ಅವಧಿಪೂರ್ವ ಮಕ್ಕಳ ಜನನ  online desk
ಅಂಕಣಗಳು

ಅವಧಿಪೂರ್ವ ಮಕ್ಕಳ ಜನನ ಅಥವಾ Premature Delivery of Child (ಕುಶಲವೇ ಕ್ಷೇಮವೇ)

ಶಿಶುಗಳು ತಾಯಿಯ ಗರ್ಭದಲ್ಲಿ ಸಂಪೂರ್ಣವಾಗಿ ಬೆಳೆಯುವ ಅಗತ್ಯವಿದೆ. ಮಗು ಮುಂಚಿತವಾಗಿ ಜನಿಸಿದರೆ ಹೃದಯ, ಮೆದುಳು, ಶ್ವಾಸಕೋಶ ಅಥವಾ ಯಕೃತ್ತಿನ ಬೆಳವಣಿಗೆಯಾಗದೇ ಸಮಸ್ಯೆ ಉಂಟಾಗುವ ಸಾಧ್ಯತೆ ಇರುತ್ತದೆ.

ಸಾಮಾನ್ಯವಾಗಿ ಮಹಿಳೆಯರು ಗರ್ಭ ಧರಿಸಿದಾಗ ಮಗು ಪೂರ್ಣವಾಗಿ ಬೆಳೆದು ಒಂಬತ್ತು ತಿಂಗಳ ನಂತರ ಹುಟ್ಟುವುದು ಸ್ವಾಭಾವಿಕ. ಆದರೆ ಕೆಲವು ಗರ್ಭಿಣಿಯರಿಗೆ ಒಂಭತ್ತು ತಿಂಗಳು ತುಂಬುವ ಮೊದಲೇ ಮಗು ಜನಿಸುತ್ತದೆ. ಇದನ್ನು ಅವಧಿಪೂರ್ವ (ಪ್ರಸವಪೂರ್ವ) ಮಕ್ಕಳ ಜನನ ಎಂದು ಕರೆಯಲಾಗುತ್ತದೆ.

ಶಿಶುಗಳು ತಾಯಿಯ ಗರ್ಭದಲ್ಲಿ ಸಂಪೂರ್ಣವಾಗಿ ಬೆಳೆಯುವ ಅಗತ್ಯವಿದೆ. ಮಗು ಮುಂಚಿತವಾಗಿ ಜನಿಸಿದರೆ ಹೃದಯ, ಮೆದುಳು, ಶ್ವಾಸಕೋಶ ಅಥವಾ ಯಕೃತ್ತಿನ ಬೆಳವಣಿಗೆಯಾಗದೇ ಸಮಸ್ಯೆ ಉಂಟಾಗುವ ಸಾಧ್ಯತೆ ಇರುತ್ತದೆ. ಹೀಗೆ ಅವಧಿಗೆ ಮುನ್ನ ಜನಿಸಿದ ಮಕ್ಕಳಿಗೆ ತೊಂದರೆಗಳು ಕಾಣಿಸಿಕೊಳ್ಳಬಹುದು ಅಥವಾ ಕೆಲವು ಮಕ್ಕಳು ಸಾಯಬಹುದು. ಇಂದು ಜಗತ್ತಿನಲ್ಲಿ ಪ್ರತಿ ವರ್ಷ ಸುಮಾರು 1 ಮಿಲಿಯನ್ ಮಕ್ಕಳು ಅವಧಿಪೂರ್ವ ಜನನದ ತೊಡಕುಗಳ ಪರಿಣಾಮವಾಗಿ ಸಾಯುತ್ತಿವೆ ಎಂಬುದು ಗಂಭೀರವಾದ ಸಂಗತಿಯಾಗಿದೆ.

