ಅಂಕಣಗಳು

ಬಾಣಂತಿಯರ ಆಹಾರ ಮತ್ತು ಆರೈಕೆ (ಕುಶಲವೇ ಕ್ಷೇಮವೇ)

ಈ ಸಮಯದಲ್ಲಿ ಬಾಣಂತಿಯರಿಗೆ ಪೋಷಣೆಯ ಅವಶ್ಯಕತೆ ಹೆಚ್ಚಾಗಿರುತ್ತದೆ. ಆದ್ದರಿಂದ ಅವರಿಗೆ ತಾಜಾ ಹಸಿರು ತರಕಾರಿಗಳು, ಸೊಪ್ಪು ಮತ್ತು ಹಣ್ಣುಗಳನ್ನು ನೀಡಬೇಕು. ಮೊಟ್ಟೆ, ಚಿಕನ್ ಎಲ್ಲವನ್ನೂ ಕೊಡಬಹುದು.

ಬಾಣಂತಿಯರ ಆಹಾರ ವಿಷಯದಲ್ಲಿ ಅತಿಯಾದ ಕಟ್ಟುನಿಟ್ಟು ಬೇಡ. ಹೆರಿಗೆಯಾದ ಮೊದಲೆರಡು ದಿನ ಬಾಣಂತಿಯರಿಗೆ ಮೃದುವಾಗಿ ಬೇಯಿಸಿದ ಅನ್ನ, ಸಾರು, ಇಡ್ಲಿ ಮತ್ತು ಸ್ವಲ್ಪ ಬೇಯಿಸಿದ ತರಕಾರಿ ಕೊಡಬೇಕು. ದಿನಕ್ಕೆರಡು ಬಾರಿ ಹಾಲು ಕೊಡಬೇಕು. ಕುಡಿಯಲು ಕುದಿಸಿ ಆರಿಸಿದ ನೀರನ್ನು ಕೊಡಬೇಕು. ಕೆಲವರು ನೀರು ಕೊಡುವುದೇ ಇಲ್ಲ. ಕೊಟ್ಟರೂ ಅತ್ಯಲ್ಪ ಪ್ರಮಾಣದಲ್ಲಿ ಕೊಡುತ್ತಾರೆ. ನೀರು ಕೊಡದಿದ್ದಲ್ಲಿ ದೇಹದಲ್ಲಿ ನೀರಿನಂಶ ಕಡಿಮೆಯಾಗಿ ಹಾಲು ಕೂಡ ಕಡಿಮೆಯಾಗುತ್ತದೆ. ಸಾಕಷ್ಟು ನೀರು ಕುಡಿಯದಿದ್ದರೆ ಮಲಬದ್ಧತೆಯುಂಟಾಗಿ ಮುಂದುವರಿದು ಮೂಲವ್ಯಾಧಿಯೂ ಕಾಣಿಸಿಕೊಳ್ಳಬಹುದು. ಬಾಣಂತಿಯರು ಸಾಕಷ್ಟು ನೀರು ಕುಡಿದರೆ ಆಹಾರ ಜೀರ್ಣಶಕ್ತಿಯೂ ಹೆಚ್ಚಾಗುತ್ತದೆ.

ಇದಲ್ಲದೇ ಕೆಲವು ಜನರು ಬಾಣಂತಿಯರಿಗೆ ಎಲ್ಲಾ ತರಕಾರಿ ಮತ್ತು ಹಣ್ಣುಗಳನ್ನು ಕೊಡುವುದಿಲ್ಲ. ಈ ಸಮಯದಲ್ಲಿ ಬಾಣಂತಿಯರಿಗೆ ಪೋಷಣೆಯ ಅವಶ್ಯಕತೆ ಹೆಚ್ಚಾಗಿರುತ್ತದೆ. ಆದ್ದರಿಂದ ಅವರಿಗೆ ತಾಜಾ ಹಸಿರು ತರಕಾರಿಗಳು, ಸೊಪ್ಪು ಮತ್ತು ಹಣ್ಣುಗಳನ್ನು ನೀಡಬೇಕು. ಮೊಟ್ಟೆ, ಚಿಕನ್ ಎಲ್ಲವನ್ನೂ ಕೊಡಬಹುದು. ಕೇವಲ ಗಂಜಿ ಮತ್ತು ತಿಳಿಸಾರು ಅನ್ನ ಕೊಟ್ಟರೇ ಸಾಲದು. ಇದರಿಂದ ಅಪೌಷ್ಟಿಕತೆ ಮತ್ತು ರಕ್ತಹೀನತೆ ಉಂಟಾಗಬಹುದು.

