ವಿತ್ತ ಜಗತ್ತಿಗೆ ವಿನಿಮಯವೇ ಬುನಾದಿ! 
ಅಂಕಣಗಳು

ವಿತ್ತ ಜಗತ್ತಿಗೆ ವಿನಿಮಯವೇ ಬುನಾದಿ! 

ಹಣಕ್ಲಾಸು-ರಂಗಸ್ವಾಮಿ ಮೂಕನಹಳ್ಳಿ

'ದುಡ್ಡೇ ದೊಡಪ್ಪ', 'ಹಣವಿದ್ದವನಿಗೆ ಜಗತ್ತು'  'ಮನಿ ಮೇಕ್ಸ್ ದಿ ವರ್ಲ್ಡ್ ಗೋ ಅರೌಂಡ್' ಎಂದು ಹಿರಿಯರೋ, ಸ್ನೇಹಿತರೋ ಹೇಳುವುದು ನೀವು ಬಹಳಷ್ಟು ಬಾರಿ ಕೇಳಿರುತ್ತೀರಿ. ಹೌದು ಅವರು ಹೇಳುವುದು ನಿಜ. ಇವತ್ತು 'ಹಣ'ವಿಲ್ಲದೆ ಯಾವುದೇ ಕೆಲಸ-ಕಾರ್ಯ ನಡೆಯುವುದನ್ನು ಊಹಿಸಿಕೊಳ್ಳಲು ಸಾಧ್ಯವಿಲ್ಲ. ಜಗತ್ತನ್ನೇ ಆಕ್ರಮಿಸಿರುವ ಇಂತಹ ಹಣದ ಸೃಷ್ಟಿಗೆ ಮುಂಚೆ ನಮ್ಮ ಹಿರಿಯರು ಹೇಗೆ ಬದುಕಿದ್ದರು? ವಿನಿಮಯ ಮಾಧ್ಯಮವಾಗಿ ಹಣವಲ್ಲದಿದ್ದರೆ ಇನ್ನೇನೋ ಇರಲೇಬೇಕಲ್ಲವೇ? ಅದೇನು? ಜಗತ್ ಪ್ರಸಿದ್ಧ 'ಇಂಕನ್' ನಾಗರಿಕತೆ ಹಣ ಬಿಡಿ, ಇತರ ಯಾವುದೇ ಸರುಕು ಇಲ್ಲದೆ ಮಹಾನ್ ಸಾಮ್ರಾಜ್ಯ ಹೇಗೆ ಕಟ್ಟಿತು? ಇವುಗಳನ್ನು ತಿಳಿಯುವ ಪುಟ್ಟ ಪ್ರಯತ್ನ ಮಾಡೋಣ ಬನ್ನಿ. 

ನಮಗೆಲ್ಲಾ ತಿಳಿದಿರುವಂತೆ ಹಣ ಅಲ್ಲದಿದ್ದರೆ ಮತ್ತೇನೋ ಕೂಡು-ಕೊಳ್ಳುವಿಕೆಗೆ ಮಾಧ್ಯಮವಾಗಿ ವರ್ತಿಸಲು ಬೇಕೇ ಬೇಕು. ಇಂದಿನ ಪೇಪರ್ ಹಣ/ಕರೆನ್ಸಿಗೆ ಮುಂಚೆ ಯಾವೆಲ್ಲಾ ವಸ್ತುಗಳು ವಿನಿಮಯ ಮಾಧ್ಯಮವಾಗಿ ಬಳಸಪಟ್ಟಿದ್ದವು ಗೊತ್ತೇ?

