ಅಂಕಣಗಳು

ಚಳಿಗಾಲದ ಆಹಾರ ಕ್ರಮ (ಕುಶಲವೇ ಕ್ಷೇಮವೇ)

ಡಾ. ವಸುಂಧರಾ ಭೂಪತಿ

ಚಳಿಗಾಲದಲ್ಲಿ ಸಹಜವಾಗಿಯೇ ವಾತಾವರಣದಲ್ಲಿ ಚಳಿಯ ತೀವ್ರತೆ ಹೆಚ್ಚಾಗಿರುವುದರಿಂದ ದೇಹದ ಉಷ್ಣತೆ ದೇಹದಲ್ಲೇ ಉಳಿಯುತ್ತದೆ. ಈ ಕಾಲದಲ್ಲಿ ಜೀರ್ಣಶಕ್ತಿ ಹೆಚ್ಚಾಗಿ ಹಸಿವೆ ಹೆಚ್ಚಾಗುತ್ತದೆ. ಈ ಕಾಲದಲ್ಲಿ ಸಿಹಿ, ಹುಳಿ, ಉಪ್ಪು ಇರುವ ಆಹಾರ ಹೆಚ್ಚು ಸೇವಿಸಬೇಕು. ಬಿಸಿಯಾದ ಆಹಾರ ಸೇವನೆ ಅವಶ್ಯಕ. 

ದ್ವಿದಳ ಧಾನ್ಯ  
ಹೊಸ ಅಕ್ಕಿ, ಗೋಧಿ, ರಾಗಿ ಮತ್ತು ಬೇಳೆಕಾಳುಗಳ ಬಳಕೆ ಸೂಕ್ತ, ಹೊಸ ಅಕ್ಕಿ, ಗೋಧಿಯಿಂದ ತಯಾರಿಸಿದ ಇಡ್ಲಿ, ದೋಸೆ, ಚಪಾತಿ, ವಡೆ, ಪೂರಿಗಳನ್ನು ಸೇವಿಸಬಹುದು. ಉದ್ದಿನಿಂದ ತಯಾರಿಸಿದ ಉಂಡೆ ಹೆಚ್ಚು ಪುಷ್ಟಿಕರವಾಗಿರುತ್ತವೆ. ಉದ್ದಿನಬೇಳೆಯನ್ನು  ಸಣ್ಣಗಿನ ಉರಿಯ ಮೇಲೆ ಚೆನ್ನಾಗಿ ಹುರಿದು ಪುಡಿ ಮಾಡಿಕೊಳ್ಳಬೇಕು. ಇದಕ್ಕೆ ತುಪ್ಪ, ಸಕ್ಕರೆ ಪುಡಿ, ಏಲಕ್ಕಿ, ದ್ರಾಕ್ಷಿ, ಬಾದಾಮಿ ಕೇಸರಿ ಹಾಕಿ ಉಂಡೆ ಕಟ್ಟಬೇಕು. ಎಳ್ಳು ಹಾಕಿ ತಯಾರಿಸಿದ ಚಕ್ಕುಲಿ, ಕಜ್ಜಾಯ, ಎಳ್ಳುಂಡೆ ಪುಳಿಯೊಗರೆ, ತಂಬುಳಿಗಳ ಬಳಕೆಯು ಒಳ್ಳೆಯದು. 

