ನಿಜ. ಅನ್ನದಿಂದಲೇ ಎಲ್ಲವೂ. ಹಾಗೆಂದೇ ಅನ್ನ ಬೆಳೆಯುವವರ ಬಗ್ಗೆ ಮೃದುವಾಗಿ ಯೋಚಿಸಬೇಕಿರುವುದು ಯಾವ ಕಾಲಕ್ಕೂ ಸೂಕ್ತ ನಿರೀಕ್ಷೆ. ಇದೀಗ, ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಮತ್ತೆ ಕೃಷಿ ಸುಧಾರಣೆಗೆ ಒತ್ತಾಯಿಸಿ ಪ್ರತಿಭಟನೆಗಳು ಶುರುವಾಗುವ ಹಂತದಲ್ಲಿದೆ. ಈ ಹಿಂದೆ ತಿಂಗಳುಗಟ್ಟಲೇ ರಾಷ್ಟ್ರ ರಾಜಧಾನಿಯ ಕೆಲವು ರಸ್ತೆಗಳು ಈ ಪ್ರತಿಭಟನೆಗಳಿಗೆ ಸಿಲುಕಿ, ಸಾಮಾನ್ಯರ ಬದುಕನ್ನು ದುಸ್ತರವಾಗಿಸಿದ್ದವು. ಕೆಂಪುಕೋಟೆ ಸಮೀಪ ಈ ಪ್ರತಿಭಟನೆಯು ಖಾಲಿಸ್ತಾನಿ ಪ್ರತ್ಯೇಕತಾವಾದಿಗಳ ದಾಳವಾಗಿಯೂ ಮಾರ್ಪಾಟಾಗಿದ್ದನ್ನು ನೆನಪಿಸಿಕೊಳ್ಳಬೇಕು. ಈ ಬಾರಿ ಹಾಗೆ ರಸ್ತೆಗಳ ಮೇಲೆ ಪ್ರತಿಭಟನಾಕಾರರು ಬೀಡು ಬಿಡದಂತೆ ಮುನ್ನಚ್ಚೆರಿಕೆ ವಹಿಸುವ ಕೆಲಸಗಳಾಗುತ್ತಿವೆ.
ಇಲ್ಲಿ ಪ್ರಮುಖವಾಗಿ ಪಾಲ್ಗೊಳ್ಳುತ್ತಿರುವವರು ಪಂಜಾಬಿನ ರೈತರು. ಜತೆಗೆ ಹರ್ಯಾಣದ ಕೆಲ ಭಾಗಗಳು ಮತ್ತು ಪಶ್ಚಿಮ ಉತ್ತರ ಪ್ರದೇಶದ ಕೆಲವರು ಸೇರಿಕೊಂಡಿದ್ದಾರೆ. ಸಹಜವಾಗಿಯೇ, ಸುದ್ದಿಮಾಧ್ಯಮ ನೋಡುವವರಿಗೆ ಈ ಪ್ರತಿಭಟನೆಗಳು ಇಡೀ ದೇಶದ ರೈತರ ಧ್ವನಿಯಾಗಿ ಕಂಡುಬಿಡುತ್ತವೆ. ಪ್ರಾರಂಭದಲ್ಲಿ ಪ್ರಸ್ತಾಪಿಸಿರುವ ಅಂಶದಿಂದಾಗಿ, ರೈತರೆಂದೊಡನೆ ಒಂದು ಭಾವನಾತ್ಮಕ ಪ್ರತಿಸ್ಪಂದನೆ ಎಲ್ಲೆಡೆಯಿಂದ ವ್ಯಕ್ತವಾಗಿಬಿಡುತ್ತದೆ. ಅನ್ನದಾತನ ಕುರಿತಾಗಿರುವ ಇಂಥ ಕೃತಜ್ಞ ಭಾವನೆಯ ಮಹತ್ತ್ವವನ್ನು ಪುರಸ್ಕರಿಸುತ್ತಲೇ, ಈ ಭಾವನಾತ್ಮಕತೆ ಅಬ್ಬರದಲ್ಲಿ ರೈತ ಪ್ರತಿಭಟನೆಗಳಿಗೆ ಸಂಬಂಧಿಸಿದ ಕೆಲವು ತಥ್ಯಗಳು ಮರೆಯಾಗಿಬಿಡಬಾರದು ಎಂಬ ಎಚ್ಚರಿಕೆ ಸಹ ಮುಖ್ಯ. ಈ ಅಂಕಣ ಅಂಥದೊಂದು ಪ್ರಯತ್ನವನ್ನು ಮಾಡಲಿದೆ.
