ವಿದ್ಯುತ್ ಚಾಲಿತ ವಾಹನ (ಸಂಗ್ರಹ ಚಿತ್ರ) 
ಅಂಕಣಗಳು

ಎಲೆಕ್ಟ್ರಿಕ್ ಚಾರ್ಜಿಂಗ್ ಸೆಂಟರ್ ವ್ಯಾಪಾರಕ್ಕೆ ಇದು ಸಕಾಲವೇ? (ಹಣಕ್ಲಾಸು)

ಹಣಕ್ಲಾಸು-275-ರಂಗಸ್ವಾಮಿ ಮೂಕನಹಳ್ಳಿ

ಕೊರೋನೋತ್ತರ ಬಹಳಷ್ಟು ಜನ ತಮ್ಮದೇ ಸ್ವಂತ ಉದ್ಯಮವನ್ನ ಶುರು ಮಾಡುವುದು ಖಚಿತ. ಹೀಗೆ ನಿಖರವಾಗಿ ಹೇಳಲು ಕಾರಣ ಸರಳ. ಬಹಳಷ್ಟು ವರ್ಷದಿಂದ ಒಂದು ಸಂಸ್ಥೆಗೆ ತಮ್ಮೆಲ್ಲವನ್ನೂ ಅಪರ್ಪಿಸಿಕೊಂಡು ತುಂಬಾ ಶ್ರದ್ಧೆಯಿಂದ ಕೆಲಸ ಮಾಡುತ್ತಾ ಬಂದಿದ್ದ ಬಹಳಷ್ಟು ಜನರಿಗೆ ಕೊರೋನ ಕಾರಣ ಹೇಳಿ ಮನೆಗೆ ಕಳುಹಿಸಿದ್ದಾರೆ. 

ಅಷ್ಟು ವರ್ಷದ ಸೇವೆಯನ್ನ ಕಿಂಚುತ್ತು ಕೂಡ ನೆನೆಯದೇ ಈ ರೀತಿಯ ವಿದಾಯ ಹೇಳಿರುವುದು ಕೇವಲ ಈ ರೀತಿ ವಿದಾಯ ಹೇಳಿಸಿಕೊಂಡವರಿಗೆ ಮಾತ್ರವಲ್ಲ, ಇದನ್ನ ಹತ್ತಿರದಿಂದ ಕಂಡ ಹಲವರಿಗೂ ಅಘಾತವಾಗಿರಲು ಸಾಧ್ಯವಿದೆ. 

