ರಾಹುಲ್ ಗಾಂಧಿ- ಚುನಾವಣಾ ಅಯೋಗ online desk
ಅಂಕಣಗಳು

ಚುನಾವಣಾ ಆಯೋಗ ಮುಕ್ತ ಮನಸ್ಸಿನಿಂದ ಇರಲಿ... (ನೇರ ನೋಟ)

ಪ್ರಶ್ನೆ ಮಾಡುವುದೇ ತಪ್ಪು ಎಂಬ ರೀತಿ ಚುನಾವಣಾ ಆಯೋಗ ವರ್ತಿಸಬಾರದಲ್ಲವೇ? ಚುನಾವಣಾ ಆಯೋಗ ಹಾಗೂ ಪ್ರತಿಪಕ್ಷಗಳ ನಡುವಿನ ಈ ಸಂಘರ್ಷದಲ್ಲಿ ಚುನಾವಣಾ ಆಯೋಗದ ವಿಶ್ವಾಸಾರ್ಹತೆಯ ಬಗ್ಗೆ ಅನುಮಾನಗಳು ಏಳಬಾರದಲ್ಲವೇ?

ಇಲ್ಲಿ ಇಬ್ಬರದೂ ದ್ವಂದ್ವ ನಿಲುವು! ಪರಿಣಾಮ ಚುನಾವಣಾ ಆಯೋಗದ ವಿಶ್ವಾಸಾರ್ಹತೆಯ ಮೇಲೆಯೇ ಅನುಮಾನಗಳ ಹುತ್ತ...

ಲೋಕಸಭೆ ಪ್ರತಿಪಕ್ಷ ನಾಯಕ ರಾಹುಲ್‌ ಗಾಂಧಿ ಅವರು ಲೋಕಸಭೆ ಹಾಗೂ ಮಹಾರಾಷ್ಟ್ರದಲ್ಲಿ ನಡೆದ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿಯು ಚುನಾವಣಾ ಆಯೋಗದ ಜೊತೆ ಸೇರಿ ಮತಗಳ್ಳತನದಿಂದ ಜಯ ಸಾಧಿಸಿದೆ ಎಂದು ಗಂಭೀರ ಆರೋಪ ಮಾಡುತ್ತಾರೆ. ಮತದಾರರ ಪಟ್ಟಿಯ ದೋಷಗಳ ಬಗ್ಗೆ ಬೊಟ್ಟು ಮಾಡುತ್ತಾರೆ. ಆದರೆ, ತಮ್ಮ ಆರೋಪ ಕುರಿತು ಪ್ರಮಾಣಪತ್ರ ಸಲ್ಲಿಸಿ ಚುನಾವಣಾ ಆಯೋಗಕ್ಕೆ ದೂರು ಸಲ್ಲಿಸಲು ಸಿದ್ದರಿಲ್ಲ. ಬಿಹಾರದಲ್ಲಿ ಮತದಾರರ ಪಟ್ಟಿ ವಿಶೇಷ ಸಮಗ್ರ ಪರಿಷ್ಕರಣೆಗೆ ಚುನಾವಣಾ ಆಯೋಗ ಕ್ರಮ ಕೈಗೊಂಡು ಮತದಾರರ ಪಟ್ಟಿಯನ್ನು ಸ್ವಚ್ಛಗೊಳಿಸಲು ಹೊರಟರೆ ಇದನ್ನು ವಿರೋಧಿಸಿ ಮತ ಅಧಿಕಾರ ಯಾತ್ರೆ ನಡೆಸಿ ಚುನಾವಣಾ ಆಯೋಗದ ಮೇಲೆ ವಾಗ್ದಾಳಿ ನಡೆಸುತ್ತಾರೆ.

