ಸಾಂಕೇತಿಕ ಚಿತ್ರ online desk
ಅಂಕಣಗಳು

ಇಂಡೋನೇಷ್ಯ, ಥಾಯ್ಲ್ಯಾಂಡ್, ಮಲೇಷ್ಯ ಭವಿಷ್ಯದ AI ಹಬ್?: ಭಾರತ ಖುಷಿಪಡಬೇಕು ಏಕೆ ಗೊತ್ತೇ? (ತೆರೆದ ಕಿಟಕಿ)

ಸಾಫ್ಟವೇರ್ ಕ್ರಾಂತಿ ಈ ಹಿಂದೆ ಭಾರತವೂ ಸೇರಿದಂತೆ ಪಾಶ್ಚಾತ್ಯ ದೇಶಗಳಲ್ಲಿ ಹೇಗೆ ಉದ್ಯೋಗ ಕ್ರಾಂತಿಯನ್ನು ಹರಡಿತೋ ಅಂತೆಯೇ, ಅದರ ಮುಂದುವರಿಕೆ ಎಂಬಂತೆ ಈ ತಂತ್ರಜ್ಞಾನ ಕಂಪನಿಗಳು ಹಣ ಹೂಡುತ್ತಿರುವುದು ಹಾಗೂ ಪ್ರತಿಭೆಗಳನ್ನು ಅಪೇಕ್ಷಿಸುತ್ತಿರುವುದು ಆರ್ಟಿಫಿಶಿಯಲ್ ಇಂಟಲಿಜೆನ್ಸ್ ಕ್ಷೇತ್ರದಲ್ಲಿ. (ತೆರೆದ ಕಿಟಕಿ-1)

ನಮ್ಮ ಮಗ ಅಮೆರಿಕದಲ್ಲಿದ್ದಾನೆ…ಯುರೋಪಿನಲ್ಲಿ ನಮ್ಮ ಮಗಳಿದ್ದಾಳೆ..ವಿದ್ಯಾವಂತ ಸಮುದಾಯಗಳ ನಡುವೆ ಈ ಬಗೆಯ ಮಾತೊಂದು ತುಂಬ ವಿಶೇಷ ಎನಿಸದಂತೆ ಕಿವಿಗೆ ಒಗ್ಗಿಕೊಂಡು ದಶಕಗಳೇ ಆಗಿಬಿಟ್ಟಿವೆ. 

ಪಾಶ್ಚಾತ್ಯ ದೇಶಗಳಲ್ಲಿ ಹೀಗೆ ಅವಕಾಶವೊಂದನ್ನು ತೆರೆದಿರಿಸಿ, ಭಾರತದಲ್ಲಿ ವಿದ್ಯಾವಂತ ಒಂದು ದೊಡ್ಡ ವ್ಯಾಪ್ತಿಯ ಕುಟುಂಬಗಳನ್ನು ಮೇಲ್ಮಧ್ಯಮವರ್ಗದ ಶ್ರೇಣಿಗೇರಿಸಿದ ಕೀರ್ತಿ ತಂತ್ರಜ್ಞಾನ ವಲಯಕ್ಕೆ ಸೇರುತ್ತದೆ. ಅಮೆರಿಕ, ಯುಕೆ, ಜರ್ಮನಿ ಎಂದೆಲ್ಲ ಬದುಕು ಕಂಡುಕೊಂಡವರಲ್ಲಿ ಕೆಲವರು ವೈದ್ಯರು, ಅಧ್ಯಾಪಕರು ಸೇರಿದಂತೆ ಬೇರೆ ಬೇರೆ ವೃತ್ತಿಯಲ್ಲಿದ್ದಿರಬಹುದಾದರೂ ಸರಾಸರಿ ಜನ ಎಂಜಿನಿಯರಿಂಗ್ ಮತ್ತದರಲ್ಲಿ ವಿಶೇಷವಾಗಿ ಸಾಫ್ಟವೇರ್ ಎಂಜಿನಿಯರಿಂಗ್ ಎಂಬ ಕೆಟಗರಿಗೆ ಸೇರಿದವರು. ಇತ್ತೀಚಿನ ವರ್ಷಗಳಲ್ಲಿ ಹಾಗೆ ಅಮೆರಿಕ ಇತ್ಯಾದಿಗಳೆಡೆಗೆ ಹೋದವರು ಭಾರತಕ್ಕೆ ಬಂದು ಹೂಡಿಕೆ ಮಾಡಿರುವುದು, ಇಲ್ಲವೇ ಅಲ್ಲಿನ ಪಾಶ್ಚಾತ್ಯ ತಂತ್ರಜ್ಞಾನ ಉದ್ದಿಮೆ ರಂಗದ ಯಶಸ್ಸು ಮತ್ತು ಅದರಲ್ಲಿ ಭಾರತೀಯರ ಯೋಗದಾನವನ್ನೇ ಸ್ಫೂರ್ತಿ ಮತ್ತು ವಿಶ್ವಾಸವನ್ನಾಗಿಸಿಕೊಂಡು ಇಲ್ಲಿ ನವೋದ್ದಿಮೆಗಳನ್ನು ಕಟ್ಟಿದವರು ಎಂಬಂಥ ಜಮಾನಾವನ್ನೂ ನೋಡಿದ್ದಾಗಿದೆ.

