ಸಚಿವ ಮಹದೇವಪ್ಪ- ನಾಲ್ವಡಿ ಕೃಷ್ಣರಾಜ ಒಡೆಯರ್- ಯತೀಂದ್ರ ಸಿದ್ದರಾಮಯ್ಯ online desk
ಅಂಕಣಗಳು

ರಾಜಕಾರಣಿಗಳ ಹಗುರ ಮಾತಿಗೆ ಕೊನೆ ಎಂದು...? (ನೇರ ನೋಟ)

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಪುತ್ರ, ವಿಧಾನಪರಿಷತ್‌ ಸದಸ್ಯ ಡಾ.ಯತೀಂದ್ರ ಸಿದ್ದರಾಮಯ್ಯ ಅವರು ನಾಲ್ವಡಿ ಕೃಷ್ಣರಾಜ ಒಡೆಯರ್‌ ಅವರಿಗಿಂತ ತಮ್ಮ ತಂದೆ ನಾಡಿಗೆ ಹೆಚ್ಚು ಕೆಲಸ ಮಾಡಿದ್ದಾರೆ ಎಂದು ಬಾಲಿಶವಾದ ಹೇಳಿಕೆ ನೀಡಿ ಅಪಹಾಸ್ಯಕ್ಕೆ ಗುರಿಯಾಗಿದ್ದರು.

ಈ ವಿವಾದ ನಿಜವಾಗಲೂ ಬೇಕಿರಲಿಲ್ಲ. ಸುಖಾಸುಮ್ಮನೇ ಮೈಮೇಲೆ ವಿವಾದ ಎಳೆದುಕೊಳ್ಳುವುದು ಎಂದರೆ ಇದೇನೇ.

ರಾಜ್ಯದ ಸಮಾಜ ಕಲ್ಯಾಣ ಇಲಾಖೆ ಡಾ.ಎಚ್.ಸಿ.ಮಹದೇವಪ್ಪ ಅವರು ಬೇಕಾಬಿಟ್ಟಿ ಮಾತಾಡುವ ಜಾಯಮಾನದವರಲ್ಲ. ಯೋಚಿಸಿ ಮಾತಾಡುವುದು ಅವರಿಗೆ ರೂಢಿಗತ. ಕೆಲವು ರಾಜಕಾರಣಿಗಳಂತೆ ಬೆಂಕಿ ಉಂಡೆಯ ಮಾತುಗಳನ್ನು ಅವರು ಆಡುವುದಿಲ್ಲ. ಮಾತಿನಿಂದಲೇ ವಿವಾದಕ್ಕೆ ಸಿಲುಕಿದವರೂ ಅಲ್ಲ. ಅವರೆಂದೂ ಸಂಯಮ ಮೀರಿ ವರ್ತಿಸಿದವರೂ ಅಲ್ಲ. ಆದರೆ, ಡಾ.ಮಹದೇವಪ್ಪ ಮೊನ್ನೆ ಮಾತಾಡುತ್ತಾ ಕೃಷ್ಣರಾಜ ಸಾಗರ ಜಲಾಶಯಕ್ಕೆ ಟಿಪ್ಪು ಸುಲ್ತಾನ್‌ ಅಸ್ತಿಭಾರ ಹಾಕಿದ್ದರು ಎಂದು ಸಮಾರಂಭವೊಂದರಲ್ಲಿ ನೀಡಿದ ಹೇಳಿಕೆ ಈಗ ವಿವಾದದ ವಸ್ತು.

