾಮಧ್ಯಾನದಲ್ಲಿ ತಲ್ಲೀನವಾಗಿರಬೇಕು . ಇವನ್ನೆಲ್ಲ ಒಂದೇ ಪದದಲ್ಲಿ ಹೇಳಬೇಕಾದರೆ ಅದು ವಲ್ಮೀಕಸ್ಥಿತಿ . ಈ ಕವಿ ( ಪ್ರಾಚೇತಸ ? ) ಈ ಮಹಾ ಕಷ್ಟ ಸಾಧ್ಯ ಅಗ್ನಿ ಪರೀಕ್ಷೆಯಲ್ಲಿ ಉತ್ತೀರ್ಣನಾಗಿ ಸಂವತ್ಸರಗಳ ಮೌನವನ್ನು ಒಲಿದು ರಾಮಾಯಣವನ್ನು ಉಳಿದಾಗ ಆ ಕವಿಯನ್ನು ವಾಲ್ಮೀಕಿ ಎಂದು ಗೊಂಡಾಡಿರಬೇಕು ಅಂದಿನ ರಸಿಕರು, ಸಹೃದಯರು, ವಿಮರ್ಶಕರು, ಋಷಿಗಳು.  
(ಮುಗಿದಿಲ್ಲ !! ) 

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಭಾರತದ ಮೇಲೆ ಶೇ.50 ರಷ್ಟು ಸುಂಕಾಸ್ತ್ರ ಜಾರಿ: ಕೊನೆಗೆ ಒಟ್ಟಿಗೆ ಸೇರ್ತಿವಿ! US ಖಜಾನೆ ಮುಖ್ಯಸ್ಥ ಹಿಂಗ್ಯಾಕಂದ್ರು?

ಸಶಸ್ತ್ರ ಪಡೆಗಳು ಮುಂದಿನ ಭದ್ರತಾ ಸವಾಲುಗಳಿಗೆ ಸಿದ್ಧರಾಗಿರಬೇಕು: ರಾಜನಾಥ್ ಸಿಂಗ್

ಹಿಂದೂ ನಂಬಿಕೆ ಒಡೆಯುತ್ತಿರುವ ಬಾನು ಮುಷ್ತಾಕ್: ಶಿವನ ಬೆಟ್ಟವನ್ನೇ 'ಯೇಸು ಬೆಟ್ಟ' ಮಾಡಲು ಹೊರಟವರಿಂದ ಧರ್ಮದ ಪಾಠ ಬೇಡ- ಪ್ರತಾಪ್ ಸಿಂಹ

2030 Commonwealth Games: ಭಾರತದ ಬಿಡ್‌ಗೆ ಕೇಂದ್ರ ಸಂಪುಟ ಅನುಮೋದನೆ! ಅಹಮದಾಬಾದ್ ನಲ್ಲಿ ಆಯೋಜಿಸುವ ಪ್ರಸ್ತಾಪ!

'ಡೆವಿಲ್‌' ಸಿನಿಮಾದ '‘ಇದ್ರೆ ನೆಮ್ಮದಿಯಾಗ್ ಇರ್ಬೇಕ್' ಹಾಡಿಗೆ ಭರ್ಜರಿ ಸ್ಟೆಪ್ ಹಾಕಿದ ವಿನೋದ್ ರಾಜ್! Video

SCROLL FOR NEXT