ಅಜಿತ್ ದೋವಲ್-ಚೀನಾ ಉಪಾಧ್ಯಕ್ಷ (ಎಡಭಾಗದ ಚಿತ್ರ), ಡೊನಾಲ್ದ್ ಟ್ರಂಪ್ (ಬಲಭಾಗದ ಚಿತ್ರ) online desk
ಅಂಕಣಗಳು

ಭಾರತದ ಮೇಲೆ ಟ್ರಂಪ್ ಕೋಪ, ಚೀನಾ ಜೊತೆ ಸ್ನೇಹ! ಏನಿದರ ಮರ್ಮ? (News & Views)

ಭಾರತವು ಕಾರ್ಯತಂತ್ರದ ದೃಷ್ಟಿಯಿಂದ ಅಮೆರಿಕದ ಜತೆ ತನ್ನನ್ನು ಗುರುತಿಸಿಕೊಳ್ಳುತ್ತಲೇ, ಅಮೆರಿಕ ವರ್ಸಸ್ ಚೀನಾ ಎಂಬ ಸಮೀಕರಣದಿಂದ ತಾನು ಅಂತರವನ್ನೂ ಕಾಯ್ದುಕೊಳ್ಳುತ್ತಿದೆ.

ಈಗೊಂದೆರಡು ದಿನಗಳಲ್ಲಿ ಭಾರತಕ್ಕೆ ಸಂಬಂಧಿಸಿದಂತೆ ಆಗಿರುವ ಎರಡು ಜಾಗತಿಕ ವಿದ್ಯಮಾನಗಳು ಗಮನಾರ್ಹ. ಒಂದು, ಅಮೆರಿಕದ ನಿಯೋಜಿತ ಅಧ್ಯಕ್ಷ ಡೊನಾಲ್ಡ್ ಟ್ರಂಪ್ (Donald Trump) ಭಾರತದ ಆಮದು ಸುಂಕ ನೀತಿಯನ್ನು ಟೀಕಿಸಿ, ಅಮೆರಿಕವೂ ಭಾರತದ ವಿರುದ್ಧ ಪ್ರತಿಕ್ರಿಯಾತ್ಮಕವಾಗಿ ಸುಂಕ ಹೆಚ್ಚಿಸಲಿದೆ ಎಂದು ಬೆದರಿಕೆ ಹಾಕಿರುವುದು.

ಎರಡನೆಯದು, ತಿಂಗಳ ಹಿಂದೆ ಬ್ರಿಕ್ಸ್ ಸಮಾವೇಶದ ವೇಳೆ ಸುಧಾರಣೆ ಕಂಡಂತಿದ್ದ ಭಾರತ-ಚೀನಾ ಸಂಬಂಧವು ಮತ್ತಷ್ಟು ಪ್ರಗತಿ ಕಂಡು, ಬೀಜಿಂಗ್ ನಲ್ಲಿ ನಡೆಯುತ್ತಿರುವ ಉಭಯ ದೇಶಗಳ ವಿಶೇಷ ಪ್ರತಿನಿಧಿಗಳ ಸಭೆಯಲ್ಲಿ ಆರು ಅಂಶಗಳ ಒಪ್ಪಂದ ಆಗಿರುವುದು.

ಇದರರ್ಥವೇನು? ಕೆಲವು ಸೈದ್ಧಾಂತಿಕ ಕಾರಣಗಳಿಗಾಗಿ ಅಮೆರಿಕದಲ್ಲಿ ಟ್ರಂಪ್ ಆಡಳಿತ ಬರುತ್ತಿರುವುದು ಭಾರತಕ್ಕೆ ಹೆಚ್ಚಿನ ಸಮಾಧಾನದ ಸಂಗತಿಯೇ ಹೌದಾದರೂ, ವ್ಯಾಪಾರ-ವಹಿವಾಟಿನ ಸಂದರ್ಭ ಬಂದಾಗ ಭಾರತ ತನ್ನ ಚೌಕಾಶಿ ಸಾಮರ್ಥ್ಯವನ್ನು ಸ್ವತಂತ್ರವಾಗಿಯೇ ಇಟ್ಟುಕೊಳ್ಳುವುದಕ್ಕೆ ಪ್ರಯತ್ನಿಸಲಿದೆ ಎಂಬುದರ ಸೂಚನೆ. ಹಾಗೆಂದೇ ಭಾರತವು ಕಾರ್ಯತಂತ್ರದ ದೃಷ್ಟಿಯಿಂದ ಅಮೆರಿಕದ ಜತೆ ತನ್ನನ್ನು ಗುರುತಿಸಿಕೊಳ್ಳುತ್ತಲೇ, ಅಮೆರಿಕ ವರ್ಸಸ್ ಚೀನಾ ಎಂಬ ಸಮೀಕರಣದಿಂದ ತಾನು ಅಂತರವನ್ನೂ ಕಾಯ್ದುಕೊಳ್ಳುತ್ತಿದೆ. 

