ಮುಂದೇನು…..?
ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದ ನಿವೇಶನ ಹಂಚಿಕೆ ವಿವಾದಕ್ಕೆ ಸಂಬಂಧಿಸಿದಂತೆ ಹೈಕೋರ್ಟ್ ನಲ್ಲಿ ನಡೆಯುತ್ತಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಸಲ್ಲಿಸಿರುವ ಅರ್ಜಿಯ ವಿಚಾರಣೆ ಶನಿವಾರಕ್ಕೆ ಮುಂದೂಡಿದ್ದು ಬಹುತೇಕ ಅಂದೇ ತೀರ್ಪು ಹೊರ ಬೀಳಬಹುದೆಂಬ ನಿರೀಕ್ಷೆ ಇದೆ.
ಖಾಸಗಿ ದೂರಿಗೆ ಸಂಬಂಧಿಸಿದಂತೆ ರಾಜ್ಯಪಾಲರು ತನ್ನ ವಿರುದ್ಧ ಪ್ರಾಸಿಕ್ಯೂಷನ್ ಗೆ ನೀಡಿರುವ ಅನುಮತಿಯನ್ನು ಪ್ರಶ್ನಿಸಿ ಸಿದ್ದರಾಮಯ್ಯ ಅವರು ಸಲ್ಲಿಸಿರುವ ಅರ್ಜಿಯ ಕುರಿತಂತೆ ನ್ಯಾಯಾಲಯ ಪ್ರಕಟಿಸಲಿರುವ ತೀರ್ಪಿಗಿಂತ ಮುಂದಿನ ದಿನಗಳಲ್ಲಿ ಆಡಳಿತ ಕಾಂಗ್ರೆಸ್ ಪಕ್ಷದಲ್ಲಿ ನಡೆಯಲಿರುವ ವಿದ್ಯಮಾನಗಳತ್ತ ಈಗ ಎಲ್ಲರ ಕುತೂಹಲದ ದೃಷ್ಟಿ ನೆಟ್ಟಿದೆ.
ಒಂದಂತೂ ಸತ್ಯ ಸಿದ್ದರಾಮಯ್ಯ ಅವರ ಚಟುವಟಿಕೆಗಳನ್ನು ಗಮನಿಸಿದರೆ ಅವರು ಮತ್ತೊಂದು ಸುತ್ತಿನ ರಾಜಕೀಯ ಹೋರಾಟಕ್ಕೆ ಸಜ್ಜಾಗಿರುವುದು ಗೊತ್ತಾಗುತ್ತದೆ. ಹಾಗೆಯೇ ಇಡೀ ಪ್ರಕರಣವನ್ನು ಬಳಸಿಕೊಂಡು ತಮ್ಮನ್ನು ಮುಖ್ಯಮಂತ್ರಿ ಹುದ್ದೆಯಿಂದ ಕೆಳಗಿಳಿಸಲು ಸನ್ನಾಹ ನಡೆಸಿರುವ ಪಕ್ಷದ ಮುಖಂಡರ ವಿರುದ್ಧ ಅವರು ಅಹಿಂದ ಅಸ್ತ್ರ ಪ್ರಯೋಗ ಮಾಡುವ ಮೂಲಕ ತನ್ನನ್ನು ಕೆಳಗಿಳಿಸುವ ಪ್ರಯತ್ನ ನಡೆಸಿದ್ದೇ ಆದಲ್ಲಿ ಅದರಿಂದ ಕಾಂಗ್ರೆಸ್ ಪಕ್ಷಕ್ಕೇ ಅಪಾಯ ಕಟ್ಟಿಟ್ಟ ಬುತ್ತಿ ಎಂಬ ಸಂದೇಶವನ್ನು ಇದೀಗ ಹಿಂದುಳಿದ ವರ್ಗಗಳಿಗೆ ಸೇರಿದ ಮಠಾಧೀಶರ ಮೂಲಕ ನೀಡಿರುವುದು ಕಾಂಗ್ರೆಸ್ ಪಕ್ಷದಲ್ಲಿ ಮುಂದಿನ ದಿನಗಳಲ್ಲಿ ನಡೆಯ ಬಹುದಾದ ವಿದ್ಯಮಾನಗಳ ಬಗ್ಗೆ ಕುತೂಹಲ ಮೂಡಿಸಿದೆ.
