ಬಲಿಚಕ್ರವರ್ತಿ-ವಾಮನ(ಸಾಂಕೇತಿಕ ಚಿತ್ರ) 
ಅಂಕಣಗಳು

ಇಬ್ಬರಲ್ಲಿ ದೊಡ್ಡವರಾರು , ಬಲಿಯೋ-ವಾಮನನೋ?

ತಲೆಯ ಮೇಲಿದ್ದ ಪಾದವೀಗ ಪಲ್ಲಕ್ಕಿಯಾಗಿದೆ. ತನ್ನ ಪತ್ನಿಯ ಕೈಹಿಡಿದು ಪಲ್ಲಕ್ಕಿ ಹತ್ತಿಸಿಕೊಂಡ. ಯಾರು ಯಾರು ತನ್ನೊಡನೆ ಸುತಲಕ್ಕೆ ಬರುವರೋ ಅವರೆಲ್ಲರೂ ಬರಬಹುದು ಎಂದು ಘೋಷಿಸಿದ.

ತಲೆಯ ಮೇಲಿದ್ದ ಪಾದವೀಗ ಪಲ್ಲಕ್ಕಿಯಾಗಿದೆ. ತನ್ನ ಪತ್ನಿಯ ಕೈಹಿಡಿದು ಪಲ್ಲಕ್ಕಿ ಹತ್ತಿಸಿಕೊಂಡ. ಯಾರು ಯಾರು ತನ್ನೊಡನೆ ಸುತಲಕ್ಕೆ ಬರುವರೋ ಅವರೆಲ್ಲರೂ ಬರಬಹುದು ಎಂದು ಘೋಷಿಸಿದ.
***************
ಝಗಝಗಿಸುತ್ತಿರುವ, ನವರತ್ನಗಳನ್ನೇ ಹುದುಗಿಸಿರುವ ಅರಮನೆ. ಅದರ ಎದುರು ಇಳಿಯುತ್ತಿದ್ದಂತೆಯೇ ಸ್ವಾಗತಿಸಲು ಸಡಗರದಿಂದ ಬಂದರು ದೇವತೆಗಳು. ತ್ರಿವಿಕ್ರಮನೇ ಮುಂದಿದ್ದಾನೆ. ತನ್ನ ಕೈ ಹಿಡಿದು ಕೆಳಗಿಳಿಸಿಕೊಂಡಿದ್ದೂ ವಾಮನನೇ. ಹೆಬ್ಬಾಗಿಲ ಬಳಿ ನಿಂತು ಹೇಳಿದ; " ಬಲಿಚಕ್ರವರ್ತಿ, ನಿನ್ನ ದಾನಕ್ಕೆ ಸಮವಾಗಿ ನಾನೆಷ್ಟೇ ಕೊಟ್ಟರೂ ನನಗೆ ತೃಪ್ತಿ ಇಲ್ಲ. ನಾನು ನನ್ನೊಂದಂಶದಿಂದ ಇನ್ನು ಮುಂದೆ ನಿನ್ನ ದ್ವಾರಪಾಲಕನಾಗಿಬಿಡುವೆ. (ಆತ್ಮೀಯರೇ, " ದಾನ ಕೊಟ್ಟಾಗ ಯಾವ ಗಾತ್ರವಿತ್ತೋ, ಆ ಪಾದದ ಅಳತೆಗೆ ಮಾತ್ರ ದಾನ ಕೊಡುವೆ" ಎಂದು ಮೊದಲೆರಡು ದಾನಗಳಲ್ಲಿ ಕಾನೂನಿನ ಮಾತನಾಡದೇ, ಸಾವು ನಿಶ್ಚಯವೆಂದು