ಅವಧಿಪೂರ್ವ ಹೆರಿಗೆಯಲ್ಲಿ ಬದುಕುಳಿದ ಮಕ್ಕಳಲ್ಲಿ ಕಲಿಕೆಯ ಅಸಮರ್ಥತೆ, ದೃಷ್ಟಿ ಮತ್ತು ಶ್ರವಣ ಸಮಸ್ಯೆಗಳಂತಹ ತೊಡಕುಗಳು ಕಾಡಬಹುದು, ಅಂಗವೈಕಲ್ಯವೂ ಕಾಣಿಸಿಕೊಳ್ಳಬಹುದು. ಇಂದು ಭಾರತ ಸೇರಿದಂತೆ ಹಲವು ಅಭಿವೃದ್ಧಿಶೀಲ ಮತ್ತು ಹಿಂದುಳಿದ ದೇಶಗಳಲ್ಲಿ ಅವಧಿಪೂರ್ವವಾಗಿ ಮಕ್ಕಳು ಹುಟ್ಟುತ್ತಿರುವುದು ಹೆಚ್ಚುತ್ತಿದೆ ಎಂದು ವಿಶ್ವ ಆರೋಗ್ಯ ಸಂಸ್ಥೆ ಹೇಳಿರುವುದು ಕಾಳಜಿಯ ವಿಷಯವಾಗಿದೆ.

ಅವಧಿಪೂರ್ವ ಮಕ್ಕಳ ಜನನಕ್ಕೆ ಕಾರಣಗಳು

ಅವಧಿಪೂರ್ವ ಮಕ್ಕಳ ಜನನಕ್ಕೆ ಒಂದಲ್ಲ ಹಲವಾರು ಕಾರಣಗಳಿವೆ. ಈ ಕಾರಣಗಳು ಸಂಕೀರ್ಣ ಮತ್ತು ಬಹುಕ್ರಿಯಾತ್ಮಕವಾಗಿರಬಹುದು. ಸಾಮಾನ್ಯವಾಗಿ ವೈದ್ಯಕೀಯ, ಆನುವಂಶಿಕ, ಪರಿಸರ ಮತ್ತು ಜೀವನಶೈಲಿಯ ಕಾರಣದಿಂದ ಇಂತಹ ಪ್ರಕರಣಗಳು ಕಾಣಿಸಿಕೊಳ್ಳುತ್ತವೆ. ಗರ್ಭಾಶಯ, ಮೂತ್ರನಾಳ ಅಥವಾ ದೇಹದ ಇತರ ಭಾಗಗಳ ಸೋಂಕುಗಳು ಅವಧಿಪೂರ್ವ ಹೆರಿಗೆಯನ್ನು ಪ್ರಚೋದಿಸಬಹುದು. ಗರ್ಭಾವಸ್ಥೆಯ ತೊಡಕುಗಳು ಅಂದರೆ ಪ್ರಿಎಕ್ಲಾಂಪ್ಸಿಯಾ (ಗರ್ಭಾವಸ್ಥೆಯಲ್ಲಿ ಅಧಿಕ ರಕ್ತದೊತ್ತಡ), ಪ್ಲಾಸೆಂಟಾ ಬೇರ್ಪಡುವಿಕೆ (ಪ್ಲಾಸೆಂಟಾ ಗರ್ಭಾಶಯದಿಂದ ಬೇರ್ಪಟ್ಟಾಗ), ಮತ್ತು ಗರ್ಭಕಂಠದ ಬಾಯ್ತೆರೆಯುವಿಕೆ (ಗರ್ಭಕಂಠವು ಬೇಗನೆ ತೆರೆಯಲು ಪ್ರಾರಂಭಿಸಿದಾಗ) ಅವಧಿಪೂರ್ವ ಜನನಕ್ಕೆ ಕಾರಣವಾಗಬಹುದು.

