ರಾವಣ, ಕುಂಭಕರ್ಣ, ವಿಭೀಷಣನ ತಪಸ್ಸು
ನೋಡಿದಳು ಮತ್ತೊಮ್ಮೆ. ಹತ್ತು ಕಪ್ಪು ದಪ್ಪ ಕುತ್ತಿಗೆಗಳ ಮೇಲೆ ಹತ್ತು ಮುಖಗಳು . ತನ್ನ ಕಣ್ಣಿಗೇನೋ ಸುಂದರವಾಗಿಯೇ ಕಾಣುತ್ತಿವೆ! ಒಂದೊಂದು ಬಾಯಿ ತೆರೆದರೂ ಭೀಕರ ಹಲ್ಲುಗಳ ಸಾಲು. ಕಾಡಿಗೆಯ ರಾಶಿ. ಕೆಂಪು ತುಟಿಗಳು. ಓಹ್ ! ಒಂದಲ್ಲ; ಎರಡಲ್ಲ; ಇಪ್ಪತ್ತು ಭುಜಗಳು. ಅಗಲವಾದ ಮುಖ. ಮೇಲೆದ್ದು ನಿಂತ ಹೊಳೆವ ರಕ್ತ ಕೆಂಪು ಕೇಶ.
(ದಶಗ್ರೀವಂ ಮಹಾ ದಂಷ್ಟ್ರಂ ನೀಲಾಂಜನ ಚಯೋಪಮಂ
ತಾಮ್ರೋಷ್ಠಂ ವಿಂಶತಿ ಭುಜಂ ಮಹಾಸ್ಯಂ ದೀಪ್ತ ಮೂರ್ಧಜಂ )
ಎಷ್ಟೇ ಆಗಲಿ ತನ್ನ ಮಗ. ಮೋಹ !! ಕೂಸನ್ನೆತ್ತಿ ಎದೆಗೊತ್ತಿಕೊಂಡಳು ಕೈಕಸಿ. ಹಲ್ಲಿಲ್ಲದಿದ್ದರೂ ಹತ್ತು ಬಾಯಿಗಳೂ ಹಾಲೂಡಿಸುತ್ತಿದ್ದಂತೆಯೇ ಕಚ್ಚಿ ಗಾಯ ಮಾಡಿಬಿಟ್ಟಿತು. " ಅಯ್ಯೋ! " ಮತ್ತೇನೋ ಹೊಟ್ಟೆಯಲ್ಲಿ ಚಲನೆ, ನೋವು. ಏನಿದು? ಏನಾಗುತ್ತಿದೆ? ಮತ್ತೆ ನೋವಿನ ಮೇಲೆ ನೋವು! ಮತ್ತೆ ಕಿರಿಚಾಟ, ಮತ್ತೊಂದು ಮಗು, ಅಯ್ಯಪ್ಪಾ! ತಾನು ಸತ್ತೇ ಹೋದೆ! ಕಣ್ಣು ಕತ್ತಲಿಟ್ಟಿತು, ಪ್ರಙ್ಞೆ ತಪ್ಪಿತು. ಎಚ್ಚರವಾದಾಗ ಮೊದಲ ಮಗುವಿಗಿನ್ನ ಭಾರಿ ಆಕಾರ. ಹುಟ್ಟಿದಾಗಲೇ ಪುಟ್ಟ ಹಂದಿಯಂತೆ. ಕಿವಿಗಳೋ ಒಂದೊಂದೂ ಮಣ್ಣಿನ ಗಡಿಗೆಯಂತೆ. ಓಹ್ ಮತ್ತೆ ನೋವು, ಮತ್ತೇನು ಗತಿ. ಹೊಟ್ಟೆಯೊಳಗೆ ಏನೋ ಪರಚಿದಂತೆ, ಕರುಳಿರಿದಂತೆ, ಕಚ್ಚಿದಂತೆ ಅಯ್ಯಯ್ಯೋ ! ಏನಾಗುತ್ತಿದೆ ನನಗೆ! ಯಾರಾದರೂ ಸಹಾಯ ಮಾಡಿ! " ಕೂಗಿಕೊಂಡಳು; ತಲೆ ಸುತ್ತಿತು; ಕೊರಳು ಬಿಗಿಯಿತು; ರಕ್ತ ಸುರಿಯಿತು; ಮೂರನೆಯ ಮಗು ಹೊರಬಿತ್ತು. ಕೆಂಚು ಕೂದಲ, ಜೋತ ಮುಖದ, ಕೆಂಗಣ್ಣಿನ ಮಾಂಸದ ಮುದ್ದೆ. ಮಗುವಿನ ಒಂದೊಂದು ಉಗುರೂ ಮೊರದಂತೆ ! ರಕ್ತ ಸಿಕ್ತ !! ಹೊರ ಬರುವಾಗ ಒಳಗೆಲ್ಲ ಚೂಪು ಉಗುರುಗಳು ತಗುಲಿ, ಪರಚಿ ತನಗೆ ಯಮಯಾತನೆಯಾಗಿದೆ.... ಏನೇ ಆಗಲಿ ತನ್ನದೇ ಮಕ್ಕಳು. ಮೂರು ಮಕ್ಕಳು !!!
