ವಿರಿಂಚಿಯನ್ನು ಮೆಚ್ಚಿಸಿದ ದಶಕಂಠ!!
ದಶಕಂಠ ಎಷ್ಟೇ ಆಗಲಿ ರಾಜಸ. ಸಹನೆ ನಶಿಸುತ್ತ ಬಂತು. ಕೊನೆಗೆ ನಿರ್ಣಯಿಸಿದ; " ಬ್ರಹ್ಮದೇವ ! ನಿನ್ನನ್ನ ನಂಬಿ ಕರೆದೆ, ತಪಿಸಿ ಕರೆದೆ, ಬೇಡಿ ಕರೆದೆ, ಶ್ರದ್ಧೆಯಿಂದ ಕರೆದೆ, ಆದರೂ ನೀನು ಪ್ರಸನ್ನ ಆಗಲಿಲ್ಲ. ಏನು ಪರೀಕ್ಷೆ ಮಾಡುತ್ತಿದ್ದೀಯ? ನನ್ನ ನಿಷ್ಠೆ ದೊಡ್ಡದೋ ನಿನ್ನ ಕುತೂಹಲ ದೊಡ್ಡದೋ ತೀರ್ಮಾನ ಆಗಿಯೇ ಬಿಡಲಿ. ತಗೊ ಈ ತಲೆಯನ್ನ! " ಬಿಚ್ಚುಗತ್ತಿ ಕ್ಷಣಮಾತ್ರದಲ್ಲಿ ದಶಕಂಠನ ಮೊದಲ ಶಿರವನ್ನು ಕತ್ತರಿಸಿತು. ಕೊಯ್ದ ಕುತ್ತಿಗೆಯಿಂದ ರಕ್ತ ಚಿಮ್ಮೆಂದಿತು. ತಲೆಹಾರಿ ಮುಂದಿದ್ದ ಅಗ್ನಿಕುಂಡದಲ್ಲಿ ಬಿದ್ದಿತು. ಮತ್ತೆ ಮೇಲೆದ್ದ ಕತ್ತಿ, ಮತ್ತೊಂದು ತಲೆ ಕತ್ತರಿಸಿತು.... ಕುಂಭಕರ್ಣ, ಶೂರ್ಪನಖೆ, ವಿಭೀಷಣರು ಉಸಿರು ಬಿಗಿಹಿಡಿದು ಅಣ್ಣನ ಸಾಹಸವನ್ನು ನೋಡುತ್ತಿದ್ದಾರೆ. ಒಂದರ ಹಿಂದೊಂದು ತಲೆಗಳುರುಳುತ್ತಿವೆ. ಕೊನೆಗೆ ಒಂದೇ ತಲೆ. ಕತ್ತಿ ಎತ್ತಿತು ದಶಕಂಠನ ಕೈ! ಹತ್ತನೇ ಕುತ್ತಿಗೆ ಕತ್ತರಿಸಬೇಕು! " ನಿಲ್ಲು, ಮೆಚ್ಚಿದೆ ! " ಮುಂದೆ ಕಮಲಾಸನದಲ್ಲಿ ಬ್ರಹ್ಮ ಪ್ರತ್ಯಕ್ಷ. " ಮೆಚ್ಚಿದೆ ನಿನ್ನ ದೃಢ ಚಿತ್ತಕ್ಕೆ. ಹಿಡಿದ ಕೆಲಸ ಸಾಧಿಸುವ ಶ್ರದ್ಧೆಗೆ. ಕೇಳು, ಏನು ಬೇಕೋ ಕೇಳು, ಕೊಡುವೆ."