ಇತ್ತೀಚೆಗೆ ಕನಕಗುರು ಪೀಠದ ಶ್ರೀಗಳ ನೇತೃತ್ವದಲ್ಲಿ ಸಭೆ ಸೇರಿದ್ದ ಕೆಲವು ಮಠಾಧೀಶರು ಸಿದ್ದರಾಮಯ್ಯ ಪರ ದೃಢ ನಿಲುವು ತಳೆದು ನಿಂತಿರುವುದನ್ನು ಗಮನಿಸಿದರೆ ಮುಂದಿನ ದಿನಗಳಲ್ಲಿ ಇದೊಂದು ಮಹತ್ವದ ರಾಜಕೀಯ ಸಂಘರ್ಷದ ಹೋರಾಟಕ್ಕೆ ಮುನ್ನುಡಿ ಎಂಬುದರ ಬಗ್ಗೆ ಯಾವುದೇ ಅನುಮಾನಗಳೂ ಉಳಿದಿಲ್ಲ. ಬಹು ಮುಖ್ಯವಾಗಿ ಪ್ರತಿಪಕ್ಷಗಳ ಬಹಿರಂಗ ಹೋರಾಟಕ್ಕಿಂತ ತಮ್ಮ ಪಕ್ಷದೊಳಗೇ ಆಂತರಿಕವಾಗಿ ತನ್ನ ವಿರುದ್ಧ ನಡೆಯುತ್ತಿರುವ ಚಟುಟಿಕೆಗಳ ಬಗ್ಗೆ ಮುಖ್ಯಮಂತ್ರಿ ತೀವ್ರ ಗಮನ ಹರಿಸಿದ್ದಾರೆ. ಮುಂದಿನ ಮುಖ್ಯಮಂತ್ರಿ ಆಯ್ಕೆ ವಿಚಾರ ಈಗ ಪ್ರಸ್ತುತವಲ್ಲದಿದ್ದರೂ ಆ ನಿಟ್ಟಿನಲ್ಲಿ ಕೆಲವು ಹಿರಿಯ ಮುಖಂಡರು ದಿಲ್ಲಿಯಲ್ಲಿ ಹೈಕಮಾಂಡ್ ಮಟ್ಟದಲ್ಲಿ ನಡೆಸುತ್ತಿರುವ ಚಟುವಟಿಕೆಗಳ ಮಾಹಿತಿ ಪಡೆದಿರುವ ಅವರು ಎಂಥದೇ ಪರಿಸ್ಥಿತಿ ಎದುರಾದರೂ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡದಿರುವ ನಿರ್ಧಾರಕ್ಕೆ ಬಂದಿದ್ದಾರೆ.
ದಿಲ್ಲಿಯಲ್ಲಿ ಕಾಂಗ್ರೆಸ್ ವರಿಷ್ಠರ ನೇತೃತ್ವದಲ್ಲಿ ಇತ್ತೀಚೆಗೆ ನಡೆದ ಎರಡೂ ಸಭೆಗಳಲ್ಲಿ ಕರ್ನಾಟಕದ ಪರಿಸ್ಥಿತಿಯ ಕುರಿತಾಗೇ ಸುದೀರ್ಘ ಚರ್ಚೆ ನಡೆಯಿತಾದರೂ ಯಾವುದೇ ಅಂತಿಮ ನಿರ್ಧಾರಕ್ಕೆ ಬರಲು ಸಾಧ್ಯವಾಗಿಲ್ಲ. ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಹಾಗೂ ಲೋಕಸಭೆಯಲ್ಲಿ ಕಾಂಗ್ರೆಸ್ ನಾಯಕರಾಗಿರುವ ರಾಹುಲ್ ಗಾಂಧಿಯವರೇನೋ `ಯಾವುದೇ ಪರಿಸ್ಥಿತಿಗೆ ನೀವು ಸಿದ್ಧವಾಗಿರಬೇಕು ’’ ಎಂಬ ಸೂಚನೆಯನ್ನು ಸಿದ್ದರಾಮಯ್ಯ ಅವರಿಗೆ ನೀಡಿದ್ದಾರೆ ಎಂಬುದು ನಿಜವಾದರೂ ಕಾನೂನಿನ ಹೋರಾಟದಲ್ಲಿ ಹಿನ್ನಡೆಯಾದರೆ ರಾಜೀನಾಮೆ ಕೊಡಲೇಬೇಕು ಎಂದು ಸ್ಪಷ್ಟವಾಗಿ ಹೇಳಿಲ್ಲ.