ಚೀನಾದ ಅನಿವಾರ್ಯತೆ, ಭಾರತದ ಸಕಾರಾತ್ಮಕ ಸ್ಪಂದನೆ

ಚೀನಾದೊಂದಿಗೆ ಸಂಬಂಧ ಅತಿಯಾಗಿ ಹದಗೆಟ್ಟಿದ್ದಕ್ಕೆ 2020ರಲ್ಲಿ ಗಡಿಯಲ್ಲಿ ಚೀನಾ ತೋರಿದ್ದ ಆಕ್ರಮಣಕಾರಿ ಧೋರಣೆಯೇ ಕಾರಣವಾಗಿತ್ತು. ಹಾಗೆಂದೇ, ಚೀನಾದ ಹಲವು ಹೂಡಿಕೆಗಳ ಮೇಲೆ, ಕಾರ್ಯತಂತ್ರದ ದೃಷ್ಟಿಯಿಂದ ತೊಡಕು ತರಬಲ್ಲ ಅದರ ಹಲವು ಭಾರತೀಯ ವ್ಯವಹಾರಗಳ ಮೇಲೆ ಭಾರತವು ಪ್ರತಿಬಂಧದ ಕ್ರಮಗಳನ್ನು ತೆಗೆದುಕೊಂಡಿತು. ಚೀನಾ ಮೂಲದ ಟಿಕ್ ಟಾಕ್ ಅನ್ನು ನಿಷೇಧಿಸುವುದಕ್ಕೆ ಅಮೆರಿಕವಿನ್ನೂ ಕಾನೂನಿನ ಜಡಕುಗಳಲ್ಲೇ ವ್ಯಸ್ತವಾಗಿರುವಾಗ, ಭಾರತವು ಕೋವಿಡ್ ಸಮಯದಲ್ಲೇ ಚೀನಾದ ಆ ಡಿಜಿಟಲ್ ವೇದಿಕೆಯನ್ನು ಭಾರತದ ಅಂತರ್ಜಾಲ ವ್ಯವಸ್ಥೆಯಿಂದ ಹೊರದಬ್ಬಿಬಿಟ್ಟಿತು. ಇವೆಲ್ಲ ಆಗಿ ಮೂರ್ನಾಲ್ಕು ವರ್ಷಗಳು ಕಳೆದ ಮೇಲೆ ಚೀನಾ ರಾಜಿ ಧ್ವನಿಯಲ್ಲಿ ಮಾತನಾಡುತ್ತಿದೆ. ಹಿಮಾಲಯದ ಯಾವ ಭಾಗದಲ್ಲಿ ಸಂಘರ್ಷವಾಗಿ ಅಲ್ಲಿ ಭಾರತೀಯ ಪಹರೆಗೆ ಅಡ್ಡಲಾಗಿ ತಾತ್ಕಾಲಿಕ ನಿರ್ಮಾಣಗಳನ್ನು ಮಾಡಲಾಗಿತ್ತೋ ಅವೆಲ್ಲದರಿಂದ ಚೀನಾ ಹಿಂದೆ ಸರಿದಿದೆ. ಈ ವರ್ಷ ಅಕ್ಟೋಬರಿನಲ್ಲಿ ರಷ್ಯದಲ್ಲಿ ನಡೆದ ಬ್ರಿಕ್ಸ್ ಸಮಾವೇಶದ ವೇಳೆ ಈ ಬಗ್ಗೆ ಅಧಿಕೃತ ಮಾಹಿತಿಯನ್ನೂ ನೀಡಲಾಯಿತು.

