ತಾಟಕೆ ವಧೆ 
ಅಂಕಣಗಳು

ರಾಮರ ನ್ಯಾಯ ನಿರ್ಣಯ

"ಅಸಲು ಒಳ್ಳೆಯನಾಗುವುದು ಎಂದರೇನು? ಅಳೆದೂ, ಸುರಿದೂ ಹೇಳಿದರೆ ಬೇರೆಯವರಿಗೆ ತನ್ನಿಂದ ಕೆಡುಕಾಗದೇ ಬದುಕುವುದೇ ಒಳಿತೇ? ಹಾಗಾದರೆ ಇವಳನ್ನು ಸಾಯಿಸಿದೆನಲ್ಲ, ಅದು ಅವಳಿಗೆ ಕೆಡುಕಾದಂತಲ್ಲವೇ"?

ಪಕ್ಕದಲ್ಲಿ ಹಾದುಹೋಗುತ್ತಿದ್ದ ಶ್ರೀರಾಮರಿಗೆ ಆ ಅಕರಾಳ-ವಿಕರಾಳ ಗುಡ್ಡದಂತಹ ದೇಹ, ಅದಕ್ಕಂಟಿದ ಜಿಡ್ಡು - ಜಿಡ್ಡು ಕಂದು ಬಣ್ಣಕ್ಕೆ ತಿರುಗಿದ್ದ ರಕ್ತಲೇಪ, ಮರದ ಬೇರುಗಳು ಇಳಿದಂತೆ ಇಳಿದಿರುವ ತಲೆಗೂದಲು, ಆನೆಯ ಕಾಲಿನಂತಹ ಕೈಗಳು , ತನ್ನ ಕೈಗಿನ್ನ ತುಸು ದಪ್ಪನಾದ ಬೆರಳುಗಳು, ಮುಖವೋ ಅತ್ಯಂತ ಅಸಹ್ಯ. ಹುಟ್ಟಿನಿಂದಲೂ ತೊಳೆದೇ ಇಲ್ಲವೇನೋ ಎಂಬ ಕೊಳಕು, ಕೋರೆ ಹಲ್ಲುಗಳಿಗೆ ಸಿಕ್ಕಿರುವ ಮಾಂಸದ ತುಂಡುಗಳು, ಗುಹೆಯಂತಹ ಬಾಯಿ, ಈಗದು ಬಿಟ್ಟುಕೊಂಡಿರುವುದರಿಂದ ಸುರಂಗದಂತಹ ಚರಂಡಿ, ತೆರೆದೇ ಇರುವ ಒಂದೊಂದು ರಕ್ತ ಕಣ್ಣೂ ದೊಡ್ಡ ಬಾಂಡ್ಲಿಗಳಂತೆ... ಅಬ್ಬಬ್ಬ! 
ತಾವು ಕೇಳಿದ್ದರು ರಾಕ್ಷಸರ ಬಗ್ಗೆ, ದೈತ್ಯರ ಬಗ್ಗೆ. ಈಗ ಮೊದಲ ಬಾರಿಗೆ ನೋಡುತ್ತಿದ್ದಾರೆ. ಶ್ರೀರಾಮರಿಗ ಆಗ್ಗೆ ಇನ್ನೂ ಹದಿನಾರೂ ವರ್ಷ ತುಂಬಿಲ್ಲ. ಅದನ್ನೇ ದಶರಥ ಬಡಬಡಿಸಿದ್ದ. ಹದಿನಾರಕ್ಕೆ ಕೊಂಚ ಕಡಿಮೆ ನನ್ನ ತಾವರೆಗಣ್ಣಿನ ರಾಮನಿಗೆ. 
(ಊನ ಷೋಡಷ ವರ್ಷೋ ಮೇ ರಾಮೋ ರಾಜೀವ ಲೋಚನಃ)
(ಅವರಿಗೆ ಕಡಿಮೆ ವಯಸ್ಸಿದ್ದರೂ ಇಲ್ಲಿ ನಿಂತು ನೋಡುವ ನಮಗೆ ಅವರು ಅತಿ ಹಿರಿಯರು ; ಎಲ್ಲ ದೃಷ್ಟಿಗಳಿಂದ . ಅದು ಕಾರಣ ಅವರಿಗೆ ಆಗ ವಯಸ್ಸು ಚಿಕ್ಕದೆಂದು ಏಕವಚನದಲ್ಲಿ ಕರೆಯಲು ನನಗೆ ಬಹು ಕಷ್ಟ - ಲೇ ) 
