ಕೋವಿಡ್ ಬಹಳಷ್ಟು ಜನ ಬಂಧು ಮಿತ್ರರನ್ನು ತನ್ನೊಂದಿಗೆ ಕರೆದುಕೊಂಡು ಹೋಗಿದೆ. ಕೋವಿಡ್ ನಂತರದ ಈ ದಿನಗಳಲ್ಲಿ ನಿತ್ಯವೂ ಒಂದು ಕಹಿ ಸುದ್ದಿ ಬರುತ್ತಲೆ ಇರುತ್ತದೆ. ಹಿಂದೆಲ್ಲಾ ಮೊದಲು ವಯಸ್ಸಾದವರು ಮರಣಿಸುತ್ತಾರೆ ಆ ನಂತರ ಮಿಕ್ಕವರು ವಯಸ್ಸಿಗೆ ಅನುಗುಣವಾಗಿ ಅವಸಾನವನ್ನು ಅಪ್ಪುತ್ತಾರೆ ಎನ್ನುವ ಮಾತ್ತಿತ್ತು. ಇವತ್ತಿಗೆ ಆ ಎಲ್ಲಾ ಲೆಕ್ಕಾಚಾರಕ್ಕೆ ಬೆಲೆ ಇಲ್ಲದಂತಾಗಿದೆ. ಸಣ್ಣ ವಯಸ್ಸಿನವರು ಕೂಡ ಹೃದಯಾಘಾತಕ್ಕೆ ಈಡಾಗಿ ಸಾಯುತ್ತಿದ್ದಾರೆ.
ಕೇವಲ ಎರಡು ದಿನದ ಹಿಂದೆ ಗೆಳೆಯನೊಬ್ಬ ಫೋನ್ ಮಾಡಿ ತನ್ನ ಆದಾಯ, ಸಾಲ, ಆಸ್ತಿ ಎಲ್ಲದರ ಲೆಕ್ಕಾಚಾರವನ್ನು ಒಂದೆಡೆ ಬರೆದು ಅದನ್ನು ನನಗೆ ಮೇಲ್ ಮಾಡಿರುವುದಾಗಿ ಹೇಳಿದ. ನಾವು ಇನ್ನೊಂದು ವರ್ಷವನ್ನು ಮುಗಿಸಿ ಹೊಸ ವರ್ಷಕ್ಕೆ ಕಾಲಿಡಲು ಸಿದ್ಧವಾಗುತ್ತಿದ್ದೇವೆ. ಈ ಸಮಯದಲ್ಲಿ ನಾವೆಲ್ಲರೂ ವಯಸ್ಸಿನ ಹಂಗಿಲ್ಲದೆ ಮಾಡಬೇಕಾದ ಕೆಲಸವೊಂದು ಬಾಕಿಯಿದೆ. ಅದೇನು ಎನ್ನುವುದನ್ನು ಕೆಳಗಿನ ಸಾಲುಗಳಲ್ಲಿ ಹೇಳುವ ಪ್ರಯತ್ನವಿದೆ.
