ವಾಲ್ಮೀಕಿ ಮಹರ್ಷಿಗಳಿಂದ ಆಶೀರ್ವಾದ ಪಡೆಯುತ್ತಿರುವ ಸೀತಾ ದೇವಿ (ಸಾಂದರ್ಭಿಕ ಚಿತ್ರ)
ಬಾಯಿ ನುಡಿಯುತ್ತಿದ್ದರೂ ನಾರದರು ಚಿತ್ತ ಕೆದಕುವುದನ್ನು ನಿಲ್ಲಿಸಿರಲಿಲ್ಲ . ವಾಲ್ಮೀಕಿ ಪ್ರಶ್ನೆ ಮುಗಿಯುತ್ತಿದ್ದಂತೆಯೇ ಒಂದು ಮುಖ ತಮಗೆ ಕಂಡಿತ್ತು . " ಇರಲಿ ಇರಲಿ " ... ಎಂದು ತಕ್ಷಣವೇ ಉತ್ತರಿಸದೇ ತಮ್ಮ ಯೋಚನೆಯನ್ನು ಮುಂದುವರಿಸಿದ್ದರು . ಎಷ್ಟೇ ಪ್ರಯತ್ನ ಪಟ್ಟರೂ , ಯಾವು ಯಾವುದೋ ರಾಜರ , ಧಾರ್ಮಿಕರ , ಪ್ರಭಾವ ಪುರುಷರ , ಸಜ್ಜನರುಗಳನ್ನು ತಿರುವಿಹಾಕಿದ್ದರೂ , ಒಂದಲ್ಲ ಒಂದು ಗುಣದ ಕೊರತೆಯೇ ಕಾಣುತ್ತಿತ್ತು . ಮೊದಲು ಕಂಡ ಮುಖ ಮಾತ್ರ ಮೆಲುನಗುತ್ತಿತ್ತು. "ಇನ್ನು ಹುಡುಕಲಾರೆ" ಎಂದು ತಲೆ ಕೊಡವಿದ ನಾರದರು, ನ್ಯಾಯಾಧೀಶರಾಗಿ ತಮ್ಮ ತೀರ್ಪನ್ನು ಓದಿಬಿಟ್ಟರು. "ಎಷ್ಟೇ ಹೋಲಿಸಿದರೂ ಎಷ್ಟೇ ಹುಡುಕಿದರೂ ಒಬ್ಬ ವ್ಯಕ್ತಿ ಮಾತ್ರ ಕಾಣಿಸುತ್ತಿದ್ದಾರೆ . ಅವರಿಗೆ ಸಮಾನವಾದ ಮತ್ತೊಬ್ಬ ಮನುಷ್ಯ ಕಾಣುತ್ತಿಲ್ಲ . ಏಕಮೇವಾದ್ವಿತೀಯ , ಮಹಾನ್ ಮಾನವರೆಂದರೆ ಅವರೊಬ್ಬರೇ . ಅವರೇ ಅಯೋಧ್ಯಾಧಿಪತಿ ದಶರಥ ಪುತ್ರ ಶ್ರೀರಾಮಚಂದ್ರ . " ( ಇಕ್ಷ್ವಾಕು ವಂಶ ಪ್ರಭವೋ ರಾಮೋ ನಾಮ ಜನೈಃ ಶೃತಃ )
ಅಪ್ರಯತ್ನವಾಗಿ ರೆಪ್ಪೆ ಮುಚ್ಚಿದ ನಾರದರ ಮನೋ ನಯನಗಳು ತೆಗೆದವು . ಶ್ರೀರಾಮ ಚರಿತ್ರೆಯ ಪುಟಗಳು ಸರಸರನೆ ಸರಿಯತೊಡಗಿದವು . ಮನಸ್ಸು ಸಂಗ್ರಹಿಸತೊಡಗಿತು ; ಬಾಯಿ ಉಲಿಯತೊಡಗಿತು .