ಇತ್ತ ಚುನಾವಣಾ ಆಯೋಗವೂ ಅಷ್ಟೇ. ಬಿಹಾರದಲ್ಲಿ ಮತದಾರರ ಪಟ್ಟಿಯನ್ನು ಸ್ವಚ್ಛಗೊಳಿಸಲು ಶರವೇಗದಲ್ಲಿ ಸಾಗಿದೆ. ಆದರೆ, ದೇಶದಲ್ಲಿ ಮತದಾರರ ಪಟ್ಟಿಯಲ್ಲಿರುವ ದೋಷಗಳ ಬಗ್ಗೆ ಕೇಳಿ ಬಂದಿರುವ ಆರೋಪಗಳ ಬಗ್ಗೆ ಸ್ಪಷ್ಟೀಕರಣ ಕೊಡಲು ಮುಂದಾಗಿದೆ ವಿನಾ ವ್ಯವಸ್ಥೆ ಸರಿಪಡಿಸುವ ಮುಕ್ತ ಮನಸ್ಸನ್ನು ಪ್ರದರ್ಶಿಸುತ್ತಿಲ್ಲ. ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್‌ ಕುಮಾರ್ ಅವರು ಏಟಿಗೆ ಎದಿರೇಟು ಎಂಬಂತೆ ರಾಹುಲ್‌ ಗಾಂಧಿ ಅವರ ವಿರುದ್ಧ ಹರಿಹಾಯ್ದಿದ್ದಾರೆ. ತಮ್ಮ ಆರೋಪಗಳಿಗೆ ಏಳು ದಿನಗಳ ಒಳಗಾಗಿ ಅಧಿಕೃತವಾಗಿ ಪ್ರಮಾಣತ್ರ ಸಲ್ಲಿಸಿ, ಇಲ್ಲವೇ ದೇಶದ ಕ್ಷಮೆ ಕೇಳಿ ಎಂದಿದ್ದಾರೆ.

ಇದು ಒತ್ತಟ್ಟಿಗಿರಲಿ. ಪ್ರಶ್ನೆ ಮಾಡುವುದೇ ತಪ್ಪು ಎಂಬ ರೀತಿ ಚುನಾವಣಾ ಆಯೋಗ ವರ್ತಿಸಬಾರದಲ್ಲವೇ? ಚುನಾವಣಾ ಆಯೋಗ ಹಾಗೂ ಪ್ರತಿಪಕ್ಷಗಳ ನಡುವಿನ ಈ ಸಂಘರ್ಷದಲ್ಲಿ ಚುನಾವಣಾ ಆಯೋಗದ ವಿಶ್ವಾಸಾರ್ಹತೆಯ ಬಗ್ಗೆ ಅನುಮಾನಗಳು ಏಳಬಾರದಲ್ಲವೇ? ಇಬ್ಬರ ಮೇಲೆಯೂ ಇದರ ಹೊಣೆಗಾರಿಕೆ ಇದೆ.

ಇದು ಚುನಾವಣಾ ಆಯೋಗ ಹಾಗೂ ರಾಹುಲ್ ಗಾಂಧಿ ಅವರ ನಡುವಿನ ಸಂಘರ್ಷದ ಪ್ರಶ್ನೆಯಾಗಬಾರದು. ಚುನಾವಣಾ ಆಯೋಗ ಸಂವಿಧಾನಬದ್ಧ ಸಂಸ್ಥೆ ಎಂಬುದನ್ನು ಮರೆಯಬಾರದು. ದೇಶದಲ್ಲಿ ಚುನಾವಣೆ ನಡೆಸುವ ಚುನಾವಣಾ ಆಯೋಗವನ್ನೇ ವೋಟು ಚೋರಿ ಅಂತ ಲೋಕಸಭೆಯ ಪ್ರತಿಪಕ್ಷದ ನಾಯಕರೇ ದೂರಿದರೆ ಮತದಾರರ ಮೇಲೆ ಇದು ಬೀರುವ ಪರಿಣಾಮ ಏನು? ವಿರೋಧಪಕ್ಷಗಳ ಇಂಡಿಯಾ ಕೂಟವು ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್‌ ಕುಮಾರ್ ಅವರ ವಿರುದ್ಧ ಸಂಸತ್ತಿನಲ್ಲಿ ವಾಗ್ದಂಡನೆ ಗೊತ್ತುವಳಿ ಮಂಡಿಸಲು ಚಿಂತನೆ ನಡೆಸಿರುವುದು ಸಂಘರ್ಷವನ್ನು ಮತ್ತೊಂದು ಮಜಲಿಗೆ ಒಯ್ದಿದೆ.