ಗೊತ್ತಿದ್ದೂ, ಗೊತ್ತಿದ್ದೂ ತಲೆಯನ್ನೇ ಕೊಟ್ಟ ಬಲಿ ದೊಡ್ಡವನೋ, ಎಲ್ಲವನ್ನೂ ಹಿಂತಿರುಗಿಸಿ , ಭವಿಷ್ಯದ ಇಂದ್ರ ಪದವಿಯನ್ನೂ ಕೊಟ್ಟು , ಬಲಿಯ ಅಪೇಕ್ಷೆಯಂತೆ ಪ್ರತಿನಿತ್ಯವೂ ಭೂಲೋಕಕ್ಕೆ ಹೋಗಿ ಬರಲು ಅವಕಾಶವನ್ನು ಕಲ್ಪಿಸಿ, ಇದೀಗ ಬಲಿಯ ಬಾಗಿಲ ಭಂಟನಾಗುವೆನೆಂದ ಹರಿ ದೊಡ್ಡವನೋ, ಓದುಗರೇ, ನೀವೇ ತೀರ್ಮಾನಿಸಿ-ಲೇ)
****************
ಕಥೆ ಮುಗಿದಾಗ ಎಲ್ಲರಿಗೂ ರೋಮಾಂಚನವಾಗಿತ್ತು. ಶ್ರೀರಾಮರ ಕಣ್ಣಲ್ಲಿ ಕಣ್ಣಿಟ್ಟು ಕೇಳಿದರು ಋಷಿಗಳು, " ನಿನಗೇಕೆ ಇಲ್ಲಿ ಬಂದಾಗಿನಿಂದ ಉಲ್ಲಾಸವಾಗುತ್ತಿದೆ ಎಂಬುದಕ್ಕೆ ಕಾರಣ ಈಗಲಾದರೂ ಗೊತ್ತಾಯಿತೋ? " ಶ್ರೀರಾಮರು ಏನೋ ಅರಿಯುತ್ತಿರುವಂತೆ ಗುರುಗಳ ಮುಖ ನೋಡಿದರು. " ಇದೇ  ವಾಮನನ ಆಶ್ರಮ. ಈ ಪೂರ್ವಾಶ್ರಮದಲ್ಲಿಯೇ ವಾಮನನ ಸಾಧನೆ ಸಿದ್ಧಿಸಿದ್ದು. ಅದಕ್ಕೇ ಇದಕ್ಕೆ ಸಿದ್ಧಾಶ್ರಮ ಎಂದು ಹೆಸರು. 
( ಏಷ ಪೂರ್ವಾಶ್ರಮೋ ರಾಮ ವಾಮನಸ್ಯ ಮಹಾತ್ಮನಃ
ಸಿದ್ಧಾಶ್ರಮ ಇತಿ ಖ್ಯಾತಃ ಸಿದ್ಧೋಹ್ಯತ್ರ ಮಹಾತಪಾಃ )
ವಾಮನನ ಮೇಲಿರುವ ಪೂಜ್ಯತೆಯಿಂದ ನಾನಿಲ್ಲಿಯೇ ವಾಸಿಸುತ್ತಿರುವೆ. ಈ ಆಶ್ರಮ ಈಗ ನನ್ನದೇ... ಅಲ್ಲಲ್ಲ, ನನ್ನದೆಂತೋ ಇದು ನಿನ್ನದೇ 
( ತದಾಶ್ರಮ ಪದಂ ತಾತಾ ತವಾಪಿ ಏತತ್ ಯಥಾ ಮಮ )
"ತವಾಪಿ" ಎಂದು ಒತ್ತಿ ಹೇಳಿದಾಗ ಶ್ರೀರಾಮರು ಕ್ಷಣಕಾಲ ತ್ರಿವಿಕ್ರಮರೇ ಆಗಿಬಿಟ್ಟರು. 
***************
ಭೂರಿ ಅಗ್ನಿಕುಂಡ. 48 ಮಂದಿ ಋಷಿಗಳು ಕುಳಿತಿದ್ದಾರೆ. ಎಲ್ಲರ ಮುಂದೂ ಒಂದೊಂದು ಬುಟ್ಟಿ. ಅವುಗಳಲ್ಲಿ ಹೋಮ ದ್ರವ್ಯಗಳು. ಕಂಚು ಕಂಠದಿಂದ ಏಕ ಶ್ರುತಿಯಲ್ಲಿ ಋಷಿ ಸಮೂಹದಿಂದ ಮಂತ್ರಘೋಷ. " ಸ್ವಾಹಾ " ಎಂದಾಗ ಎಲ್ಲ ಬುಟ್ಟಿಗಳಿಂದಲೂ ಪತ್ರೆ, ಹಣ್ಣು, ಅರಳು, 28 ಸಮಿತ್ತುಗಳು ಏಕಕಾಲದಲ್ಲಿ ಎದ್ದು ಅಗ್ನಿಗೆ ಆಹುತಿಯಾಗುತ್ತಿತ್ತು. ವಿಶ್ವಮಿತ್ರರು ದ್ರೋಣದ ತುಂಬ ಹಸುವಿನ ತುಪ್ಪವನ್ನು ಯಙ್ಞೇಶ್ವರನಿಗೆ ಅರ್ಪಿಸುತ್ತಿದ್ದರು... ಇವೆಲ್ಲ ನಯನ ಮನೋಹರವಾಗಿದ್ದುವು. ಈಡೀ ವಾತಾವರಣದಲ್ಲಿ ಸುಗಂಧ ಬೆರೆತು ಆಹ್ಲಾದ ಉಂಟು ಮಾಡಿತ್ತು. ಏನೋ ತೊಡಕು ಬರಬಹುದೆಂದು ನಿರೀಕ್ಷಿಸಿ ಬಿಲ್ಲು-ಬಾಣಗಳನ್ನು ಹಿಡಿದು ಸಜ್ಜಾಗಿದ್ದ ಶ್ರೀರಾಮ ಲಕ್ಷ್ಮಣರಿಗೆ ಕೊಂಚ ನಿರಾಶೆ. ಏನೂ ಆಗಲೇ ಇಲ್ಲವಲ್ಲ ಎಂದು. ಶಾಂತಿ ಸೂಕ್ತದೊಂದಿಗೆ ಅಂದಿನ ಯಙ್ಞಕಾರ್ಯ ಮುಗಿದಿತ್ತು. 
ಮಾರನೆಯ ದಿನವೂ ಹಾಗೇ ನಿರಾತಂಕವಾಗಿತ್ತು. ಆದರೆ ಮಧ್ಯಾಹ್ನದ ಹೊತ್ತಿಗೆ ಇದ್ದಕ್ಕಿದ್ದಂತೆಯೇ ಸುಂಟರಗಾಳಿ. ತಿರುಗಿ - ತಿರುಗಿ ಸಣ್ಣ - ಪುಟ್ಟ ಗಿಡಗಳನ್ನೆಲ್ಲ ತನ್ನಲ್ಲಿ ಅಡಗಿಸಿಕೊಂಡು ಸುತ್ತುತ್ತ, ಆಶ್ರಮದೆಡೆಗೆ ನುಗ್ಗುತ್ತಿದೆ. ಸಹಜವೆಂದು ಅನಿಸಲಿಲ್ಲ ರಾಮರಿಗೆ ಆ ಗಾಳಿ. ತಟಸ್ಥಾಸ್ತ್ರ ಪ್ರಯೋಗಿಸಿದರು. ಸುಂಟರಗಾಳಿಯಲ್ಲಿ ಸೀಳಿ ಹೋಯಿತು ಬಾಣ. ಗಾಳಿ ನಿಂತಿತು. ಬಿದ್ದದ್ದು ಒಂದು ದೈತ್ಯ ಗಾತ್ರದ ರಕ್ಕಸ ದೇಹ. ಎದೆಗೇ ಬಾಣ ನೆಟ್ಟಿತ್ತು. ಎಚ್ಚರವಹಿಸಿದರು ರಾಜಕುಮಾರರು .
