ಮಾನವರನ್ನು ಕಾಡುವ ಹಲವಾರು ಕಾಯಿಲೆಗಳಲ್ಲಿ ಸ್ವಯಂ ಪ್ರತಿರೋಧಕ (ಆಟೋಇಮ್ಯೂನ್) ಕಾಯಿಲೆಗಳು ಮುಖ್ಯವಾದವು. ಸ್ವಯಂ ಪ್ರತಿರೋಧಕ (ಆಟೋಇಮ್ಯೂನ್) ಕಾಯಿಲೆಗಳು ಬಂದರೆ ದೇಹದ ರೋಗನಿರೋಧಕ ವ್ಯವಸ್ಥೆ, ಜೀವಕೋಶಗಳು, ಅಂಗಗಳು ಮತ್ತು ಅಂಗಾಂಶಗಳಿಗೆ ಹಾನಿಯುಂಟಾಗುತ್ತದೆ.
ಸಾಮಾನ್ಯವಾಗಿ ರೋಗನಿರೋಧಕ ವ್ಯವಸ್ಥೆ ಬ್ಯಾಕ್ಟೀರಿಯಾ ಮತ್ತು ವೈರಸ್‌ಗಳಂತಹ ಹಾನಿಕಾರಕ ಸೂಕ್ಷ್ಮಾಣುಜೀವಿಗಳಿಂದ ದೇಹವನ್ನು ರಕ್ಷಿಸಲು ಕೆಲಸ ಮಾಡುತ್ತದೆ. ಆದರೆ ಸ್ವಯಂ ಪ್ರತಿರೋಧಕ ಕಾಯಿಲೆಗಳಲ್ಲಿ ರೋಗನಿರೋಧಕ ವ್ಯವಸ್ಥೆಗೆ ಹೊರಗಿನ ಹಾನಿಕಾರಕ ಸೂಕ್ಷ್ಮಾಣುಜೀವಿಗಳು ಮತ್ತು ದೇಹದ ಸ್ವಂತ ಆರೋಗ್ಯಕರ ಕೋಶಗಳ ನಡುವೆ ವ್ಯತ್ಯಾಸ ಗೊತ್ತಾಗುವುದಿಲ್ಲ. ಇದರ ಪರಿಣಾಮವಾಗಿ ಉರಿಯೂತ, ಅಂಗಾಂಶಗಳ ಹಾನಿ ಉಂಟಾಗುತ್ತದೆ ಮತ್ತು ಅಂಗಾಂಗಗಳು ಸರಿಯಾಗಿ ಕಾರ್ಯ ನಿರ್ವಹಿಸುವುದಿಲ್ಲ. ಉದಾಹರಣೆಗೆ ರೂಮಟಾಯ್ಡ್ ಆರ್ಥ್ರೈಟಸ್, ಸೋರಿಯಾಸಿಸ್, ಮಲ್ಟಿಪಲ್ ಸ್ಕ್ಲಿರೋಸಿಸ್, ಟೈಪ್ 1 ಡಯಾಬಿಟಿಸ್ ಇತ್ಯಾದಿ.
ಆಟೋಇಮ್ಯೂನ್ ಕಾಯಿಲೆಗಳಿಗೆ ಕಾರಣವೇನು?
ಆಟೋಇಮ್ಯೂನ್ ಕಾಯಿಲೆಗಳಿಗೆ ನಿಖರವಾದ ಕಾರಣವನ್ನು ಇದುವರೆಗೆ ಸಂಪೂರ್ಣವಾಗಿ ಅರ್ಥಮಾಡಿಕೊಳ್ಳಲಾಗಿಲ್ಲ, ಆದರೆ ಇವು ಆನುವಂಶಿಕವಾಗಿ ಮತ್ತು ಪರಿಸರ ಅಂಶಗಳ ಸಂಯೋಜನೆಯಿಂದ ಉಂಟಾಗುತ್ತವೆ ಎಂದು ನಂಬಲಾಗಿದೆ. ಕೆಲವು ಜೀನ್ಗಳು ಜನರಲ್ಲಿ ಈ ಕಾಯಿಲೆಗಳನ್ನು ಉಂಟುಮಾಡಲು ಕಾರಣವಾಗಬಹುದು. ಸೋಂಕುಗಳು, ಕೆಲವು ಔಷಧಿಗಳು, ಹಾರ್ಮೋನುಗಳ ಬದಲಾವಣೆಗಳು ಮತ್ತು ಜೀವಾಣು ಅಥವಾ ರಾಸಾಯನಿಕಗಳಿಗೆ ಒಡ್ಡಿಕೊಳ್ಳುವಿಕೆಯಂತಹ ಪರಿಸರ ಪ್ರಚೋದಕಗಳು ಈ ರೋಗಗಳನ್ನು ಪ್ರಚೋದಿಸುತ್ತವೆ.
