Limit 
ಅಂಕಣಗಳು

Liver ಅಥವಾ ಯಕೃತ್ತಿನ ಆರೋಗ್ಯ (ಕುಶಲವೇ ಕ್ಷೇಮವೇ)

ಸರಿಯಿಲ್ಲದ ಆಹಾರ ಪದ್ಧತಿ, ಅತಿಯಾದ ಮದ್ಯಪಾನ, ಜಡ ಜೀವನಶೈಲಿ, ಬೊಜ್ಜು ಮತ್ತು ಕೆಲವು ವೈರಲ್ ಸೋಂಕುಗಳು ಯಕೃತ್ತಿಗೆ ಹಾನಿ ಮಾಡುತ್ತವೆ.

ಇತ್ತೀಚೆಗಷ್ಟೇ ಏಪ್ರಿಲ್ 19ರಂದು ವಿಶ್ವ ಯಕೃತ್ (ಲಿವರ್) ದಿನಾಚರಣೆಯನ್ನು ಆಚರಿಸಲಾಯಿತು. ಯಕೃತ್ತಿನ ಆರೋಗ್ಯವನ್ನು ಕಾಪಾಡಿಕೊಳ್ಳುವ ಮತ್ತು ಮತ್ತು ಅದಕ್ಕೆ ತಗುಲುವ ಕಾಯಿಲೆಗಳನ್ನು ತಡೆಗಟ್ಟುವ ಮಹತ್ವದ ಬಗ್ಗೆ ಜಾಗೃತಿ ಮೂಡಿಸಲು ಈ ದಿನವನ್ನು ಆಚರಿಸುತ್ತಾರೆ. ಈ ವರ್ಷದ ವಿಶ್ವ ಯಕೃತ್ ದಿನ ಘೋಷವಾಕ್ಯ ‘ಆಹಾರವೇ ಔಷಧಿ’. ಅಂದರೆ ಸಮತೋಲಿತ ಆರೋಗ್ಯಕರ ಆಹಾರ ಸೇವನೆಯ ಮೂಲಕ ಯಕೃತ್ತಿನ ಆರೋಗ್ಯವನ್ನು ಸರಿಯಾಗಿ ಕಾಪಾಡಿಕೊಳ್ಳಬಹುದು ಎಂಬ ಸಂದೇಶವನ್ನು ಜನರಲ್ಲಿ ಈ ಸಂದರ್ಭದಲ್ಲಿ ಮೂಡಿಸಲಾಯಿತು.

Liver ಅಂಗದ ಕಾರ್ಯವನ್ನು ತಿಳಿದುಕೊಳ್ಳಿ

ಯಕೃತ್ತು ಮಾನವ ದೇಹದ ಪ್ರಮುಖ ಅಂಗಗಳಲ್ಲಿ ಒಂದಾಗಿದೆ, ಯಕೃತ್ತು ನಮ್ಮ ಒಟ್ಟಾರೆ ಆರೋಗ್ಯವನ್ನು ಕಾಪಾಡಿಕೊಳ್ಳುವಲ್ಲಿ ಪ್ರಮುಖ ಪಾತ್ರ ವಹಿಸುವುದರಿಂದ ಇದನ್ನು ಸಾಮಾನ್ಯವಾಗಿ "ಎಂಜಿನ್ ರೂಮ್" ಎಂದು ಕರೆಯಲಾಗುತ್ತದೆ. ಇದು ರಕ್ತದಿಂದ ವಿಷವನ್ನು ಶೋಧಿಸುವುದು, ಪಿತ್ತರಸ ಉತ್ಪಾದನೆಯ ಮೂಲಕ ಜೀರ್ಣಕ್ರಿಯೆಗೆ ಸಹಾಯ ಮಾಡುವುದು, ರಕ್ತದಲ್ಲಿನ ಸಕ್ಕರೆ ಮತ್ತು ಕೊಲೆಸ್ಟ್ರಾಲ್ ಮಟ್ಟವನ್ನು ನಿಯಂತ್ರಿಸುವುದು, ಅಗತ್ಯ ಪೋಷಕಾಂಶಗಳನ್ನು ಸಂಗ್ರಹಿಸುವುದು ಮತ್ತು ದೇಹವು ಸೋಂಕುಗಳ ವಿರುದ್ಧ ಹೋರಾಡಲು ಸಹಾಯ ಮಾಡುವುದು ಸೇರಿದಂತೆ 500ಕ್ಕೂ ಹೆಚ್ಚು ಪ್ರಮುಖ ಕಾರ್ಯಗಳನ್ನು ಯಕೃತ್ತು ನಿರ್ವಹಿಸುತ್ತದೆ.

