ಸಂಗ್ರಹ ಚಿತ್ರ 
ಅಂಕಣಗಳು

ಇಂತಹ ಸತ್ಕುಲ ಪ್ರಸೂತ , ಯೋಗ್ಯ , ಧೀಮಂತ , ಶೂರ , ಸಕಲ ಗುಣಗಣಿ ಶ್ರೀರಾಮಚಂದ್ರರು ಯುವರಾಜರಾಗುವುದಕ್ಕೆ ನಮ್ಮೆಲ್ಲರ ಸ್ವಾಗತವಿದೆ

"ಸ್ವಾಮಿ, ನಾನು ಹೇಳಲೇಬೇಕಾದದ್ದು ಅತ್ಯಂತ ಪ್ರಧಾನವಾದದ್ದು. ಜನರ ಪ್ರೀತಿಗೆ ಏಕೆ ಶ್ರೀರಾಮರು ಕಾರಣ ಎಂಬುದಕ್ಕೆ ಜನರು ಮಾತಾಡುವುದನ್ನು ಕೇಳಿ ಹೇಳುತ್ತಿದ್ದೇನೆ." ನೆರೆದಿದ್ದ ಪ್ರಜೆಗಳೆಡೆ ಒಮ್ಮೆ ನೋಡಿ.......

"ಸ್ವಾಮಿ, ನಾನು ಹೇಳಲೇಬೇಕಾದದ್ದು ಅತ್ಯಂತ ಪ್ರಧಾನವಾದದ್ದು. ಜನರ ಪ್ರೀತಿಗೆ ಏಕೆ ಶ್ರೀರಾಮರು ಕಾರಣ ಎಂಬುದಕ್ಕೆ ಜನರು ಮಾತಾಡುವುದನ್ನು ಕೇಳಿ ಹೇಳುತ್ತಿದ್ದೇನೆ." ನೆರೆದಿದ್ದ ಪ್ರಜೆಗಳೆಡೆ ಒಮ್ಮೆ ನೋಡಿ ಮುಂದುವರಿಸಿದರು. "ಯಾವ ರಾಜ್ಯದಲ್ಲಿ ಬಡವ ಇರುವುದಿಲ್ಲ? ಉಳ್ಳವರಿಗೆ ಇವರನ್ನು ಕಂಡರೆ ತಾತ್ಸಾರ. ಶ್ರೀರಾಮರು ಹಾಗಲ್ಲ. ದಿನದ ಭೇಟಿಯಲ್ಲಿ ಮೊದಲ ಅರ್ಧ ಘಂಟೆ ದೀನದಲಿತರಿಗೇ ಮೀಸಲು. ಅವರ ಬಗ್ಗೆ ತುಂಬ ಅನುಕಂಪೆ. ಅವರ ಅಹವಾಲುಗಳನ್ನು ತಕ್ಷಣವೇ ಪೂರೈಸುತ್ತಾರೆ. ಶ್ರೀರಾಮರು ಸಿಟ್ಟುಗೊಂಡದ್ದನ್ನು ಯಾರೂ ಕಂಡೇ ಇಲ್ಲ. ಧರ್ಮದ ಗೆರೆಯನ್ನು ಎಲ್ಲೂ ಉಲ್ಲಂಘಿಸಿದವರಲ್ಲ. ಅನ್ಯರ ಆಸ್ತಿಯ ಮೇಲೆ ಎಂದೂ ಕೈಹಾಕಿದವರೇ ಅಲ್ಲ; ಅಂದರೆ ಎಂದೆಂದೂ ರಾಜದರ್ಪ ಅನ್ಯಾಯವಾಗಿ ಅನ್ಯ ಆಸ್ತಿಯ ಕಡೆ ನೋಡುವುದೇ ಇಲ್ಲ. ಅವರ ಬದುಕು ಶುಭ್ರ. ಹುಡುಕಿದರೂ ಕಲೆ ಕಾಣಿಸದ ಬಿಳಿ ಪಥ ಅವರ ಜೀವನ.