ಎಂ ಎಸ್ ಪಿ ಅರ್ಥಾತ್ ಕನಿಷ್ಟ ಬೆಂಬಲ ಬೆಲೆ ಎನ್ನುವುದು ಎಲ್ಲ ಸರ್ಕಾರಗಳೂ ನಿರ್ದಿಷ್ಟ ಬೆಳೆಗಳಿಗೆ ಕೊಟ್ಟುಕೊಂಡುಬಂದಿರುವ ಉತ್ತೇಜನ. ಇದನ್ನು ಕಾನೂನುಬದ್ಧ ಮಾಡಬೇಕು ಎಂಬುದು ಈ ಹಿಂದೆ ರಾಕೇಶ ಟಿಕಾಯತ್ ನೇತೃತ್ವದ ಪ್ರತಿಭಟನೆ ಹಾಗೂ ಈಗಿನ ಪ್ರತಿಭಟನೆಗಳೆಲ್ಲ ಒತ್ತಾಯಿಸುತ್ತಿವೆ. ಎಂ ಎಸ್ ಪಿಯನ್ನು ಕಾಯ್ದೆಬದ್ಧಗೊಳಿಸೋದು ಎಂದರೆ, ನಿರ್ದಿಷ್ಟ ಬೆಳೆಯೊಂದಕ್ಕೆ ಸರ್ಕಾರ ನಿಗದಿಪಡಿಸಿರುವ ಮೊತ್ತಕ್ಕಿಂತ ಯಾವುದೇ ವ್ಯಾಪಾರಿಗಳು ಕಡಿಮೆಗೆ ಕೊಂಡರೆ ಅದೊಂದು ಶಿಕ್ಷಾರ್ಹ ಅಪರಾಧವಾಗುತ್ತದೆ. ಮೇಲ್ನೋಟದ ಭಾವನಾತ್ಮಕ ವಾದ ಮಾಡುವಾಗ, “ಹೌದ್ರೀ, ಬಿಸ್ಕಿಟ್ ಕಂಪನಿಯವನಿಗೆ ತನ್ನ ಪೊಟ್ಟಣ ಎಷ್ಟಕ್ಕೆ ಮಾರಬೇಕೆಂದು ಬೆಲೆ ನಿಗದಿಪಡಿಸೋ ಅಧಿಕಾರವಿರುವಾಗ, ರೈತನಿಗೆ ಏಕಿಲ್ಲ” ಎಂದೆಲ್ಲ ಮಾತುಗಳು ಬಂದುಬಿಡುತ್ತವೆ. ಆದರೆ ಮಾರುಕಟ್ಟೆ ಲೆಕ್ಕಾಚಾರದಲ್ಲಿ ಇಂಥ ಮಾತುಗಳಿಗೆ ತರ್ಕವಿಲ್ಲ. ಬಿಸ್ಕಿಟ್ ಮಾರುವವ ಎಷ್ಟಾದರೂ ಬೆಲೆ ನಿಗದಿಪಡಿಸಲಿ, ಕೊನೆಯಲ್ಲಿ ಜನ ಅದನ್ನು ಕೊಳ್ಳದಿದ್ದರೆ ಲುಕ್ಸಾನು ಭರಿಸುವ ರಿಸ್ಕ್ ಅವನದ್ದೇ. ಅಲ್ಲದೇ, ಅಲ್ಲಿ ಜಿಎಸ್ಟಿ ಯೋಗದಾನ ಇತ್ಯಾದಿ ಅಂಶಗಳಿವೆ.