ಇತ್ತ ಮಹಾರಾಷ್ಟ್ರ ವಿಧಾನಸಭೆ ಹಾಗೂ ಲೋಕಸಭಾ ಚುನಾವಣೆಯಲ್ಲಿ ಭಾರೀ ಅಕ್ರಮ ಕುರಿತು ಸಂದೇಹ ವ್ಯಕ್ತಪಡಿಸಿದ್ದ ಚುನಾವಣಾ ಅಂಕಿಅಂಶಗಳ ವಿಶ್ಲೇಷಕ ಸಂಜಯಕುಮಾರ್ ತಮ್ಮ ಪೋಸ್ಟ್‌ ಬಗ್ಗೆ ಕ್ಷಮೆಯಾಚಿಸಿರುವುದು ಹೊಸ ವಿದ್ಯಮಾನ. ತಮ್ಮ ಮೊದಲಿನ ಪೋಸ್ಟ್‌ ಹಿಂತೆಗೆದುಕೊಳ್ಳುವುದಾಗಿ ಹೇಳಿದ್ದಾರೆ. ಲೆಕ್ಕಾಚಾರದಲ್ಲಿ ತಪ್ಪಾಗಿದೆ. ಡೇಟಾವನ್ನು ನಮ್ಮ ತಂಡ ತಪ್ಪಾಗಿ ಓದಿದೆ. ತಪ್ಪು ಮಾಹಿತಿಯನ್ನು ಹರಡುವ ಯಾವ ಉದ್ದೇಶವೂ ನಮಗಿರಲಿಲ್ಲ ಎಂದು ಹೇಳಿದ್ದಾರೆ. ಇವರ ಪೋಸ್ಟ್‌ ಆಧರಿಸಿ ಕಾಂಗ್ರೆಸ್‌ ಪಕ್ಷವು ಚುನಾವಣಾ ಆಯೋಗದ ವಿರುದ್ಧ ತನ್ನ ಆರೋಪ ಪುನರುಚ್ಛರಿಸಿತ್ತು. ಈಗ ಕಾಂಗ್ರೆಸ್ಸಿಗೆ ಮುಖಭಂಗವಾಗಿದೆ.

ಚುನಾವಣಾ ಆಯೋಗ ಹಾಗೂ ರಾಜಕೀಯ ಪಕ್ಷಗಳ ನಡುವಿನ ಹಣಾಹಣಿ ಇದೇ ಮೊದಲೇನಲ್ಲ. ಈ ಹಿಂದೆ ಟಿ.ಎನ್.ಶೇಷನ್ ಅವರು 1990 ರಿಂದ 96ರ ವರೆಗೆ ಮುಖ್ಯ ಚುನಾವಣಾ ಆಯುಕ್ತರಾಗಿದ್ದಾಗ ಚುನಾವಣೆ ಕುರಿತು ಅನೇಕ ಮಹತ್ವದ ಸುಧಾರಣೆಗಳನ್ನು ಜಾರಿಗೆ ತಂದರು. ಆಗಲೂ ಇದನ್ನು ರಾಜಕೀಯ ಪಕ್ಷಗಳು ವಿರೋಧಿಸಿದ್ದವು. ಆದರೆ, ಶೇಷನ್‌ ಜಗ್ಗಲಿಲ್ಲ, ಹೆದರಲಿಲ್ಲ. ನಂತರ ಶೇಷನ್ ಅವರ ಚುನಾವಣಾ ಸುಧಾರಣೆಗಳನ್ನು ರಾಜಕೀಯ ನಾಯಕರು ಮೆಚ್ಚಿಕೊಂಡರೆಂಬ ಮಾತು ಬೇರೆ. ಇದರ ನಂತರವೂ ಚುನಾವಣಾ ಆಯೋಗವು ಅನೇಕ ಮಹತ್ವದ ಸುಧಾರಣೆಗಳನ್ನು ಜಾರಿಗೆ ತಂದಿದೆ.