'ಈಕೆ ಯಕ್ಷಳೆಂದು ಗುರುಗಳೇ ಹೇಳಿದ್ದರು. ಈಕೆಯ ಅಪ್ಪ ಸುಕೇತನಂತೆ, ಗಂಡ ಸುಂದ. ಅಗಸ್ತ್ಯರನ್ನು ಎಡತಾಕಿ ಸತ್ತನಾತ. ಗಂಡನನ್ನು ಕೊಂದ ಅಗಸ್ತ್ಯರನ್ನು ನುಂಗ ಬಂದ ತಾಟಕೆಗೆ ಋಷಿಗಳು ಶಪಿಸಿದರು ರಾಕ್ಷಸಿಯಾಗೆಂದು. ಈಗಿವಳು ಸತ್ತು ಬಿದ್ದಿದ್ದಾಳೆ. ಯಕ್ಷರೆಷ್ಟು ಸಾತ್ವಿಕರು, ಅದೆಷ್ಟು ಕಲಾಸಕ್ತರು... ಆದರೆ ಇವಳೇಕೆ ಹೀಗಾದಳು? ವ್ಯಕ್ತಿಯ ನಿಲುವು, ಮನೋಭಾವ ನಿರ್ಣಯವಾಗುವುದು ಯಾವುದರಿಂದ? ಹುಟ್ಟಿನಿಂದಲೇ? ನಡತೆಯಿಂದಲೇ? ಈಗ ನಡತೆ ಕಾರಣವಾದರೆ ಈ ನಡೆ ನಮಗೆ ಅಂಟಲು ಏನು ಕಾರಣ? ಪರಿಸರ ಕಾರಣವೇ? ಒಡನಾಟ ಕಾರಣವೋ? ಮನಸ್ಸಿನ ಬಾಗುವಿಕೆ ಕಾರಣವೋ? ಈ ಯಾವುದೋ ಒಂದು ಕಾರಣವಾದರೆ ವ್ಯಕ್ತಿಗೆ ಸ್ವಾತಂತ್ರ್ಯವೆಲ್ಲಿ? ಎಲ್ಲವನ್ನೂ ಮೀರಿ ಮನುಷ್ಯ ಒಳ್ಳೆಯವನಾಗಿ ಬದುಕಲು ಸಾಧ್ಯವಿಲ್ಲವೇ? ಅಸಲು ಒಳ್ಳೆಯನಾಗುವುದು ಎಂದರೇನು? ಅಳೆದೂ, ಸುರಿದೂ ಹೇಳಿದರೆ ಬೇರೆಯವರಿಗೆ ತನ್ನಿಂದ ಕೆಡುಕಾಗದೇ ಬದುಕುವುದೇ ಒಳಿತೇ? ಹಾಗಾದರೆ ಇವಳನ್ನು ಸಾಯಿಸಿದೆನಲ್ಲ, ಅದು ಅವಳಿಗೆ ಕೆಡುಕಾದಂತಲ್ಲವೇ? ಹಾಗಲ್ಲ, ತಪ್ಪು ಮಾಡಿರುವವರಿಗೆ ಶಿಕ್ಷಿಸುವುದು ಬೇರೆ, ವಿನಾ ಕಾರಣ ಅನ್ಯರಿಗೆ ನೋಯಿಸುವುದು ಬೇರೆ. ಈ ತಾಟಕೆ ಈ ಊರುಗಳನ್ನೇ ಹಾಳು ಮಾಡಿದ್ದಳು. ಪಶು ಪಕ್ಷಿ ಪ್ರಾಣಿಗಳಿಗೆ ಹಿಂಸೆ ಕೊಡುತ್ತಿದ್ದಳು. ಆದ್ದರಿಂದ ಅವಳಿಂದ ಆಗುತ್ತಿದ್ದ ಅನ್ಯಾಯಕ್ಕೆ ಶಿಕ್ಷೆ ಅನಿವಾರ್ಯವಾಗಿತ್ತು.
ಸರಿ- ಸರಿ, ಅವಳು ಹುಟ್ಟಾ ಯಕ್ಷಿಯಾಗಿದ್ದು ಈಗ ಈ ಪರಿ ಅನಾಹುತ ಮಾಡುತ್ತಿರುವುದಕ್ಕೆ ಕಾರಣ ಅಗಸ್ತ್ಯರಿತ್ತ ಶಾಪ. ಅವರು ಶಪಿಸಿರದಿದ್ದರೆ ಇವಳು ಹೀಗೆ ಮಾಡುತ್ತಿರಲಿಲ್ಲವೇನೋ. ಅವಳು ತಾನೇ, ತನ್ನ ಗಂಡನನ್ನು