ಸಂಗ್ರಹ ಚಿತ್ರ 
ಅಂಕಣಗಳು

ಸೀತೆಗೆ ಬಂದ ಉಳಿದ ಮೂರು ಹೆಸರುಗಳು ವೈದೇಹಿ, ಜಾನಕಿ, ಮೈಥಿಲಿ. ಹೇಗೆ ಬಂದವು ಇವು?

ಜನಕ ರಾಜನ ವಂಶದ ಮೊದಲ ಅರಸು ನಿಮಿ. ಯಙ್ಞ ಮಧ್ಯದಲ್ಲಿ ಶಾಪ ಫಲವಾಗಿ ಆತ ನಿಶ್ಚೇಷ್ಟಿತನಾದಾಗ ಭೃಗು ಮಹರ್ಷಿಗಳ ಆಣತಿಯಂತೆ ಆತನ ತೊಡೆಯನ್ನು ಮಥಿಸಿದ್ದರಿಂದ ಮಗು ಒಂದು ಉದ್ಭವಿಸಿತು. ಇದು.....

ದಶರಥ ಮಹಾರಾಜನ ಒಡ್ಡೋಲಗ. ಮಂತ್ರಿಗಳು ರಾಜನ ಅನುಮತಿಯ ಮೇಲೆ ರಾಯಸದವರನ್ನು ಒಳಗೆ ಕಳಿಸಲು ಹೇಳಿದರು. ಬಂದಾತ ಬಾಗಿ ವಂದಿಸಿ, ಉಡುಗೊರೆಗಳನ್ನೊಪ್ಪಿಸಿ, ಓಲೆ ಬಿಚ್ಚಿ ಓದಲು ಅನುಮತಿ ಕೇಳಿದ. ರಾಜರ ಗೋಣು ಅಲ್ಲಾಡುತ್ತಿದ್ದಂತೆಯೇ, " ಸ್ವಸ್ತಿ ಶ್ರೀ ಕೋಸಲ ರಾಜ್ಯಾಧೀಶ, ಮಹರ್ಷಿತುಲ್ಯ, ದೇವ ಸಖ, ವಸಿಷ್ಠ ಬ್ರಹ್ಮರ್ಷಿ ಶಿಷ್ಯ.... "ಪ್ರಾರಂಭದ ಒಕ್ಕಣೆ, ಪರಾಕು, ಬಹುಪರಾಕು, ಕುಶಲೋಪರಿ, ಎಲ್ಲ ಮುಗಿದ ಮೇಲೆ ನಿಜವಾದ ವಿಷಯ ಆರಂಭವಾಯಿತು. ವಿಶ್ವಮಿತ್ರರ ಅನುಮತಿಯಂತೆ ನಮ್ಮನ್ನು ಕಳಿಸಿದ್ದಾರೆ ಮಹಾರಾಜರು; ಹಾಗೂ ಮುಂದಿನದನ್ನು ತಮ್ಮ ಮುಂದೆ ಅರುಹಲು ಆದೇಶಿಸಿದ್ದಾರೆ. 
(ಕೌಶಿಕಾನುಮಿತೇ ವಾಕ್ಯಂ ಭವಂತಂ ಇದಂ ಅಬ್ರವೀತ್)
 ಓಹ್! ಅಂತೂ ಮಕ್ಕಳ ವಿಷಯ ಈಗ ಗೊತ್ತಾಗುತ್ತದೆ ಎಂದುಕೊಂಡ ದಶರಥ.
" ......ತಮಗೆ ತಿಳಿದಿರುವಂತೆ ನಮ್ಮ ವಂಶದ ಮೊದಲ ಅರಸು ನಿಮಿ. ಯಙ್ಞ ಮಧ್ಯದಲ್ಲಿ ಶಾಪ ಫಲವಾಗಿ ಆತ ನಿಶ್ಚೇಷ್ಟಿತನಾದಾಗ ಭೃಗು ಮಹರ್ಷಿಗಳ ಆಣತಿಯಂತೆ ಆತನ ತೊಡೆಯನ್ನು ಮಥಿಸಿದ್ದರಿಂದ ಮಗು ಒಂದು ಉದ್ಭವಿಸಿತು. ಇದು ಅತೀಂದ್ರಿಯ ಶಕ್ತಿ ಪ್ರಭಾವವೆಂದು ಆ ಮಗುವಿಗೆ ಮೂರು ಹೆಸರುಗಳನ್ನು ಇಟ್ಟರು. 
  1.  ಮಥನದಿಂದ ಹುಟ್ಟಿದ್ದರಿಂದ ಮಿಥಿ. 
  2.  ವಿಶೇಷ ಜನನವಾದ್ದರಿಂದ ಜನಕ. 
  3. ದೇಹಗಳ ಸಂಯೋಗವಿಲ್ಲದೇ ಮೃತದೇಹದಿಂದಲೇ ಹುಟ್ಟಿದ್ದರಿಂದ ವಿದೇಹ. 
(ಮಥನಾತ್ ಮಿಥಿ ಇತಿ ಆಹುಃ ಜನನಾತ್ ಜನಕೋ ಅಭವತ್
ಯಸ್ಮಾತ್ ವಿದೇಹಾತ್ ಸಂಭೂತೋ ವೈದೇಹಸ್ತು ತತಃ ಸ್ಮೃತಃ)
ಈ ಮಿಥಿಯ ರಾಜಧಾನಿಯೇ ಮಿಥಿಲಾ ಎಂದಾಯಿತು. ಎರಡು, ಮೂರು ಕಾರಣಗಳು ಸೇರಿ ವಿದೇಹಜನಕ ಎಂದು ಪ್ರಸಿದ್ಧವಾಯಿತು. ನಾನು ಈ ವಂಶದಲ್ಲಿನ ಈಗಿನ ರಾಜ. ಜನಕ ಎಂಬುದು ವಂಶಪಾರಂಪರ್ಯವಾಗಿ ಈ ಸಿಂಹಾಸನದಲ್ಲಿ ಕುಳಿತವರಿಗೆಲ್ಲ ಬರುವ ನಾಮಧೇಯ. 