ಆರೋಗ್ಯಕರ ಮತ್ತು ಸಕ್ರಿಯ ಜೀವನವನ್ನು ನಡೆಸಲು ಯಕೃತ್ತಿನ ಆರೋಗ್ಯವನ್ನು ಕಾಪಾಡಿಕೊಳ್ಳುವುದು ಅತ್ಯಗತ್ಯ. ಸರಿಯಿಲ್ಲದ ಆಹಾರ ಪದ್ಧತಿ, ಅತಿಯಾದ ಮದ್ಯಪಾನ, ಜಡ ಜೀವನಶೈಲಿ, ಬೊಜ್ಜು ಮತ್ತು ಕೆಲವು ವೈರಲ್ ಸೋಂಕುಗಳು ಯಕೃತ್ತಿಗೆ ಹಾನಿ ಮಾಡುತ್ತವೆ ಮತ್ತು ಫ್ಯಾಟಿ ಲಿವರ್, ಹೆಪಟೈಟಿಸ್, ಸಿರೋಸಿಸ್ ಅಥವಾ ಯಕೃತ್ತಿನ ಕ್ಯಾನ್ಸರಿನಂತಹ ಗಂಭೀರ ಸಮಸ್ಯೆಗಳಿಗೆ ಕಾರಣವಾಗಬಹುದು.

ವೈರಲ್ ಸೋಂಕುಗಳು, ಜೀವನಶೈಲಿಯ ಬದಲಾವಣೆಗಳು, ಮದ್ಯ ಸೇವನೆ ಮತ್ತು ಆನುವಂಶಿಕ ಪ್ರವೃತ್ತಿಗಳು ಸೇರಿದಂತೆ ಅನೇಜ ಅಂಶಗಳ ಕಾರಣದಿಂದಾಗಿ ಭಾರತೀಯರು ಯಕೃತ್ತಿನ ಕಾಯಿಲೆಗಳ ಆತಂಕವನ್ನು ಎದುರಿಸುತ್ತಿದ್ದಾರೆ. ಯಕೃತ್ತಿಗೆ ಎದುರಾಗುವ ಸಾಮಾನ್ಯ ಕಾಯಿಲೆಗಳು ಹೀಗಿವೆ:

ಯಕೃತ್ತಿಗೆ ಸಂಬಂಧಿಸಿದ ಕಾಯಿಲೆಗಳು

ಹೆಪಟೈಟಿಸ್ ಬಿ ಮತ್ತು ಸಿ: ಇವು ಯಕೃತ್ತಿನ ಮೇಲೆ ಪರಿಣಾಮ ಬೀರುವ ವೈರಲ್ ಸೋಂಕುಗಳು ಮತ್ತು ಇವುಗಳಿಗೆ ಸರಿಯಾಗಿ ಚಿಕಿತ್ಸೆ ನೀಡದಿದ್ದರೆ ದೀರ್ಘಕಾಲದ ಯಕೃತ್ತಿನ ಕಾಯಿಲೆ, ಸಿರೋಸಿಸ್ ಮತ್ತು ಯಕೃತ್ತಿನ ಕ್ಯಾನ್ಸರ್ಗೆ ಕಾರಣವಾಗಬಹುದು. ಹೆಪಟೈಟಿಸ್ ಬಿ ಲಸಿಕೆ-ತಡೆಗಟ್ಟಬಹುದಾದ ಕಾಯಿಲೆಯಾಗಿದೆ. ಹೆಪಟೈಟಿಸ್ ಸಿ ರೋಗಕ್ಕೆ ಈಗ ಆಂಟಿವೈರಲ್ ಔಷಧಿಗಳೊಂದಿಗೆ ಚಿಕಿತ್ಸೆ ನೀಡಬಹುದು.