ಚೀನಾವು ತನ್ನ ರಾಜಕೀಯ ವ್ಯವಸ್ಥೆಯನ್ನು ಉಪಯೋಗಿಸಿಕೊಂಡು ಅವೆಷ್ಟೇ ಮಾಹಿತಿಗಳನ್ನು ಹತ್ತಿಕ್ಕಿದರೂ, ಅದರ ಅರ್ಥವ್ಯವಸ್ಥೆ ಮಂದಗತಿಗೆ ಬಿದ್ದಿರುವುದು ಜಗಜ್ಜಾಹೀರಾಗಿದೆ. ಅಲ್ಲಿನ ರಿಯಲ್ ಎಸ್ಟೇಟ್ ಕ್ಷೇತ್ರದ ಬಿಕ್ಕಟ್ಟು, ಜನರ ಕೊಳ್ಳುವ ಶಕ್ತಿ ಕಡಿಮೆಯಾಗಿ ಬೇಡಿಕೆ ಕುಗ್ಗಿರುವುದು, ಕೊರೋನಾ ನಂತರದಲ್ಲಿ ಬಹಳಷ್ಟು ದೇಶಗಳು ಚೀನಾದಿಂದ ಹೊರತಾಗಿಯೂ ತಮ್ಮ ಪೂರೈಕೆ ವ್ಯವಸ್ಥೆ ರೂಪಿಸಿಕೊಂಡಿರುವುದರ ಆರ್ಥಿಕ ಬಿಸಿ ಇಂಥ ಎಲ್ಲ ಸಂಗತಿಗಳೂ ಚೀನಾದ ಆರ್ಥಿಕತೆಯನ್ನು ಒಂದುಮಟ್ಟಿಗೆ ನುಜ್ಜುಗುಜ್ಜಾಗಿಸಿವೆ. ಹಾಗೆಂದೇ ಭಾರತದ ಜತೆಗೆ ಅದರ ಮಾತುಗಳಲ್ಲಿ ಸಹಕಾರದ ಧಾಟಿ ವ್ಯಕ್ತವಾಗುತ್ತಿದೆ. 

ಭಾರತದ ರಾಷ್ಟ್ರೀಯ ಭದ್ರತೆ ಸಲಹೆಗಾರ ಅಜಿತ್ ದೊವಲ್ ಅವರು ವಿಶೇಷ ಪ್ರತಿನಿಧಿಗಳ ಮಾತುಕತೆಯಲ್ಲಿ ಭಾಗವಹಿಸುವುದಕ್ಕೆ ಬೀಜಿಂಗ್’ನಲ್ಲಿರುವ ಸಂದರ್ಭದಲ್ಲಿ ಹಲವು ಮಹತ್ತ್ವದ ನಿರ್ಣಯಗಳು ಹೊರಬಿದ್ದಿವೆ: ಕೈಲಾಸ-ಮಾನಸ ಸರೋವರ ಯಾತ್ರೆಯ ಪುನಾರಂಭ, ನದಿ ಹರಿವಿನ ಬಗ್ಗೆ ಮಾಹಿತಿ ಹಂಚಿಕೆ ವ್ಯವಸ್ಥೆ ಬಲಗೊಳಿಸುವುದು; ಪೂರ್ವ ಲಢಾಕಿನಲ್ಲಿ ಸೇನಾ ಹಿಂತೆಗೆತದ ನಿರ್ಣಯದ ಪ್ರಗತಿ ಪರಿಶೀಲಿಸಿ, ಶಾಂತಿ ಸ್ಥಾಪನೆಗೆ ಮುಂದಿನ ಅಗತ್ಯ ಹೆಜ್ಜೆಗಳನ್ನಿಡುವುದು; ಗಡಿ ವಿವಾದವನ್ನು ಇಬ್ಬರಿಗೂ ಒಪ್ಪಿಗೆಯಾಗುವ ತಾರ್ಕಿಕ ಮಾರ್ಗದ ಮೂಲಕ ಬಗೆಹರಿಸುವುದಕ್ಕೆ ಪ್ರಯತ್ನಿಸುವುದು; ವಿಶೇಷ ಪ್ರತಿನಿಧಿಗಳು, ರಾಜತಾಂತ್ರಿಕ ಹಾಗೂ ಮಿಲಿಟರಿ ಮಾತುಕತೆಗಳನ್ನು ಇನ್ನಷ್ಟು ಗಟ್ಟಿಗೊಳಿಸಿಕೊಳ್ಳುವುದು; ಉಭಯ ದೇಶಗಳ 2025ರ ವಿಶೇಷ ಪ್ರತಿನಿಧಿಗಳ ಮಾತುಕತೆಯನ್ನು ಭಾರತದಲ್ಲಿ ನಡೆಸುವುದು - ಇವೆಲ್ಲ ಈಗ ಹೊರಬಿದ್ದಿರುವ ಆರಂಶದ ನಿರ್ಣಯಗಳಲ್ಲಿ ಬರುತ್ತವೆ. 