  1. ಬ್ಯಾಟ್ ಗ್ವಾನೊ: ದಕ್ಷಿಣ ಅಮೇರಿಕಾ ದೇಶಗಳ ಕೆಲವು ಗುಹೆಗಳಲ್ಲಿ ಸಮುದ್ರ ಪಕ್ಷಿ ಅಥವಾ ಬ್ಯಾಟ್ (ಬಾವಲಿ) ನ ಹಿಚಿಕೆ ಸಂಗ್ರಹವಾಗುತ್ತಿತ್ತು. ಇದನ್ನ ಅಂದಿನ ಜನ ಬೆಳೆ ಬೆಳೆಯಲು ಗೊಬ್ಬರದಂತೆ ಬಳಸುತ್ತಿದ್ದರು. ಇದರ ಬೇಡಿಕೆ ಮತ್ತು ಪೂರೈಕೆಗಳ ನಡುವಿನ ಅಂತರದಿಂದ ಇದನ್ನ ವಿನಿಮಯ ಮಾಧ್ಯಮವಾಗಿ ಅಂದಿನ ಜನ ಒಪ್ಪಿರಬಹುದು. 
  2. ರಕ್ತ: ಆಶ್ಚರ್ಯ ಅನಿಸಿದರೂ ನಿಜ, ರಕ್ತ ಕೂಡ ವಿನಿಮಯ ಮಾಧ್ಯಮವಾಗಿತ್ತು. ಇಂದಿಗೂ ರಕ್ತ ನೀಡಿದರೆ ಹಣ ನೀಡುವ ಬ್ಲಡ್ ಬ್ಯಾಂಕ್ಗಳಿವೆ. 
  3. ಮಸಾಲೆ ಪದಾರ್ಥಗಳು: ಎಲ್ಲಾ ಮಾಸಲೆ ಪದಾರ್ಥಗಳು ವಿನಿಮಯ ಮಾಧ್ಯಮವಾಗಿ ರಾಜರಂತೆ ಮೆರೆದ ಉದಾಹರಣೆ ಇತಿಹಾಸದ ಪುಟಗಳಲ್ಲಿ ದಾಖಲಾಗಿದೆ. ಜಾಯಿಕಾಯಿ (ಆಡು ಭಾಷೆಯಲ್ಲಿ ಜಾಕಾಯಿ) ಮೇಲಿನ ಹಿಡಿತ/ಸ್ವಾಮ್ಯಕ್ಕಾಗಿ ಘೋರ ಯುದ್ಧವೇ ನಡೆದು ಹೋಗಿದೆ. ಪಕ್ಕದ ಇಂಡೋನೇಷ್ಯಾದಲ್ಲಿರುವ 'ರನ್' ಎನ್ನುವ ದ್ವೀಪದ ಮೇಲಿನ ಅಧಿಪತ್ಯಕ್ಕಾಗಿ ನಡೆದ ಯುದ್ಧ ಇತಿಹಾಸದ ಪುಟಗಳ ಕೆದುಕುತ್ತಾ ಹೋದರೆ ವಿಸ್ತಾರವಾಗಿ ತೆಗೆದುಕೊಳ್ಳುತ್ತಾ ಹೋಗುತ್ತದೆ. 
  4. ಬೆಳ್ಳಿ: ನಾಗರೀಕತೆ ಬೆಳೆದಂತೆ ಲೋಹಗಳು ವಿನಿಮಯ ಮಾಧ್ಯಮವಾಗಿ ಉಪಯೋಗಿಸಲ್ಪಡಲು ಶುರುವಾದಾವು. ತಾಮ್ರ, ಬೆಳ್ಳಿ, ಬಂಗಾರ ಲೋಹಗಳ ಪಟ್ಟಿಯಲ್ಲಿ ಮುಖ್ಯ ಸ್ಥಾನ ಪಡೆಯುತ್ತವೆ. ಯಾವುದರ ಸಿಗುವಿಕೆ ವಿರಳವೋ ಅವು ಹೆಚ್ಚು ಮಾನ್ಯತೆ ಪಡೆಯುತ್ತಿದ್ದವು. ಹೀಗಾಗಿ ಲೋಹಗಳು ವಿನಿಮಯ ಮಾಧ್ಯಮವಾಗಿ ಜನಪ್ರಿಯಗೊಂಡವು.  
  5. ಚರ್ಮದ ನಡು ಪಟ್ಟಿ (ಬೆಲ್ಟ್): ಸಿಂಹ, ಹುಲಿ, ಜಿಂಕೆ ಇವುಗಳಿಂದ ಮಾಡಿದ ಕಂಬಳಿ (ಕಾರ್ಪೆಟ್), ನಡುಪಟ್ಟಿ (ಬೆಲ್ಟ್) ಅಲ್ಲದೆ ಗುಂಡಾಗಿ ನಾಣ್ಯದ ರೀತಿಯಲ್ಲಿ ಕತ್ತರಿಸಿದ ರಾಜ್ಯ ಲಾಂಛನ ಹೊಂದಿದ ಚರ್ಮದ ತುಂಡುಗಳು ಕೂಡ ವಿನಿಮಯ ಮಾಧ್ಯಮವಾಗಿ ಬಳಸಲ್ಪಟ್ಟಿವೆ. 
  6. ಟೀ ಸೊಪ್ಪು: ಟೀ ಸೊಪ್ಪು ವಿನಿಮಯ ಮಾಧ್ಯಮವಾಗಿ ಪ್ರಚಲಿತ ಸಮಯದಲ್ಲಿ ಟೀ ಬೆಳೆಯುವ ಪ್ರದೇಶಗಳ ಮೇಲಿನ ಏಕಸ್ವಾಮ್ಯಕ್ಕಾಗಿ ಅಂದಿನ ಜನಾಂಗಗಳ ನಡುವೆ ಬಹಳಷ್ಟು ಕದನಗಳು ನಡೆದಿವೆ. 
  7. ಹೊಳೆಯುವ ಕಲ್ಲುಗಳು (ಪ್ರೆಶಿಯಸ್ ಸ್ಟೋನ್ಸ್): ವಜ್ರ ಒಳಗೊಂಡು ನೂರಾರು ತರಹದ ಹೊಳೆಯುವ ಕಲ್ಲುಗಳನ್ನು ವಿನಿಮಯ ಮಾಧ್ಯಮವಾಗಿ ಜನರು ಉಪಯೋಗಿಸುತ್ತಿದ್ದರು. ನಿಗದಿತ ತೂಕ ಮತ್ತು ಆಕಾರದಲ್ಲಿ ಅವುಗಳನ್ನ ವಿಭಜಿಸಿ ವಿನಿಮಯದಲ್ಲಿ ಬಳಸಲು ನಮ್ಮ ಹಿಂದಿನವರು ಕಲಿತ್ತಿದ್ದರು. 
  8. ಬಂಗಾರ: ಈ ಹಳದಿ ಲೋಹದ ಬಗೆಗಿನ ಮೋಹ ಮಾತ್ರ ಮಿಕ್ಕೆಲ್ಲಾ ವಿನಿಮಯ ಮಾಧ್ಯಮಗಳಿಂತ ಒಂದು ಕೈಹೆಚ್ಚು. ಮೊಟ್ಟ ಮೊದಲ ಬಾರಿಗೆ ಕ್ರಿಸ್ತ ಪೂರ್ವ 550ರ ವೇಳೆಯಲ್ಲಿ ಇಂದಿನ ಟರ್ಕಿ ದೇಶದಲ್ಲಿ ಬಂಗಾರವನ್ನ ವಿನಿಮಯ ಮಾಧ್ಯಮವನ್ನಾಗಿ ಬಳಸಿದ್ದಾಗಿ ಚರಿತ್ರೆಯಲ್ಲಿ ಉಲ್ಲೇಖವಿದೆ.  19 ನೇ ಶತಮಾನದ ವೇಳೆಗೆ ಜಗತ್ತಿನ ಬಹುತೇಕ ದೇಶಗಳು ಪೇಪರ್ ಕರೆನ್ಸಿಯನ್ನ ವಿನಿಮಯ ಮಾಧ್ಯಮವನ್ನಾಗಿ ಬಳಸುತ್ತಿದ್ದವು. ಆದರೂ ಬಂಗಾರದ ಮೇಲಿನ ಮೋಹ ಮಾತ್ರ ಇಳಿಯಲಿಲ್ಲ. ಅಂದರೆ ಮೂಲ ಬಂಗಾರವೇ! ಸರಳವಾಗಿ ಹೇಳಬೇಕೆಂದರೆ ಪೇಪರ್ ಹಣ ಮುದ್ರಿಸಲು ನಿಗದಿತ ಮಟ್ಟದ ಬಂಗಾರ ಇರಬೇಕಿತ್ತು. ಇದನ್ನ ಗೋಲ್ಡ್ ಸ್ಟ್ಯಾಂಡರ್ಡ್ ಎಂದು ಕರೆಯಲಾಗುತ್ತದೆ. ಅಂದರೆ 1೦೦ ರೂಪಾಯಿ ಮೌಲ್ಯದ ನೋಟು ಮುದ್ರಿಸಿದರೆ ಬ್ಯಾಂಕ್ ನ ಬಳಿ ನೂರು ರೂಪಾಯಿ ಮೌಲ್ಯದ ಬಂಗಾರ ಇರಬೇಕಿತ್ತು. ಹೀಗೆ ನೂರಕ್ಕೆ ನೂರು ಗೋಲ್ಡ್ ಠೇವಣಿ ಕುಸಿಯುತ್ತ ಬಂದು, ಎರಡನೇ ಮಹಾಯುದ್ಧದ ನಂತರ ಅಮೇರಿಕಾ ದೇಶವು ನೋಟ್ ಮುದ್ರಿಸಲು ಗೋಲ್ಡ್ ಸ್ಟ್ಯಾಂಡರ್ಡ್ ಅನ್ನು ತೆಗೆದು ಹಾಕಿದೆ. ಮೌಲ್ಯ ಅಳೆಯಲು ಯಾವುದೇ ಮಾನದಂಡ ಇಲ್ಲದ ಅಮೇರಿಕಾ ಡಾಲರ್ ಇಂದು ವಿತ್ತ ಜಗತ್ತನ್ನ ಆಳುತ್ತಿರುವುದು ಜಗತ್ತಿನ ವಿಪರ್ಯಾಸಗಳಲ್ಲೊಂದು.     

