ಸ್ಕಿಜೋಫ್ರೀನಿಯಾ 
ಅಂಕಣಗಳು

ಸ್ಕಿಜೋಫ್ರೀನಿಯಾ - ಮನೋರೋಗಿಗಳಿಗೆ ಪುನರ್ವಸತಿಯ ಅಗತ್ಯ

ಡಾ. ಸಿ.ಆರ್. ಚಂದ್ರಶೇಖರ್"ಐದು ವರ್ಷಗಳ ಹಿಂದೆ ನಮ್ಮ ಮಗ ಚೆನ್ನಾಗಿದ್ದ , ಬುದ್ಧಿವಂತನಾಗಿದ್ದ, ಯಾವುದೇ ಪರೀಕ್ಷೆಯಲ್ಲಿ ಫಸ್ಟ್ ಕ್ಲಾಸಿನಲ್ಲಿ ಪಾಸ್ ಆಗುತ್ತಿದ್ದ. ಬಿ ಎಸ್ ಸಿ  ಫೈನಲ್ ಇಯರ್ ಗೆ ಬಂದ ಮೇಲೆ ಬದಲಾದ, ಕಾಲೇಜಿಗೆ ಹೋಗಲು ನಿರಾಕರಿಸಿದ...

"ಐದು ವರ್ಷಗಳ ಹಿಂದೆ ನಮ್ಮ ಮಗ ಚೆನ್ನಾಗಿದ್ದ , ಬುದ್ಧಿವಂತನಾಗಿದ್ದ, ಯಾವುದೇ ಪರೀಕ್ಷೆಯಲ್ಲಿ ಫಸ್ಟ್ ಕ್ಲಾಸಿನಲ್ಲಿ ಪಾಸ್ ಆಗುತ್ತಿದ್ದ. ಬಿ ಎಸ್ ಸಿ  ಫೈನಲ್ ಇಯರ್ ಗೆ ಬಂದ ಮೇಲೆ ಬದಲಾದ, ಕಾಲೇಜಿಗೆ ಹೋಗಲು ನಿರಾಕರಿಸಿದ. ಸಹಪಾಠಿಗಳು ಮತ್ತು ಟೀಚರ್ಸ್ ತನಗೆ ತೊಂದರೆ ಕೊಡಲು, ಹಾನಿಯನ್ನುಂಟು ಮಾಡಲು ಪ್ರಯತ್ನಿಸುತ್ತಿದ್ದಾರೆ. ನಾನು ಕಾಲೇಜಿಗೆ ಹೋದರೆ ನನ್ನನ್ನು ಸಾಯಿಸಿ ಬಿಡುತ್ತಾರೆ ಎಂದ, ನಾವು, ಪ್ರಿನ್ಸಿಪಾಲರು, ಎಲ್ಲಾ ಟೀಚರ್ಸ್ ಅವನಿಗೆ ಸಮಾಧಾನ ಮಾಡಿದರೂ  ಕೇಳಲಿಲ್ಲ. ಮನೆಯಲ್ಲಿ ರೂಮಿನಲ್ಲೇ ಕುಳಿತಿರುತ್ತಿದ್ದ. ಕಿಟಕಿ ಬಾಗಿಲನ್ನು ತೆರೆಯುತ್ತಿರಲಿಲ್ಲ, ನನ್ನ ಚಲನವಲನವನ್ನು ಟೆಲಿಸ್ಕೋಪ್ ಮುಖಾಂತರ ನೋಡುತ್ತಿದ್ದಾರೆ, ನಾನು ಹೊರಬಂದರೆ ಶೂಟರ್ ಗಳನ್ನು ಬಳಸಿ ಕೊಂದು ಬಿಡುತ್ತಾರೆ ಎಂದ.

