ಅಂಕಣಗಳು

ಫಂಗಸ್ ಸೋಂಕು ಲಕ್ಷಣಗಳೇನು? ಪರಿಹಾರ ಹೇಗೆ? ಇಲ್ಲಿದೆ ಮಾಹಿತಿ.. (ಕುಶಲವೇ ಕ್ಷೇಮವೇ)

ಡಾ. ವಸುಂಧರಾ ಭೂಪತಿ

ನಮಗೆ ಅನಾರೋಗ್ಯ ಉಂಟಾಗಲು ಕೇವಲ ಅಹಿತಕರ ಆಹಾರ, ಕಲುಷಿತ ನೀರು ಮತ್ತು ಅಶುದ್ಧ ಗಾಳಿ ಕಾರಣವಲ್ಲ. ಸುತ್ತಮುತ್ತಲಿನ ಪರಿಸರ ಮತ್ತು ದಿನನಿತ್ಯ ಇರುವ ವಾತಾವರಣವೇ ವಿವಿಧ  ರೀತಿಯ ಸೋಂಕುಗಳನ್ನು ತಂದೊಡ್ಡಬಹುದು. ಫಂಗಸ್ಸಿನ ಸೋಂಕು ಅವುಗಳಲ್ಲಿ ಒಂದು.

ಫಂಗಸ್‍ ಎಂದರೇನು?

ಫಂಗಸ್‍ ಒಂದು ಸೂಕ್ಷ್ಮಾಣುಜೀವಿ. ಇದು ಅತ್ಯಂತ ಸೂಕ್ಷ್ಮವಾಗಿರುವುದರಿಂದ ಬರಿಗಣ್ಣಿಗೆ ಕಾಣಿಸುವುದಿಲ್ಲ. ಕೆಲವೊಮ್ಮೆ ಫಂಗಸ್ಸುಗಳು ಮಾನವರ ದೇಹದೊಳಗೆ ಪ್ರವೇಶಿಸಿ ಹಾನಿಕಾರಕವಾಗಿ ಪರಿಣಮಿಸುತ್ತವೆ. ಶರೀರದ ರೋಗನಿರೋಧಕ ಶಕ್ತಿ ಕುಂಠಿತಗೊಂಡಾಗ ಫಂಗಸ್ಸುಗಳು ಅನೇಕ ಸೋಂಕುಗಳನ್ನು ಉಂಟುಮಾಡುತ್ತವೆ.

ಫಂಗಸ್ ಸೋಂಕು ಮಾನವರಲ್ಲಿ ಸಾಮಾನ್ಯವಾಗಿ ಕಾಣಿಸಿಕೊಳ್ಳುವ ಸೋಂಕಾಗಿದೆ. ದೇಹದಲ್ಲಿ ತೇವಾಂಶ ಅಧಿಕವಾಗಿರುವ ಪ್ರದೇಶಗಳಲ್ಲಿ ಫಂಗಸ್ಸಿನ ಸೋಂಕು ಉಂಟಾಗುವ ಸಾಧ್ಯತೆ ಹೆಚ್ಚು. ಶ್ವಾಸಕೋಶ, ಮೆದುಳಿಗೆ ಫಂಗಸ್ಸಿನ ಸೋಂಕು ತಗುಲಿದರೆ ಅಪಾಯಕಾರಿ. ಫಂಗಸ್ಸಿನ ಸೋಂಕುಗಳು ಹೆಚ್ಚಾಗಿ ಚರ್ಮದ ಮೂಲಕ ಕಾಣಿಸಿಕೊಳ್ಳುತ್ತವೆ. ಆದ್ದರಿಂದ ಚರ್ಮದ ಸ್ವಚ್ಛತೆಯ ಕಡೆಗೆ ಅತ್ಯಂತ ಹೆಚ್ಚು ಗಮನ ಹರಿಸಬೇಕು.