(ಸಾನುಕ್ರೋಶೋ ಜಿತಕ್ರೋಧೋ ಬ್ರಾಮ್ಹಣ ಪ್ರತಿಪೂಜಕಃ
ದೀನಾನುಕಂಪೀ ಧರ್ಮಙ್ಞೋ ನಿತ್ಯಂ ಪ್ರಗ್ರಹವಾನ್ ಶುಚಿಃ) 
ವೈದ್ಯ ವಿದ್ಯಾ ವಿಶಾರದ ವಿಶ್ವೇಶ್ವರಭಟ್ಟರು ಎದ್ದರು. "ಅನ್ಯ ರಾಜರು ಮಣಿದಿರಬೇಕಿದ್ದರೆ, ಅನ್ಯ ರಾಷ್ಟ್ರಗಳಿಗೆ ಭೇಟಿ ಕೊಟ್ಟಾಗ ಅವರು ಗೌರವದಿಂದ ಕಾಣಬೇಕಿದ್ದರೆ, ನಮ್ಮ ರಾಜರು ನಿರೋಗಿಗಳಾಗಿರಬೇಕು; ಯುವಕರಾಗಿರಬೇಕು; ಶ್ರೋತೃಗಳು ತಲೆತೂಗುವಂತೆ ಮಾತನಾಡುವ ಚಾಕಚಾಕ್ಯತೆ ಇರಬೇಕು. ದೃಢವಾದ ಶರೀರವಿರಬೇಕು. ನೋಡಿದರೆ ಸಾಕು ಈತ ಸಬಲ, ರಣಾಗ್ರಣಿ ಎಂದು ಅನ್ನಿಸಬೇಕು. ಭೇಟಿ ಕೊಟ್ಟ ದೇಶದ ಬಗ್ಗೆ ಆಳವಾದ ಙ್ಞಾನ ಗಳಿಸಿರಬೇಕು. ಇವೆಲ್ಲ ಶ್ರೀರಾಮರಲ್ಲಿ ನೆಲೆಸಿವೆ. ಅಷ್ಟೇ ಅಲ್ಲ; ಒಬ್ಬ ಉತ್ತಮ ವ್ಯಕ್ತಿಗೆ, ಉತ್ತಮ ಅಧಿಕಾರಿಗೆ, ಉತ್ತಮ ರಾಜನಿಗೆ ಒಂದು ಮಾದರಿಯಿರಲೆಂದೇ ಚತುರ್ಮುಖ ಬ್ರಹ್ಮ ಒಬ್ಬರೇ ಶ್ರೀರಾಮರನ್ನು ಸೃಷ್ಟಿಸಿದ್ದಾನೇನೋ ಎಂಬಂತಿದ್ದಾರೆ ತಮ್ಮ ಪುತ್ರರು.
