ರಷ್ಯಾ ಮತ್ತು ಉಕ್ರೇನ್ ನಡುವಿನ ಯುದ್ಧದ ವಿಚಾರದಲ್ಲಿ ತಾನು ಯಾವುದೇ ಮಧ್ಯಸ್ಥಿಕೆ ವಹಿಸುವುದಿಲ್ಲ ಎಂದು ಭಾರತ ನಿರ್ಧರಿಸಿದೆ.
ಭಾರತ ಮತ್ತು ಉಕ್ರೇನ್‌ಗಳು ಗ್ಯಾಸ್ ಟರ್ಬೈನ್‌ಗಳ ನಿರ್ಮಾಣಕ್ಕಾಗಿ ಜೊತೆಯಾಗಿ ಕಾರ್ಯಾಚರಿಸುವ ಕುರಿತು ಆಲೋಚನೆ ನಡೆಸುತ್ತಿವೆ.
ಭಾರತದ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು ಆಗಸ್ಟ್ 23ರ ಶುಕ್ರವಾರದಂದು ಉಕ್ರೇನ್ ರಾಜಧಾನಿ ಕೀವ್ ನಗರಕ್ಕೆ ಭೇಟಿ ನೀಡಲಿದ್ದಾರೆ. ಇದು ಅಮೆರಿಕಾ ಮತ್ತು ರಷ್ಯಾಗಳ ಜೊತೆಗಿನ ಭಾರತದ ಸಂಬಂಧದಲ್ಲಿ ಸಮತೋಲನ ಸಾಧಿಸುವ ಹೆಜ್ಜೆಯಂತೆ ಕಂಡುಬರುತ್ತಿದೆ. ಆದರೆ, ನರೇಂದ್ರ ಮೋದಿಯವರು ಪ್ರಸ್ತುತ ನಡೆಯುತ್ತಿರುವ ರಷ್ಯಾ - ಉಕ್ರೇನ್ ಯುದ್ಧವನ್ನು ನಿಲ್ಲಿಸುವ ಸಲುವಾಗಿ ಮಧ್ಯಸ್ಥಿಕೆಯ ಪಾತ್ರ ವಹಿಸುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ ಎನ್ನಲಾಗಿದೆ.
ಅನಾಮಧೇಯ ಮೂಲಗಳ ಪ್ರಕಾರ, ರಷ್ಯನ್ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಮತ್ತು ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಜೆಲೆನ್ಸ್‌ಕಿ ನಡುವೆ ಸಂದೇಶ ವಿನಿಮಯ ನಡೆಸಲು ಭಾರತ ಒಪ್ಪಿದೆ. 2022ರಲ್ಲಿ ರಷ್ಯಾ ಉಕ್ರೇನ್ ಮೇಲೆ ಆಕ್ರಮಣ ನಡೆಸಿದ ಬಳಿಕ ಆರಂಭಗೊಂಡ ಈ ಯುದ್ಧವನ್ನು ನಿಲ್ಲಿಸಲು ಮಾತುಕತೆ ಮತ್ತು ರಾಜತಾಂತ್ರಿಕತೆಯೇ ಸರಿಯಾದ ಮಾರ್ಗ ಎಂದು ಭಾರತೀಯ ಅಧಿಕಾರಿಗಳು ಅಂದಿನಿಂದಲೂ ಆಗ್ರಹಿಸುತ್ತಾ ಬಂದಿದ್ದಾರೆ.
ಇತ್ತೀಚೆಗೆ ಪ್ರಧಾನಿ ನರೇಂದ್ರ ಮೋದಿಯವರು ಭಾರತದ ದೀರ್ಘಕಾಲೀನ ಮಿತ್ರ ರಾಷ್ಟ್ರವಾದ ರಷ್ಯಾಗೆ ತೆರಳಿದ್ದರು. ಮೋದಿಯವರ ರಷ್ಯಾ ಭೇಟಿ ಅಮೆರಿಕಾಗೆ ಕಣ್ಣು ಕೆಂಪಾಗುವಂತೆ, ಭಾರತದ ಕುರಿತು ಅಸಮಾಧಾನ ಮೂಡುವಂತೆ ಮಾಡಿತ್ತು. ಆದರೆ ಈಗ ಮೋದಿಯವರು ಅಮೆರಿಕಾ ಬೆಂಬಲಿತ ಉಕ್ರೇನ್‌ಗೆ ಭೇಟಿ ನೀಡಲಿದ್ದಾರೆ. ಅಧ್ಯಕ್ಷ ಜೋ ಬೈಡನ್ ನೇತೃತ್ವದ ಅಮೆರಿಕಾ ಆಡಳಿತ ಭಾರತದೊಡನೆ ಬಾಂಧವ್ಯ ವೃದ್ಧಿಸುವುದು ತನ್ನ ವಿದೇಶಾಂಗ ನೀತಿಯ ಮುಖ್ಯ ಭಾಗ ಎಂದು ಪರಿಗಣಿಸಿದೆ.