ಟ್ರಂಪ್ ಆಡಳಿತದಲ್ಲಿ ತನ್ನ ಮೇಲಿನ ವ್ಯಾಪಾರ ಸಮರ ಇನ್ನಷ್ಟು ತೀವ್ರವಾಗಲಿರುವುದನ್ನು ಮನಗಂಡಿರುವ ಚೀನಾವು ಭಾರತದ ವಿಚಾರದಲ್ಲಿ ಮೆತ್ತಗಾಗುತ್ತಿರುವುದು ಸ್ಪಷ್ಟ. ಹಾಗೆಂದು ಮೈಮರೆಯದೇ ಇದನ್ನು ತನ್ನ ಹಿತಾಸಕ್ತಿಗೆ ಬಳಸಿಕೊಳ್ಳುವ ಸನ್ನಾಹದಲ್ಲಿ ಭಾರತವಿದೆ.

ಅಮೆರಿಕದ ಜತೆಗೆ ಭಾರತದ್ದೇನು ಕಿರಿಕ್?

ಪ್ರತಿ ದೇಶವೂ ಕೆಲವು ವಲಯಗಳನ್ನು ರಕ್ಷಿಸಿಕೊಳ್ಳುವುದಕ್ಕೆ ರಕ್ಷಣಾತ್ಮಕವಾದ ಸುಂಕದ ವ್ಯವಸ್ಥೆಯನ್ನಿರಿಸಿಕೊಂಡಿರುತ್ತದೆ. ಕೆಲವು ವಸ್ತು-ಸೇವೆಗಳಿಗೆ ಹೆಚ್ಚಿನ ಆಮದು ಸುಂಕ ಹಾಕುವ ಮೂಲಕ ದೇಶೀಯ ಉದ್ಯಮವನ್ನು ಉಳಿಸಿಕೊಳ್ಳುತ್ತದೆ. ಇಂಥ ಕೆಲವು ವಿಷಯಗಳೇ ಈಗ ಅಮೆರಿಕದ ಟ್ರಂಪ್ ಆಡಳಿತವನ್ನು ಸಿಟ್ಟಿಗೆಬ್ಬಿಸಿವೆ. ಈ ಮೊದಲಿನ ತಮ್ಮ ಅವಧಿಯಲ್ಲೂ ಟ್ರಂಪ್ ಈ ಬಗ್ಗೆ ಟೀಕೆ ಮಾಡಿದ್ದರು. ಈ ಬಾರಿಯಂತೂ ಪ್ರತೀಕಾರದ ತೆರಿಗೆ ಹಾಕುವುದಾಗಿ ಬೆದರಿಸುತ್ತಿದ್ದಾರೆ.

