ಮುಂದೇನು?
ವಾಲ್ಮೀಕಿ ಅಭಿವೃದ್ಧಿ ನಿಗಮದಲ್ಲಿ ನಡೆದಿರುವ ಭಾರೀ ಪ್ರಮಾಣದ ಭ್ರಷ್ಟಾಚಾರ, ಅಕ್ರಮ ಹಣ ವರ್ಗಾವಣೆ ಹಗರಣದ ಕುರಿತು ಕೇಂದ್ರ ಸರ್ಕಾರದ ತನಿಖಾ ಸಂಸ್ಥೆ ಜಾರಿ ನಿರ್ದೇಶನಾಲಯ ದಿಢೀರನೆ ರಂಗ ಪ್ರವೇಶಿಸಿದೆ. ಮಾಜಿ ಸಚಿವ ನಾಗೇಂದ್ರ, ನಿಗಮದ ಅಧ್ಯಕ್ಷ ದದ್ದಲ್, ಅಧಿಕಾರಿಗಳೂ ಸೇರಿದಂತೆ ಅವರ ಆಪ್ತರ ಮನೆಗಳ ಮೇಲೂ ದಾಳಿ ನಡೆಸಿ ಕೆಲವು ಮಹತ್ವದ ದಾಖಲೆಗಳು, ಹಣವನ್ನು ವಶಪಡಿಸಿಕೊಂಡಿದೆ.
ಇದೊಂದು ಭಾರೀ ಪ್ರಮಾಣದ ಆರ್ಥಿಕ ಅಪರಾಧವಾದ ಕಾರಣ ಸಿಬಿಐ ತನಿಖೆ ಆರಂಭಗೊಂಡಿದೆ. ರಾಜ್ಯ ಸರ್ಕಾರವೂ ಹಗರಣ ಬೆಳಕಿಗೆ ಬಂದ ನಂತರ ವಿಶೇಷ ತನಿಖಾ ದಳ ರಚಿಸಿ ತನಿಖೆ ನಡೆಸುತ್ತಿದೆ. ಇದೀಗ ಯಾವುದೇ ಪುರ್ವ ಸೂಚನೆ ಇಲ್ಲದೇ ಜಾರಿ ನಿರ್ದೇಶನಾಲಯದ ಅಧಿಕಾರಿಗಳು ದಾಳಿ ನಡೆಸಿದ್ದು ತನಿಖೆ ಆರಂಭಿಸಿದ್ದಾರೆ. ಹಗರಣಕ್ಕೆ ಸಂಬಂಧಿಸಿದಂತೆ ಮಾಜಿ ಸಚಿವ ನಾಗೇಂದ್ರ, ನಿಗಮದ ಅಧ್ಯಕ್ಷರನ್ನು ತನಿಖಾ ಸಂಸ್ಥೆ ವಶಕ್ಕೆ ಪಡೆದು ವಿಚಾರಣೆ ನಡೆಸುವ ಸಾಧ್ಯತೆಗಳೂ ಇವೆ.
ಈಗ ಇದರ ಬೆನ್ನಹಿಂದೆಯೇ ಕೇಳಿ ಬರುತ್ತಿರುವ ಮತ್ತೊಂದು ಪ್ರಶ್ನೆ ಎಂದರೆ ಮೈಸೂರಿನ ನಗರಾಭಿವೃದ್ಧಿ ಪ್ರಾಧಿಕಾರದ ನಿವೇಶನ ಹಂಚಿಕೆಯಲ್ಲಿ ನಡೆದಿರುವ ವ್ಯಾಪಕ ಅಕ್ರಮಗಳ ಪ್ರಕಣವನ್ನೂ ಸಿಬಿಐ ತನಿಖೆಗೆ ಕೈಗೆತ್ತಿಕೊಳ್ಳುತ್ತದೆಯೆ? ಎಂಬುದು.