ದಿಲ್ಲಿಯಿಂದ ಮುಖ್ಯಮಂತ್ರಿ ಮರಳಿದ ಮರುಕ್ಷಣವೇ ಕನಕಪೀಠದ ಶ್ರೀಗಳ ನೇತೃತ್ವದಲ್ಲಿ ಕೆಲವು ಮಠಾಧೀಶರು ಸಭೆ ನಡೆಸಿ ಸಿದ್ದರಾಮಯ್ಯ ಬೆಂಬಲಕ್ಕೆ ನಿಂತಿರುವುದು ಅನಿರೀಕ್ಷಿತವೇನಲ್ಲ. ಹಾಗೆಯೇ ಇಂಥದೊಂದು ಸಭೆಯ ಮೂಲಕ ಹೈಕಮಾಂಡ್ ಗೆ ಎಚ್ಚರಿಕೆಯ ಸಂದೇಶವನ್ನೂ ರವಾನಿಸಲಾಗಿದೆ. ಕಾಂಗ್ರೆಸ್ ನಲ್ಲಿ ಗಮನಿಸಲೇ ಬೇಕಾದ ಇನ್ನೊಂದು ಮಹತ್ವದ ಬೆಳವಣಿಗೆ ಎಂದರೆ ಸಿದ್ದರಾಮಯ್ಯ ಅವರ ಪರಮಾಪ್ತರಾದ ಲೋಕೋಪಯೋಗಿ ಖಾತೆ ಸಚಿವ ಸತೀಶ ಜಾರಕಿಹೊಳಿಯವರ ಹೇಳಿಕೆ. ಸಿದ್ದರಾಮಯ್ಯ ಪದಚ್ಯುತಿಗೆ ಯತ್ನಿಸಿದರೆ ಮುಂದಿನ ದಿನಗಳಲ್ಲಿ ತೆಲಂಗಾಣದಲ್ಲಿ ಆಡಳಿತ ನಡೆಸುತ್ತಿರುವ ಕಾಂಗ್ರೆಸ್ ಸರ್ಕಾರವೂ ಪತನವಾಗಬಹುದು ಎಂದು ಅವರು ಹೇಳಿರುವುದರ ಹಿಂದೆ ನಾನಾ ವ್ಯಾಖ್ಯಾನಗಳಿವೆ.