ಮಕ್ಕಳು ಬೆಳೆಯುತ್ತಿದ್ದಾರೆ; ಅಸಾಧ್ಯ ಬೆಳವಣಿಗೆ; ಶೀಘ್ರ ಬೆಳವಣಿಗೆ; ಆತುರ ಬೆಳವಣಿಗೆ. ಹತ್ತು ತಲೆಗಳಿದ್ದುದರಿಂದ ದಶಕಂಠ, ಮಡಿಕೆಗಳಂತಹ ಕಿವಿಗಳಿದ್ದುದರಿಂದ ಕುಂಭಕರ್ಣ, ಮೊರದಂತಹ ಉಗುರುಗಳಿರುವುದರಿಂದ ಶೂರ್ಪನಖೆ... ಅನ್ವರ್ಥ ನಾಮಗಳನ್ನೇ ಇಟ್ಟಿದ್ದಾರೆ. ಇದ್ದಕ್ಕಿದಂತೆಯೇ ಕೈಕಸಿಗೆ ಏನೋ ನೆನಪಾಯಿತು. " ಏನು ಸ್ವಾಮಿ ಇದು ? ಭಗವದ್ ಭಕ್ತನಿಗೆ ಜನ್ಮ ಕೊಡುತ್ತೇನೆ ಎಂದು ಹೇಳಿ ಇಂತಹ ಮಕ್ಕಳಿಗೆ.... " . ವಾಕ್ಯ ಮುಗಿಯುವ ಮುಂಚೆಯೇ ತಡೆದು ಹೇಳಿದ ವಿಶ್ರವಸ್ ; " ಅಮೃತಕ್ಕೆ ಮುನ್ನ ಹಾಲಾಹಲ ಹುಟ್ಟಲಿಲ್ಲವೆ ? ಈ ಮೂರೂ ಮಂದಿ ನನ್ನ ಮಕ್ಕಳಲ್ಲ! ನನ್ನ ಗೋತ್ರ ಇವರಿಗೆ ಬರಬೇಕಿಲ್ಲ. ಈ ಮೂವರೂ ನಿನಗೆ, ಅಂದರೆ ದಾನವ ಕುಲಕ್ಕೆ ಸೇರಿದವರು. ಈ ಮೂವರೂ ಬ್ರಾಹ್ಮಣರಲ್ಲ. ರಾಕ್ಷಸರು !! ಹುಟ್ಟಿನಿಂದ ಬ್ರಾಹ್ಮಣ್ಯ ಬರುವುದಿಲ್ಲ. ಆ ಮಾತಿಗೆ ಬಂದರೆ, ಯಾವ ಜಾತಿಯೂ ಹುಟ್ಟಿನಿಂದ ನಿರ್ಣಯಿಸೊಲ್ಲ. ಜನ್ಮ ಸಹಜ. ಹುಟ್ಟುವಾಗ ಯಾವ ಜಾತಿಯೂ ಇಲ್ಲ. ಬೆಳೆದಾಗ ಅವನು ಹೇಗೆ ಇರುತ್ತಾನೆ, ಯಾವ ವೃತ್ತಿ ಮಾಡುತ್ತಾನೆ, ಯಾವ ಗುಣಗಳು ಅವನಲ್ಲಿ ಇವೆ ಅನ್ನುವ ಅಂಶಗಳ ಮೇಲೆಯೇ ಒಬ್ಬನ ಜಾತಿ ನಿರ್ಣಯ ಆಗುತ್ತದೆ. ನಿನ್ನ ಮಕ್ಕಳಲ್ಲಿ ಬ್ರಾಹ್ಮಣ್ಯದ ಗುಣವೂ ಇಲ್ಲ, ಅವರು ನನ್ನ ಮಕ್ಕಳೂ ಅಲ್ಲ. ನಾಮ ಮಾತ್ರ ಬ್ರಾಹ್ಮಣರು ಅಂತ ಅನ್ನಬಹುದು ಯಾರಾದರೂ. ಆದರೆ ನಿಜಾರ್ಥದಲ್ಲಿ ಇವರೆಲ್ಲ ಅಬ್ರಾಹ್ಮಣರು. ಬ್ರಹ್ಮ ಬಂಧುಗಳು !!". ತನ್ನ ಮಾತುಗಳನ್ನು ಹೆಂಡತಿ ಅರಗಿಸಿಕೊಳ್ಳುತ್ತಿರುವಳೋ ಎಂದು ಅವಳೆಡೆಗೆ ನೋಡಿ ಸಾವಕಾಶವಾಗಿ ಮುಂದುವರಿಸಿದ ವಿಶ್ರವಸ್, " ನಾನು ಅಂದು ಹೇಳಿದ್ದು ಸುಳ್ಳಲ್ಲ. ಇವರು ದುರ್ಮುಹೂರ್ತದ ಫಲ. ಈಗ ನಾನು ಸುಮುಹೂರ್ತ ಒಂದನ್ನು ಖಚಿತ ಪಡಿಸುತ್ತೇನೆ. ಆಗ ನಮಗೆ ಒಬ್ಬ ಮಗ ಹುಟ್ಟುತ್ತಾನೆ. ಅವನೇ ನನ್ನ ವಂಶೋದ್ಧಾರಕ. ಅವನೇ ನನ್ನ ವಂಶಕ್ಕೆ, ನನ್ನ ಗೋತ್ರಕ್ಕೆ, ನನ್ನ ಬ್ರಾಹ್ಮಣ್ಯಕ್ಕೆ ಅನುರೂಪನಾದಾತ. ಧರ್ಮದ ನಿರ್ಣಯ ಮಾಡುವಾಗ ಅವನು ಶುದ್ಧವಾಗಿ ನಿರ್ಮಮಕಾರದಿಂದ ವರ್ತಿಸುತ್ತಾನೆ. ಯಾವ ಲೋಭ - ಮೋಹಗಳಿಗೂ ಒಳಗಾಗುವುದಿಲ್ಲ. ಭವಿಷ್ಯದಲ್ಲಿ ಅವನು ಧರ್ಮಾತ್ಮ ಎಂದು ಪ್ರಸಿದ್ಧನಾಗಿ, ಸ್ಥಿರಂಜೀವಿಯಾಗಿ ಜಗದಲ್ಲಿಯೇ ಅತ್ಯಂತ ಯಶಸ್ಸುಗಳಿಸುತ್ತಾನೆ.
(ಮಮ ವಂಶಾನು ರೂಪೋ ಸಧರ್ಮಾತ್ಮಾ ಚ ಭವಿಷ್ಯತಿ)
ನಾಲ್ಕು ಮಕ್ಕಳನ್ನೂ ಕೂಡಿಸಿಕೊಂಡು ಒಂದು ದಿನ ಕೈಕಸಿ ಹೇಳಿದಳು, " ನಿಮ್ಮ ಅಣ್ಣನ್ನ ನೋಡಿ. ಅವನು ಧನಾಧ್ಯಕ್ಷ, ಲಂಕಾಧಿಪತಿ, ಮಹಾ ಶ್ರೀಮಂತ, ಯಕ್ಷರಿಗೆಲ್ಲ ಒಡೆಯ. ಅವನಿಗೂ, ನಿಮಗೂ ತಂದೆ ಒಬ್ಬನೇ. ಆದರೆ ನೀವು ಯಾಕೆ ಹೀಗಿದ್ದೀರಿ ? ಅವನಂತೆ ನೀವು ದೃಢರಾಗಬೇಕಾಗಿದ್ದರೆ, ಅವನಂತೆ ಪ್ರಸಿದ್ಧರಾಗಬೇಕಾಗಿದ್ದರೆ ತಪಸ್ಸು ಮಾಡಿ, ಬ್ರಹ್ಮನನ್ನು ಮೆಚ್ಚಿಸಿ, ವರಗಳನ್ನು ಪಡೆಯಿರಿ. ಮಹೋಗ್ರ ದಶಕಂಠ, ನಿದ್ದೆಯ ಗುಂಗಿನಲ್ಲಿ ಸದಾ ಮೊಂಕಾಗಿರುವ ಕುಂಭಕರ್ಣ, ವೀರ ಸಾತ್ವಿಕ ಧಾರ್ಮಿಕನಾದ ವಿಭೀಷಣ, ಮೂವರೂ ತೀಕ್ಷ್ಣ ತಪಸ್ಸಿಗೆ ಕುಳಿತರು. ಶೂರ್ಪಣಖೆ ಸಹೋದರರ ಶುಶ್ರೂಶೆ ಮಾಡುತ್ತಿದ್ದಳು. ಕಾಲ ಕಳೆಯಿತು, ತಪದ ಮಜಲುಗಳು ಮುಗಿಯುತ್ತ ಬಂದರೂ ವಿರಿಂಚಿ ಕಾಣಲೊಲ್ಲ, ಬರಲೊಲ್ಲ, ಸೂಚನೆ ಕೊಡಲೊಲ್ಲ!! (ಮುಗಿದಿಲ್ಲ)
Follow KannadaPrabha channel on WhatsApp
Download the KannadaPrabha News app to follow the latest news updates
Subscribe and Receive exclusive content and updates on your favorite topics
Subscribe to KannadaPrabha YouTube Channel and watch Videos