ಅವಳಿ ಅಥವಾ ತ್ರಿವಳಿ ಮಕ್ಕಳಿದ್ದಾಗ ದೇಹದ ಮೇಲೆ ಹೆಚ್ಚುವರಿ ಒತ್ತಡದಿಂದಾಗಿ ಅವಧಿಪೂರ್ವ ಹೆರಿಗೆಯ ಅಪಾಯ ಬರಬಹುದು. ಧೂಮಪಾನ, ಮದ್ಯಪಾನ ಮತ್ತು ಮಾದಕ ದ್ರವ್ಯಗಳ ಬಳಕೆ ಗರ್ಭಾವಸ್ಥೆಯ ಮೇಲೆ ಪ್ರತಿಕೂಲ ಪರಿಣಾಮ ಬೀರಬಹುದು ಮತ್ತು ಅವಧಿಪೂರ್ವ ಹೆರಿಗೆಯ ಅಪಾಯವನ್ನು ಹೆಚ್ಚಿಸಬಹುದು. ಜೊತೆಗೆ ಅಗತ್ಯ ಪೋಷಕಾಂಶಗಳ, ರಕ್ತದ ಕೊರತೆಯು ಭ್ರೂಣದ ಬೆಳವಣಿಗೆಯನ್ನು ಕುಂಠಿತಗೊಳಿಸುತ್ತದೆ ಮತ್ತು ಅವಧಿಪೂರ್ವ ಹೆರಿಗೆಯ ಸಾಧ್ಯತೆಯನ್ನು ಹೆಚ್ಚಿಸುತ್ತದೆ.

ದೀರ್ಘಕಾಲದ ಒತ್ತಡ, ದೇಹದ ಅತಿಯಾದ ತೂಕವು ಮತ್ತು ಹಾರ್ಮೋನ್ ಅಸಮತೋಲನ ಗರ್ಭಾವಸ್ಥೆಯ ಮೇಲೆ ಪ್ರಭಾವ ಬೀರಬಹುದು ಮತ್ತು ಪ್ರಸವಪೂರ್ವ ಹೆರಿಗೆಯನ್ನು ಪ್ರಚೋದಿಸಬಹುದು. ಮಾಲಿನ್ಯಕಾರಕಗಳು, ರಾಸಾಯನಿಕಗಳು ಮತ್ತು ವಿಷಗಳಿಗೆ ಒಡ್ಡಿಕೊಳ್ಳುವುದರಿಂದ ಗರ್ಭಧಾರಣೆಯ ಆರೋಗ್ಯದ ಮೇಲೆ ಪರಿಣಾಮ ಬೀರಬಹುದು. ತೀವ್ರ ದೈಹಿಕ ಒತ್ತಡ ಅಥವಾ ಆಘಾತವು ಅಕಾಲಿಕ ಹೆರಿಗೆಗೆ ಕಾರಣವಾಗಬಹುದು. ಹದಿಹರೆಯದವರು ಹುಡುಗಿಯರು ಮತ್ತು 35 ವರ್ಷಕ್ಕಿಂತ ಮೇಲ್ಪಟ್ಟ ಮಹಿಳೆಯರಲ್ಲಿ ಅವಧಿಪೂರ್ವ ಹೆರಿಗೆಯ ತೊಂದರೆಯಾಗಬಹುದು. ಮುಂಚೆಯೇ ಇಂತಹ ಹೆರಿಗೆಯಾಗಿದ್ದರೆ ಅದು ಮತ್ತೊಂದು ತೊಂದರೆಗೆ ದಾರಿಮಾಡಿಕೊಡಬಹುದು. ಮಧುಮೇಹ, ಅಧಿಕ ರಕ್ತದೊತ್ತಡ ಮತ್ತು ಇತರ ದೀರ್ಘಕಾಲದ ಪರಿಸ್ಥಿತಿಗಳು ಗರ್ಭಧಾರಣೆಯನ್ನು ಸಂಕೀರ್ಣಗೊಳಿಸಬಹುದು ಮತ್ತು ಅವಧಿಪೂರ್ವ ಜನನಕ್ಕೆ ಕಾರಣವಾಗಬಹುದು. ಕೆಲವು ಆನುವಂಶಿಕ ಪರಿಸ್ಥಿತಿಗಳು ಅವಧಿಪೂರ್ವ ಜನನದ ಸಾಧ್ಯತೆಯನ್ನು ಹೆಚ್ಚಿಸಬಹುದು. ಆದರೂ ಅನೇಕ ಸಂದರ್ಭಗಳಲ್ಲಿ ಅವಧಿಪೂರ್ವ ಯಾವುದೇ ಕಾರಣವನ್ನು ಗುರುತಿಸಲಾಗುವುದಿಲ್ಲ.