ಬದುಕು ಎನ್ನುವುದು ನೀರ ಮೇಲಿನ ಗುಳ್ಳೆ ಎನ್ನುವ ವಾಕ್ಯವನ್ನ ಪ್ರಾಕ್ಟಿಕಲ್ ಆಗಿ ಈ ಮಟ್ಟಿಗೆ ನಾವೆಂದೂ ಕಂಡಿರಲಿಲ್ಲ. ಇದರಿಂದ ಇನ್ನಷ್ಟು ಕಾರಣಗಳಿಂದ ಏನಾದರೂ ಸರಿಯೇ ನಮ್ಮದೇ ಆದ ಒಂದು ಸಣ್ಣ ಉದ್ಯಮ ನಡೆಸಬೇಕು, ಪ್ರಾರಂಭಿಸಬೇಕು ಎನ್ನುವ ತವಕವಂತೂ ಹೆಚ್ಚಾಗಿದೆ. ಹೌದು ಯಾವ ವ್ಯಾಪಾರ ಶುರು ಮಾಡಿದರೆ ಒಳ್ಳೆಯದು? ಎನ್ನುವ ಪ್ರಶ್ನೆ ಕೂಡ ಇದೆ ಸಮಯದಲ್ಲಿ ಮುಂದೆ ಬಂದು ಕುಳಿತಿರುತ್ತದೆ. ನೀವು ಗಮನಿಸಿ ನೋಡಿ ಬಹಳ ಜನ ಈಗಾಗಲೇ ಇರುವ ತರಕಾರಿ ಅಂಗಡಿ, ಹಣ್ಣಿನ ಅಂಗಡಿ, ಇಲ್ಲವೇ ಸಲೂನ್ ಶಾಪ್, ಮೊಬೈಲ್ ಅಂಗಡಿ ಹೀಗೆ ನೂರಾರು ಜನ ಮಾಡುತ್ತಿರುವ ವ್ಯಾಪಾರವನ್ನೇ ಆಯ್ಕೆ ಮಾಡಿಕೊಳ್ಳುತ್ತಾರೆ. ಇದರ ಜೊತೆಗೆ ಇಂತಹ ಅಂಗಡಿಗಳನ್ನ ಅದೇ ಬಡಾವಣೆಯಲ್ಲಿ ಇನ್ನೊಂದು, ಮತ್ತೊಂದು ಎನ್ನುವಂತೆ ತೆರೆಯುತ್ತಾರೆ. ಹೀಗಾಗಿ ಇಬ್ಬರಿಗೂ ಪೂರ್ಣ ಲಾಭ ನೀಡದ ವ್ಯಾಪಾರವಾಗುತ್ತದೆ. ಇದಕ್ಕೆ ಬೇರೆ ಸಮಾಧಾನವಿಲ್ಲವೇ? ಇದೆ! ನಮ್ಮ ಸಮಾಜದಲ್ಲಿ ಆಗುತ್ತಿರುವ ಸಣ್ಣ ಪುಟ್ಟ ಬದಲಾವಣೆಗಳನ್ನ ನಾವು ಗಮನವಿಟ್ಟು ನೋಡುತ್ತಿದ್ದರೆ ಮತ್ತು ಬದಲಾವಣೆಯ ಸಮಯದಲ್ಲಿ ಹೊಸತು ಯಾವುದು ಮಾರುಕಟ್ಟೆ ಬಯಸುತ್ತದೆ ಎನ್ನುವುದನ್ನ ಕೂಡ ತಿಳಿದುಕೊಂಡರೆ ಅಲ್ಲಿಗೆ ಹೊಸ ವ್ಯಾಪಾರಕ್ಕೆ ಒಂದು ಹೊಸ ದಾರಿ ಸಿಕ್ಕಂತೆ!

ನಿಮಗೆಲ್ಲಾ ಗೊತ್ತಿರುವಂತೆ 2030ರ ನಂತರ ಭಾರತದಲ್ಲಿ EV ಅಂದರೆ ಎಲೆಕ್ಟ್ರಿಕಲ್ ವೆಹಿಕಲ್ಸ್ ನ ಭರಾಟೆ ಹೆಚ್ಚಾಗಲಿದೆ.

ನಿಧಾನವಾಗಿಯಾದರೂ ಸರಿಯೇ ಪೆಟ್ರೋಲ್ ಬಂಕ್ ಗಳು ನೇಪಥ್ಯವನ್ನ ಸೇರಲಿವೆ. ಆ ಜಾಗವನ್ನ ನಿಧಾನವಾಗಿ ಎಲೆಕ್ಟ್ರಿಕ್ ಚಾರ್ಜಿಂಗ್ ಸ್ಟೇಷನ್ ಗಳು ಆಕ್ರಮಿಸುತ್ತವೆ. 2021ರ ಈ ಸಮಯದಲ್ಲಿ ಆಗಲೇ ಬಹಳಷ್ಟು ಎಲೆಕ್ಟ್ರಿಕ್ ವೆಹಿಕಲ್ಸ್ ಕೂಗು ಹೆಚ್ಚಾಗುತ್ತಿದೆ. ಹೀಗಾಗಿ ಇಂದಿನ ದಿನದಲ್ಲಿ ಎಲೆಕ್ಟ್ರಿಕ್ ಚಾರ್ಜಿಂಗ್ ಸ್ಟೇಷನ್ ಹಾಕುವುದು ಎಲ್ಲಾ ರೀತಿಯಿಂದ ಉತ್ತಮ. ಇವತ್ತಿಗೆ ಸ್ವಲ್ಪ ಬೇಗ ಅನ್ನಿಸಬಹುದು ಆದರೆ ಇಂದು ಸುಲಭವಾಗಿ ಸಿಗುವ ಫ್ರಾಂಚೈಸ್ ಅಥವಾ ನಿಗದಿತ ಸಂಸ್ಥೆಯ ಡೀಲರ್ ಶಿಪ್ ಮುಂದಿನ ದಿನದಲ್ಲಿ ಸಿಗುತ್ತದೆ ಎನ್ನುವ ಖಾತ್ರಿ ಇರುವುದಿಲ್ಲ.