ಮೂರನೇಯ ದಿನ ಬೆಳಗಾಗುವ ಹೊತ್ತಿಗೆ ಮಳೆಯೋ ಮಳೆ. ಕುಂಭದ್ರೋಣ. ಗಗನಕ್ಕೆ ತೂತುಗಳು ಬಿದ್ದವೇನೋ ಎಂಬುವಂತೆ ಆಲಿ ಕಲ್ಲುಗಳ ಮಳೆ. ಆಶ್ರಮವೆಲ್ಲ ತೊಪ್ಪೆ. ಯಙ್ಞಕುಂಡದ ತುಂಬೆಲ್ಲ ನೀರು. ಋಷಿಗಳು ನಡುಗುತ್ತಿದ್ದಾರೆ. ವಿಶ್ವಮಿತ್ರರು ಮಾತ್ರ ಅಚಲರಾಗಿದ್ದಾರೆ, ಬಾಯಲ್ಲಿ ಋಗ್ ಮಂತ್ರಗಳು ಹೊರಡುತ್ತಿವೆ, ಆದರೆ ಯಙ್ಞಕುಂಡದಲ್ಲಿ ಅಗ್ನಿಯೇ ಇಲ್ಲ! ಎಲ್ಲಿ ಎಂದು ಬಾಣ ಬಿಡುವುದು? ಹೇಗೆಂದು ನಿಲ್ಲಿಸುವುದು?  
ಬ್ರಹ್ಮರ್ಷಿಗಳ ಯಙ್ಞಭಂಗ ಮಾಡುವ ಧೈರ್ಯ ವರುಣನಿಗೆ ಖಂಡಿತ ಇಲ್ಲ. ಸಾಧಾರಣ ಸಂದರ್ಭವಾಗಿದ್ದಿದ್ದರೆ ವಿಶ್ವಮಿತ್ರರು ಒಮ್ಮೆ ಹೂಂಕರಿಸಿದ್ದರೆ ಸಾಕಿತ್ತು, ಮಳೆ ಕ್ಷಣಮಾತ್ರದಲ್ಲಿ ನಿಂತು ಮಾಯವಾಗುತ್ತಿತ್ತು. ಇದೀಗ ಋಷಿಗಳು ಮೌನವ್ರತದಲ್ಲಿದ್ದಾರೆ. ವಿಶ್ವಮಿತ್ರರ ಗುರುಗಳು ವಾಮದೇವರು, ಬ್ರಹ್ಮಸ್ಥಾನದಲ್ಲಿ ಕುಳಿತಿದ್ದವರು, ರಾಮರನ್ನು ದಿಟ್ಟಿಸಿ ನೋಡಿ ಭರಣಿಯೊಂದನ್ನು ಕೊಟ್ಟರು. ರಾಮರು ಕಣ್ಣಿಗೆ ಅಂಜನ ಹಚ್ಚಿಕೊಳ್ಳುತ್ತಿದ್ದಂತೆಯೇ ಯಾರಿಗೂ ಕಾಣದಿದ್ದ ಭೀಕರಾಕಾರನಾಗಿದ್ದ ಅಸುರನೊಬ್ಬ ಇಡೀ ಆಶ್ರಮ ಪ್ರಾಂತಕ್ಕಿನ್ನ ದೊಡ್ಡದಾದ ಗುಡಾಣದಿಂದ ನೀರು ಸುರಿಯುತ್ತಿದ್ದಾನೆ. ಅದರ ಕೆಳಗೆ ಭಾರಿ ಜರಡಿಯೊಂದಿದೆ . ಅವನಿಗೆ ಸಹಾಯಕರಾಗಿರುವ ಅನೇಕ ರಾಕ್ಷಸರು ದೊಡ್ಡ - ದೊಡ್ಡ ಬಿಂದಿಗೆಗಳಿಂದ ಗುಡಾಣಕ್ಕೆ ನೀರು ತುಂಬುತ್ತಿದ್ದಾರೆ. ಮತ್ತಿದು ಮಳೆಯೇ ಅಲ್ಲ, ನೀರಿನ ಸುರಿದಾಟ, ಸೋರಾಟ, ತೂರಾಟ. ರಾಮಬಾಣ ರಕ್ಕಸನ ಎದೆಯನ್ನು ತೂರಿ ಹಾದು ಬಂದಿತು. ರಕ್ತದ ಕಾರಂಜಿ ಎದೆಬೆನ್ನುಗಳಿಂದ ಬುಗ್ಗೆಯಾಗಿ ಚಿಮ್ಮಿತು. ಅರಚಿ ಬಿದ್ದನವ. ಲಕ್ಷ್ಮಣನ ಬಿಲ್ಲಿನಿಂದ ಹೊರಟ ಹತ್ತು ಬಾಣಗಳು ಉಳಿದವರನ್ನೆಲ್ಲ ಬಲಿ ತೆಗೆದುಕೊಂಡಿತು. 