ಆನುವಂಶಿಕ ಮತ್ತು ಪರಿಸರ ಅಂಶಗಳ ಸಂಕೀರ್ಣ ಪರಸ್ಪರ ಕ್ರಿಯೆಯಿಂದಾಗಿ ಸ್ವಯಂ ಪ್ರತಿರೋಧಕ ಕಾಯಿಲೆಗಳನ್ನು ತಡೆಗಟ್ಟುವುದು ಸವಾಲಿನ ಸಂಗತಿಯಾಗಿದೆ.
ಸ್ವಯಂ ಪ್ರತಿರೋಧಕ ಕಾಯಿಲೆಗಳು ರಕ್ತನಾಳಗಳು, ಸಂಯೋಜಕ ಅಂಗಾಂಶಗಳು, ಕೀಲುಗಳು, ಸ್ನಾಯುಗಳು, ಕೆಂಪು ರಕ್ತ ಕಣಗಳು, ಚರ್ಮ, ಅಂತಃಸ್ರಾವಕ ಗ್ರಂಥಿಗಳು ಥೈರಾಯ್ಡ್ ಗ್ರಂಥಿ ಮತ್ತು ಮೇದೋಜ್ಜೀರಕ ಗ್ರಂಥಿಗಳನ್ನು (ಟೈಪ್ 1 ಮಧುಮೇಹದಲ್ಲಿ) ಪ್ರಭಾವಿಸುತ್ತವೆ.
ಆಟೋಇಮ್ಯೂನ್ ಕಾಯಿಲೆಗಳಿಗೆ ಚಿಕಿತ್ಸೆ ಇದೆಯೇ?
ಆಟೋಇಮ್ಯೂನ್ ಕಾಯಿಲೆಗಳಿಗೆ ಚಿಕಿತ್ಸೆಯು ವಿಶಿಷ್ಟವಾಗಿ ರೋಗಲಕ್ಷಣಗಳನ್ನು ನಿರ್ವಹಿಸುವುದು, ಉರಿಯೂತವನ್ನು ಕಡಿಮೆ ಮಾಡುವುದು ಮತ್ತು ಅಸಹಜ ರೋಗನಿರೋಧಕ ವ್ಯವಸ್ಥೆಯನ್ನು ಸರಿಪಡಿಸುವುದನ್ನು ಒಳಗೊಂಡಿದೆ. ನಿರ್ದಿಷ್ಟ ಚಿಕಿತ್ಸಾ ವಿಧಾನವು ಪರಿಸ್ಥಿತಿ ಮತ್ತು ತೀವ್ರತೆಯನ್ನು ಅವಲಂಬಿಸಿ ಬದಲಾಗಬಹುದು. ಆದರೆ ಸಾಮಾನ್ಯ ವಿಧಾನಗಳು ಇಂತಿವೆ:
ಔಷಧಿಗಳು: ರೋಗಿಗಳ ಪರಿಸ್ಥಿತಿಯನ್ನು ಅವಲಂಬಿಸಿ, ರೋಗಲಕ್ಷಣಗಳನ್ನು ಹೆಚ್ಚು ಹಾನಿ ಆಗದಂತೆ ನಿರ್ವಹಿಸಲು ಮತ್ತು ಉರಿಯೂತವನ್ನು ಕಡಿಮೆ ಮಾಡಲು ವೈದ್ಯರು ಔಷಧಿಗಳನ್ನು ಶಿಫಾರಸು ಮಾಡಬಹುದು.
ಜೀವನಶೈಲಿಯ ಮಾರ್ಪಾಡುಗಳು: ಸ್ವಯಂ ಪ್ರತಿರೋಧಕ ಕಾಯಿಲೆಗಳನ್ನು ಹೊಂದಿರುವ ವ್ಯಕ್ತಿಗಳು ತಮ್ಮ ಸ್ಥಿತಿಗೆ ಅನುಗುಣವಾಗಿ ನಿರ್ದಿಷ್ಟ ಜೀವನಶೈಲಿ ಮಾರ್ಪಾಡುಗಳಿಂದ ಪ್ರಯೋಜನ ಪಡೆಯಬಹುದು. ಇದು ಆಹಾರದ ಬದಲಾವಣೆಗಳು, ಒತ್ತಡ ನಿರ್ವಹಣೆ ತಂತ್ರಗಳು, ನಿಯಮಿತ ವ್ಯಾಯಾಮ ಮತ್ತು ಸಾಕಷ್ಟು ವಿಶ್ರಾಂತಿಯನ್ನು ಒಳಗೊಂಡಿದೆ.
