'ಹಣದ ಕೊರತೆ ' ಎನ್ನುವ ರೋಗಕ್ಕೆ ಇಲ್ಲಿದೆ ಸರಳ 'ಮದ್ದು'! 
ಅಂಕಣಗಳು

'ಹಣದ ಕೊರತೆ ' ಎನ್ನುವ ರೋಗಕ್ಕೆ ಇಲ್ಲಿದೆ ಸರಳ 'ಮದ್ದು'!

ಜಗತ್ತಿನ ಬಹುಪಾಲು ಜನ ಹಣದ ಕೊರತೆಯಿಂದ ಬಳಲುವುದು ಸಾಮಾನ್ಯ ವಿಷಯವಾಗಿದೆ. ಹತ್ತು ಅಥವಾ ಹದಿನೈದು ಸಾವಿರ ರೂಪಾಯಿ ಸಂಬಳ ಪಡೆಯುವನಿಂದ ಲಕ್ಷಾಂತರ ಮಾಸಿಕ ಸಂಬಳ ಪಡೆಯುವ ವ್ಯಕ್ತಿಯದು ಅದೇ ಗೋಳು.

ಜಗತ್ತಿನ ಬಹುಪಾಲು ಜನ ಹಣದ ಕೊರತೆಯಿಂದ ಬಳಲುವುದು ಸಾಮಾನ್ಯ ವಿಷಯವಾಗಿದೆ. ಹತ್ತು ಅಥವಾ ಹದಿನೈದು ಸಾವಿರ ರೂಪಾಯಿ ಸಂಬಳ ಪಡೆಯುವನಿಂದ ಲಕ್ಷಾಂತರ ಮಾಸಿಕ ಸಂಬಳ ಪಡೆಯುವ ವ್ಯಕ್ತಿಯದು ಅದೇ ಗೋಳು. ಇಂತಹ ಸ್ಥಿತಿ ಏಕೆ ಬಂದಿತು? ಎನ್ನುವ ವಿಶ್ಲೇಷಣೆಗೆ ಹೋದರೆ ಅತ್ಯಂತ ಸಾಮಾನ್ಯವಾಗಿ ಕಂಡು ಬರುವ ವಿಷಯವೆಂದರೆ ‘ಆದ್ಯತೆ’ಯ ಕೊರತೆ ಮತ್ತು ನಮಗೇನು ಬೇಕು ಅಥವಾ ಬೇಡ ಎನ್ನುವ ಅರಿವು ಇಲ್ಲದೆ ಇರುವುದು ಸಾಮಾನ್ಯವಾಗಿ ಎಲ್ಲರೂ ಹಣಕಾಸಿನ ಕೊರತೆ ಎದುರಿಸಲು ಇರುವ ಮುಖ್ಯ ಕಾರಣ.
ನಮ್ಮ ಆಫೀಸಿನ ಹುಡುಗನ ಮಾಸಿಕ ವೇತನ ಹನ್ನೆರೆಡು ಸಾವಿರ ರೂಪಾಯಿ ಆತನ ಕೈಲಿರುವ ಮೊಬೈಲ್ ಬೆಲೆ ₹ 22 ಸಾವಿರ ರೂಪಾಯಿ. ಹೋಗಲಿ ಬಿಡಿ ಆತನಿಗೆ ಹಣಕಾಸಿನ ಅರಿವಿಲ್ಲ ಆರ್ಥಿಕ ಮೌಢ್ಯತೆಯಿಂದ ಬಳಲುತ್ತಿದ್ದಾನೆ ಎಂದು ಬಿಡಬಹದು. ನನಗೆ ಇನ್ನೊಬ್ಬರು ಐಟಿ ಕಂಪನಿಯಲ್ಲಿ ಕೆಲಸ ಮಾಡುವ ಉದ್ಯೋಗಿ ಮಿತ್ರರೊಬ್ಬರಿದ್ದಾರೆ ಅವರ ತಿಂಗಳ ಸಂಬಳ ಲಕ್ಷ ರೂಪಾಯಿ ಆದರೂ ಸದಾ ಋಣಾತ್ಮಕ ಮಾತು ಮುಖದಲ್ಲಿ ನೀರಸ ಭಾವ. ಕೊನೆಗೂ ನನ್ನ ಬಳಿ ತಮ್ಮ ಆರ್ಥಿಕತೆಯನ್ನು ಹೇಳಿಕೊಂಡರು. ಹೆಸರಿಗೆ ಲಕ್ಷ ಸಂಬಳ ಅದು ಬಂದ ಒಂದೆರಡು ದಿನವೂ ಅವರು ಅದರ ಮಾಲೀಕರಲ್ಲ. ಹತ್ತರಿಂದ ಹದಿನೈದು ಸಾವಿರ ಬಾಡಿಗೆಗೆ ಸಿಗುವ ಅಪಾರ್ಟ್ಮೆಂಟ್ ಅರವತ್ತು ಲಕ್ಷ ವ್ಯಯಿಸಿ ಕೊಂಡಿದ್ದಾರೆ. ಅದಕ್ಕೆಂದ್ದು ಪ್ರತಿ ತಿಂಗಳ ಕಂತು ಬರೋಬ್ಬರಿ ನಲವತ್ತು ಸಾವಿರ! ಕಾರಿಗೆ ಇನ್ನೊಂದು ಎಂಟು ಸಾವಿರ. ಇಬ್ಬರು ಮಕ್ಕಳ ಶಾಲೆಯ ಶುಲ್ಕ ತಿಂಗಳ ಲೆಕ್ಕದಲ್ಲಿ ಹತ್ತಿರತ್ತಿರ ಇಪ್ಪತ್ತು ಸಾವಿರ. ಪೆಟ್ರೋಲ್, ಮನೆ ಖರ್ಚು, ನಾಳಿನ ಅಸ್ಥಿರತೆಗಾಗಿ ಒಂದಷ್ಟು ಉಳಿತಾಯ ಮಾಡಬೇಕಲ್ಲವೇ? ಈ ಮಧ್ಯೆ ಯಾರಿಗಾದರೂ ಹುಷಾರು ತಪ್ಪಿದರೆ ಅದು ಇನ್ನೊಂದು ಕಥೆ.
ಮೇಲಿನ ಇಬ್ಬರು ವಿಭಿನ್ನ ವ್ಯಕ್ತಿಗಳ ಉದಾಹರಣೆ ಹೇಳಿದುದರ ಉದ್ದೇಶ ಇಷ್ಟೇ. ವ್ಯಕ್ತಿಯ ವೈಯಕ್ತಿಕ ಹಿನ್ನೆಲೆ ಏನೇ ಇರಲಿ ಹಣಕಾಸಿನ ವಿಷಯದಲ್ಲಿ ಅವರು ಸಮಾನರು . ಸಮಾಜದಲ್ಲಿ ಗಣ್ಯರು ಹೆಸರು ಮಾಡಿದವರು ಕೂಡ ಹಣಕಾಸಿನ ಮೌಢ್ಯತೆಯಿಂದ ಬಳಲುವುದು ನಾವು ಕಂಡಿದ್ದೇವೆ. ಚಿಕ್ಕಂದ್ದಿನಿಂದ ನಮ್ಮ ಹೆತ್ತವರು ಮಾಡಿದ್ದು ಸುತ್ತಮುತ್ತಲಿನ ಜನರ ನೋಡಿ ಕಲಿತದ್ದು ಅಷ್ಟು ಸಲುಭವಾಗಿ ಹೋಗುವುದಿಲ್ಲ.
ಆರ್ಥಿಕ ಸಾಕ್ಷರತೆ ಬರದೆ ಹಣಕಾಸಿನ ಕೊರತೆ ನೀಗುವುದಿಲ್ಲ. ಇದೊಂದು ಅತ್ಯಂತ ಸೂಕ್ಷ್ಮ ವಿಷಯವಾಗಿದೆ. ಒಂದು ಸಣ್ಣ ತಪ್ಪು ಜೀವನ ಪೂರ್ತಿ ಅನುಭವಿಸಬೇಕಾದೀತು ಎಚ್ಚರ. ಕೆಳಗಿನ ಕೆಲವು ಸಾಮಾನ್ಯ ಅಂಶಗಳನ್ನು ಪಾಲಿಸಿದ್ದೆ ಆದರೆ ಹಣಕಾಸಿನ ಮುಗ್ಗಟ್ಟಿನಿಂದ ನೀವು ಪಾರಾಗಬಹುದು.