ಇಂದಿನ ದಿನಗಳಲ್ಲಿ ಬದುಕು ಎಷ್ಟು ಅಸ್ಥಿರ ಎನ್ನುವುದನ್ನು ನಾವೆಲ್ಲರೂ ಕಾಣುತ್ತಿದ್ದೇವೆ. ಹೀಗಾಗಿ ನಮ್ಮ ಸ್ಥಿರಾಸ್ಥಿ ಮತ್ತು ಚಿರಾಸ್ಥಿ ನಮ್ಮನಂತರ ಯಾರಿಗೆ ಸೇರಬೇಕು ಎನ್ನುವ ನಿಖರತೆ ಮತ್ತು ಅದನ್ನು ಅಕ್ಷರರೂಪಕ್ಕೆ ಇಳಿಸಿ ಅದಕ್ಕೊಂದು ಸಹಿಹಾಕಿ ರಿಜಿಸ್ಟರ್ ಮಾಡಿಸಿಡುವುದು ಮಾಡಲೇಬೇಕಾದ ಕೆಲಸ. ಈ ಕೆಲಸವನ್ನು ಕೇವಲ ಹಿರಿಯ ನಾಗರಿಕರು ಮಾಡಬೇಕು ಎಂದಲ್ಲ, ಈ ರೀತಿಯ ಉಯಿಲು ಬರೆದಿಡುವುದು ಮತ್ತು ನಾಮಿನೇಷನ್ ಮಾಡುವುದು ಎಲ್ಲರೂ ಮಾಡಬೇಕು. ಇದಕ್ಕೆ ವಯಸ್ಸಿನ ನಿರ್ಬಂಧ ತೊಡಿಸುವ ಅಗತ್ಯತೆಯಿಲ್ಲ . ಇದರ ಜೊತೆಯಲ್ಲಿ ಇನ್ನೊಂದು ಅತ್ಯಂತ ಮುಖ್ಯವಾದ ಅಂಶವನ್ನು ಕೂಡ ಮರೆಯುವುದು ಬೇಡ. ಅದೇನೆಂದರೆ ಮನೆಯ ಮೇಲಿನ ಸಾಲ ಅಥವಾ ಇನ್ನಿತರ ಸಾಲ ಮಾಡಿದಾಗ ಸಾಲದ ಮೇಲೆ ವಿಮೆಯನ್ನು ಮಾಡಿಸುವುದು ಕಡ್ಡಾಯ.
ಈ ಲೇಖನದಲ್ಲಿ ಪದೆ ಪದೇ ಹೇಳುತ್ತಿರುವಂತೆ, ಯಾವಾಗ ಬೇಕಾದರೂ, ಯಾರಿಗೆ ಬೇಕಾದರೂ, ಏನು ಬೇಕಾದರೂ ಆಗಬಹುದು ಎನ್ನುವ ಕಾಲಘಟ್ಟದಲ್ಲಿ ನಾವಿದ್ದೇವೆ. ಹೀಗಾಗಿ ಸಾಲದ ಮೇಲೆ ವಿಮೆ ಮಾಡಿಸುವುದು ಬಹಳ ಪ್ರಾಮುಖ್ಯತೆಯನ್ನು ಪಡೆದುಕೊಳ್ಳುತ್ತದೆ. ಆಗೊಮ್ಮೆ ವಿಮೆದಾರ ಮರಣಿಸಿದಾಗ ಸಾಲವನ್ನು ಮರು ಪಾವತಿಸುವ ಅಗತ್ಯ ಬರುವುದಿಲ್ಲ. ಅಲ್ಲದೆ ವಿಮೆಯ ಮೇಲಿನ ಪ್ರೀಮಿಯಂ ಹೆಚ್ಚಿನ ಭಾರವನ್ನು ಸಹ ಉಂಟುಮಾಡುವುದಿಲ್ಲ. ಹೀಗಾಗಿ ಇದರ ಉಪಯೋಗವನ್ನು ಎಲ್ಲರೂ ಪಡೆದುಕೊಳ್ಳಬೇಕು.
ಒಬ್ಬ ವ್ಯಕ್ತಿ ಜೀವಿತಾವಧಿಯಲ್ಲಿ ಹಲವಾರು ಹಣಕಾಸು ವ್ಯವಹಾರಗಳನ್ನು ಮಾಡುತ್ತಾನೆ. ಹಾಗೆ ವ್ಯವಹರಿಸುವ ವ್ಯಕ್ತಿಗೆ ಆಕಸ್ಮಿಕವಾಗಿ ಏನಾದರೂ ಆದರೆ ಎನ್ನುವ ಕಾರಣಕ್ಕೆ ನಾಮಿನಿಯನ್ನು ನೇಮಿಸಬೇಕಾಗುತ್ತದೆ. ಹೀಗೆ ನಿರ್ದೇಶಿಸಲ್ಪಟ್ಟ ವ್ಯಕ್ತಿ ಮುಂದಿನ ಎಲ್ಲಾ ಹಕ್ಕುಗಳಿಗೆ ಭಾದ್ಯನಾಗುತ್ತಾನೆ. ಉದಾಹರಣೆಯನ್ನು ನೋಡೋಣ.
ನಾಗಲಕ್ಷಮ್ಮನವರಿಗೆ 70ರ ಹರಯ ಆದರೂ ಎಲ್ಲವನ್ನೂ ಇನ್ನೂ ತನ್ನ ಹಿಡಿತದಲ್ಲಿ ಇಟ್ಟು ಕೊಳ್ಳಬೇಕು ಎನ್ನುವ ತವಕ. ಬ್ಯಾಂಕುಗಳಲ್ಲಿ ಇಂದಿಗೂ ನಾಮಿನಿ ಹೆಸರು ಕಡ್ಡಾಯವಲ್ಲ. ಬ್ಯಾಂಕಿನವರು ನಾಮಿನಿ ಹೆಸರು ಕೊಡಿ ಎಂದದ್ದಕ್ಕೆ ಯಾರೂ ಬೇಕಿಲ್ಲ ಎಂದಿದ್ದಾರೆ ನಾಗಲಕ್ಷಮ್ಮ. ಹೀಗೆ ವಿಮೆಗೂ ಮಾಡಿದ್ದಾರೆ. ತಾವು ವಾಸವಿದ್ದ ಮನೆ ಯಾರಿಗೆ ಸೇರಬೇಕು ಎನ್ನುವ ಬಗ್ಗೆ ಕೂಡ ಎಲ್ಲಿಯೂ ಯಾವ ಪತ್ರವು ಇಲ್ಲ. ನಾಗಲಕ್ಷಮ್ಮ ಇಲ್ಲವಾದಾಗ ಅವರ ಮಕ್ಕಳು ತಮ್ಮ ಸಂಬಂಧವನ್ನು ಪ್ರೋವ್ ಮಾಡಬೇಕಾಗುತ್ತದೆ. ಕೋರ್ಟಿಗೆ ಹೋಗಿ ಅಲ್ಲಿಂದ ಅನುಮತಿ ಪತ್ರವನ್ನು ತರಬೇಕಾಗುತ್ತದೆ. ಸಮಯ, ಹಣ ಮತ್ತು ಕಾನೂನು ತಿಕ್ಕಾಟಗಳನ್ನು ಎದುರಿಸಿ ಯಾವುದು ನಮಗೆ ನ್ಯಾಯಯುತವಾಗಿ ಸಲ್ಲಬೇಕು ಅದನ್ನು ಪಡೆದುಕೊಳ್ಳಲು ಹೆಣಗಬೇಕಾಗುತ್ತದೆ.
ಹಾಗೊಮ್ಮೆ ಬ್ಯಾಂಕಿನಲ್ಲಿ ಹಣವನ್ನು ಫಿಕ್ಸೆಡ್ ಡೆಪಾಸಿಟ್ ಮಾಡುವಾಗ ನಾಮಿನಿ ಎನ್ನುವ ಜಾಗದಲ್ಲಿ ಮಗ/ಮಗಳು ಅಥವಾ ಗಂಡನ ಹೆಸರನ್ನು ನಮೂದಿಸಿದ್ದಿದ್ದರೆ ಆಗ ಅದು ಸುಲಭವಾಗಿ ಅವರಿಗೆ ಸಿಗುತಿತ್ತು. ಬ್ಯಾಂಕ್ ಖಾತೆ ತೆರೆದಾಗ ಖಾತೆಗೆ ಕೂಡ ನಾಮಿನಿಯನ್ನು ಹೆಸರಿಸಬಹುದು. ಯಾವುದೇ ರೀತಿಯ ವಿಮೆಯನ್ನು ಕೊಂಡಾಗ ಕೂಡ ಅಲ್ಲಿ ನಾಮಿನಿಯನ್ನು ಸೂಚಿಸಬಹುದು. ಯಾವಾಗೆಲ್ಲಾ ನಾಮಿನಿಯ ಹೆಸರನ್ನು ಸೂಚಿಸಿರುತ್ತೇವೆ, ಆಗೆಲ್ಲಾ ಅವಘಡಗಳು ಸಂಭವಿಸಿದರೆ ಅಲ್ಲಿನ ಆಸ್ತಿ ಅಥವಾ ಹಣದ ಮೇಲೆ ನಾಮಿನಿಗೆ ಅಧಿಕಾರ ಸಿಗುತ್ತದೆ. ಇದು ಬಹಳ ಸುಲಭ ವಿಧಾನ. ಇದನ್ನು ಕೇವಲ ಹಿರಿಯ ನಾಗರಿಕರು ಮಾತ್ರ ಮಾಡಬೇಕು ಎಂದಿಲ್ಲ. ಯಾವುದೇ ವಯೋಮಾನದವರು ಕೂಡ ಬ್ಯಾಂಕ್ ಖಾತೆ ತೆಗೆದಾಗ, ವಿಮೆ ಕೊಳ್ಳುವಾಗ, ವಾಹನ ಕೊಳ್ಳುವಾಗ ಮತ್ತು ಎಲ್ಲೆಲ್ಲಿ ನಾಮಿನಿ ಹೆಸರನ್ನು ಸೂಚಿಸಲು ಅವಕಾಶವಿದೆ ಅಲ್ಲೆಲ್ಲ ನಾಮಿನಿಯನ್ನು ಹೆಸರಿಸಬೇಕು. ಇದು ಭವಿಷ್ಯದಲ್ಲಿ ಸಮಯ, ಹಣ ಮತ್ತು ಕಾನೂನು ತಿಕ್ಕಾಟವನ್ನು ಕಡಿಮೆಗೊಳಿಸುತ್ತದೆ.
