ಜಾನಕಿಗೆ ವಾಲ್ಮೀಕಿ ಮಹರ್ಷಿಗಳ ಅಭಯ
ಸರಿ ಸರಿ . ನಿನ್ನೆ ರಾಜಾರಾಮರು ಹೇಳಿಕಳಿಸಿದ್ದುದು ಇದನ್ನೇ ತಾನೆ ? ತಮಗೊದಗಿದ ದುಸ್ಥಿತಿಯನ್ನು , ಜನಾಪವಾದವನ್ನು , ತಾವೆಷ್ಟೇ ಎಚ್ಚರಿಕೆಯಿಂದ ಹೆಜ್ಜೆಯಿಟ್ಟಿದ್ದರೂ ಜನರು ತನ್ನನ್ನು ದೂಷಿಸುತ್ತಿರುವ ಪರಿಯನ್ನು , ಬಗೆಬಗೆಯಾಗಿ ಬಣ್ಣಿಸಿ ಗುಪ್ತ ಪತ್ರದಲ್ಲಿ ತಮ್ಮ ಕರುಳು ತುಂಬಿದ ಶೋಕವನ್ನೆಲ್ಲ ಅಕ್ಷರವಾಗಿಸಿಬಿಟ್ಟಿದ್ದರು . ’ಇಡೀ ಊರಿಗೆ ಊರೇ , ನಾಡಿಗೆ ನಾಡೇ ಸೀತೆಯನ್ನು ಕರೆತಂದದ್ದು ತಪ್ಪೆಂದೂ , ತಾನು ಕಾಮುಕನೆಂದೂ ದೂಷಿಸುತ್ತಿರುವಾಗ ಯಾರನ್ನು ಕರೆಸಿ ಸಮಾಧಾನ ಮಾಡುವುದು ? ಸಮಜಾಯಿಷಿ ಕೊಡಲು ಹೊರಟಷ್ಟೂ ಇನ್ನೂ ಅನುಮಾನ ಹೆಚ್ಚುತ್ತಲೇ ಹೋಗುವುದಲ್ಲ ?! ತಾನು ವಂಶ ಮರ್ಯಾದೆಗಾಗಿ , ಸತ್ಯ ವಾಕ್ಯಕ್ಕಾಗಿ , ತಂದೆಯ ಪ್ರತಿಙ್ಞೆಗಾಗಿ ಎಲ್ಲವನ್ನೂ ಬಿಟ್ಟವನು . ಇದೀಗ ತನ್ನ ವಂಶಕ್ಕೆ ಅಪಕೀರ್ತಿ ಸುತ್ತಿದರೆ ಹೇಗೆ ಇದರ ಪರಿಹಾರ ? ಅದಕ್ಕಾಗಿ ದಾರುಣ ನಿರ್ಧಾರ ತೆಗೆದುಕೊಳ್ಳಬೇಕಿದೆ . ಸೀತೆ ಪತಿವ್ರತೆ . ಗಂಗೆಯಂತೆ ಪವಿತ್ರೆ , ಅಗ್ನಿಯಂತೆ ಶುದ್ಧೆ , ರಾವಣನ ನೆರಳನ್ನೂ ದ್ವೇಷಿಸುತ್ತಿದ್ದು ತನ್ನ ಧ್ಯಾನದಲ್ಲೇ ೧೦ ತಿಂಗಳುಗಳನ್ನು ನವೆಸಿದಳೆಂದು ಗೊತ್ತಿದ್ದರೂ , ಇದೀಗ ಆಕೆಯನ್ನು ತ್ಯಜಿಸಬೇಕಿದೆ . ಜನರಿಗೆ ನ್ಯಾಯವನ್ನು ತೋರಿಸಬೇಕಿದೆ . ತನ್ನನ್ನು ಅಡ್ಡಿಯಿಟ್ಟು ಜನರು ದಾರಿತಪ್ಪುವುದನ್ನು ತಪ್ಪಿಸಬೇಕಿದೆ . ಏನು ಮಾಡುವುದು ? ಜನನಾಯಕ ಸ್ಥಾನದಲ್ಲಿ ಕುಳಿತಾಗ ತನ್ನ ಸ್ವಂತ ಸುಖವನ್ನು ತ್ಯಾಗ ಮಾಡಲೇ ಬೇಕಾಗುತ್ತದೆ . ಇಲ್ಲದಿದ್ದರೆ ಈ ಸಿಂಹಾಸನದಿಂದ ದೂರ ಹೋಗಬೇಕಾಗುತ್ತದೆ . ಹಾಗೂ ಮಾಡಲಾಗದು , ರಾಜ್ಯ ಪರಿಪಾಲನೆಯೂ ಸ್ವಧರ್ಮ ಪಾಲನೆಯೇ . ತಂದೆಗೆ ಔರಸ ಪುತ್ರನಾಗಿ ಅಯೋಧ್ಯೆಯನ್ನು ಪೋಷಿಸುವುದು ತನಗೆ ಕರ್ತವ್ಯ . ಅಷ್ಟೇ ಅಲ್ಲ , ಭರತ ತನ್ನಿಂದ ಪ್ರಮಾಣ ಮಾಡಿಸಿಬಿಟ್ಟನಲ್ಲ ! ಎರಡೂ ಧರ್ಮಗಳನ್ನೂ ಉಳಿಸಬೇಕಿದೆ . ಪಾಪ , ಸೀತೆ ಗರ್ಭಿಣಿ , ಏಕಾಂಗಿ , ಮುಗ್ಧೆ , ಭೀರು , ಅವಳನ್ನೆಂತು ಬಿಡಲಿ ? ಬಿಟ್ಟು ತಾನೆಂತು ಬದುಕಲಿ ? ತನ್ನ ದೇಹವನ್ನೇ ಕತ್ತರಿಸಿ ಕಳಿಸುತ್ತಿದ್ದೀನಿ . ತಾವು ದಯಮಾಡಿ ಅವಳನ್ನು ರಕ್ಷಿಸಿ . ಅವಳಿಗೆ ಅಪರತಂದೆಯಾಗಿ ಅವಳನ್ನು ಪೋಷಿಸಿ. ’ ಋಷಿಪತ್ನಿಯರೊಡನೆ ಸೀತೆಯಿರುವ ತಾಣಕ್ಕೆ ಹೋಗುತ್ತಿರುವಷ್ಟು ಹೊತ್ತೂ ಹಿಂದಿನ ರಾತ್ರಿ ತಾವು ಓದಿದ ರಾಮನ ಬರಹವೇ ಕಣ್ಣ ಮುಂದೆ.
ಇತ್ತ ಸೀತೆ ದೀನಳಾಗಿ , ಅಧೀರಳಾಗಿ , ಮುಂದೇನು ಮಾಡಬೇಕೆಂದು ತೋಚದೇ , ಕಣ್ಣಲ್ಲಿ ನೀರು ಇಂಗಿ ಹೋಗಿ , ಸಂಜೆ ಸಮೀಪಿಸುತ್ತಿರುವುದನ್ನು ಕಾಣುತ್ತಾ , ಹೆದರಿಕೆಯ ಶಿಶುವಾಗಿ , ತನ್ನ ದುರ್ವಿಧಿಯನ್ನು ಹಳಿದುಕೊಳ್ಳುವುದನ್ನು ಬಿಟ್ಟು ಬೇರೇನನ್ನೂ ಮಾಡಲಾಗದೇ , ದಿಕ್ಕು ತೋಚದೇ ಕುಳಿತಿದ್ದಾಗ , ಬಿಳಿ ಗಡ್ಡದ , ಕಾವಿ ಬಟ್ಟೆಯ ಋಷಿಯೊಡನೆ ಕೆಲ ಮಹಿಳೆಯರು ಬರುತ್ತಿದ್ದಾರೆ . ಅಬ್ಬ !! ಕೆಲ ಮನುಷ್ಯರು . ಸಧ್ಯ ! ಏನೋ ಸಮಾಧಾನ . ಅಲ್ಲಲ್ಲ , ಇವರಿಗೇನೆಂದು ಹೇಳುವುದು ? ’ " ಯಾರಮ್ಮ ನೀನು , ಏಕೆ ಅಳುತ್ತಿದ್ದೀಯೆ ? ನಿನ್ನವರೆಲ್ಲಿ ? ಎಲ್ಲಿಂದ ಬಂದೆ ? ಏಕೆ ಒಂಟಿಯಾಗಿದ್ದೀಯೆ ? " ಎಂದರೆ ಏನೆಂದು ಹೇಳಲಿ ? " ನನ್ನನ್ನು ಶಂಕಿಸಿ ಗಂಡ ಬಿಟ್ಟ ." ಎಂದು ಹೇಳಲೆ ? ಹಾಗೆ ಹೇಳಿ ತನ್ನ ಮರ್ಯಾದೆಯನ್ನು ತಾನೇ ತೆಗೆದುಕೊಳ್ಳುವುದಲ್ಲದೇ , ಪ್ರಿಯ ಪತಿಗೂ ಕಳಂಕ ತರಲೆ ? ಇದಕ್ಕಿನ್ನ ಈ ಕ್ಷಣದಲ್ಲಿ ಪ್ರಾಣ ಹೋದರೇ ಮೇಲು . ಹತ್ತಿರಕ್ಕೆ ಬಂದ ಮುನಿಯ ಮಖವನ್ನು ನೋಡಲಾಗದೇ ತಲೆ ತಗ್ಗಿಸಿಬಿಟ್ಟಿದ್ದಾಳೆ . ಇನ್ನೇನವರು ಕೇಳುತ್ತಾರೆ ; ತನ್ನ ಬಗ್ಗೆ ವಿಚಾರಿಸುತ್ತಾರೆ . ಯಾವ ಮುಖವನ್ನೆತ್ತಿ ಹೇಳಿಕೊಳ್ಳಲಿ ತನ್ನ ಬಗ್ಗೆ ? ಒಂದೆರಡು ಕ್ಷಣ ಉಸಿರೇ ಕಟ್ಟಿತು....
ಆದರೆ ಏನಿದು ? ಏನನ್ನೂ ಅವರು ಕೇಳುತ್ತಿಲ್ಲ ! ಸಮಾಧಾನ ಮಾಡುತ್ತಿದ್ದಾರೆ . ಅರೆ ! ನನ್ನ ವಿಷಯ ಇವರಿಗೆ ಎಂತು ಗೊತ್ತು ? ಓಹ್ . ತನ್ನ ಬಗ್ಗೆ , ತನ್ನ ಗಂಡನ ಬಗ್ಗೆ , ಅಪ್ಪನ ಬಗ್ಗೆ , ಮಾವನ ಬಗ್ಗೆ ಅವರೇ ಹೇಳುತ್ತಿದ್ದಾರೆ ! ಇವರಿಗಿದೆಲ್ಲ ಹೇಗೆ ಗೊತ್ತಾಯಿತು ? ಯಾರೋ ಮಹಾನುಭಾವರು . ಯಾರಪ್ಪಾ ಈ ಪುಣ್ಯಾತ್ಮ ? ಅನಾಥ ಬಂಧು , ಅನಾಥ ರಕ್ಷಕ . ತಲೆ ನೇವರಿಸುತ್ತಿದ್ದಾರೆ . ಶಿಷ್ಯೆಯರಿಗೆ ಆದೇಶಿಸುತ್ತಿದ್ದಾರೆ . ತನ್ನನ್ನು ಅಹ್ವಾನಿಸುತ್ತಿದ್ದಾರೆ . ಕರುಣೆಯೇ ಮೂರ್ತಿವೆತ್ತ ಋಷಿವಾಣಿ ಮೃದುವಾಗಿ ಸವರಿತು ಸೀತೆಯ ಕಿವಿಗಳನ್ನು . " ಮಗಳೇ , ನಾನು ವಾಲ್ಮೀಕಿ . ನಿನ್ನ ಮಾವನ ಮಿತ್ರ . ದಶರಥನೊಡನೆ ಹಲ ಶತಮಾನಗಳ ಸ್ನೇಹ . ನಿನ್ನ ತಂದೆಯನ್ನೂ ನಾನು ಬಲ್ಲೆ . ನಿನ್ನ ಗಂಡನೂ ನನಗೆ ಗೊತ್ತು . ಆತನ ಪಿತೃವಾಕ್ಯ ಪರಿಪಾಲನೆ , ಅದಕ್ಕಾಗಿ ಅಡವಿಪಾಲದದ್ದು , ಅಲ್ಲಿ ನಡೆದ ಎಲ್ಲ ವಿಷಯಗಳನ್ನೂ ನಾನು ತಿಳಿದಿರುವೆ . ಅಡವಿಯಲ್ಲಿದ್ದಾಗ ನಿಮ್ಮನ್ನು ನೋಡಿದ್ದೆ . ಸನಿಹವಿದ್ದರೂ ನಮ್ಮ ಭೇಟಿಯಾಗಿರಲಿಲ್ಲ . ನಿನಗೆ ಮರೆತು ಹೋಗಿದೆಯೆಂದು ಕಾಣುತ್ತದೆ . ನೀನಿಲ್ಲಿಗೇಕೆ ಬಂದೆ , ನೀನೆಂತಹ ಪತಿವ್ರತೆ , ನಿನ್ನ ಗಂಡ ಏಕಾಗಿ ನಿನ್ನನ್ನು ಕಳಿಸಿದ , ಅವನ ಅವಸ್ಥೆ ಏನು , ಅವನೆಂತಹ ಇಕ್ಕಟ್ಟಿನ ಇಕ್ಕಳದಲ್ಲಿ ಸಿಲುಕಿದ್ದಾನೆ , ಅವನೆಷ್ಟು ನೋಯುತ್ತಿದ್ದಾನೆ , ರಾಜ ಧರ್ಮ ಪರಿಪಾಲನೆಗಾಗಿ ಸ್ವಸುಖ ತ್ಯಾಜ್ಯ ಮಾಡಿದ್ದಲ್ಲದೆ , ನಿಷ್ಕಳಂಕಳಾದ ನಿನ್ನನ್ನು ಬಿಟ್ಟು ಮನೋವ್ಯಥೆಯಲ್ಲಿ ನಿದ್ರಾಹಾರವಿಲ್ಲದೆ ಎರಡು ದಿನಗಳಿಂದ ಶೋಕಗೃಹದಲ್ಲಿ ಅವನೆಂತು ಒದ್ದಾಡುತ್ತಿದ್ದಾನೆ , ನಿನ್ನನ್ನು ನನ್ನ ಬಳಿಗೆ ಕಳಿಸಿದ ಕಾರಣ.... ಎಲ್ಲವನ್ನೂ ನಾನು ಬಲ್ಲೆ . ಸಮಾಧಿ ಸ್ಥಿತಿಯಲ್ಲಿ ನಾನೆಲ್ಲವನ್ನೂ ಅರಿಯಬಲ್ಲೆ . ಏಳು . ನೀನು ಪಟ್ಟಮಹಿಷಿ . ನಿನ್ನ ಸ್ಥಾನದಲ್ಲಿ ಇನ್ನಾರೂ ಕೂರಲು ಸಾಧ್ಯವಿಲ್ಲ , ಕೂಡುವುದೂ ಇಲ್ಲ , ಅದು ನಿನ್ನ ಗಂಡನ ಸತ್ಯ ಸಂಕಲ್ಪ . ಚಿಂತಿಸಬೇಡ , ಇದೆಲ್ಲ ವಿಧಿಯ ಲೀಲೆ . ನೀನು ನಿನ್ನ ತೌರಿಗೆ ಬಂದಿದ್ದೀಯೆ ಎಂದು ತಿಳಿ ; ನಿಶ್ಶಂಕೆಯಿಂದ ಇರು . ನಡೆ , ನಮ್ಮ ಆಶ್ರಮಕ್ಕೆ ಹೋಗೋಣ . "
(ಸ್ನುಷಾ ದಶರಥಸ್ಯ ತ್ವಂ ರಾಮಸ್ಯ ಮಹಿಷೀಪ್ರಿಯ
ಜನಕಸ್ಯ ಸುತಾ ರಾಙ್ಞಾ ಸ್ವಾಗತಂ ತೇ ಪತಿವ್ರತೇ
ಆಯಾಂತಿ ಚಾಸಿ ವಿಙ್ಞಾತ ಮಯಾಧರ್ಮ ಸಮಾಧಿನಾ
ಕಾರಣಂಚೈವ ಸರ್ವಂ ಮೇ ಹೃದಯೇನ ಉಪಲಕ್ಷಿತಂ
ತವಚೈವ ಮಹಾಭಾಗೇ ವಿದಿತಂ ಮಮ ತತ್ವತಃ)