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಪುತ್ರ, ವಿಧಾನಪರಿಷತ್‌ ಸದಸ್ಯ ಡಾ.ಯತೀಂದ್ರ ಸಿದ್ದರಾಮಯ್ಯ ಅವರು ನಾಲ್ವಡಿ ಕೃಷ್ಣರಾಜ ಒಡೆಯರ್‌ ಅವರಿಗಿಂತ ತಮ್ಮ ತಂದೆ ನಾಡಿಗೆ ಹೆಚ್ಚು ಕೆಲಸ ಮಾಡಿದ್ದಾರೆ ಎಂದು ಬಾಲಿಶವಾದ ಹೇಳಿಕೆ ನೀಡಿ ಅಪಹಾಸ್ಯಕ್ಕೆ ಗುರಿಯಾದರು. ಯತೀಂದ್ರರ ಮತಿಗೆಟ್ಟ ಹೇಳಿಕೆ ವಿವಾದದ ಅಲೆ ಎಬ್ಬಿಸಿತು. ಪ್ರತಿಭಟನೆ ಕೂಗು ಎದ್ದಿತು. ಈ ನಡುವೆಯೇ ಸಿದ್ದರಾಮಯ್ಯ ಅವರ ಆಪ್ತ, ಸಚಿವ ಡಾ.ಮಹದೇವಪ್ಪ ಅವರು ನಾಲ್ವಡಿ ಅವರ ಕುರಿತೇ ವಿವಾದಕ್ಕೆ ಒಳಗಾದರು. ಡಾ.ಯತೀಂದ್ರ ಅವರ ಹೇಳಿಕೆ ಸರಿಯಲ್ಲ ಎಂದು ಎರಡು ದಿನಗಳ ಮುನ್ನ ಹೇಳಿದ್ದ ಡಾ.ಮಹದೇವಪ್ಪ ಅವರೇ ಕೆ.ಆರ್.ಎಸ್.ಜಲಾಶಯಕ್ಕೆ ಟಿಪ್ಪು ಸುಲ್ತಾನ್‌ ಹೆಸರು ಎಳೆದು ತಂದು ವಿನಾಕಾರಣ ವಿವಾದವನ್ನು ಮೈಮೇಲೆ ಎಳೆದುಕೊಂಡರು.

ಮಂಡ್ಯ ಜಿಲ್ಲೆ ಶ್ರೀರಂಗಪಟ್ಟಣ ತಾಲೂಕಿನ ಕೃಷ್ಣರಾಜಸಾಗರ ಜಲಾಶಯಕ್ಕೆ ಅಡಿಗಲ್ಲು ಹಾಕಿದ್ದು, ನಿರ್ಮಿಸಿದ್ದು ಮೈಸೂರು ಸಂಸ್ಥಾನವನ್ನು ಆಳಿದ ಯದುವಂಶದ ನಾಲ್ವಡಿ ಕೃಷ್ಣರಾಜ ಒಡೆಯರ್‌ ಎಂಬುದು ಎಲ್ಲರಿಗೂ ಗೊತ್ತಿರುವ ಸತ್ಯ. ದಾಖಲೆಗಳೂ ಸ್ಪಟಿಕ ಸ್ಪಷ್ಟ. ಆದರೆ, ನಾಲ್ವಡಿ ಅವರಿಗಿಂತ ಮುನ್ನ ಕೆ.ಆರ್.ಎಸ್. ಅಣೆಕಟ್ಟೆಗೆ ಅಡಿಗಲ್ಲು ಹಾಕಿದ್ದು ಟಿಪ್ಪು ಸುಲ್ತಾನ್‌ ಎಂಬುದು ಡಾ.ಮಹದೇವಪ್ಪ ಅವರ ವಾದ. ಅವರ ವಾದಕ್ಕೆ ಪೂರಕವಾದ ಅಂಶ ಅಣೆಕಟ್ಟೆಯ ದಕ್ಷಿಣ ದ್ವಾರದ ಪೂರ್ವಭಾಗದ ಗೋಡೆಯ ಮೇಲಿರುವ ಟಿಪ್ಪು ಸುಲ್ತಾನ್‌ ಭಾವಚಿತ್ರ ಸಹಿತ ಫಲಕ. ಈ ಫಲಕವನ್ನು ಯಾರು, ಯಾವಾಗ ಹಾಕಿಸಿದ್ದಾರೆ ಎಂಬ ಮಾಹಿತಿ ಸ್ಥಳೀಯ ಅಧಿಕಾರಿಗಳ ಬಳಿಯೂ ಲಭ್ಯವಿಲ್ಲ,

