ಮೂರಡಿಯೂ ಇಲ್ಲದ ಕುಬ್ಜ. ಅಡಿಯೋ? ಅರ್ಧ ಅಡಿಯೂ ಇಲ್ಲ. ಹಿಡಿದ ಪತ್ರ ಛತ್ರ ಪೂರ್ಣ ಬಿಡಿಸಿಟ್ಟರೆ ಕುಳ್ಳನೇ ಕಾಣುವುದಿಲ್ಲ. ಸಾವಿರಾರು ಮಂದಿ ಸುತ್ತಿದ್ದ ಯಾಗಮಂಟಪದೊಳಕ್ಕೆ ಹೇಗೆ ನುಸುಳಿ ಬಂದ? ಅವನನ್ನೂ ಅವನ ಕಾಂತಿಯನ್ನೂ ಕಂಡೇ ಶುಕ್ರಾಚಾರ್ಯರಿಗೆ ಏನೋ ಶಂಕೆ. ಆದರೆ ಆರ್ಕಷಿತನಾಗಿದ್ದಾನೆ ರಾಜ ಬಲಿ. ಆತನದೊಂದು ನಿಯಮ: ತಾನು ಯಾಗಕ್ಕೆ ಕುಳಿತಿದ್ದಾಗ ಯಾರು ಏನೇ ಕೇಳಿದರೂ "ಇಲ್ಲ" ಎನ್ನದೇ ಕೊಡುತ್ತಿದ್ದ. ಈಗೀ ಕುಳ್ಳ ಕೇಳಲು ಬಂದನೋ? ಕಸಿಯಲು ಬಂದನೋ? ಕೊಲ್ಲಲು ಬಂದನೋ? ಕರುಣಿಸ ಬಂದನೋ?*************
ಕೆಲ ವರ್ಷಗಳ ಹಿಂದೆ ಇಂದ್ರ ಕೈ ಹೊಸೆದು ನಿಂತಿದ್ದ ತಮ್ಮನ ಮುಂದೆ; ಉಪೇಂದ್ರನ ಮುಂದೆ; ವಿಷ್ಣುವಿನ ಮುಂದೆ. " ಏನಣ್ಣ? ಏಕೆ? ಏನಾಯಿತು? " ಸಾಮಾನ್ಯವಾಗಿ ತಮ್ಮ ಅಣ್ಣನನ್ನು ಆಶ್ರಯಿಸುವುದು ಸಹಜ, ಅದು ಮಾನ್ಯ. ಇಲ್ಲಿ ಈಗ ಹಾಗಲ್ಲ. ಕಶ್ಯಪ ಅದಿತಿಯರ ಹನ್ನೆರಡು ಮಕ್ಕಳಲ್ಲಿ ಏಳನೆಯವ ಇಂದ್ರ . ಹನ್ನೆರಡನೆಯಾತ ವಿಷ್ಣು. ಸಾಧಿಸಬೇಕಾದರೆ ಸರ್ವರ ಕಾಲೂ ಹಿಡಿಯಬೇಕು. ಎಂದಮೇಲೆ ತಮ್ಮನಾದರೇನು? ಬಯಸಿದ್ದು ಸಿಗಬೇಕು. ಅಷ್ಟೇ.