ಉಪ್ಪು,ಬಾರ್ಲಿ,ಮೀನು,ತಾಮ್ರ, ಅಕ್ಕಿ, ಬಟ್ಟೆ (ಟೆಕ್ಸ್ಟ್ ಟೈಲ್) ಜಾನುವಾರುಗಳು ಕೂಡ ವಿನಿಮಯ ಮಾಧ್ಯಮವಾಗಿ ಬಳಸಿದ್ದಕ್ಕೆ ಸಾಕ್ಷಿ ಹೇರಳವಾಗಿ ಸಿಗುತ್ತದೆ. ಇವಿಷ್ಟೇ ಅಲ್ಲದೆ ಸಮುದ್ರದಲ್ಲಿ ಸಿಗುವ ಮುತ್ತು, ಹವಳ, ಶಂಖದ ಚಿಪ್ಪು ಕೂಡ ವಿನಿಮಯ ಮಾಧ್ಯಮವಾಗಿ ಚಾಲ್ತಿಯಲ್ಲಿದ್ದದ್ದಕ್ಕೆ ಇತಿಹಾಸದಲ್ಲಿ ಸಾಕ್ಷಿ ಸಿಗುತ್ತದೆ. ನಾಗರೀಕತೆ ನಾಚುವಂತೆ ಮಾಡುವ 'ಜೀತ ಪದ್ಧತಿ' ಕೂಡ ಒಂದು ರೀತಿಯ ವಿನಿಮಯ ಮಾಧ್ಯಮವೇ! ಮನುಷ್ಯರನ್ನ ಇನ್ನೇನೋ ಬೇಕಾದ ವಸ್ತು ಪಡೆಯಲು ಗುಲಾಮರಂತೆ ಮಾರುವುದು ಕೂಡ ಒಂದು ರೀತಿಯ ವಿನಿಮಯದ ಅಡಿಯಲ್ಲಿಯೇ ಬರುತ್ತದೆ. ಮದ್ದು-ಗುಂಡುಗಳ, ಶಸ್ತ್ರಾಸ್ತ್ರಗಳನ್ನು ಬಹಳ ಹಿಂದಿಯೇ ರಾಜ-ಮಹಾರಾಜರು ವಿನಿಮಯ ಮಾಧ್ಯಮವನ್ನಾಗಿ ಬಳಸುತ್ತಿದ್ದರು. 