ಕೇಂದ್ರ ಚುನಾವಣಾ ಆಯೋಗ ಬಿಹಾರದಲ್ಲಿ ಮಾತ್ರ ಮತದಾರರ ಪಟ್ಟಿ ವಿಶೇಷ ಸಮಗ್ರ ಪರಿಷ್ಕರಣೆಗೆ ಆಸಕ್ತಿ ತಳೆದು ಉಳಿದ ಕಡೆ ಮತದಾರರ ಪಟ್ಟಿಯ ದೋಷಗಳ ಕುರಿತು ನಿರ್ಲಕ್ಷ್ಯ ತಾಳುವುದು ಸರಿಯಲ್ಲ. ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್‌ ಕುಮಾರ್ ಅವರು ಮತದಾರರ ಪಟ್ಟಿ ದೋಷಗಳಿದ್ದರೆ ರಾಜಕೀಯ ಪಕ್ಷಗಳಿಗೆ ಇದನ್ನು ಸರಿಪಡಿಸಿಕೊಳ್ಳುವ ಅವಕಾಶ ಇದೆ. ಮತಪಟ್ಟಿ ಅಂತಿಮಗೊಳಿಸುವ ಮೊದಲು ಸರಿಪಡಿಸಿಕೊಳ್ಳಬೇಕಾಗುತ್ತದೆ ಎಂದಿದ್ದಾರೆ. ಇದು ನಿಜ. ಮತದಾರರ ಪಟ್ಟಿಯನ್ನು ಸಿದ್ದಪಡಿಸುವ ಎಲ್ಲ ಹಂತಗಳಲ್ಲಿ ರಾಜಕೀಯ ಪಕ್ಷಗಳು ಭಾಗಿಯಾಗುತ್ತವೆ. ಆದರೆ, ನಿರ್ದಿಷ್ಟ ಸಮಯದಲ್ಲಿ ಕೆಲವು ಬಾರಿ ಆಕ್ಷೇಪ ದಾಖಲಿಸುವುದಿಲ್ಲ. ನಂತರ ಮತಪಟ್ಟಿ ದೋಷಗಳ ಬಗ್ಗೆ ಪ್ರಶ್ನೆಗಳನ್ನು ಎತ್ತಿದರೆ ಮುಂದಿನ ಚುನಾವಣೆಗಾದರೂ ಇದನ್ನು ಸರಿಪಡಿಸಿಕೊಳ್ಳಬೇಕಾಗುತ್ತದೆ.

ಮತದಾರರ ಪಟ್ಟಿ ದೋಷ ಎಂಬುದು ಸ್ವತಂತ್ರ ಭಾರತದ ಮೊದಲ ಚುನಾವಣೆಯಿಂದಲೂ ಇದೆ. ಮತದಾರರ ಪಟ್ಟಿ ದೋಷವನ್ನು ಯಾರೇ ಗಮನಕ್ಕೆ ತಂದರೂ ಚುನಾವಣಾ ಆಯೋಗ ಇದನ್ನು ಸರಿಪಡಿಸುವ ಕಾರ್ಯ ಮಾಡಬೇಕು. ಹೆಸರಿನಲ್ಲಿ ತಪ್ಪಾಗಿರುವುದು, ವಿಳಾಸವೇ ತಪ್ಪಾಗಿರುವುದು, ಮತದಾರರ ಹೆಸರೇ ಪಟ್ಟಿಯಿಂದ ಕೈಬಿಟ್ಟಿರುವುದು, ವಯಸ್ಸು ನಮೂದಿಸುವಾಗ ತಪ್ಪಾಗಿರುವುದು, ಒಂದಕ್ಕಿಂತ ಹೆಚ್ಚು ಕಡೆ ಮತದಾರರ ಪಟ್ಟಿಯಲ್ಲಿ ಹೆಸರು ಇರುವುದು, ಲಿಂಗ ಬದಲಾವಣೆ, ಒಂದೇ ವಿಳಾಸದಲ್ಲಿ ಅನೇಕರ ಹೆಸರುಗಳು ಹೀಗೆ ದೋಷಗಳು ಸಾಮಾನ್ಯವಾಗಿ ಕಂಡು ಬರುತ್ತವೆ.

ಮತದಾರರ ಪಟ್ಟಿಯಲ್ಲಿ ದೋಷ ಕಂಡು ಬರುವುದು ಪ್ರತಿ ಚುನಾವಣೆಯ ಮತದಾನದ ದಿನ ಸ್ಪಟಿಕ ಸ್ಪಷ್ಟ. ಈ ದೋಷಕ್ಕೆ ಚುನಾವಣಾ ಆಯೋಗ ಒಂದನ್ನೇ ಹೊಣೆ ಮಾಡುವುದೂ ತರವಲ್ಲ. ರಾಜಕೀಯ ಪಕ್ಷಗಳು ಹಾಗೂ ಮತದಾರರು ಕೂಡ ದೋಷರಹಿತ ಮತದಾರರ ಪಟ್ಟಿಗೆ ಸಹಕಾರ ನೀಡಬೇಕಾಗುತ್ತದೆ. ಪ್ರಾರಂಭದಲ್ಲಿ ಸುಮ್ಮನಿದ್ದು ನಂತರ ಆಕ್ಷೇಪ ಎತ್ತಿ ಚುನಾವಣಾ ಆಯೋಗದ ಕಡೆ ಬೊಟ್ಟು ಮಾಡುವುದು ಅಷ್ಟೊಂದು ಸೂಕ್ತವಲ್ಲ. ಅದೇ ವೇಳೆ ಚುನಾವಣಾ ಆಯೋಗವು ಪ್ರಶ್ನಾತೀತವಲ್ಲ. ಬಿಹಾರದಲ್ಲಿ ಮತದಾರರ ಪಟ್ಟಿ ಪರಿಷ್ಕರಿಸಿದ ನಂತರ ಕೈಬಿಡಲಾದ 65 ಲಕ್ಷ ಮತದಾರರ ಹೆಸರನ್ನು ಜಿಲ್ಲಾಮಟ್ಟದ ವೆಬ್‌ ಸೈಟ್‌ಗಳಲ್ಲಿ ಪ್ರಕಟಿಸುವಂತೆ ಸುಪ್ರೀಂ ಕೋರ್ಟ್‌ ಚುನಾವಣಾ ಆಯೋಗಕ್ಕೆ ಸೂಚಿಸಿದೆ. ಹೆಸರು ಕೈಬಿಡಲು ಕಾರಣ ಏನು ಎಂಬುದನ್ನು ತಿಳಿಸಬೇಕು ಎಂದು ನಿರ್ದೇಶನ ನೀಡಿದೆ.

