ಅಂಕಣಗಳು

ಮಕ್ಕಳಲ್ಲಿ ಬೆಡ್ ವೆಟ್ಟಿಂಗ್ ಸಮಸ್ಯೆ (ಕುಶಲವೇ ಕ್ಷೇಮವೇ)

ಡಾ. ವಸುಂಧರಾ ಭೂಪತಿ

“ಹೇಗಿದ್ದೀಯಾ ಪುಟ್ಟು?” ಎಂದು ಕೆನ್ನೆ ಸವರಿ ಮಾಲತಿ 8 ವರ್ಷದ ಕಿರಣನನ್ನು ಮಾತಾಡಿಸಿದಳು. ಅವನು ಉತ್ತರಿಸುವ ಮುನ್ನವೇ ಅವನ ಅಜ್ಜಿ “ಅವನಿಗೇನು ಚೆನ್ನಾಗಿದ್ದಾನೆ. ನಮಗೆ ತೊಂದರೆ ಅಷ್ಟೇ” ಎಂದರು. “ಯಾಕಜ್ಜಿ ಏನಾಯ್ತು?” ಮಾಲತಿ ಕುತೂಹಲದಿಂದ ಕೇಳಿದಳು. “ಮತ್ತೇನು ಹೇಳ್ಲಿ ಮಾಲತಿ. ದಿನಾ ಬೆಳಗ್ಗೆ ಹಾಸಿಗೇಲಿ ‘ಸುಸು’ ಮಾಡಿಕೊಂಡಿರ್ತಾನೆ. ಅವನು ಎದ್ದತಕ್ಷಣ ಹಾಸಿಗೆ ಬದಲಾಯಿಸಿ ಬೆಡ್‍ಶೀಟ್ ಒಗೆದುಹಾಕೋದೇ ಒಂದು ಕೆಲಸವಾಗಿದೆ” ಎಂದು ಅಜ್ಜಿ ಹೇಳುತ್ತಿದ್ದಂತೆ ಪುಟ್ಟು “ದಿನಾಲೂ ಎಲ್ಲಿ ಮಾಡುತ್ತೇನಜ್ಜಿ, ಸುಳ್ಳು ಹೇಳ್ತಿದ್ದೀಯಾ?” ಅಷ್ಟರಲ್ಲಿ ಪುಟ್ಟುಗಿಂತ 2 ವರ್ಷ ದೊಡ್ಡವನಾದ ಮಾಲತಿಯ ಮಗ “ಏನೋ ಪುಟ್ಟು ಇನ್ನೂ ಹಾಸಿಗೇಲಿ ‘ಸುಸು’ ಮಾಡ್ತೀಯಾ ಶೇಮ್ ಶೇಮ್” ಎಂದಾಗ ಪುಟ್ಟುಗೆ ಅವಮಾನವಾದಂತಾಗಿ ಮುಖ ಊದಿಸಿಕೊಂಡು ಒಳಗಡೆ ಓಡಿದ.

ರಜನಿ ಅಂಗಡಿಯಲ್ಲಿ “ರಬ್ಬರ್ ಶೀಟ್ ಕೊಡಿ” ಎಂದಾಗ ಅಂಗಡಿಯವನು ಅರ್ಧ ಮೀಟರ್‍ನದು ಕೊಡಲು ಬಂದಾಗ ಇಲ್ಲ “ಇದು ಚಿಕ್ಕದು ಸಾಕಾಗಲ್ಲ. ಎರಡೂವರೆ ಮೀಟರ್ ಕೊಡಿ. ನನ್ನ ಮಗ 12 ವರ್ಷದವನು ಇನ್ನು ಬೆಡ್ ವೆಟ್ಟಿಂಗ್ ಮಾಡ್ತಾನೆ. ಏನ್ಮಾಡೋದು?” ಎಂದಾಗ ಅಂಗಡಿಯಲ್ಲಿದ್ದವರೆಲ್ಲ ತನ್ನನ್ನು ನೋಡಿ ನಗುತ್ತಿದ್ದಾರೇನೋ ಎಂದು ಅಮ್ಮನ ಜೊತೆಯಲ್ಲಿದ್ದ ರಜನಿಯ ಮಗ ರಾಹುಲ್‍ಗೆ ಅನ್ನಿಸುತ್ತಿತ್ತು.