ಡಾ.ಮಹದೇವಪ್ಪ ಅವರ ಹೇಳಿಕೆಗೆ ಸಾರ್ವಜನಿಕ ವಲಯದಲ್ಲಿ ಪರ-ವಿರೋಧದ ಪ್ರತಿಕ್ರಿಯೆ ವ್ಯಕ್ತವಾಗಿದೆ. ಕೃಷ್ಣರಾಜ ಸಾಗರಕ್ಕೆ ಟಿಪ್ಪು ಸುಲ್ತಾನ್ ಸಾಗರ ಎಂದು ಮರುನಾಮಕರಣ ಮಾಡಲು ಕಾಂಗ್ರೆಸ್ ಹುನ್ನಾರ ನಡೆಸಿದೆ. ಇದಕ್ಕೆ ಸಚಿವ ಡಾ.ಮಹದೇವಪ್ಪ ಪೀಠಿಕೆ ಹಾಕಿದ್ದಾರೆ ಎಂಬುದು ವಿಧಾನಸಭೆ ಪ್ರತಿಪಕ್ಷ ನಾಯಕ ಆರ್.ಅಶೋಕ್ ಅವರ ಆರೋಪ. ತಮ್ಮ ಹೇಳಿಕೆ ಪ್ರತಿಭಟನೆಯ ಕಾವು ಪಡೆಯುತ್ತಿದ್ದಂತೆ ಡಾ.ಮಹದೇವಪ್ಪ ಸ್ವಲ್ಪ ಉಲ್ಟಾ ಹೊಡೆದರು.

ಕೆ.ಆರ್.ಎಸ್.ಅಣೆಕಟ್ಟೆಯನ್ನು ವಿನ್ಯಾಸಗೊಳಿಸಿದ್ದು, ನಿರ್ಮಿಸಿದ್ದು ಎಂಜಿನಿಯರುಗಳು ಹಾಗೂ ನಾಲ್ವಡಿ ಕೃಷ್ಣರಾಜ ಒಡೆಯರ್ ಮಾತ್ರ. ಇದನ್ನು ಅಲ್ಲಗಳೆಯಲು ಯಾರಿಂದಲೂ ಸಾಧ್ಯವಿಲ್ಲ. ಜಲಾಶಯ ನಿರ್ಮಿಸುವಾಗ ಒಂದು ಅಡಿಗಲ್ಲು ಸಿಕ್ಕಿದೆ. ಅದು ಪರ್ಷಿಯನ್ ಭಾಷೆಯಲ್ಲಿದೆ. ಜಲಾಶಯ ನಿರ್ಮಾಣಕ್ಕೆ 1794ರಲ್ಲಿ ಅಡಿಪಾಯ ಹಾಕಿದ್ದಾಗಿ ಉಲ್ಲೇಖವಿದೆ. ಉಳಿದ ವಿಚಾರವನ್ನು ಸಂಶೋಧಕರು ತಿಳಿಸಬೇಕು ಎಂದು ಸ್ಪಷ್ಟೀಕರಣದಲ್ಲಿ ಸಂಶೋಧಕರನ್ನು ಪ್ರಸ್ತಾಪಿಸಿ ವಿವಾದಕ್ಕೆ ತೆರೆ ಎಳೆಯುವ ಪ್ರಯತ್ನ ಮಾಡಿದರು.