ಕೇಂದ್ರ ಚುನಾವಣಾ ಆಯೋಗದ ಮುಖ್ಯ ಆಯುಕ್ತರಾಗಿದ್ದ ಎಸ್.ವೈ.ಖುರೇಷಿ ಅವರು ಮೊನ್ನೆ ತಮ್ಮ ಲೇಖನವೊಂದರಲ್ಲಿ ಒಂದು ಅನುಭವವನ್ನು ಹಂಚಿಕೊಂಡಿದ್ದಾರೆ. ಇದು ಮತದಾರರ ಪಟ್ಟಿಯ ವಿಚಾರ. ಅದು 2007ನೇ ಇಸವಿ. ಆಗ ಚುನಾವಣಾ ಆಯೋಗದ ಮುಖ್ಯ ಆಯುಕ್ತರಾಗಿದ್ದವರು ಎನ್. ಗೋಪಾಲಸ್ವಾಮಿ ಅವರು. ಖುರೇಷಿ ಅವರು ಆಗ ಚುನಾವಣಾ ಆಯೋಗದ ಆಯುಕ್ತರಾಗಿದ್ದರು.

ಖುರೇಷಿ ಅವರು ಬರೆಯುತ್ತಾರೆ: ಉತ್ತರಪ್ರದೇಶದ ವಿಧಾನಸಭೆಗೆ 2007ರಲ್ಲಿ ನಡೆದ ಚುನಾವಣೆಗೆ ಮತದಾರರ ಪಟ್ಟಿ ಸಿದ್ದಪಡಿಸುವ ಕಾರ್ಯ ನಡೆದಿತ್ತು. ಸ್ಥಳಾಂತರ, ಗೈರು ಅಥವಾ ಮೃತಪಟ್ಟಿರುವ ಪ್ರಕರಣಗಳು (ಎಸ್‌ ಎ ಡಿ) ಸಂಬಂಧಪಟ್ಟಂತೆ ಮತದಾರರ ಪಟ್ಟಿಯನ್ನು ಪ್ರತ್ಯೇಕವಾಗಿ ಸಿದ್ದಪಡಿಸುವ ಕಾರ್ಯ ಅಂದು ಮುಖ್ಯ ಆಯುಕ್ತರಾಗಿದ್ದ ಗೋಪಾಲಸ್ವಾಮಿ ನೇತೃತ್ವದಲ್ಲಿ ನಡೆಯಿತು. ಮತದಾರರ ಪಟ್ಟಿಯಿಂದ ಹೆಸರನ್ನು ಕೈಬಿಡುವ ಬದಲು ಸ್ಥಳಾಂತರ, ಗೈರು ಅಥವಾ ಮೃತಪಟ್ಟಿರುವ ಪ್ರಕರಣಗಳ ಸಮಸ್ಯೆಗಳ ಕುರಿತು ಪ್ರತ್ಯೇಕ ಮತದಾರರ ಪಟ್ಟಿಯನ್ನು ಮನೆಮನೆಗೆ ತೆರಳಿ ಪರಿಶೀಲಿಸಿ ಸಿದ್ದಪಡಿಸಲಾಯಿತು. ಪ್ರತಿ ಮತಗಟ್ಟೆ ವ್ಯಾಪ್ತಿಯಲ್ಲಿಯೂ ಇಂತಹ ಮತದಾರರ ಪಟ್ಟಿ ಪ್ರತ್ಯೇಕವಾಗಿ ಸಿದ್ದವಾಯಿತು. ಈ ಮತದಾರರ ಪಟ್ಟಿಯನ್ನು ಮತಗಟ್ಟೆ ಅಧಿಕಾರಿಗೆ ನೀಡಲಾಯಿತು. ಇಂತಹ ಮತದಾರರ ಪಟ್ಟಿಯಲ್ಲಿರುವವರು ಮತ ಚಲಾಯಿಸಲು ಬಂದಾಗ ಈ ಬಗ್ಗೆ ಕೂಲಂಕಷವಾಗಿ ಪರಿಶೀಲಿಸಿ ನಂತರ ಮತ ಚಲಾವಣೆಗೆ ಅವಕಾಶ ನೀಡಲಾಗುತ್ತಿತ್ತು. ಬಹುತೇಕ ಕ್ಷೇತ್ರಗಳಲ್ಲಿ ಇಂತಹ ಮತದಾರರ ಪಟ್ಟಿಯಲ್ಲಿರುವವರಲ್ಲಿ ಶೇ.2 ರಿಂದ 3ರಷ್ಟು ಜನರು ಮಾತ್ರ ಮತ ಚಲಾಯಿಸಲು ಮತಗಟ್ಟೆಗೆ ಬಂದಿದ್ದರು. ನಂತರ ಗುಜರಾತಿನಲ್ಲಿ ಇಂತಹ ಪ್ರಯೋಗ ಮಾಡಿದಾಗ ಅಲ್ಲಿ ಇದು ಶೇ.24ರಷ್ಟಾಗಿತ್ತು. ಇಂತಹ ಪಟ್ಟಿ ಮತಗಟ್ಟೆ ಅಧಿಕಾರಿ ಬಳಿ ಇದ್ದಾಗ ನಕಲಿ ಮತದಾನ ಸಾಧ್ಯವಿಲ್ಲ. ಬೋಗಸ್‌ ಮತದಾನವನ್ನೂ ಇದು ತಡೆದಿತ್ತು.