ಅಲ್ಲಿ ಅಧಿಕಾರದಲ್ಲಿರುವ ಕಾಂಗ್ರೆಸ್ ಸರ್ಕಾರದ ಮುಖ್ಯಮಂತ್ರಿ ರೇವಂತರೆಡ್ಡಿ ಕೆಪಿಸಿಸಿ ಅಧ್ಯಕ್ಷರೂ ಆಗಿರುವ ಉಪ ಮುಖ್ಯಂತ್ರಿ ಡಿ.ಕೆ.ಶಿವಕುಮಾರ್ ಗೆ ಪರಮಾಪ್ತರು. ಅವರನ್ನು ಮುಖ್ಯಮಂತ್ರಿ ಹುದ್ದೆಗೇರಿಸುವಲ್ಲಿ ಶಿವಕುಮಾರ್ ಪ್ರಯತ್ನವೂ ದೊಡ್ಡದು. ಹಾಗೆಯೇ ತೆಲಂಗಾಣದಲ್ಲಿ ನಡೆದ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷವನ್ನು ಗೆಲ್ಲಿಸಿ ಅಧಿಕಾರಕ್ಕೆ ತರುವಲ್ಲಿಯೂ ಅವರ ಪಾತ್ರ ದೊಡ್ಡದು. ಈ ಎಲ್ಲ ಕಾರಣಗಳ ಹಿನ್ನಲೆಯಲ್ಲಿ ರೇವಂತ ರೆಡ್ಡಿ ಮತ್ತು ಶಿವಕುಮಾರ್ ನಡುವೆ ರಾಜಕಾರಣ ಮೀರಿದ ಸ್ನೇಹ, ಸಂಬಂಧಗಳು ಇವೆ. ಸಹಜವಾಗೇ ಇದರ ಪರಿಣಾಮ ಕರ್ನಾಟಕದ ರಾಜಕಾರಣದ ಮೇಲೆ ಬೀರುತ್ತಿದೆ.
ಮುಖ್ಯಮಂತ್ರಿ ಹುದ್ದೆಯ ಮೇಲೆ ಕಣ್ಣಿಟ್ಟಿರುವ ಡಿ.ಕೆ.ಶಿವಕುಮಾರ್ ಸದ್ಯಕ್ಕೇನೋ ಸಿದ್ದರಾಮಯ್ಯ ಪರ ಬಂಡೆಯಂತೆ ನಿಂತಿದ್ದಾರೆ. ಆದರೆ ಕಾಂಗ್ರೆಸ್ ನ ಇತಿಹಾಸ ಗಮನಿಸಿದರೆ ಮುಖ್ಯ ಮಂತ್ರಿ ಜತೆಗಿನ ನಿಷ್ಠೆ ಮತ್ತೊಬ್ಬ ನಾಯಕನ ಪರ ರಾತ್ರೋರಾತ್ರಿ ಬದಲಾದ ಉದಾಹರಣೆಗಳು ದೇವರಾಜ ಅರಸು ಅವರ ಕಾಲದಿಂದಲೂ ನಡೆದಿವೆ. ಈ ವಾಸ್ತವ ಸಂಗತಿ ಅರಿತಿರುವ ಸತೀಶ್ ಜಾರಕಿಹೊಳಿ ಕರ್ನಾಟಕದಲ್ಲಿ ಸಿದ್ದರಾಮಯ್ಯ ಅವರನ್ನು ಕೆಳಗಿಳಿಸಿದರೆ ತೆಲಂಗಾಣದಲ್ಲಿನ ಕಾಂಗ್ರೆಸ್ ಸರ್ಕಾರವೂ ಅಪಾಯಕ್ಕೆ ಸಿಕ್ಕಬಹುದು ಎಂದು ನೇರವಾಗೇ ಎಚ್ಚರಿಕೆ ನೀಡಿರುವುದು ಶಿವಕುಮಾರ್ ಅವರನ್ನೇ ಗುರಿಯಾಗಿಸಿಕೊಂಡಿದ್ದು ಎಂಬುದರಲ್ಲಿ ಯಾವುದೇ ಅನುಮಾನವೇ ಇಲ್ಲ.