"ವಿಖ್ಯಾತ ಇಕ್ಷ್ವಾಕು ವಂಶದಲಿ ದಶರಥನು ಋಷಿ ಸಮಾನನು ಆತ ಅರ್ಧರಥನು, ಸತಿಮೂವರಿದ್ದರೂ ಮಕ್ಕಳಾಗಲೆ ಇಲ್ಲ. ಪುತ್ರಕಾಮೇಷ್ಟಿಯನು ಅವನು ಬಲ್ಲ ರಾಮ ಭರತನು ಮತ್ತೆ ಲಕ್ಷ್ಮಣನು ಶತ್ರುಘ್ನ ಸಂತಾನ ಸಂವೃದ್ಧಿಗಿಲ್ಲ ವಿಘ್ನ ಮೊದಲ ಮಗನಿಗೆ ಪಟ್ಟ ರಾಜನದು ಸಂಕಲ್ಪ ಕೈಕೆ ಬಾಯಿಗೆ ಸಿಕ್ಕು ಆದನಲ್ಪ ಮಣಿದು ತಂದೆಗೆ ರಾಮ ಕಾನನಕೆ ಅಡಿಯಿಟ್ಟ ಭರತನಿಗೆ ಸಿಂಹಾಸನವ ಬಿಟ್ಟ.
ಸೀತೆ ಸೌಮಿತ್ರಿಯರು ರಾಮರನು ಅನುಸರಿಸಿ ಎಲೆಮನೆಯ ಕಟ್ಟಿದರು ವನವ ಸರಿಸಿ ಮತ್ತೆ ವನ ನದಿಗಳನು ಹಾದು ಇಳಿದರು ಗುಡ್ಡ ದಂಡ ಕಾರಣ್ಯದಲು ಇಲ್ಲ ಅಡ್ಡ ಬಂದಳಾ ಶೂರ್ಪನಖೆ ರಾಮರನು ಬಯಸುತ್ತ ಅವಳಿಂದ ಖರದೂಷಣನು ಸತ್ತ ತಂಗಿ ರಾಮರ ಬಯಸಿ ಅಣ್ಣ ಸೀತೆಯ ಬಯಸಿ, ಮೈಥಿಲಿಯ ಹೊತ್ತೊಯ್ದ ಪಕ್ಷಿ ಜಯಿಸಿ ರಾಮ ಸುಗ್ರೀವರಲಿ ಸ್ನೇಹ ಕರ ಚಾಲನೆಯು ಸುಗ್ರೀವನಿಗೆ ಆಯ್ತು ರಾಜ್ಯ ಪಾಲನೆಯು ಶತ ಯೋಜನಂಬುಧಿಯ ಲಂಘಿಸಿದ ಹನುಮಂತ ಸೀತೆ ಸುದ್ದಿಯ ತಂದ ಧೀರ ಮತಿವಂತ ಲಂಕೆ ಬಳಿ ಕಪಿಸೈನ್ಯ ವರಾಶಿ ದಾಟುತ್ತ ಬರಲು ರಾವಣ ನಡುಗೆ ಅದನು ನೋಡುತ್ತ ಯುದ್ಧ ಆರಂಭಿಸಲು ಸತ್ತು ಬಿದ್ದರು ಎಲ್ಲ ತಮ್ಮ ಬಾಂಧವ ಸೈನ್ಯ ಮಕ್ಕಳೆಲ್ಲ ದಶಕಂಠ ಸಂಹಾರ ಅಭಿಷೇಕ ರಾಮರಿಗೆ ಮೋಕ್ಷ ರಾಮರ ಕಥೆಯು ಸಜ್ಜನರಿಗೆ".