ಇಂದಿನ ಲೇಖನದಲ್ಲಿ ಭಾರತದಲ್ಲಿ ಪ್ರಮುಖವಾಗಿ ಈ ರೀತಿಯ ಪರವಾನಿಗೆ ಅಥವಾ ಫ್ರಾಂಚೈಸ್ ನೀಡುತ್ತಿರುವ ಸಂಸ್ಥೆಗಳು ಯಾವುವು? ಅವುಗಳಿಗೆ ಹೇಗೆ ಅರ್ಜಿ ಹಾಕುವುದು? ಮತ್ತು ಈ ರೀತಿಯ ಫ್ರಾಂಚೈಸ್ ಪಡೆಯುವುದರಿಂದ ಆಗುವ ಲಾಭವೇನು? ಎನ್ನುವುದರ ಬಗ್ಗೆ ತಿಳಿದು ಕೊಳ್ಳೋಣ.

ಭಾರತದಲ್ಲಿ ಎಲೆಕ್ಟ್ರಿಕ್ ವೆಹಿಕಲ್ ಚಾರ್ಜಿಂಗ್ ಸ್ಟೇಷನ್ ಹಾಕಲು ಪರವಾನಿಗೆ ಅಥವಾ ಫ್ರಾಂಚೈಸ್ ನೀಡುತ್ತಿರುವ ಪ್ರಮುಖ ಸಂಸ್ಥೆಗಳು ಹೀಗಿವೆ:

1. ಟಾಟಾ ಮೋಟರ್ಸ್. 2. ಒಕಾಯ ಪವರ್ ಗ್ರೂಪ್ 3. ವೋಲ್ಟ್ತ್ಯ್  4. ನ್ಯೂಮೋಸಿಟಿ  5. ಪಿ-2 ಪವರ್ ಸೊಲ್ಯೂಷನ್ಸ್ 6. ಎಕ್ಸಿಕಂ ಪವರ್ ಸಿಸ್ಟಮ್  7. ಮ್ಯಾಗ್ನೆಟ್ ಗ್ರೂಪ್ 8. ಚಾರ್ಜ್ ಮೈ ಗಡ್ಡಿ  9. ಇವಿ ಕ್ಯೂ ಪಾಯಿಂಟ್ 10. ಚಾರ್ಜ್ ಪ್ಲಸ್ ಜೋನ್.

ಇಂತಹ ಸಂಸ್ಥೆಯ ಫ್ರಾಂಚೈಸ್ ಪಡೆಯುವುದು ಹೇಗೆ?

ಮೇಲಿನ ಸಾಲನ್ನ ಗಮನಿಸಿದರೆ ಅಲ್ಲಿ ಪ್ರಮುಖವಾಗಿ ಹತ್ತು ಸಂಸ್ಥೆಗಳು ಸದ್ಯದ ಮಟ್ಟಿಗೆ ಫ್ರಾಂಚೈಸ್ ಅಥವಾ ಪರವಾನಿಗೆ ನೀಡುತ್ತಿವೆ ಎನ್ನುವುದು ತಿಳಿದು ಬರುತ್ತದೆ. 