ತರಕಾರಿ  
ಎಲ್ಲ ಬಗೆಯ ಸೊಪ್ಪುಗಳು, ಸೋರೆಕಾಯಿ, ಬೂದಗುಂಬಳ, ಎಲಕೋಸು, ಬೆಂಡೆಕಾಯಿ, ಹೂಕೋಸು, ಸೀಮೆ ಬದನೆಕಾಯಿ ಸೇವಿಸಬೇಕು. ಕಡಲೆಕಾಯಿ, ಅವರೆಕಾಯಿ, ಆಲುಗೆಡ್ಡೆ, ಗೆಣಸು, ತೊಗರಿಕಾಯಿಗಳು ನಿಸರ್ಗವೇ ನಮಗೆ ಕೊಟ್ಟಂತಹ ವರ. ಇವುಗಳಲ್ಲಿರುವ ಜಿಡ್ಡಿನ ಅಂಶವು ದೇಹಕ್ಕೆ ಅವಶ್ಯವಿರುವ ಜಿಡ್ಡಿನಾಂಶವನ್ನು ಪೂರೈಸುತ್ತದೆ. ಅವರೆಕಾಯಿಯಿಂದ ತಯಾರಿಸಿದ ಆಹಾರ ಪದಾರ್ಥಗಳನ್ನು ಬಿಸಿಯಾಗಿಯೇ ತಿನ್ನಬೇಕು. ಅವರೆ ಜೀರ್ಣಕ್ಕೆ ಕಷ್ಟಕರವಾದ್ದರಿಂದ ಇದನ್ನು ತಿಂದ ನಂತರ ದೈಹಿಕ ಶ್ರಮವೂ ಅಗತ್ಯ.

ಹಣ್ಣು 
ದ್ರಾಕ್ಷಿ, ಕಿತ್ತಳೆ, ಸೀಬೆ, ಸೇಬುಗಳು, ಎಲಚಿಗಳು ಚಳಿಗಾಲದಲ್ಲಿ ದೊರೆಯುವ ಹಣ್ಣುಗಳು, ಕಿತ್ತಲೆ, ಸೀಬೆಯಲ್ಲಿ ಜೀವಸತ್ವ ‘ಸಿ’ ಹೆಚ್ಚಾಗಿರುತ್ತದೆ. ಶೀತದಿಂದ ಉಂಟಾಗುವ ತೊಂದರೆಗಳನ್ನು ದೂರಮಾಡುತ್ತವೆ. ಸೇಬಿನಲ್ಲಿ ‘ಬಿ’ ಜೀವಸತ್ವ, ರಂಜಕ, ಪೊಟ್ಯಾಸಿಯಂ ಹೆಚ್ಚಿನ ಪ್ರಮಾಣದಲ್ಲಿದೆ. ಇವು ನರಗಳ ಸಹಜ ಕ್ರಿಯೆಗೆ ಪೂರಕ. ಆದ್ದರಿಂದ ನರದೌರ್ಬಲ್ಯವಿರವವರಿಗೆ ಸೇಬು ಅತ್ಯುತ್ತಮ.

ಮೊಸರಿನ ಪದಾರ್ಥ 
ಮೊಸರಿನಿಂದ ತಯಾರಿಸಿದ ತಂಬಳಿ, ನೆಲ್ಲಿಚಟ್ನಿ, ಮಜ್ಜಿಗೆಹುಳಿ, ಮೊಸರು ಬಜ್ಜಿಗಳು ಚಳಿಗಾಲದಲ್ಲಿ ತುಂಬ ಉಪಯುಕ್ತ. ಕುಡಿಯಲು ಬಿಸಿನೀರು ಒಳ್ಳೆಯದು.

ಹುಗ್ಗಿ
ಚಳಿಗಾಲದಲ್ಲಿ ಹೆಸರು ಬೇಳೆಯಿಂದ ತಯಾರಿಸಿದ ಹುಗ್ಗಿಯ ಸೇವನೆ ತುಂಬ ರುಚಿಕರ ಮತ್ತು ಪುಷ್ಟಿಕರ. ಹೆಸರುಬೇಳೆಯನ್ನು ತುಪ್ಪದಲ್ಲಿ ಹುರಿದುಕೊಳ್ಳಬೇಕು. 1/2 ಭಾಗ ಹೆಸರುಬೇಳೆಗೆ 1 ಭಾಗ ಅಕ್ಕಿ ಹಾಕಿ ಬೇಯಿಸಬೇಕು. ಜೀರಿಗೆ, ಮೊಸರು, ಶುಂಠಿ, ಕರಿಬೇವು ಹಾಕಿ ತುಪ್ಪದ ಒಗ್ಗರಣೆ ಹಾಕಿ ಹುಗ್ಗಿ ತಯಾರಿಸಬೇಕು.