ಶ್ರೀರಾಮರು ವಾಯುವ್ಯಾಸ್ತ್ರವನ್ನು ಪ್ರಯೋಗ ಮಾಡಿ ಒಣಗಿಸಿದರು. ಯಙ್ಞಕುಂಡ ಒಣಗುತ್ತಿದ್ದಂತೆಯೇ, ಅಲ್ಲಿಯವರೆಗೆ ಯಾರಿಗೂ ಕಾಣದೇ ಇದ್ದ, ವಿಶ್ವಮಿತ್ರರು ಅಂಗೈಯಲ್ಲಿ ಅಡಗಿಸಿಟ್ಟುಕೊಂಡಿದ್ದ ಯಙ್ಞಾಗ್ನಿಯನ್ನು ಕುಂಡಕ್ಕೆ ಚೆಲ್ಲಿದರು. ಕ್ಷಣಮಾತ್ರದಲ್ಲಿ ಯಙ್ಞಕುಂಡದ ತುಂಬ ಉರಿ ತುಂಬಿ ಎದ್ದಿತು. ವಟುಗಳು ಕುಣಿಯ ತೊಡಗಿದರು ಸಂತಸದಿಂದ. 
ನಾಲ್ಕನೆಯ ದಿನ ಯಾವುದೇ ಅಹಿತ ಘಟನೆ ನಡೆಯಲಿಲ್ಲ. ಐದನೆಯ ದಿನ ಕಾಡನ್ನೆಲ್ಲ ಸುಡುತ್ತ ಬರುತ್ತಿದೆ ಅಗ್ನಿ. ಇಷ್ಟು ಹೊತ್ತಿಗೆ ಶ್ರೀರಾಮರಿಗೆ ಅರ್ಥವಾಯಿತು; ಇದು ಕೃತಕಾಗ್ನಿ ಎಂದು. ವಾಯುವನ್ನೇರಿ ಆಶ್ರಮ ಬಿಟ್ಟು ಹೊರಬಂದು ನೋಡಿದರೆ ದೈತ್ಯನೊಬ್ಬ ಬಾಯಿ ತೆಗೆದು ನಿಂತಿದ್ದಾನೆ, ಅವನ ಬಾಯಿಂದ ಬೆಂಕಿಯ ಉಂಡೆಗಳು ಬರುತ್ತಿವೆ, ಬೀಳುತ್ತಿವೆ, ಮರಗಿಡಗಳನ್ನು ಸುಡುತ್ತಿವೆ. ಬೆಂಕಿ ಹೆಚ್ಚುತ್ತಿದೆ. ಒಂದು ಬಾಣ ರಕ್ಕಸನ ಬಾಯನ್ನು ಮುಚ್ಚಿತು. ಮತ್ತೊಂದು ಬಾಣದಿಂದ ನೀರು ಸುರಿದು ಬೆಂಕಿಯನ್ನೆಲ್ಲ ನಂದಿಸಿತು. ವಿಹ್ವಲನಾಗಿದ್ದ ರಾಕ್ಷಸ ಮಾತನಾಡಲಾಗದೆ, ಸದ್ದು ಮಾಡಲಾಗದೆ, ಉಳಿದರೆ ಇನ್ನೇನಾದೀತೋ ಎಂದು ಓಡಿ ಹೋದ ತನ್ನ ನಾಯಕನ ಬಳಿಗೆ . 