ಹಣದ ಬದಲು ಸೇವೆಯನ್ನೇ ಮುಖ್ಯವಾಗಿಸಿ ಮಹಾನ್ ಸಾಮ್ರಾಜ್ಯ ಕಟ್ಟಿದ್ದು ಇಂಕಾ ನಾಗರಿಕತೆಯ ವಿಶಿಷ್ಟತೆ. 

ಇಂಕಾ ನಾಗರಿಕತೆ ಬಗ್ಗೆ ಕೇಳದವರು ಯಾರು? ಇಂಕಾ ಎಂದ ತಕ್ಷಣ ನೆನಪಿಗೆ ಬರುವುದು ದಕ್ಷಿಣ ಅಮೆರಿಕಾದ 'ಪೆರು' ದೇಶ. ಆದರೆ ಇದು ಪೆರು ವಷ್ಟೇ ಅಲ್ಲ, ಬೊಲಿವಿಯಾ, ಈಕ್ವಾಡೋರ್, ಮಧ್ಯ ಚಿಲಿ, ಉತ್ತರ ಅರ್ಜೆಂಟೀನಾ, ದಕ್ಷಿಣ ಕೊಲಂಬಿಯಾಗಳನ್ನ ಒಳಗೊಂಡ ಒಂದು ಮಹಾನ್ ಸಾಮ್ರಾಜ್ಯವಾಗಿತ್ತು. ಇಂತಹ ಇಂಕಾ ಜನರು ವಿನಿಮಯವನ್ನಾಗಿ ಯಾವುದೇ ವಸ್ತು ಬಳಸದೆ ಅಂದಿನ ಸಂಪದ್ಭರಿತ ಮತ್ತು ದೊಡ್ಡ ನಾಗರಿಕತೆ ಕಟ್ಟುವಲ್ಲಿ ಯಶಸ್ವಿಯಾಗಿದ್ದರು ಎನ್ನುವುದು ಇಂದಿಗೆ ನಂಬಲು ಅಸಾಧ್ಯ! ಆದರೆ ಆ ಜನಾಂಗ ಹಣ ಅಥವಾ ಇನ್ನ್ಯಾವುದೇ ಶೇಖರಿಸಲ್ಪಡುವ ವಸ್ತುಗಳನ್ನ ವಿನಿಮಯ ಮಾಧ್ಯಮವನ್ನಾಗಿ ಬಳಸದೆ ಸಾರ್ಥಕ ಬದುಕ ಬದುಕಿದ ನಿದರ್ಶನ ನಮ್ಮ ಮುಂದಿದೆ. ಇಂಕಾ ಸಾಮ್ರಾಜ್ಯದ ನೆರೆ ಹೊರೆಯಲ್ಲಿ ಇದ್ದ ಅಸ್ಟಕ್ ಮತ್ತು ಮಾಯನ್ನರು ಹುರಳಿ ಬೀಜವನ್ನ ಮತ್ತು ಬಟ್ಟೆಯನ್ನ ವಿನಿಮಯ ಮಾಧ್ಯಮವನ್ನಾಗಿ ಬಳಸುತ್ತಿದ್ದರು ಆದರೆ ಇಂಕನ್ನರು ಮಾತ್ರ ಇಂತಹ ವಿಷಯಗಳಿಗೆ ತಲೆ ಕೆಡೆಸಿಕೊಳ್ಳದೆ ತಮ್ಮದೇ ಆದ 'ಮಿತ' ಎನ್ನುವ ಪದ್ಧತಿಯನ್ನ ಚಾಲ್ತಿಗೆ ತಂದಿದ್ದರು. ಅದರ ಪ್ರಕಾರ 15 ವರ್ಷ ತುಂಬಿದ ಪ್ರತಿ ಇಂಕಾ ಪುರುಷ ದೇಶಕ್ಕಾಗಿ ಕೆಲಸ ಮಾಡಬೇಕಿತ್ತು. ಎಷ್ಟು ಕೆಲಸವಿದೆ ಎನ್ನುವುದರ ಮೇಲೆ ವರ್ಷದಲ್ಲಿ ಎಷ್ಟು ದಿನ ಕೆಲಸ ಮಾಡಬೇಕು ಎನ್ನುವುದರ ನಿರ್ಧಾರವಾಗುತ್ತಿತ್ತು. ಹೆಚ್ಚೆಂದರೆ ವರ್ಷದ 7೦ ಭಾಗ ಕೆಲಸ ಉಳಿದ 3೦ ಭಾಗ ವಿಶ್ರಾಂತಿ. ಇದಕ್ಕೆ ಬದಲಾಗಿ ವಾಸಿಸಲು ಕಟ್ಟಡ, ಉಡಲು ಬಟ್ಟೆ, ಸೇವಿಸಲು ಆಹಾರ, ವಿಹಾರಕ್ಕೆ ಉತ್ತಮ ರಸ್ತೆ ಹೀಗೆ ಬದುಕಲು ಏನು ಬೇಕೋ ಅವೆಲ್ಲವೂ ಪುಕ್ಕಟೆ ಸಿಗುತಿತ್ತು. ಮನೋದೈಹಿಕ ಸ್ಥಿತಿಗೆ ಅನುಗುಣವಾಗಿ ಕೆಲಸ ಹಂಚಲಾಗುತ್ತಿತ್ತು. ಅದೊಂತರಹ 'ಎಲ್ಲವೂ ಎಲ್ಲರಿಗೆ ಸೇರಿದ್ದು' ಎನ್ನುವ ಭಾವನೆ ಮೇಲೆ ಕಟ್ಟಲ್ಪಟ್ಟ ನಾಗರಿಕತೆ. 