ಎಲಚಿ (ಬೋರೆಹಣ್ಣು) 
ಎಲಚಿಯ ಬೀಜವನ್ನು ಬೇರ್ಪಡಿಸಿ ತಿರುಳು ಉಪ್ಪು, ಅಚ್ಚಖಾರದ ಪುಡಿ, ಇಂಗು ಬೆರೆಸಿ ನೀರು ಹಾಕದೇ ರುಬ್ಬಿ ಸಣ್ಣ ಬಿಲ್ಲೆಗಳನ್ನಾಗಿಸಿ ಒಣಗಿಸಿ ತೆಗೆದುಕೊಂಡು ಆಗಾಗ ಇದನ್ನು ಬಾಯಿಗೆ ಹಾಕಿಕೊಂಡು ಚಪ್ಪರಿಸಬೇಕು. 

ಗೋಧಿ ಚಿತ್ರಾನ್ನ 
ಗೋಧಿಯನ್ನು ಒಡಕಲಾಗಿ ಕುಟ್ಟಿ ತರಿ ಮಾಡಿಕೊಳ್ಳಬೇಕು. ಒಂದು ಭಾಗ ಗೋಧಿ ತರಿಗೆ 5ರಷ್ಟು ನೀರು ಹಾಕಿ ಉರಿಯ ಮೇಲೆ ಬೇಯಿಸಿಕೊಳ್ಳಬೇಕು. ಗಂಜಿ ನೀರನ್ನು ಬಸಿದುಕೊಂಡು ಅದನ್ನು ಸಾರು ತಯಾರಿಸಲು ಬಳಸಬೇಕು. ಒಂದು ಪಾತ್ರೆಯಲ್ಲಿ ಸ್ವಲ್ಪ ಎಣ್ಣೆ, ಸಾಸುವೆ ಒಗ್ಗರಣೆ ಹಾಕಿ  ಅದಕ್ಕೆ ಕಾಳು ಮೆಣಸು ಇಲ್ಲವೇ ಒಣಮೆಣಸಿನಕಾಯಿ ಹಾಕಿ, ರುಚಿಗೆ ತಕ್ಕಷ್ಟು ಉಪ್ಪು ಹಾಕಿ ಬೇಯಿಸಿದ ಗೋಧಿ ತರಿ ಹಾಕಿ ಚೆನ್ನಾಗಿ ಬೆರೆಸಬೇಕು. ನಂತರ ನಿಂಬರಸ, ಕೊತ್ತಂಬರಿ ಸೊಪ್ಪು ಹಾಕಬೇಕು. ಗೋಧಿ ಚಿತ್ರಾನ್ನ ಉಬ್ಬಸ ರೋಗಿಗಳಿಗೆ ಮತ್ತು ಬಹುಮೂತ್ರ ಪ್ರವೃತ್ತಿ ಇರುವವರಿಗೆ ತುಂಬ ಉತ್ತಮವಾದದು.

ಉಸಲಿ (ಗುಗ್ಗರಿ)
ಹೆಸರುಕಾಳು ಅಥವಾ ಮಡಕೆ ಕಾಳು ನೆನೆಯಿಸಿ, ಬೇಯಿಸಿ, ಸಾಸುವೆ, ಒಣಮೆಣಸಿನಕಾಯಿ ಒಗ್ಗರಣೆ ಹಾಕಿ ಉಸುಲಿ ತಯಾರಿಸಬೇಕು. ಒಣಕೊಬ್ಬರಿ ತುರಿಯನ್ನು ಮೇಲೆ ಹಾಕಬೇಕು.