ತಾನು ಬಲಿಯಿಂದ ಸೋತದ್ದು, ಇದೀಗ ತನ್ನ ಸಿಂಹಾಸನದ ಮೇಲೆ ಮತ್ತಾರೋ ಕೂತಿರುವುದು, ತಾನೀಗ ತಲೆ ಮರೆಸಿಕೊಂಡಿರುವುದು, ತನ್ನ ವೈರಿ ಮೆರೆಯುತ್ತಿರುವುದು.... ಎಲ್ಲ ವಿವರ ವಿವರವಾಗಿ ಕರುಳು ಕಿತ್ತು ಬರುವಂತೆ ವರ್ಣಿಸಿದ ಇಂದ್ರ. " ಇಂದ್ರ, ನಿನಗೆ ಎಷ್ಟು ಬಾರಿ ಹೇಳಿದ್ದೇನೆ, ಈ ಪದವಿಗೆ ಬರುವ ಮುನ್ನ ಎಷ್ಟು ಯಙ್ಞ ಮಾಡಿದ್ದೆ? ಎಷ್ಟು ತಪಸ್ಸು ಮಾಡಿದ್ದೆ? ಈಗ ಸಿಂಹಾಸನದಲ್ಲಿ ಕುಳಿತ ಮೇಲೆ ಕೇವಲ ಸುರಗಣಿಕೆಯರ ನರ್ತನ, ಅಮೃತ ಪಾನ, ಯಾರಾದರೂ ತಪಸ್ಸಿಗೆ ಕುಳಿತರೆ ಅವರ ತಪೋ ಭಂಗ.... ಇತ್ತೀಚಿಗೆ ಎಂದಾದರೂ ತಪಸ್ಸು ಮಾಡಿರುವೆಯಾ? ಭೋಗ ಬಿಟ್ಟು ಯೋಗದ ಕಡೆಗೆ ಗಮನ ಕೊಟ್ಟಿರುವೆಯಾ?... ಅಗೋ ! ಕೇಳಿದ್ದೇ ತಡ, ಮುಖ ಊದಿಸಿಕೊಂಡೆ. " ತಂದೆ ಬಂದರೆಂದು ವಿಷ್ಣು ಎದ್ದ. " ವಿಷ್ಣು, ನಾನು ತಪಸ್ಸಿಗೆ ಕೂಡುತ್ತಿರುವೆ. ನಿನ್ನ ತಾಯಿ ಮಗನ ಊರು ಹೋಗಿದ್ದಕ್ಕೆ ನೊಂದಿದ್ದಾಳೆ. ನೀನು ಶಕ್ತ ಇದ್ದೀಯೆ, ಸದಾ ತಪಸ್ವಿಯಾಗಿರುವೆ, ಹಾಲಿನಂತಹ ನೀರಿನಲ್ಲಿ ಸದಾ ಯೋಗ ನಿದ್ರೆಯಲ್ಲಿರುವುದರಿಂದಲೇ ನೀನು ನಾರಾಯಣನಾಗಿರುವೆ. ನಿನ್ನೊಂದಂಶವನ್ನು ಕಳಿಸು. ಮತ್ತೆ ಹುಟ್ಟಿ ಬಾ. ಬಂದು ನಿನ್ನಣ್ಣನ ರಾಜ್ಯ ಕೊಡಿಸು. ನಾನು ಅವನಿಗೆ ಬುದ್ಧಿ ಹೇಳುತ್ತೇನೆ. " ಅಪ್ಪನಿಗೆ ಎದುರಾಡದ ವಿಷ್ಣು ಅಪ್ಪ ಅತ್ತ ಹೋದ ಮೇಲೆ ಮತ್ತೆ ಝಂಕಿಸಿದ. " ಬಲಿಯಲ್ಲಿ ಕ್ಷಾತ್ರ ಇದೆ. ನಿನ್ನಲ್ಲೂ ಇದೆ. ಅವನು ಯುದ್ಧಕ್ಕಾಗಿ ಯಾಗ ಮಾಡಿದ, ಗೆದ್ದ. ನೀನು ಸುರೆ ಕುಡಿಯುತ್ತ ಸೋತೆ. ಬಲಿ ಈಗಲೂ ಯಾಙ್ಞಿಕನೇ. ಅವನ ರಾಜ್ಯಭಾರದಲ್ಲಿ ಪ್ರಜೆಗಳೆಲ್ಲ ಸಂತಸದಿಂದಿದ್ದಾರೆ. ಅವನಲ್ಲಿ ಯಾವುದೇ ಅನ್ಯಾಯವೂ ನನಗೆ ಕಂಡಿಲ್ಲ. ಹೇಗೆಂದು ಅವನನ್ನು ಯುದ್ಧದಲ್ಲಿ ಎದುರಿಸಲಿ? ಈಗ ನೋಡಿದರೆ ಅಪ್ಪ ಬೇರೆ ನಿನಗೆ ಮತ್ತೆ ಸ್ವರ್ಗ ಕೊಡಿಸಲು ಹೇಳಿದ್ದಾರೆ.... " ಗೊಣಗಿಕೊಂಡೇ ಎದ್ದ ವಿಷ್ಣು.