ಸಾಷ್ಟಾಂಗ ಮಾಡಿ ಎದ್ದಾಗ ದೇಹದಲ್ಲಿ ನವೋತ್ಸಾಹ; ಮುಖದಲ್ಲಿ ತೇಜಸ್ಸು ವೃದ್ಧಿಸಿತ್ತು. ತಮ್ಮಂದಿರು ಕೈಜೋಡಿಸಿ ಸ್ತಂಭಿತರಾಗಿ ನಿಂತಿದ್ದರು. " ಹೇ ಸೃಷ್ಟಿಕರ್ತ, ನನ್ನದೊಂದೇ ಬೇಡಿಕೆ. ಎಲ್ಲರೂ ಮೃತ್ಯುವನ್ನು ನೋಡಿ ನಡುಗುತ್ತಾರೆ. ಎಲ್ಲರಿಗೂ ಸಾಯುವ ಭೀತಿ. ನಾನು ಕೇಳಿದ್ದನ್ನು ಕೊಡುವೆಯಾದರೆ ಕೊಡು ನನಗೆ ಸಾವಿರದ ವರ ! ನಾನು ಸಾಯಲೇ ಬಾರದು !! ಯಾರಿಗೂ ನನ್ನನ್ನು ಸಾಯಿಸುವ ಶಕ್ತಿ ಇರಬಾರದು !!! ನಾನು ಅಜೇಯನಾಗಬೇಕು !!!! ದೇವತೆಗಳಂತೆ ಅಮರನಾಗಬೇಕು !!! ಎಲ್ಲ ದಾನವರೂ ಈ ಅಮರತ್ವವನ್ನೇ ಏಕೆ ಕೇಳುತ್ತಾರೋ? ಈ ದೇಹದ ಭೋಗಗಳನ್ನು ನಿರಂತರವಾಗಿ ಅನುಭವಿಸುವ ಅಸೀಮ ಬಯಕೆ. ಎಷ್ಟೇ ಕುಡಿದರೂ ಭೋಗ ತೃಷ್ಣೆ ತೃಪ್ತಿಯಾಗದೆಂಬ ಸತ್ಯ ಏಕೆ ಯಾರಿಗೂ ಅರ್ಥವಾಗುತ್ತಿಲ್ಲ? ಮನಸ್ಸಿನಲ್ಲೇ ಯೋಚಿಸುತ್ತಿದ್ದ ಬ್ರಹ್ಮ ನಸುನಕ್ಕು ನುಡಿದ, " ದಶಗ್ರೀವ, ನನ್ನ ಅಧಿಕಾರ ಸೃಷ್ಟಿ ಮಾಡುವುದಷ್ಟೇ. ಅದೂ ಸಂಪೂರ್ಣವಾಗಿ ನನ್ನ ಅಧೀನವೂ ಇಲ್ಲ. ನಾನು ಕೇವಲ ನ್ಯಾಯಾಧೀಶ. ಜೀವದ ಪಾಪ ಪುಣ್ಯಗಳನ್ನು ನೋಡಿ ಮುಂದಿನ ಜನ್ಮ ನಿರ್ಧರಿಸುವಾತ ಅಷ್ಟೇ. ಅವರು ಅನುಭವಿಸುವ ಕಷ್ಟ, ಸುಖ, ಹಣ, ನಿರ್ಧನ, ಜಾಣ್ಮೆ, ಪೆದ್ದುತನ, ಪ್ರತಿಭೆ, ಸಾಮಾನ್ಯ ತಿಳುವಳಿಕೆ.... ಈ ಎಲ್ಲವೂ ಆ ಜೀವದ ಹಿಂದಿನ ಜನ್ಮಗಳ ಗಳಿಕೆ. ಇದರಲ್ಲಿ ನನ್ನ ಪಾತ್ರವೇನೂ ಇಲ್ಲ. ಹೀಗಾಗಿ ನಿನ್ನ ಆಯುಷ್ಯ, ಬದುಕು, ಸ್ಥಿತಿ, ಸುಖ, ಸಂಕಟ, ವೃದ್ಧಿ, ವ್ಯಾಧಿ, ಆರೋಗ್ಯ, ನೆಮ್ಮದಿ, ನೋವು.... ಎಲ್ಲವೂ ಪೂರ್ವ ನಿರ್ಧಾರಿಕ. ನಿನ್ನ ಜೀವಕ್ಕೆ ಮತ್ತೊಂದು ಅರ್ಥದಲ್ಲಿ ಸಾವೇ ಇಲ್ಲ. ಆದರೆ ಆಗಾಗ್ಗೆ ಅದಕ್ಕೆ ಬೇರೆ ಬೇರೆ ಶರೀರಗಳು ಬೇಕಾಗುತ್ತವೆ. ಹಾಗೆ ಹಳೆಯ ದೇಹ ಬಿಟ್ಟು ಹೊಸ ಶರೀರವನ್ನು ತೆಗೆದುಕೊಳ್ಳುವ ಕ್ರಿಯೆಯನ್ನೇ "ಸಾವು" ಎಂದು ನೀವು ಕರೆಯುತ್ತೀರಿ. ಹೀಗಾಗಿ ಈ ಅರ್ಥದಲ್ಲಿ ಮರಣ ಅನಿವಾರ್ಯ; ಅನುಲ್ಲಂಘನೀಯ; ಅಪವಾದ ರಹಿತ; ಆತ್ಯಂತಿಕ ಶಾಶ್ವತ ಸತ್ಯ. ಆದ್ದರಿಂದ ಅಮರತ್ವ ಬಿಟ್ಟು ಮತ್ತೇನನ್ನಾದರೂ ಕೇಳು, ಕೊಡುವೆ."
ಅಜನ ಉದ್ದನೆಯ ಉಪದೇಶ ದಶಕಂಠನಿಗೆ ಬೇಕಿಲ್ಲ; ಅಪಥ್ಯ. ಬ್ರಹ್ಮನ ಜಾಣಮಾತಿಗೆ ತಾನೂ ಬುದ್ಧಿವಂತಿಕೆಯ ಬಲೆ ಬೀಸಿ ಅವನನ್ನು ಬಂಧಿಸಬೇಕು. " ಮಹಾಸ್ವಾಮಿ, ನೀವೆಂದಂತೆ ಸಾವು ಅನಿವಾರ್ಯವಾಗುವುದಾದರೆ ಯಾರಿಂದ ಹೇಗೆ ಸಾಯಬಾರದು ಎಂದು ಕೇಳಿಕೊಳ್ಳಲೇ?". ತಕ್ಷಣವೇ ಹಿರಣ್ಯಕಶಿಪುವಿನ ಪಟ್ಟಿ ನೆನಪಾಯಿತು ಬ್ರಹ್ಮನಿಗೆ. ಪುರುಷ ಪ್ರಯತ್ನದ ಹುಸಿ ಇವರಿಗೆ ಅರ್ಥವೇ ಆಗದು. " ಆಯಿತು, ಕೇಳು" ಎಂದ ವಿಧಿ. " ಜಗತ್ಪಿತಾ, ನನಗೆ ಯಮನ ದಂಡಪಾಶಗಳಿಂದಲಾಗಲಿ, ವಿಷ್ಣುವಿನ ಸುದರ್ಶನ, ಶಂಕರನ ಪಾಶುಪತ, ಶಕ್ತಿದೇವತೆಯ ಯಾವ ಆಯುಧಗಳಿಂದಲಾಗಲೀ, ದೇವ, ದಾನವ, ಯಕ್ಷ, ರಾಕ್ಷಸ, ಕಿನ್ನರ, ಕಿಂಪುರುಷ, ನಾಗ, ಗರುಡರಿಂದಲಾಗಲೀ, ನನಗೆ ಸಾವು ಬರದಿರಲಿ .