ಅವುಗಳಲ್ಲಿ ಕೂಡ ಟಾಟಾ ಮೋಟಾರ್ಸ್ ಸಂಸ್ಥೆಯ ಫ್ರಾಂಚೈಸ್ ಪಡೆಯುವುದು ಹೇಗೆ ಎನ್ನುವುದನ್ನ ಇಲ್ಲಿ ನೋಡೋಣ. ಮುಕ್ಕಾಲು ಪಾಲು ಎಲ್ಲಾ ಸಂಸ್ಥೆಗಳ ರೀತಿ ರಿವಾಜು ಈ ವಿಷಯದಲ್ಲಿ ಸಮವಾಗಿರುತ್ತದೆ. ಅಲ್ಲೊಂದು ಇಲ್ಲೊಂದು ವ್ಯತ್ಯಾಸಗಳು ಇರುತ್ತದೆ. ಸರಿಯಾದ ಕ್ರಮವನ್ನ ಪಾಲಿಸಿದರೆ ಇಂತಹ ಫ್ರಾಂಚೈಸ್ ಸದಸ್ಯತ್ವ ಪಡೆಯುವುದು ಕಷ್ಟವಲ್ಲ.

ಎಲ್ಲಕೂ ಮೊದಲಿಗೆ :

  1. ಟಾಟಾ ಮೋಟಾರ್ಸ್ ವೆಬ್ ಸೈಟ್ ಗೆ ಭೇಟಿ ನೀಡಿ.
  2. ಬಿಸಿನೆಸ್ ಅವಕಾಶದ ಕೊಂಡಿಯಲ್ಲಿ, ಅದು ನಿಮ್ಮನ್ನ ಟಾಟಾ ಪವರ್ ವೆಬ್ ಸೈಟ ಗೆ ಕರೆದುಕೊಂಡು ಹೋಗುತ್ತದೆ.
  3. EV  ಚಾರ್ಜಿಂಗ್ ಸ್ಟೇಷನ್ ತೆರೆಯಲು ಅವಕಾಶ ಎನ್ನುವ ಕೊಂಡಿಯನ್ನ ಒತ್ತಿದರೆ ಅಲ್ಲಿ ನಿಮಗೆ : 1. ನಗರ ಪ್ರದೇಶದಲ್ಲಿ 2. ಹೈವೇ ಯಲ್ಲಿ 3. ಮಾಲ್ ಅಥವಾ ಶಾಪಿಂಗ್ ಸೆಂಟರ್ ನಲ್ಲಿ ಎಂದು ಮೂರು ಆಯ್ಕೆಯನ್ನ ನೀಡುತ್ತದೆ. ನಿಮಿಷ್ಟದ ಜಾಗವನ್ನ ಅಂದರೆ ನೀವು ಎಲ್ಲಿ ಚಾರ್ಜಿಂಗ್ ಸ್ಟೇಷನ್ ತೆರೆಯಬೇಕು ಎಂದು ಬಯಸುತ್ತೀರಿ ಅದನ್ನ ಆಯ್ಕೆ ಮಾಡಿಕೊಳ್ಳಬೇಕು.
  4. ಈ ಆಯ್ಕೆಯ ನಂತರ ಇದು ನಿಮ್ಮನ್ನ ಬಿಸಿನೆಸ್ ಸಂಬಂಧಿತ ಪ್ರಶ್ನೆಗಳ ಪುಟಕ್ಕೆ ಕರೆದು ಕೊಂಡು ಹೋಗುತ್ತದೆ, ಅಲ್ಲಿ ನಿಮ್ಮ ಹೆಸರು , ವಿಳಾಸ, ಫೋನ್ ಸಂಖ್ಯೆ ಹೀಗೆ ಕೇಳಿದ ಎಲ್ಲಾ ಪ್ರಶ್ನೆಗಳಿಗೆ ಉತ್ತರವನ್ನ ನೀಡಬೇಕಾಗುತ್ತದೆ.
  5. ಹೀಗೆ ಎಲ್ಲಾ ಕಡ್ಡಾಯ ಕಾಲಂಗಳನ್ನ ತುಂಬಿ ಕಳುಹಿಸಿದರೆ, ವಾರದಿಂದ ಹತ್ತು ದಿನದಲ್ಲಿ ಸಂಸ್ಥೆಯವರು ನಿಮಗೆ ಉತ್ತರಿಸುತ್ತಾರೆ.
  6. ನೇರವಾಗಿ tatapower@tatapower.com. ಗೆ ಈ ಮೇಲ್ ಕೂಡ ಮಾಡಿ ಮಾಹಿತಿಯನ್ನ ಪಡೆಯಬಹುದು.