ಹಾಗೆ ನೋಡಿದರೆ ಒಂದು ವರ್ಷದ ಹಿಂದೆ ಚುನಾವಣೆಗೂ ಮುನ್ನ ಹಾಗೂ ಚುನಾವಣೆಯ ಸಂದರ್ಭದಲ್ಲಿ ಅಧಿಕಾರದಲ್ಲಿದ್ದ ಬಿಜೆಪಿ ಸರ್ಕಾರದ ವಿರುದ್ಧ ಸರ್ಕಾರಿ ಕಾಮಗಾರಿಗಳ ಗುತ್ತಿಗೆದಾರರಿಂದ 40 ಪರ್ಸೆಂಟ್ ಕಮಿಷನ್ ವಸೂಲಾತಿ, ಬಿಟ್ ಕಾಯಿನ್ ಹಗರಣಗಳ ಕುರಿತು ತೀವ್ರ ಹೋರಾಟ ನಡೆಸಿ ಅಧಿಕಾರಕ್ಕೆ ಬಂದ ಕಾಂಗ್ರೆಸ್ ಪಕ್ಷದ ಸರ್ಕಾರಕ್ಕೆ ಒಂದು ವರ್ಷದ ಅವಧಿ ಪೂರ್ಣಗೊಂಡ ಸಂದರ್ಭದಲ್ಲೇ ಈ ಎರಡು ಹಗರಣಗಳು ನುಂಗಲಾರದ ತುತ್ತಾಗಿ ಪರಿಣಮಿಸಿದೆ.
ಬಿಜೆಪಿ ಈ ಎರಡೂ ಪ್ರಕರಣಗಳ ವಿರುದ್ಧ ಈಗ ದೊಡ್ಡ ಹೋರಾಟವನ್ನೇ ಆರಂಭಿಸಿದೆ. ಸೋಮವಾರದಿಂದ ಆರಂಭವಾಗಲಿರುವ ರಾಜ್ಯ ವಿಧಾನ ಮಂಡಲದ ಅಧಿವೇಶನದಲ್ಲೂ ಕೋಲಾಹಲದ ವಾತಾವರಣ ಸೃಷ್ಟಿಯಾಗುವ ಸನ್ನಿವೇಶಗಳು ಇವೆ.
ಇದೆಲ್ಲ ಏನೇ ಇರಲಿ, ಎರಡೂ ಪ್ರಕರಣಗಳಿಗೆ ಸಂಬಂಧಿಸಿದಂತೆ ನಡೆಯುತ್ತಿರುವ ವಿದ್ಯಮಾನಗಳನ್ನು ಒಳ ಹೊಕ್ಕು ನೋಡಿದರೆ ರಾಜಕಾರಣದ ವಾಸನೆ ಮೂಗಿಗೆ ಬಡಿಯುತ್ತದೆ. ಬಹುಮುಖ್ಯವಾಗಿ ವಾಲ್ಮೀಕಿ ಅಭಿವೃದ್ಧಿ ನಿಗಮದಲ್ಲಿ ನಡೆದಿರುವ 187 ಕೋಟಿ ರೂ. ಹಣದ ಅಕ್ರಮ ವರ್ಗಾವಣೆ ಪ್ರಕರಣದಲ್ಲಿ ಯೂನಿಯನ್ ಬ್ಯಾಂಕ್ ನೀಡಿದ ದೂರು ಆಧರಿಸಿ ಜಾರಿ ನಿರ್ದೇಶನಾಲಯ ತನಿಖೆ ಆರಂಭಿಸಿದೆ. ಸಿಬಿಐ ಈ ಪ್ರಕರಣದ ತನಿಖೆಯನ್ನು ಕೈಗತ್ತಿಕೊಂಡಿದ್ದು ಇದೊಂದು ಭಾರೀ ಪ್ರಮಾಣದ ಆರ್ಥಿಕ ಅಪರಾಧವಾಗಿರುವುದರಿಂದ ಜಾರಿ ನಿರ್ದೇಶನಾಲಯದ ಅಧಿಕಾರಿಗಳು ತನಿಖೆಗೆ ಇಳಿದಿರುವುದು ಅಸಹಜವೇನಲ್ಲ.