(ಅರೋಗಸ್ತರುಣೋ ವಾಗ್ಮೀ ವಪುಷ್ಮಾನ್ ದೇಶಕಾಲವಿತ್
ಲೋಕೇ ಪುರುಷ ಸಾರಙ್ಞಃ ಸಾಧುರೇಕೋ ವಿನಿರ್ಮಿತಃ) 
ನ್ಯಾಯ ಮಂಡಲಿಯ ನ್ಯಾಯ ದರ್ಶನ ವಿಚಕ್ಷಣ ಸುಬ್ರಮ್ಹಣ್ಯ ಘನಪಾಠಿಗಳು ಮಾತನಾಡತೊಡಗಿದಾಗ, ಇಡೀ ಸಭೆಯೇ ಆಸಕ್ತಿಯಿಂದ ಆಲಿಸಿತು. "ಮಹಾಪ್ರಭು, ನಾನು ಸುಮಾರು ಐವತ್ತು ವರ್ಷಗಳಿಂದ ಉಚ್ಛ ನ್ಯಾಯಾಲಯದಲ್ಲಿ ನ್ಯಾಯ ಪ್ರದಾನ ಮಾಡುತ್ತಿದ್ದೇನೆ. ನೂರಾರು ನ್ಯಾಯವಾದಿಗಳ ಸಶಕ್ತ ವಾದಗಳನ್ನೆಲ್ಲ ಕೇಳಿದ್ದ್ದೇನೆ. ಇವೆಲ್ಲವನ್ನೂ ಮೀರಿದ್ದು ಶ್ರೀರಾಮರ ವಾದ ವೈಖರಿ. ಕೆಲ ವಿಶೇಷ ಮೊಕದ್ದಮೆಗಳಲ್ಲಿ ತಮ್ಮ ಸಲಹೆಯನ್ನು ಪಡೆಯ ಬಂದಾಗ ತಾವು ನನ್ನನ್ನು ಶ್ರೀರಾಮರಲ್ಲಿಗೆ ಕಳೆಸುತ್ತಿದ್ದಿರಿ. ಆಗ ಅವರಲ್ಲಿ ಸಂಭಾಷಿಸುವ ಯೋಗ ಬರುತ್ತಿತ್ತು. ಅವರು ವಿಷಯವನ್ನು ಆಳವಾಗಿ ಅರಿಯುತ್ತಿದ್ದ ರೀತಿ ವಿಸ್ಮಯಾವಹ. ನಾನು ಹತ್ತು ದೃಷ್ಟಿಗಳಲ್ಲಿ ವಿವರಿಸಿದ್ದರೆ, ನನಗೆ ಹೊಳೆದೇ ಇರದ ಹೊಸ ಐದಾರು ದೃಷ್ಟಿಕೋನಗಳನ್ನು ವರ್ಣಿಸಿ ಹೊಸ ಲೋಕವನ್ನೇ ಸೃಷ್ಟಿಸುತ್ತಿದ್ದರು. ಅವರೇ ವಾದ - ಪ್ರತಿವಾದಗಳೆರಡನ್ನೂ ಮಂಡಿಸಿ, ಯಾವ ವಾದಕ್ಕೆ ಅಂಕಗಳು ಹೆಚ್ಚು ಎಂಬುದನ್ನು ನಮ್ಮಿಂದಲೇ ಹೇಳಿಸುತ್ತಿದ್ದರು. ಅವರನ್ನು ಕಂಡರೆ ಒಂದರ ಮೇಲೊಂದು ವಾದಾಂಶಗಳನ್ನು ಪೋಣಿಸಿ, ಮುಂದಿನವರ ಬಾಯ್ಮುಚ್ಚಿಸುವ ಬೃಹಸ್ಪತಿಯಂತೆ ಕಾಣುತ್ತಾರೆ.