ಸ್ವರೂಪ 7 ವರ್ಷದ ಮಗಳನ್ನು ಕರೆದುಕೊಂಡು ಯಾವುದೇ ಊರಿಗೆ ಹೋಗಲು ಇಷ್ಟಪಡುವುದಿಲ್ಲ. ಹೋದರೂ ಯಾವುದರಾದರೂ ಸಮಾರಂಭವಿದ್ದಲ್ಲಿ ಅದನ್ನು ಮುಗಿಸಿಕೊಂಡು ವಾಪಸ್ಸು ಬರುತ್ತಾರೆ. ಎಲ್ಲಿಯೂ ಉಳಿದುಕೊಳ್ಳಲು ಇಷ್ಟಪಡುವುದಿಲ್ಲ. ಕಾರಣವೆಂದರೆ ಮಗಳ ಬೆಡ್ ವೆಟ್ಟಿಂಗ್ ಪ್ರಾಬ್ಲಂ.

ಹಾಸಿಗೆಯಲ್ಲಿ ಮೂತ್ರ ವಿಸರ್ಜನೆ ಅಥವಾ ಬೆಡ್ ವೆಟ್ಟಿಂಗ್

ಈ ಮೇಲೆ ತಿಳಿಸಿದ ಮೂರು ಮಕ್ಕಳು ಸಾಮಾನ್ಯ ತೊಂದರೆ ರಾತ್ರಿ ಹೊತ್ತು ಹಾಸಿಗೆಯಲ್ಲಿ ಮೂತ್ರ ವಿಸರ್ಜನೆ ಮಾಡುವುದು. ಸ್ವಾಭಾವಿಕವಾಗಿ ಹಾಸಿಗೆಯಲ್ಲಿನ ಮೂತ್ರ ವಿಸರ್ಜನೆಯು ಐದು ವರ್ಷದ ತನಕ ಸಾಮಾನ್ಯವಾಗಿ ಕಂಡುಬಂದರೂ ಆ ನಂತರವೂ ಉಳಿದುಕೊಂಡರೆ ಅದನ್ನು ಸರಿಪಡಿಸುವುದು ಅವಶ್ಯವಾಗುತ್ತದೆ. ಈ ಬೆಡ್ ವೆಟ್ಟಿಂಗ್ ಹೆಣ್ಣು ಮಕ್ಕಳಿಗಿಂತ ಗಂಡು ಮಕ್ಕಳಲ್ಲಿಯೇ ಹೆಚ್ಚು. ಐದು ವರ್ಷದ ಮಕ್ಕಳಲ್ಲಿ ಗಮನಿಸಿದಾಗ ಗಂಡು ಮಕ್ಕಳಲ್ಲಿ ಶೇಕಡಾ 7 ರಷ್ಟು ಕಂಡುಬಂದರೂ ಹೆಣ್ಣುಮಕ್ಕಳಲ್ಲಿ ಶೇಕಡಾ 3 ರಷ್ಟು ಕಾಣಿಸಿಕೊಳ್ಳುತ್ತದೆ. 10 ವರ್ಷದ ಮಕ್ಕಳಲ್ಲಿ ಇದರ ಪ್ರಮಾಣ ಗಮನಿಸಿದಾಗ ಗಂಡು ಮಕ್ಕಳಲ್ಲಿ ಶೇಕಡಾ 3ರಷ್ಟು, ಹೆಣ್ಣು ಮಕ್ಕಳಲ್ಲಿ ಶೇಕಡಾ 1 ರಷ್ಟು ಉಳಿದುಕೊಂಡರೆ ನಂತರದ ವಯಸ್ಸಿನ ಹೆಣ್ಣುಮಕ್ಕಳಲ್ಲಿ ಸಂಪೂರ್ಣ ನಿಂತುಹೋಗಿರುತ್ತದೆ.