ಆದರೆ ಇದಕ್ಕೆಸಂಬಂಧಿಸಿದಂತೆ ನಡೆಯುತ್ತಿರುವ ತನಿಖೆಯ ಪ್ರಾರಂಭಿಕ ವರದಿಗಳನ್ನು ಗಮನಿಸಿದರೆ ಈ ಪ್ರಕರಣವನ್ನು ಗುರಿಯಾಗಿಸಿಕೊಂಡು ರಾಜ್ಯದಲ್ಲಿನ ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಸರ್ಕಾರವನ್ನು ಕಟ್ಟಿ ಹಾಕುವ ರಾಜಕಾರಣದ ಹುನ್ನಾರ ನಡೆದಿರುವುದೂ ಸ್ಪಷ್ಟವಾಗಿ ಗೋಚರಿಸುತ್ತದೆ.
ವಾಲ್ಮೀಕಿ ನಿಗಮದಲ್ಲಿ ನಡೆದಿರುವ ಹಣದ ಅಕ್ರಮ ವರ್ಗಾವಣೆ ಯಲ್ಲಿ ನಿಗಮದ ಅಧಿಕಾರಿಗಳ ಪಾತ್ರ ಇರುವುದು ಪ್ರಾಥಮಿಕ ತನಿಖೆಯಿಂದ ಬಯಲಿಗೆ ಬಂದಿದೆ. ಆದರೆ ಇಷ್ಟು ದೊಡ್ಡ ಮೊತ್ತದ ಹಣದ ವರ್ಗಾವಣೆ ಪ್ರಕರಣ ರಾಜ್ಯ ಸರ್ಕಾರದ ಹಣಕಾಸು ಸಚಿವಾಲಯದ ಹಿರಿಯ ಅಧಿಕಾರಿಗಳ ಗಮನಕ್ಕೆ ಬರದೇ ನಡೆಯಿತೆ? ಎಂಬ ಪ್ರಶ್ನೆಗೆ ಉತ್ತರ ಇನ್ನೂ ಸಿಕ್ಕಿಲ್ಲ. ಸದ್ಯಕ್ಕೆ ನಿಗಮದ ಅಧಿಕಾರಿಗಳನ್ನು ಮಾತ್ರ ಗುರಿಯಾಗಿಸಿ ತನಿಖೆ ನಡೆದಿದೆ. ಇಡೀ ಪ್ರಕರಣದಲ್ಲಿ ಹಲವು ಪ್ರಶ್ನೆಗಳೂ ತಲೆ ಎತ್ತಿವೆ.
ಸರ್ಕಾರ ತನ್ನ ವಿವಿಧ ಅಧೀನ ಸಂಸ್ಥೆಗಳಿಗೆ ಬಜೆಟ್ ನಲ್ಲಿ ಘೋಷಿಸಿದ ಅನುದಾನವನ್ನು ಹಣಕಾಸು ಇಲಾಖೆ ವ್ಯಾಪ್ತಿಗೆ ಒಳಪಟ್ಟ ರಾಜ್ಯ ಖಜಾನೆ ಮೂಲಕ ಅಗತ್ಯ ಪ್ರಕ್ರಿಯೆಗಳನ್ನು ಆಧರಿಸಿ ಬಿಡುಗಡೆ ಆಗುತ್ತದೆ. ಸಾಮಾನ್ಯವಾಗಿ ಸರ್ಕಾರ ಬಜೆಟ್ ನಲ್ಲಿ ಘೋಷಿಸಿದ ಅನುದಾನ ಯೋಜನಾ ವೆಚ್ಚಗಳನ್ನು ಹೊರತುಪಡಿಸಿ ಇನ್ನಿತರೆ ಬಾಬುಗಳಿಗೆ (ಸಂಬಳ, ಸಾರಿಗೆ ಇನ್ನಿತರೆ ಆಡಳಿತ ವೆಚ್ಚಗಳು) ನಿಗದಿತ ಅವಧಿಗೆ ಕಂತುಗಳಲ್ಲಿ ಬಿಡುಗಡಟೆ ಆಗುತ್ತದೆ. ವಿವಿಧ ಕಲ್ಯಾಣ ಕಾರ್ಯಕ್ರಮಗಳಿಗೆ, ಯೋಜನೆಗಳಿಗೆ ನಿಗದಿಯಾದ ಅನುದಾನದ ಮೊತ್ತ ಪೂರ್ಣವಾಗಿ ಒಂದೇ ಕಂತಿನಲ್ಲಿ ಬಿಡುಗಡೆ ಆಗುವುದಿಲ್ಲ. ಯೋಜನಾ ವರದಿ ಮತ್ತು ಫಲಾನುಭವಿಗಳ ವಿವರ ಆಧರಿಸಿ ಬಿಡುಗಡೆ ಆಗುತ್ತದೆ. ಇದು ಸರ್ಕಾರದಲ್ಲಿರುವ ಕಾಯಂ ವ್ಯವಸ್ಥೆ. ಹೀಗಿರುವಾಗ ವಾಲ್ಮೀಕಿ ನಿಗಮಕ್ಕೆ ಒಂದೇ ಬಾರಿಗೆ ದೊಡ್ಡ ಮೊತ್ತದ ಅನುದಾನ ಬಿಡುಗಡೆ ಆಗಿದ್ದಾದರೂ ಹೇಗೆ ? ಎಂಬ ಪ್ರಶ್ನೆಗಳಿಗೆ ಈಗ ಸ್ಪಷ್ಟ ಉತ್ತರ ಸಿಗಬೇಕಿದೆ.ರಾಜ್ಯ ಸರ್ಕಾರ ಜಾರಿಗೆ ತಂದಿರುವ ವಿವಿಧ ಗ್ಯಾರಂಟಿ ಯೋಜನೆಗಳಿಗೇ ಅಂದಾಜು 60 ಸಾವಿರ ಕೋಟಿ ರೂ. ವೆಚ್ಚವಾಗುತ್ತಿದೆ. ಈ ಕಾರ್ಯಕ್ರಮಕ್ಕೆ ಅಗತ್ಯ ಹಣ ಹೊಂದಿಸಲು ಸರ್ಕಾರ ಪರದಾಡುತ್ತಿದ್ದು ಅಭಿವೃದ್ಧಿ ಯೋಜನೆಗಳಿಗೆ ಹಣ ಬಿಡುಗಡೆ ಆಗುತ್ತಿಲ್ಲ ಎಂಬುದನ್ನು ಮುಖ್ಯಮಂತ್ರಿಗಳ ಅರ್ಥಿಕ ಸಲಹೆಗಾರ ಬಸವರಾಜ ರಾಯರೆಡ್ಡಿಯವರೇ ಒಪ್ಪಿಕೊಂಡಿದ್ದಾರೆ.