ಊಟ/ ತಿಂಡಿ/ ನಿದ್ರೆ /ಸ್ನಾನ /ಸ್ವಚ್ಛತೆ ಬಗ್ಗೆ ನಿರ್ಲಕ್ಷ ಮಾಡಿದ, ಪ್ರಿನ್ಸಿಪಾಲರ ಸಲಹೆ ಮೇರೆಗೆ ಮನೋ ವೈದ್ಯರಿಗೆ ತೋರಿಸಿದೆವು.  ಔಷಧಿ ತೆಗೆದುಕೊಳ್ಳಲು ರಾಜೀವ ಒಪ್ಪಲಿಲ್ಲ. ಊಟದ ಜೊತೆ ಸೇರಿಸಿ ಔಷಧಿ ಕೊಟ್ಟೆವು, ಅವನ ಹೆದರಿಕೆ ಸಂಶಯ ಕಡಿಮೆಯಾಯಿತು, ಸ್ವಲ್ಪ ಗೆಲುವಾದ, ಕಾಲೇಜಿಗೆ ಹೋಗತೊಡಗಿದ, ಫೈನಲ್ ಪರೀಕ್ಷೆಯಲ್ಲಿ ಫೇಲಾದ, ಮತ್ತೆ ರೂಮು ಸೇರಿಕೊಂಡ. ನಾವು ಊಟದಲ್ಲಿ ಸೇರಿಸಿ ಔಷಧಿ ಕೊಡುತ್ತಿದ್ದೇವೆ ಎಂಬ ಅನುಮಾನ ಬಂದು, ತಾನೇ ಅಡುಗೆ ಮನೆಗೆ ಹೋಗಿ ಊಟ ತಿಂಡಿ ತಿನ್ನುತ್ತಾನೆ,  ನಾವು ಕೊಟ್ಟರೆ ಒಲ್ಲೆ ಎನ್ನುತ್ತಾನೆ, ಎಲ್ಲಿಗೂ ಬರುವುದಿಲ್ಲ, ಡಾಕ್ಟರು ಎಂದರೆ ಸಿಟ್ಟಿಗೇಳುತ್ತಾನೆ, ನನಗೇನು ಆಗಿಲ್ಲ, ನನ್ನನ್ನು ನನ್ನ ಪಾಡಿಗೆ ಬಿಡಿ ಎನ್ನುತ್ತಾನೆ. ನಮಗೆ ಏನು ಮಾಡುವುದೆಂದೇ ತೋಚುತ್ತಿಲ್ಲ ಎಂದು ಕಣ್ಣೀರು ಸುರಿಸಿದರು ರಾಜೀವನ ತಂದೆ-ತಾಯಿ.
                    