ಹುಟ್ಟಿದಾಗಿನಿಂದ ಹಾಸಿಗೆಯಲ್ಲಿ ಮೂತ್ರ ಮಾಡುವ ಮಗು ಅದನ್ನು ಹಾಗೆಯೇ ಮುಂದುವರೆಸುತ್ತಾ ಹೋಗುತ್ತದೆ. ಚಿಕ್ಕಮಕ್ಕಳಿಗೆ ಅಲ್ಲಿ ಇಲ್ಲಿ ಮೂತ್ರ ವಿಸರ್ಜನೆ ಮಾಡದ ಹಾಗೆ ನಿರ್ಬಂಧ ಹೇರುವುದು, ಮೂತ್ರ ವಿಸರ್ಜಿಸಿದಾಗ ಬೆದರಿಸುವುದು, ಗದರಿಸುವುದು ಮಾಡುವುದರಿಂದ ಭಯ, ಆತಂಕದಿಂದ ಮಗು ಹಾಸಿಗೆಯಲ್ಲಿ ಮೂತ್ರವಿಸರ್ಜನೆ ಮಾಡುವ ಮೂಲಕ ಪ್ರತಿಕ್ರಿಯೆ ತೋರುತ್ತದೆ. ಮಗುವಿಗೆ ಮೂತ್ರವಿಸರ್ಜನೆ ವಿಧಾನವನ್ನು ತಾಳ್ಮೆ, ಸಹನೆ ಪ್ರೀತಿಯಿಂದ ಕಲಿಸಬೇಕಾದುದು ತಂದೆ ತಾಯಿ, ಹಿರಿಯರ ಬಹುಮುಖ್ಯ ಜವಾಬ್ದಾರಿ.

ಕೆಲವು ಮಕ್ಕಳಲ್ಲಿ ಹಾಸಿಗೆಯಲ್ಲಿ ಮೂತ್ರ ವಿಸರ್ಜಿಸುವ ಕ್ರಿಯೆ ಕೆಲವು ಕಾಲ ನಿಂತು ಮತ್ತೆ ಕಾಣಿಸಿಕೊಳ್ಳುವುದು. ಸಾಮಾನ್ಯವಾಗಿ ಈ ತರಹದ ತೊಂದರೆ ಒತ್ತಡದ ವಾತಾವರಣದಲ್ಲಿ ಉಂಟಾಗಬಹುದು. ಪರಿಸರ ಬದಲಾದಾಗ, ಹೊಸ ಸ್ಥಳಗಳಿಗೆ ಹೋದಾಗ, ಅಪ್ಪ ಅಮ್ಮನ ಮಧ್ಯೆ ಜಗಳ ಉಂಟಾದಾಗ, ತಮ್ಮ/ತಂಗಿ ಹುಟ್ಟಿದಾಗ, ಪ್ರೀತಿಯ ವ್ಯಕ್ತಿ ಮರಣ ಹೊಂದಿದಾಗ ಮುಂತಾದ ಸಂದರ್ಭಗಳಲ್ಲಿ ಆತಂಕ, ಭಯ, ದುಃಖ, ಖಿನ್ನತೆಯಿಂದ ಹಾಸಿಗೆಯಲ್ಲಿ ಮೂತ್ರ ವಿಸರ್ಜಿಸುವ ಪ್ರವೃತ್ತಿ ಉಂಟಾಗಬಹುದು.

ಸ್ವಾಭಾವಿಕವಾಗಿ ಮಕ್ಕಳಲ್ಲಿ ಮೂತ್ರಚೀಲದಲ್ಲಿ ಮೂತ್ರದ ಸಂಗ್ರಹ ಸಾಮರ್ಥ್ಯ ತಾನಾಗಿಯೇ ಮಗು ಬೆಳೆಯುತ್ತ ಬೆಳೆಯುತ್ತ ಹೆಚ್ಚುತ್ತದೆ. ಆದರೆ ಕೆಲವು ಮಕ್ಕಳಲ್ಲಿ ಮೂತ್ರಚೀಲದ ಸಾಮರ್ಥ್ಯ ಹೆಚ್ಚಿರುವುದಿಲ್ಲ. ಅಂತಹ ಮಕ್ಕಳಿಗೆ ಕೆಲವು ವರ್ಷ ಕಳೆದ ನಂತರ ಸಾಮರ್ಥ್ಯ ಬಂದ ನಂತರ ಬೆಡ್ ವೆಟ್ಟಿಂಗ್ ಸಮಸ್ಯೆ ತಾನಾಗಿಯೇ ಸರಿಯಾಗುತ್ತದೆ. ತಾಯಂದಿರು ಈ ಕ್ರಮಗಳನ್ನು ಅನುಸರಿಸಿದರೆ ಮಕ್ಕಳಲ್ಲಿ ಹಾಸಿಗೆಯಲ್ಲಿ ಮೂತ್ರ ವಿಸರ್ಜಿಸುವ ಪ್ರವೃತ್ತಿ ಮಾಯವಾಗುತ್ತದೆ.