ಬೆಂಗಳೂರು, ಗುರುಗ್ರಾಮ, ಚೆನ್ನೈ, ಹೈದರಾಬಾದುಗಳು ಇಲ್ಲಿಯೇ ತಂತ್ರಜ್ಞಾನ ಸಾಮ್ರಾಜ್ಯಗಳನ್ನು ಅರಳಿಸಿಕೊಳ್ಳುತ್ತಿರುವುದೂ ಇದೆ. ಈ ಎಲ್ಲ ವಿದ್ಯಮಾನಗಳು ಗಟ್ಟಿಗೊಳ್ಳುತ್ತಲೇ, ಇನ್ನೈದಾರು ವರ್ಷಗಳಲ್ಲಿ ಅರಳಿಕೊಳ್ಳುವ ಸಾಧ್ಯತೆ ಇರುವ ಮತ್ತೊಂದು ಟ್ರೆಂಡ್ ಇದೆ. ಅದೆಂದರೆ, ಇನ್ನು ಅರೆ ದಶಕದ ನಂತರ ಭಾರತದ ವಿದ್ಯಾವಂತ ಸಮುದಾಯಗಳು ಮದುವೆ-ಮುಂಜಿಯಲ್ಲೋ ಇನ್ಯಾವುದೇ ಸಾಮಾಜಿಕ ಮಿಲನದ ಸಂದರ್ಭದಲ್ಲೋ ಮಾತನಾಡಿಕೊಳ್ಳುತ್ತ, ನನ್ನ ಮಗಳು ಮಲೇಷ್ಯದಲ್ಲಿದ್ದಾಳೆ; ನನ್ನ ಮಗ ಇಂಡೋನೇಷ್ಯದಲ್ಲಿದ್ದಾನೆ ಎಂದೆಲ್ಲ ಮಾತನಾಡಿಕೊಳ್ಳುವುದು ಸಹಜವಾಗುವ ಸಾಧ್ಯತೆ ಇದೆ. ಇವತ್ತಿಗೆ, ಥಾಯ್ಲ್ಯಾಂಡಿಗೆ ಹೋಗಿದ್ದೆ ಎಂದಾಕ್ಷಣ ಯಾವುದೋ ತುಂಟನಗು ಆವರಿಸಿಕೊಳ್ಳುವ ಸಂದರ್ಭದ ಬದಲು, ಒಹೋ ಹೌದೇ ಎಂಬ ಗಹನತೆಯೂ ಬಂದೀತು. 