ಇದೀಗ ವಿಷ್ಣು ವಾಮನನಾಗಿದ್ದಾನೆ. ತಾನು ಯುದ್ಧ ಮಾಡಿದರೆ ಭಕ್ತರೇನೆಂದಾರು? ಬಲಿಯಲ್ಲಿ ಏನು ತಪ್ಪಿದೆ ಎಂದು ಅವನನ್ನು ಸಾಯಿಸಬೇಕು? ಅದು ತಲೆ ತಗ್ಗಿಸುವ ವಿಚಾರ. ಹೌದು, ತಲೆ ತಗ್ಗಿಸಿಯೇ ಕೇಳೋಣ. ಬೇಡೋಣ. ದಾನ ಕೇಳೋಣ. ಛೆ ಛೆ ! ಎಂತಹ ಸ್ಥಿತಿ ತಂದಿಟ್ಟ ಇಂದ್ರ ! ದಾನವರಲ್ಲಿ ತಪ್ಪಿದ್ದಾಗ ಅವರನ್ನು ಮರ್ದಿಸುವುದು ನನಗೆ ಪ್ರಶ್ನೆಯಾಗಿರಲಿಲ್ಲ. ಈಗ ಎಂತಹ ಸಂದಿಗ್ಧ? ಹೇಗೆ ಕೇಳಲಿ? ಮುಖ ತೋರಿಸಲೇ ನಾಚಿಕೆ. ಅದಕ್ಕೇ ಕೊಡೆ ಅಡ್ಡವಿಟ್ಟೇ ಬಂದಿದ್ದಾನೆ ಬಲಿಯ ಯಾಗಶಾಲೆಗೆ.
ಇವನೆಂತಹ ವಿಚಿತ್ರ ಯಾಚಕ ?! ಹಣ, ಹಸು, ಚಿನ್ನ.. ಏನೂ ಬೇಡವಂತೆ. ಕೇವಲ ಮೂರು ಹೆಜ್ಜೆ.. ಅಷ್ಟೇ ! ಅಷ್ಟೇ ಜಾಗ ಸಾಕಂತೆ. ಯೋಚಿಸುತ್ತಿದ್ದ ಬಲಿಗೆ ಅಡ್ಡ ಮಾತಾಡಿದರು ಶುಕ್ರಾಚಾರ್ಯರು. " ಬಲಿ, ನನಗೆ ಈ ವಾಮನನ ಮೇಲೆ ತುಂಬಾ ಗುಮಾನಿ. ಕೇಳಿದ್ದೇ ಮೂರು ಹೆಜ್ಜೆ. ಏನು ಮಾಡುತ್ತಾನೋ. ಏಕೋ ಇವನು ಬಹುಶಃ ವಿಷ್ಣು ಇರಬೇಕು ಎನ್ನುವ ಸಂದೇಹ ನನಗೆ. ಆತ ಎಷ್ಟೇ ಆಗಲಿ ಮಾಯಾವಿ. ನಿಜರೂಪ ಮರೆಮಾಚಿ ಬಂದಿದ್ದಾನೆಂದು ಕಾಣುತ್ತದೆ. ಇನ್ನೇನಾದರೂ ಕೊಡು, ಅವನು ಕೇಳಿದ ಮೂರು ಅಡಿ.... ಮೂರು ಅಡಿಯೂ ಅಲ್ಲ, ಒಂದೂ ವರೆ ಅಡಿ ಭೂಮಿಯನ್ನೂ ಕೊಡಬೇಡ. "