 
ಭವಿಷ್ಯದ ಬ್ಯುಸಿನೆಸ್ ಎಂದು ಹೆಸರಾಗುತ್ತಿರುವ ಇಂತಹ ಫ್ರಾಂಚೈಸ್ ಶಿಪ್ ತೆಗೆದುಕೊಳ್ಳಲು ಪ್ರಮುಖ ಕಾರಣಗಳು ಅಥವಾ ಈ ರೀತಿಯ ಫ್ರಾಂಚೈಸ್ ಪಡೆಯುವುದರಿಂದ ಆಗುವ ಲಾಭವೇನು?

  1. ಇದಕ್ಕೆ ಹೆಚ್ಚು ಜಾಗದ ಜಂಜಾಟವಿಲ್ಲ . ಅತ್ಯಂತ ಕಡಿಮೆ ಎಂದರೆ 150 ಸ್ಕ್ವೇರ್ ಫೀಟ್ ಜಾಗದಲ್ಲಿ ಕೂಡ ಇದನ್ನ ಪ್ರಾರಂಭ ಮಾಡಬಹುದು.
  2. ಹೆಚ್ಚು ಬಂಡವಾಳದ ಅವಶ್ಯಕತೆ ಕೂಡ ಇಲ್ಲ: ಗಮನಿಸಿ ಇಲ್ಲಿ ನೀವು ಎಷ್ಟು ಸಂಖ್ಯೆಯಲ್ಲಿ ಚಾರ್ಜಿಂಗ್ ಪಾಯಿಂಟ್ ಗಳನ್ನ ಅಳವಡಿಸುತ್ತಿರಿ ಎನ್ನುವುದರ ಮೇಲೆ ಇದು ನಿರ್ಧಾರವಾಗುತ್ತದೆ.  ಹತ್ತು ಲಕ್ಷ ರೂಪಾಯಿಯಲ್ಲಿ ಒಂದು ಸಣ್ಣ ಉದ್ದಿಮೆಯನ್ನ ಪ್ರಾರಂಭಿಸಬಹದು.
  3. ಎರಡರಿಂದ ಮೂರು ವರ್ಷದಲ್ಲಿ ಹಾಕಿದ ಬಂಡವಾಳ ವಾಪಸ್ಸು ಬರುವ ಸಾಧ್ಯತೆ ವಿಪುಲವಾಗಿದೆ. ಸ್ವತಃ ನೆಲವನ್ನ ಹೊಂದಿದ್ದರೆ ಇನ್ನು ಹೆಚ್ಚು ಲಾಭ.
  4. ಹೈವೇ ಯಲ್ಲಿ ಪ್ರತಿ 25 ಕಿಲೋಮೀಟರ್ ಗೆ ಒಂದು ಸ್ಟೇಷನ್ ಗೆ ಅನುಮತಿ ಸಿಕ್ಕಿದೆ. ನಗರ ಪ್ರದೇಶದಲ್ಲಿ ಪ್ರತಿ 3 ಕಿಲೋಮೀಟರ್ ಗೆ ಒಂದು ಸ್ಟೇಷನ್ ಹಾಕಬಹುದು. ಹೀಗಾಗಿ ಸದ್ಯದ ಮಟ್ಟಿಗೆ ಇಲ್ಲಿ ಅವಕಾಶಗಳು ವಿಪುಲ.
  5. ಮಾಲ್ ಅಥವಾ ಇನ್ನಿತರೇ ಕಮರ್ಶಿಯಲ್ ಕಟ್ಟಡಗಳ ಬಳಿ ಇದನ್ನ ಸ್ಥಾಪಿಸುವುದರಿಂದ ಗ್ರಾಹಕರಿಗೆ ಇತರ ಸೇವೆಗಳನ್ನ ಕೂಡ ನೀಡಬಹುದು. ಪಾರ್ಕಿಂಗ್ ಸ್ಥಳಗಳಲ್ಲಿ , ಸಿನಿಮಾ ಹಾಲ್ ಗಳ ಸಮೀಪ ಅಥವಾ ಛತ್ರದ ಸಮೀಪ ಹೀಗೆ ಜನನಿಬಿಢ ಪ್ರದೇಶಗಳಲ್ಲಿ ಸ್ಟೇಷನ್ ಹಾಕುವುದರಿಂದ ಹೆಚ್ಚಿನ ಗಳಿಕೆಯನ್ನ ಮಾಡಬಹುದು.