ಕಾಂಗ್ರೆಸ್ ನಲ್ಲಿ ಮುಖ್ಯಮಂತ್ರಿ ಹುದ್ದೆಗೆ ಆಕಾಂಕ್ಷಿಗಳ ದೊಡ್ಡ ಪಟ್ಟಿಯೇ ಇರುವುದನ್ನು ಅರಿತಿರುವ ಸಿದ್ದರಾಮಯ್ಯ ಒಂದುವೇಳೆ ತಾನು ಅಧಿಕಾರದಿಂದ ನಿರ್ಗಮಿಸುವುದು ಅನಿವಾರ್ಯವೇ ಆದಲ್ಲಿ ಮುಂದಿನ ಮುಖ್ಯಮಂತ್ರಿ ಸ್ಥಾನಕ್ಕೆ ಗೃಹ ಸಚಿವ ಡಾ. ಜಿ.ಪರಮೇಶ್ವರ್ ಅಥವಾ ತಮ್ಮ ಪರಮಾಪ್ತ ಸತೀಶ ಜಾರಕಿಹೊಳಿ ಯವರ ಹೆಸರನ್ನು ಸೂಚಿಸುತ್ತಾರೆ ಹೆಸರನ್ನು ಸೂಚಿಸುತ್ತಾರೆ, ಕಾರಣ ಈ ಇಬ್ಬರಲ್ಲಿ ಯಾರನ್ನೇ ಮುಖ್ಯಮಂತ್ರಿ ಗಾದಿಯ ಮೇಲೆ ಕೂರಿಸಿದರೂ ಅಧಿಕಾರ ಸುತ್ರ ತನ್ನ ಹಿಡಿತದಲ್ಲೇ ಇರುತ್ತದೆ ಎಂಬುದು ಅವರ ದೂರಾಲೋಚನೆ ಎಂದೂ ಕಾಂಗ್ರೆಸ್ ವಲಯಗಳಲ್ಲಿ ಸುದ್ದಿ ಹಬ್ಬಿದೆ. ಒಂದು ವೇಳೆ ಇದೇ ಸುದ್ದಿ ನಿಜವಾದರೆ ಈ ಹುದ್ದೆಯನ್ನು ತಮ್ಮ ಜೀವನದ ಮಹತ್ವಾಕಾಂಕ್ಷೆಯ ಗುರಿಯನ್ನಾಗಿಸಿಕೊಂಡಿರುವ ಡಿ.ಕೆ.ಶಿವಕುಮಾರ್ ಇಂಥದೊಂದು ತೀರ್ಮಾನದ ವಿರುದ್ಧ ಸಿಡಿದೇಳುವುದು ಖಚಿತ.
ಅಂತಹ ಪ್ರಸಂಗ ಎದುರಾದರೆ ಸರ್ವ ಸಮ್ಮತ ಅಭ್ಯರ್ಥಿಯಾಗಿ ಹಿರಿಯ ನಾಯಕ ಮಲ್ಲಿಕಾರ್ಜುನ ಖರ್ಗೆಯವರ ಹೆಸರನ್ನು ಮುನ್ನೆಲೆಗೆ ತರುವುದು ಕಾಂಗ್ರೆಸ್ ನ ಮತ್ತೊಂದು ಗುಂಪಿನ ಆಲೋಚನೆ. ಆದರೆ ಕಾಂಗ್ರೆಸ್ ಚಟುವಟಿಕೆಗಳ ಒಳ ಹೊಕ್ಕು ನೋಡಿದರೆ ಇದ್ಯಾವುದೂ ಸಾಧ್ಯವಿಲ್ಲ ಎಂಬುದು ಗೊತ್ತಾಗುತ್ತದೆ. ಯಾವುದೇ ಸಂದರ್ಭದಲ್ಲಿ ಕಾಂಗ್ರೆಸ್ ಪಕ್ಷಕ್ಕೆ ತಾನೇ ಅನಿವಾರ್ಯ ಎಂಬುದನ್ನು ಸಾಬೀತು ಪಡಿಸಲು ನಿರ್ಧರಿಸಿರುವ ಸಿದ್ದರಾಮಯ್ಯ ಅದಕ್ಕಾಗೇ ರಾಜಕೀಯ ಚೆದುರಂಗದಾಟ ಆರಂಭಿಸಿದ್ದಾರೆ. ಇದ್ದರೆ ಕಾಂಗ್ರೆಸ್ ಮುಖ್ಯಮಂತ್ರಿಯಾಗಿ ತಾನೇ ಇರಬೇಕು ಇಲ್ಲವಾದರೆ ಇಲ್ಲ ಎಂಬುದು ಅವರ ಕಾರ್ಯ ಯೋಜನೆ ಎನ್ನುವುದನ್ನು ಕಾಂಗ್ರೆಸ್ ನ ಪ್ರಮುಖರೊಬ್ಬರು ಹೇಳುತ್ತಾರೆ. ಒಂದಂತೂ ಸ್ಪಷ್ಟ ಮುಂದಿನ ದಿನಗಳಲ್ಲಿ ಸಿದ್ದರಾಮಯ್ಯ ಅಧಿಕಾರ ತ್ಯಜಿಸುವ ಅನಿವಾರ್ಯ ಸಂದರ್ಭ ಎದುರಾದರೆ ಕರ್ನಾಟಕದಲ್ಲಿ ಹೊಸ ರಾಜಕೀಯ ಸಮೀಕರಣದಿಂದ ಕೂಡಿದ ಸರ್ಕಾರವೊಂದು ಅಸ್ತಿತ್ವಕ್ಕೆ ಬರುವ ಸಾಧ್ಯತೆಗಳನ್ನೂ ತಳ್ಳಿ ಹಾಕುವಂತಿಲ್ಲ. ಇಂಥದೊಂದು ಸಂಭವನೀಯ ರಾಜಕೀಯ ಸಮೀಕರಣಕ್ಕೆ ಯಾರು ಯಾರ ಜತೆಗೆ ಮುಂದಾಗುತ್ತಾರೆ ಎಂಬುದೇ ಸದ್ಯದ ಪ್ರಶ್ನೆ ರಾಜಕಾರಣದ ಆಚೆ ಇರುವ ರಾಜಕೀಯ ನಾಯಕರ ವೈಯಕ್ತಿಕ ಸ್ನೇಹ- ಸಂಬಂಧಗಳನ್ನು ಗಮನಿಸಿದರೆ ಸಿದ್ಧಾಂತಗಳ ಆಚೆಯೂ ಇಂಥದೊಂದು ಹೊಂದಾಣಿಕೆ ಆಗುವ ಸಾಧ್ಯತೆಗಳೂ ಇವೆ.
ಲೋಕಸಭಾ ಚುನಾಣೆಯ ವೇಳೆ ಭಾರೀ ಸದ್ದು ಮಾಡಿದ್ದ ಬಿಜೆಪಿ-ಜೆಡಿಎಸ್ ಮೈತ್ರಿಕೂಟದಲ್ಲೂ ಎಲ್ಲವೂ ಸರಿ ಇಲ್ಲ. ಬಹು ಮುಖ್ಯವಾಗಿ ಕೇಂದ್ರ ಸಚಿವರಾದ ನಂತರವೂ ಕುಮಾರಸ್ವಾಮಿ ಬಿಜೆಪಿ ಜತೆಗೆ ರಾಜ್ಯದಲ್ಲಿ ಅಂತರ ಕಾಪಾಡಿಕೊಂಡೇ ಇದ್ದಾರೆ. ಸ್ಥಳೀಯ ರಾಜಕಾರಣದಲ್ಲಿ ಎರಡೂ ಪಕ್ಷಗಳ ನಾಯಕರುಗಳ ನಡುವೆ ಹೊಂದಾಣಿಕೆಯೇ ಆಗಿಲ್ಲ. ಇದಕ್ಕೆ ಹಾಸನ ಜಿಲ್ಲೆಯಲ್ಲಿ ಎರಡು ಸ್ಥಳೀಯ ಸಂಸ್ಥೆಗಳ ಅಧ್ಯಕ್ಷರ ಆಯ್ಕೆ ಸಂದರ್ಭದಲ್ಲಿ ನಡೆದ ಬೆಳವಣಿಗೆಗಳು, ಅದಕ್ಕೂ ಮುನ್ನ ಮೈತ್ರಿಕೂಟ ನಡೆಸಿದ ಮೈಸೂರು ಪಾದಯಾತ್ರೆ ಸಂದರ್ಭದಲ್ಲಿ ನಡೆದ ಪ್ರಸಂಗಗಳು ಇದಕ್ಕೆ ಸಾಕ್ಷಿ.