  1. ಅವಶ್ಯಕತೆಯ ಆಧಾರದ ಮೇಲೆ ಖರ್ಚಿಗೆ ಆದ್ಯತೆ ನೀಡಿ. ಇವತ್ತಿನ ದಿನಗಳಲ್ಲಿ ಬಣ್ಣ ಬಣ್ಣದ ಜಾಹಿರಾತು ಎಂತವರನ್ನೂ ಸೆಳೆಯುತ್ತದೆ. ರಸ್ತೆಯ ಇಕ್ಕೆಲೆಗಳಲ್ಲಿ ಮೊಬೈಲ್ ಶಾಪ್ ಗಳದ್ದೆ ಸಾಮ್ರಾಜ್ಯ. ವ್ಯಕ್ತಿಯ ಸಂಬಳ ಎಷ್ಟಾದರೂ ಇರಲಿ ಅವರ ಕೈಲಿರುವ ಮೊಬೈಲ್ ಮಾತ್ರ ಹತ್ತಿಪ್ಪತ್ತು ಸಾವಿರಕ್ಕೆ ಕಡಿಮೆಯಿಲ್ಲ. ಬೇಡದ ವಿಷಯದ ಮೇಲೆ ವೆಚ್ಚ ಮಾಡಿ ಬೇಕಾದ ವಸ್ತು ಖರೀದಿಸಲು ಪರದಾಡುವ ಜನರ ಸಂಖ್ಯೆ ಹೆಚ್ಚು. ನೀವು ಅವರಿಗಿಂತ ಬಿನ್ನರಾಗಿ.
  2. ಮನೆ ಕೊಳ್ಳುವ ಮುಂಚೆ ಸಾವಿರ ಸಲ ಯೋಚಿಸಿ. ಅದೇ ಮನೆಯನ್ನು ಬಾಡಿಗೆಗೆ ಪಡೆದರೆ ಎಷ್ಟು ಹಣ, ಕೊಂಡರೆ ಎಷ್ಟು ಕಂತಿನ ಹಣ ಅನ್ನುವುದು ಮೊದಲು ತಿಳಿದುಕೊಳ್ಳಿ. ಎರಡರ ನಡುವೆ ಹೆಚ್ಚು ಅಂತರವಿರದಿದ್ದರೆ ಕೊಳ್ಳುವುದು ಒಳ್ಳೆಯದು. ಎಲ್ಲಕ್ಕೂ ಮುಖ್ಯ ಇಂದಿನ ಅಸ್ಥಿರ ದಿನಗಳಲ್ಲಿ ನಿಮ್ಮ ಕೆಲಸ ಒಂದೇ ನಗರದಲ್ಲಿ ಇರುತ್ತದೆ ಎನ್ನುವುದರ ಗ್ಯಾರಂಟಿ ಇಲ್ಲ. ಈ ಅಂಶವನ್ನು ಗಮನದಲ್ಲಿಡಿ. 2030 ರ ವೇಳೆಗೆ ಯೂರೋಪು ಮತ್ತು ಇತರ ಮುಂದುವರಿದ ದೇಶಗಳಲ್ಲಿ ಮನೆ ಕೊಳ್ಳುವುದು ‘ಔಟ್ ಡೇಟೆಡ್’ ಆಗಲಿದೆ. ಎಲ್ಲಿ ಕೆಲಸವಿದೆ ಅಲ್ಲಿ ದಿನದ ಬಾಡಿಗೆ, ವಾರದ ಬಾಡಿಗೆ ಅಥವಾ ತಿಂಗಳ ಬಾಡಿಗೆ ಆಧಾರದ ಮೇಲೆ ವಾಸಿಸಲು ಶುರು ಮಾಡುತ್ತಾರೆ. ಒಂದು ಸಣ್ಣ ಉದಾಹರಣೆ ನೋಡಿ ನನ್ನ ಪರಿಚಿತರೊಬ್ಬರು ಕೆಲಸ ಮಾಡುವುದು ಐಟಿಪಿಎಲ್ ನಲ್ಲಿ ಅದಕ್ಕೂ ಮುಂಚೆ ಪೀಣ್ಯದಲ್ಲಿ ಅವರ ಕೆಲಸ . ಮನೆಯನ್ನೂ ಹತ್ತಿರದಲ್ಲೇ ಕೊಂಡರು . ಈಗ ಅವರು ಐಟಿಪಿಎಲ್ ಓಡಾಡುವುದು ಅವರಿಗೆ ದುಃಸ್ವಪ್ನ . ಬಾಡಿಗೆ ಕೊಟ್ಟು ಹೋಗೋಣ ಅಂದರೆ ಇಲ್ಲಿ ೧೫ ಸಾವಿರದ ಮೇಲೆ ಒಂದು ರೂಪಾಯಿ ಬಾಡಿಗೆ ಬರುವುದಿಲ್ಲ . ಮಾಸಿಕ ಕಂತು ೪೭ ಸಾವಿರ ಕಟ್ಟಬೇಕು . ಸಾಲದಕ್ಕೆ ಐಟಿಪಿಎಲ್ ನಲ್ಲಿ ೨೫ ಸಾವಿರಕ್ಕೆ ಕಡಿಮೆ ಬಾಡಿಗೆ ಮನೆ ಸಿಕ್ಕುವುದಿಲ್ಲ . ಬೆಂಗಳೂರಿನಲ್ಲಿ ಹೀಗೆ ಬಳಲುವರ ಸಂಖ್ಯೆ ಲಕ್ಷದಲ್ಲಿದೆ . ಫ್ಲಾಟ್ ಮರು ಮಾರಾಟಕ್ಕೆ ಒಳ್ಳೆಯ ದರ ಕೂಡ ಸಿಕ್ಕುವುದಿಲ್ಲ . 
  3. ಅವಶ್ಯಕತೆ ಇದ್ದರೆ ಮಾತ್ರ ಕಾರು ಕೊಳ್ಳಿ. ಕಾರು ಮೇಂಟೈನ್ ಖರ್ಚು ಮತ್ತು ವಾರ್ಷಿಕ ಅದರ ಇನ್ಶೂರೆನ್ಸ್ ಖರ್ಚು, ಪಾರ್ಕಿಂಗ್ ಪರದಾಟ, ಟ್ರಾಫಿಕ್ ಜಂಜಾಟ ಇವನ್ನು ಗಮನಿಸಿದರೆ ಬಾಡಿಗೆ ಕಾರಿನಲ್ಲಿ ಓಡಾಡುವುದು ತುಂಬಾ ಉತ್ತಮ. ಬೆಂಗಳೂರಿಗರ ಮನೆಯ ಮುಂದೆ ಬೆಚ್ಚಗೆ ಕವರ್ ಹೊದ್ದು ಕೂತ ಕಾರಗಳ ಸಂಖ್ಯೆ ಬಹಳ ಹೆಚ್ಚು. ವಾರಕ್ಕೆ ಒಮ್ಮೆ ಕಾರು ತೆಗೆಯುವರ ಸಂಖ್ಯೆಯೂ ಬಹಳ ಹೆಚ್ಚು. ಕಾರಿನ ಮೇಲಿನ ಹತ್ತು ಲಕ್ಷ ಅಥವಾ ಅದಕ್ಕೂ ಹೆಚ್ಚು ರಸ್ತೆಯಲ್ಲಿ ಸುಮ್ಮನೆ ಬಿದ್ದಿರುತ್ತದೆ ಮತ್ತು ಅದಕ್ಕೆ ನಿಮ್ಮ ಖಾತೆಯಿಂದ ಮಾಸಿಕ ಬಡ್ಡಿ ಸಮೇತ ಕಂತು ಹೋಗುತ್ತಿರುತ್ತದೆ.
  4. ಖರ್ಚು ಮಾಡಿ ನಂತರ ಮಿಕ್ಕಿದ್ದು ಉಳಿಸುವ ಜನರೇ ಜಾಸ್ತಿ ನೀವು ಅವರಲೊಬ್ಬರಾಗಬೇಡಿ. ನಿಮ್ಮ ಆದಾಯದ ಇಪ್ಪತ್ತು ಅಂಶ ಮೊದಲು ಉಳಿಸಿ ನಂತರ ಉಳಿದ ಹಣದಲ್ಲಿ ನಿಮ್ಮ ಬಜೆಟ್ ಹಾಕಿ.