ಕೆಂಡದ ರೊಟ್ಟಿ
ಒಂದು ಭಾಗ ಗೋಧಿ ಹಿಟ್ಟಿಗೆ 1/8 ಭಾಗ ಕಡಲೆ ಹಿಟ್ಟು ಬೆರೆಸಿ, ಓಮ, ಹಿಂಗು, ಉಪ್ಪು, ತುಪ್ಪಹಾಕಿ ನೀರಿನಲ್ಲಿ ಹಿಟ್ಟನ್ನು ಚೆನ್ನಾಗಿ ಕಲೆಸಿಕೊಳ್ಳಬೇಕು. ನಂತರ ದುಂಡನೆಯ ಉಂಡೆ ಮಾಡಿ ಲಟ್ಟಿಸಿ, ಕೆಂಡದಲ್ಲಿ ಸುಡಬೇಕು. ಚಳಿಗಾಲದಲ್ಲಿ ಇದನ್ನು ತಿಂದಲ್ಲಿ ತುಂಬ ಹಿತಕರ. ಇದು ಬಲವನ್ನು ಹೆಚ್ಚಿಸುವುದಲ್ಲದೆ ಜೀರ್ಣಕ್ಕೆ ಸುಲಭ ಮತ್ತು ಕಫ ಹೆಚ್ಚಾಗಿರುವ ಕೆಮ್ಮು, ನೆಗಡಿ, ಉಬ್ಬಸ ರೋಗಿಗಳಿಗೆ ವಾರರೋಗಗಳಿಂದ ಬಳಲುವವರಿಗೆ ಹೃದ್ರೋಗಿಗಳಿಗೆ ತುಂಬ ಉತ್ತಮವಾದುದು.

ಕಷಾಯದ ಪುಡಿ
ಧನಿಯ 100 ಗ್ರಾಂ. ಸುಗಂಧಿ ಬೇರು 50 ಗ್ರಾಂ, ಜೀರಿಗೆ 50 ಗ್ರಾಂ, ಕಾಳುಮೆಣಸು 50 ಗ್ರಾಂ, ಜೇಷ್ಠಮಧು 50 ಗ್ರಾಂ, ಹಿಪ್ಪಲಿ 50 ಗ್ರಾಂ, ದಾಲ್ಚಿನ್ನಿ 25 ಗ್ರಾಂ, ಒಣಶುಂಠಿ, ಏಲಕ್ಕಿ ಜಾಪತ್ರೆ, ಜಾಕಾಯಿ 10 ಗ್ರಾಂ ಎಲ್ಲವನ್ನೂ ಸೇರಿಸಿ ನುಣ್ಣಗಿನ ಪುಡಿ ಮಾಡಿಟ್ಟುಕೊಳ್ಳಬೇಕು.

ಬೇಕೆನಿಸಿದಾಗ ಕಷಾಯ ತಯಾರಿಸಿ ಕುಡಿಯಬಹುದು, ಒಂದು ಲೋಟ ನೀರಿಗೆ ಅರ್ಧ ಚಮಚೆ ಪುಡಿ ಹಾಕಿ ಸಣ್ಣಗಿನ ಉರಿಯಲ್ಲಿ ಕಾಯಿಸಬೇಕು. ಮೂರ್ನಾಲ್ಕು ನಿಮಿಷಗಳ ಕುದಿತದ ನಂತರ ಬೆಲ್ಲ ಅಥವಾ ಸಕ್ಕರೆ ಬೆರೆಸಿ ಇಳಿಸಿ, ಬೇಕೆನಿಸದಲ್ಲಿ ಹಾಲು ಬೆರೆಸಬಹುದು.