"ನಮ್ಮ ಮಗಳು ಲಕ್ಷ್ಮಿ ಮದುವೆಯಾಗಿ ಮೂರು ವರ್ಷ ಗಂಡನ ಮನೆಯಲ್ಲಿ ಸಂಸಾರ ಮಾಡಿದಳು, ಎರಡು ಮಕ್ಕಳಾದವು ಆಮೇಲೆ ಗಂಡನ ಮೇಲೆ ಅನುಮಾನ, ಸಂಶಯ ಪಡಲು ಶುರುಮಾಡಿದಳು. ಅವನು ಯಾರ ಹೆಂಗಸರ ಜೊತೆಯೂ ಮಾತಾಡು ವಂತಿಲ್ಲ. ಚಿಕ್ಕ ಹುಡುಗಿಯಾಗಲಿ, ಮಧ್ಯವಯಸ್ಸಿನ ಹೆಂಗಸಾಗಲೀ ಸಂಬಂಧವಿದೆ ಎನ್ನಲು ಶುರುಮಾಡಿದಳು. ನಿದ್ರೆ ಮಾಡುತ್ತಿರಲಿಲ್ಲ, ಟೈಮಿಗೆ ಸರಿಯಾಗಿ ಅಡುಗೆ ಮಾಡುತ್ತಿರಲಿಲ್ಲ, ಮನೋವೈದ್ಯರ ಹತ್ತಿರ ಕರೆದುಕೊಂಡು ಹೋಗಿ ಚಿಕಿತ್ಸೆ ಕೊಡಿಸಿದರು. ಸ್ವಲ್ಪ ವಾಸಿಯಾಗುವುದು, ನಂತರ ಜಾಸ್ತಿಯಾಗುವುದು ಆಗುತ್ತಿತ್ತು. ಮೂರು ವರ್ಷ ಮ್ಯಾನೇಜ್ ಮಾಡಿದರು, ಆಮೇಲೆ ನಮ್ಮ ಮಗಳು ನಮ್ಮ ಮನೆಗೆ ಬಂದು ಬಿಟ್ಟಿದ್ದಾಳೆ. ಬೇರೊಬ್ಬ ಹೆಂಗಸಿನೊಂದಿಗೆ ಸಂಬಂಧ ಇಟ್ಟುಕೊಂಡಿರುವ ಗಂಡನಿಂದ ಡೈವೋರ್ಸ್ ಬೇಕು, ಕೋರ್ಟಿಗೆ ಹೋಗೋಣ ಎನ್ನುತ್ತಾಳೆ. ಅವನು ಅಂಥವನಲ್ಲ , ನಮ್ಮಲ್ಲಿ ಯಾವ ಸಾಕ್ಷಿ ಪುರಾವೆ ಇಲ್ಲ, ಎಂದರೆ ಕೇಳುತ್ತಿಲ್ಲ, ನೀವು ನನ್ನ ಗಂಡನ ಸಪೋರ್ಟಿಗೆ ನಿಂತಿದ್ದೀರಿ ಎಂದು ನಮ್ಮ ಮೇಲೆ ಕೋಪಿಸಿಕೊಂಡು ಮಾತು ಬಿಟ್ಟಿದ್ದಾಳೆ, ಸದಾ ಟಿವಿ ಮುಂದೆ ಕುಳಿತು ಗಂಡನನ್ನು /ನನ್ನನ್ನು ಬೈಯ್ಯುತ್ತಾಳೆ, ಒಂದು ಕೆಲಸ ಮಾಡೋಲ್ಲ, 90 ಕಿಲೋ ತೂಗುತ್ತಾಳೆ. ನಮಗೆ ಏನು ಮಾಡಬೇಕೆಂದು ತೋರುತ್ತಿಲ್ಲ, ಕೌನ್ಸೆಲಿಂಗಿಗೆ ಬರುವುದಿಲ್ಲ, ಲಾಯರ್ ಮುಖಾಂತರ ಹೇಳಿಸಿದೆವು, ಸಾಕ್ಷಿ ಪುರಾವೆ ಇಲ್ಲದೆ ಏನನ್ನು ಮಾಡಲಾಗುವುದಿಲ್ಲ, ಅನುಮಾನ ಬೇಡ ಎಂದು ಲಾಯರ್ ಹೇಳಿದಾಗ, ಇವಳು ಕೆರಳಿ ಕೆಂಡವಾದಳು, ಅವಳನ್ನು ಈಗ ಮನೆಯಲ್ಲಿ ಸಹಿಸಿಕೊಳ್ಳುವುದೇ ಕಷ್ಟವಾಗಿದೆ, ಆತ್ಮಹತ್ಯೆ ಮಾಡಿಕೊಳ್ಳುತ್ತೇನೆ ಎಂದು ಪದೇ ಪದೇ ಹೇಳುತ್ತಾಳೆ.
 