ಇದ್ಯಾವ ಭವಿಷ್ಯವಾಣಿ, ಇದೇನು ಸಾಧ್ಯತೆ ಎಂದು ಅರ್ಥ ಮಾಡಿಕೊಳ್ಳುವುದಕ್ಕೆ ನೀವು ತಂತ್ರಜ್ಞಾನ ದಿಗ್ಗಜ ಮೈಕ್ರೊಸಾಫ್ಟ್ ಕಂಪನಿಯ ಸಿಇಒ ಸತ್ಯ ನಾದೆಲ್ಲ ಮೇ ಪ್ರಾರಂಭದಲ್ಲಿ ನಡೆಸಿದ ಆಗ್ನೇಯ ಏಷ್ಯದ ಭೇಟಿಯ ವಿವರಗಳನ್ನು ಗಮನಿಸಬೇಕು. ನಾದೆಲ್ಲ ಭೇಟಿ ನೀಡಿ ಕೃತಕ ಬುದ್ಧಿಮತ್ತೆಯ ಪರಿಸರದ ನೀಲನಕ್ಷೆಯನ್ನು ಬಿಡಿಸಿಟ್ಟು ಜತೆಯಲ್ಲೇ ಬಂಡವಾಳ ಹೂಡಿಕೆ ಘೋಷಣೆಯನ್ನೂ ಮಾಡಿ ಬಂದಿರುವುದು ಈ ಮೂರು ದೇಶಗಳಲ್ಲಿ- ಇಂಡೋನೇಷ್ಯ, ಮಲೇಷ್ಯ, ತೈಲ್ಯಾಂಡ್.

ಸಾಫ್ಟವೇರ್ ಕ್ರಾಂತಿ ಈ ಹಿಂದೆ ಭಾರತವೂ ಸೇರಿದಂತೆ ಪಾಶ್ಚಾತ್ಯ ದೇಶಗಳಲ್ಲಿ ಹೇಗೆ ಉದ್ಯೋಗ ಕ್ರಾಂತಿಯನ್ನು ಹರಡಿತೋ ಅಂತೆಯೇ, ಅದರ ಮುಂದುವರಿಕೆ ಎಂಬಂತೆ ಈ ತಂತ್ರಜ್ಞಾನ ಕಂಪನಿಗಳು ಹಣ ಹೂಡುತ್ತಿರುವುದು ಹಾಗೂ ಪ್ರತಿಭೆಗಳನ್ನು ಅಪೇಕ್ಷಿಸುತ್ತಿರುವುದು ಆರ್ಟಿಫಿಶಿಯಲ್ ಇಂಟಲಿಜೆನ್ಸ್ ಕ್ಷೇತ್ರದಲ್ಲಿ. ಹೊಸಬಗೆಯ ತಂತ್ರಜ್ಞಾನ ಉದ್ಯೋಗಗಳು ಭವಿಷ್ಯದಲ್ಲಿ ಹರಡಿಕೊಳ್ಳಲಿರುವುದು ಎಐನಲ್ಲೇ. ಮೈಕ್ರೊಸಾಫ್ಟ್ ಅಂತೂ ಕೋಪೈಲಟ್ ಎಂಬ ತನ್ನದೇ ಎಐ ವ್ಯವಸ್ಥೆ ಜತೆಗೆ, ಚಾಟ್ ಜಿಪಿಟಿ ಜನಕ ನವೋದ್ದಿಮೆ ಒಪನ್ ಎಐನಲ್ಲೂ ದೊಡ್ಡಮಟ್ಟದ ಹೂಡಿಕೆಗಳನ್ನು ಮಾಡಿದೆ. ಹೀಗಾಗಿ, ಎಐ ನಿಟ್ಟಿನಲ್ಲಿ ಮೈಕ್ರೊಸಾಫ್ಟ್ ಇಡುವ ಹೆಜ್ಜೆಗಳು ದಿಕ್ಸೂಚಿಯೇ ಆಗಿರುತ್ತವೆ.

2025ರ ಒಳಗೆ ಮೇಲೆ ಹೆಸರಿಸಿದ ಮೂರು ದೇಶಗಳ ಜತೆಗೆ ಪಿಲಿಪ್ಪೀನ್ಸ್ ಮತ್ತು ವಿಯೆಟ್ನಾಂ ಅನ್ನೂ ಸೇರಿಸಿಕೊಂಡು 25 ಲಕ್ಷ ಎಐ ಕೌಶಲದ ಕೆಲಸಗಾರರನ್ನು ಸೃಷ್ಟಿಸುವ ಗುರಿಯನ್ನು ಹೊಂದಿದೆ ಮೈಕ್ರೊಸಾಫ್ಟ್. ಇದೇ ಉದ್ದೇಶವಿಟ್ಟುಕೊಂಡು ಸತ್ಯ ನಾದೆಲ್ಲ ಅವರು ಆಗ್ನೇಯ ಏಷ್ಯದ ಮೂರು ರಾಷ್ಟ್ರಗಳನ್ನು ಸಂದರ್ಶಿಸಿದ್ದಾರೆ. 