ಹೀಗಿರುವಾಗ ಭಾರೀ ಮೊತ್ತದ ಹಣ ವಾಲ್ಮೀಕಿ ನಿಗಮಕ್ಕೆ ಬಿಡುಗಡೆ ಆಗಿದ್ದು ಹೇಗೆ ಎಂಬುದು ಸದ್ಯಕ್ಕೆ ಯಕ್ಷ ಪ್ರಶ್ನೆ. 187 ಕೋಟಿ ರೂ ಹಣವನ್ನು ವಿವಿಧ ಖಾತೆಗಳಿಗೆ ವರ್ಗಾಯಿಸುವ ವಿಚಾರ ಆರ್ಥಿಕ ಇಲಾಖೆ ಗಮನಕ್ಕೆ ಬರದೇ ನಡೆಯಿತೆ? ಎಂಬ ಪ್ರಶ್ನೆಗೂ ಈಗ ಉತ್ತರ ಸಿಗಬೇಕಿದೆ.ಸರ್ಕಾರದ ವಿವಿಧ ಇಲಾಖೆಗಳು ನಿಯಮಿತ ಅವಧಿಯಲ್ಲಿ ಯೋಜನೆಗೆ ಬಳಕೆ ಮಾಡಿದ ಅನುದಾನದ ವಿವರಗಳನ್ನು ಒಳಗೊಂಡ ಅನುಪಾಲನಾ ವರದಿಯನ್ನು ಹಣಕಾಸು ಇಲಾಖೆಗೆ ಸಲ್ಲಿಸಬೇಕಾಗುತ್ತದೆ. ಹೀಗೆ ವರದಿ ಸಲ್ಲಿಕೆ ಆದ ನಂತರವೇ ಉಳಿದ ಅನುದಾನದ ಮೊತ್ತವನ್ನು ಕಂತುಗಳಲ್ಲಿ ಆರ್ಥಿಕ ಇಲಾಖೆ ಬಿಡುಗಡೆ ಮಾಡುತ್ತದೆ. ಈಗ ಇಡೀ ಪ್ರಕರಣದಲ್ಲಿ ಹಣದ ವರ್ಗಾವಣೆ ನಡೆಯುವ ಸಂದರ್ಭದಲ್ಲಿ ಆರ್ಥಿಕ ಇಲಾಖೆ ಗಮನಕ್ಕೆ ಬರದೇ ನಡೆಯಿತೆ? ಎಂಬುದು ಸದ್ಯದ ಪ್ರಶ್ನೆ. ತನಿಖೆ ಮುಂದುವರಿದಂತೆ ಮುಂದಿನ ದಿನಗಳಲ್ಲಿ ಉತ್ತರ ಸಿಗಲೂ ಬಹುದು.ಹಾಗೇನಾದರೂ ಇದರಲ್ಲಿ ಆರ್ಥಿಕ ಇಲಾಖೆಯ ಪಾತ್ರ ಇರುವುದು ಋಜುವಾತಾದರೆ ಸರ್ಕಾರಕ್ಕೆ ಸಮಸ್ಯೆ ಆಗಬಹುದು.
ಇನ್ನು ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದ ನಿವೇಶನ ಹಂಚಿಕೆ ಪ್ರಕರಣದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಕುಟುಂಬದ ವಿರುದ್ಧವೇ ಆರೋಪಗಳು ಕೇಳಿ ಬರುತ್ತಿವೆ. ಈಗ ಇಡೀ ನಿವೇಶನ ಹಂಚಿಕೆಯನ್ನು ಸರ್ಕಾರ ರದ್ದು ಮಾಡಿದ್ದು ತನಿಖೆಗೆ ಆದೇಶಿಸಿದೆ. ಈ ಹಗರಣಕ್ಕೆ ಸಂಬಂಧಿಸಿದಂತೆ ದಿನ ನಿತ್ಯ ಬಿಡುಗಡೆ ಆಗುತ್ತಿರುವ ದಾಖಲೆಗಳು ಅನೇಕ ಗೋಜಲುಗಳನ್ನು ಸೃಷ್ಟಿಸಿವೆ. ಅದೇನೇ ಇರಲಿ ಪ್ರಕರಣ ಬೆಳಕಿಗೆ ಬಂದ ನಂತರ ತನಿಖೆಗೆ ಆದೇಶಿಸುವ ಮೂಲಕ ಮುಖ್ಯಮಂತ್ರಿ ಸಿದ್ದರಾಮಯ್ಯ ಜವಾಬ್ದಾರಿ ಮೆರೆದಿದ್ದಾರೆ. ಬಿಜೆಪಿ ಈ ಪ್ರಕರಣವನ್ನು ಸಿಬಿಐ ತನಿಖೆಗೆ ವಹಿಸುವಂತೆ ಆಗ್ರಹಿಸಿ ಹೊರಾಟ ಆರಂಭಿಸಿದೆ. ಆದರೆ ವಾಲ್ಮೀಕಿ ನಿಗಮದ ಹಗರಣದಂತೆ ಈ ಪ್ರಕರಣದಲ್ಲಿ ನೇರವಾಗಿ ಸಿಬಿಐ ಅಥವಾ ಕೇಂದ್ರ ಸರ್ಕಾರದ ತನಿಖಾ ಸಂಸ್ಥೆಗಳು ರಾಜ್ಯ ಸರ್ಕಾರದ ಅನುಮತಿ ಇಲ್ಲದೇ ಮಧ್ಯ ಪ್ರವೇಶಿಸುವಂತಿಲ್ಲ.ಈ ಸಂಗತಿ ಪ್ರತಿಭಟನಾ ನಿರತ ಬಿಜೆಪಿ ನಾಯಕರಿಗೂ ಗೊತ್ತು.