ಟಿಪ್ಪು ಸುಲ್ತಾನ್‌ 1799ರಲ್ಲಿ ಬ್ರಿಟಿಷರ ವಿರುದ್ಧ ಹೋರಾಟದಲ್ಲಿ ಹುತಾತ್ಮರಾದರು. ಕೆ.ಆರ್.ಎಸ್‌. ಜಲಾಶಯ ನಿರ್ಮಾಣ 1911ರಲ್ಲಿ ಆರಂಭವಾಯಿತು. ಅಂದರೆ, ಟಿಪ್ಪು ಮಡಿದ 112 ವರ್ಷಗಳ ನಂತರ. ಮೈಸೂರು ಸಂಸ್ಥಾನದ ಮುಖ್ಯ ಎಂಜಿನಿಯರ್‌ ಸರ್‌ ಎಂ.ವಿಶ್ವೇಶ್ವರಯ್ಯ ಅವರು 1910ರಲ್ಲಿ ಜಲಾಶಯ ನಿರ್ಮಾಣದ ನೀಲನಕ್ಷೆ ತಯಾರಿಸಿದ್ದರು. ಹಣಕಾಸಿನ ಮುಗ್ಗಟ್ಟು ಎದುರಾಯಿತು. ಆಗ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರು ತಮ್ಮ ಖಾಸಗಿ ಭಂಡಾರದಲ್ಲಿದ್ದ ಚಿನ್ನಾಭರಣ ಮತ್ತು ವಜ್ರ ವೈಢೂರ್ಯಗಳನ್ನು ಮುಂಬೈ ಮಾರುಕಟ್ಟೆಯಲ್ಲಿ ಮಾರಾಟ ಮಾಡಿ ಬಂದ ಹಣವನ್ನು ಅಣೆಕಟ್ಟೆಯ ನಿರ್ಮಾಣ ಕಾರ್ಯಕ್ಕೆ ಬಳಸಿದರು. ಇಲ್ಲಿ ನಾಲ್ವಡಿ ಕೃಷ್ಣರಾಜ ಒಡೆಯರ್‌, ರಾಜಮಾತೆ, ಮಹಾರಾಣಿಯರ ತ್ಯಾಗವನ್ನು ನಾಡು ಸದಾ ಸ್ಮರಿಸಬೇಕು. ಜಲಾಶಯ ನಿರ್ಮಾಣ ಕಾರ್ಯ ಮುಗಿದಿದ್ದು 1931ರಲ್ಲಿ. ಹೀಗಿರುವಾಗ ಟಿಪ್ಪು ಸುಲ್ತಾನ್‌ ಕೆ.ಆರ್.ಎಸ್.ಅಣೆಕಟ್ಟೆಗೆ ಅಸ್ತಿಭಾರ ಹಾಕಿದ್ದ ಎಂಬ ಮಾತು ಸರಿಯಲ್ಲ. ಕೆ.ಆರ್.ಎಸ್‌.ಜಲಾಶಯ ನಿರ್ಮಾಣಕ್ಕೆ ಟಿಪ್ಪು ಅಡಿಗಲ್ಲು ಹಾಕಿದ್ದ ಎನ್ನಲು ಸಾಕ್ಷಿಗಳೇನು? ಕೆ.ಆರ್.ಎಸ್‌. ಯೋಜನೆಯೇ ಬೇರೆ, ಟಿಪ್ಪುವಿನ ಪ್ರಯತ್ನವೇ ಬೇರೆಯಲ್ಲವೇ? ಹೀಗಿರುವಾಗ ಟಿಪ್ಪು ಹೆಸರಿನ ಪ್ರಸ್ತಾಪ ಕೆ.ಆರ್‌.ಎಸ್‌.ಜಲಾಶಯಕ್ಕೆ ಏಕೆ? ಇದರ ಹಿಂದಿನ ಹುನ್ನಾರವೇನು?

ಮೈಸೂರು ಸಂಸ್ಥಾನದ ಮಹಾರಾಜರ ಬಗ್ಗೆ ಕಾಂಗ್ರೆಸ್ಸಿನ ಕೆಲವು ನಾಯಕರು ಆಗಾಗ್ಗೆ ವಿವಾದಾತ್ಮಕ ಹೇಳಿಕೆ ನೀಡಿ ಸಾರ್ವಜನಿಕರ ಭಾವನೆಗಳಿಗೆ ಧಕ್ಕೆ ಉಂಟು ಮಾಡುವ ಕೆಲಸ ನಡೆದಿದೆ. ಕೆಲವು ವರ್ಷಗಳ ಹಿಂದೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತಮ್ಮ ಬೆಂಬಲಿಗರೊಂದಿಗೆ ಹರಟೆ ಹೊಡೆಯುತ್ತಾ ಮೈಸೂರಿನ ಮಹಾರಾಜರ ಬಗ್ಗೆ ಲಘುವಾಗಿ ಮಾತಾಡಿದ ವಿಡಿಯೋ ವೈರಲ್‌ ಆಗಿತ್ತು. ಈಗ ಸಚಿವ ಡಾ.ಮಹದೇವಪ್ಪ ಅವರ ಸರದಿ.