(ಉತ್ತರೋತ್ತರ ಯುಕ್ತೀನಾಂ ವಕ್ತಾ ವಾಚಸ್ಪತಿರ್ಯಥಾ)
ಧರ್ಮನಿರ್ಣಯಕ್ಕೆ ಆಧಾರವಾದ ಋಕ್, ಯಜುಸ್, ಸಾಮಗಳೆ ಅವರಿಗೆ ವಾಚೋವಿಧೇಯವಾಗಿವೆ. ವೈಙ್ಞಾನಿಕವಾಗಿ ವಾತ್ಸ್ಯಾಯನ ಕಾಮಸೂತ್ರಗಳಿಗೆ ಅವರು ವ್ಯಾಖ್ಯಾನ ಮಾಡಬಲ್ಲರು. ಅರ್ಥ ಶಾಸ್ತ್ರವನ್ನು ಆಳವಾಗಿ ಅಧ್ಯಯನ ಮಾಡಿ ರಾಜಾದಾಯ, ಪ್ರಜಾ ಸಂಪತ್ತು, ದೇಗುಲ ಪ್ರಗತಿ, ರಾಜ್ಯ ಭದ್ರತಾ ಭಂಡಾರ... ಈ ಎಲ್ಲವುಗಳ ಬಗ್ಗೆಯೂ ಅತ್ಯಂತ ನಿಖರ ನಿಗಾ ಹೊಂದಿದ್ದಾರೆ. ಇನ್ನು ತತ್ವ ಶಾಸ್ತ್ರದ ಬಗ್ಗೆ ಕಠ, ಕೇನ, ಷಟ್ಪ್ರಶ್ನ, ಮುಂಡಕ, ಮಾಂಡೂಕ್ಯ, ಐತರೇಯ, ತೈತ್ತರೀಯ, ಈಶಾವಾಸ್ಯ, ಬೃಹದಾರಣ್ಯಕಗಳೆಲ್ಲ ಅವರಿಗೆ ಅಂಗೈ ನೆಲ್ಲಿ. ಅವರ ನೆನಪಿನ ಶಕ್ತಿ ಒಂದು ಅದ್ಭುತ. ನಮ್ಮ ರಾಜ್ಯದಲ್ಲಿ ಹಲ ವರ್ಗದ ಐದು ನೂರಕ್ಕೂ ಹೆಚ್ಚು ನ್ಯಾಯಾಧೀಶರಿದ್ದಾರೆ. ಶ್ರೀರಾಮರು ಪ್ರತಿಯೊಬ್ಬರನ್ನೂ ಹೆಸರು ಹಿಡಿದು ಮಾತನಾಡಿಸುತ್ತಾರೆ. 
ಆಡಳಿತದ ಉಳಿದ ಶಾಖಾಧಿಕಾರಿಗಳನ್ನೂ ಹಾಗೇ ಗುರ್ತಿಸುವರೆಂದು ಕೇಳಿದ್ದೇನೆ. ಅವರ ಬಳಿ ಯಾವುದೇ ವಿಷಯವನ್ನೊಯ್ದರೂ ಹೊಸ ದೃಷ್ಟಿಕೋನ ಕೊಡುವ ಮಹಾನ್ ಪ್ರತಿಭಾಶಾಲಿ ಅವರು. ದೈನಂದಿನ ಶಾಸ್ತ್ರೀಯ ಕ್ರಿಯೆಗಳ ಬಗ್ಗೆ ಎಷ್ಟು ಅಧಿಕಾರದಿಂದ ಮಾತನಾಡಬಲ್ಲರೋ ಅಷ್ಟೇ ಅಧಿಕೃತವಾಗಿ ಸಂಪ್ರದಾಯದ ಬಗ್ಗೆಯೂ ನಿಶ್ಚಿತ ಙ್ಞಾನ ಹೊಂದಿದ್ದಾರೆ. 