ಎರಡೂ ಪ್ರಕರಣಗಳ ವಿರುದ್ಧದ ಹೋರಾಟವನ್ನು ತಾರ್ಕಿಕ ಅಂತ್ಯಕ್ಕೆ ಕೊಂಡೊಯ್ಯ ಬೇಕೆಂದು ಬಿಜೆಪಿ ಹೈಕಮಾಂಡ್ ರಾಜ್ಯ ಘಟಕಕ್ಕೆಚಾಟಿ ಬೀಸಿದ ನಂತರ ಆ ಪಕ್ಷದ ನಾಯಕರು ಈಗ ಹೊರಾಟಕ್ಕೆ ಧುಮುಕಿದ್ದಾರೆ.
ಬಹು ಮುಖ್ಯವಾಗಿ ಲೋಕಸಭಾ ಚುನಾವಣೆಯ ಫಲಿತಾಂಶದ ನಂತರ ಬಿಜೆಪಿಯ ಲೆಕ್ಕಾಚಾರಗಳೇ ಬದಲಾಗಿವೆ. ಅದರಲ್ಲೂ ಕರ್ನಾಟಕದಲ್ಲಿ ನಿರೀಕ್ಷಿತ ಫಲಿತಾಂಶ ಬಾರದಿರುವುದು, ಸಂಘಟನಾತ್ಮಕವಾಗಿ ಸದೃಢಗೊಳ್ಳಬೇಕಿದ್ದ ಪಕ್ಷದಲ್ಲೇ ಒಳ ಜಗಳ, ಭಿನ್ನಮತ ತಲೆ ಎತ್ತಿರುವುದು ಆ ಪಕ್ಷಕ್ಕೆ ಮುಜುಗುರದ ಸಂಗತಿಯಾಗಿದೆ. ಇದೆಲ್ಲಕ್ಕಿಂತ ಮುಖ್ಯವಾಗಿ ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಷ್ಟೇ ಅಲ್ಲ, ಅಹಿಂದ ವರ್ಗದ ಪ್ರಶ್ನಾತೀತ ನಾಯಕರಾಗಿಯೂ ರಾಜ್ಯದಲ್ಲಿ ಜನಪ್ರಿಯತೆ ಗಳಿಸಿದ್ದು ಪ್ರಬಲ ರಾಜಕೀಯ ಶಕ್ತಿಯಾಗಿ ನೆಲೆಯೂರಿದ್ದಾರೆ. ಆ ವಿಚಾರದಲ್ಲಿ ಅವರನ್ನು ಸರಿಗಟ್ಟುವ ನಾಯಕ ಉಳಿದ ಎರಡೂ ಪಕ್ಷಗಳಲ್ಲೂ ಇಲ್ಲ. ಹಾಗೆಯೇ ಕಾಂಗ್ರೆಸ್ ನಲ್ಲೂ ಇಲ್ಲ.