ಷೇರು ಮಾರುಕಟ್ಟೆಯಲ್ಲಿ ಡಿಮ್ಯಾಟ್ ಅಕೌಂಟ್ ತೆರೆಯುವಾಗ ಕೂಡ ನಾಮಿನಿ ಹೆಸರನ್ನು ಸೂಚಿಸಬೇಕಾಗುತ್ತದೆ. ನೆನಪಿರಲಿ ಸೆಬಿ ಇಲ್ಲಿ ನಾಮಿನಿ ಸೂಚಿಸುವುದು ಕಡ್ಡಾಯ ಮಾಡಿದೆ. ಅಂದರೆ ನಾಮಿನಿಯ ಹೆಸರನ್ನು ಸೂಚಿಸದೆ ಇದ್ದರೆ ಅಕೌಂಟ್ ತೆರೆಯಲು ಬಿಡುವುದಿಲ್ಲ. ಕಡ್ಡಾಯವಿರಲಿ ಅಥವಾ ಇಲ್ಲದಿರಲಿ, ಎಲ್ಲಿ ಸಾಧ್ಯವಿದೆ ಅಲ್ಲಿ ನಾಮಿನಿಯನ್ನು ಹೆಸರಿಸುವುದು ಮರೆಯದೆ ಮಾಡಬೇಕು. ನಮ್ಮವರ ಹಿತದೃಷ್ಟಿಯಿಂದ ಇದು ಬಹಳ ಮುಖ್ಯ. ತೀರಾ ಇತ್ತೀಚೆಗೆ ಅಂದರೆ ಡಿಸೆಂಬರ್ 2024ರಲ್ಲಿ ಒಟ್ಟಾರೆ ನಾಲ್ಕು ಜನ ನಾಮಿನಿಗಳನ್ನು ಮಾಡುವ ಅವಕಾಶವನ್ನು ಮಾಡಿಕೊಟ್ಟಿದೆ.
ಕೆಲವೊಂದು ಆಸ್ತಿಗಳನ್ನು ಕೇವಲ ನಾಮಿನಿ ಮೂಲಕ ಹೇಳಲಾಗುವುದಿಲ್ಲ. ಅಥವಾ ನಾಮಿನಿ ಇಲ್ಲದ ಕಡೆಗೆಲ್ಲಾ ವಿಲ್ ಅಥವಾ ಉಯಿಲು ಮಾಡಿದಿಡುವುದು ಬಹಳ ಅವಶ್ಯಕ. ಗಮನಿಸಿ ಮನೆ, ನೆಲ, ಬಂಗಾರ ಇತ್ಯಾದಿ ಆಸ್ತಿಗಳಿಗೆ ನಮ್ಮ ನಂತರ ಯಾರು ವಾರಸುದಾರರು ಎನ್ನುವುದನ್ನು ಬರೆದಿಡಬೇಕು, ಅದಕ್ಕೆ ಸಹಿ ಹಾಕಿ ಅದನ್ನು ರಿಜಿಸ್ಟರ್ ಮಾಡಿಡಬೇಕು.