" ಗುರುಗಳೇ" ಬಲಿ ಮಂದಹಾಸದಿಂದ ನುಡಿದ, " ಎಲ್ಲರೂ ಬೇಡುವುದು ಈ ನಾರಾಯಣನನ್ನು. ಈಗ ಅವನೇ ನನ್ನಲ್ಲಿ ಬೇಡಿ ಬಂದಿದ್ದಾನೆ. ಎಂದರೆ ಅವನಿಗಿನ್ನ ನಾನೇ ದೊಡ್ಡವನಾದೆ. ಆದುದರಿಂದ ಇವನಿಗೆ ಕೊಟ್ಟ ಮಾತನ್ನುಳಿಸುವೆ. " " ಹೌದು , ಹೌದು, ನೀನು ನಿಜಕ್ಕೂ ದೊಡ್ಡವನಾಗಿಬಿಟ್ಟೆ. " ವಾಮನ ಮನದಲ್ಲಿಯೇ ಅಂದುಕೊಂಡ. " ಆದರೇ ನಿಜಕ್ಕೂ ನೀನು ದೊಡ್ಡವನೋ? ಕೊಟ್ಟಮೇಲೆ ಕೊರಗುವುದಿಲ್ಲವೋ? " ಯೋಚಿಸುತ್ತಿದ್ದ ವಾಮನನ ಕೈಗೆ ಬಲಿ ದಾನಜಲ ಎರೆದ. ವಿಂಧ್ಯಾವಳಿ ಕಲಶದ ನೀರನ್ನು ಗಂಡನ ಕೈಗೆ ಹರಿಸಿ ತನ್ನ ಅನುಮತಿ ಇತ್ತಳು ( ವಿವಾಹವಾದ ಬಳಿಕ ಗಂಡ ಸ್ವಂತವಾಗಿ ದಾನ ಮಾಡುವಂತಿಲ್ಲ. ಅದಕ್ಕೆ ಹೆಂಡತಿ ಅನುಮತಿ ಬೇಕು? ಹೇಗಿದೆ ವೈದಿಕ ವಿವಾಹ ಬಂಧನ; ಅದರ ನಿಯಮ? - ಲೇ) . ವಾಮನನ ಕೈಗೆ ಬಿದ್ದ ನೀರು ಅವನ ವಾಮ ಪಾದದ ಮೇಲೆ ಬಿದ್ದಿತು. ಅರೆಕ್ಷಣದಲ್ಲಿ ಅವನ ಪಾದ ಅಗಲವಾಯಿತೋ? ಅಷ್ಟೇ ಅಲ್ಲ , ಉದ್ದವೂ ಆಯಿತೋ? ಅಷ್ಟೇ ಅಲ್ಲ, ಅದು ಮೇಲಕ್ಕೆ ಬೆಳೆಯತೊಡಗಿತೋ? ಬಲಿಗೆ ತಲೆ ಗಿರ್ರೆಂದಿತು. ಅವನ ಬೆಳವಣಿಗೆಯನ್ನು ನೋಡುತ್ತ, ನೋಡುತ್ತ, ತಲೆ ಎತ್ತುತ್ತ ಕುತ್ತಿಗೆ ನೋಯುವಷ್ಟು ನೋಡಿದ. ಇನ್ನು, ಇನ್ನೂ! .. .. ..
ಬೆಳೆಯಿತು ಬೆಳೆಯಿತು ಪಾದವು ಬೆಳೆಯಿತು.