  6. ಸರಿ ಸುಮಾರು ಹತ್ತು ಸಂಸ್ಥೆಗಳು ಸದ್ಯದ ಮಟ್ಟಿಗೆ ಫ್ರಾಂಚೈಸ್ ನೀಡುತ್ತಿವೆ. ಇವುಗಳಲ್ಲಿ ಹಲವು ಒಂದು ಪೈಸೆ ಕೂಡ ಫ್ರಾಂಚೈಸ್ ಫೀಸ್ ಕೇಳುತ್ತಿಲ್ಲ. ಇಂದಿಗೆ ಗ್ರಾಹಕನಿಗೆ ಸೇವೆಯನ್ನ ನೀಡಬೇಕು ಎನ್ನುವ ಏಕೈಕ ಉದ್ದೇಶ ಅವುಗಳದು. ಮುಂಬರುವ ದಿನಗಳಲ್ಲಿ ಇದಕ್ಕೆ ಕೂಡ ಹಣವನ್ನ ನೀಡಬೇಕಾಗುತ್ತದೆ.
  7. ಮೇಲೆ ಹೇಳಿದಂತೆ ಮಾರುಕಟ್ಟೆ ಒಂದು ಹಂತಕ್ಕೆ ಸಿದ್ದವಾದ ಮೇಲೆ, ಫ್ರಾಂಚೈಸ್ ಪಡೆಯಲು ಕೂಡ ಪೈಪೋಟಿ ಶುರುವಾಗುತ್ತದೆ. ಅಂದಿನ ದಿನದಲ್ಲಿ ಸೆಟ್ ಅಪ್ ಕಾಸ್ಟ್ ಕೂಡ ಬಹಳಷ್ಟು ಹೆಚ್ಚಾಗಿರುತ್ತದೆ. ಇಂಗ್ಲಿಷ್ ನಲ್ಲಿ ಹೇಳುವಂತೆ ಅರ್ಲಿ ಬರ್ಡ್ ಅಡ್ವಾಂಟೇಜ್ ಸಿಗುವುದಿಲ್ಲ. ಇಂದಿನ ದಿನದಲ್ಲಿ ಇದು ಸಾಧ್ಯವಿದೆ.
  8. ಇದು ಅತ್ಯಂತ ದೊಡ್ಡ ಮಾರುಕಟ್ಟೆಯಾಗಿ ಪರಿವರ್ತನೆ ಗೊಳ್ಳಲಿದೆ. ಗಮನಿಸಿ ಇದು ಕೇವಲ ಕಾರು ಎಂದಲ್ಲ, ಬೈಕುಗಳು ಮತ್ತು ಸ್ಕೂಟರ್ ಗಳು ಕೂಡ ಅತ್ಯಂತ ಶೀಘ್ರವಾಗಿ ಎಲೆಕ್ರಿಕ್ ಆಗಿ ರೂಪುಗೊಳ್ಳಲಿವೆ. ನಮ್ಮ ಆರ್ಥಿಕತೆಯ ತಾಕತ್ತಿನ ಮೇಲೆ ಇಲ್ಲಿ ಹೂಡಿಕೆಯನ್ನ ಮಾಡಬಹುದು. ಅಂದರೆ ಒಮ್ಮೆಲೇ ನೂರು ಬೈಕು ಚಾರ್ಜ್ ಮಾಡುವ ಸ್ಟೇಷನ್ ಕೂಡ ಹೊಂದಬಹುದು ಅಥವಾ ಕೇವಲ ಒಂದು, ಐದು ಅಥವಾ ಹತ್ತು, ಹೀಗೆ ನಮ್ಮ ಬಂಡವಾಳ ಎಷ್ಟಿದೆ ಅಷ್ಟದ ಆಧಾರದ ಮೇಲೆ ನಾವು ವ್ಯಾಪಾರ ಶುರು ಮಾಡಬಹುದು.