ಕೆಲವು ಹಳ್ಳಿಗಳಲ್ಲಿ ಶೌಚಾಲಯವೇ ಇರುವುದಿಲ್ಲ. ಮನೆಯಲ್ಲಿ ಬೆಳಗ್ಗೆ ಬೇಗನೇ ಎದ್ದು ನೈಸರ್ಗಿಕ ಕರೆಯನ್ನು ದೂರ ಹೋಗಿ ಪೂರೈಸಬೇಕಾಗುತ್ತದೆ. ಜೊತೆಗೆ ಅವರ ಜೊತೆಗೊಬ್ಬರು ಹೋಗಬೇಕಾಗುತ್ತದೆ. ಇದು ಬಾಣಂತಿಯರಿಗೆ ಮಾನಸಿಕವಾಗಿ ಕಿರಿಕಿರಿಯಾಗುತ್ತದೆ. ಹೀಗಾಗದಂತೆ ನೋಡಿಕೊಳ್ಳಬೇಕು ಮತ್ತು ಶೌಚಾಲಯ ಮನೆಗೊಂದು ಇರಲೇಬೇಕು. ಕೆಲವರಿಗೆ ಈ ಸಮಯದಲ್ಲಿ ಮನಸ್ಸಿನ ಸ್ಥಿತಿ ಸೂಕ್ಷ್ಮವಾಗಿರಬಹುದು. ಬಾಣಂತಿ ಸನ್ನಿಯೂ ಕಾಣಿಸಿಕೊಳ್ಳಬಹುದು. ಆದ್ದರಿಂದ ಅವರ ಆರೋಗ್ಯ ಮತ್ತು ಆರೈಕೆ ಚೆನ್ನಾಗಿರಲು ಮನೆಯವರು ಕಾಳಜಿ ವಹಿಸಬೇಕು.

ಪೌಷ್ಟಿಕ ಮತ್ತು ಸಮತೋಲನ ಆಹಾರ

  • ಮೊದಲಿಗೆ ಬಾಣಂತಿಯರಿಗೆ ಪೌಷ್ಟಿಕ ಮತ್ತು ಸಮತೋಲನ ಆಹಾರ ಅವಶ್ಯಕ. ಅವರು ದಿನವೂ ಪ್ರತಿ ಸಲ ಬಿಸಿ ಬಿಸಿ ಆಹಾರ ಸೇವಿಸಬೇಕು.

  • ದಂಟು, ಹರಿವೆ, ಪಾಲಕ್, ಹೊನಗೊನೆ. ಸಬ್ಬಸಿಗೆ. ಅಗಸೆ ಸೇರಿದಂತೆ ಎಲ್ಲ ಬಗೆಯ ಸೊಪ್ಪುಗಳನ್ನು ಸೇವಿಸಬೇಕು.

  • ಗೋಧಿ, ಅಕ್ಕಿ, ಬೆಳ್ಳುಳ್ಳಿ, ಈರುಳ್ಳಿ ಸೇವಿಸಬೇಕು.

  • ಪಪ್ಪಾಯ, ಟೊಮೆಟೊ. ನೆಲ್ಲಿಕಾಯಿ, ಕ್ಯಾರೆಟ್ ಮುಂತಾದವು ಅವರ ಆಹಾರದಲ್ಲಿ ಇರಬೇಕು.