ಅದಿರಲಿ. ಸರಳವಾಗಿ ಹೇಳಬೇಕೆಂದರೆ ವಸ್ತುಗಳ ಬೆಲೆ ನಿಗದಿಯು ಮಾರುಕಟ್ಟೆಯ ಬೇಡಿಕೆ ಮತ್ತು ಪೂರೈಕೆಯ ಸಮೀಕರಣವನ್ನು ಅವಲಂಬಿಸಿರುತ್ತದೆ. ಮೋದಿ ಸರ್ಕಾರವಾಗಲೀ, ಮತ್ಯಾರೇ ಆಗಲೀ ಈ ಮಾರುಕಟ್ಟೆ ವ್ಯವಸ್ಥೆಯನ್ನು ತುಸುಮಟ್ಟಿಗೆ ನಿಯಂತ್ರಿಸಬಹುದೇ ಹೊರತು ಬದಲಾಯಿಸಲಾಗುವುದಿಲ್ಲ. ಹಾಗೆಂದೇ, 2014ರ ಕಾಂಗ್ರೆಸ್ ಚುನಾವಣೆಯ ಪ್ರಣಾಳಿಕೆ ಸಹ ಎಪಿಎಂಸಿಗಳನ್ನೇ ತೆಗೆದುಹಾಕಿ ಕೃಷಿಯಲ್ಲಿ ಮುಕ್ತ ಮಾರುಕಟ್ಟೆ ರೂಪಿಸುವುದಾಗಿ ಹೇಳಿತ್ತು.
ಕೇಂದ್ರ ಸರ್ಕಾರ ಸುಮಾರು 24 ಬೆಳೆಗಳಿಗೆ ಕನಿಷ್ಟ ಬೆಂಬಲ ಬೆಲೆಯ ಪ್ರೋತ್ಸಾಹ ನೀಡುತ್ತಿದೆ. ಆದರೆ ವಾಸ್ತವದಲ್ಲಿ ಈ ಪೈಕಿ ದೊಡ್ಡ ಪ್ರಮಾಣದಲ್ಲಿ ಖರೀದಿಯಾಗುತ್ತಿರುವವು ಗೋದಿ ಮತ್ತು ಬತ್ತ ಮಾತ್ರ. ಒಂದೊಮ್ಮೆ ಬೆಂಬಲ ಬೆಲೆ ಅಡಿಯಲ್ಲಿ ಬರುವ ಅಷ್ಟೂ ಧಾನ್ಯಗಳನ್ನು ಸರ್ಕಾರವೇ ಖರೀದಿಸುವುದಾದರೆ ಅದಕ್ಕೆ 10 ಲಕ್ಷ ಕೋಟಿ ರುಪಾಯಿಗಳು ಬೇಕು. ಇಡೀ ಮೂಲಸೌಕರ್ಯಕ್ಕೆ ಪ್ರತಿವರ್ಷ ಬಜೆಟ್ಟಿನಲ್ಲಿ ಎತ್ತಿಡುವ ಮೊತ್ತವೇ ಅಷ್ಟಿರುವುದಿಲ್ಲ. ಹೀಗಿರುವಾಗ ಇವಿಷ್ಟನ್ನು ಸರ್ಕಾರ ವ್ಯಯಿಸಿದ್ದೇ ಆದರೆ ರಕ್ಷಣೆ, ಆರೋಗ್ಯ, ಮೂಲಸೌಕರ್ಯ ಸೇರಿದಂತೆ ಉಳಿದೆಲ್ಲ ಕೆಲಸ ನಿಲ್ಲಿಸಬೇಕಾಗುತ್ತದೆ. ಇಲ್ಲವೇ ತೆರಿಗೆ ಏರಿಸಿ ಜನರ ಬದುಕು ದುರ್ಭರವಾಗಿಸಬೇಕಾಗುತ್ತದೆ.