ಇಷ್ಟೆಲ್ಲ ವಿವರಣೆಗಳನ್ನು ಕೊಡುತ್ತಿರುವ ಕಾರಣ ನಾನು ಕನ್ಯಾಪಿತೃ. " ಯಾವ ಕನ್ಯೆ?  ದಶರಥ ಮಹಾರಾಜನ ಮನಸ್ಸಲ್ಲಿ ಮೂಡಿದ ಪ್ರಶ್ನೆ.  ಇದ್ದಕ್ಕಿದ್ದಂತೆಯೇ ಪ್ರತ್ಯಕ್ಷಳಾದ ದಿವ್ಯ ಕುಮಾರಿಯೋ? ಸೀತೆಯೆಂಬಾಕೆ ದಿವ್ಯಸ್ತ್ರೀ ಎಂದೂ, ದೇವತೆಯೊರ್ವಳು ಆಕೆಯನ್ನು ಜನಕ ಮಹಾರಾಜನಿಗೆ ಅನುಗ್ರಹಿಸಿದಳೆಂದೂ ಜನಜನಿತವಾಗಿತ್ತಾಗಲೇ! ಹಾಗೇ ತನಗೂ ಮಕ್ಕಳು ಯಙ್ಞ ಪುರುಷನ ಅನುಗ್ರಹವಲ್ಲವೇ? ವಾಚನ ಮುಂದುವರಿಯಿತು. "ರಾಜಾ ದಶರಥ, ಲೋಕೋತ್ತರ ಸುಂದರಿಯಾದ ಸೀತೆಯನ್ನು ದೇವತೆಗಳು ನನಗೆ ಅನುಗ್ರಹಿಸಿರುವುದು ತಮಗೂ ಗೊತ್ತಿರಬೇಕು. ವಿಶೇಷ ಕಾರಣಗಳಿಂದ ನಮ್ಮ ವಂಶ ಮುಂದುವರೆದಿದ್ದರಿಂದಲೂ, ವಿಶೇಷವಾಗಿ ಲಭ್ಯವಾದ ಪುತ್ರಿಗೆ ಆ ಮೂಲದಿಂದಲೇ ಹೆಸರುಗಳೂ ಪ್ರಸಿದ್ಧವಾಯಿತು. ಸಿಕ್ಕ ಜಾಗದ ಕಾರಣದಿಂದ ಸೀತಾ ಎಂದೂ, ಜನಕನಾದ ನನ್ನ ಪುತ್ರಿಯಾದ್ದರಿಂದ ಜಾನಕಿ ಯೆಂದೂ, ಮಿಥಿಲಾ ನಗರ ಕಾರಣದಿಂದ ಮೈಥಿಲಿ ಎಂದೂ, ದೇಹಗಳ ಸಮ್ಮಿಲನವಲ್ಲದ ಕಾರಣದಿಂದ ವೈದೇಹಿಯೆಂದೂ  ಪ್ರಸಿದ್ಧಳಾಗಿದ್ದಾಳೆ. "  ಸೀತೆಯೆಂಬುದಷ್ಟೇ ನನಗೆ ಗೊತ್ತಿತ್ತು. ಉಳಿದ ಹೆಸರುಗಳೂ ಸಾರ್ಥಕವಾಗಿಯೇ ಇದೆ.  ಎಂದುಕೊಂಡ ರಾಜ. ಮುಂದುವರಿಯಿತು ಪತ್ರ. " ಕ್ಷಾತ್ರ ಧರ್ಮಾನುಗುಣವಾಗಿ ಆಕೆಯನ್ನು ವೀರ್ಯ ಶುಲ್ಕಳೆಂದು ನಾನು ಎಂದೋ ಪ್ರತಿಙ್ಞೆ ಮಾಡಿದ್ದೆ. ಇದನ್ನು ನೀವೂ ಕೇಳಿರಬೇಕು. " 
(ಪೂರ್ವ ಪ್ರತಿಙ್ಞಾ ವಿದಿತಾ ವೀರ್ಯ ಶುಲ್ಕಾ ಮಮಾ ಆತ್ಮಜಾ)
