ಸತ್ಯವ್ರತ ರಾಜ ತ್ರಿಶಂಕುವಾದ ಸಂದರ್ಭ (ಸಾಂಕೇತಿಕ ಚಿತ್ರ) 
ಅಂಕಣಗಳು

ಇವನಾ ಅವನು?: ಸತ್ಯವ್ರತನಿಗೆ ವಸಿಷ್ಠರ ಪುತ್ರರಿಂದ ಶಾಪ, ಚಂಡಾಲನಾದ ಮಹಾರಾಜ!

ಸತ್ಯವ್ರತ ವಿಶ್ವಾಮಿತ್ರರಲ್ಲಿ ಹೇಳಿದ, "ನನಗೆ ಸ್ವರ್ಗಕ್ಕೆ ಹೋಗಬೇಕೆಂದು ಆಸೆಯಾಯಿತು, ಸದೇಹ ಸ್ವರ್ಗ ಸಲ್ಲ ಎಂದರು ವಸಿಷ್ಠರು, ಅದಕ್ಕೆ ಅವರ ಮಕ್ಕಳಲ್ಲಿ ಕೇಳಿದೆ. ಅಷ್ಟಕ್ಕೇ ಅವರಿಗೆ ಸಿಟ್ಟು...

ಅರೆ ಇದೇನು ? ಯಾವುದೋ ಹೆಣ್ಣು ಕಷ್ಟ ಪಟ್ಟುಕೊಂಡು ಬೆಟ್ಟ ಹತ್ತುತ್ತಿದ್ದಾಳೆ ? ಜೊತೆಗೆರಡು ಮಕ್ಕಳು , ಇನ್ನೂ ಸಣ್ಣವರು . ಆ ಮಲೆಯ ಮೇಲೆ ಯಾವ ಮಹದೇಶ್ವರನೂ ಇಲ್ಲ , ಮಹಾವಿಷ್ಣುವೂ ಇಲ್ಲ . ಅವರ ದುರ್ಬಲ ಶರೀರ , ಬಾಡಿದ ಮುಖ , ಬರಡು ಮಕ್ಕಳು , ಇವರನ್ನು ಕಂಡು ಸತ್ಯವ್ರತನಿಗೆ ಏನೋ ಶಂಕೆ ಹಾದು ಹೋಯಿತು. ತಕ್ಷಣವೇ ಓಡುತ್ತ ಹೋಗಿ ಆಕೆಯನ್ನು ಅಡ್ಡಗಟ್ಟಿದ. ಅತ್ತು ಅತ್ತು ಅದರ ಕಾರಣ ಹೇಳಿದಳು ಆಕೆ. 
"ವರ್ಷವಾಯಿತು ಯಜಮಾನರು ತಪಸ್ಸಿಗೆ ಹೋಗಿ. ವಾಪಸಾಗುವವರೆವಿಗೂ ಮಕ್ಕಳನ್ನು ಪೋಷಿಸಬೇಕೆಂದು ಶಾಸಿಸಿ ಹೋದರು. ನನ್ನ ಗತಿ ಏನು, ನನಗೆ ಶಕ್ತಿ ಇದೆಯೋ, ನಾನು ಸಾಕಬಲ್ಲನೇ.... ಯಾವುದನ್ನೂ ಕೇಳಲಿಲ್ಲ ಅವರು. ಇಲ್ಲಿಯವರೆವಿಗೆ ಹೇಗೆ ಬದುಕಿದೆವೋ ಗೊತ್ತಿಲ್ಲ. ನಾನು ದುರ್ಬಲೆ. ಬೇಟೆಯಾಡಬಲ್ಲನೇ? ಯಾವುದಾದರೂ ಕೆಲಸ ಮಾಡಬಲ್ಲನೇ? ವ್ಯವಹರಿಸಬಲ್ಲನೇ? ಏನೂ ಬರೊಲ್ಲ. ಏನಾದರೂ ಮಾಡಲು ಇದು ಊರೂ ಅಲ್ಲ. ಈ ದಟ್ಟಡವಿಯಲ್ಲಿ, ಆ ಒಂಟಿ ಗುಡಿಸಿಲಲ್ಲಿ, ನಾನು ನನ್ನ ಮಕ್ಕಳು ಸಿಕ್ಕ ಹಣ್ಣು ತಿಂದು, ಕಾಡು ಪ್ರಾಣಿಗಳ ಭೀತಿಯಿಂದ ಜೀವವನ್ನು ಅಂಗೈನಲ್ಲಿ ಹಿಡಿದು, ಮುಖ ಮುಖ ನೋಡಿ ನೋಡಿ ನೋಡಿ ಬೇಸರವಾಗಿ, ಹೀಗೆ ಬದುಕಿರುವುದಕ್ಕಿನ್ನ ಸಾಯುವುದೇ ಮೇಲೆಂದು ಗುಡ್ಡದಿಂದ ಜಿಗಿಯೋಣವೆಂದು ಹತ್ತುತ್ತಿದ್ದೇವೆ. " ಕ್ಷಣದೊಳಗೇ ಸತ್ಯವ್ರತ ನಿರ್ಧರಿಸಿದ: " ಅವರು ಅನಾಥರು . ತನಗೂ ಗತಿಯಿಲ್ಲ . ಆ ಯಾವ ಗಂಡನೋ , ಅವನು ಬರುವ ತನಕ ನಾನು ಅವರ ಯೋಗಕ್ಷೇಮ ನೋಡಿಕೊಳ್ಳುತ್ತೇನೆ . "