ಎಂ ಎಸ್ ಪಿ ಕಾಯ್ದೆಬದ್ಧ ಎಂದಾದರೆ ಖಾಸಗಿಯವರಂತೂ ದೂರವೇ ಉಳಿಯುತ್ತಾರೆ. ಏಕೆಂದರೆ, ವ್ಯಾಪಾರ ನಡೆಯುವುದೇ ಮಾರುಕಟ್ಟೆಯ ಬೇಡಿಕೆ ಮತ್ತು ಪೂರೈಕೆಯ ಗಣಿತದ ಮೇಲೆ. ಹೀಗೆ ಖರೀದಿಯಾಗದೇ ಉಳಿದವನ್ನೆಲ್ಲ ಸರ್ಕಾರವೇ ಕೊಂಡುಕೊಳ್ಳುವುದು ಸಾಧ್ಯವಿಲ್ಲದ ಮಾತು. ಅದಕ್ಕೆ ದುಡ್ಡು ಹೊಂದಿಸುವುದೆಲ್ಲಿಂದ? ವಿಶ್ವ ವ್ಯಾಪಾರ ಸಂಸ್ಥೆಯ ಒಪ್ಪಂದಗಳಿಗೆ ಒಳಪಟ್ಟಿರುವ ಭಾರತಕ್ಕೆ ಸಬ್ಸಿಡಿ ಕಾರ್ಯಕ್ರಮದಲ್ಲಿ ಧಾನ್ಯಗಳ ಖರೀದಿಗೂ ಒಂದು ಮಿತಿ ಇದೆ. ಅದು ತನ್ನ ಒಟ್ಟಾರೆ ಕೃಷಿ ಉತ್ಪನ್ನದ ಶೇ. 10ಕ್ಕಿಂತ ಹೆಚ್ಚು ಭಾಗವನ್ನು ಖರೀದಿಸುವಂತಿಲ್ಲ. ಹೀಗೆ ಮಾಡಿದರೆ ಮುಕ್ತ ಮಾರುಕಟ್ಟೆಗೆ ಹೋಗುವ ಧಾನ್ಯದ ಪ್ರಮಾಣಕ್ಕೆ ಕುತ್ತು ಬರುತ್ತದೆ ಎಂಬುದು ಇಲ್ಲಿರುವ ಲಾಜಿಕ್.
ಒಂದೊಮ್ಮೆ ಎಂ ಎಸ್ ಪಿ ಕಾಯ್ದೆಯ ಬಿಗುತನವನ್ನು ಸಹಿಸಿಕೊಂಡು ಖಾಸಗಿಯವರು ಬತ್ತ-ಗೋದಿ ಖರೀದಿಸಿದರು ಎಂದೇ ಇಟ್ಟುಕೊಳ್ಳೋಣ. ಅದು ಕೊನೆಯಲ್ಲಿ ಹಣದುಬ್ಬರಕ್ಕೆ ದಾರಿ ಮಾಡುತ್ತದೆಯೇ ಹೊರತು ಮತ್ತೇನಿಲ್ಲ. ಯಾವುದೇ ಖರೀದಿದಾರ ಅಷ್ಟೇ ಬೆಲೆಗೆ ಖರೀದಿಸಬೇಕು ಎಂದಾದಾಗ ಆತ ಅದನ್ನು ಗ್ರಾಹಕರಿಗೆ ದಾಟಿಸುವಾಗ ಲಾಭದ ಮಾರ್ಜಿನ್ ಇಟ್ಟುಕೊಳ್ಳಬೇಕಾದರೆ ಇನ್ನಷ್ಟು ಬೆಲೆ ಹೆಚ್ಚಿಸಲೇಬೇಕಲ್ಲವೇ? ಈಗೇನೋ ಭಾವನಾತ್ಮಕ ನೆಲೆಯಲ್ಲಿ ರೈತನಿಗೆ ಜೈ ಎನ್ನುವ ಯಾವ ಜನಸಾಮಾನ್ಯನೂ ತನ್ನ ದಿನಸಿ ಬೆಲೆ ಏರಿದರೆ, “ಇರಲಿ ಬಿಡು, ಕೃಷಿಕರಿಗೆ ಹಣ ಹೋಯಿತು” ಎಂದು ಹೇಳಲಾರ. ಬದುಕು ದುಬಾರಿಯಾಯಿತೆಂದು ಎಲ್ಲರೂ ಬಯ್ಯುವುದು ಸರ್ಕಾರವನ್ನೇ.
ಈ ಹಿಂದೆ ದೆಹಲಿಯು ರೈತ ಪ್ರತಿಭಟನೆಯ ಹೆಸರಿನಲ್ಲಿ ಅಸ್ತವ್ಯಸ್ತವಾಗಿದ್ದಾಗ ಅನೇಕರು ಅಲ್ಲಿನ ರಸ್ತೆಗಳನ್ನು ಆಕ್ರಮಿಸಿಕೊಂಡಿದ್ದ ಬೆಂಜ್ ಕಾರುಗಳನ್ನೂ, ರೈತನಾಯಕರ ಹವಾನಿಯಂತ್ರಿತ ಟೆಂಟ್ ಇತ್ಯಾದಿ ಸಾಧನಗಳನ್ನೂ ಹುಬ್ಬೇರಿಸಿ ನೋಡಿದ್ದರು. ಮತ್ತೆ ಕೆಲವರು, ರೈತರಿಗೇನು ಐಶಾರಾಮಿ ಬೇಡವೇನ್ರೀ, ಹಾಗಿರುವುದು ಅಪರಾಧವಾ ಎಂದೂ ಪ್ರಶ್ನಿಸಿದ್ದರು. ಈ ಎರಡರ ಪೈಕಿ ನೀವು ಯಾವುದೇ ವಾದಕ್ಕೆ ಅಂಟಿಕೊಳ್ಳುವ ಮುಂಚೆ ವಾಸ್ತವವೊಂದನ್ನು ಗಮನಿಸಬೇಕು. ಹೀಗೆ ತಿಂಗಳುಗಟ್ಟಲೇ ದೆಹಲಿಯಲ್ಲಿ ಕುಳಿತು ಕೃಷಿ ಸುಧಾರಣೆ ಕಾಯ್ದೆಗಳನ್ನು ವಾಪಸ್ಸು ತೆಗೆದುಕೊಳ್ಳುವಂತೆ ಮಾಡಿದ ತಾಕತ್ತು ಕೇವಲ ದೇಶದ ಆ ಭಾಗದ ರೈತರಿಗೆ ಇರುವುದು ಏಕೆ? ಏಕೆಂದರೆ, ಅಲ್ಲಿನ ರೈತ ಹಿತಾಸಕ್ತಿಯ ಸಂರಚನೆಯೇ ಭಿನ್ನ ಎಂಬುದನ್ನು ವಿಶೇಷವಾಗಿ ದಕ್ಷಿಣದ ರಾಜ್ಯಗಳ ನಾವೆಲ್ಲ ಅರ್ಥ ಮಾಡಿಕೊಳ್ಳಬೇಕು.
ಪಂಜಾಬ್-ಹರ್ಯಾಣಗಳ ರೈತರು ನೇರವಾಗಿ ಎಪಿಎಂಸಿ ಮಾರುಕಟ್ಟೆಯಲ್ಲಿ ವ್ಯವಹರಿಸುವುದಿಲ್ಲ. ಅವರ ಉತ್ಪನ್ನಗಳು ಅರ್ತಿಯಾಗಳ ಮೂಲಕವೇ ಮಾರುಕಟ್ಟೆಗೆ ಬರುತ್ತವೆ. ಈ ಹಂತದ ಸಾಗಣೆ, ಪ್ಯಾಕೇಜಿಂಗ್ ಎಲ್ಲ ಅರ್ತಿಯಾಗಳದ್ದು. ಕೃಷಿ ಉತ್ಪನ್ನ ಮಾರುಕಟ್ಟೆಯಲ್ಲಿ ಉತ್ಪನ್ನ ಬಿಕರಿಯಾದಾಗ ಶೇ. 2.5ರ ಕಮಿಷನ್ ಅರ್ತಿಯಾಗಳಿಗೆ. ಇದು ಕೇವಲ ಕಮಿಷನ್ ಆಟವಾಗಿದ್ದರೆ ದೊಡ್ಡದಿರಲಿಲ್ಲವೇನೋ. ಆದರೆ, ಇಡೀ ಭಾರತ ದೇಶದಲ್ಲಿ ರೈತರಿಗೆ ಡೈರೆಕ್ಟ್ ಬೆನಿಫಿಟ್ ಟ್ರಾನ್ಸಫರ್ ಮೂಲಕ ನೇರ ಜಮಾವಣೆ ಆಗುವ ವ್ಯವಸ್ಥೆ ಇದ್ದರೆ, ಇಲ್ಲಿ ಮಾತ್ರ ಬೆಳೆ ಮಾರಿದ ಹಣ ಅರ್ತಿಯಾಗಳ ಖಾತೆಗೆ ಮೊದಲು ಹೋಗುತ್ತದೆ. ಅದರಲ್ಲಾತ ತನ್ನ ಕಮಿಷನ್ ಅಷ್ಟೇ ಅಲ್ಲದೇ ಆ ರೈತನಿಗೆ ತಾನು ಕೊಟ್ಟಿದ್ದ ಸಾಲದ ವಸೂಲಾತಿ, ಬಡ್ಡಿ ವಸೂಲಾತಿಗಳನ್ನೆಲ್ಲ ಮುರಿದುಕೊಂಡು ಉಳಿದಿದ್ದನ್ನು ರೈತನಿಗೆ ಕೊಡುತ್ತಾನೆ.