ಇಂಡೋನೇಷ್ಯದಲ್ಲಿ 1.7 ಬಿಲಿಯನ್ ಡಾಲರುಗಳ ಹೂಡಿಕೆಯ ಘೋಷಣೆ ಮಾಡಿದೆ ಮೈಕ್ರೊಸಾಫ್ಟ್. ಬಾಲಿಯಲ್ಲಾಗಲೀ, ಅಥವಾ ಇಂಡೋನೇಷ್ಯವು ಉದ್ದೇಶಿಸಿರುವ ಹೊಸ ರಾಜಧಾನಿ ನುಸಂತರದಲ್ಲಾಗಲೀ ಎಐ ಡೇಟಾ ಸೆಂಟರ್ ತೆರೆಯುವ ಬಗ್ಗೆ ಮಾತುಕತೆಗಳು ನಡೆದಿವೆ. ಈ ಡೇಟಾ ಕೇಂದ್ರಗಳು ಎಂದರೆ ಕೃತಕ ಬುದ್ಧಿಮತ್ತೆ ಅಥವಾ ಎಐಗೆ ಬೇಕಾದ ಅಪಾರ ಪ್ರಮಾಣದ ಮಾಹಿತಿ ಸಂಸ್ಕರಿಸುವ ಭೌತಿಕ ವ್ಯವಸ್ಥೆ ಅರ್ಥಾತ್ ಸರ್ವರುಗಳನ್ನು ಹೊಂದಿರುವ ಕೇಂದ್ರ. ಇಲ್ಲಿ ಡೇಟಾ ಸೈಂಟಿಸ್ಟ್, ಯಾಂತ್ರಿಕ ಕಲಿಕೆಯನ್ನು ನಿರ್ದೇಶಿಸುವ ಎಂಜಿನಿಯರಿಂಗ್ ಪರಿಣತರು, ಆ ವ್ಯವಸ್ಥೆಯ ಹಾರ್ಡವೇರ್ ನಿರ್ವಹಿಸುವ ಕೌಶಲಿಗರು ಸೇರಿದಂತೆ ಥರಹೇವಾರಿ ಉದ್ಯೋಗಗಳನ್ನು ನಿರೀಕ್ಷಿಸಬಹುದಾಗಿದೆ.

ಇನ್ನು, ತೈಲ್ಯಾಂಡ್ ನೆಲದಲ್ಲಿ ನಿಂತು ಸತ್ಯ ನಾದೆಲ್ಲ ಡೇಟಾ ಸೆಂಟರ್ ಆರಂಭಿಸುವ ಭರವಸೆ ನೀಡಿದ್ದಾರಲ್ಲದೇ ಕೃತಕ ಬುದ್ಧಿಮತ್ತೆಗೆ ಸಂಬಂಧಿಸಿ ಸಂಶೋಧನೆಗಳನ್ನು ನಡೆಸುವ ಘಟಕವನ್ನು ಸಹ ಐದಾರು ವರ್ಷಗಳ ನಂತರ ಅಲ್ಲಿ ಆರಂಭಿಸುವುದಕ್ಕೆ ಮೈಕ್ರೊಸಾಫ್ಟ್ ಉದ್ದೇಶಿಸಿರುವುದಾಗಿ ಹೇಳಿದ್ದಾರೆ. ತಾಯ್ ಸರ್ಕಾರ ಸಹ ‘ಇಗ್ನೈಟ್ ತೈಲ್ಯಾಂಡ್’ ಎಂಬ ಯೋಜನೆ ಹರಡಿಕೊಂಡು ಅಲ್ಲಿ ಡಿಜಿಟಲ್ ಫಸ್ಟ್ ಮತ್ತು ಎಐ ನಿರ್ದೇಶಿತ ಮಾರ್ಗಗಳನ್ನೇ ಆದ್ಯತೆಯಾಗಿರಿಸಿಕೊಂಡಿದೆ. ಹೀಗಾಗಿ, ಅಲ್ಲಿನ ಸರ್ಕಾರದ ಮಹಾತ್ವಾಕಾಂಕ್ಷೆಯೂ ಮೈಕ್ರೊಸಾಫ್ಟಿನ ಉದ್ದೇಶಗಳಿಗೆ ಹೊಂದಿಕೊಳ್ಳುತ್ತಿದೆ. 