ಜೇಷ್ಠಮಧು ಸೂಪ್
ಹೆಸರುಬೇಳೆ 2 ಚಮಚೆ, ತೊಗರಿಬೇಳೆ 2 ಚಮಚೆ, ಟೊಮೊಟೋ ಹಣ್ಣು 2, ಜೇಷ್ಠಮಧು 100 ಗ್ರಾಂ, ಉಪ್ಪು ರುಚಿಗೆ ತಕ್ಕಷ್ಟು, ಬೆಲ್ಲದ ಪುಡಿ ಸ್ವಲ್ಪ, ಕಾಳು ಮೆಣಸಿನ ಪುಡಿ ರುಚಿಗೆ ತಕ್ಕಷ್ಟು ಇರಲಿ.

ಜೇಷ್ಠಮಧುವನ್ನು ಜಜ್ಜಿ ಹೆಸರುಬೇಳೆ, ತೊಗರಿಬೇಳೆ ಮತ್ತು ಟೊಮೊಟೋ ಹಣ್ಣನೊಂದಿಗೆ ಸಾಕಷ್ಟು ನೀರಿನಲ್ಲಿ ಬೇಯಿಸಬೇಕು. ಬೆಂದಿರುವ ಜೇಷ್ಠಮಧುವಿನಿಂದ ರಸ ಹಿಂಡಿ ತೆಗೆದು ನಾರಿನಂತಹ ಭಾಗವನ್ನು ಎಸೆದು ಬಿಡಬೇಕು. ನಂತರ ಬೆಂದಿರುವ ಎಲ್ಲ ಪದಾರ್ಥವನ್ನು ನುಣ್ಣಗೆ ರುಬ್ಬಿಕೊಳ್ಳಬೇಕು. ಇದಕ್ಕೆ ಎರಡು ಬಟ್ಟಲು ನೀರು ಸೇರಿಸಿ ಉಪ್ಪು, ಬೆಲ್ಲ ಸೇರಿಸಿ ಮತ್ತೆ ಒಲೆಯ ಮೇಲಿಟ್ಟು ಕುದಿಸಬೇಕು. ಕುದಿದ ನಂತರ ಒಲೆಯಿಂದ ಇಳಿಸಿ, ಕಾಳು ಮೆಣಸಿನ ಪುಡಿ ಬೆರೆಸಿ ಬಿಸಿಯಾಗಿರುವಾಗಲೇ ಕುಡಿಯಬೇಕು. ಚಳಿಗಾಲದಲ್ಲಿ ಸೂಪ್ ಅತ್ಯುತ್ತಮ ಪಾನೀಯ.

ಅಡಿಕೆ ಪುಡಿ
ಬಡೆಸೋಪು 200 ಗ್ರಾಂ, ಅಡಿಕೆ 200 ಗ್ರಾಂ, ಜೇಷ್ಠಮಧು 100 ಗ್ರಾಂ, ಏಲಕ್ಕಿ ಲವಂಗ 10 ಗ್ರಾಂ, ಒಣಕೊಬ್ಬರಿ ತುರಿ 100 ಗ್ರಾಂ, ಜಾಕಾಯಿ ಜಾಪತ್ರೆ 5 ಗ್ರಾಂ, ಕಲ್ಲಂಗಡಿ ಬೀಜ 50 ಗ್ರಾಂ, ಕರಬೂಜ ಬೀಜ 50 ಗ್ರಾಂ, ತುಪ್ಪ, ಪಚ್ಚಕರ್ಪೂರ ಸ್ವಲ್ಪ ಅಡಿಕೆಯನ್ನು ತುಪ್ಪದಲ್ಲಿ ಹುರಿದುಕೊಳ್ಳಬೇಕು. ಬಡೆಸೋಪನ್ನು ಮತ್ತು ಲವಂಗವನ್ನು ಹುರಿದುಕೊಳ್ಳಬೇಕು. ನಂತರ ಬೇರೆ ಬೇರೆಯಾಗಿ ಪುಡಿ ಮಾಡಿಕೊಳ್ಳಬೇಕು. ಜೇಷ್ಠಮಧುವನ್ನು ಪುಡಿ ಮಾಡಿ ಒಣಕೊಬ್ಬರಿ ತುರಿ, ಕಲ್ಲಂಗಡಿ ಬೀಜ, ಕರಬೂಜ ಬೀಜ, ಪಚ್ಚಕರ್ಪೂರ, ಬೇಕೆನಿಸಿದಲ್ಲಿ ಸ್ವಲ್ಪ ಸಕ್ಕರೆ ಪುಡಿ ಬೆರೆಸಿಟ್ಟಲ್ಲಿ ರುಚಿಕರ ಅಡಿಕೆಪುಡಿ ಸಿದ್ಧ. ಊಟದ ನಂತರ ಸ್ವಲ್ಪ ಬಾಯಿಗೆ ಹಾಕಿಕೊಂಡಲ್ಲಿ ಆಹಾರ ಜೀರ್ಣಿಸಲು ಸಹಾಯವಾಗುವುದಲ್ಲದೇ ಬಾಯಿಯೂ ಘಮಘಮಿಸುತ್ತದೆ.