ನನ್ನ ಅಣ್ಣನನ್ನು ಎರಡು ಸಲ ನಿಮ್ಹಾನ್ಸ್ ಗೆ ಸೇರಿಸಿದ್ದೆವು, ಉತ್ತಮವಾಗೋದು ಮತ್ತೆ ಕಾಯಿಲೆ ಮರುಕಳಿಸೋದು, ಚೆನ್ನಾಗಿದ್ದಾಗಲೂ ಮಾತ್ರೆ ಬಿಡದೇ ಕೊಡಿ ಅಂತ ಡಾಕ್ಟರು ಹೇಳೋರು, ಆದರೆ ಇವನು ಮಾತ್ರ ತಿನ್ನುತ್ತಿರಲಿಲ್ಲ. ಅತ್ತಿಗೆಗೆ ಬೇಸರವಾಗಿ ತವರು ಮನೆಗೆ ಹೋಗಿ ಕೂತಿದ್ಧಾರೆ, ಮಕ್ಕಳು ಅವರ ಜೊತೆಯಲ್ಲೇ ಇದ್ದಾರೆ, ಯಾವುದೇ ಕಾಂಟ್ಯಾಕ್ಟ್ ಇಲ್ಲ, ಅಣ್ಣ ಒಂದು ವಾರ ಮನೆಯಲ್ಲಿದ್ದರೆ ಮೂರು ವಾರ ಮನೆಬಿಟ್ಟು ಹೋಗುತ್ತಾನೆ, ಸಿಕ್ಕಿದ ಬಸ್ ರೈಲು ಹತ್ತಿ ಊರೂರು ತಿರುಗುತ್ತಾನೆ. ಹೋಗುವಾಗ ಒಂದಷ್ಟು ಹಣ ತೆಗೆದುಕೊಂಡು ಹೋಗುತ್ತಾನೆ, ಯಾವುದೋ ಊರಿನಲ್ಲಿ ಏನೋ ಒಂದು ಕೆಲಸ ಮಾಡಿಕೊಂಡು ಹೊಟ್ಟೆ ತುಂಬಿಸಿಕೊಳ್ಳುತ್ತಾನೆ, ಸ್ನಾನ, ಸ್ವಚ್ಛತೆ, ಬಟ್ಟೆ-ಬರೆ ಬಗ್ಗೆ ಗಮನ ವಿರೊಲ್ಲ, ಶೇವಿಂಗ್ /ಕಟಿಂಗ್ ಮಾಡಿಸಿ ಕೊಳ್ಳೊಲ್ಲ, ಮನೆಗೆ ಬಂದರೆ ಸುಮ್ಮನೆ ಒಂದು ಕಡೆ ಬಸವಣ್ಣ ಕೂತ ಹಾಗೆ ಕೂರುತ್ತಾನೆ, ಮಾತಿಲ್ಲ ಕತೆಯಿಲ್ಲ, ಮನೆಗೆ ನೆಂಟರು ಬಂದರೆ ಎದ್ದು ಹೊರ ಹೋಗಿಬಿಡುತ್ತಾನೆ, ಅವರು ಹೋದ ಮೇಲೆ ವಾಪಸ್ ಬರುತ್ತಾನೆ. ತನ್ನಷ್ಟಕೆ ತಾನೇ ಮಾತಾಡಿಕೊಳ್ಳುವುದು/ ನಗುವುದು ಮಾಡುತ್ತಾನೆ, ಯಾರಿಗಾದರೂ ನೋಡಿದ  ತಕ್ಷಣ ಈತ ಮನೋರೋಗಿ ಎಂದು ಹೇಳುವಂತಾಗುತ್ತದೆ, ಮಾಟ ಮಂತ್ರ ತೆಗೆಸುವುದು, ದೇವಸ್ಥಾನದಲ್ಲಿ ಪೂಜೆ , ಹರಕೆ ಎಂದು ನನ್ನ ತಾಯಿ ಸಾಕಷ್ಟು ಖರ್ಚು ಮಾಡಿದ್ದಾರೆ. ಅಣ್ಣ ಹಾಗೇ ಇದ್ದಾನೆ, ಏನು ಮಾಡಬೇಕು?