ಮಲೇಷ್ಯದಲ್ಲಂತೂ ಮೈಕ್ರೊಸಾಫ್ಟ್ ಬರೋಬ್ಬರಿ 2.2 ಬಿಲಿಯನ್ ಡಾಲರುಗಳ ಹೂಡಿಕೆ ಘೋಷಣೆ ಮಾಡಿದೆ. ಇದು ದೇಶದ ಡಿಜಿಟಲ್ ಮೂಲಸೌಕರ್ಯದ ಯೋಜನೆಯನ್ನು ಗಟ್ಟಿಗೊಳಿಸುವುದಕ್ಕೆ, ಅಲ್ಲಿ ಎಐ ಕೌಶಲದ ಕೆಲಸಗಾರರ ಪಡೆಯನ್ನು ಕಟ್ಟುವುದಕ್ಕೆ ಉಪಯೋಗವಾಗಲಿದೆ. ಮೈಕ್ರೊಸಾಫ್ಟ್ 2021ರಲ್ಲೇ ಮಲೇಷ್ಯದಲ್ಲಿ ಡೇಟಾ ಸೆಂಟರ್ ಶುರುಮಾಡಿಬಿಟ್ಟಿದೆ. 

ಹೀಗೆ ಆಗ್ನೇಯ ಏಷ್ಯದಲ್ಲಿಯೇ ತನ್ನ ಎಐ ತಂತ್ರಜ್ಞಾನೋದ್ದಿಮೆಯ ಬೆಳವಣಿಗೆಯನ್ನು ಮುನ್ನಡೆಸಬಲ್ಲ ಪ್ರತಿಭೆಗಳಿವೆ ಎಂದು ಗುರುತಿಸಿರುವ ಮೈಕ್ರೊಸಾಫ್ಟ್ ಆ ದೇಶಗಳಲ್ಲಿ ಪ್ರಮುಖವಾಗಿ ಉದ್ಯೋಗಗಳನ್ನು ಸೃಜಿಸುತ್ತದೆ. ಆದರೆ, ಈ ಬೆಳವಣಿಗೆಯಲ್ಲಿ ಬೇಕಾಗುವ ಹೆಚ್ಚುವರಿ ಪ್ರತಿಭೆ-ಪರಿಣತಿಗಳಿಗೆ ಅದು ಭಾರತವನ್ನು ನೋಡುವ ಸಂದರ್ಭವೂ ಬರಬಹುದು. ಅಲ್ಲದೇ, ಈ ದೇಶಗಳಲ್ಲಿ ಒಂದುಹಂತದವರೆಗೆ ಎಐ ಮೂಲಸೌಕರ್ಯ ನೆಲೆಯಾಗುತ್ತಲೇ ಅವು ಜಗತ್ತಿನ ಬೇರೆ ಭಾಗಗಳಿಂದ ಪ್ರತಿಭೆಗಳನ್ನು ಆಕರ್ಷಿಸುವ ತಾಣಗಳೂ ಆದಾವು. ಆಗೆಲ್ಲ ಲಾಭ ಪಡೆಯಬಹುದಾದ ದೇಶ ಭಾರತ. ಅದಾಗಲೇ ತನ್ನ ಈಶಾನ್ಯ ರಾಜ್ಯಗಳನ್ನು ಬಲಪಡಿಸುತ್ತ ಅದನ್ನು ಆ್ಯಕ್ಟ್ ಈಸ್ಟ್ ಎಂಬ ಚಿಂತನೆಯೊಂದಿಗೆ ಬೆಸೆದು ಪೂರ್ವದ ದೇಶಗಳತ್ತ ಬೆಸುಗೆ ಬೆಸೆದಿದೆ ಭಾರತ. ಹೀಗಾಗಿ, ಆಗ್ನೇಯ ಏಷ್ಯಕ್ಕೆ ಹೊಂದಿಕೊಂಡಂತೆ ಮುಂದಿನ ದಿನಗಳಲ್ಲಿ ಆಗಬಹುದಾದ ಎಐ ಉದ್ಯಮದ ಬೆಳವಣಿಗೆ ಒಂದು ಹಂತದ ನಂತರ ಬೆಂಗಳೂರು, ಹೈದರಾಬಾದಿನಂಥ ನಗರಗಳಿಂದಲೇ ಪ್ರತಿಭೆಗಳನ್ನು ಆಕರ್ಷಿಸೀತು ಎಂದೇನಿಲ್ಲ. ಬದಲಿಗೆ, ಅಸ್ಸಾಂ, ತ್ರಿಪುರದಂಥ ರಾಜ್ಯಗಳ ಯುವಕರಿಗೆ ಎಐ ವಿಭಾಗದಲ್ಲಿ ಕೆಲಸ ಮಾಡಲು ಇಂಡೋನೇಷ್ಯ, ವಿಯೆಟ್ನಾಂ, ಮಲೇಷ್ಯ ಇತ್ಯಾದಿಗಳ ಬಾಗಿಲುಗಳು ತೆರೆದುಕೊಂಡಾವು. 