ನಾರದ ಮುನಿಗಳು ಹೇಳಿದ , ಹರಸಿದ , ಹಾಡಿದ ರಾಮ ಕಥೆಯನ್ನು ವಾಲ್ಮೀಕಿಗಳ ಮನಸ್ಸು ಮತ್ತೆ ಮತ್ತೆ ಮೆಲುಕುಹಾಕುತ್ತಿದ್ದರೂ , ಅವರ ಒಳ ಮನಸ್ಸು ಮತ್ತೇನನ್ನೋ ಧ್ಯಾನಿಸುತ್ತಿತ್ತು . ಏನಿದು ಆಶ್ಚರ್ಯ ! ಹೇಗೆ ಇಂದು ನಾರದರು ಬಂದದ್ದು , ಅವರನ್ನು ತಾನು ಕೇಳಿದ್ದು , ಅವರು ರಾಮ ಕಥೆಯನ್ನು ತಮಗೆ ಸಂಕ್ಷಿಪ್ತವಾಗಿ ಹೇಳಿದ್ದು ! ಯಾವುದಕ್ಕೆ ಯಾವುದು ಸಂಬಂಧ ? ಹೇಗೆ ಎಲ್ಲೋ ಇದ್ದ ಯಾರೋ ಮತ್ತೆಲ್ಲೋ ಇರುವ ಮತ್ತಾರನ್ನೋ ಅನಿರೀಕ್ಷಿತವಾಗಿ ಸಂಧಿಸುತ್ತಾರೆ ? ಸಂಬಂಧವೇ ಇರದ ಜಾಗದಲ್ಲಿ ವಾಸಿಸುತ್ತಾರೆ ? ಇಂದು ಬೆಳಿಗ್ಗೆ ನಾರದರು ಬಂದು ಹೇಳಿದ ಕಥೆಗೂ ಕೆಲ ತಿಂಗಳುಗಳ ಹಿಂದೆ ನಡೆದ ಘಟನೆಗೂ ಎಂತಹ ಸಂಬಂಧವಪ್ಪ ?! ಆ ಹಿಂದಿನ ದೃಶ್ಯಗಳು ಅವರ ಸ್ಮೃತಿಯಲ್ಲಿ ಹಾದು ಹೋಗ ತೊಡಗಿತು.
ಒಂದು ರಾತ್ರೆ ರಹಸ್ಯವಾಗಿ ಅಯೋಧ್ಯೆಯಿಂದ ಬಂದ ವೇಗ ಕುದುರೆಯ ಸವಾರರು ಕೊಟ್ಟು ಹೋದರು ರಾಜಪ್ರಾರ್ಥನೆಯನ್ನು . ಇದೇ , ಈಗ ತಾನೇ ನಾರದರು ಹೇಳಿದ ಶ್ರೀರಾಮಪ್ರಾರ್ಥನೆಯನ್ನು . ಅದು ಹೇಳಿದ್ದಾದರೂ ಏನು ? ಅದಾದ ನಂತರ ಮಾರನೆಯ ದಿನ ತಾವು ಧ್ಯಾನದಲ್ಲಿದ್ದಾಗ ತಮ್ಮ ಶಿಷ್ಯರು ಬಂದು ಆತಂಕದಿಂದ ನುಡಿದದ್ದಾರೂ ಏನು ? " ಗುರುಗಳೇ ಯಾರೋ ವನದೇವಿಯೋ , ದೇವತೆಯೋ , ಶಪ್ತ ಗಂಧರ್ವಿಯೋ , ಯಾರೋ ದೀನೆ ನಮ್ಮ ಆಶ್ರಮ ಸಮೀಪದಲ್ಲಿ ಒಂಟಿಯಾಗಿ ಅಳುತ್ತಿದ್ದಾಳೆ . ಆಕೆಯನ್ನು ಕಂಡರೆ ಯಾವುದೋ ಗೌರವ ಕುಟುಂಬದ ಹೆಣ್ಣೆಂದು ಕಾಣುತ್ತದೆ . ಪೀತಾಂಬರ , ಒಡವೆಗಳನ್ನು ನೋಡಿದರೆ ಯಾರೋ ರಾಜಕನ್ಯೆ ಎಂಬ ಸಂದೇಹ . ತಾವು ದಯಮಾಡಿ ಅಕೆಯನ್ನು ಸಂತೈಸುವುದು ಸರಿ ಎನಿಸುತ್ತದೆ ." (ಮುಂದುವರೆಯುವುದು!! )
Follow KannadaPrabha channel on WhatsApp
Download the KannadaPrabha News app to follow the latest news updates
Subscribe and Receive exclusive content and updates on your favorite topics
Subscribe to KannadaPrabha YouTube Channel and watch Videos