ಕೊನೆ ಮಾತು: ಭಾರತದ ಮಾಜಿ ರಾಷ್ಟ್ರಾಧ್ಯಕ್ಷ ದಿವಗಂತ ಶ್ರೀ ಅಬ್ದುಲ್ ಕಲಾಂ ಅವರು 'ನೀನು ಮಾಡುವ ಕೆಲಸವನ್ನ ಪ್ರೀತಿಸು ಆದರೆ ನೀನು ಮಾಡುವ ಸಂಸ್ಥೆಯನ್ನಲ್ಲ' ಎನ್ನುವ ಮಾತನ್ನ ಹೇಳಿದ್ದರು. ಅದು ಬಹಳ ಪ್ರಸಿದ್ಧವಾಗಿತ್ತು ಕೂಡ. ಆದರೆ ಅದರಲ್ಲಿರುವ ಭಾವಾರ್ಥವನ್ನ ಎಲ್ಲರೂ ಗಮನಿಸಿ ಅದಕ್ಕೆ ಮೆಚ್ಚುಗೆಯನ್ನ ಸೂಚಿಸಿದ್ದಾರೆ ವಿನಃ ಅದನ್ನ ಜೀವನದಲ್ಲಿ ಅಳವಡಿಸಿಕೊಂಡವರ ಸಂಖ್ಯೆ ಬಹಳ ಕಡಿಮೆ. ಕರೋನ ಸತ್ಯ ಮತ್ತು ಮಿಥ್ಯಗಳನ್ನ ತೆರೆದು ನಮ್ಮ ಮುಂದೆ ಇಟ್ಟಿದೆ. ಈ ದಿನಗಳಲ್ಲಿ ಕೂಡ ನಾವು ಕಲಿಯದೇ ಹೋದರೆ ನಾವು ಕಲಿಯುವುದು ಯಾವಾಗ? ಅಂದ ಮಾತ್ರಕ್ಕೆ ಈ ವ್ಯಾಪಾರಕ್ಕೆ ಎಲ್ಲರೂ ಕೈ ಹಾಕಬೇಕು ಅಥವಾ ಹಾಕಲಿ ಎನ್ನುವುದು ಉದ್ದೇಶವಲ್ಲ. ಇದು ಕೂಡ ದೊಡ್ಡ ದೊಡ್ಡ ಸಂಸ್ಥೆಗಳ ಕೈ ಸೇರುವ ಮುನ್ನಾ ಜನ ಸಾಮಾನ್ಯರಿಗೆ ಇಲ್ಲಿ ಅವಕಾಶವಿದೆ. ಡಿಪ್ಲಾಮೋ , ಆಟೋಮೊಬೈಲ್ ಮತ್ತು ಈ ರೀತಿಯ ಸೇವೆಯಲ್ಲಿ ಆಗಲೇ ಒಂದಷ್ಟು ಕಾರ್ಯವನ್ನ ಮಾಡುತ್ತಾ ಬಂದಿರುವ ಯುವಕರಿಗೆ ಇದು ಹೇಳಿ ಮಾಡಿಸಿದ ಹಾಗಿದೆ. ಜೊತೆಗೆ ಹತ್ತರಿಂದ ಇಪ್ಪತ್ತು ಲಕ್ಷ ರೂಪಾಯಿ ಹಣವನ್ನ ಎಲ್ಲಿ ಹೂಡಿಕೆ ಮಾಡಬೇಕು ಎನ್ನುವ ಗೊಂದಲದಲ್ಲಿರುವ ಹೊಡಿಕೆದಾರರಿಗೂ ಇದು ಸೂಕ್ತ. ಬ್ಯಾಂಕಿನ ಬಡ್ಡಿ ದರ ಐದೂವರೆಗೆ ಇಳಿದಿರುವ ಈ ಸಮಯದಲ್ಲಿ ವಾರ್ಷಿಕ 12 ರಿಂದ 15 ಪ್ರತಿಶತ ಗಳಿಸಿಕೊಟ್ಟರೆ ಮತ್ತು ಹೆಚ್ಚಿನ ಬೆಳವಣಿಗೆಗೆ ದಾರಿಯೂ ಇರುವುದರಿಂದ ಇದೊಂದು ಉತ್ತಮ ಹೂಡಿಕೆ ಆಯ್ಕೆ ಎನ್ನಬಹುದು. ಎಲ್ಲಾ ಹೂಡಿಕೆಯಂತೆ ಇಲ್ಲಿಯೂ ಗಮನವಿಟ್ಟಿರಬೇಕಾಗುತ್ತದೆ ಎನ್ನುವುದನ್ನ ಕೂಡ ಗಮನಿಸಬೇಕು.