ಬೆಡ್ ವೆಟ್ಟಿಂಗ್ ಪ್ರವೃತ್ತಿ ತಡೆಗೆ ಕ್ರಮಗಳು

ರಾತ್ರಿ ದ್ರವರೂಪದ ಆಹಾರ ಬೇಡ: ಪ್ರತಿದಿನ ಮಗುವಿಗೆ ಏಳು ಗಂಟೆಗೆ ಆಹಾರ ತಿನ್ನಿಸಬೇಕು. ನಂತರ ಯಾವುದೇ ದ್ರವರೂಪದ ಆಹಾರ ನೀಡಬಾರದು. ಹಾಲು, ಹಣ್ಣಿನ ರಸ, ಮಜ್ಜಿಗೆ ಯಾವುದನ್ನೂ ಕುಡಿಯಲು ಕೊಡಬಾರದು.

ಪ್ರೋತ್ಸಾಹ: ಮಗು ಹಾಸಿಗೆಯಲ್ಲಿ ಮೂತ್ರ ವಿಸರ್ಜನೆ ಮಾಡದೇ ಇದ್ದ ದಿನ ಮಗುವಿಗೆ ಶಹಬ್ಬಾಸ್ ಹೇಳಿ ಬೆನ್ನು ತಟ್ಟಿ ಪ್ರೋತ್ಸಾಹಿಸಿ. ಯಾವುದಾದರೊಂದು ಆಹಾರ ಪದಾರ್ಥವೋ, ಆಟಿಕೆಯನ್ನೋ ಮಗು ಇಷ್ಟಪಡುವುದನ್ನು ಬಹುಮಾನವಾಗಿ ನೀಡಿ.

ಅಲಾರ್ಮ್: ರಾತ್ರಿ ಹಾಸಿಗೆಗೆ ಹೋಗುವ ಮುನ್ನ ಮೂತ್ರ ವಿಸರ್ಜಿಸಲು ಹೇಳಬೇಕು. ಮಗು ಮಲಗಿದ ನಂತರ ಮೂರ್ನಾಲ್ಕು ಗಂಟೆಗಳ ಅಂತರದಲ್ಲಿ ಅಲಾರ್ಮ್ ಇಟ್ಟು ಅಮ್ಮ/ಅಪ್ಪ ಎದ್ದು ಮಗುವನ್ನು ಎಬ್ಬಿಸಿ ಮೂತ್ರ ಮಾಡಿಸಿ ಮತ್ತೆ ಮಲಗಿಸುವುದು. ಇದನ್ನು ಒಂದು ಇಲ್ಲವೇ ಎರಡು ವಾರ ಕಾಲ ಮಾಡಿದಲ್ಲಿ ನಂತರ ಮಗುವಿಗೆ ಅಲಾರ್ಮ್ ಇಲ್ಲದೆಯೇ ಎಚ್ಚರವಾಗುತ್ತದೆ. ದೇಹದಲ್ಲೊಂದು ಜೈವಿಕ ಗಡಿಯಾದ ಇರುತ್ತದಲ್ಲ ಅದು ತಾನಾಗಿಯೇ ಎಬ್ಬಿಸುತ್ತದೆ.