ಫಂಗಸ್ ಸೋಂಕಿನ ಲಕ್ಷಣಗಳು

ಕುತ್ತಿಗೆ, ಭುಜ, ಬೆನ್ನಿನ ಮೇಲೆ ದುಂಡಗಿನ ಅಥವಾ ಬಿಳಿ, ಕೆಂಪು, ಕಪ್ಪು, ಕಂದು ಬಣ್ಣದ ಆಕಾರ ರಹಿತ ಮಚ್ಚೆಗಳು, ಈ ಮಚ್ಚೆಗಳಲ್ಲಾಗುವ ತುರಿಕೆ, ತೊಡೆ ಸಂಧಿ, ಕಂಕಳು, ಕೈ, ಕಾಲು ಬೆರಳಿನ ಸಂಧಿ, ಸ್ತನಗಳ ಕೆಳಭಾಗದಲ್ಲಿ, ಸೊಂಟದ ಭಾಗದಲ್ಲಿ ಚರ್ಮದ ಬಣ್ಣ ಬದಲಾಗುವುದು, ಉರಿ, ತುರಿಕೆ ಉಂಟಾಗುವುದು ಮುಂತಾದವು ಫಂಗಸ್ ಸೋಂಕಿನ ಲಕ್ಷಣಗಳಾಗಿವೆ. ಇಂತಹ ಲಕ್ಷಣಗಳು ಕಂಡುಬಂದರೆ ತಡ ಮಾಡದೇ ವೈದ್ಯರನ್ನು ಕಂಡು ಚಿಕಿತ್ಸೆ ಪಡೆದುಕೊಳ್ಳಬೇಕು. ಸೋಂಕನ್ನು ನಿರ್ಲಕ್ಷ್ಯಮಾಡಿದರೆ ಮುಂದೆ ಗಂಭೀರ ಪರಿಣಾಮಗಳನ್ನು ಎದುರಿಸಬೇಕಾಗುತ್ತದೆ.

ಫಂಗಸ್ ಸೋಂಕಿಗೆ ಕಾರಣಗಳು

ಗಾಳಿ, ನೀರು, ಮಣ್ಣು ಸೇರಿದಂತೆ ವಿವಿಧ ಮೂಲಗಳಿಂದ ಫಂಗಸ್ಸುಗಳು ಮನುಷ್ಯನ ದೇಹ ಸೇರಿ ಪರಿಣಾಮ ಬೀರುತ್ತವೆ. ಫಂಗಸ್ಸುಗಳು ಸೌಮ್ಯ ಸ್ವರೂಪಗಳಿಂದ ಹಿಡಿದು ಅಪಾಯ ಎನಿಸುವ ಸೋಂಕುಗಳಿಗೂ ಕಾರಣವಾಗಬಹುದು. ಅನ್ನನಾಳ, ಮೆದುಳಿನ ಮೇಲ್ಕವಚ ಸೇರಿದಂತೆ ವಿವಿಧ ಅಂಗಗಳಿಗೆ ಶಿಲೀಂಧ್ರಗಳ ಸೋಂಕು ಉಂಟಾಗುವ ಸಾಧ್ಯತೆಗಳು ಹೆಚ್ಚಿರುತ್ತವೆ.

ಶಿಲೀಂಧ್ರಗಳ ಬೆಳವಣಿಗೆಗೆ ತೇವಾಂಶವೇ ಕಾರಣವಾಗಿರುತ್ತದೆ. ದೇಹದ ಯಾವುದೇ ಭಾಗ ತೇವಾಂಶದಿಂದ ಕೂಡಿರದಂತೆ ಎಚ್ಚರಿಕೆಯಿಂದ ನೋಡಿಕೊಳ್ಳಬೇಕು. ಸ್ನಾನ ಮಾಡಿದ ನಂತರ ದೇಹವನ್ನು ಟವೆಲ್‍ನಿಂದ ಸರಿಯಾಗಿ ಒರೆಸಿಕೊಳ್ಳಬೇಕು. ಸ್ವಚ್ಛ ಕಾಲುಚೀಲ, ಟವೆಲ್, ಬಟ್ಟೆಗಳನ್ನು ಪ್ರತಿನಿತ್ಯ ಬಳಸಬೇಕು. ತೇವಾಂಶರಹಿತ ಒಳಉಡುಪುಗಳನ್ನು ಬಳಸಬೇಕು. ಸಾಬೂನು ಮತ್ತು ಬಾಚಣಿಗೆಗಳು ಎಲ್ಲರಿಗೂ ಪ್ರತ್ಯೇಕವಾಗಿ ಇರಬೇಕು. ವಾರದಲ್ಲಿ ಕನಿಷ್ಠ ಒಂದು ಸಲವಾದರೂ ತಲೆಗೆ ಸ್ನಾನ ಮಾಡಬೇಕು.

ಫಂಗಸ್ ಸೋಂಕು, ಪರಿಹಾರ, ಮನೆಮದ್ದು

ಉಗುರುಸುತ್ತು ಸಾಮಾನ್ಯವಾಗಿ ಕಾಣಿಸಿಕೊಳ್ಳುವ ಒಂದು ಫಂಗಸ್ ಸೋಂಕು. ಇದು ಹೆಚ್ಚಾಗಿ ಬೆರಳ ಸಂಧಿಯಲ್ಲೇ ಕಾಣಿಸಿಕೊಳ್ಳುತ್ತದೆ. ಇದಕ್ಕೆ ತೆಂಗಿನೆಣ್ಣೆ ಮತ್ತು ಒಂದೆರಡು ಎಸಳು ಬೆಳ್ಳುಳ್ಳಿ ಜಜ್ಜಿ ಹಾಕಿ ಬಿಸಿ ಮಾಡಿ ಸೋಂಕು ಆಗಿರುವ ಜಾಗಕ್ಕೆ ಹಚ್ಚಿದರೆ ವಾಸಿಯಾಗುತ್ತದೆ.

ಫಂಗಸ್ ಸೋಂಕನ್ನು ತಡೆಯಲು ನಾವು ಬಳಸುವ ಬಟ್ಟೆಗಳನ್ನು ನಿಯಮಿತವಾಗಿ ಸ್ವಚ್ಛಗೊಳಿಸಬೇಕು. ಡಿಯೋಡರೆಂಟ್‍ಗಳ ಅತಿಯಾದ ಬಳಕೆಯನ್ನು ತಪ್ಪಿಸಬೇಕು.

ಮಳೆಗಾಲದಲ್ಲಿ ಚರ್ಮದ ಸಮಸ್ಯೆಗಳು ಎದುರಾಗುವುದು ಸಾಮಾನ್ಯ. ಆದ್ದರಿಂದ ಚರ್ಮದ ಮೇಲೆ ದದ್ದು ಅಥವಾ ಕಲೆಗಳ ಬಗ್ಗೆ ಎಚ್ಚರವಹಿಸಬೇಕು. ಎಕ್ಜಿಮಾ, ಉಗುರು ಸೋಂಕು, ಮೊಡವೆಗಳು ಮತ್ತು ಫಂಗಲ್ ಸೋಂಕುಗಳ ಬಗ್ಗೆ ಜಾಗೃತರಾಗಿರಬೇಕು.

ರಾತ್ರಿ ಹೊತ್ತು ಮಲಗುವ ಮುಂಚೆ ಬೇವಿನ ಪುಡಿಯನ್ನು ಬಾಧಿತ ಭಾಗಕ್ಕೆ ಸಿಂಪಡಿಸಬೇಕು. ಬೆರಳು ಸಂದಿಗಳಲ್ಲಿ ಫಂಗಸ್ ಸೋಂಕು ಉಂಟಾಗುವುದರಿಂದ ಸ್ನಾನ ಮಾಡಿದ ನಂತರ ಬೆರಳುಸಂದಿಯನ್ನು ಚೆನ್ನಾಗಿ ಟವೆಲ್ಲಿನಿಂದ ನೀರಿನಂಶ ಹೋಗುವಂತೆ ಸ್ವಚ್ಛಮಾಡಿಕೊಳ್ಳಬೇಕು. ಸದಾಕಾಲ ಷೂ ಧರಿಸುವವರು ಆಗಾಗ ಷೂ ಮತ್ತು ಸಾಕ್ಸನ್ನು ತೆಗೆದು ಗಾಳಿಯಾಡಲು ಬಿಡಬೇಕು. ಬೆರಳುಗಳು ಒಂದಕ್ಕೊಂದು ಅಂಟಿಕೊಂಡು ಇರುವವರು, ಡಯಾಬಿಟಿಸ್‍ ಇರುವವರು ಮತ್ತು ಪದೇ ಪದೇ ಇತರ ಸೋಂಕುಗಳಿಗೆ ಒಳಗಾಗುವವರು ಹೆಚ್ಚಿನ ಎಚ್ಚರಿಕೆ ವಹಿಸಬೇಕು. ಗೃಹಿಣಿಯರು ಪಾತ್ರೆ ತೊಳೆಯರು, ಅಡುಗೆ ಮಾಡಲು ಮತ್ತು ಮನೆ ಒರೆಸುವಾಗ ಹೀಗೆ ಸದಾಕಾಲ ನೀರಿನ ಸಂಪರ್ಕದಲ್ಲಿ ಇರುತ್ತಾರೆ. ಅವರಿಗೆ ಫಂಗಸ್ ಸೋಂಕು ಉಂಟಾದರೆ ವಿಶೇಷ ಕಾಳಜಿ ವಹಿಸಬೇಕು. ಕಾಲು ಮತ್ತು ಕೈ ಬೆರಳುಗಳನ್ನು ಸರಿಯಾಗಿ ಒರೆಸಿ ಒಣಗಿಸಿಕೊಳ್ಳಬೇಕು.