   ************
ಶಿಷ್ಯನೊಬ್ಬ ಗಬಗಬನೆ ಬಂದು ವಿಶ್ವಮಿತ್ರರಲ್ಲಿ ಬಿನ್ನವಿಸಿದ: " ಮಹಾಸ್ವಾಮಿ , ಅಯೋಧ್ಯೆಯ ಮಹಾರಾಜರಂತೆ , ಆದರೆ ನೋಡಲು ಹಾಗೆ ಕಾಣುತ್ತಿಲ್ಲ . ಕುರಿ ಕೂದಲ ಕಂಬಳಿ ತೊಟ್ಟಿದ್ದಾರೆ . ಮುಖವೆಲ್ಲ ಕಪ್ಪಾಗಿದೆ . ಸುಕ್ಕು ಬಿದ್ದಿದೆ. ಕಬ್ಬಿಣದ ಕಿರೀಟ. ಕೈಯಲ್ಲಿ ಕತ್ತಿಯ ಬದಲು ಮೂಳೆ ಹಿಡಿದಿದ್ದಾರೆ. ಬರಿಗಾಲಲ್ಲಿ ನಿಂತಿದ್ದಾರೆ" 
ಒಳ ಬಂದ ಮಹಾರಾಜರನ್ನು ಕಂಡು ವಿಶ್ವಮಿತ್ರರಿಗೆ ಕರುಳು ಚುರ್ರೆಂದಿತು . ಹೇಗಿದ್ದ ತೇಜಸ್ವಿ ಹೇಗಾಗಿಬಿಟ್ಟ ! ಮೊನ್ನೆ - ಮೊನ್ನೆ ಪಟ್ಟಾಭಿಷೇಕಕ್ಕೆ ತಾವೂ ಹೋಗಿದ್ದರು. ಹೇಗೆ ದೃಢವಾಗಿ, ಆಕರ್ಷಕವಾಗಿ ಸಿಂಹದಂತೆ ಇದ್ದ ! ಈಗ ಬಗ್ಗಿ ಹೋಗಿದೆ ನಡು. ಕಣ್ಣು ಗುಳಿಯಲ್ಲಿ ಇಳಿದಿವೆ . ಕೈಗಳು ಒರಟಾಗಿ ಸುಕ್ಕಾಗಿವೆ. ಕಾಲುಗಳು ಥರ - ಥರ ನಡುಗುತ್ತಿವೆ. ಕಿರೀಟ ಕೆಳಗಿಟ್ಟು ನಮಸ್ಕರಿಸಿದರೆ ಆ ಕೂದಲೋ ... ಓಹ್ ! ಹೇಗೆ ಹೊಳೆಯುತ್ತಿತ್ತು , ಈಗದು ಥೂ ! ಒರಟು , ಕೆಂಚು, ಸಿಕ್ಕು, ಆಕಾಶ ನೋಡುತ್ತಿದೆ. ಆರು ತಿಂಗಳಲ್ಲೇ ಏನು ಬದಲಾವಣೆ!" ಕೂಡಿ. ಕುಶಲವೇ ಎಂದು ಕೇಳುವಂತೆಯೇ ಇಲ್ಲವಲ್ಲ, ಏಕೆ ಹೀಗೆ ಭೂತದಂತೆ ಕಾಣುತ್ತಿದ್ದೀರಿ ಮಹಾರಾಜರೆ?", ನೊಂದ ದನಿಯಲ್ಲೇ ನುಡಿದರು ಮಹರ್ಷಿಗಳು.  " ಹೌದು ಮಹಾಸ್ವಾಮಿ , ನನ್ನ ಅದೃಷ್ಟವೇ ಹೀಗೇನೋ ? ಮೊದಲು, ಹೆಂಡತಿಯಾಗುವವಳು ಕೈಕೊಟ್ಟಳು. ಆನಂತರ ಅಪ್ಪ ಮನೆಯಿಂದಲ್ಲ; ಊರಿನಿಂದಲೇ ಹೊರಗಟ್ಟಿದ. ಏನೋ ಒಂದೈದು ವರ್ಷ ನಿಮ್ಮೊಡನಿದ್ದೆ, ಅದೇ ನನ್ನ ಭಾಗ್ಯ. ನಿಮ್ಮ ಅನುಭವಗಳನ್ನ, ನಿಮ್ಮ ಕಥೆಗಳನ್ನ, ನಿಮ್ಮ ಸಾಹಸವನ್ನ, ನಿಮ್ಮ ತಪಸ್ಸನ್ನ ನಿಮ್ಮ ಬಾಯಿಂದಲೇ ಕೇಳಿ ಧನ್ಯನಾದೆ. ಆದರೆ ಈಗ ಯಥಾಪ್ರಕಾರ ನನ್ನ ಗುರುಗಳಿಂದಲೇ ಶಾಪ. ನೇರವಾಗಿ ಅವರಿಂದಲ್ಲದಿದ್ದರೂ ಅವರ ಮಕ್ಕಳು ಶಾಪ ಕೊಟ್ಟಿದ್ದಾರೆ." 