  • ಹೆಸರುಬೇಳೆ ಪಾಯಸ, ಹಾಲಿನಿಂದ ತಯಾರಿಸಿದ ಖೀರು ಉತ್ತಮ.

  • ಎದೆಹಾಲಿನ ಪ್ರಮಾಣ ಕಡಿಮೆಯಾಗಿದ್ದಲ್ಲಿ ತಾಜಾ ದಂಟಿನ ಸೊಪ್ಪಿನ ರಸವನ್ನು ಜೇನುತುಪ್ಪ ಮತ್ತು ಏಲಕ್ಕಿ ಪುಡಿಯೊಂದಿಗೆ ಬೆರೆಸಿ ಕುಡಿಯಬೇಕು. ನುಗ್ಗೆಸೊಪ್ಪನ್ನು ಬೇಯಿಸಿ ರಸ ತೆಗೆದು ಕುಡಿಯಬೇಕು. ಹೊನಗೊನೆ ಸೊಪ್ಪಿನ ಪಲ್ಯ ತಿನ್ನಬೇಕು.

  • ಸಬ್ಬಸಿಗೆ ಸೊಪ್ಪನ್ನು ಹಬೆಯಲ್ಲಿ ಬೇಯಿಸಿ ಉಪ್ಪು ಮತ್ತು ಕಾಳುಮೆಣಸಿನ ಪುಡಿ ಬೆರೆಸಿ ಚಪಾತಿ ಸೇವಿಸಬೇಕು.

  • ಕೆಸುವಿನ ಗಡ್ಡೆ ಬೇಯಿಸಿ ಅದರಿಂದ ತಯಾರಿಸಿದ ಪಲ್ಯ ಇಲ್ಲದೇ ಮೊಸರುಬಜ್ಜಿ ಸೇವಿಸಬೇಕು. ತೊಂಡೆಹಣ್ಣಿನ ಸೇವನೆಯೂ ಬಿಳಿಯ ಎಳನ್ನು ಹಾಲಿನಲ್ಲಿ ಅರೆದು ಕುಡಿಯಬೇಕು. ಎಳ್ಳಿನ ಪುಡಿಯಲ್ಲಿ ತುಪ್ಪ, ಹಾಲು, ಬೆಲ್ಲ. ಜೇನು ಬೆರೆಸಿ ಕುಡಿಯಬೇಕು.

ಅಂಟಿನುಂಡೆ

ಬಾಣಂತಿಯರಿಗೆ ಶಕ್ತಿ ಬರಲೆಂದೇ ಅಂಟಿನುಂಡೆ ಮಾಡಿಕೊಡುವ ಪದ್ಧತಿ ನಮ್ಮಲ್ಲಿದೆ. ಅಂಟಿನುಂಡೆ ಮಾಡಲು ಬೇಕಾದ ಸಾಮಗ್ರಿಗಳು ಹೀಗಿವೆ: ಗಿಟುಕ ಕೊಬ್ಬರಿ 1/2 ಕೆಜಿ, ಉತ್ತುತ್ತಿ 50 ಗ್ರಾಂ, ಗಸಗಸೆ 100 ಗಾಂ, ಲವಂಗ 50 ಗ್ರಾಂ, ಅಂಟು 100 ಗ್ರಾಂ, ಬೆಲ್ಲ 1 ಕೆಜಿ ಬಾದಾಮಿ 100 ಗ್ರಾಂ ಮತ್ತು ತುಪ್ಪ 1/4 ಕೆ.ಜಿ, ಇದನ್ನು ಮಾಡುವ ವಿಧಾನ ಹೀಗಿದೆ: ಮೊದಲಿಗೆ ಕೊಬ್ಬರಿಯನ್ನು ತುರಿದಿಟ್ಟುಕೊಳ್ಳಬೇಕು. ಬಾದಾಮಿ, ಉತ್ತುತ್ತಿ, ಲವಂಗವನ್ನು ಸಣ್ಣ ತುಂಡುಗಳನ್ನಾಗಿಸಿಕೊಳ್ಳಬೇಕು.ಈ ಎಲ್ಲವುಗಳನ್ನು ತುಪ್ಪದಲ್ಲಿ ಕೆಂಪಗಾಗುವವರೆಗೆ ಹುರಿದುಕೊಳ್ಳಬೇಕು. ಗಸಗಸೆ ಅಂಟುವನ್ನು ಕೂಡ ಹುರಿದುಕೊಳ್ಳಬೇಕು. ನಂತರ ಬೆಲ್ಲವನ್ನು ಕರಗಿಸಿ ಅದರೊಂದಿಗೆ ಉಂಡೆ ತಯಾರಿಸಿಕೊಳ್ಳಬೇಕು.