" ಇದ್ದಕ್ಕಿದ್ದಂತೆಯೇ ಬಂದ ನಿಮ್ಮ ಮಕ್ಕಳು ನನ್ನ ಮಗಳನ್ನು ಜಯಸಿಬಿಟ್ಟಿದ್ದಾರೆ . " 
(ಯದೃಚ್ಛಯಾ ಆಗತೈರ್ ವೀರೈರ್ ನಿರ್ಜಿತಾ ತವ ಪುತ್ರಕಾಃ)
 ಇಬ್ಬರೂ ಹೇಗೆ ಗೆದ್ದರು? - ದಶರಥನಿಗೆ ಆದ ಆಂದೋಲನ ಮುಂದಿನ ವಾಕ್ಯದಿಂದ ದೂರಾಯಿತು. " ಜನರ ಸಾಕ್ಷಿಯಲ್ಲಿ ಮಹಾ ವೀರನಾದ ರಾಮ ಮಹಾತ್ಮನಾಗಿಬಿಟ್ಟ. "
(ರಾಮೇಣಹಿ ಮಹಾವೀರ ಮಹತ್ಯಾಂ ಜನಸಂಸದಿ)
ಸಭಾ ಸದರೆಲ್ಲ ಎದ್ದು ನಿಂತು ಚಪ್ಪಾಳೆ ತಟ್ಟತೊಡಗಿದರು. ವಸಿಷ್ಠರಿಗೆ ಸುಳಿದು ಹೋಯಿತು, ವಿಶ್ವಮಿತ್ರರು ಬಂದಾಗ ಹೇಳಿದ ಮಾತು (ಕಲ್ಯಾಣಕಾರ್ಯವೊಂದನ್ನು ಮಾಡಿ ಹಿಮಾಲಯಕ್ಕೆ ಹೋಗಬೇಕೆಂದಿರುವೆ. - ವಿಶ್ವಮಿತ್ರ). ಕೌಸಲ್ಯೆಯ ಚೇಟಿ ಓಡಿದಳು ಒಡತಿಗೆ ವಿಷಯ ತಿಳಿಸಲು. ದಶರಥನಿಗೆ ಅಮಿತ ಆನಂದ.  ಮದುವೆಯ ವಿಷಯ ಮಾತನಾಡುತ್ತಿದ್ದಾಗ, ಮಧ್ಯೆ ಬಂದು ಕರೆದುಕೊಂಡು ಹೋಗಿದ್ದರು ವಿಶ್ವಮಿತ್ರರು. ಅಂದಿನಿಂದ ತನಗೆ ಪ್ರತಿ ಕ್ಷಣವೂ ಒದ್ದಾಟ. ಏನಾಯಿತೋ? ಯಙ್ಞರಕ್ಷಣೆಯೆಂದು ಹೇಳಿದ್ದರು, ಸುಬಾಹುವಿನ ಹೆಸರು ಬೇರೆ ಹೇಳಿದ್ದರು, ಅವರೊಡನೆ ಯುದ್ಧ ಎಂದಿದ್ದರು, ಅಂತಹ ರಾಕ್ಷಸನೊಡನೆ ತನ್ನ ಮಗ ಯುದ್ಧ ಮಾಡಬೇಕಂತೆ ಎಂದು ಬಹಳ ಹೆದರಿದ್ದೆ. ವಸಿಷ್ಠರು ಎಷ್ಟೇ ಸಮಾಧಾನ ಹೇಳಿದ್ದರೂ ನೆಮ್ಮದಿಯಾಗುತ್ತಿರಲಿಲ್ಲ. ಇದೀಗ ಈ ಮಧುವಾರ್ತೆ. ಯಙ್ಞ ಮುಗಿದಿರಬೇಕು, ರಾಮ ಗೆದ್ದಿರಬೇಕು, ಈಗ ಸೊಸೆಯನ್ನು ಗೆದ್ದಿದ್ದಾನೆ. - ಆಲೋಚನದಲ್ಲಿ ಮುಳುಗಿ ಹೋಗಿದ್ದ ದಶರಥನನ್ನು ಮುಂದಿನ ಮಾತು ಎಚ್ಚರಿಸಿತು. 