ಕುಡಿಯುವ ನೀರು
ಜೀವಿಗಳಿಗೆ ನೀರು ಜೀವನಾಧಾರ. ಆದ್ದರಿಂದಲೇ ಎಂತಹ ಸ್ಥಿತಿಯಲ್ಲಿಯೂ ನೀರನ್ನು ನಿಷೇಧಿಸಬಾರದು. ಚಳಿಗಾಲದಲ್ಲಿ ನೀರನ್ನು ಕುರಿತು ಎಚ್ಚರವಹಿಸಬೇಕಾದುದು ಬಹಳ ಮುಖ್ಯ. ಕಲುಷಿತ ನೀರಿನಿಂದ ವಾಂತಿ, ಭೇದಿ, ಕೆಮ್ಮು, ನೆಗಡಿ, ಗಂಟಲು ನೋವು, ಜ್ವರದಂತಹ ಸಾಮಾನ್ಯ ಕಾಯಿಲೆಗಳಿಂದ ಹಿಡಿದು ಟೈಫಾಯ್ಡ್ವನರೆಗೂ ಕಾಣಿಸಿಕೊಳ್ಳಬಹುದು. ಆದ್ದರಿಂದ ಕುದಿಸಿ ಆರಿಸಿದ ನೀರು ಕುಡಿಯುವುದು ಸೂಕ್ತ. ನೀರನ್ನು ಕನಿಷ್ಠ 10 ನಿಮಿಷ ಕುದಿಸಿ, ಅದೇ ಪಾತ್ರೆಯಲ್ಲಿ ಆರಿಸಿ ಕುಡಿದರೆ ಬ್ಯಾಕ್ಟೀರಿಯಾ ಸೋಂಕುಗಳು ಊಂಟಾಗಲಾರವು. ಅಲ್ಲದೇ ನೀರನ್ನು ಕುದಿಸುವಾಗ ಒಂದು ಚಿಕ್ಕ ಶುಂಠಿ ತುಂಡು ಹಾಕಿ ಕುದಿಸಿದಲ್ಲಿ ಇನ್ನೂ ಉತ್ತಮ. ಶುಂಠಿ ಹಾಕಿ ಕುದಿಸಿದ ನೀರು ಕುಡಿಯವುದರಿಂದ ಕಫ ಉಂಟಾಗುವುದಿಲ್ಲ. ದೇಹದ ಉಷ್ಣತೆಯನ್ನು ಕಾಪಾಡುತ್ತದೆ. ಆಹಾರ ಜೀರ್ಣಿಸಲು ಸಹಕಾರಿಯಾಗುತ್ತದೆ.