  5. ಸಾಲ ಎನ್ನುವುದು ಒಂದು ವಿಷ ವರ್ತುಲ. ಬೇರೆ ದಾರಿಯೇ ಇಲ್ಲ ಎಂದಾಗ ಮಾತ್ರ ಸಾಲ ಮಾಡಬೇಕು ಅದೂ ಮಿತಿಯಲ್ಲಿ. ಸಾಲ ವಿಲ್ಲದಿದ್ದರೆ ನಿಮ್ಮ ಹಣಕಾಸು ಉತ್ತಮ ಮಾರ್ಗದಲ್ಲಿದೆ ಎನ್ನಬಹದು.
  6. ವರ್ಷ ಎನ್ನುವುದು ಹೇಗೆ ಕಳೆದು ಹೋಗುತ್ತದೆ ಎನ್ನವುದು ತಿಳಿಯುವುದೇ ಇಲ್ಲ. ನಾಳಿನ ನಿಮ್ಮ ಬದುಕಿಗೆ, ಮಕ್ಕಳ ಭವಿಷ್ಯಕ್ಕೆ ಉಳಿತಾಯ ಒಂದೇ ಸಾಲದು, ಹೂಡಿಕೆ ಕೂಡ ಬಹಳ ಮುಖ್ಯ. ಮಧ್ಯಮ ವರ್ಗ ಷೇರು ಮಾರುಕಟ್ಟೆಯ ಓನಾಮ ತಿಳಿಯದೆ ಏಜೆಂಟ್ ಹೇಳಿದ ಎಂದು ಹೂಡಿಕೆ ಮಾಡುವುದು ಈ ದಿನಗಳಲ್ಲಿ ಹೆಚ್ಚಾಗುತ್ತಿದೆ. ಅದರಲ್ಲೂ ಐಟಿಯಲ್ಲಿ ಕೆಲಸ ಮಾಡುವರು ಸಿಪ್ ಅಥವಾ ಸಿಟ್ ನಲ್ಲಿ ಹೂಡಿಕೆಮಾಡುವುದು ಬುದ್ದಿವಂತರ ಲಕ್ಷಣ ಎಂದೇ ತಿಳಿದಿದ್ದಾರೆ. ಸರಿಯಾದ ಹೂಡಿಕೆ ಬಹಳ ಮುಖ್ಯ.
ಸುತ್ತಿ ಬಳಸಿ ಕೊನೆಗೆ ಬಂದು ನಿಲ್ಲುವುದು ಅದೇ ಹಳೆಯ ಜಾಗಕ್ಕೆ ‘ಹಾಸಿಗೆ ಇದ್ದಷ್ಟು ಕಾಲು ಚಾಚು ‘ ಎನ್ನುವ ಹಳೆಯ ಮಂತ್ರಕ್ಕೆ. ನಾವು ಇನ್ನು ದುಡಿಯದೆ ಇರುವ ಹಣವನ್ನು ಮುಂಚೆಯೇ ಖರ್ಚು ಮಾಡುವುದು ಹೇಗೆ? ಆದರೀಗ ಅದು ಸಾಮಾನ್ಯ ಎನ್ನುವಂತೆ ಆಗಿದೆ. ಮನೆಯೇ ಇರಲಿ ಕಾರೆ ಇರಲಿ ಹಣವಿಲ್ಲದಿದ್ದರೆ ಸಾಲ ಮಾಡಿ ಅವುಗಳನ್ನು ಖರೀದಿಸುವುದು ಲಾಂಗ್ ಟರ್ಮ್ ನಲ್ಲಿ ಕೊರಳಿಗೆ ಉರುಳಾದೀತು ಎಚ್ಚರ.ಸದ್ಯದ ಪರಿಸ್ಥಿತಿಯಲ್ಲಿ ರಿಯಲ್ ಎಸ್ಟೇಟ್ ಮೇಲಿನ ಹೂಡಿಕೆ ಉತ್ತಮವಲ್ಲ . 