ಡೈರಿ ಉತ್ಪನ್ನಗಳಲ್ಲಿ ಅಮೆರಿಕದ ಉತ್ಪನ್ನಗಳಿಗೆ ಆಮದು ಸುಂಕ ತಗ್ಗಿಸಬೇಕೆಂಬುದು ಟ್ರಂಪ್ ಒತ್ತಾಯ. ಅಮುಲ್, ನಂದಿನಿ ಇತ್ಯಾದಿ ಸಹಕಾರಿ ಬ್ರಾಂಡುಗಳಿರುವ ಭಾರತದಲ್ಲಿ ಅವು ರೈತರ ಬದುಕಿನೊಂದಿಗೆ ನೇರ ಸಂಬಂಧ ಹೊಂದಿವೆ. ಹೀಗಾಗಿ ಇಲ್ಲೆಲ್ಲ ವಿದೇಶಿ ಸ್ಪರ್ಧೆ ಬರದಂತೆ ಭಾರತದ ಎಚ್ಚರಿಕೆ ಇದೆ. ಈ ಹಿಂದೆ ಏಷ್ಯದ ದೇಶಗಳೆಲ್ಲ ಸೇರಿಕೊಂಡು ‘ರೀಜನಲ್ ಕಾಂಪ್ರಹೆನ್ಸಿವ್ ಎಕನಾಮಿಕ್ ಪಾರ್ಟನರ್ಶಿಪ್’ ಎಂಬ ಕೂಟ ಮಾಡಿಕೊಂಡಾಗಲೂ ಭಾರತ ಅದರಿಂದ ಹೊರಗಿದ್ದದ್ದಕ್ಕೆ ಹೈನುಗಾರರು ಹಾಗೂ ಡೈರಿ ಉದ್ಯಮವನ್ನು ಕಾಪಾಡಿಕೊಳ್ಳುವುದು ಪ್ರಮುಖ ಕಾರಣವಾಗಿತ್ತು.

ಅಂತೆಯೇ, ಅಮೆರಿಕದ ಹಾರ್ಲಿ ಡೇವಿಡ್ಸನ್ ಬೈಕುಗಳಿಗೆ ಭಾರತದಲ್ಲಿ ಸುಂಕ ಹೆಚ್ಚಾಗಿರುವುದರಿಂದ ಅದಕ್ಕೆ ಲಾಭ ಮಾಡಿಕೊಳ್ಳಲಾಗುತ್ತಿಲ್ಲ ಎಂಬುದು ಟ್ರಂಪ್ ತಕರಾರು. ಆದರೆ, ಈ ವಿಭಾಗದಲ್ಲಿ ಭಾರತಕ್ಕೆ, ಒಂದೊಮ್ಮೆ ಬ್ರಿಟಿಷ್ ಮೂಲ ಹೊಂದಿದ್ದು ಈಗ ಭಾರತೀಯ ಉತ್ಪಾದನೆಯೇ ಆಗಿರುವ ರಾಯಲ್ ಎನ್ಫೀಲ್ಡ್ ಅನ್ನು ರಕ್ಷಿಸಿಕೊಳ್ಳುವ ಅಗತ್ಯವಿದೆ. ಭಾರತದ ಪೊಲೀಸ್ ಹಾಗೂ ಮಿಲಿಟರಿ ವಿಭಾಗಗಳಲ್ಲಿ ವ್ಯಾಪಕವಾಗಿ ಸ್ಥಾನ ಪಡೆದಿರುವ ಬೈಕ್ ಇದು. ಕೆಲವು ಯಂತ್ರಗಳ ಉತ್ಪಾದನೆಯನ್ನು ಕೇವಲ ವ್ಯಾವಹಾರಿಕವಾಗಿ ನೋಡಲು ಬರುವುದಿಲ್ಲ. ಅವುಗಳ ಉತ್ಪಾದನೆಯ ಕೌಶಲವು ಭಾರತದಲ್ಲಿ ಜೀವಂತವಾಗಿದ್ದರೆ ಮಾತ್ರ, ಅದೇ ಉತ್ಪಾದನೆಯ ಯಾವುದೋ ತಂತ್ರಜ್ಞಾನ ರಕ್ಷಣಾ ಪರಿಕರಗಳಲ್ಲೂ ಸೂಕ್ಷ್ಮವಾಗಿ ಉಪಯೋಗವಾಗುತ್ತಿರುತ್ತದೆ. ಇದರ ಮಾರುಕಟ್ಟೆ ವಿದೇಶಿ ಕಂಪನಿಗಳಿಗೆ ಹೋಗಿ ಭಾರತೀಯ ಉದ್ದಿಮೆ ಸಾಯುವುದೆಂದರೆ ಅದು ಕೇವಲ ವ್ಯಾವಹಾರಿಕ ನಷ್ಟವಾಗಿರುವುದಿಲ್ಲ, ಬದಲಿಗೆ ಕಾರ್ಯತಂತ್ರದ ದೃಷ್ಟಿಯಿಂದ ವ್ಯೂಹಾತ್ಮಕ ನಷ್ಟವೂ ಆಗುತ್ತದೆ. 