ಪಂಜಾಬಿನಲ್ಲಿ 1,400 ಕೃಷಿ ಮಂಡಿಗಳು ಮತ್ತು ಹರ್ಯಾಣದಲ್ಲಿ 800 ಕೃಷಿ ಮಂಡಿಗಳಿವೆ. ಪಂಜಾಬಿನಲ್ಲಿ 23,000 ಅರ್ತಿಯಾಗಳು ಹಾಗೂ ಹರ್ಯಾಣದಲ್ಲಿ 22,000 ಅರ್ತಿಯಾಗಳು ನೋಂದಣಿ ಮಾಡಿಕೊಂಡಿದ್ದಾರೆ. ಒಬ್ಬೊಬ್ಬ ಅರ್ತಿಯಾ ಸಹ ತನ್ನ ಅಧೀನದಲ್ಲಿ ಕನಿಷ್ಟ 40 ರಿಂದ 200ರವರೆಗೂ ಸಣ್ಣ-ಸಣ್ಣ ರೈತರನ್ನು ಹೊಂದಿರುತ್ತಾನೆ. ಈ ರೈತರು ಸಾಲ-ಚಕ್ರಬಡ್ಡಿಗಳ ವಿಷವರ್ತುಲದಲ್ಲಿ ಸುತ್ತಿಕೊಂಡಿರುತ್ತಾರೆ.
ಹೀಗಾಗಿ, ದೆಹಲಿಯಲ್ಲಿ ಸರ್ಕಾರವನ್ನು ಮಾತು ಕೇಳಿಸುತ್ತಿರುವುದು ಈ ಶ್ರೀಮಂತ ಮಧ್ಯವರ್ತಿಗಳ ಲಾಬಿಯೇ. ಹಾಗಾದರೆ, ಅಲ್ಲಿನ ರೈತರೇಕೆ ಇವರ ತಾಳಕ್ಕೆ ಕುಣಿಯುತ್ತಾರೆ? ಉತ್ತರ- ಈ ಖಾಸಗಿ ವ್ಯವಸ್ಥೆಯಲ್ಲಿರುವ ನಗದು ಹಣದ ಲಭ್ಯತೆ. ಸರ್ಕಾರದ ಹಣಕಾಸು ಸಂಸ್ಥೆಗಳು ಎಷ್ಟೇ ಕಡಿಮೆ ಬಡ್ಡಿ ದರದಲ್ಲಿ ಸಾಲ ಕೊಟ್ಟರೂ ಅವುಗಳ ವ್ಯಾಪ್ತಿ ಅಷ್ಟಕ್ಕಷ್ಟೆ. ಜನಕ್ಕೆ ಆಯಾ ಕೃಷಿಋತುವಿಗೆ ತಕ್ಕಂತೆ ಹಣ ಸಿಗುವುದೇ ಮುಖ್ಯ. ಅದಕ್ಕೆ ಎಷ್ಟೆಲ್ಲ ಬಡ್ಡಿ ವಿಧಿಸಿ ತಮ್ಮನ್ನೆಲ್ಲ ಮಧ್ಯವರ್ತಿಗಳು ಒಂದರ್ಥದಲ್ಲಿ ಜೀತಕ್ಕೆ ಇರಿಸಿದ್ದಾರೆ ಎಂಬುದೆಲ್ಲ ಹೆಚ್ಚಿನವರಿಗೆ ಮನಸ್ಸಿಗಿಳಿಯಲಾರದು.
ಇದೊಂದು ಒರಟು ಪ್ರಶ್ನೆ ಎನ್ನಿಸಬಹುದು. ಆದರೆ, ಹಸಿರುಕ್ರಾಂತಿಯ ರಸಗೊಬ್ಬರ ಹಾಗೂ ಸಬ್ಸಿಡಿಗಳ ಲಾಭವನ್ನು ಬೇರೆಲ್ಲರಿಗಿಂತ ಹೆಚ್ಚಾಗಿ ಪಡೆದುಕೊಂಡ ಪಂಜಾಬ್ ಕೃಷಿ ವಲಯವು ಅನ್ನದ ಬಟ್ಟಲನ್ನು ಸುಸ್ಥಿರವಾಗಿಸುವ ತನ್ನ ಕರ್ತವ್ಯವನ್ನು ಪಾಲಿಸುತ್ತಿದೆಯೇ? ಈ ಬಗ್ಗೆ ಬಹಳಷ್ಟು ನಕಾರಾತ್ಮಕ ಉತ್ತರಗಳು ಸಿಗುತ್ತವೆ. ಉದಾಹರಣೆಗೆ, ಫಲವತ್ತಾದ ನದಿ ಪ್ರದೇಶಗಳನ್ನು ಇರಿಸಿಕೊಂಡಮೇಲೂ ಅಂತರ್ಜಲವನ್ನು ಬೇಕಾಬಿಟ್ಟಿ ಖರ್ಚು ಮಾಡುತ್ತಿರುವ ಕುಖ್ಯಾತಿ ಈ ರಾಜ್ಯಕ್ಕಿದೆ.