ಫ್ಯಾಟಿ ಲಿವರ್: ಇದರಲ್ಲಿ ಎರಡು ವಿಧಗಳಿವೆ. ಮೊದಲನೆಯದು ಆಲ್ಕೊಹಾಲ್ ಇಲ್ಲದ ಕೊಬ್ಬಿನ ಯಕೃತ್ತಿನ ಕಾಯಿಲೆ. ಇದು ಬೊಜ್ಜು, ಮಧುಮೇಹ ಮತ್ತು ಜಡ ಜೀವನಶೈಲಿ ಹೊಂದಿರುವ ಜನರಲ್ಲಿ ಸಾಮಾನ್ಯವಾಗಿದೆ. ಇದನ್ನು ಈಗ ನಗರ ಭಾರತದಲ್ಲಿ ಬೆಳೆಯುತ್ತಿರುವ ಸಾಂಕ್ರಾಮಿಕ ರೋಗವೆಂದು ಪರಿಗಣಿಸಲಾಗಿದೆ. ಇನ್ನು ಎರಡನೆಯ ವಿಧವೆಂದರೆ ಆಲ್ಕೊಹಾಲುಯುಕ್ತ ಕೊಬ್ಬಿನ ಯಕೃತ್ತಿನ ಕಾಯಿಲೆ. ಇದು ಅತಿಯಾದ ಮದ್ಯ ಸೇವನೆಯಿಂದ ಈ ಕಾಯಿಲೆಯು ಬರುತ್ತದೆ. ನಿಧಾನವಾಗಿ ಇದು ಆಲ್ಕೊಹಾಲ್ಯುಕ್ತ ಹೆಪಟೈಟಿಸ್ ಮತ್ತು ಸಿರೋಸಿಸ್ ಆಗಿ ಬದಲಾಗಬಹುದು.

ಲಿವರ್ ಸಿರೋಸಿಸ್: ಇದು ಆರೋಗ್ಯಕರ ಯಕೃತ್ತಿನ ಅಂಗಾAಶವನ್ನು ಗಾಯದ ಅಂಗಾAಶದಿAದ ಬದಲಾಯಿಸುವ ರೋಗವಾಗಿದೆ. ಇದು ದೀರ್ಘಕಾಲ ಮದ್ಯಸೇವನೆ, ಹೆಪಟೈಟಿಸ್ ಅಥವಾ ಕೊಬ್ಬಿನ ಲಿವರ್ ಕಾಯಿಲೆಯ ಪರಿಣಾಮವಾಗಿ ಕಂಡುಬರುತ್ತದೆ. ಗಂಭೀರ ಪರಿಸ್ಥಿತಿಗಳಲ್ಲಿ ಇದು ಯಕೃತ್ತಿನ ವೈಫಲ್ಯಕ್ಕೆ ಕಾರಣವಾಗಬಹುದು.

ಲಿವರ್ ಕ್ಯಾನ್ಸರ್: ಸಾಮಾನ್ಯವಾಗಿ ಸಿರೋಸಿಸ್ ಅಥವಾ ದೀರ್ಘಕಾಲದ ಹೆಪಟೈಟಿಸ್ ಬಿ/ಸಿ ಸೋಂಕಿನ ತೊಡಕಿನಿಂದ ಗಂಭೀರ ಮತ್ತು ಮಾರಕ ಲಿವರ್ ಕ್ಯಾನ್ಸರ್ ಕಾಣಿಸಿಕೊಳ್ಳಬಹುದು.

ವಿಲ್ಸನ್ ಕಾಯಿಲೆ ಮತ್ತು ಹಿಮೋಕ್ರೊಮಾಟೋಸಿಸ್: ಇವು ಅಪರೂಪದ ಆನುವಂಶಿಕ ಕಾಯಿಲೆಗಳಾಗಿದ್ದು, ದೇಹದಲ್ಲಿ ತಾಮ್ರ ಅಥವಾ ಕಬ್ಬಿಣದ ಅಸಹಜ ಶೇಖರಣೆಯಿಂದಾಗಿ ಯಕೃತ್ತಿನ ಕಾರ್ಯದ ಮೇಲೆ ಪರಿಣಾಮ ಬೀರುತ್ತವೆ.

ಹೆಪಟೈಟಿಸ್ ರೋಗನಿರ್ಣಯ, ಚಿಕಿತ್ಸೆ ಬಹಳ ಮುಖ್ಯ

ಮಧುಮೇಹ, ಬೊಜ್ಜು ಅಥವಾ ಯಕೃತ್ತಿನ ಸಮಸ್ಯೆಗಳ ಇತಿಹಾಸದಂತಹ ಅಪಾಯಕಾರಿ ಅಂಶಗಳನ್ನು ಹೊಂದಿರುವ ಜನರು ನಿಯಮಿತವಾಗಿ ಯಕೃತ್ತಿನ ಪರೀಕ್ಷೆಗಳಿಗೆ ಒಳಗಾಗಬೇಕು. ಹೆಪಟೈಟಿಸ್ ಬಿ ಅಥವಾ ಸಿ ಯ ಆರಂಭಿಕ ರೋಗನಿರ್ಣಯವು ಬಹಳ ಮುಖ್ಯ. ಮೊದಲೇ ಈ ಸಮಸ್ಯೆಗಳನ್ನು ಪತ್ತೆ ಹಚ್ಚಿದರೆ ಚಿಕಿತ್ಸೆ ಸುಲಭ.