****************
ಮಾರನೆಯ ದಿನ, ಕೊನೆಯ ದಿನ. ಇಂದು ಯಙ್ಞ ಮುಗಿಯಲಿದೆ, ಶ್ರೀರಾಮರು ಊಹಿಸಿದರು, ಇಂದು ಏನೋ ತೀವ್ರ ಅನಾಹುತ ಆಗುತ್ತದೆಂದು. ಮುಂಜಾಗ್ರತಾ ಕ್ರಮವಾಗಿ ಇಡೀ ಆಶ್ರಮಕ್ಕೇ ಬಾಣಗಳ ಕೊಡೆ ಕಟ್ಟಿದರು, ಮೇಲಿನಿಂದ ಯಾವ ಅಡಚಣೆಯೂ ಆಗದಿರಲೆಂದು. ಆಶ್ರಮದ ಸುತ್ತಲೂ ಶಿಲಾಸ್ತ್ರವನ್ನು ಪ್ರಯೋಗಿಸಿ ಐವತ್ತು ಅಡಿ ಅಗಲದ ಕಲ್ಲಿನ ಕೋಟೆ ನಿರ್ಮಿಸಿದರು. ಮತ್ತು ಕೋಟೆಯ ಹೊರಗೆ ತಾವೇ ನಿಂತರು ಕಾವಲು ಕಾಯುತ್ತ. (ಮುಂದುವರೆಯುವುದು...)  
-ಡಾ.ಪಾವಗಡ ಪ್ರಕಾಶ್ ರಾವ್
pavagadaprakashrao@gmail.com

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಭಾರತದ ರಷ್ಯಾ ಸಂಬಂಧಗಳು ವ್ಯಾಪಾರ ಒಪ್ಪಂದಕ್ಕೆ ಅಡ್ಡಿಯಾಗಬಹುದು: ಯುರೋಪಿಯನ್ ಒಕ್ಕೂಟ ವಾರ್ನಿಂಗ್!

Bumrah ಓವರ್​ನಲ್ಲಿ 6 ಸಿಕ್ಸರ್ ಸಿಡಿಸುವ ಸವಾಲು: ಆದ್ರೆ Saim Ayub ಆಡಿದ 3 ಪಂದ್ಯದಲ್ಲೂ ಸುತ್ತಿದ್ದು ಶೂನ್ಯ, ಕಳಪೆ ದಾಖಲೆ ಬರೆದ Pak ಬ್ಯಾಟರ್, Video!

ಬರೇಲಿಯಲ್ಲಿ ದಿಶಾ ಪಠಾನಿ ಮನೆಯ ಹೊರಗೆ ಗುಂಡು ಹಾರಿಸಿದ್ದ ಇಬ್ಬರು ಶಂಕಿತರು ಎನ್‌ಕೌಂಟರ್‌ನಲ್ಲಿ ಸಾವು

ನವೆಂಬರ್ ಒಳಗೆ ಬೆಂಗಳೂರಿನ ಎಲ್ಲಾ ಗುಂಡಿಗಳನ್ನು ಮುಚ್ಚಿ: ಗುತ್ತಿಗೆದಾರರಿಗೆ DCM ಡಿಕೆಶಿ ಗಡುವು

BoyCott ನಿರ್ಧಾರದಿಂದ PCB ಯೂ-ಟರ್ನ್: ದುಬೈ ಕ್ರೀಡಾಂಗಣದತ್ತ Pak ಆಟಗಾರರು; 1 ಗಂಟೆ ತಡವಾಗಿ ಪಂದ್ಯ ಆರಂಭ!

SCROLL FOR NEXT