ಇಷ್ಟೆಲ್ಲ ಗುಣಗಳು ಅವರಲ್ಲಿದ್ದರೂ/ನೂರು ಜನಗಳ ವಿದ್ಯೆ, ಸಾವಿರ ಜನರ ಶಾಸ್ತ್ರ ಪರಿಣಿತಿ ಅವರಲ್ಲಿದ್ದರೂ ಶ್ರೀರಾಮರು ತುಂಬ ವಿನಯಶೀಲರು. ತಾವು ಎಷ್ಟು ಬುದ್ಧಿವಂತರೆಂದು ಅವರಿಗೇ ಗೊತ್ತಿಲ್ಲವೇನೋ ಎಂಬಂತಹ ವಿನೀತರು. ರಾಜರಿಗಿರಬೇಕಾದ ಮಹಾ ಗಾಂಭೀರ್ಯ ಅವರ ಸ್ವತ್ತಾಗಿದೆ. ಮಹಾ ಲಾಭದ ಮಾತಿರಲಿ, ದಾರುಣ ಸಂಗತಿ ಇರಲಿ, ಅವರ ಮುಖದ ನಗೆ ಎಂದೂ ವೃದ್ಧಿಸುವುದೂ ಇಲ್ಲ; ಕ್ಷೀಣಿಸುವುದೂ ಇಲ್ಲ. ಸದಾ ಮಂದಸ್ಮಿತ. ಮಂತ್ರಾಲೋಚನೆಯ ರಹಸ್ಯ ಸ್ಥಾಪನೆಯಲ್ಲಿ ಮಹಾ ನಿಪುಣರು. ತೀರ್ಮಾನ ತೆಗೆದುಕೊಳ್ಳಲಾದೇ ಅನ್ಯರು ಒದ್ದಾಡುತ್ತಿದ್ದಾಗ ಅವರಿಗೆ ತಕ್ಷಣ ಸಹಾಯ ಮಾಡುತ್ತಾರೆ. ಯಾವುದಾದರೂ ಕಾರಣದಿಂದ ತಮ್ಮ ಮುಂದೆ ತಪ್ಫು ಕಂಡರೆ ತಕ್ಷಣವೇ ದಂಡನೆ. ಅಂತೆಯೇ ಸತ್ಕಾರ್ಯವೊಂದು ನಡೆದರೆ ಮರುಕ್ಷಣವೇ ಮೆಚ್ಚುಗೆಯ ಉಡುಗೊರೆ! ಇದರಿಂದ ಅಪರಾಧಗಳೇ ಇಲ್ಲವೇನೋ ಎಂಬಷ್ಟು ಕಡಿಮೆ. ಹಾಗೂ ಒಳ್ಳೆಯದನ್ನು ಮಾಡುವವರಿಗೆ ಪ್ರೋತ್ಸಾಹದಿಂದಾಗಿ ಜನಹಿತ ಕಾರ್ಯಗಳು ಸದಾ ಅಭಿವೃದ್ಧಿ. 
ಶ್ರೀರಾಮರ ಬಗ್ಗೆ ಕೊನೆಯದಾಗಿ ನನಗೆ ತುಂಬ ಪ್ರಿಯವಾದ ಒಂದು ಅಂಶವನ್ನು ಹೇಳಿ ನನ್ನ ಮಾತು ಮುಗಿಸುವೆ. ದೇಶ ಸುಭಿಕ್ಷದಲ್ಲಿದ್ದಾಗ, ಯಾವಯಾವ ತೆರಿಗೆಗಳನ್ನು ಹಾಕಬೇಕು ಎಂಬುದರ ಬಗ್ಗೆ ಮಹಾ ಚಾತುರ್ಯ ಅವರಿಗಿದೆ. ಜನರು ಒದ್ದಾಡದಂತೆ, ಗೊಣಗದಂತೆ ಹಣ ಸಂಗ್ರಹ ಮಾಡುವ ನೈಪುಣ್ಯತೆ ಅವರಿಗಿದೆ. ಹಾಗೇ ಸದಾ ದೇಶ ಸಂಚಾರ ಮಾಡುತ್ತ, ವಿಷಯ ಸಂಗ್ರಹಿಸುತ್ತ, ಯಾವುದಾದರೂ ನಗರಕ್ಕೆ ಏನಾದರೂ ಕ್ಷಾಮ ಡಾಮರಗಳು ಎರಗಿದರೆ ತಕ್ಷಣವೇ ಭಂಡಾರದಿಂದ ಜನರಿಗೆ ಅನುಕೂಲ ಮಾಡುವ, ದಾನ ಮಾಡುವ ಮಹಾ ತ್ಯಾಗ ಬುದ್ಧಿಯೂ ಅವರಿಗಿದೆ. ಇಂತಹ ಸತ್ಕುಲ ಪ್ರಸೂತ ಯೋಗ್ಯ, ಧೀಮಂತ, ಶೂರ, ಸಕಲ ಗುಣಗಣಿ ಶ್ರೀರಾಮಚಂದ್ರರು ಯುವರಾಜರಾಗುವುದಕ್ಕೆ ನಮ್ಮೆಲ್ಲರ ಸ್ವಾಗತವಿದೆ. " 