ರಕ್ತಹೀನತೆಗೆ ಮದ್ದು

ಬಾಣಂತಿಯರಿಗೆ ದೇಹದಲ್ಲಿ ರಕ್ತದ ಕೊರತೆ ಕಾಣಿಸಿಕೊಂಡರೆ ರಕ್ತಹೀನತೆ ಉಂಟಾಗುತ್ತದೆ. ಪ್ರತಿಯೊಬ್ಬರ ದೇಹದಲ್ಲಿ ನಿಗದಿತ ಪ್ರಮಾಣದಲ್ಲಿ ರಕ್ತ ಮತ್ತು ಆ ರಕ್ತದಲ್ಲಿ ಹಿಮೋಗ್ಲೋಬಿನ್ ಅಂಶ ಇರಬೇಕಾಗುತ್ತದೆ. ಹಿಮೋಗ್ಲೋಬಿನ್ ಪ್ರಮಾಣ ಮಹಿಳೆಯರಲ್ಲಿ 12 ಗ್ರಾಂ ಗಳಿಗಿಂತ ಕಡಿಮೆಯಾದರೆ ರಕ್ತಹೀನತೆ ಎನ್ನುತ್ತೇವೆ. ಆರು ತಿಂಗಳಿಂದ ಆರು ವರ್ಷದ ಮಕ್ಕಳಲ್ಲಿ 11 ಗ್ರಾಂಗಿಂತ ಕಡಿಮೆಯಾದರೆ ಮತ್ತು ಆರರಿಂದ ಹನ್ನೆರಡು ವರ್ಷದವರಲ್ಲಿ 12 ಗ್ರಾಂಗಿಂತ ಕಡಿಮೆಯಾದರೆ ರಕ್ತಹೀನತೆ ಎನ್ನುತ್ತೇವೆ. ಮುಟ್ಟು ಆರಂಭವಾದಾಗಿನಿಂದ ಮುಟ್ಟು ನಿಲ್ಲುವವರೆಗಿನ ಅವಧಿಯಲ್ಲಿ, ಗರ್ಭಿಣಿ, ಬಾಣಂತಿಯರಲ್ಲಿ ಹಿಮೋಗ್ಲೋಬಿನ್ ಅಂಶ 12 ಗ್ರಾಂಗಿಂತ ಕಡಿಮೆಯಾದಲ್ಲಿ ರಕ್ತಹೀನತೆ ಎಂದು ತಿಳಿಯಬೇಕು.