ಈ ಎಲ್ಲ ವಿಷಯಗಳಲ್ಲಿ ಟ್ರಂಪ್ ಆಡಳಿತದ ಜತೆ ಚೌಕಾಶಿ ಮಾಡಿ ಭಾರತ ತನ್ನ ಹಿತಾಸಕ್ತಿ ಉಳಿಸಿಕೊಳ್ಳಬೇಕಿದೆ. ಟ್ರಂಪ್ ಆಡಳಿತವು ಪ್ರತೀಕಾರಾತ್ಮಕವಾಗಿ ಐಟಿ ಇನ್ನಿತರ ಸೇವೆಗಳ ಮೇಲೆ ಸುಂಕ ಹೆಚ್ಚಿಸದಂತೆ ನೋಡಿಕೊಳ್ಳಬೇಕಾಗಿದೆ. ಈ ನಿಟ್ಟಿನಲ್ಲಿ ಚೀನಾದೊಂದಿಗೆ ಸುಧಾರಿಸುತ್ತಿರುವ ಭಾರತದ ಸಂಬಂಧವು ಚೌಕಾಶಿ ಮೇಜಿನಲ್ಲಿ ಅಮೆರಿಕವನ್ನು ಸಮತೋಲನದಲ್ಲಿಡಬಹುದಾದ ಒಂದು ಅಂಶ.

- ಚೈತನ್ಯ ಹೆಗಡೆ

cchegde@gmail.com

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಇದು ಕೇವಲ ಧ್ವಜವಲ್ಲ ಭಾರತೀಯ ನಾಗರಿಕತೆಯ ಪುನರ್‌ ಜಾಗೃತಿಯ ಧ್ವಜ, ಶತಮಾನಗಳಷ್ಟು ಹಳೆಯ ಗಾಯ ಈಗ ವಾಸಿಯಾಗುತ್ತಿದೆ: ಪ್ರಧಾನಿ ಮೋದಿ

ಅಯೋಧ್ಯೆ ರಾಮ ಮಂದಿರ ನಿರ್ಮಾಣ ಪೂರ್ಣ: ರಾಮ-ಸೀತೆ ವಿವಾಹ ಪರ್ವದಂದೇ ದೇಗುಲದ ಶಿಖರದ ಮೇಲೆ ಧ್ವಜಾರೋಹಣ ನೆರವೇರಿಸಿದ ಪ್ರಧಾನಿ ಮೋದಿ

"Misfit For Army": ಗುರುದ್ವಾರ ಪ್ರವೇಶಿಸಲು ನಿರಾಕರಣೆ, ಕ್ರಿಶ್ಚಿಯನ್ ಸೇನಾ ಅಧಿಕಾರಿಗೆ 'ಸುಪ್ರೀಂ' ತರಾಟೆ!

ಭ್ರಷ್ಟರಿಗೆ ಬೆಳ್ಳಂಬೆಳಗ್ಗೆ ಲೋಕಾಯುಕ್ತ ಶಾಕ್: ಏಕ ಕಾಲದಲ್ಲಿ ರಾಜ್ಯದ 10 ಕಡೆ ದಾಳಿ- ಪರಿಶೀಲನೆ

WPL 2026 auction: ಈ ಬಾರಿಯ 'ಮೋಸ್ಟ್ ಡಿಮ್ಯಾಂಡ್' ಆಟಗಾರ್ತಿ ಯಾರು?

SCROLL FOR NEXT