ಮೋದಿಯವರು ರಷ್ಯಾಗೆ ಭೇಟಿ ನೀಡಿದ ಕುರಿತು ಅಮೆರಿಕಾದ ಅಧಿಕಾರಿಗಳು ಭಾರತೀಯ ಅಧಿಕಾರಿಗಳ ಜೊತೆಗೆ ಜುಲೈ ತಿಂಗಳಲ್ಲಿ ನಡೆದ ದೂರವಾಣಿ ಮಾತುಕತೆಗಳಲ್ಲಿ ಮತ್ತು ದ್ವಿಪಕ್ಷೀಯ ಮಾತುಕತೆಗಳ ಸಂದರ್ಭದಲ್ಲಿ ಕಳವಳ ವ್ಯಕ್ತಪಡಿಸಿದ್ದಾರೆ ಎನ್ನಲಾಗಿದೆ.
ಭಾರತೀಯ ವಿದೇಶಾಂಗ ಸಚಿವಾಲಯದ ಹಿರಿಯ ಅಧಿಕಾರಿ ತನ್ಮಯ್ ಲಾಲ್ ಅವರು ಮೋದಿಯವರ ಭೇಟಿಯ ಸಂದರ್ಭದಲ್ಲಿ ಕೃಷಿ, ಆರ್ಥಿಕತೆ, ರಕ್ಷಣೆ, ಔಷಧಿ, ಮತ್ತು ಜನರ ನಡುವಿನ ಸಂಬಂಧದ ಕುರಿತು ಮಾತುಕತೆಗಳು ನಡೆಯಲಿವೆ ಎಂದಿದ್ದಾರೆ.
ಭಾರತ ಮತ್ತು ಉಕ್ರೇನ್ ನಡುವಿನ ಸಂಬಂಧದಲ್ಲಿ ಭದ್ರತೆಯೂ ಪ್ರಮುಖ ವಿಚಾರವಾಗಿದೆ. ಭಾರತ ಕೈಗೆಟುಕುವ ಬೆಲೆಯಲ್ಲಿ ತೈಲ ಖರೀದಿಗೆ ಮತ್ತು ಮಿಲಿಟರಿ ಉತ್ಪನ್ನಗಳ ಪೂರೈಕೆಗೆ ರಷ್ಯಾ ಮೇಲೆ ಅವಲಂಬಿತವಾಗಿರುವುದರಿಂದ, ಯುದ್ಧ ನಿಲುಗಡೆಗೆ ನೆರವಾಗಲು ಹಿಂಜರಿಯುತ್ತಿದೆ. ಕಳೆದ ಮೂರು ವರ್ಷಗಳಿಂದ ಉಕ್ರೇನ್ ಮೇಲೆ ನಡೆಯುತ್ತಿರುವ ರಷ್ಯಾದ ಆಕ್ರಮಣವನ್ನು ಭಾರತ ಟೀಕಿಸಿಲ್ಲ. ಬದಲಿಗೆ, ಭಾರತ ರಷ್ಯಾದಿಂದ ತೈಲ ಖರೀದಿಯನ್ನು ದಾಖಲೆಯ ಪ್ರಮಾಣದಲ್ಲಿ ಹೆಚ್ಚಿಸಿದೆ. ಅದರೊಡನೆ, ಭಾರತ ತನ್ನ ನೆರೆಯ ಪಾಕಿಸ್ತಾನ ಮತ್ತು ಚೀನಾಗಳೊಡನೆ ಗಡಿ ಉದ್ವಿಗ್ನತೆ ಹೊಂದಿರುವುದರಿಂದ, ಭಾರತಕ್ಕೆ ರಷ್ಯಾದ ಮಿಲಿಟರಿ ಉಪಕರಣಗಳು, ಪೂರೈಕೆಗಳು ಅತ್ಯವಶ್ಯಕವಾಗಿವೆ.
ಭದ್ರತಾ ಕಾರಣಗಳಿಂದಾಗಿ ಮೋದಿಯವರ ಕೀವ್ ಭೇಟಿ ಕೇವಲ ಕೆಲವು ಗಂಟೆಗಳಿಗೆ ಸೀಮಿತವಾಗಿರಲಿದೆ. ಆಕ್ರಮಣ ಆರಂಭಗೊಂಡ ಬಳಿಕ ಇತ್ತೀಚೆಗೆ ಇದೇ ಮೊದಲ ಬಾರಿಗೆ ಉಕ್ರೇನ್ ರಷ್ಯಾದಿಂದ ತನ್ನ ಒಂದಷ್ಟು ಪ್ರದೇಶಗಳನ್ನು ಮರುವಶಪಡಿಸಿಕೊಂಡಿದೆ. ಈ ಬೆಳವಣಿಗೆಯೊಂದಿಗೆ ಯುದ್ಧದ ಗತಿ ಒಂದಷ್ಟು ಬದಲಾವಣೆ ಕಂಡಿದೆ.
ಪ್ರಸ್ತುತ ಪರಿಸ್ಥಿತಿಯನ್ನು ಅವಲೋಕಿಸಿದರೆ, ಈ ಪ್ರದೇಶದಲ್ಲಿ ಶಾಂತಿ ಸ್ಥಾಪನೆ ನಡೆಸಲು ಭಾರತ ಹೇಗೆ ನೆರವಾಗಬಹುದು ಎಂದು ಮೋದಿಯವರ ಜೊತೆ ಮಾತುಕತೆ ನಡೆಸುವುದು ಜೆಲೆನ್ಸ್‌ಕಿಗೆ ಅತ್ಯಂತ ಮುಖ್ಯವಾಗಿದೆ. ಗ್ಲೋಬಲ್ ಸೌತ್ ದೇಶಗಳಿಂದ ಬೆಂಬಲ ಗಳಿಸುವುದು ಜೆಲೆನ್ಸ್‌ಕಿ ಗುರಿಯಾಗಿದ್ದು, ಅದನ್ನು ಸಾಧಿಸುವ ನಿಟ್ಟಿನಲ್ಲಿ ಅವರು ಈ ವರ್ಷ ಹಲವಾರು ಅಡಚಣೆಗಳನ್ನು ಎದುರಿಸಿದ್ದಾರೆ. ಗ್ಲೋಬಲ್ ಸೌತ್‌ನಲ್ಲಿ ಭಾರತ ಮುಖ್ಯ ದೇಶವಾಗಿದ್ದು, ಗ್ಲೋಬಲ್ ಸೌತ್ ದೇಶಗಳ ಬೆಂಬಲ ಗಳಿಸಲು ಜೆಲೆನ್ಸ್‌ಕಿ ಪಾಲಿಗೆ ಭಾರತವೂ ಬಹಳ ಮುಖ್ಯವಾಗಿದೆ.
ಜುಲೈ ತಿಂಗಳಲ್ಲಿ ಸ್ವಿಜರ್ಲ್ಯಾಂಡ್ ನಲ್ಲಿ ನಡೆದ ಸಮಾವೇಶದಲ್ಲಿ ನೀಡಲಾದ ಅಂತಿಮ ಹೇಳಿಕೆಯನ್ನು ಅನುಮೋದಿಸಿ ಸಹಿ ಹಾಕಲು ಭಾರತ ನಿರಾಕರಿಸಿತ್ತು. ಇದು ರಷ್ಯನ್ ಆಕ್ರಮಣದ ವಿರುದ್ಧ ಹೆಚ್ಚಿನ ಬೆಂಬಲ ಸಂಪಾದಿಸುವ ಉಕ್ರೇನ್ ಪ್ರಯತ್ನಗಳಿಗೆ ಹಿನ್ನಡೆಯಾಗಿತ್ತು.