ಸೂಕ್ಷ್ಮವಾಗಿ ನೋಡಿದರೆ ಇಲ್ಲಿಯೂ ವಿನಿಮಯ ಉಂಟು ಅದರೆ ಅದು ಕಣ್ಣಿಗೆ ಕಾಣುವ ರೂಪದಲ್ಲಿ ಇಲ್ಲ ಅಷ್ಟೇ. ಇಲ್ಲಿ 'ಸೇವೆ' (ಸರ್ವಿಸ್) ಯೇ  ವಿನಿಮಯ. ಸೇವೆ ಸಂಗ್ರಹಿಸಿಡಲು ಆಗದ ಇರುವ ವಿನಿಮಯ ಹೀಗಾಗಿ ಆ ನಾಗರಿಕತೆ ಹೆಚ್ಚು ಸಂತೋಷದಿಂದ ಬದುಕಲು ಸಾಧ್ಯವಾಯಿತು. ಸಂಗ್ರಹಿಸಿ ಇಡಬಹುದಾದ ಯಾವುದೇ ವಿನಿಮಯ ಬದುಕಲ್ಲಿ ಬೇಕಿಲ್ಲದ ಪೈಪೋಟಿ ಅಲ್ಲದೆ ಮತ್ತೇನೂ ನೀಡದು. ಆದರೂ ನಮಗೆ ಹಣದ ಮೇಲಿನ ವ್ಯಾಮೋಹ ಮಾತ್ರ ಕಡಿಮೆಯಾಗುವ ಲಕ್ಷಣಗಳು ಮಾತ್ರ ಕಾಣುತ್ತಿಲ್ಲ. ಇಂಕನ್ ನಾಗರಿಕತೆಯಿಂದ ನಾವು ಕಲಿಯುವುದು ಬೇಕಾದಷ್ಟಿದೆ. ಆದರೆ ಅದರ ಅನುಷ್ಠಾನ ನಮ್ಮ ಮುಂದಿರುವ ಬಹುದೊಡ್ಡ ಸವಾಲು.

- ರಂಗಸ್ವಾಮಿ ಮೂಕನಹಳ್ಳಿ
muraram@yahoo.com

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

CM ಬದಲಾವಣೆ ನಾಲ್ಕರಿಂದ ಐದು ಜನರ ನಡುವೆ ನಡೆದ "ರಹಸ್ಯ ಒಪ್ಪಂದ": ಡಿಕೆಶಿ​ ಸ್ಫೋಟಕ ಹೇಳಿಕೆ

ವಿಶ್ವಕಪ್ ವಿಜೇತ ಅಂಧ ಕರ್ನಾಟಕದ ಆಟಗಾರ್ತಿಯರಿಗೆ ತಲಾ 10 ಲಕ್ಷ ನಗದು, ಸರ್ಕಾರಿ ಉದ್ಯೋಗ: ಸಿಎಂ ಸಿದ್ದರಾಮಯ್ಯ ಘೋಷಣೆ

ಸ್ಮೃತಿ ಮಂಧಾನ ಮದುವೆ ಮುಂದೂಡಿಕೆಗೆ ಅಸಲಿ ಕಾರಣ? ಮತ್ತೊಂದು ಹೆಣ್ಣಿನೊಂದಿಗೆ ಮೋಹ, ನಂಬಿಕೆ ದ್ರೋಹ; ಬಯಲಾಯ್ತು ಪಲಾಶ್'ನ ಅಸಲಿ ರಂಗಿನಾಟ!

ಬರವಣಿಗೆಯಲ್ಲಿ ಖುಷಿ ಕಂಡ ಪೊಲೀಸ್ ಅಧಿಕಾರಿ: 'ಬಸವಣ್ಣನ ವಚನ' ಗಳನ್ನು ಇಂಗ್ಲೀಷ್ ಗೆ ಅನುವಾದ ಮಾಡ್ತಿರೋ DYSP ಬಸವರಾಜ್ ಯಲಿಗಾರ್!

ರಾಜ್ಯದಲ್ಲಿ ಸಿಎಂ ಗದ್ದುಗೆ ಗುದ್ದಾಟ: ಎಲ್ಲ ಗೊಂದಲಗಳಿಗೆ ಹೈಕಮಾಂಡ್ ತೆರೆ ಎಳೆಯಬೇಕು- ಸಿಎಂ ಸಿದ್ದರಾಮಯ್ಯ

SCROLL FOR NEXT