"ಮಹಾರಾಜ, ನನ್ನ ಪ್ರತಿಙ್ಞೆಯನ್ನು ನೆರವೇರಿಸಿ. ವಿವಾಹ ಮಾಡಿಕೊಳ್ಳಲು ಮಕ್ಕಳಿಗೆ ಅನುಮತಿ ಕೊಡಿ. ದಯವಿಟ್ಟು ವಸಿಷ್ಠ-ವಾಮದೇವರೊಟ್ಟಿಗೆ ಬನ್ನಿರಿ. ವಿವಾಹಕ್ಕೆ ನಿಮ್ಮ ವಂಶಾನುಗುಣವಾದ ಪುರೋಹಿತರನ್ನು ಕರೆತನ್ನಿರಿ. ಆದಷ್ಟು ಬೇಗ ಬನ್ನಿ, ಮಂಗಳ ಮಹೋತ್ಸವಕ್ಕೆ ಬನ್ನಿರಿ. ದರ್ಶನೀಯವಾದ ದಾಶರಥಿಗಳನ್ನು ನೋಡ ಬನ್ನಿರಿ."
(ಪ್ರತಿಙ್ಞಾಂ ಕರ್ತುಂ ಇಚ್ಛಾಮಿ ತತ್ ಅನುಙ್ಞಾತುಂ ಅರ್ಹಸಿ 
ಸ ಉಪಾಧ್ಯಾಯೋ ಮಹಾರಾಜ ಪುರೋಹಿತ ಪುರಃ ಸರಃ
ಶೀಘ್ರಂ ಆಗಚ್ಛ ಭದ್ರಂ ತೇ ದ್ರಷ್ಟುಂ ಅರ್ಹಸಿ ರಾಘವೌ)
*********
ತಕ್ಷಣ ದಶರಥನಿಗೆ, ರಾಮ ವಿವಾಹವನ್ನು ಘೋಷಿಸಬೇಕೆಂಬ ಒತ್ತಾಸೆಯಾದರೂ ಶಿಷ್ಟಾಚಾರ ತಡೆಯಿತು. ವಿಶ್ವಮಿತ್ರರೇ ಸಾಕ್ಷಿಯಾಗಿದ್ದಾರೆ, ಜನಕರ ವಂಶವೂ ದೊಡ್ಡದೇ. ಆದರೂ ಕುಲ ಗುರುಗಳನ್ನು ಒಂದು ಮಾತು ಕೇಳುವುದು ಸರಿಯೆನ್ನಿಸಿತು. "ಗುರುಗಳೇ, ಮಂತ್ರಿಗಳೇ, ಉಳಿದ ಮಾನ್ಯ ನಗರ ಪ್ರಮುಖರೇ, ವಿಶ್ವಮಿತ್ರರ ರಕ್ಷಣೆ ಕೌಸಲ್ಯಾಪುತ್ರನಿಗಿದೆ. ಲಕ್ಷ್ಮಣನೊಡನೆ ಮಿಥಿಲೆಗೆ ಹೋಗಿದ್ದಾನೆ, ರಾಮನ ಶೌರ್ಯವನ್ನು ಜನಕ ಮಹಾರಾಜ ಕಣ್ಣಾರೆ ಕಂಡಿದ್ದಾನೆ. ಆತ ಮಾಡಿದ ಪ್ರತಿಙ್ಞೆಯಂತೆ ರಾಮನಿಗೆ ಮಗಳನ್ನು ಕೊಡಲು ನಿಶ್ಚಯಿಸಿದ್ದಾನೆ." 
ಪ್ರತಿಙ್ಞೆಯಂತೆ ರಾಮನಿಗೆ ಮಗಳನ್ನು ಕೊಡಲು ನಿಶ್ಚಯಿಸಿದ್ದಾನೆ. " 
(ವಸಿಷ್ಠಂ ವಾಮದೇವಂಚ ಮಂತ್ರಿಣೋ ಅನ್ಯಾಂಶ್ಚ ಸೋ ಅಬ್ರವೀತ್
ಗುಪ್ತಃ ಕುಶಿಕ ಪುತ್ರೇಣ ಕೌಸಲ್ಯಾನಂದ ವರ್ಧನಃ 
ಲಕ್ಷ್ಮಣೇನ ಸಹಭ್ರಾತ್ರಾ ವಿದೇಹೇಷು ವಸತ್ಯ ಸೌ
ದೃಷ್ಟ ವೀರ್ಯಸ್ತು ಕಾಕುತ್ಸ್ಥೋ ಜನಕೇನ ಮಹಾತ್ಮನಾ
ಸಂಪ್ರದಾನಂ ಸುತಾ ಯಸ್ತು ರಾಘವಾ ಕರ್ತುಂ ಇಚ್ಛತಿ)
ಕ್ಷಣ ನಿಂತು ಮೃದು ಧ್ವನಿಯಲ್ಲಿ , " ಜನಕ ಮಹಾರಾಜನ ವಂಶ ಉತ್ತಮವೆಂದು ತಾವು ಪ್ರಶಂಸಿಸುವುದಾದರೆ.... " 
(ಯದಿ ಓ ರೋಚತೇ ವೃತ್ತಂ ಜನಕಸ್ಯ ಮಹಾತ್ಮನಃ)
ಇನ್ನೂ ದಶರಥ ರಾಗ ಎಳೆಯುತ್ತಿದ್ದಾಗಲೇ "ಆಗಬಹುದು, ಆಗಬಹುದು "ಎಂದು ವಸಿಷ್ಠರು, ಮಂತ್ರಿಗಳು, ಪುರ ಪ್ರಮುಖರು ಒಂದೇ ಮಾತಿನಿಂದ ಉದ್ಗರಿಸಿಬಿಟ್ಟರು. 
(ಮಂತ್ರಿಣೋ ಬಾಢಂ ಇತ್ಯಾಹುಃ  ಸಹಸರ್ವೈರ್ ಮಹರ್ಷಿಭಿಃ)
---೦೦೦---
-ಡಾ.ಪಾವಗಡ ಪ್ರಕಾಶ್ ರಾವ್
pavagadaprakashrao@gmail.com