-ರಂಗಸ್ವಾಮಿ ಮೂಕನಹಳ್ಳಿ

muraram@yahoo.com

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

'ಆ ದೇಶಕ್ಕೂ ನಾನೇ 'ಹಂಗಾಮಿ' ಸರ್ವೋಚ್ಛ ನಾಯಕ': Donald Trump ಘೋಷಣೆ, ಬೆಚ್ಚಿಬಿದ್ದ ವೆನೆಜುವೆಲಾ!

PSLV-C62 ಮಿಷನ್ ವಿಫಲ: ಕೊನೆಯ ಹಂತದಲ್ಲಿ ಎದುರಾದ ಸಮಸ್ಯೆ, ISROಗೆ ಹಿನ್ನಡೆ

ಇತಿಹಾಸ ಕಲಿಯಬೇಕಿದ್ದರೆ ಕಾಲೇಜಿಗೆ ಹೋಗುತ್ತಾರೆ, ನಿಮ್ಮ ಬೋಧನೆಯ ಅಗತ್ಯವಿಲ್ಲ: ಪ್ರಧಾನಿ ಮೋದಿ ವಿರುದ್ಧ ಪ್ರಿಯಾಂಕ್ ಖರ್ಗೆ ವಾಗ್ದಾಳಿ

MGNREGA Row: ಯಾವಾಗ-ಎಲ್ಲಿ ಬೇಕಾದರೂ ಚರ್ಚೆಗೆ ಸಿದ್ಧ, ಡೈಲಾಗ್‌ ವೀರ HDK ಬಂದರೆ ಒಳ್ಳೆಯದು; ಡಿ.ಕೆ.ಶಿವಕುಮಾರ್

Positive Vibes ಗಾಗಿ ಮನೆಯಲ್ಲಿ ಯಾವ ಗಿಡ ಬೆಳಸಬೇಕು: ಮುಳ್ಳಿನ ಗಿಡಗಳಲ್ಲಿದೆಯೇ ನಕರಾತ್ಮಕ ಶಕ್ತಿ; ಮಲ್ಲಿಗೆ ಮತ್ತು ತುಳಸಿಗೆ ಸೂಕ್ತ ಸ್ಥಳ ಯಾವುದು?

SCROLL FOR NEXT