ಇದರ ಮುಂದುವರಿದ ಭಾಗ ಎಂಬಂತೆ ಇದೀಗ ಚೆನ್ನಪಟ್ಟಣ ವಿಧಾನಸಭಾ ಕ್ಷೇತ್ರದ ಉಪ ಚುನಾವಣೆಗೆ ಸರ್ವ ಸಮ್ಮತ ಅಭ್ಯರ್ಥಿ ಆಯ್ಕೆಗೆ ಸಂಬಂಧಿಸಿದಂತೆ ಮೈತ್ರಿಕೂಟದಲ್ಲಿ ಸಹಮತ ಮೂಡಿಲ್ಲ. ವಿಧಾನ ಪರಿಷತ್ ಸದಸ್ಯರೂ ಆಗಿರುವ ಬಿಜೆಪಿ ಮುಖಂಡ ಸಿ.ಪಿ. ಯೋಗೀಶ್ವರ್ ಈ ಕ್ಷೇತ್ರದಿಂದ ತಮ್ಮ ಸ್ಪರ್ಧೆ ಖಚಿತ ಒಂದುವೇಳೆ ಪಕ್ಷದ ಟಿಕೆಟ್ ಸಿಗದಿದ್ದರೆ ಬಹುಜನ ಸಮಾಜ ಪಕ್ಷದಿಂದ ಅಥವಾ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸುವುದ ಖಚಿತ ಎಂದು ಸ್ಪಷ್ಟ ಪಡಿಸಿದ್ದಾರೆ. ಅವರ ಬೆಂಬಲಕ್ಕೆ ಮಾಜಿ ಮುಖ್ಯಮಂತ್ರಿ ಬಸರಾಜ ಬೊಮ್ಮಾಯಿ ಮತ್ತು ಬಿಜೆಪಿಯ ಒಕ್ಕಲಿಗ ಮುಖಂಡರಾದ ಪ್ರತಿಪಕ್ಷದ ನಾಯಕ ಆರ್.ಅಶೋಕ್, ಶಾಸಕರಾದ ಸಿ.ಟಿ.ರವಿ. ಡಾ.ಅಶ್ವತ್ಥನಾರಾಯಣ ಮತ್ತಿತರರು ನಿಂತಿದ್ದಾರೆ. ಆದರೆ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ ವಿಜಯೇಂದ್ರ ಮಾತ್ರ ಜೆಡಿಎಸ್ ಬೆಂಬಲಕ್ಕೆ ನಿಂತಿದ್ದಾರೆ. ಈ ಕ್ಷೇತ್ರದಿಂದ ಈ ಹಿಂದೆ ಎರಡು ಬಾರಿ ಜೆಡಿಎಸ್ ಪಕ್ಷವೇ ಗೆದ್ದಿರುವುದರಿಂದ ಸಹಜ ನ್ಯಾಯದ ಪ್ರಕಾರ ಆ ಪಕ್ಷಕ್ಕೇ ತೆರವಾದ ಸ್ಥಾನ ಬಿಟ್ಟುಕೊಡಬೇಕು, ಮೈತ್ರಿ ಧರ್ಮ ಪಾಲಿಸಬೇಕು ಎಂಬುದು ಅವರ ನಿಲುವು.
ಈ ನಿಲುವಿನ ಹಿಂದೆ ಪಕ್ಷದಲ್ಲಿ ತಮ್ಮದೇ ಆದ ಪ್ರಭುತ್ವ ಸಾಧಿಸುವ ಆಲೋಚನೆ ಇದೆ. ಒಕ್ಕಲಿಗರ ಪಾಳೇಯದಲ್ಲಿ ಕುಮಾರಸ್ವಾಮಿ ಲಿಂಗಾಯಿತರೇ ಹೆಚ್ಚಿರುವ ಪ್ರದೇಶಗಳಲ್ಲಿ ತಮ್ಮ ಪ್ರಾಬಲ್ಯ ಹೆಚ್ಚಾದರೆ ಭವಿಷ್ಯದ ರಾಜಕಾರಣಕ್ಕೆ ಅದು ಅನುಕೂಲ ಎಂಬುದು ವಿಜಯೇಂದ್ರ ಚಿಂತನೆ.