ಇದೇ ಕಾರಣಕ್ಕೆ ಆಂತರಿಕವಾಗಿ ಕಾಂಗ್ರೆಸ್ ನಲ್ಲಿ ಅವರನ್ನು ವಿರೋಧಿಸುವ ಗುಂಪೇ ಇದೆ. ಆದರೆ ಅದಕ್ಕೆ ಸಮರ್ಥ ನಾಯಕ ಇಲ್ಲ. ಲೋಕಸಭಾ ಚುನಾವಣೆಯಲ್ಲಿ ಒಕ್ಕಲಿಗರೇ ಪ್ರಧಾನ ಮತ್ತು ನಿರ್ಣಾಯಕವಾಗಿರುವ ಕ್ಷೇತ್ರಗಳಲ್ಲಿ ಕಾಂಗ್ರೆಸ್ ಪಕ್ಷದ ಸೋಲು ಅದಕ್ಕಿಂತ ಹೆಚ್ಚಾಗಿ ತನ್ನದೇ ಸ್ವಮತ ಕ್ಷೇತ್ರದಲ್ಲಿ ಸೋದರನ ಸೋಲು ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರನ್ನು ಕಂಗೆಡಿಸಿದೆ. ಕಾಂಗ್ರೆಸ್ ನಲ್ಲಿ ಪ್ರಬಲ ಒಕ್ಕಲಿಗ ನಾಯಕತ್ವದ ಪಟ್ಟಕ್ಕೆ ಹಂಬಲಿಸುತ್ತಿದ್ದ ಅವರಿಗೆ ಚುನಾವಣೆ ಫಲಿತಾಂಶ ದೊಡ್ಡ ಹಿನ್ನಡೆ. ಈ ಕಾರಣಕ್ಕೆ ಪಕ್ಷದೊಳಗೆ ಅವರಿಗೂ ವಿರೋಧಿಗಳು ಹುಟ್ಟಿಕೊಂಡಿದ್ದಾರೆ. ಅವರ ಮತ್ತು ಸಿದ್ದರಾಮಯ್ಯ ನಡುವಿನ ರಾಜಕೀಯ ಸಂಬಂಧ ಈಗ ಅಷ್ಟೇನೂ ಚೆನ್ನಾಗಿಲ್ಲ. ಲಿಂಗಾಯಿತ ಸಮುದಾಯದ ಆಸರೆಯನ್ನೇ ನೆಚ್ಚಿಕೊಂಡಿರುವ ಬಿಜೆಪಿಗೆ ಪ್ರಬಲ ಹಿಂದುಳಿದ ವರ್ಗಗಳ ನಾಯಕನ ಕೊರತೆ ಇದೆ. ಸಿದ್ದರಾಮಯ್ಯ ಸೈದ್ಧಾಂತಿಕವಾಗಿ ಬಿಜೆಪಿಯನ್ನು ವಿರೋಧಿಸುತ್ತಾರೆ. ಕರ್ನಾಟಕದಲ್ಲಿ ಮತ್ತೆ ಶತಾಯ ಗತಾಯ ಅಧಿಕಾರ ಹಿಡಿಯುವ ಮಹದಾಸೆ ಹೊತ್ತಿರುವ ಬಿಜೆಪಿಗೆ ಸಿದ್ದರಾಮಯ್ಯ ವಿರುದ್ಧ ಯುದ್ಧಕ್ಕೆ ಒಂದು ಪ್ರಬಲ ಕಾರಣ ಬೇಕಾಗಿದೆ. ಈ ಎರಡೂ ಹಗರಣಗಳನ್ನು ಮುಂದಿಟ್ಟುಕೊಂಡು ಅದು ಆರಂಭಿಸಿರುವ ಹೋರಾಟ ಅದಕ್ಕೊಂದು ಮುನ್ನುಡಿ.
ಮುಂದಿನ ದಿನಗಳಲ್ಲಿ ಕರ್ನಾಟಕದ ರಾಜಕೀಯ ವಿದ್ಯಮಾನ ಅನೇಕ ಅನಿರೀಕ್ಷಿತ ಬೆಳವಣಿಗೆಗಳಿಗೆ ಸಾಕ್ಷಿಯಾದರೂ ಆಶ್ಚರ್ಯವೇನಿಲ್ಲ.
-ಯಗಟಿ ಮೋಹನ್
yagatimohan@gmail.com