ನಾಲ್ವಡಿ ಅವರ ವಿಚಾರದಲ್ಲಿ ಕಳೆದ ಒಂದು ವಾರದಲ್ಲಿ ಕಾಂಗ್ರೆಸ್‌ ನಾಯಕರ ವಿವಾದಾತ್ಮಕ ಹೇಳಿಕೆ ಇದು ಎರಡನೆಯದು. ಸಿದ್ದರಾಮಯ್ಯ ಅವರ ಪುತ್ರ, ವಿಧಾನಪರಿಷತ್‌ ಸದಸ್ಯ ಡಾ.ಯತೀಂದ್ರ ಸಿದ್ದರಾಮಯ್ಯ ಮೊನ್ನೆಯಷ್ಟೇ ಮೈಸೂರಿಗೆ ನಾಲ್ವಡಿ ಕೃಷ್ಣರಾಜ ಒಡೆಯರ್‌ ಅವರಿಗಿಂತಲೂ ಹೆಚ್ಚಾಗಿ ತಮ್ಮ ತಂದೆ ಸಿದ್ದರಾಮಯ್ಯ ಕೆಲಸ ಮಾಡಿದ್ದಾರೆ ಎಂದು ಹೇಳಿ ಟೀಕೆಗೆ ತುತ್ತಾದರು. ವಿವಾದವೆದ್ದಾಗ ತಮ್ಮ ಹೇಳಿಕೆಯನ್ನು ಸಮರ್ಥಿಸಿಕೊಳ್ಳಲು ಹೋಗಿ ಎಡವಟ್ಟು ಮಾಡಿಕೊಂಡರು. ನಾಲ್ವಡಿ ಕೃಷ್ಣರಾಜ ಒಡೆಯರ್ ಅವರು ಮೈಸೂರಿಗಷ್ಟೇ ಒಳ್ಳೆಯದು ಮಾಡಿದ್ದರು. ಸಿದ್ದರಾಮಯ್ಯ ಇಡೀ ಕರ್ನಾಟಕಕ್ಕೆ ಒಳ್ಳೆಯದು ಮಾಡಿದ್ದಾರೆ ಎಂದು ಹೇಳಿ ಅಪಹಾಸ್ಯಕ್ಕೆ ಈಡಾದರು. ಸಿದ್ದರಾಮಯ್ಯ ಅವರು ಈ ಕ್ಷಣದವರೆಗೂ ತಮ್ಮ ಪುತ್ರ ಡಾ.ಯತೀಂದ್ರ ಹೇಳಿಕೆ ಸರಿಯಲ್ಲ ಎಂದು ಹೇಳಲಿಲ್ಲ. ಮಗನ ಹೇಳಿಕೆ ತಪ್ಪು ಎಂದು ಕಿವಿ ಹಿಂಡಿಲ್ಲ. ಡಾ.ಯತೀಂದ್ರ ಸಿದ್ದರಾಮಯ್ಯ ಅವರೂ ಕ್ಷಮೆ ಕೇಳುವ ಪ್ರಶ್ನೆಯೇ ಇಲ್ಲ ಎಂದು ದಾರ್ಷ್ಟ್ಯ ಪ್ರದರ್ಶಿಸಿದ್ದಾರೆ.