" ಏಕೆ ? ಏನಾಯಿತು ? ಅಂತಹ ಅಪರಾಧ ಏನು ಮಾಡಿದಿರಿ ನೀವು? " ಕೇಳಿದರು ವಿಶ್ವಮಿತ್ರರು ಕೊಂಚ ಆಸಕ್ತರಾಗಿ. ಒಂದರ್ಥದಲ್ಲಿ ರಾಜರ ಗುರುಗಳು ತನಗೂ ಗುರುಗಳಲ್ಲವೇ? ಅವರಿಂದ ತಾನೇ ಈಗ ತಾನು ಋಷಿಯಾಗಿರುವುದು ? ಇರಲಿ, ಅದೇ ಒಂದು ನವಿರು- ನವಿರು ರೋಮಾಂಚನ ಕಥನ. ವಿಶ್ವಮಿತ್ರರ ಮನಸ್ಸು ಅತ್ತೆತ್ತಲೋ ಹೋಗುತ್ತಿತ್ತು. ಆದರೆ ಸತ್ಯವ್ರತನ ವಾದ ಅವರನ್ನು ಇತ್ತ ತಿರುಗಿಸಿತು. " ನೀವೇ ಹೇಳಿ ಗುರುಗಳೆ, ನಾನು ಕೇಳಿದ್ದರಲ್ಲಿ ಏನು ತಪ್ಪಿದೆ ? ನಾನು ಕ್ಷತ್ರಿಯ. ಹುಟ್ಟಿನಿಂದಲೇ ಬಂದಿರುವ ಸಾಹಸ ಹೊಸ ಹೊಸದನ್ನು ಸಾಧಿಸಬೇಕೆನಿಸುತ್ತದೆ. ಹೀಗಾಗಿ ನನಗೆ ಸ್ವರ್ಗಕ್ಕೆ ಹೋಗಬೇಕೆಂದು ಆಸೆಯಾಯಿತು. ಅದನ್ನೇ ಗುರುಗಳಲ್ಲಿ ಹೇಳಿದೆ. ಅದಕ್ಕವರು" ಸತ್ತ ಮೇಲೆ ನೀನು ಖಂಡಿತ ಹೋಗುವೆ, ಅದಕ್ಕೆ ಬೇಕಾದ ಯಙ್ಞ ಮಾಡಿಸುತ್ತೇನೆ. " ಅಂತ ಅಂದರು. " ಈ ದೇಹದಿಂದಲೇ ಸ್ವರ್ಗಕ್ಕೆ ಹೋಗಬೇಕೆಂಬ ಆಸೆ " ಎಂದೆ. " ಅದು ಅಸಾಧ್ಯ ! ಸದೇಹ ಸ್ವರ್ಗ ಸಲ್ಲ. ನಿಯಮ ವಿರೋಧ. ಮಹಾಸ್ವಾರ್ಥ. ಶುದ್ಧಾಂಗ ಕಾಮ್ಯ. ಅಂತಹ ಯಙ್ಞ ನಾನು ಮಾಡಿಸೊಲ್ಲ. " ಎಂದು ಎದ್ದುಬಿಟ್ಟರು. ಅವರನ್ನು ನಿಲ್ಲಿಸುವ ಸಾಹಸ ನನಗಿರಲಿಲ್ಲ. ಅವರ ಮಕ್ಕಳಲ್ಲಿ ಕೇಳಿದೆ. ಅಷ್ಟಕ್ಕೇ ಅವರಿಗೆ ಸಿಟ್ಟು. ಅಪ್ಪ ಇಲ್ಲ ಎಂದ ಮೇಲೆ ಮಕ್ಕಳಲ್ಲಿ ಕೇಳಿದ್ದೇ ಅವರಿಗೆ ಸರಿಕಾಣಲಿಲ್ಲ. ಆಗ ದುಡುಕಿದೆನೇನೋ ಎಂದು ಈಗ ಅನ್ನಿಸುತ್ತಿದೆ. ಅಲ್ಲಿಗೇ ಬಿಟ್ಟು ನಿಮ್ಮಲ್ಲಿಗೆ ಬಂದಿದ್ದರೆ ಚೆನ್ನಿರುತ್ತಿತ್ತು, ಆದರೆ ಯಥಾಪ್ರಕಾರ ಕ್ಷಾತ್ರ, ತುಸು ಆತುರ, ಬಹುಶಃ ನೀವಿದ್ದೀರಲ್ಲ ಎಂಬ ಅಂತರ್ಭರವಸೆ ಬೇರೆ. ಬಾಯಿ ಜಾರಿಬಿಟ್ಟಿತು. "ಹಾಗಾದರೆ ವಿಶ್ವಮಿತ್ರ ಮಹರ್ಷಿಗಳಲ್ಲಿ ಪ್ರಾರ್ಥಿಸುವೆ. " ಎಂಬ ನನ್ನ ಮಾತು ಮುಗಿಯುವ ಮುನ್ನವೇ ಶಕ್ತಿ ಮಹರ್ಷಿಗಳಿಗೆ ಅಸಾಧ್ಯ ಸಿಟ್ಟು ಬಂದಿತು. " ನನ್ನಪ್ಪನ ಶಿಷ್ಯನಾಗಿ ಕುಲಾಚಾರ್ಯರನ್ನು ಬಿಟ್ಟು ಅನ್ಯ ಗುರುವಿನ ಆಶ್ರಯಕ್ಕೆ ಹೋಗುವ ನೀನು ಚಂಡಾಲನಾಗು. ಶಾಪ ಅವರ ಬಾಯಿಂದ ಉದುರಿದ ಮರುಕ್ಷಣವೇ ನಾನು ಹೀಗಾಗಿಬಿಟ್ಟೆ."(... ಮುಗಿದಿಲ್ಲ )