ರಿಜಿಸ್ಟರ್ ಮಾಡಿರದ ಉಯಿಲಿಗೆ ಬೆಲೆ ಇರುವುದಿಲ್ಲ. ಏನೂ ಇಲ್ಲ ಎನ್ನುವುದಕ್ಕಿಂತ ಏನೂ ಇದೆ ಎನ್ನುವುದು ವಾಸಿ. ಆದರೆ ಯಾವಾಗಲೂ ವಿಲ್ ರಿಜಿಸ್ಟರ್ ಮಾಡುವುದು ಉತ್ತಮ. ಇದನ್ನು ಕೂಡ ಹಿರಿಯ ನಾಗರಿಕರಾದ ಮೇಲೆ ಮಾಡಬೇಕು ಎನ್ನುವ ಕಡ್ಡಾಯವಿಲ್ಲ. ಆಸ್ತಿ ಜಾಸ್ತಿಯಿದ್ದಾಗ, ಆರೋಗ್ಯದಲ್ಲಿ ಏರುಪೇರು ಆಗುತ್ತಿದ್ದಾಗ , ಅಥವಾ ವಯಸ್ಸು ಐವತ್ತರ ಆಜುಬಾಜಿಗೆ ಬಂದಾಗ, ಕೈಯಲ್ಲಿ, ಮೆದುಳಿನಲ್ಲಿ ಶಕ್ತಿಯಿದ್ದಾಗ ವಿಲ್ ಮಾಡಿಡುವುದು ಉತ್ತಮ. ನಾಮಿನಿ ವಿಚಾರದಲ್ಲಿ ಆದ ಹಾಗೆ ಇಲ್ಲಿ ಕೂಡ ವಿಲ್ ಇರದಿದ್ದರೆ ಬಹಳ ಕಷ್ಟವಾಗುತ್ತದೆ. ವಿಲ್ ಇದ್ದಾಗ ಸುಲಭವಾಗಿ ಮಾಲೀಕತ್ವ ನಾವು ಇಚ್ಛೆಪಟ್ಟವರದ್ದಾಗುತ್ತದೆ.
ನಾಮಿನಿ ಅಥವಾ ವಿಲ್ ಇಲ್ಲದ ವೇಳೆಯಲ್ಲಿ ಮತ್ತು ಒಟ್ಟು ಹಣ ಮತ್ತು ಆಸ್ತಿಯ ಮೊತ್ತ ಐದು ಲಕ್ಷಕ್ಕಿಂತ ಕಡಿಮೆ ಇದ್ದರೆ ಆಗ ಉತ್ತರಾಧಿಕಾರಿ ಎಂದು ಘೋಷಿಸಿಕೊಂಡವರು ಅವರ ಕೆ ವೈಸಿ ಮಾಹಿತಿ ನೀಡಬೇಕಾಗುತ್ತದೆ. ಜೊತೆಗೆ ಬೇರೆ ಒಡಹುಟ್ಟಿದವರ ಹಕ್ಕು ನಿರಾಕರಣೆ ಪಾತ್ರವನ್ನು ಒದಗಿಸಬೇಕಾಗುತ್ತದೆ, ಸತ್ತವರ ಮರಣ ಪ್ರಮಾಣ ಪತ್ರ ಮತ್ತು ಅವರ ಜೊತೆಗಿನ ಸಂಬಂಧವನ್ನು ದೃಡೀಕರಿಸುವ ಪತ್ರವನ್ನು ನೀಡಬೇಕಾಗುತ್ತದೆ.