ಕ್ರಿಮಿನಾಶಕಗಳ ಬಳಕೆಯಲ್ಲಿ ಪಂಜಾಬ್ ಮೂರನೇ ಸ್ಥಾನದಲ್ಲಿದೆ. ಇದನ್ನೇ ನೇರ ಮಾತಿನಲ್ಲಿ ಹೇಳುವುದಾದರೆ, ಅನ್ನದ ಬಟ್ಟಲಿನಲ್ಲಿರುವ ಅನಾರೋಗ್ಯಕ್ಕೆ ಈ ರಾಜ್ಯದ ಕೃಷಿವಲಯದ ಕೊಡುಗೆಯೂ ಸಾಕಷ್ಟಿದೆ. ರಸಗೊಬ್ಬರ ಬಳಕೆಯಲ್ಲಿ ಪಂಜಾಬಿನದ್ದು ಅಗ್ರಸ್ಥಾನ. ರಸಗೊಬ್ಬರ ಬಳಕೆಯ ರಾಷ್ಟ್ರೀಯ ಸರಾಸರಿ ಪ್ರತಿ ಹೆಕ್ಟೇರಿಗೆ 90 ಕೆಜಿ ಇದ್ದರೆ, ಪಂಜಾಬಿನಲ್ಲಿ ಇದರ ಬಳಕೆ ಹೆಕ್ಟೇರಿಗೆ 223 ಕೆಜಿ. ನಿಮಗೆ ಗೊತ್ತಿರಲಿ. ರಸಗೊಬ್ಬರಕ್ಕೆ ನಾವು ವಿದೇಶಗಳ ಮೇಲೆ ಅವಲಂಬಿತವಾಗಿದ್ದೇವೆ. ರೈತರಿಗೆ ಅದನ್ನು ಕಡಿಮೆ ಬೆಲೆಯಲ್ಲಿ ಮುಟ್ಟಿಸುವುದಕ್ಕೆ ವ್ಯಯವಾಗುತ್ತಿರುವುದು ನಮ್ಮೆಲ್ಲರ ತೆರಿಗೆ ಹಣವೇ. ಇಷ್ಟೆಲ್ಲ ಆಗಿ, ಪ್ರತಿ ಚಳಿಗಾಲದಲ್ಲೂ ದೆಹಲಿಯನ್ನು ಉಸಿರುಗಟ್ಟುವಂತೆ ಮಾಡುವ ಜಮೀನಿನ ಕಳೆ ಸುಡುವಿಕೆಯನ್ನು ನಿಲ್ಲಿಸಿ ಎಂಬ ಸರ್ಕಾರದ ಮನವಿಗೆ ಅಲ್ಲಿನ ಕೃಷಿ ವಲಯ ಕವಡೆಕಾಸಿನ ಕಿಮ್ಮತ್ತೂ ಕೊಡುತ್ತಿಲ್ಲ.
ಅನ್ನದಾತ ಎಂಬ ಭಾವನಾತ್ಮಕತೆಯಲ್ಲಿ ಪಂಜಾಬಿನ ರೈತ ಪ್ರತಿಭಟನೆಗಳನ್ನು ಕಣ್ಣುಮುಚ್ಚಿ ಬೆಂಬಲಿಸುವುದಕ್ಕೆ ಮೊದಲು ಇವೆಲ್ಲ ತಥ್ಯಗಳು ನಿಮಗೆ ತಿಳಿದಿರಲಿ, ಅಷ್ಟೆ.
- ಚೈತನ್ಯ ಹೆಗಡೆ
cchegde@gmail.com