ಹಿಮೋಗ್ಲೋಬಿನ್ ಉತ್ಪತ್ತಿಯಾಗಲು ಕಬ್ಬಿಣ ಅತ್ಯಂತ ಅವಶ್ಯಕ. ಬಹುತೇಕೆ ಸಂದರ್ಭಗಳಲ್ಲಿ ಆಹಾರದ ಅಭಾವದಿಂದ ಕಬ್ಬಿಣದ ಕೊರತೆಯುಂಟಾಗುತ್ತದೆ. ಕರುಳಿನಲ್ಲಿ ಕೊಕ್ಕೆಹಾಳು ಇದ್ದಲ್ಲಿ ಅ ದಿನಕ್ಕೆ 0.2 ಮಿಲಿ ಗ್ರಾಂ ರಕ್ತವನ್ನು ಸೇವಿಸಿ ರಕ್ತಹೀನತೆ ತರುತ್ತದೆ. ಇದನ್ನು ಬಹಳಷ್ಟು ಜನರು ಅಲಕ್ಷ ಮಾಡುತ್ತಾರೆ. ಗ್ರಾಮಾಂತರ ಪ್ರದೇಶದಲ್ಲಿ ಸ್ವಚ್ಛತೆಯ ಅಭಾವದಿಂದ ಕೊಕ್ಕೆಹುಳು ದೇಹವನ್ನು ಅನಾಯಾಸವಾಗಿ ಸೇರುತ್ತದೆ. ರಕ್ತಹೀನತೆಗೆ ಇತರೆ ಕಾರಣಗಳೆಂದರೆ ಮಲದಲ್ಲಿ ರಕ್ತ ಹೋಗುವ ಮೂಲವ್ಯಾಧಿ, ಮೂಗಿನಿಂದಾಗುವ ರಕ್ತಸ್ರಾವ ಮುಂತಾದ ಕಾರಣದಿಂದ ರಕ್ತಹೀನತೆ ಉಂಟಾಗುತ್ತದೆ. ಹೆರಿಗೆಯ ಸಮಯದಲ್ಲಿ ಆಗುವ ರಕ್ತಸ್ತಾವ ಮತ್ತು ಗರ್ಭಪಾತದಿಂದ ಆಗುವ ರಕ್ತಸ್ರಾವದಿಂದ ರಕ್ತಹೀನತೆ ಉಂಟಾಗುತ್ತದೆ. ಹೆಣ್ಣುಮಗಳು ಮೇಲಿಂದ ಮೇಲೆ ಗರ್ಭ ಧರಿಸುವುದರಿಂದ ರಕ್ತಹೀನತೆ ಹೆಚ್ಚುತ್ತದೆ ಅವರ ಆರೋಗ್ಯದ ಮೇಲೆ ತೀವ್ರ ಪರಿಣಾಮ ಬೀರುತ್ತದೆ.

ಪ್ರತಿ ನೂರು ಮಹಿಳೆಯರಲ್ಲಿ 42 ಜನರು ರಕ್ತಹೀನತೆಯಿಂದ ಬಳಲುತ್ತಿರುತ್ತಾರೆ. ಗ್ರಾಮೀಣ ಪ್ರದೇಶಗಳಲ್ಲಿ ಶೇ. 67 ರಷ್ಟು ಮಹಿಳೆಯರು ರಕ್ತ ತೆಯಿಂದ ಬಳಲುತ್ತಿದ್ದು ಶೇ. 17ರಷ್ಟು ಮಹಿಳೆಯರು ಅತಿರಕ್ತಹೀನತೆಯಿಂದ ಬಳಲುತ್ತಿದ್ದಾರೆ. ರಕ್ತಹೀನತೆಗೆ ಮತ್ತೊಂದು ಪ್ರಮುಖ ಕಾರಣವೆಂದರೆ ಸಣ್ಣ ಕರುಳಿನಲ್ಲಿ ಬಿ12 ಮತ್ತು ಪೋಲಿಕ್ ಆಮ್ಲ ಹೀರಲ್ಪಟ್ಟದಿರುವುದು.

ರಕ್ತಹೀನತೆಯಿದ್ದಾಗ ಆಯಾಸ, ಕೆಲಸ ಮಾಡುವಾಗ ಬೇಗ ಸುಸ್ತು, ಸ್ವಲ್ಪ ದೂರ ನಡೆದರೂ ಉಸಿರಾಡಲು ಕಷ್ಟ, ಎದೆ ಬಡಿತ ಕೇಳುವುದು, ಕೈ ಬೆರಳುಗಳು ಜುಮ್ಮೆನ್ನುವುದು, ಉಗುರುಗಳು ಬಿಳಿಚಿಕೊಳ್ಳುವುದು ಮತ್ತು ನುಣುಪಾಗಿ ಚಮಚದಂತೆ ಹಳ್ಳ ಬೀಳುವುದು, ಕಣ್ಣು, ನಾಲಿಗೆ, ಚರ್ಮ ಬಿಳಿಚಿಕೊಳ್ಳುವುದು, ಹಸಿವೆಯಿಲ್ಲದಿರುವುದು ಮತ್ತು ಬೆಳಗ್ಗೆ ಎದ್ದಾಗ ಮುಖ ಊದಿಕೊಳ್ಳುವುದು ಇಂತಹ ಲಕ್ಷಣಗಳು ಕಾಣಿಸಿಕೊಳ್ಳುತ್ತವೆ.