ಸಂಹರಿಸಿದ ಅಗಸ್ತ್ಯರನ್ನು ಸತ್ಕರಿಸಲು ಸಾಧ್ಯವಿತ್ತೆ? ಸಿಟ್ಟುಗೊಂಡು ನುಗ್ಗಿರಬಹುದು! ಅವಳನ್ನವರು ಹೇಗೋ ದಂಡಿಸಿದ್ದರೆ ಸಾಕಿತ್ತು. ಬದಲು ಶಪಿಸಿಬಿಟ್ಟರು- "ನೀನು ಕುರೂಪಿಯಾಗು. ಮನುಷ್ಯರನ್ನು ತಿನ್ನು"
                 (ಪುರುಷಾದೀ ಮಹಾ ಯಕ್ಷೀ ವಿರೂಪಾ ವಿಕೃತಾನನಾ)
ಅವರು ಅಂದು ಹಾಗೆ ಶಪಿಸಿರದಿದ್ದರೆ ಇವಳು ನರಭಕ್ಷಕಳಾಗುತ್ತಿರಲಿಲ್ಲ. ಈ ನಗರಗಳನ್ನು ಹಾಳು ಮಾಡುತ್ತಿರಲಿಲ್ಲ ಅಲ್ಲವೇ? ಅಲ್ಲಿಗೆ ಈ ತಾಟಕೆಯ ಇಷ್ಟೆಲ್ಲಾ ಗದ್ದಲ ತಾಪಗಳಿಗೆ ಅಗಸ್ತ್ಯರೇ ಕಾರಣ ಎಂದಂತಾಯಿತಲ್ಲವೇ? ಹಾಗಾದರೆ ಈ ದೋಷ ಯಾರ ತಲೆಗೆ.... ಯೋಚಿಸುತ್ತ ಏನೂ ಬಗೆಹರಿಯದೇ ಶ್ರೀರಾಮರು ವಿಚಲಿತರಾದರು.
ರಾಮರ ಚಿಂತೆ ಹೀಗಿದ್ದರೆ ವಿಶ್ವಮಿತ್ರರದು ಮತ್ತೊಂದು ತೆರ. ತಾಟಕೆ ಎದುರು ಬರುವುದೊಳಗೇ ತಾವು ಅವಳ, ಅವಳ ಮಗನ ಕುಕಾರ್ಯಗಳನ್ನು ವರ್ಣಿಸಿದ್ದರು. ಅವಳು ಕಾಣುತ್ತಿದ್ದಂತೆಯೇ ಸಾಯಿಸಲು ಹೇಳಿದರು. ಆದರೂ ಈ ರಾಮ ಹಾಗೆ ಮಾಡಲಿಲ್ಲ. ಅವಳು ಬಂದದ್ದೂ ನಿಜ, ಮಣ್ಣು ತೂರಿದ್ದೂ ನಿಜ, ಕಲ್ಲುಗಳನ್ನು ಎಸೆದದ್ದೂ ನಿಜ, ಆದರೂ ರಾಮರು ಕೇವಲ ನಿವಾರಿಸುತ್ತಿದ್ದರು. ಅದನ್ನೇ ಲಕ್ಷ್ಮಣನಿಗೂ ಹೇಳಿದರು; "ಇವಳು ಹೆಂಗಸು, ಈಕೆಯನ್ನು ಕೊಲ್ಲಲು ಮನಸ್ಸು ಬರುತ್ತಿಲ್ಲ. ಕೇವಲ ಕಿವಿ-ಮೂಗುಗಳನ್ನು ಕತ್ತರಿಸಿ ಹಿಂದಕ್ಕೆ ಕಳಿಸುವೆ." 
(ನಹ್ಯೇನಾಂ ಉತ್ಸಹೇ ಹಂತುಂ ಸ್ತ್ರೀ ಸ್ವಭಾವೇನ ರಕ್ಷಿತಾಂ
ವಿನಿವೃತ್ತಾಂ ಕರೋಮಿ ಅದ್ಯ ಹೃತ್ಕರ್ಣಾಗ್ರ ನಾಸಿಕಂ)
ರಾಮರು ಮಾಡಿದ್ದೂ ಹಾಗೇ. ಆದರವಳು ಹಿಂದಕ್ಕೆ ಹೋದಳೇ? ಮಣ್ಣಿನಿಂದ ರಾಮ ಲಕ್ಷ್ಮಣರ ಕಣ್ಣು ತುಂಬಿದಳು; ಕಲ್ಲಿನ ಮಳೆಯನ್ನೇ ಕರೆದಳು. 