ದೈಹಿಕ ಚಿಕಿತ್ಸೆ ಮತ್ತು ಪುನರ್ವಸತಿ: ಚಲನಶೀಲತೆ ಅಥವಾ ಜಂಟಿ ಕ್ರಿಯೆಯ ಮೇಲೆ ಪರಿಣಾಮ ಬೀರುವ ಪರಿಸ್ಥಿತಿಗಳಿಗೆ, ದೈಹಿಕ ಚಿಕಿತ್ಸೆ ಮತ್ತು ಪುನರ್ವಸತಿ ವ್ಯಾಯಾಮಗಳನ್ನು ಶಕ್ತಿ, ಮತ್ತು ಚಲನಶೀಲತೆಯನ್ನು ಸುಧಾರಿಸಲು ಮತ್ತು ನೋವು ಮತ್ತು ಬಿಗಿತವನ್ನು ಕಡಿಮೆ ಮಾಡಲು ವೈದ್ಯರು ಶಿಫಾರಸು ಮಾಡಬಹುದು.
ಆಯುರ್ವೇದ ಚಿಕಿತ್ಸೆ: ಆಟೋಇಮ್ಯೂನ್ ಕಾಯಿಲೆಗಳಿಗೆ ಆಯುರ್ವೇದದಲ್ಲಿ ಪಂಚಕರ್ಮ ಚಿಕಿತ್ಸೆ ಪರಿಣಾಮಕಾರಿಯಾಗಿದೆ. ಜೊತೆಗೆ ಯೋಗ, ಪ್ರಾಣಾಯಾಮ ಮತ್ತು ಧ್ಯಾನದ ನಿಯಮಿತ ಅಭ್ಯಾಸವೂ ಉತ್ತಮ.
ಈ ಕೆಳಕಂಡ ಕೆಲವು ಸಾಮಾನ್ಯ ಜೀವನಶೈಲಿ ಕ್ರಮಗಳನ್ನು ಅಳವಡಿಸಿಕೊಂಡರೆ ಆಟೋಇಮ್ಯೂನ್ ಪರಿಸ್ಥಿತಿಗಳ ಅಪಾಯ ಅಥವಾ ತೀವ್ರತೆಯನ್ನು ಕಡಿಮೆ ಮಾಡಿಕೊಳ್ಳಬಹುದು:
ಆರೋಗ್ಯಕರ ಆಹಾರ ಸೇವನೆ: ಹಣ್ಣುಗಳು, ತರಕಾರಿಗಳು, ಧಾನ್ಯಗಳು, ನೇರ ಪ್ರೋಟೀನ್ಗಳು ಮತ್ತು ಆರೋಗ್ಯಕರ ಕೊಬ್ಬಿನ ಅಂಶವಿರುವ ಸಮೃದ್ಧ ಸಮತೋಲನ ಆಹಾರವನ್ನು ಸೇವಿಸುವುದರಿಂದ ರೋಗನಿರೋಧಕ ಶಕ್ತಿ ದೇಹದಲ್ಲಿ ಉತ್ತಮಗೊಳ್ಳುತ್ತದೆ. ಸಂಸ್ಕರಿಸಿದ ಆಹಾರಗಳು, ಜಂಕ್ ಫುಡ್, ಹೆಚ್ಚುವರಿ ಸಕ್ಕರೆ/ಉಪ್ಪು/ಖಾರವಾಗಿರುವ ಮತ್ತು ಅನಾರೋಗ್ಯಕರ ಕೊಬ್ಬಿನ ಅಂಶವಿರುವ ಆಹಾರ ಸೇವನೆ ಬಿಡುವುದು ಒಳ್ಳೆಯದು.