ಹೆಪಟೈಟಿಸ್ ಬಿ ಲಸಿಕೆ ಇಂದು ವ್ಯಾಪಕವಾಗಿ ಲಭ್ಯವಿದೆ ಮತ್ತು ಭಾರತದ ಸಾರ್ವತ್ರಿಕ ರೋಗನಿರೋಧಕ ಕಾರ್ಯಕ್ರಮದ ಭಾಗವಾಗಿದೆ. ಹೆಪಟೈಟಿಸ್ ಸಿ ರೋಗಕ್ಕೆ ಯಾವುದೇ ಲಸಿಕೆ ಇಲ್ಲ. ಆದರೂ ಆರಂಭದಲ್ಲಿಯೇ ಇದು ಪತ್ತೆಯಾದರೆ ಸೂಕ್ತ ಚಿಕಿತ್ಸೆಯ ಮೂಲಕ ತೊಡಕುಗಳನ್ನು ತಡೆಯಬಹುದು. ಆಂಟಿವೈರಲ್ ಔಷಧಗಳು ಹೆಪಟೈಟಿಸ್ ಬಿ ರೋಗವನ್ನು ನಿಯಂತ್ರಿಸುವಲ್ಲಿ ಮತ್ತು ಹೆಪಟೈಟಿಸ್ ಸಿ ಅನ್ನು ಗುಣಪಡಿಸುವಲ್ಲಿ ಪರಿಣಾಮಕಾರಿಯಾಗಿದೆ. ಲಿವರ್ ಸಿರೋಸಿಸ್ನ ಲಕ್ಷಣಗಳು ಮತ್ತು ತೊಡಕುಗಳನ್ನು ನಿರ್ವಹಿಸಲು ಔಷಧಿಗಳು ಲಭ್ಯವಿದೆ.

ಕೊನೆಯ ಹಂತದ ಯಕೃತ್ತಿನ ಕಾಯಿಲೆ ಅಥವಾ ಯಕೃತ್ತು ವೈಫಲ್ಯದ ಸಂದರ್ಭಗಳಲ್ಲಿ, ಯಕೃತ್ತು ಕಸಿ ಮಾತ್ರ ಜೀವ ಉಳಿಸುವ ಚಿಕಿತ್ಸೆಯಾಗಿರಬಹುದು. ಭಾರತದಲ್ಲಿ ನುರಿತ ಕಸಿ ಕೇಂದ್ರಗಳ ಸಂಖ್ಯೆ ಹೆಚ್ಚುತ್ತಿದೆ, ಆದರೂ ಅಂಗಾಂಗ ದಾನದ ಬಗ್ಗೆ ಜಾಗೃತಿಯನ್ನು ಜನರಲ್ಲಿ ಇನ್ನೂ ಹೆಚ್ಚಾಗಿ ಮೂಡಿಸಬೇಕಿದೆ.

ಯಕೃತ್ತಿನ ಕಾಯಿಲೆಗಳನ್ನು ತಡೆಗಟ್ಟುವುದು ಹೇಗೆ?

ಯಕೃತ್ತಿನ ಕಾಯಿಲೆಗಳನ್ನು ತಡೆಗಟ್ಟಲು ಜೀವನಶೈಲಿಯ ಬದಲಾವಣೆಗಳನ್ನು ಮಾಡಿಕೊಳ್ಳುವುದು ಬಹಳ ಮುಖ್ಯ. ಕೊಬ್ಬಿನಂಶ ಕಡಿಮೆ ಇರುವ ಆರೋಗ್ಯಕರ ಆಹಾರ, ಹಣ್ಣುಗಳು, ತರಕಾರಿಗಳು, ಧಾನ್ಯಗಳು ಮತ್ತು ಪ್ರೋಟೀನ್ಗಳಲ್ಲಿ ಸಮೃದ್ಧವಾಗಿರುವ ಆಹಾರವು ಯಕೃತ್ತಿನ ಆರೋಗ್ಯಕ್ಕೆ ಸಹಾಯಕಾರಿಯಾಗಿವೆ.