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

CM ಬದಲಾವಣೆ ನಾಲ್ಕರಿಂದ ಐದು ಜನರ ನಡುವೆ ನಡೆದ "ರಹಸ್ಯ ಒಪ್ಪಂದ": ಡಿಕೆಶಿ​ ಸ್ಫೋಟಕ ಹೇಳಿಕೆ

ವಿಶ್ವಕಪ್ ವಿಜೇತ ಅಂಧ ಕರ್ನಾಟಕದ ಆಟಗಾರ್ತಿಯರಿಗೆ ತಲಾ 10 ಲಕ್ಷ ನಗದು, ಸರ್ಕಾರಿ ಉದ್ಯೋಗ: ಸಿಎಂ ಸಿದ್ದರಾಮಯ್ಯ ಘೋಷಣೆ

ಸ್ಮೃತಿ ಮಂಧಾನ ಮದುವೆ ಮುಂದೂಡಿಕೆಗೆ ಅಸಲಿ ಕಾರಣ? ಮತ್ತೊಂದು ಹೆಣ್ಣಿನೊಂದಿಗೆ ಮೋಹ, ನಂಬಿಕೆ ದ್ರೋಹ; ಬಯಲಾಯ್ತು ಪಲಾಶ್'ನ ಅಸಲಿ ರಂಗಿನಾಟ!

ಬರವಣಿಗೆಯಲ್ಲಿ ಖುಷಿ ಕಂಡ ಪೊಲೀಸ್ ಅಧಿಕಾರಿ: 'ಬಸವಣ್ಣನ ವಚನ' ಗಳನ್ನು ಇಂಗ್ಲೀಷ್ ಗೆ ಅನುವಾದ ಮಾಡ್ತಿರೋ DYSP ಬಸವರಾಜ್ ಯಲಿಗಾರ್!

ರಾಜ್ಯದಲ್ಲಿ ಸಿಎಂ ಗದ್ದುಗೆ ಗುದ್ದಾಟ: ಎಲ್ಲ ಗೊಂದಲಗಳಿಗೆ ಹೈಕಮಾಂಡ್ ತೆರೆ ಎಳೆಯಬೇಕು- ಸಿಎಂ ಸಿದ್ದರಾಮಯ್ಯ

SCROLL FOR NEXT