ದಿನನಿತ್ಯ ಸಾಕಷ್ಟು ನೀರನ್ನು ಅಂದರೆ ಮೂರರಿಂದ ನಾಲ್ಕು ಲೀಟರ್ ನೀರನ್ನು ಕುಡಿಯಬೇಕು. ಜೊತೆಗೆ ಆಹಾರದಲ್ಲಿ ಬದನೆಕಾಯಿ ಮತ್ತು ವಾಯುಕಾರಕ ಪದಾರ್ಥಗಳನ್ನು ವರ್ಜಿಸಬೇಕು. ವ್ಯಾಯಾಮ/ನಡಿಗೆಯನ್ನು ಪ್ರತಿನಿತ್ಯ ಕನಿಷ್ಠ ಒಂದುಗಂಟೆ ಮಾಡಿದರೆ ಉತ್ತಮ. ಹಿತಕರವಾದ ಚಪ್ಪಲಿ/ಷೂಗಳನ್ನು ಧರಿಸಬೇಕು. ಹೀಗೆ ಉತ್ತಮ ಜೀವನಶೈಲಿಯನ್ನು ಪಾಲಿಸಿದರೆ ಫಂಗಸ್ ಸೋಂಕಿನಿಂದ ಪಾರಾಗಬಹುದು.

ಬ್ಲಾಕ್ ಫಂಗಸ್

ಕಳೆದ ಎರಡು ವರ್ಷಗಳಲ್ಲಿ ಕೋವಿಡ್‍ ರೋಗ ಇರುವವರಲ್ಲಿ ಬ್ಲಾಕ್ ಫಂಗಸ್ (ಮ್ಯೂಕರ್ ಮೈಕೋಸಿಸ್) ಸೋಂಕು ಕಾಣಿಸಿಕೊಂಡು ಸಾಕಷ್ಟು ಸುದ್ದಿಯಾಯಿತು. ಕೋವಿಡ್ ರೋಗಿಗಳಲ್ಲಿ ಆಮ್ಲಜನಕ ಪ್ರಮಾಣ ಕುಸಿದಾಗ ಮೂಗಿನ ನಳಿಕೆಗಳು ಅಥವಾ ಬಾಯಿ ಮುಖಾಂತರ ಹಾಕಿದ ಟೂಬ್ಯುಗಳಲ್ಲಿ ಹ್ಯೂಮಿಡಿಫೈಯರ್ ಬೆರೆಸಿದ ಆಮ್ಲಜನಕ ನೀಡಿ ದೇಹಕ್ಕೆ ತೊಂದರೆಯಾಗದಂತೆ ಎಚ್ಚರ ವಹಿಸಲಾಗುತ್ತದೆ. ಈ ಉದ್ದೇಶಕ್ಕೆ ಬಳಸುವ ನೀರು ಪರಿಶುದ್ಧವಾಗಿರಬೇಕು. ಕಲುಷಿತ ಮತ್ತು ಸೋಂಕಿತ ನೀರು ಬಳಸಿದಲ್ಲಿ ಅದರ ಮುಖಾಂತರ ಫಂಗಸ್ಸುಗಳು ದೇಹಕ್ಕೆ ಸೇರಿ ಬ್ಲಾಕ್ ಫಂಗಸ್ ಬಂದಿರುವುದು ವರದಿಯಾಗಿದೆ.

ಬ್ಲಾಕ್ ಫಂಗಸ್ ಸೋಂಕು ಕಣ್ಣು, ಮೆದುಳು, ಶ್ವಾಸಕೋಶ ಮತ್ತು ಸೈನಸ್‍ಗಳಿಗೆ ಅಪಾಯವನ್ನುಂಟು ಮಾಡುವುದರಿಂದ ಗಂಭೀರವಾದ ಸಮಸ್ಯೆಯಾಗಿದೆ. ಕೋವಿಡ್ ರೋಗಿಗಳಲ್ಲಿ ಡಯಾಬಿಟಿಸ್‍ ಇರುವವರಿಗೆ ಸಕ್ಕರೆಯ ಮಟ್ಟ ಹೆಚ್ಚಾದಾಗ ಬ್ಲಾಂಕ್ ಫಂಗಸ್ ಸೋಂಕು ಕಾಣಿಸಿಕೊಂಡಿದೆ. ಮೂತ್ರಜನಕಾಂಗ (ಕಿಡ್ನಿ), ಯಕೃತ್ತಿನ (ಲಿವರ್) ಸಮಸ್ಯೆಗಳು ಮತ್ತು ನ್ಯುಮೋನಿಯಾದಂತಹ ಕಾಯಿಲೆಗಳು ಈ ಪರಿಸ್ಥಿತಿಯನ್ನು ಉಲ್ಬಣಗೊಳಿಸುತ್ತವೆ.

ಡಾ. ವಸುಂಧರಾ ಭೂಪತಿ
ಮೊ: 9986840477
ಇ-ಮೇಲ್ : bhupathivasundhara@gmail.com

SCROLL FOR NEXT