ಅವಧಿ ಪೂರ್ವದಲ್ಲಿ ಜನಿಸಿದ ಮಕ್ಕಳ ಆರೈಕೆ

ಅವಧಿ ಪೂರ್ವದಲ್ಲಿ ಜನಿಸಿದ ಮಕ್ಕಳನ್ನು ವಿಶೇಷವಾದ ತುರ್ತು ನಿಗಾ ಘಟಕದಲ್ಲಿ (ಎನ್‌ಐಸಿಯು) ಕೆಲ ಕಾಲ ಇಟ್ಟು ಆರೈಕೆ ಮಾಡಲಾಗುತ್ತದೆ. ಕೆಲವು ಮಕ್ಕಳಲ್ಲಿ ಶ್ವಾಸಕೋಶದ ಸರಿಯಾದ ಬೆಳವಣಿಗೆಯಾಗಿರುವುದಿಲ್ಲ. ಇಂತಹ ವೇಳೆ ಕೃತಕ ಉಸಿರಾಟದ ವ್ಯವಸ್ಥೆ ಮಾಡಬೇಕು. ಮಗುವಿನ ದೇಹದಲ್ಲಿ ಕೆಲವು ದ್ರವಗಳು ಸಮತೋಲನ ಇಲ್ಲದಿದ್ದರೆ ಅಪಾಯವಾಗುತ್ತದೆ. ಸೋಡಿಯಂ, ಪೊಟ್ಯಾಶಿಯಂ ಮಟ್ಟವನ್ನು ಕಣ್ಣಲ್ಲಿ ಕಣ್ಣಿಟ್ಟು ನೋಡಿಕೊಳ್ಳಲಾಗುತ್ತದೆ. ಕೆಲವು ಮಕ್ಕಳಿಗೆ ಕೆಂಪು ರಕ್ತದ ಕಣಗಳನ್ನು ಸೃಷ್ಟಿಸಿಕೊಳ್ಳಲು ಸಾಧ್ಯವಿರುವುದಿಲ್ಲ. ಇಂತಹ ವೇಳೆ ರಕ್ತವನ್ನು ವರ್ಗಾವಣೆ ಮಾಡಬೇಕಾಗುತ್ತದೆ. ಇನ್ಕ್ಯೂಬೇಟರ್‌ನಲ್ಲಿ ಮಗುವನ್ನು ಇಡುವುದರ ಜೊತೆಗೆ ‘ಕಾಂಗರೂ ಕೇರ್’ ನೀಡಲಾಗುತ್ತದೆ. ಇದರಲ್ಲಿ ಮಗುವಿನ ಚರ್ಮಕ್ಕೆ ತಾಗುವಂತೆ ತಾಯಿ ಅದನ್ನು ಬಿಗಿದಪ್ಪಿಕೊಳ್ಳಬೇಕು. ಇದರಿಂದ ಹೃದಯ ಮತ್ತು ಉಸಿರಾಟದ ತೊಂದರೆ ನಿವಾರಣೆಯಾಗುತ್ತದೆ. ದೇಹದ ಆಮ್ಲಜನಕದ ಮಟ್ಟ ಸುಧಾರಿಸುತ್ತದೆ.

ಪ್ರಸವಪೂರ್ವ ಜನನ ತಪ್ಪಿಸುವುದು ಹೇಗೆ?

ಪ್ರಸವಪೂರ್ವ ಜನನದ ಅಪಾಯವನ್ನು ತಪ್ಪಿಸಲು ನಿಯಮಿತವಾಗಿ ಗರ್ಭಿಣಿಯರ ಆರೈಕೆ ಮಾಡುವುದು ನಿರ್ಣಾಯಕವಾಗಿದೆ. ಆದ್ದರಿಂದ ಗರ್ಭಿಣಿಯರು ಉತ್ತಮ ಪೋಷಕಾಂಶಗಳಿರುವ ಆಹಾರ, ವಾಕಿಂಗ್ ಮತ್ತು ಯೋಗಾಸನದಂತಹ ನಿಯಮಿತ ದೈಹಿಕ ಚಟುವಟಿಕೆಗಳಲ್ಲಿ ತೊಡಗಬೇಕು. ಹೆಚ್ಚು ಮಾನಸಿಕ ಅಥವಾ ದೈಹಿಕ ಸಮಸ್ಯೆಗಳಿಲ್ಲದೇ ಉತ್ತಮ ಅಭ್ಯಾಸಗಳನ್ನು ರೂಢಿಸಿಕೊಂಡು ಉಲ್ಲಸಿತರಾಗಿರಬೇಕು. ವೈದ್ಯರೊಂದಿಗೆ ನಿಯಮಿತವಾಗಿ ಸಂಪರ್ಕದಲ್ಲಿರಬೇಕು.