ಆಹಾರದಲ್ಲಿ ಸೊಪ್ಪುಗಳನ್ನು ಹೆಚ್ಚು ಬಳಸಬೇಕು. ಎಲ್ಲ ಸೊಪ್ಪುಗಳಲ್ಲಿ ಕಬ್ಬಿಣದಾಂಶ ಇರುತ್ತದೆ. ಪಾಲಕ್, ಮೆಂತ್ಯ, ಹರಿವೆ. ದಂಟು, ಕೊತ್ತಂಬರಿ, ಕರಿಬೇವು ಎಲ್ಲದರಲ್ಲಿಯೂ ಕಬ್ಬಿಣದಾಂಶ ಇರುತ್ತದೆ. ಚಕ್ರಮುನಿ ಸೊಪ್ಪಿನಲ್ಲಿ ಅತಿಹೆಚ್ಚು ಕಬ್ಬಿಣದಂಶ ಇರುತ್ತದೆ.


Dr Vasundhara Bhupathi

ಡಾ. ವಸುಂಧರಾ ಭೂಪತಿ
ಮೊ: 9986840477
ಇ-ಮೇಲ್ : bhupathivasundhara@gmail.com

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

Theaterisation: 'ಥಿಯೇಟರ್ ಕಮಾಂಡ್‌' ರಚನೆ: ಪ್ರಯತ್ನದಲ್ಲಿ ಪ್ರಗತಿ ಸಾಧಿಸಲಾಗುತ್ತಿದೆಯೇ? ಆಡ್ಮಿರಲ್ ಡಿಕೆ ತ್ರಿಪಾಠಿ ಹೇಳಿದ್ದು ಹೀಗೆ...

'ಪಾಕಿಸ್ತಾನದೊಂದಿಗೆ ಯುದ್ಧ ನಿಲ್ಲಿಸಲು ಟ್ರಂಪ್ 24 ಗಂಟೆ ಕಾಲಾವಕಾಶ ನೀಡಿದ್ದರು, ಮೋದಿ ಕೇವಲ 5 ಗಂಟೆಗಳಲ್ಲಿ ಪಾಲಿಸಿದರು': ರಾಹುಲ್ ಗಾಂಧಿ

'ಧಮ್ ಇದ್ರೆ.. ಸನಾತನಧರ್ಮ, ಬಿಹಾರಿಗಳ ಕುರಿತ ಹೇಳಿಕೆ ಮತ್ತೆ ಹೇಳ್ತೀರಾ?': MK Stalin ಗೆ ಬಿಜೆಪಿ-ಜೆಡಿಯು ಸವಾಲು!

Video: 80 ಸಾವಿರ ಹಣವಿದ್ದ ಬ್ಯಾಗ್ ನಾಪತ್ತೆ, ಮೇಲಿಂದ ಕೋತಿಯಿಂದ ಹಣದ ಸುರಿಮಳೆ! ಸಿಕ್ಕಿದೆಷ್ಟು ಗೊತ್ತಾ?

Dharmasthala: Mahesh Shetty Thimarodi ಮನೆ ಮಹಜರು, ಪತ್ನಿ-ಮಕ್ಕಳ ಮೊಬೈಲ್ ವಶಕ್ಕೆ, 3 ತಲ್ವಾರ್ ಕೂಡ ಪತ್ತೆ!

SCROLL FOR NEXT