ಪ್ರೀತಿಯ ಶಿಕ್ಷೆ: ಹತ್ತು-ಹನ್ನೆರಡು ವರ್ಷದ ಮೇಲ್ಪಟ್ಟ ಮಕ್ಕಳಿಗಾದರೆ ಬೆಳಿಗ್ಗೆ ಹಾಸಿಗೆಯನ್ನು ಅವರೇ ಒಗೆದು ಒಣಗಿ ಹಾಕಲು ಹೇಳುವಂತಹ ಪುಟ್ಟ ಶಿಕ್ಷೆ ಕೊಡಬಹುದು. ಆದರೆ ಹಾಸಿಗೆಯಲ್ಲಿ ಮೂತ್ರ ವಿಸರ್ಜಿಸಿದಾಗ ಬೆದರಿಸುವುದು, ಬೈಯುವುದು, ಹೊಡೆಯುವುದು ಮುಂತಾದವುಗಳನ್ನು ಮಾಡಬಾರದು. ಅಲ್ಲದೇ ಇತರರ ಮುಂದೆ ಇಂತಹ ಮಕ್ಕಳನ್ನು ಎಂದೂ ಅವಮಾನಿಸಬಾರದು.

ಬೆಚ್ಚಗಿನ ಸ್ಪರ್ಶ: ಮಗುವಿಗೆ ರಾತ್ರಿ ಮಲಗುವ ಮುನ್ನ ಕಥೆಗಳನ್ನು ಹೇಳುವುದು, ಸಂಗೀತ ಕೇಳಿಸುವುದು ಕೂಡ ಒಳ್ಳೆಯದು. ಅಲ್ಲದೇ ಅಪ್ಪ/ಅಮ್ಮ ಇಂತಹ ಮಕ್ಕಳನ್ನು ತಮ್ಮೊಂದಿಗೆ ಮಲಗಿಸಿಕೊಳ್ಳಬೇಕು. ಅಮ್ಮನ/ಅಪ್ಪನ ಬೆಚ್ಚಗಿನ ಸ್ಪರ್ಶ ಮಗುವಿಗೆ ಪ್ರೀತಿಯೊಂದಿಗೆ ಭದ್ರತೆ ಒದಗಿಸುತ್ತದೆ.

ಮೂತ್ರ ಚೀಲದ ಹತೋಟಿಗೆ ವ್ಯಾಯಾಮ: ಹಗಲು ಹೊತ್ತಿನಲ್ಲಿ ಮಗುವಿಗೆ ಮೂತ್ರ ವಿಸರ್ಜಿಸಬೇಕೆಂದಾಗ ಅದನ್ನು ಅರ್ಧಗಂಟೆ ಇಲ್ಲವೇ ಒಂದು ಗಂಟೆ ತಡೆಯಲು ಹೇಳಿ ನಂತರ ವಿಸರ್ಜಿಸುವ ಕ್ರಮ ಕಲಿಸಬೇಕು. ಇದೊಂದು ಚಿಕ್ಕ ವ್ಯಾಯಾಮ. ಇದರಿಂದ ಮೂತ್ರ ಚೀಲದ ನಿಯಂತ್ರಣ ಬಂದು ಅದರ ಮೂತ್ರ ಸಂಗ್ರಹ ಸಾಮರ್ಥ್ಯ ಹೆಚ್ಚುವುದು. ಇದನ್ನು ಪ್ರತಿದಿನ ಮಾಡಿದಲ್ಲಿ ಆಗ ಮೂತ್ರ ವಿಸರ್ಜಿಸುವ ಕ್ರಿಯೆ ಬಹುಬೇಗ ನಿಯಂತ್ರಣಕ್ಕೆ ಬರುತ್ತದೆ.

ಮನೆಮದ್ದು: ಬೆಳಿಗ್ಗೆ ಒಂದು ಚಮಚ ಅಳಲೆಕಾಯಿ ಪುಡಿಯನ್ನು ಕಾಲು ಲೋಟ ಕುಡಿಯಲು ನೀರಿನಲ್ಲಿ ಬೆರೆಸಿಟ್ಟು, ಸಾಯಂಕಾಲ 6 ಗಂಟೆಗೆ ಅದರ ತಿಳಿನೀರು ಮಾತ್ರ ಕುಡಿಸಬೇಕು. ಇದನ್ನು 15 ದಿನಗಳ ಕಾಲ ಕುಡಿಸಬೇಕು. ಇದರಿಂದ ಬಹುಬೇಗ ಮೂತ್ರವಿಸರ್ಜನೆ ನಿಯಂತ್ರಣಕ್ಕೆ ಬರುತ್ತದೆ.