ತೀವ್ರ ಮನೋರೋಗಗಳಲ್ಲಿ ಶಿಖರಪ್ರಾಯ ರೋಗವೆಂದರೆ ಸ್ಕಿಜೋಫ್ರೀನಿಯಾ. ಈ ರೋಗದಲ್ಲಿ ವ್ಯಕ್ತಿಯ ಮಾತು, ವರ್ತನೆ, ಆಲೋಚನೆ, ಭಾವನೆಗಳು ಏರುಪೇರಾಗುತ್ತವೆ, ವಿಚಿತ್ರವಾಗುತ್ತವೆ,  ರೋಗಿಗೆ ವಾಸ್ತವ ಪ್ರಜ್ಞೆ ಇರುವುದಿಲ್ಲ. ಭ್ರಮಾಧೀನರಾಗುತ್ತಾರೆ. ಸಂಶಯ ಪೀಡಿತರಾಗುತ್ತಾರೆ, ನಿತ್ಯಜೀವನದಲ್ಲಿ ತಮ್ಮ ಬೇಕು-ಬೇಡಗಳನ್ನು, ತಮ್ಮ ಆಶ್ರಿತರ ಬೇಕು-ಬೇಡಗಳನ್ನು ನಿರ್ಲಕ್ಷಿಸುತ್ತಾರೆ. ಉದ್ಯೋಗ ಮಾಡುವುದಿಲ್ಲ, ಸಂಪಾದಿಸುವುದಿಲ್ಲ, ಯೋಗಕ್ಷೇಮ ವಿಚಾರಿಸುವುದಿಲ್ಲ, ನಿರ್ಲಿಪ್ತ ರಾಗಿರುತ್ತಾರೆ. ಕೆಲವು  ರೋಗಿಗಳು ಮನೆಬಿಟ್ಟು ಉರೂರು ಅಲೆದಾಡುತ್ತಾರೆ. ಕೆಲವು ಸಲ ಇತರರನ್ನು ಸಂಶಯ ದೃಷ್ಟಿಯಿಂದ ನೋಡಿ ಆಕ್ರಮಣ ಮಾಡುತ್ತಾರೆ. ಯಾವುದೇ ಸಾಮಾಜಿಕ ನೀತಿನಿಯಮಗಳ ಪಾಲನೆ ಮಾಡಬೇಕೆಂಬ ಅರಿವು ಅವರಿಗಿರುವುದಿಲ್ಲ. ತಮ್ಮ ಸ್ವಚ್ಛತೆ/ ಅಲಂಕಾರದ ಬಗ್ಗೆಯೂ ನಿರ್ಲಕ್ಷ, ಸಾಮಾನ್ಯವಾಗಿ ಸ್ಕಿಜೋಫ್ರೀನಿಯಾ ಧೀರ್ಘಕಾಲ ಉಳಿಯುವಂತಹ ಕಾಯಿಲೆ. ಮಿದುಳಿನ ನರ ಕೋಶಗಳಲ್ಲಿ ಡೋಪಮಿನ್ ವ್ಯವಸ್ಥೆ (ನರವಾಹಕ) ಏರುಪೇರಾಗುವುದೇ ಈ ರೋಗಲಕ್ಷಣಗಳಿಗೆ ಕಾರಣವಾಗುತ್ತದೆ.

ಕಾಯಿಲೆ ಶುರುವಾಗುತ್ತಿದ್ದಂತೆಯೇ ಚಿಕಿತ್ಸೆ ಪ್ರಾರಂಭಿಸಿದರೆ, ಬೇಗ ಹತೋಟಿಗೆ ಬರುತ್ತದೆ. ಚಿಕಿತ್ಸೆ ತಡವಾದರೆ, ವ್ಯಕ್ತಿಯನ್ನು ನಿಭಾಯಿಸುವುದು ಮನೆಯವರಿಗೆ ಕಷ್ಟವಾಗುತ್ತದೆ. ತನಗೆ ರೋಗವಿದೆ ಎಂಬುದನ್ನು ರೋಗಿ ಒಪ್ಪುವುದಿಲ್ಲ. ತನ್ನದೇ  ಭ್ರಮಾ  ಜಗತ್ತಿನಲ್ಲಿ ಬದುಕುತ್ತಾನೆ, ಕುಟುಂಬಕ್ಕೆ ಹೊರೆಯಾಗುತ್ತನೆ. ಔಷಧಿ ಸೇವಿಸಿದ ರೋಗಿಗೆ ಔಷಧಿಯನ್ನು  ಕೊಡುವುದು ಮನೆಯವರಿಗೆ  ಸವಾಲಾಗುತ್ತದೆ. ಇಂತಹ ರೋಗಿಗಳ ಪುನರ್ವಸತಿಗೆ ಕುಟುಂಬ ಮತ್ತು ಸಮಾಜ ವ್ಯವಸ್ಥೆ ಮಾಡಬೇಕು.