ಹಾಗೊಮ್ಮೆ ಇಂಡೋನೇಷ್ಯ, ತೈಲ್ಯಾಂಡ್, ಮಲೇಷ್ಯಗಳು ಮೈಕ್ರೊಸಾಫ್ಟ್ ನ ಮುತುವರ್ಜಿಯಿಂದಾಗಿ ಭವಿಷ್ಯದ ಎಐ ಔದ್ಯಮಿಕ ಕೇಂದ್ರಗಳಾಗಿದ್ದೇ ಹೌದಾದಲ್ಲಿ, ಅಲ್ಲಿಗೆ ತೆರಳುವ ಭಾರತೀಯ ಪ್ರತಿಭೆಗಳಿಗೆ ಸಾಂಸ್ಕೃತಿಕ ರಾಯಭಾರಿಕೆಯ ಹೆಚ್ಚುವರಿ ಜವಾಬ್ದಾರಿ ಇದೆ. ಏಕೆಂದರೆ ಈಗ ಎಐ ಕೇಂದ್ರಗಳಾಗಲು ಹೊರಟಿರುವ ಈ ಮೂರೂ ದೇಶಗಳು ಭಾರತೀಯ ಅಥವಾ ಸನಾತನ ಎಂದು ಗುರುತಿಸಲಾಗುವ ಸಂಸ್ಕೃತಿಯೊಂದಿಗೆ ಸಂಬಂಧ-ಸಾಮ್ಯಗಳನ್ನು ಹೊಂದಿವೆ. ಇಂಡೋನೇಷ್ಯವು ಮುಸ್ಲಿಂ ಬಾಹುಳ್ಯದ ದೇಶವೇ ಆದರೂ ಅಲ್ಲಿ ಭಾರತೀಯವಾಗಿ ಧ್ವನಿಸುವ ಮೇಘವತಿ, ಸುಕರ್ಣೊ, ಗರುಡ ಮುಂತಾದ ಹೆಸರುಗಳಿವೆ. ಮಲೇಷ್ಯದಲ್ಲಿ ಭಾರತೀಯ ಮೂಲದವರ ಅದರಲ್ಲೂ ತಮಿಳರ ಪ್ರಾಬಲ್ಯ ತಿಳಿದಿರುವಂಥದ್ದೇ. ಇನ್ನು ತೈಲ್ಯಾಂಡ್ ಅಂತೂ ರಾಮಾಯಣಕ್ಕೆ ಹೋಲುವ ರಾಮಕೀನ್ ಎಂಬ ರಾಷ್ಟ್ರೀಯ ಮಹಾಕಾವ್ಯವನ್ನೇ ಹೊಂದಿದೆ. 