ಜೇನುತುಪ್ಪ ಬೆರೆಸಿ ನೀರು ಕುಡಿಯುವುದು ಒಳ್ಳೆಯದು. ಜೇನುತುಪ್ಪದ ಸೇವನೆ ನಮ್ಮ ದೇಹದ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ. ಒಂದು ಲೋಟ ನೀರಿಗೆ ಒಂದು ಚಮಚೆ ಜೇನುತುಪ್ಪ ಬೆರೆಸಿ ಕುಡಿಯಬೇಕು. ಕೆಲವರು ನೀರನ್ನು ಕಾಯಿಸಿ ಫಿಲ್ಟರ್ಗೆು ಹಾಕುತ್ತಾರೆ. ಆದರೆ ಫಿಲ್ಟರ್ ಮಾಡಿದ ನೀರನ್ನು ಕಾಯಿಸಿ ಕುಡಿಯುವುದು ಒಳ್ಳೆಯದು. ಅಲ್ಲದೇ ಫಿಲ್ಟರ್ ಬಳಸುವವರು ಕ್ಯಾಂಡಲ್ಗಾಳನ್ನು ಆಗಾಗ ಶುದ್ಧಿಗೊಳಿಸುತ್ತಿರಬೇಕು. ಗಂಟಲು ನೋವು, ಉಬ್ಬಸವಿರುವವರು ಬಿಸಿಯಾಗಿರುವ ನೀರನ್ನೇ ಕುಡಿಯಬೇಕು. ಹೊರಗೆ ನೀರು ಕುಡಿಯುವ ಸಮಯ ಬಂದಲ್ಲಿ ಬಿಸಿ ನೀರನ್ನೇ ಕುಡಿಯಬೇಕು. ನೌಕರಿಗೆ, ಶಾಲೆಗೆ ಹೋಗುವವರು ನೀರಿನ ಬಾಟಲಿಯನ್ನು ಜೊತೆಗೆ ತೆಗೆದುಕೊಂಡು ಹೋಗಬೇಕು.

ಬೆಳಗ್ಗೆ, ರಾತ್ರಿ ಬಿಸಿಯಾಗಿಯೇ ಅಡುಗೆ ತಯಾರಿಸಿ ಊಟ ಮಾಡಬೇಕು. ಸಂಜೆಯ ಸಮಯ ಕುರುಕಲು ತಿಂಡಿ ಚಕ್ಕಲಿ, ನಿಪ್ಪಟ್ಟು, ಈರುಳ್ಳಿ ಬಜ್ಜಿ ಮುಂತಾದವುಗಳನ್ನು ಮಿತ ಪ್ರಮಾಣದಲ್ಲಿ ತಿನ್ನಬಹುದು. ನೆಲ್ಲಿಕಾಯಿಯ ಸಾರು ಹಿತಕರ. ಊಟಕ್ಕೆ ಸಂಡಿಗೆ, ಹಪ್ಪಳ, ಚಟ್ನಿಪುಡಿ, ಉಪ್ಪಿನಕಾಯಿ ಇರಲಿ.

ಚಳಿಗಾಲದಲ್ಲಿ ತಂಗಳು ಆಹಾರ ಪದಾರ್ಥ, ಫ್ರಿಜ್ನರಲ್ಲಿರಿಸಿದ ಆಹಾರ ಪದಾರ್ಥ, ತಂಪು ಪಾನೀಯ, ಐಸ್ಕ್ರೀಂ , ಶರಬತ್, ತಣ್ಣನೆಯ ನೀರು ಮುಂತಾದವುಗಳು ಸೇವನೆ ಬೇಡ.

ಮಾಂಸಾಹಾರ 
ಜೀರ್ಣಶಕ್ತಿ ಚಳಗಾಲದಲ್ಲಿ ತೀಕ್ಷ್ಣವಾಗಿರುವ ಕಾರಣ ಬೇರೆ ಕಾಲಕ್ಕಿಂತ ಹೆಚ್ಚು ಮಾಂಸಾಹಾರ ಬಳಸಬಹುದು.

ಡಾ. ವಸುಂಧರಾ ಭೂಪತಿ
bhupathivasundhara@gmail.com

SCROLL FOR NEXT