ಅಕ್ಕ ಪಕ್ಕದಲಿ ಹಿಂದಕೆ ಮುಂದಕೆ
ಮರ - ಗಿಡಗಳನದು ಮೀರಿಯೆ ಬೆಳೆಯಿತು
ಉಗುರಗಳಡಿಯಲಿ ಭೂರಿ ಬೆಟ್ಟಗಳು
ಪಾದದ ಗೆರೆಗಳಲುಳಿದುವು ಪುರಗಳು
ಬೆರಳ ಸಂದಿಯಲಿ ಭಾರತ ಉಳಿಯಿತು
ಹಿಮ್ಮಡಿ ಹಿಮವಂತಗೆ ಸಮವಾಯಿತು
ಮರಳು ಕಾಡುಗಳ ದೇಶ ರಾಷ್ಟ್ರಗಳ
ಸಪ್ತ ಶರಧಿಗಳ ಪಾದವು ಅಳೆಯಿತು
ಶ್ರೀ ಶ್ರೀ ಪಾದವು ಶ್ರೀ ಹರಿ ಪಾದವು
ಪರಮ ಪಾದವದು ಭುವಿಯನು ಬಳಸಿತು
ಭೂದೇವಿಗೆ ಶ್ರೀ ರಮಣನ ಅಪ್ಪುಗೆ
ದೈತ್ಯ ದಾನವರು ಕಂಡು ನಡುಗಿದರು
ಸುರ ಖೇಚರ ಕಿಂ ಪುರುಷರು ಬಂದರು
ಯಕ್ಷ - ಗಂಧರ್ವ ಕಿನ್ನರ ನಾಗರು
ಸಾಗರ ಜಲದಲಿ ತೊಳೆದನು ವರುಣನು
ಸಿರಿ ಹರಿ ಶುಭಕರ ಅಚಿಂತ್ಯ ಪಾದಕೆ
ಉಘೇ ! ಉಘೇ ! ಋಷಿ ಮುನಿಗಳು ಪೂಜಿಸೆ
ಓಹ್ ! ಸುಸ್ತಾಗಿಬಿಟ್ಟ ಬಲಿ. ಎಲ್ಲೆಲ್ಲಿ ನೋಡಿದರೂ ವಾಮನನ ಪಾದವೇ. ಗುಡುಗಿನ ಸದ್ದು ಮೇಲಿನಿಂದ; " ಬಲಿ ಚಕ್ರವರ್ತಿ! ನಿನ್ನ ಇಡೀ ಭೂಮಿಯನ್ನು ನಾನು ನನ್ನ ವಾಮ ಪಾದದಿಂದ ಆವರಿಸಿಬಿಟ್ಟೆ. ಎರಡನೆಯ ಪಾದವನ್ನು ಯಾವುದರ ಮೇಲಿಡಲಿ ? ಹೇಗೆ ದಾನ ಮಾಡುವೆ? " ಕಿರುನಗೆ ಹಾದು ಹೋಯಿತು ಬಲಿಯ ಮುಖದ ಮೇಲೆ. " ಗುರುಗಳು ಹೇಳಿದರೂ ನಾನು ಕೇಳಲಿಲ್ಲ. ಚಿಂತೆಯಿಲ್ಲ. ನಾರಾಯಣ, ನಿನಗೇ ದಾನ ಕೊಟ್ಟಿದ್ದೇನೆ, ಈಗ ನಿನಗೆ ಹೊಸದಾದ ಹೆಸರನ್ನೂ ಕೊಡುತ್ತೇನೆ. ಇಂದಿನಿಂದ ನೀನು ಏಕವಿಕ್ರಮನೆಂದು ಪ್ರಸಿದ್ಧನಾಗು. "
-ಡಾ.ಪಾವಗಡ ಪ್ರಕಾಶ್ ರಾವ್
pavagadaprakashrao@gmail.com
Follow KannadaPrabha channel on WhatsApp
Download the KannadaPrabha News app to follow the latest news updates
Subscribe and Receive exclusive content and updates on your favorite topics
Subscribe to KannadaPrabha YouTube Channel and watch Videos