ಬೊಜ್ಜು ನಮ್ಮ ಆರೋಗ್ಯಕ್ಕೆ ಪ್ರಮುಖ ಅಪಾಯಕಾರಿ ಅಂಶವಾಗಿದೆ. ನಿಯಮಿತ ವ್ಯಾಯಾಮ ಮತ್ತು ಸಮತೋಲಿತ ಆಹಾರವು ಆರೋಗ್ಯಕರ ತೂಕವನ್ನು ಕಾಪಾಡಿಕೊಳ್ಳಲು ಸಹಾಯ ಮಾಡುತ್ತದೆ. ಮದ್ಯ ಪಾನ ಸೇವನೆ ಆರೋಗ್ಯಕ್ಕೆ ಒಳ್ಳೆಯದಲ್ಲ.ಅದನ್ನು ಬಿಡುವುದೇ ಒಳಿತು. ಇದರಿಂದ ಯಕೃತ್ತಿನ ಆರೋಗ್ಯ ಚೆನ್ನಾಗಿರುತ್ತದೆ.

ಒಟ್ಟಾರೆಯಾಗಿ ಹೇಳುವುದಾದರೆ ವಿಶ್ವ ಯಕೃತ್ ದಿನಾಚರಣೆಯು ಯಕೃತ್ತಿನ ಆರೋಗ್ಯವನ್ನು ಹಗುರವಾಗಿ ಪರಿಗಣಿಸಬಾರದು ಎಂಬುದನ್ನು ಪ್ರತಿ ವರ್ಷ ನೆನಪಿಸುತ್ತದೆ. ಭಾರತದಲ್ಲಿ ಜೀವನಶೈಲಿ ಕಾಯಿಲೆಗಳು ಹೆಚ್ಚುತ್ತಿರುವ ಕಾರಣ, ನಿಯಮಿತ ತಪಾಸಣೆ, ಆರೋಗ್ಯಕರ ತೂಕವನ್ನು ಕಾಪಾಡಿಕೊಳ್ಳುವುದು, ಮಧುಮೇಹವನ್ನು ನಿಯಂತ್ರಿಸುವುದು ಮತ್ತು ಮದ್ಯಪಾನವನ್ನು ಬಿಡುವುದು ಮುಂತಾದ ಕ್ರಮಗಳು ಯಕೃತ್ತಿನ ಕಾರ್ಯವನ್ನು ಕಾಪಾಡುವಲ್ಲಿ ಪ್ರಮುಖ ಪಾತ್ರ ವಹಿಸುತ್ತವೆ.


Dr Vasundhara Bhupathi

ಡಾ. ವಸುಂಧರಾ ಭೂಪತಿ
ಮೊ: 9986840477
ಇ-ಮೇಲ್ : bhupathivasundhara@gmail.com

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

'ಸದನದಲ್ಲಿ ಹುಲಿ, ಹೈಕಮಾಂಡ್‌ ಮುಂದೆ ಇಲಿ'.. 'ಅಧಿಕಾರದಲ್ಲಿ ಉಳಿಯಲು DK Shivakumar ಕ್ಷಮೆಯಾಚನೆ': BJP-JDS ಟೀಕಾ ಪ್ರಹಾರ!

RSS ಅನ್ನು ಯಾರೂ "ಸಮರ್ಥಿಸಿಕೊಳ್ಳಬಾರದು": ಡಿಕೆಶಿ ಕ್ಷಮೆಯಾಚನೆ ಸ್ವಾಗತಿಸಿದ ಬಿ.ಕೆ ಹರಿಪ್ರಸಾದ್

Indian Stock Market: ಸತತ ಕುಸಿತ, ಬರೊಬ್ಬರಿ ಶೇ.1ರಷ್ಟು ಕುಸಿದ Sensex, Nifty 50, ರೂಪಾಯಿ ಮೌಲ್ಯ ಇಳಿಕೆ!

'ನನ್ನ ಕುರ್ಚಿ'ಗೆ ಪ್ರಧಾನಿ ಮೋದಿ ಗೌರವ ನೀಡಬೇಕು: ಪಶ್ಚಿಮ ಬಂಗಾಳ ಸಿಎಂ ಮಮತಾ ಬ್ಯಾನರ್ಜಿ ಕಿಡಿ!

Indian Navy ಗೆ ಮತ್ತಷ್ಟು ಬಲ: INS Udaygiri, INS Himgiri ಯುದ್ಧನೌಕೆಗಳು ಸೇರ್ಪಡೆ! Video

SCROLL FOR NEXT