(ಉದ್ಧುನ್ವಾನಾ ರಜೋ ಘೋರಂ ತಾಟಕಾ ರಾಘವಾ ಉಭೌ
ತತೋ ಮಯಾಂ ಸಮಸ್ಥಾಯ ಶಿಲಾ ವರ್ಷೇಣ ರಾಘವೌ)
ಸಿಟ್ಟುಗೊಂಡ ರಾಮರು ಅವನ್ನೆಲ್ಲ ನಿವಾರಿಸಿದರೂ ಸಾಯಿಸಲಿಲ್ಲ. ಮತ್ತೆ - ಮತ್ತೆ ವಿಶ್ವಮಿತ್ರರು ಹೇಳಬೇಕಾಗಿತ್ತು; " ಕೆಟ್ಟದ್ದು-ಒಳ್ಳೆಯದಕ್ಕೆ ಲಿಂಗ ಭೇದವಿಲ್ಲ. ಅವಳು ಹೆಂಗುಸೆಂದು ಅವಳನ್ನು ದಂಡಿಸದೇ ಇರಬೇಡ. ಸಾವಿರಾರು ಜನರನ್ನು ಸಂಹರಿಸಿದ್ದಾಳೆ. ಅವಳಿಗೆ ಶಿಕ್ಷೆ ಅವಶ್ಯ". ನೇರವಾಗಿ ರಾಮರನ್ನೇ ನುಂಗಲು ಬಂದಾಗ ಬಾಣ ಬಿಟ್ಟರು, ಅವಳು ಉರುಳಿ ಬಿದ್ದಳು. ಕಥೆ ಮುಗಿಯಿತು. ಆದರೆ ವಿಶ್ವಮಿತ್ರರ ಯೋಚನೆ ಮುಗಿದಿರಲಿಲ್ಲ. ತಾನು ಹೇಳುತ್ತಿದ್ದರೂ ಏಕೆ ರಾಮ ಅವಳನ್ನು ಕೊಲ್ಲಲಿಲ್ಲ? ಕೊನೆಗೆ ಮಾಡುವದನ್ನು ಮೊದಲೇ ಮಾಡಬಹುದಿತ್ತಲ್ಲ? ಏಕೆ ಅಷ್ಟು ನಿಧಾನ? ಮನಸ್ಸಿನಲ್ಲೇನು ಮಂಡಿಗೆ? ಕೇಳಿಯೇ ಬಿಟ್ಟರು. " ರಾಮ, ನಾನಷ್ಟು ಹೇಳುತ್ತಿದ್ದರೂ ನೀನೇಕೆ ಅವಳನ್ನು ತಕ್ಷಣ ಕೊಲ್ಲಲಿಲ್ಲ?" . ಶ್ರೀರಾಮರು ಮೃದು ಧ್ವನಿಯಲ್ಲಿ ಹೇಳಿದರು, " ಅವಳು ಶಿಕ್ಷಾರ್ಹಳೆಂದು ತಮಗೆ ಗೊತ್ತಿತ್ತು. ನನಗೆ ಇದು ಹೊಸದು. ಮೊದಲು ಕ್ಷಮಿಸಬೇಕಾದ್ದು ಕ್ಷಾತ್ರ ಧರ್ಮ. ಎರಡನೆಯದಾಗಿ ಅವಳಿನ್ನೂ ನನ್ನನ್ನು ಕೊಲ್ಲಬಂದಿರಲಿಲ್ಲ. ಹೀಗಾಗಿ ನಿಧಾನ ಮಾಡಿದೆ. ಮೇಲೆ ಬಿದ್ದಾಗ ಅವಳನ್ನು ನಾನು ಸಾಯಿಸಿದೆ" .ವಿಶ್ವಮಿತ್ರರು ಮತ್ತೆ-ಮತ್ತೆ ಯೋಚಿಸುತ್ತಿದ್ದಾರೆ. ಈ ತಾಳ್ಮೆ, ಈ ನಿಧಾನ ಚಿಂತನೆ, ಈ ನ್ಯಾಯ ನಿರ್ಣಯ...ಇವುಗಳೆಲ್ಲಾ ಈ ಪುಟ್ಟ ವಯಸ್ಸಿನಲ್ಲಿ ಈ ರಾಮರಿಗೆ ಹೇಗೆ ಬಂತು? 
-ಡಾ.ಪಾವಗಡ ಪ್ರಕಾಶ್ ರಾವ್
pavagadaprakashrao@gmail.com 