ಪಾರದರ್ಶಕತೆ ಎಂಬುದು ಅಪೇಕ್ಷೆಯಷ್ಟೇ ಅಲ್ಲ, ಅದು ಅಗತ್ಯ ಕೂಡ.

ಕೂಡ್ಲಿ ಗುರುರಾಜ, ಹಿರಿಯ ಪತ್ರಕರ್ತರು

kudliguru@gmail.com

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಬ್ಯಾಂಕ್‌ಗೆ ನಕಲಿ ಗ್ಯಾರಂಟಿ: ರಿಲಯನ್ಸ್‌ ಪವರ್‌ನ ಮುಖ್ಯ ಹಣಕಾಸು ಅಧಿಕಾರಿ ಅಶೋಕ್ ಪಾಲ್ ಬಂಧನ

CM ಆಗುವ ಕಾಲ ಹತ್ತಿರ ಬಂದಿದೆ ಎಂದು ನಾನು ಹೇಳಿಲ್ಲ: ಸುದ್ದಿ ತಿರುಚಿ ಪ್ರಸಾರ ಮಾಡಿದರೆ ಮಾನನಷ್ಟ ಮೊಕದ್ದಮೆ ಅನಿವಾರ್ಯ; ಡಿ ಕೆ ಶಿವಕುಮಾರ್

2nd test, Day 2: 2ನೇ ದಿನದಾಟದ ಆರಂಭದಲ್ಲೇ ಭಾರತಕ್ಕೆ ಆಘಾತ, ಭೋಜನ ವಿರಾಮದ ವೇಳೆಗೆ 427/4

ಸಮಸ್ತ ಜನರಿಗೆ ಸುಗಮ ಆಡಳಿತ, ಶುದ್ಧ ನೀರಿನ ಪೂರೈಕೆ: ಸ್ವಚ್ಚತೆ- ಸಂಚಾರ ವ್ಯವಸ್ಥೆಗೆ ಸಿಎಂ ಸಿದ್ದರಾಮಯ್ಯ ಕಟ್ಟಪ್ಪಣೆ

ಸಿದ್ದರಾಮಯ್ಯ ಮೇಲೆ ತೂಗುಗತ್ತಿ: ಅಧಿಕಾರದಲ್ಲಿ ಉಳಿಯಲು ಸಂಪುಟ ಪುನಾರಚನೆ ಕಸರತ್ತು; ಬಿಹಾರ-ಕೇರಳ ಚುನಾವಣೆಯತ್ತ ಡಿಕೆಶಿ ಚಿತ್ತ!

SCROLL FOR NEXT