ಮತ್ತೊಂದು ಕಡೆ ಪಕ್ಷದೊಳಗಿನ ಬಿಕ್ಕಟ್ಟನ್ನು ಇತ್ಯರ್ಥ ಪಡಿಸಿಕೊಳ್ಳುವಲ್ಲಿ ವಿಜಯೇಂದ್ರ ಆಸಕ್ತಿ ತೋರಿಸುತ್ತಿಲ್ಲ ಎಂಬ ಅಪವಾದಗಳೂ ಇವೆ. ಪ್ರಮಖವಾಗಿ ಪಕ್ಷದ ಮತ್ತೊಬ್ಬ ನಾಯಕ ಬಸನವಗೌಡ ಪಾಟೀಲ ಯತ್ನಾಳ್ ತಮ್ಮ ಒಡೆತನದ ಸಕ್ಕರೆ ಕಾರ್ಖಾನೆ ಆರಂಭಕ್ಕೆ ಅನುಮತಿ ನೀಡದ ಸರ್ಕಾರದ ವಿರುದ್ಧ ಆರಂಭಿಸಿದ್ದ ಧರಣಿಯಲ್ಲಿ ಪ್ರತಿಪಕ್ಷದ ನಾಯಕ ಅಶೋಕ್ ಸೇರಿದಂತೆ ಪ್ರಮುಖರು ಹಾಜರಾಗಿ ಬೆಂಬಲ ವ್ಯಕ್ತಪಡಿಸಿದರೂ ಬೆಂಗಳೂರಲ್ಲೇ ಇದ್ದ ವಿಜಯೇಂದ್ರ ಬರೀ ಟ್ವಿಟ್ ಮೂಲಕ ಬೆಂಬಲ ನೀಡಿದ್ದು ಬಿಟ್ಟರೆ ಸ್ಥಳಕ್ಕೆ ಹಾಜರಾಗಿ ಬೆಂಬಲ ವ್ಯಕ್ತ ಪಡಿಸಲಿಲ್ಲ. ಇದು ಹಲವರ ಅಸಮಾಧಾನಕ್ಕೆ ಕಾರಣವಾಗಿದೆ. ವಿಜಯೇಂದ್ರ ವಿರುದ್ಧ ದೂರು ಹೊತ್ತು ಪಕ್ಷದ ದಿಲ್ಲಿ ವರಿಷ್ಠರನ್ನು ಭೇಟಿಯಾದ ಅಶೋಕ್ ನೇತೃತ್ವದ ನಿಯೋಗಕ್ಕೆ ಅಂತಹ ಸ್ಪಂದನೆಯೇನೂ ಸಿಕ್ಕಿಲ್ಲ.
ಪಕ್ಷದ ರಾಜ್ಯ ಘಟಕದ ವಿಚಾರದಲ್ಲಿ ಬಿಜೆಪಿ ಹೈಕಮಾಂಡ್ ಮಗುವನ್ನೂ ಚಿವುಟಿ ತೊಟ್ಟಿಲನ್ನೂ ತೂಗುವ ನಾಟಕ ಆಡುತ್ತಿದೆ ಎಂಬುದಾಗಿ ಹೆಸರು ಹೇಳಲು ಇಚ್ಛಿಸದ ಮುಖಂಡರೊಬ್ಬರ ಮಾತುಗಳಲ್ಲಿ ಸತ್ಯಾಂಶ ಇಲ್ಲದೇ ಇಲ್ಲ.
-ಯಗಟಿ ಮೋಹನ್
yagatimohan@gmail.com