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

AI- ಚಾಲಿತ ಡಿಜಿಟಲೀಕರಣ, SIR ಕುರಿತು CECಗೆ ಐದನೇ ಪತ್ರ ಬರೆದ ಮಮತಾ ಬ್ಯಾನರ್ಜಿ

Vijay Hazare Trophy: ಸೆಮಿಫೈನಲ್‌ಗೆ ಲಗ್ಗೆ ಇಟ್ಟ ಕರ್ನಾಟಕ

ಪ್ಯಾಕ್ಸ್ ಸಿಲಿಕಾ ಅಲೈಯನ್ಸ್‌ನ ಸದಸ್ಯ ದೇಶವಾಗಲಿದೆ; ಅಮೆರಿಕಕ್ಕೆ ಭಾರತಕ್ಕಿಂತ ಮುಖ್ಯ ದೇಶ ಮತ್ತೊಂದಿಲ್ಲ: ಸೆರ್ಗಿಯೊ ಗೋರ್

UP ದಲಿತ ಮಹಿಳೆ ಕೊಲೆ: ಯೋಗಿ ಸರ್ಕಾರ ಜಾತಿ, ಧರ್ಮದ ಆಧಾರದಲ್ಲಿ ದ್ವೇಷಕ್ಕೆ ಪ್ರಚೋದನೆ- ಕಾಂಗ್ರೆಸ್ ಕಿಡಿ!

Indian Stock Market: 5 ದಿನಗಳ ಸತತ ಕುಸಿತಕ್ಕೆ ಕೊನೆಗೂ ಬ್ರೇಕ್, Sensex 301 ಅಂಕ ಏರಿಕೆ!

SCROLL FOR NEXT