ಇಂಥ ಜಾಯಮಾನದ ಆಗ್ನೇಯ ಏಷ್ಯವು ಎಐ ಶಕ್ತಿಕೇಂದ್ರವಾಗುವುದಾದರೆ ಅದು ಭಾರತವು ಖುಷಿಪಡುವಂಥ ವಿಷಯವೇ. ಆದರೆ ಇತ್ತೀಚಿನ ವರ್ಷಗಳಲ್ಲಿ ಈ ಪ್ರಾಂತ್ಯದಲ್ಲಿ ಮತೀಯ ಕಟ್ಟರತನವು ಆಗೀಗ ಹೆಡೆಯಾಡಿಸುವ ಪ್ರಯತ್ನದಲ್ಲಿರುವುದೂ ಖರೆ. ಭಾರತೀಯರೇನಾದರೂ ಭವಿಷ್ಯದಲ್ಲಿ ಎಐ ಕಾರಣಕ್ಕೆ ಇಲ್ಲೆಲ್ಲ ಕೆಲಸ ಮಾಡುವ ಸಂದರ್ಭ ಬಂದರೆ ಭಾರತದೊಂದಿಗೆ ಆಗ್ನೇಯ ಏಷ್ಯವು ಹೊಂದಿದ್ದ ಸಾಂಸ್ಕೃತಿಕ ಐಡೆಂಟಿಟಿಯನ್ನು ಪುನರುಜ್ಜೀವಿಸುವ ಪ್ರಯತ್ನದಲ್ಲಿ ಭಾಗಿಯಾಗುತ್ತ ಅಲ್ಲಿನ ಕಟ್ಟರ್ ಮಾನಸಿಕತೆಗಳನ್ನು ಶಾಂತಗೊಳಿಸುವ ಸವಾಲನ್ನೂ ತೊಡಬೇಕಾಗುತ್ತದೆ.

-ಚೈತನ್ಯ ಹೆಗಡೆ

cchegde@gmail.com

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಇದು ಕೇವಲ ಧ್ವಜವಲ್ಲ ಭಾರತೀಯ ನಾಗರಿಕತೆಯ ಪುನರ್‌ ಜಾಗೃತಿಯ ಧ್ವಜ, ಶತಮಾನಗಳಷ್ಟು ಹಳೆಯ ಗಾಯ ಈಗ ವಾಸಿಯಾಗುತ್ತಿದೆ: ಪ್ರಧಾನಿ ಮೋದಿ

ಅಯೋಧ್ಯೆ ರಾಮ ಮಂದಿರ ನಿರ್ಮಾಣ ಪೂರ್ಣ: ರಾಮ-ಸೀತೆ ವಿವಾಹ ಪರ್ವದಂದೇ ದೇಗುಲದ ಶಿಖರದ ಮೇಲೆ ಧ್ವಜಾರೋಹಣ ನೆರವೇರಿಸಿದ ಪ್ರಧಾನಿ ಮೋದಿ

"Misfit For Army": ಗುರುದ್ವಾರ ಪ್ರವೇಶಿಸಲು ನಿರಾಕರಣೆ; ಕ್ರಿಶ್ಚಿಯನ್ ಸೇನಾ ಅಧಿಕಾರಿಗೆ ಸುಪ್ರೀಂ ಕೋರ್ಟ್ ತರಾಟೆ!

ಭ್ರಷ್ಟರಿಗೆ ಬೆಳ್ಳಂಬೆಳಗ್ಗೆ ಲೋಕಾಯುಕ್ತ ಶಾಕ್: ಏಕ ಕಾಲದಲ್ಲಿ ರಾಜ್ಯದ 10 ಕಡೆ ದಾಳಿ- ಪರಿಶೀಲನೆ

WPL 2026 auction: ಈ ಬಾರಿಯ 'ಮೋಸ್ಟ್ ಡಿಮ್ಯಾಂಡ್' ಆಟಗಾರ್ತಿ ಯಾರು?

SCROLL FOR NEXT