ಒತ್ತಡ ನಿರ್ವಹಣೆ: ದೀರ್ಘಕಾಲದ ಒತ್ತಡವು ರೋಗನಿರೋಧಕ ವ್ಯವಸ್ಥೆಯ ಮೇಲೆ ಋಣಾತ್ಮಕ ಪರಿಣಾಮ ಬೀರಬಹುದು ಮತ್ತು ಸ್ವಯಂ ಪ್ರತಿರೋಧಕ ಕಾಯಿಲೆಗಳ ಬೆಳವಣಿಗೆ ಅಥವಾ ಉಲ್ಬಣಕ್ಕೆ ಕಾರಣವಾಗಬಹುದು. ಧ್ಯಾನ, ಯೋಗ, ಆಳವಾದ ಉಸಿರಾಟದ ವ್ಯಾಯಾಮಗಳು ಅಥವಾ ಹವ್ಯಾಸಗಳಂತಹ ಒತ್ತಡವನ್ನು ಕಡಿಮೆ ಮಾಡುವ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳುವುದು ಒತ್ತಡದ ಮಟ್ಟವನ್ನು ನಿರ್ವಹಿಸಲು ಮತ್ತು ರೋಗನಿರೋಧಕ ವ್ಯವಸ್ಥೆಯನ್ನು ಸುಭದ್ರಗೊಳಿಸಲು ಸಹಾಯ ಮಾಡುತ್ತವೆ,
ನಿಯಮಿತ ವ್ಯಾಯಾಮ: ನಿಯಮಿತ ದೈಹಿಕ ಚಟುವಟಿಕೆಯು ದೇಹದ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ, ಉರಿಯೂತವನ್ನು ಕಡಿಮೆ ಮಾಡುತ್ತದೆ ಮತ್ತು ಒಟ್ಟಾರೆ ಆರೋಗ್ಯ ಮತ್ತು ಯೋಗಕ್ಷೇಮವನ್ನು ಉತ್ತೇಜಿಸುತ್ತದೆ. ಅತ್ಯುತ್ತಮ ಪ್ರಯೋಜನಗಳಿಗಾಗಿ ಹೃದಯರಕ್ತನಾಳದ ವ್ಯಾಯಾಮ, ವಾಕಿಂಗ್ ಮತ್ತು ಜಾಗಿಂಗ್ ಅಭ್ಯಾಸ ರೂಢಿಸಿಕೊಳ್ಳಬೇಕು. ಯೋಗಾಭ್ಯಾಸ ಮಾಡುವುದೂ ಒಳ್ಳೆಯದು.
ಧೂಮಪಾನ/ಮದ್ಯಪಾನ ಬೇಡವೇ ಬೇಡ: ಧೂಮಪಾನ ಮತ್ತು ಅತಿಯಾದ ಆಲ್ಕೊಹಾಲ್ ಸೇವನೆಯು ದೇಹದಲ್ಲಿ ಉರಿಯೂತವನ್ನು ಹೆಚ್ಚಿಸುತ್ತದೆ ಮತ್ತು ರೋಗನಿರೋಧಕತೆಯನ್ನು ಕುಂದಿಸುತ್ತದೆ. ಆದ್ದರಿಂದ ಇವೆರಡನ್ನೂ ತ್ಯಜಿಸುವುದರಿಂದ ಕ್ಷೇಮ ಸಾಧ್ಯ.
ಸಮರ್ಪಕ ನಿದ್ದೆ: ನಾವು ಸದೃಢ ಮತ್ತು ಆರೋಗ್ಯವಂತರಾಗಿರಲು ನಮ್ಮ ದೇಹಕ್ಕೆ ಮತ್ತು ಮನಸ್ಸಿಗೆ ಸಾಕಷ್ಟು ವಿಶ್ರಾಂತಿ ಅವಶ್ಯಕ, ನಿದ್ದೆಯಿಂಲೇ ಈ ವಿಶ್ರಾಂತಿ ಸಿಗುವುದು. ನಾವು ದಿನವೂ ಚೆನ್ನಾಗಿ ಕನಿಷ್ಠ ಎಂಟು ಗಂಟೆಗಳ ಕಾಲ ನಿದ್ದೆ ಮಾಡಿ ಎದ್ದಾಗಿ ಫ್ರೆಶ್ ಆಗುತ್ತೇವೆ ಮತ್ತು ನಮ್ಮ ರೋಗನಿರೋಧಕ ಶಕ್ತಿಯು ಉತ್ತಮಗೊಳ್ಳುತ್ತದೆ.
ಒಟ್ಟಾರೆಯಾಗಿ ಹೇಳುವುದಾದರೆ ಸ್ವಯಂ ಪ್ರತಿರೋಧಕ ಕಾಯಿಲೆಗಳು ದೇಹದ ಜೀವಕೋಶಗಳು, ಅಂಗಾಂಶಗಳ ಮೇಲೆ ದಾಳಿ ಮಾಡುವ ಮತ್ತು ರೋಗನಿರೋಧಕತೆಯನ್ನು ಕುಗ್ಗಿಸುವ ಸಂಕೀರ್ಣ ಪರಿಸ್ಥಿತಿಗಳಾಗಿವೆ. ಆದರೆ ಆರೋಗ್ಯಕರ ಜೀವನಶೈಲಿ, ಒತ್ತಡ ನಿರ್ವಹಣೆ ಮತ್ತು ಸೂಕ್ತ ಔಷಧೋಪಚಾರದೊಂದಿಗೆ ಇವುಗಳ ಅಪಾಯ ಅಥವಾ ತೀವ್ರತೆಯನ್ನು ಕಡಿಮೆ ಮಾಡಿಕೊಳ್ಳಬಹುದು.
ಡಾ. ವಸುಂಧರಾ ಭೂಪತಿ
ಮೊ: 9986840477
ಇ-ಮೇಲ್ : bhupathivasundhara@gmail.com