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಜನಪ್ರಿಯ ಪ್ಯಾಲೆಸ್ತೀನ್ ನಾಯಕ ಮರ್ವಾನ್ ಬರ್ಘೌಟಿ ಬಿಡುಗಡೆಗೆ ಇಸ್ರೇಲ್ ನಕಾರ: 250 ಕೈದಿಗಳ ಪಟ್ಟಿ ಸಿದ್ಧ?

ಮಂಗಳೂರು: Muslim ಕ್ಯಾಬ್ ಚಾಲಕನಿಗೆ 'ಭಯೋತ್ಪಾದಕ' ಎಂದು ಕರೆದಿದ್ದ ಕೇರಳ ನಟನ ಬಂಧನ!

ಅಯೋಧ್ಯೆಯಲ್ಲಿ ಮತ್ತೊಂದು 'ನಿಗೂಢ' ಸ್ಫೋಟ: ಸಾವಿನ ಸಂಖ್ಯೆ 6ಕ್ಕೆ ಏರಿಕೆ, Video Viral

BMTC ಬಸ್ ಚಾಲಕನಿಗೆ ಫಿಡ್ಸ್, ಚಿನ್ನಸ್ವಾಮಿ ಕ್ರೀಡಾಂಗಣ ರಸ್ತೆಯಲ್ಲಿ ಸರಣಿ ಅಪಘಾತ

ಬೆಂಗಳೂರು: ರಾತ್ರಿಯಿಡೀ ಸುರಿದ ಮಳೆಯಿಂದ ಹಲವೆಡೆ ಜಲಾವೃತ, ಸಂಚಾರ ದಟ್ಟಣೆ, ಇಂದಿನ IMD ವರದಿ!

SCROLL FOR NEXT