ಮೌನದಿಂದಿರಿ: ಬೈಯ್ಯದೇ, ಶಿಕ್ಷಿಸದೇ ಬೆಳಿಗ್ಗೆ ಮಗು ಎದ್ದಾಗ ಸುಮ್ಮನೆ ಬೆಡ್‍ಶೀಟ್ ಬದಲಾಯಿಸಿ. ಒಂದೇ ಒಂದು ಮಾತು ಹೇಳಬೇಡಿ. ತಿಳಿವಳಿಕೆ ಬಂದ ನಂತರ ಮಗುವಿಗೂ ತಾನು ಮಾಡಿದ್ದು ತಪ್ಪು ಎಂದು ಅರಿವಾಗಿರುತ್ತದೆ.

ರಬ್ಬರ್‍ ಶೀಟ್: ಪ್ರತಿದಿನ ಮಲಗಿಸುವ ಮೊದಲು ರಬ್ಬರ್ ಶೀಟ್ ಹಾಸಿ, ಬೆಡ್‍ಶೀಟ್ ಹಾಕಿ ಮಲಗಿಸಿ. ಸಹನೆ ಮತ್ತು ಪ್ರೀತಿ ವಾತ್ಸಲ್ಯದಿಂದ ಮಗುವಿನಲ್ಲಿ ಖಂಡಿತ ಬದಲಾವಣೆ ಉಂಟಾಗುತ್ತದೆ.

ಮಗುವಿನ ಮೆದುಳಿಗೆ, ಮನಸ್ಸಿಗೆ ಮಾರ್ಗದರ್ಶನ: ಪ್ರತಿದಿನ ಮಗುವಿಗೆ ರಾತ್ರಿ ಮಲಗುವ ಮುಂಚೆ “ಈ ದಿನ ಹಾಸಿಗಯಲ್ಲಿ ಮೂತ್ರ ಮಾಡುವುದಿಲ್ಲ” ವೆಂದು ಹತ್ತು ಬಾರಿ ಗಟ್ಟಿಯಾಗಿ ಹೇಳಿಸಿ. ಬೆಳಿಗ್ಗೆ ಎದ್ದು ಮುಖ ತೊಳೆದ ನಂತರವೂ “ಈ ದಿನ ರಾತ್ರಿ ಹಾಸಿಗೆಯಲ್ಲಿ ಮೂತ್ರ ಮಾಡುವುದಿಲ್ಲ” ಎಂದು ಗಟ್ಟಿಯಾಗಿ ಹತ್ತು ಬಾರಿ ಹೇಳಿಕೊಳ್ಳುವಂತೆ ತಿಳಿಸಿ.

ಬೆಡ್ ವೆಟ್ಟಿಂಗ್ ಗೆ ಚಿಕಿತ್ಸೆ
ಈ ಎಲ್ಲ ಕ್ರಮಗಳಿಂದಲೂ ಮೂತ್ರ ಚೀಲದ ಹತೋಟಿ ಬಾರದಿದ್ದಲ್ಲಿ ಮತ್ತು ಮಾನಸಿಕ ತೊಂದರೆ ಇರುವ ಮಕ್ಕಳಲ್ಲಿ ಮನೋವೈದ್ಯರ ಚಿಕಿತ್ಸೆ, ಸಲಹೆಯ ಅವಶ್ಯಕತೆಯಿರುತ್ತದೆ. ಅದರೆ ಹೆಚ್ಚಿನಂಶ ಮಕ್ಕಳು ಈ ಮೊದಲು ತಿಳಿಸಿದ ವಿಧಾನಗಳಿಂದಲೇ ಸರಿಯಾಗುತ್ತವೆ.

ಡಾ. ವಸುಂಧರಾ ಭೂಪತಿ
bhupathivasundhara@gmail.com

SCROLL FOR NEXT