  1. ರೋಗಿಗೆ ಸಮಯಕ್ಕೆ ಸರಿಯಾಗಿ ಔಷಧಿ ಕೊಡುವ ವ್ಯವಸ್ಥೆಯಾಗಬೇಕು, ಮಾತ್ರೆ ನುಂಗದೆ ಹೋದರೆ, ಇಂಜೆಕ್ಷನ್ ರೂಪದಲ್ಲಿ, ಸಿರಪ್ ರೂಪದಲ್ಲಿ ನೀಡಬೇಕು.
  2. ಸ್ವಚ್ಛತೆ ಬಗ್ಗೆ ಗಮನ ಕೊಡುವಂತೆ ಮಾಡಬೇಕು, ಸ್ನಾನ ಮಾಡುವುದು, ಮಡಿ ಬಟ್ಟೆ ಹಾಕಿಕೊಳ್ಳುವುದು, ಉಸ್ತುವಾರಿಯಲ್ಲಿ ನಡೆಯಬೇಕು.
  3. ರೋಗಿ ಸುಮ್ಮನೆ ಕೂರಲು, ಅಥವಾ ಉದ್ದೇಶವಿಲ್ಲದೆ ಅಲೆದಾಡುವುದನ್ನು ತಪ್ಪಿಸಲು ಏನಾದರೂ ಕೆಲಸ/ ಚಟುವಟಿಕೆಯಲ್ಲಿ ತೊಡಗಿಸುವ ವ್ಯವಸ್ಥೆ ಬೇಕು.
  4. ಪುನರ್ವಸತಿ ಕೇಂದ್ರಗಳು (Rehabilitation centre) ಈ ದಿಶೆಯಲ್ಲಿ ಬಹು ಪ್ರಯೋಜನ

ಡಾ. ಸಿ.ಆರ್. ಚಂದ್ರಶೇಖರ್, ಮನೋವೈದ್ಯ 

drcrchandrashekhar@gmail.com
+919845605615

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಜನಪ್ರಿಯ ಪ್ಯಾಲೆಸ್ತೀನ್ ನಾಯಕ ಮರ್ವಾನ್ ಬರ್ಘೌಟಿ ಬಿಡುಗಡೆಗೆ ಇಸ್ರೇಲ್ ನಕಾರ: 250 ಕೈದಿಗಳ ಪಟ್ಟಿ ಸಿದ್ಧ

'ನಮ್ಮ ಪಾತ್ರವಿಲ್ಲ': ಆಫ್ಘನ್ ಸಚಿವರ ಸುದ್ದಿಗೋಷ್ಠಿ ವೇಳೆ ಮಹಿಳಾ ಪತ್ರಕರ್ತೆಯರಿಗೆ ನಿರ್ಬಂಧ ಕುರಿತು 'ಕೇಂದ್ರ' ಸ್ಪಷ್ಟನೆ

'ನಂಗೇ ಕೊಡಿ ಎಂದು ನಾನೇನು ಕೇಳಿಲ್ಲ..': ನೊಬೆಲ್ ಶಾಂತಿ ಪ್ರಶಸ್ತಿ ಕುರಿತು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮಾತು!

ಬ್ಯಾಂಕ್‌ಗೆ ನಕಲಿ ಗ್ಯಾರಂಟಿ: ರಿಲಯನ್ಸ್‌ ಪವರ್‌ನ ಮುಖ್ಯ ಹಣಕಾಸು ಅಧಿಕಾರಿ ಅಶೋಕ್ ಪಾಲ್ ಬಂಧನ

2nd test, Day 2: 518 ರನ್ ಗಳಿಗೆ ಭಾರತ ಇನ್ನಿಂಗ್ಸ್ ಡಿಕ್ಲೇರ್!

SCROLL FOR NEXT