ಕೆ.ಆರ್.ಎಸ್‌.ಅಣೆಕಟ್ಟೆಯ ನಿಜ ನಿರ್ಮಾತೃರು ನಾಲ್ವಡಿ ಕೃಷ್ಣರಾಜ ಒಡೆಯರ್‌ ಇರುವಾಗ ಟಿಪ್ಪು ಪ್ರಸ್ತಾಪವೇ ಸರಿಯಲ್ಲ. ನಾಲ್ವಡಿ ಕೃಷ್ಣರಾಜ ಒಡೆಯರ್‌ ಹಾಗೂ ಸರ್‌ ಎಂ.ವಿಶ್ವೇಶ್ವರಯ್ಯ ಅವರ ಚಿಂತನೆಯ ಫಲವೇ ಕೆ.ಆರ್.ಎಸ್. ಜಲಾಶಯ. ಟಿಪ್ಪು ಜಲಾಶಯ ಕಟ್ಟಲು ಉದ್ದೇಶಿಸಿರಬಹುದು. ಆದರೆ, ಈಗಿರುವ ಕೆ.ಆರ್.ಎಸ್‌ ಗೂ ಟಿಪ್ಪುಗೂ ಯಾವುದೇ ಸಂಬಂಧವಿಲ್ಲ. ಇವತ್ತಿನ ಅಣೆಕಟ್ಟೆಗೆ ಟಿಪ್ಪು ಶಂಕುಸ್ಥಾಪನೆ ಮಾಡಿಯೂ ಇಲ್ಲ. ಹೀಗಿರುವಾಗ ಟಿಪ್ಪು ಹೆಸರಿನ ಪ್ರಸ್ತಾಪ ಏಕೆ?. ಇದರ ಉದ್ದೇಶವಾದರೂ ಏನು? ಟಿಪ್ಪುವಿಗಿಂತ ಮುಂಚೆಯೂ ಗಂಗರ ಕಾಲದಲ್ಲಿಯೂ ನೀರಾವರಿ ಯೋಜನೆಗೆ ಪ್ರಯತ್ನಗಳು ನಡೆದಿವೆ. ಹೀಗಿರುವಾಗ ಟಿಪ್ಪು ಒಬ್ಬರ ಹೆಸರನ್ನು ಮಾತ್ರ ಏಕೆ ಪ್ರಸ್ತಾಪಿಸಬೇಕು?

ಇತಿಹಾಸದ ಬಗ್ಗೆ ಮಾತಾಡುವುದನ್ನು ಇತಿಹಾಸಕಾರರಿಗೇ ಬಿಡಬೇಕು. ಸಂಶೋಧಕರ ಮಧ್ಯೆ ಅಕಾಡೆಮಿಕ್‌ ಆಗಿ ಚರ್ಚೆಗಳಾಗಬೇಕು. ರಾಜಕಾರಣಿಗಳು ಎಲ್ಲ ವಿಷಯಗಳಲ್ಲೂ ಮೂಗು ತೂರಿಸುವುದನ್ನು ಮೊದಲು ಕೈಬಿಡಬೇಕು.

ಕೂಡ್ಲಿ ಗುರುರಾಜ, ಹಿರಿಯ ಪತ್ರಕರ್ತರು

kudliguru@gmail.com

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಇಬ್ಬರು ಕೇಂದ್ರ ಸಚಿವರು ಸೇರಿದಂತೆ 75 ಸದಸ್ಯರ GBA ಸೆ. 2 ರಿಂದ ಅಸ್ತಿತ್ವಕ್ಕೆ: ಯತೀಂದ್ರ ಸಿದ್ದರಾಮಯ್ಯಗೂ ಸ್ಥಾನ!

ಜಮ್ಮುವಿನಾದ್ಯಂತ ಭಾರಿ ಮಳೆ: ಅಪಾರ ಪ್ರಮಾಣದ ಹಾನಿ, 10 ಮಂದಿ ಸಾವು: ಕೊಚ್ಚಿ ಹೋದ ರಸ್ತೆ, ಸೇತುವೆಗಳು!

ಫೈಟರ್ ಜೆಟ್‌ ಇಂಜಿನ್ ಖರೀದಿ: ಅಮೆರಿಕಾದ GE ಸಂಸ್ಥೆಯೊಂದಿಗೆ $1 ಬಿಲಿಯನ್ ಮೊತ್ತದ ಒಪ್ಪಂದಕ್ಕೆ ಭಾರತ ಸಿದ್ಧತೆ!

ಡಿಕೆಶಿ ಕ್ಷಮೆ ಕೇಳಬಾರದಿತ್ತು; ಮುಲಾಜಿಲ್ಲದೆ ಕಾಂಗ್ರೆಸ್ ಪಕ್ಷದ ಸದಸ್ಯತ್ವಕ್ಕೆ ರಾಜೀನಾಮೆ ಬಿಸಾಕಬೇಕಿತ್ತು- ಆರ್. ಅಶೋಕ್

ಸುಂಕ ಸಮರ: Trump 4 ಬಾರಿ ಕರೆ ಮಾಡಿದರೂ ಉತ್ತರಿಸದ PM Modi; ಅಮೆರಿಕ ನಿಯೋಗಕ್ಕೂ No Entry!

SCROLL FOR NEXT