ಒಂದು ವೇಳೆ ರಷ್ಯಾ ಮತ್ತು ಉಕ್ರೇನ್ ನಡುವಿನ ಯುದ್ಧವನ್ನು ನಿಲ್ಲಿಸಲು ಭಾರತ ಏನಾದರೂ ನೆರವಾಗಬಹುದೇ ಎಂಬ ಪ್ರಶ್ನೆಗೆ, ಲಾಲ್ ಅವರು ಯುದ್ಧವನ್ನು ನಿಲ್ಲಿಸಲು ಇರುವ ಮಾರ್ಗವೆಂದರೆ ಮಾತುಕತೆಗಳ ಮೂಲಕವೇ ಪರಿಹಾರ ಕಂಡುಕೊಳ್ಳುವುದು ಎಂದಿದ್ದಾರೆ.
ಮೋದಿಯವರ ಉಕ್ರೇನ್ ಭೇಟಿಯ ವೇಳೆಗೆ ಯಾವುದೇ ಮಹತ್ತರ ಘೋಷಣೆಗಳು, ಯೋಜನೆಗಳು ಹೊರಬರುವ ಸಾಧ್ಯತೆಗಳಿಲ್ಲ. ಆದರೆ, ಕೃಷಿ ಮತ್ತು ಭದ್ರತೆಗೆ ಸಂಬಂಧಿಸಿದಂತೆ ಒಪ್ಪಂದಗಳು ಏರ್ಪಡುವ ನಿರೀಕ್ಷೆಗಳಿವೆ. ಉಕ್ರೇನ್‌ಗೆ ತೆರಳುವ ಮುನ್ನ, ಪ್ರಧಾನಿ ಮೋದಿ ಪೋಲೆಂಡ್‌ಗೆ ತೆರಳಲಿದ್ದು, ಕಳೆದ 40 ವರ್ಷಗಳಲ್ಲಿ ಭಾರತೀಯ ಪ್ರಧಾನಿಯೊಬ್ಬರು ಇದೇ ಮೊದಲ ಬಾರಿಗೆ ಪೋಲೆಂಡ್‌ಗೆ ಭೇಟಿ ನೀಡುತ್ತಿದ್ದಾರೆ.
ಭಾರತ ಜಗತ್ತಿನ ಅತಿದೊಡ್ಡ ಮಿಲಿಟರಿ ಉಪಕರಣಗಳ ಖರೀದಿದಾರ ರಾಷ್ಟ್ರವೆಂಬ ಹಣೆಪಟ್ಟಿಗೆ ಪಾತ್ರವಾಗಿದೆ. ಆದರೆ ಪ್ರಧಾನಿ ನರೇಂದ್ರ ಮೋದಿಯವರು ಆಯುಧಗಳ ದೇಶೀಯ ಉತ್ಪಾದನೆಯನ್ನು ಹೆಚ್ಚಿಸಿ, ಆ ಮೂಲಕ ಈ ಬಿರುದನ್ನು ಬದಲಾಯಿಸಲು ಉದ್ದೇಶಿಸಿದ್ದಾರೆ.
ಉಕ್ರೇನಿನ ಸರ್ಕಾರಿ ಸ್ವಾಮ್ಯದ ಜೊರ್ಯಾ - ಮಾಶ್ಪ್ರೊವೆಕ್ಟ್ ಸಂಸ್ಥೆ ಯುದ್ಧ ನೌಕೆಗಳಿಗೆ ಬೇಕಾದ ಗ್ಯಾಸ್ ಟರ್ಬೈನ್‌ಗಳನ್ನು ಜಂಟಿಯಾಗಿ ಉತ್ಪಾದಿಸುವ ಕುರಿತು ಭಾರತೀಯ ಖಾಸಗಿ ಸಂಸ್ಥೆಗಳೊಡನೆ ಮಾತುಕತೆ ನಡೆಸುತ್ತಿದೆ. ಅದರೊಡನೆ, ವಿಮಾನಗಳು ಮತ್ತು ವಿಮಾನಗಳ ಎಂಜಿನ್‌ಗಳನ್ನು ಭಾರತದಲ್ಲಿ ನಿರ್ಮಿಸುವ ಕುರಿತೂ ಚರ್ಚಿಸಲಾಗುತ್ತಿದೆ.
- ಗಿರೀಶ್ ಲಿಂಗಣ್ಣ
(ಲೇಖಕರು ಬಾಹ್ಯಾಕಾಶ ಮತ್ತು ರಕ್ಷಣಾ ವಿಶ್ಲೇಷಕ)