ಜೀವನಶೈಲಿಯನ್ನು ಉತ್ತಮವಾಗಿಟ್ಟುಕೊಳ್ಳಬೇಕು. ಮನೆಯವರೂ ಅವರ ಕಾಳಜಿ ಮಾಡಬೇಕು.

ಒಟ್ಟಾರೆ ಹೇಳುವುದಾದರೆ ಸುಮಾರು 40 ವಾರಗಳ ಕಾಲ ತಾಯಿಯ ಗರ್ಭದಲ್ಲೇ ಇದ್ದು ನಂತರ ಹೆರಿಗೆಯಾದರೆ ಒಳಿತು. ಆದರೆ 37 ವಾರಗಳಿಗೂ ಮೊದಲೇ ಮಕ್ಕಳು ಜನಿಸಿದರೆ ಅವು ಸೋಂಕುಗಳಿಗೆ/ಸಮಸ್ಯೆಗಳಿಗೆ ಅತಿ ಬೇಗನೇ ತುತ್ತಾಗುತ್ತವೆ. ಆದ್ದರಿಂದ ಗರ್ಭಿಣಿ ಮತ್ತು ಮಗು ಇಬ್ಬರ ಆರೋಗ್ಯದ ಬಗ್ಗೆ ಸಾಕಷ್ಟು ಕಾಳಜಿ ವಹಿಸುವ ಅಗತ್ಯವಿದೆ.


Dr Vasundhara Bhupathi

ಡಾ. ವಸುಂಧರಾ ಭೂಪತಿ
ಮೊ: 9986840477
ಇ-ಮೇಲ್ : bhupathivasundhara@gmail.com

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಇಬ್ಬರು ಕೇಂದ್ರ ಸಚಿವರು ಸೇರಿದಂತೆ 75 ಸದಸ್ಯರ GBA ಸೆ. 2 ರಿಂದ ಅಸ್ತಿತ್ವಕ್ಕೆ: ಯತೀಂದ್ರ ಸಿದ್ದರಾಮಯ್ಯಗೂ ಸ್ಥಾನ!

ಜಮ್ಮುವಿನಾದ್ಯಂತ ಭಾರಿ ಮಳೆ: ಅಪಾರ ಪ್ರಮಾಣದ ಹಾನಿ, 10 ಮಂದಿ ಸಾವು: ಕೊಚ್ಚಿ ಹೋದ ರಸ್ತೆ, ಸೇತುವೆಗಳು!

ಫೈಟರ್ ಜೆಟ್‌ ಇಂಜಿನ್ ಖರೀದಿ: ಅಮೆರಿಕಾದ GE ಸಂಸ್ಥೆಯೊಂದಿಗೆ $1 ಬಿಲಿಯನ್ ಮೊತ್ತದ ಒಪ್ಪಂದಕ್ಕೆ ಭಾರತ ಸಿದ್ಧತೆ!

ಸುಂಕ ಸಮರ: Trump 4 ಬಾರಿ ಕರೆ ಮಾಡಿದರೂ ಉತ್ತರಿಸದ PM Modi; ಅಮೆರಿಕ ನಿಯೋಗಕ್ಕೂ No Entry!

'ನನ್ನ ಕುರ್ಚಿ'ಗೆ ಪ್ರಧಾನಿ ಮೋದಿ ಗೌರವ ನೀಡಬೇಕು: ಪಶ್ಚಿಮ ಬಂಗಾಳ ಸಿಎಂ ಮಮತಾ ಬ್ಯಾನರ್ಜಿ ಕಿಡಿ!

SCROLL FOR NEXT