ಮೊತ್ತ ಹೆಚ್ಚಾದರೆ, ಇಡೇಮ್ನೀಟಿ ಲೆಟರ್, ಮ್ಯಾಜಿಸ್ಟ್ರೇಟ್ ಅಥವಾ ನೋಟರಿ ಪಬ್ಲಿಕ್ ಅವರ ಅಫಿಡವಿಟ್ ಜೊತೆಗೆ ಅವರು ಕೇಳುವ ಎಲ್ಲಾ ಪತ್ರಗಳನ್ನು ಒದಗಿಸಬೇಕಾಗುತ್ತದೆ. ಇದರರ್ಥ ಬಹಳ ಸುಲಭ. ವಿಲ್ ಮತ್ತು ನಾಮಿನೇಷನ್ ಇಲ್ಲದ ಸಮಯದಲ್ಲಿ ಅದು ನಮಗೆ ಸೇರಬೇಕು ಎನ್ನುವುದನ್ನು ಸಾಬೀತು ಪಡಿಸಬೇಕಾಗುತ್ತದೆ. ಈ ಸಮಯದಲ್ಲಿ ಬೇರೆ ಯಾರೂ ನಾನು ಕೂಡ ಅದಕ್ಕೆ ಹಕ್ಕುದಾರ ಎಂದು ಬರದಿದ್ದರೆ ಪರವಾಗಿಲ್ಲ. ಹಾಗೊಮ್ಮೆ ನಾನೂ ಕೂಡ ಆ ಆಸ್ತಿಯಲ್ಲಿ ಪಾಲುದಾರ ಎಂದು ತಗಾದೆ ಹೂಡಿದರೆ ಅದು ನ್ಯಾಯಾಲಯದ ಮೆಟ್ಟಿಲನ್ನು ಏರುತ್ತದೆ. ಒಮ್ಮೆ ನ್ಯಾಯಾಲಯಕ್ಕೆ ಪ್ರಕರಣ ದಾಖಲಾದರೆ ಅದನ್ನು ಕ್ಲಿಯರ್ ಮಾಡಿಸಿಕೊಂಡು ಬರುವುದಕ್ಕೆ ಬಹಳ ವೇಳೆ ಹಿಡಿಯುತ್ತದೆ. ಹೀಗಾಗಿ ವಿಲ್ ಮತ್ತು ನಾಮಿನೇಷನ್ ಮಾಡುವುದು ಕಡ್ಡಾಯ ಎಂದುಕೊಳ್ಳಬೇಕು.
ಕೊನೆಮಾತು: ನಾಮಿನೇಷನ್ ಮಾಡುವುದಕ್ಕೆ ಒಂದು ಪೈಸೆ ಖರ್ಚಾಗುವುದಿಲ್ಲ. ಹೀಗಾಗಿ ಎಲ್ಲೆಲ್ಲಿ ಸಾಧ್ಯಾವೋ ಅಲ್ಲೆಲ್ಲಾ ನಾಮಿನಿಯನ್ನು ಹೆಸರಿಸುವುದು ಮರೆಯಬಾರದು. ಎಲ್ಲಿ ನಾಮಿನಿ ಮಾಡಲು ಸಾಧ್ಯವಿಲ್ಲ ಅಲ್ಲಿ ವಿಲ್ ಕೆಲಸಕ್ಕೆ ಬರುತ್ತದೆ. ನಮ್ಮ ಪ್ರೀತಿ ಪಾತ್ರರು ನಮ್ಮ ಅಗಲಿಕೆಯ ನಂತರ ಸುಲಭವಾಗಿ ನಮ್ಮ ಆಸ್ತಿಯನ್ನು ಅನುಭವಿಸುವಂತಾಗಬೇಕಾದರೆ ವಿಲ್ ಮಾಡುವುದು ಕಡ್ಡಾಯ ಎನ್ನುವ ಮಾನಸಿಕತೆ ನಾವು ಬೆಳೆಸಿಕೊಳ್ಳಬೇಕು. ಭಾರತದಲ್ಲಿ ಇನ್ನೂ ವಿಲ್ ಮಾಡುವುದು ಎಂದರೆ ಸಾಯುವ ಹಂತದ ಕ್ರಿಯೆ ಎನ್ನುವ ಭಾವನೆಯಿದೆ. ಅದು ತಪ್ಪು. ಇಂದಿನ ಅನಿಶ್ಚಿತ ಬದುಕಿನಲ್ಲಿ ಎಷ್ಟು ಬೇಗ ಸಾಧ್ಯ ಅಷ್ಟು ಬೇಗೆ ವಿಲ್ ಮಾಡಿದಿಡುವುದು ಒಳ್ಳೆಯದು.
-ರಂಗಸ್ವಾಮಿ ಮೂಕನಹಳ್ಳಿ
muraram@yahoo.com