ಕೊನೆ ಮಾತು: ಯಾರು ಎಷ್ಟೇ ಸಲಹೆ ನೀಡಲಿ ಅದನ್ನು ಪಾಲಿಸುವುದು ನಿಮ್ಮ ಕೈಲಿದೆ. ಕಾರ್ಪೊರೇಟ್ ವಲಯದಲ್ಲಿ ಕೆಲಸ ಕಡಿತ ಎನ್ನುವ ಕೂಗು ಹೆಚ್ಚಾಗುತ್ತಿದೆ. ಒಂದು ವಲಯ ಕುಸಿದರೆ ಅದು ಇನ್ನೊಂದು ವಲಯದ ಮೇಲೆ ಪರಿಣಾಮ ಬೀರುತ್ತದೆ. ಮುಂದಿನ ದಿನಗಳು ಇನ್ನಷ್ಟು ಅಸ್ಥಿರತೆ ಆಂತಕ ಹೊತ್ತು ತರಲಿವೆ. ಹೊಸ ಕೆಲಸದ ಸೃಷ್ಟಿಯಾಗುತ್ತಿಲ್ಲ ಎನ್ನುವ ಆತಂಕ ಬೇರೆ . ಕೆಲಸ ಮಾಡುತ್ತೇನೆ ಎನ್ನುವ ಮನಸಿದ್ದವರಿಗೆ ಕೆಲಸ ಸದಾ ಇದ್ದೆ ಇರುತ್ತದೆ . ಒಂದಷ್ಟು ಹೆಚ್ಚಿನ ತಯಾರಿ ಜೊತೆಗೆ ಮೇಲೆ ಹೇಳಿದ ಮೂಲಭೂತ ಅಂಶಗಳನ್ನ ಪಾಲಿಸಿದರೆ ಜಗತ್ತಿನ ಬದಲಾವಣೆಗಳ ಭರಾಟೆಯ ನೋವು ಸ್ವಲ್ಪವಾದರೂ ಕಡಿಮೆಯಾದೀತು !. 
- ರಂಗಸ್ವಾಮಿ ಮೂಕನಹಳ್ಳಿ
muraram@yahoo.com

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಇಬ್ಬರು ಕೇಂದ್ರ ಸಚಿವರು ಸೇರಿದಂತೆ 75 ಸದಸ್ಯರ GBA ಸೆ. 2 ರಿಂದ ಅಸ್ತಿತ್ವಕ್ಕೆ: ಯತೀಂದ್ರ ಸಿದ್ದರಾಮಯ್ಯಗೂ ಸ್ಥಾನ!

ಜಮ್ಮುವಿನಾದ್ಯಂತ ಭಾರಿ ಮಳೆ: ಅಪಾರ ಪ್ರಮಾಣದ ಹಾನಿ, 10 ಮಂದಿ ಸಾವು: ಕೊಚ್ಚಿ ಹೋದ ರಸ್ತೆ, ಸೇತುವೆಗಳು!

ಫೈಟರ್ ಜೆಟ್‌ ಇಂಜಿನ್ ಖರೀದಿ: ಅಮೆರಿಕಾದ GE ಸಂಸ್ಥೆಯೊಂದಿಗೆ $1 ಬಿಲಿಯನ್ ಮೊತ್ತದ ಒಪ್ಪಂದಕ್ಕೆ ಭಾರತ ಸಿದ್ಧತೆ!

ಡಿಕೆಶಿ ಕ್ಷಮೆ ಕೇಳಬಾರದಿತ್ತು; ಮುಲಾಜಿಲ್ಲದೆ ಕಾಂಗ್ರೆಸ್ ಪಕ್ಷದ ಸದಸ್ಯತ್ವಕ್ಕೆ ರಾಜೀನಾಮೆ ಬಿಸಾಕಬೇಕಿತ್ತು- ಆರ್. ಅಶೋಕ್

ಸುಂಕ ಸಮರ: Trump 4 ಬಾರಿ ಕರೆ ಮಾಡಿದರೂ ಉತ್ತರಿಸದ PM Modi; ಅಮೆರಿಕ ನಿಯೋಗಕ್ಕೂ No Entry!

SCROLL FOR NEXT