(ಧರ್ಮಾರ್ಥಕಾಮತತ್ವಙ್ಞಃ ಸ್ಮೃತಿಮಾನ್ ಪ್ರತಿಭಾನವಾನ್
ಲೌಕಿಕೇ ಸಮಯಾಚಾರೇ ಕೃತಕಲ್ಪೋ ವಿಶಾರದಃ
ನಿಭೃತಃ ಸಂವೃತಾಕಾರೋ ಗುಪ್ತ ಮಂತಃ ಸಹಾಯವಾನ್
ಅಮೋಘ ಕ್ರೊಧ ಹರ್ಷಶ್ಚ ತ್ಯಾಗ ಸಂಗ್ರಹ ಕಾಲವಿತ್)
(ನಾನಿಲ್ಲಿ ಬರೆದಿರುವ ಶ್ರೀರಾಮರ ಗುಣಗಳ ವರ್ಣನೆ ಅತ್ಯಲ್ಪ. ಆಸಕ್ತರು ಅಯೋಧ್ಯಾಕಾಂಡದ 1 ಮತ್ತು 2 ನೆಯ ಸರ್ಗಗಳನ್ನು ಓದಬಹುದು - ಲೇ )
-------೦೦೦೦೦------
-ಡಾ.ಪಾವಗಡ ಪ್ರಕಾಶ ರಾವ್
pavagadaprakashrao@gmail.com  

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

‘ಪ್ರತಿಭಟನೆ ನಮ್ಮ ಸಾಂವಿಧಾನಿಕ ಹಕ್ಕು’: Jantar Mantar ಧರಣಿಗೆ ದಿನಾಂಕ ನಿಗದಿಪಡಿಸಿ; ದೆಹಲಿ ಪೊಲೀಸರಿಗೆ 24 ಗಂಟೆಗಳ ಗಡುವು ಕೊಟ್ಟ Cockroach Janta Party..!

‘Vote chori’ ಹೈಡ್ರಾಮಾ: "ಭೇಟಿ ಸಾಧ್ಯವಿಲ್ಲ, ಏನಿದ್ದರೂ ಕೋರ್ಟ್ ಮೂಲಕವೇ ಬನ್ನಿ; ರಾಹುಲ್ ಗಾಂಧಿ-ಖರ್ಗೆ ಭೇಟಿ ಮನವಿ ತಿರಸ್ಕರಿಸಿದ CJI ಸೂರ್ಯ ಕಾಂತ್..!

ಹೆಬ್ಬಾಳ ಕಿರು ಸುರಂಗ ಯೋಜನೆ "ಅವೈಜ್ಞಾನಿಕ": 1,350 ಕೋಟಿ ರೂ. ಸಾರ್ವಜನಿಕ ಹಣ ಪೋಲು: ಸಂಸದ ತೇಜಸ್ವಿ ಸೂರ್ಯ ಆಕ್ಷೇಪ

ನಾನೀಗ DCM, ಡಿಕೆ.ಶಿವಕುಮಾರ್ CM, ನಾಯಕತ್ವ ಬದಲಾವಣೆ ಪ್ರಶ್ನೆಯೇ ಇಲ್ಲ: ಡಾ. ಜಿ. ಪರಮೇಶ್ವರ್

ಶಕ್ತಿ, ಜ್ಞಾನ, ಸಂಸ್ಕೃತಿ, ಸಮಾನತೆಯ ಸಂಗಮ ಮೈಸೂರು ದಸರಾ: ಸಿಎಂ ಡಿಕೆ ಶಿವಕುಮಾರ್