(ಸುಪರ್ಣ ನಾಗ ಯಕ್ಷಾಣಾಂ ದೈತ್ಯ ದಾನವ ರಾಕ್ಷಸಾಂ
ಅವಧ್ಯೋಹಂ ಪ್ರಜಾಧ್ಯಕ್ಷಾ ದೇವತಾ ನಾಂಚ ಶಾಶ್ವತ)
ಪಟ್ಟಿಯಲ್ಲಿ ಯಾರನ್ನಾದರೂ ಬಿಟ್ಟಿರುವೆನೋ? ಎಂದು ಪರಿಶೀಲಿಸಿದ. ಬ್ರಹ್ಮ ದಶಕಂಠನ ಯೋಚನೆಗಳನ್ನೇ ಓದುತ್ತಿದ್ದ. ಮತ್ತೆ ಮರು ಪರಿಶೀಲನೆ. ಅರೆ ಮನುಷ್ಯನ ಹೆಸರನ್ನು ಸೇರಿಸಲಿಲ್ಲವಲ್ಲಾ! ಎಂಬ ಸಂದೇಹದ ಎಳೆ ಹಾದು ಹೋಯಿತು. ಮಾನವನನ್ನೂ ಸೇರಿಸೋಣವೇ ಎಂದುಕೊಂಡ. ಅಭಿಮಾನ ಅಡ್ಡಬಂತು. ಯಾವ ವರವೂ ಇಲ್ಲದೇ ಕೇವಲ ನನ್ನ ದೈಹಿಕ ಶಕ್ತಿಯಿಂದಲೇ ಹುಲು ಮನುಷ್ಯನನ್ನು ಹುಲ್ಲಿನಂತೆ ಹೊಸಕಿ ಬಿಡಬಲ್ಲೆ. ಅವನಾವ ದೊಡ್ಡವ ! ಅವನಿಂದ ನನಗೆ ಸಾವು ಬೇಡ ಎಂದು ಕೇಳಿದರೆ ನಾನು ನರನಿಗೆ ಹೆದರಿದಂತೆ. ಛೆ ಛೆ ! ಅವನಾವ ಗಿಡದ ತೊಪ್ಪಲು? " ವರಕೇಳಿದ್ದು ಮುಗಿಯಿತೇ ದಾನವೇಂದ್ರ? ಏನೋ ಯೋಚಿಸುತ್ತಿರುವಂತಿದೆ?". ಬ್ರಹ್ಮನ ಮಾತು ವ್ಯಂಗ್ಯದಂತೆ ಕೇಳಿಸಿತು. ನಾನು ಈ ದುರ್ಬಲ ಮನುಷ್ಯನಿಗೆ ಅಂಜಿದೆನೆಂದುಕೊಂಡನೋ ಏನು? ದಶಕಂಠ ಅಲಕ್ಷ್ಯ ನಗೆನಕ್ಕು ಹೇಳಿದ, " ಉಳಿದ ಯಾವ ಪ್ರಾಣಿಗಳ ಬಗ್ಗೆಯೂ ನನಗೆ ಶಂಕೆಯಿಲ್ಲ ಸುರಪೂಜಿತ. ಇನ್ನು ನರಮಾನವ, ಅವನಾವ ಲೆಕ್ಕ ? ಹುಲ್ಲು, ಹುಲ್ಲು! ಹುಲ್ಲಿನೆಸಳಿಗೆ ಸಮಾನ ಅವ. ಎಡಗಾಲ ಕಿರುಬೆರಳಲ್ಲಿ ಹೊಸಕಿ ಬಿಡಬಲ್ಲೆ.
(ನ ಹಿ ಚಿಂತಾ ಮಾಂ ಅನ್ಯೇಷು ಪ್ರಾಣಿಶ್ವಮರ ಪೂಜಿತಾ
ತೃಣ ಭೂತಾಹಿ ಮನ್ಯೇ ಪ್ರಾಣಿನೋ ಮಾನುಷಾದಯಃ) (ಮುಗಿದಿಲ್ಲ)